Sunday, June 29, 2014

ವಚನಗಳು

ಪದ್ಯಭಾಗ 2 - ವಚನಗಳು
ಅಲ್ಲಮ ಪ್ರಭುದೇವರ ವಚನಗಳು:
ಅಲ್ಲಮಪ್ರಭು ( ೧೧೬೦) ಶಿವಮೊಗ್ಗ ಜಿಲ್ಲೆ ಬಳ್ಳಿಗಾವೆ ಇವನ ಜನ್ಮಸ್ಥಳ. ನಿರಹಂಕಾರ ಮತ್ತು ಸುಜ್ಞಾನಿ ಎಂಬ ದಂಪತಿಗಳ ಮಗನಾಗಿ ಹುಟ್ಟಿದ. ಮಾಯೆ ಎಂಬಾಕೆಯನ್ನು ವಿವಾಹವಾಗಿ,  ಬಸವಾಸಿ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆಬಾರಿಸುವ ಸೇವೆ ಮಾಡುತ್ತಾ ಇದ್ದ. ಪತ್ನಿಯ ಮರಣದಿಂದಾಗಿ ವೈರಾಗಿಯಾಗಿ  ಸತ್ಯಾನ್ವೇಷಣೆಯಲ್ಲಿ ತೊಡಗಿದವನು ಪ್ರಭುದೇವ ಎಂದೇ ಹೆಸರಾದ. ಅಲ್ಲದೆ ಬಸವಣ್ಣನವರ ಮಹಾಮನೆಯ ಶೂನ್ಯಪೀಠಾಧಿಪತಿಯಾಗಿ ಮಾರ್ಗದರ್ಶನಮಾಡಿದ. ಇವನನ್ನು ಕುರಿತು ಹರಿಹರ ಪ್ರಭುದೇವರ ರಗಳೆ ಎಂಬ ರಗಳೆಯನ್ನು ಬರೆದರೆ, ಚಾಮರಸ ಪ್ರಭುಲಿಂಗಲೀಲೆ ಎಂಬ ಷಟ್ಪದಿಕೃತಿಯನ್ನು ರಚಿಸುತ್ತಾನೆ. ಅಲ್ಲಮಪ್ರಭುವಿನ ವಚನಗಳು ಪ್ರತಿಭಟನಾತ್ಮಕ, ವಿಚಾರಾತ್ಮಕ, ಹಾಗೂ ವಿಮರ್ಶಾತ್ಮಕ  ಅಂಶಗಳನ್ನು ಒಳಗೊಂಡು ಸತ್ಯಾನ್ವೇಷಣೆಯ ದಿಕ್ಕಿಗೆ ಕರೆದೊಯ್ಯುತ್ತವೆ. ತಾನು ಪಡೆದ ಲೋಕಾನುಭವಗಳನ್ನು ಇತರರಿಗೆ ಹಂಚುವ ಪ್ರಯತ್ನಮಾಡಿದ್ದಾನೆ.
ಸಾರಾಂಶ : ದೇಹವನ್ನು ಬಂಡಿಗೆ ಹೋಲಿಸಿ ಅದರ ಚಾಲಕರು ಐದು ಜನ ಎಂದಿದ್ದಾನೆ.ಪಂಚೇಂದ್ರಿಯಗಳು ಒಂದಕ್ಕೊಂದು ಸಮವಿಲ್ಲ,  ಪಂಚೇಂದ್ರಿಯಗಳಾದ ಕಣ್ಣು(ಸುಂದರವಾದುದನ್ನುಕಾಣುವುದು), ಕಿವಿ (ನಮಗೆ ಹಿತವಾದುದನ್ನು ಕೇಳಲು ತವಕಿಸುವುದು), ಮೂಗು (ಸುಗಂಧವನ್ನು ಆಘ್ರಾಣಿಸುವುದು), ನಾಲಿಗೆ (ರುಚಿಯಾದುದನ್ನು ಸವಿ ನೋಡುವುದು) ಮತ್ತು ಚರ್ಮ ( ಹಿತವಾದುದನ್ನು ಸ್ಪರ್ಷಿಸುವುದು) ತಮ್ಮ ಕರ್ಮಗಳಿಗೆ ಅನುಸಾರವಾಗಿ ನಮ್ಮನ್ನು ಸೆಳೆಯುತ್ತವೆ. ಅವುಗಳನ್ನು ಹಿಡಿತದಲ್ಲಿಟ್ಟು ಮನಸ್ಸನ್ನು ಶಿವನಲ್ಲಿ ಕೇಂದ್ರೀಕರಿಸದಿದ್ದರೆ ಈ ದೇಹವೆಂಬುದು ಅಚ್ಚುಮುರಿದ ಬಂಡಿಯಂತೆ ಆಗುವುದು.
ಹೊಟ್ಟೆಯಮೇಲೆ ಅನ್ನದ ಗಂಟನ್ನು ಕಟ್ಟಿದರೆ ಹಸಿವು ಹೋಗುವುದೇ? ಶರೀರದ ಮೇಲೆ ಲಿಂಗವ ಧರಿಸಿದರೆ ಧರಿಸಿದವ ಭಕ್ತನಾಗಬಲ್ಲನೆ? ಪೊದೆಯಮೇಲೆ ಇಟ್ಟ ಕಲ್ಲು ಲಿಂಗವಾಗಬಲ್ಲದೆ?, ಪೊದೆ ಭಕ್ತನಾಗಬಲ್ಲುದೇ. ಪೊದೆಯ ಮೇಲೆ ಕಲ್ಲುಇಟ್ಟಾತ ಗುರುವಾಗಬಲ್ಲನೆ?, ಈ ರೀತಿ ವೇಷಧಾರಿಗಳ ಕಂಡು ನಾಚುವೆ ಎಂದು ಹೇಳುತ್ತಾನೆ. ಹಸಿವಾದಾಗ ಅನ್ನತಿನ್ನಬೇಕೇ ಹೊರೆತು ಅನ್ನದಗಂಟನ್ನು ಹೊಟ್ಟೆಮೇಲೆ ಕಟ್ಟಿದರೆ ಹಸಿವು ಇಂಗುವುದಿಲ್ಲ. ಹಾಗೆಯೇ ಶಿವಭಕ್ತಿಯಲ್ಲಿ ತನ್ನನ್ನು ತಾನು ಮರೆಯಬೇಕೇ ಹೊರತು ಲಿಂಗವನ್ನು ಕಟ್ಟಿಕೊಂಡು ಮೆರೆಯುವುದಲ್ಲ. ಈರೀತಿ ಲಿಂಗಧರಿಸಿ ಮೆರೆಯುವವನಿಗೆ ನೀನು  ಭಕ್ತನೇ? ಎಂದೂ, ಲಿಂಗದೀಕ್ಷೆಕೊಡುವ ಗುರುವಿಗೂ ನೀನು ಗುರುವೇ? ಎಂದು , ಕಟ್ಟಿಕೊಂಡ ಕಲ್ಲಿಗೂ ಇದು ಲಿಂಗವೇ? ಎಂದು ಪ್ರಶ್ನಿಸುತ್ತಾನೆ. ಭಕ್ತಿ ಮುಖ್ಯವೇ ಹೊರತು ಆಚರಣೆಯಲ್ಲ ಎಂಬ ಮನೋಭಾವ ಇಲ್ಲಿ ಕಾಣುತ್ತದೆ.
ಯಾರು ಹಸಿದಾಗ ಅನ್ನವನ್ನು ಕೊಟ್ಟು , ಬಾಯಾರಿದಾಗ ಬೊಗಸೆ ನೀರನ್ನು ನೀಡುತ್ತಾರೋ ಅವರು ದೈವಸಮಾನ ಅಥವಾ ದೇವರು ಎಂದು ಹೇಳುವ ಅಲ್ಲಮಪ್ರಭು ನಾನು ಅನ್ನವನ್ನು ನೀರನ್ನೂ ನೀಡುತ್ತಿರುವುದರಿಂದ ನಾನೇ ದೇವರು ಎಂದು ಹೇಳುತ್ತಾ ನೀನು ದೇವನಾಗಿದ್ದರೆ ಎನ್ನನ್ನು ಏಕೆ ಸಲಹುತ್ತಿಲ್ಲ ಎಂದು ಕೇಳುತ್ತಾನೆ.
ಸಂದರ್ಭ ಸೂಚಿಸಿ ವಿವರಿಸಿ.
೧.ಬಂಡಿಯ ಹೊಡೆವರೈವರು ಮಾನಿಸರು
ಈ ವಾಕ್ಯವನ್ನು ಅಲ್ಲಮಪ್ರಭುವಿನ  ವಚನಗಳಿಂದ ಆರಿಸಲಾಗಿದೆ. ಅಲ್ಲಮನು ಪಂಚೇಂದ್ರಿಯಗಳನ್ನೇ ದೇಹವೆಂಬ ಬಂಡಿಯ ಚಾಲಕರು ಎಂದು ಕರೆದಿದ್ದಾನೆ. ಪಂಚೇಂದ್ರಿಯಗಳು ತಮ್ಮ ಕರ್ಮಗಳಿಗೆ ಅನುಸಾರವಾಗಿ ನಮ್ಮನ್ನು ಸೆಳೆಯುತ್ತವೆ. ಅವುಗಳನ್ನು ಹಿಡಿತದಲ್ಲಿಟ್ಟು ಮನಸ್ಸನ್ನು ಶಿವನಲ್ಲಿ ಕೇಂದ್ರೀಕರಿಸದಿದ್ದರೆ ಈ ದೇಹವೆಂಬುದು ಅಚ್ಚುಮುರಿದ ಬಂಡಿಯಂತೆ ಆಗುವುದು.

೨.ಮೆಳೆ ಭಕ್ತನೆ? ಇಟ್ಟಾತ ಗುರುವೆ?
ಈ ವಾಕ್ಯವನ್ನು ಅಲ್ಲಮಪ್ರಭುವಿನ  ವಚನಗಳಿಂದ ಆರಿಸಲಾಗಿದೆ. ಹಸಿವಾದಾಗ ಅನ್ನ ತಿನ್ನಬೇಕೇ ಹೊರೆತು ಅನ್ನದ ಗಂಟನ್ನು ಹೊಟ್ಟೆಯ ಮೇಲೆ ಕಟ್ಟಿದರೆ ಹಸಿವು ಇಂಗುವುದಿಲ್ಲ. ಹಾಗೆಯೇ ಶಿವಭಕ್ತಿಯಲ್ಲಿ ತನ್ನನ್ನು ತಾನು ಮರೆಯಬೇಕೇ ಹೊರತು ಲಿಂಗವನ್ನು ಕಟ್ಟಿಕೊಂಡು ಮೆರೆಯುವುದಲ್ಲ. ಈ ರೀತಿ ಲಿಂಗಧರಿಸಿ ಮೆರೆಯುವವನಿಗೆ ನೀನು  ಭಕ್ತನೇ? ಎಂದೂ, ಲಿಂಗದೀಕ್ಷೆಕೊಡುವ ಗುರುವಿಗೂ ನೀನು ಗುರುವೇ? ಎಂದು , ಕಟ್ಟಿಕೊಂಡ ಕಲ್ಲಿಗೂ ಇದು ಲಿಂಗವೇ? ಎಂದು ಪ್ರಶ್ನಿಸುತ್ತಾನೆ. ಭಕ್ತಿ ಮುಖ್ಯವೇ ಹೊರತು ಆಚರಣೆಯಲ್ಲ ಎಂಬ ಮನೋಭಾವ ಇಲ್ಲಿ ಕಾಣುತ್ತದೆ.

೩.ನೀ ದೇವನಾದಡೆ ಎನ್ನನೇಕೆ ಸಲಹೆ
ಈ ವಾಕ್ಯವನ್ನು ಅಲ್ಲಮಪ್ರಭುವಿನ  ವಚನಗಳಿಂದ ಆರಿಸಲಾಗಿದೆ. ಯಾರು ಹಸಿದಾಗ ಅನ್ನವನ್ನು ಕೊಟ್ಟು , ಬಾಯಾರಿದಾಗ ಬೊಗಸೆ ನೀರನ್ನು ನೀಡುತ್ತಾರೋ ಅವರು ದೈವಸಮಾನರು ಅಥವಾ ದೇವರು ಎಂದು ಹೇಳುವ ಅಲ್ಲಮಪ್ರಭು ನಾನು ಅನ್ನವನ್ನು ನೀರನ್ನೂ ನೀಡುತ್ತಿರುವುದರಿಂದ ನಾನೇ ದೇವರು ಎಂದು ಹೇಳುತ್ತಾ, ನೀನು ದೇವನಾಗಿದ್ದರೆ ಎನ್ನನ್ನು ಏಕೆ ಸಲಹುತ್ತಿಲ್ಲ? ಎಂದು ದೇವರನ್ನೇ ಕೇಳುತ್ತಾನೆ.
ಒಂದುವಾಕ್ಯದಲ್ಲಿ ಉತ್ತರಿಸಿ.
೧.ಅಲ್ಲಮಪ್ರಭುವಿನ ಅಂಕಿತಯಾವುದು?
ಗುಹೇಶ್ವರಾ ಎಂಬುದು ಅಲ್ಲಮಪ್ರಭುವಿನ ಅಂಕಿತವಾಗಿದೆ.

೨.ಕಾಲುಗಳನ್ನು ಯಾವುದಕ್ಕೆ ಹೋಲಿಸಲಾಗಿದೆ
ಕಾಲುಗಳನ್ನು ಗಾಲಿಗೆ ಹೋಲಿಸಲಾಗಿದೆ.

೩. ದೇಹವೆಂಬುದು ಏನು?
ದೇಹವನ್ನು ತುಂಬಿದಬಂಡಿ ಎಂದು ಕರೆದಿದ್ದಾನೆ.

೪. ಕಟ್ಟೋಗರದ ಮೊಟ್ಟೆಯನ್ನು ಎಲ್ಲಿ ಕಟ್ಟಲಾಗಿದೆ?
ಕಟ್ಟೋಗರದ ಮೊಟ್ಟೆಯನ್ನು ಹೊಟ್ಟೆಯಮೇಲೆ ಕಟ್ಟಲಾಗಿದೆ.

೫.ಇಟ್ಟ ಕಲ್ಲು ಎಲ್ಲಿ ಸಿಕ್ಕರೆ ಲಿಂಗವೆಂದು ಕೇಳುತ್ತಾನೆ?
ಪೊದೆಯಮೇಲೆ ಇಟ್ಟಕಲ್ಲು ಲಿಂಗವೇ ಎಂದು ಕೇಳುತ್ತಾನೆ.

೬.ಹಸಿದಾಗ ಏನನ್ನುನೀಡಲಾಗಿದೆ. ?
ಹಸಿದಾಗ ಒಂದು ತುತ್ತು ಅನ್ನವನ್ನು ನೀಡಲಾಗಿದೆ.



ಎರಡು ಮೂರು ವಾಕ್ಯದಲಿ ಉತ್ತರಿಸಿ
೧.ಕಾಲು ಮತ್ತು ದೇಹವನ್ನು ಯಾವುದಕ್ಕೆ ಹೋಲಿಸಲಾಗಿದೆ?
ಕಾಲುಗಳನ್ನು ಗಾಲಿಗೂ , ದೇಹವನ್ನು ತುಂಬಿದ ಬಂಡಿಗೂ ಹೋಲಿಸಲಾಗಿದೆ. ಈ ಬಂಡಿಯನ್ನು ನಡೆಸುವವರು ಐದು ಜನ ಇಲ್ಲಿ ದೇಹದ ಪಂಚೇಂದ್ರಿಯಗಳೇ ಚಾಲಕರಾಗಿದ್ದಾರೆ. ಅವರ ಇಚ್ಚೆಯನ್ನು ಅರಿತು ಮುನ್ನಡೆದರೆ ಬಂಡಿಯ ಅಚ್ಚು ಮುರಿಯುತ್ತದೆ ಎಂದಿದ್ದಾನೆ.

೨.ಯಾರನ್ನು ಕಂಡರೆ ಅಲ್ಲಮ ನಾಚುವೆನೆಂದು ಹೇಳುವನು?
ಶಿವಶರಣರಂತೆ ವೇಷಧರಿಸುವವರನ್ನು ಕಂಡು ಈ ಮಾತನ್ನು ಹೇಳುತ್ತಾನೆ. ದೇಹದ ಮೇಲೆ ಲಿಂಗವನ್ನು ಧರಿಸಿ ಶಿವಭಕ್ತನಂತೆ ನಡೆದುಕೊಳ್ಳುವವರನ್ನು ಕಂಡು ಹೊಟ್ಟೆಮೇಲೆ ಅನ್ನದ ಗಂಟನ್ನು ಕಟ್ಟಿದರೆ ಹೊಟ್ಟೆಯ ಹಸಿವು ಹೋಗುವುದೇ ಅಂತೆಯೇ ಲಿಂಗವನ್ನು ಧರಿಸಿದರೆ ಕೊಟ್ಟಾತ ಗುರುವಾಗುವನೇ? ಧರಿಸಿದಾತ ಭಕ್ತನಾಗುವನೇ ಎಂದು ಹೇಳುತ್ತಾ ಇಂತವರನ್ನು ಕಂಡು ನಾಚುವೆನು ಎಂದಿದ್ದಾನೆ.

೩. ಅಲ್ಲಮ ಏನನ್ನು ನೀಡುವುದರಿಂದ ನಾ ದೇವ ಎಂದು ಹೇಳುತ್ತಾನೆ?
ಹಸಿದಾಗ ಅನ್ನವನ್ನು ನೀಡುವ, ಬಾಯಾರಿದಾಗ ನೀರನ್ನು ಕೊಡುವ ನಾನೇ ದೇವನು. ನೀನು ದೇವನೇ ಆಗಿದ್ದರೆ ನನ್ನನ್ನು ಏತಕ್ಕೆ ಸಲಹುತ್ತಿಲ್ಲ ಎಂದು ಅಲ್ಲಮಪ್ರಭು ದೇವರನ್ನೇ ಪ್ರಶ್ನಿಸುವ ಧೈರ್ಯ ತೋರಿದ್ದಾನೆ.

***** ಓಂ****
ಕವಿ ಪರಿಚಯ :- ಘಟ್ಟಿವಾಳಯ್ಯ : (೧೧೬೦) ಹನ್ನೆರಡನೆ ಶತಮಾನದ ವಚನಕಾರ ಮುದ್ದಣ್ಣ ಎಂಬುದು ಇವನ ಪೂರ್ವನಾಮ. ಶಿವಾನುಭವವನ್ನು ನರ್ತನದಮೂಲಕ ಸಾರುವಕಾಯಕವನ್ನು ಮಾಡುತ್ತಿದ್ದು ಕಪಟಿಗಳು ಇವನ ಸದಾಚಾರದ ಪ್ರಭಾವದಿಂದಾಗಿ ನಿಜ ಜಂಗಮರಾದದ್ದು ಇವನ ವೈಶಿಷ್ಟ್ಯ. ಒಮ್ಮೆ ಬಸವಣ್ಣನವರ ಮಹಾಮನೆಗೆ ಊಟಕ್ಕೆ ಹೋಗುತ್ತಿದ್ದ ಜಂಗಮರನ್ನು ಕಂಡು ಘಟ್ಟಿವಾಳಯ್ಯನು  ಬಸವಣ್ಣನ ಮನೆಯ ಮುಸುರೆ ಗಡಿಗೆಗೆ ಇವರೇ ಮಕ್ಷಿಕಗಳೆನ್ನಲು ಅವರು ಕೋಪದಿಂದ ಇವನ ಇಷ್ಟಲಿಂಗವನ್ನು ಕಿತ್ತುಕೊಂಡರು. ಆತನು ಅದನ್ನು ಕೊಡುವಂತೆ ಬೇಡಲು ಅವರು ಕುಹಕದಿಂದ ತಮ್ಮ ಮುಂದಿದ್ದ ಕಲ್ಲುಗುಂಡೊಂದನ್ನು ತೋರಿ ಅದೋ ಅಲ್ಲಿದೆ ನಿನ್ನ ಇಷ್ಟಲಿಂಗ ಎಂದು ಹಾಸ್ಯಮಾಡಿದರು. ಆತನು ಅದನ್ನೇ ಇಷ್ಟಲಿಂಗವೆಂದು ಕೊರಳಲ್ಲಿ ಕಟ್ಟಿಕೊಂಡು ಬಸವಣ್ಣನ ಮಹಾಮನೆಯ ಹೆಬ್ಬಾಗಿಲಿನಲ್ಲಿ ಕುಳಿತುಬಿಟ್ಟನು. ಸುದ್ದಿ ತಿಳಿದ ಬಸವಣ್ಣನು ಪ್ರಭುದೇವ , ಚನ್ನಬಸವಣ್ಣ ಮೊದಲಾದವರೊಂದಿಗೆ ಅಲ್ಲಿಗೆ ಬಂದು ಆ ಜಂಗಮರಿಗೆ ಆತನ ಇಷ್ಟಲಿಂಗವನ್ನು ನೀಡುವಂತೆ ಹೇಳಿದನು ಆಗ ಅವರು ಘಟ್ಟಿವಾಳಯ್ಯಗಳೇ ನಿಮಗೆ ಗುರುಕೊಟ್ಟಲಿಂಗ ಮತ್ತು ಬೆಟ್ಟದ ಈ ಗುಂಡು ಹೀಗೆ ಎರಡು ಲಿಂಗಗಳೇ? ನಿಮಗೆ ಇಬ್ಬರು ಗಂಡರೇ? ಎಂದು ವ್ಯಂಗವಾಡಿದರು.  ಅಲ್ಲಮ ಮೊದಲಾದವರು ಘಟ್ಟಿವಾಳಯ್ಯನದು ನಿಜವಾದ ನಡೆಯೆಂದು ಆತನನ್ನು ಸ್ತುತಿಸಿದರು. ಅಲ್ಲಮ, ಬಸವ, ಸಿದ್ಧರಾಮ, ಆದಯ್ಯ ಮೊದಲಾದ ಶರಣರು ಘಟ್ಟಿವಾಳಯ್ಯನ ಗಟ್ಟಿತನವನ್ನು ತಮ್ಮ ವಚನಗಳಲ್ಲಿ ಕೊಂಡಾಡಿದ್ದಾರೆ. ಸಿದ್ಧರಾಮನು “ಧೀರನಾದಡೆ ಘಟ್ಟಿವಾಳಯ್ಯನಂತಾಗಬೇಕಯ್ಯ” ಎಂದಿದ್ದಾನೆ.  ಬಸವಣ್ಣನವರು “ಕಾಯವಂಚಕನಲ್ಲ, ಜೀವ ವಂಚಕನಲ್ಲ, ನಿರಂತರ ಸಹಜ ನೋಡಯ್ಯಾ ಶಂಕೆಯಿಲ್ಲದ ಮಹಾಮಹಿಮನು ಕೂಡಲ ಸಂಗನ ಶರಣನುಪಮಾತೀತ ನೋಡಯ್ಯಾ” ಎಂದು ಹೊಗಳಿದರೆ,   “ಅಶನಕ್ಕಂಜಿ ವೇಷವನೆ ಹೊತ್ತು ದೇಶವ ತೊಳಲುವ ಹಿರಿಯರ ಗಂಡ, ಕಾಲದ ಗಂಡ, ಕರ್ಮದಗಂಡ, ಲಿಂಗವಿಡಿದು ಸಾವ ಹಿರಿಯರ ಗಂಡ, ಗೋಹೇಶ್ವರ” ಎಂದು ಅಲ್ಲಮ ಹೊಗಳಿದ್ದಾನೆ.
ಇಂತಹ ಘಟ್ಟಿವಾಳಯ್ಯ ನರ್ತನ ಮಾಡುತ್ತಿರುವಾಗಲೇ ಲಿಂಗೈಕ್ಯನಾದ.
ಸಾರಾಂಶ :
ಕೊಲ್ಲುವ ಆಯುಧಗಳಿಗೆ ದಯೆ ಧರ್ಮದ ಮೊನೆ ಇರುವುದೇ? ಅಂತೆಯೇ ಉಗ್ರಸರ್ಪದ ಹಲ್ಲಿನೊಳಗೆ ಅಮೃತದ ರುಚಿ ಇರುತ್ತದೆಯೇ? ಹೊಟ್ಟೆಪಾಡಿಗೋಸ್ಕರ ಜಂಗಮರ ವೇಷಧರಿಸಿದವರೆಲ್ಲ ಶಿವನನ್ನು ಹೇಗೆ ಅರಿಯುವರು ಎಂದು ಪ್ರಶ್ನಿಸುತ್ತಾನೆ. ಇಂತಹ ವೇಷಧಾರಿಗಳು ಶಿವಶರಣರ ಗುಂಪಿನಿಂದ ಬೇರೆ ಅಂತಹವರಿಗೆ ಶಿವ ದೊರೆಯುವುದಾದರೂ ಹೇಗೆ ಎಂದು ಹೇಳುತ್ತಾರೆ.
ಅಂತೆಯೆ ಧ್ಯಾನ, ತಪಸ್ಸು , ಉಪವಾಸ, ವ್ರತ ಎಂಬುವುಗಳನ್ನು ಮನಸ್ಸಿಲ್ಲದೆಯೇ ಆಚರಿಸುವ ಜನರಿಗೆ ತಪಸ್ಸೆಂಬುದೇ ಬಂಧನವಾಗಿಯೂ ನಿಯಮವೆಂಬುದು ಕಟ್ಟುಪಾಡಾಗಿಯೂ ನಡತೆಯೆಂಬುದು ಮೈಲಿಗೆಯಾಗಿಯೂ ಕಾಡುವುದು. ಇಂತಹ ನಿರ್ಬಂಧಗಳೆಲ್ಲ ನಗೆಗೆ ಕಾರಣವಾಗಿ, ಆ ನಗೆಯಿಂದ ಕೋಪ ದ್ವೇಷಗಳು ಉಂಟಾಗಿ ಶಿವ ಅಲ್ಲಿ ಇಲ್ಲದವನಾಗುತ್ತಾನೆ. ಧ್ಯಾನ ತಪಸ್ಸುಗಳೆಲ್ಲ ಮನಸ್ಸಿಟ್ಟು ಆಚರಿಸಬೇಕೇ  ಹೊರತು ಬಲವಂತದಿಂದಲ್ಲ. ಎಂದು ಹೇಳುತ್ತಾನೆ.
ತನ್ನ ದೇಹದ ಮೇಲಿನ ಮೋಹವನ್ನು ಬಿಡಬೇಕೆಂದು ಗುರುವನ್ನು ತೋರಿಸಲಾಗಿದೆ,ಮನಸ್ಸನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಲಿಂಗವನ್ನು ತೋರಿ, ಧನದ ಮೇಲಿನ ಆಸೆಯನ್ನು ತೊರೆಯಬೇಕೆಂದು (ಹಣವನ್ನು ದಾನಮಾಡಲಿ ಎಂದು) ಜಂಗಮವನ್ನು ತೋರಿಸಿದರೂ,  ಒಳ್ಳೆಯದನ್ನೆಲ್ಲ ಮರೆತು ಹೊಡೆದಾಡುವ ಭಾಷೆಹೀನರು (ಮಾತಿಗೆತಪ್ಪಿದವರನ್ನು) ಕಂಡು   ನಾಚಿಕೆಯಾಯಿತು.
ಗುರು, ಲಿಂಗ, ಜಂಗಮವನ್ನು ಮರೆತು ಅಶನ ವಶನಗಳಿಗೆ ಹೊಡೆದಾಡುವ ಜನರನ್ನು ಕಂಡು ನಾಚುವ ಘಟ್ಟಿವಾಳಯ್ಯನು ಡಾಂಬಿಕ ಭಕ್ತರ ನಡವಳಿಕೆಗಳನ್ನು ಖಂಡಿಸುತ್ತಾನೆ. ಇಂತಹವರು ಶಿವಭಕ್ತರಾಗಲು,  ಶಿವನನ್ನು ಕಾಣಲು ಸಾಧ್ಯವಿಲ್ಲ, ಎಂಬುದು ಈತನ ಅಭಿಮತ.

ಸಂದರ್ಭದೊಡನೆ ವಿವರಿಸಿ :
೧. ವೇಷಧಾರಿಗಳೆಲ್ಲ ನಿಮ್ಮ ಕೂಟಕ್ಕೆ ಹೊರಗು.
ಈ ಮಾತನ್ನು ಘಟ್ಟಿವಾಳಯ್ಯನ ವಚನಗಳಿಂದ ಆರಿಸಲಾಗಿದೆ. ಹೊಟ್ಟೆಪಾಡಿಗೋಸ್ಕರ ಜಂಗಮರ , ಶಿವಶರಣರ ವೇಷವನ್ನು ಧರಿಸುವ ಜನರನ್ನು ಕಂಡು ಅವರ ರೀತಿ ನೀತಿಗಳನ್ನು ಖಂಡಿಸುತ್ತಾ ಈ ಮಾತನ್ನು ಹೇಳುತ್ತಾನೆ. ಶಿವಶರಣರ ಗುಂಪಿನಲ್ಲಿ ಇವರು ಸೇರುವುದಿಲ್ಲ.

೨. ಶೀಲವೆಂಬುದು ಸೂತಕ
 ಈ ಮಾತನ್ನು ಘಟ್ಟಿವಾಳಯ್ಯನ ವಚನಗಳಿಂದ ಆರಿಸಲಾಗಿದೆ.
ಮನಸ್ಸಿಲ್ಲದೆಯೆ ತಪಸ್ಸು, ನೇಮ , ವ್ರತ ಎಂದೆಲ್ಲಾ ಆಚರಿಸುವ ಜನರನ್ನು ಕಂಡು ಈ ಮಾತನ್ನು ಹೇಳಿದ್ದಾನೆ. ಏಕೆ ಆಚರಿಸುತ್ತಿದ್ದೇವೆ ಎಂಬುದನ್ನು ಅರಿಯದೆ ಮಾಡುವವರನ್ನು ಗುರಿಯಾಗಿರಿಸಿಕೊಂಡು ಖಂಡಿಸುವಾಗ ಈ ಮಾತು ಬಂದಿದೆ.

೩. ಭಾಷೆಹೀನರ ಕಂಡು ನಾಚಿಕೆಯಾಯಿತ್ತು.
ಈ ಮಾತನ್ನು ಘಟ್ಟಿವಾಳಯ್ಯನ ವಚನಗಳಿಂದ ಆರಿಸಲಾಗಿದೆ.
ತನು ಮನ ಧನವನ್ನು ಮರೆಯಲೆಂದು ಗುರು , ಲಿಂಗ , ಜಂಗಮರನ್ನು ತೋರಿದ್ದರೂ ಒಳ್ಳೆಯದನ್ನು ಮರೆತು ಹೊಟ್ಟೆಯಪಾಡಿಗಾಗಿ ಮಾತಿಗೆ ತಪ್ಪಿ ಓಡಾಡುವ ಜನರನ್ನು ಕಂಡು ನಾಚಿಕೆಯಾಯಿತು ಎಂದಿದ್ದಾನೆ.


ಒಂದು ವಾಕ್ಯದಲ್ಲಿ ಉತ್ತರಿಸಿ.
೧. ದಯೆ ಧರ್ಮದ ಮೊನೆ ಯಾವುದಕ್ಕೆ ಇರುವುದಿಲ್ಲ?
ಇರಿವ ಆಯುಧಗಳಿಗೆ ದಯೆ ಧರ್ಮದ ಮೊನೆ ಇರುವುದಿಲ್ಲ

೨. ತಪವನ್ನು ಘಟ್ಟಿವಾಳಯ್ಯ ಏನೆಂದು ಕರೆಯುತ್ತಾನೆ?
ತಪವನ್ನು ಘಟ್ಟಿವಾಳಯ್ಯ ಬಂಧನ ಎಂದು  ಕರೆಯುತ್ತಾನೆ

೩. ನಗೆಗೆ ಈಡಾಗುವುದು ಯಾವುದು?
ವ್ರತದ ನಿರ್ಭಂದಗಳೆಲ್ಲ ನಗೆಗೆ ಈಡಾಗುತ್ತವೆ.

೪. ಭಾಷೆಹೀನರ ಕಂಡಾಗ ಏನಾಯಿತು?
ಭಾಷೆಹೀನರ ಕಂಡು ನಾಚಿಕೆಯಾಯಿತು.

೫. ಘಟ್ಟಿವಾಳಯ್ಯನ ಅಂಕಿತ ಯಾವುದು?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಎಂಬುದು ಘಟ್ಟಿವಾಳಯ್ಯನ ಅಂಕಿತ.



ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

೧. ಕೈದು , ಕಾಳೋರಗಗಳಿಗೆ ಏನೇನು ಇರುವುದಿಲ್ಲ?
ತಿವಿಯುವ ಆಯುಧಕ್ಕೆ ದಯೆ, ಧರ್ಮದ ಮೊನೆ ಇರುವುದಿಲ್ಲ. ಅಂತೆಯೇ ಉಗ್ರಸರ್ಪದ ದವಡೆಯಲ್ಲಿ ಅಮೃತವು ಇರುವುದಿಲ್ಲ.

೨. ತಗಹು , ಸೂತಕಗಳು ಯಾವುವು?
ನೇಮವೆಂಬುದು ತಗಹು (ನಿಯಮವೆಂಬುದು ಕಟ್ಟುಪಾಡು), ಶೀಲವೆಂಬುದು ಸೂತಕ  (ನಡತೆ ಎಂಬುದು ಮೈಲಿಗೆ) ಎಂದಿದ್ದಾನೆ.

೩. ತನುಮನ ಧನಗಳನ್ನು ಮರೆಯಲು ಏನನ್ನು ತೋರುತ್ತಾರೆ?
ತನುಮನ ಧನಗಳನ್ನು ಮರೆಯಲು ಗುರು , ಲಿಂಗ , ಜಂಗಮಗಳನ್ನು ತೋರುತ್ತಾರೆ.

ಐದಾರು ವಾಕ್ಯದಲ್ಲಿ ಉತ್ತರಿಸಿ.
೧. ಘಟ್ಟಿವಾಳಯ್ಯ ವೇಷಧಾರಿಗಳನ್ನು ಕೂಟದಿಂದ ಹೊರಗು ಎನ್ನಲು ಕಾರಣಗಳೇನು?
ಕೊಲ್ಲುವ ಆಯುಧಗಳಿಗೆ ದಯೆ ಧರ್ಮದ ಮೊನೆ ಇರುವುದೇ? ಅಂತೆಯೇ ಉಗ್ರಸರ್ಪದ ಹಲ್ಲಿನೊಳಗೆ ಅಮೃತವಿರುತ್ತದೆಯೇ? ಹೊಟ್ಟೆಪಾಡಿಗೋಸ್ಕರ ಜಂಗಮರ ವೇಷಧರಿಸಿದವರೆಲ್ಲ ಶಿವನನ್ನು ಹೇಗೆ ಅರಿಯುವರು ಎಂದು ಪ್ರಶ್ನಿಸುತ್ತಾನೆ. ಇಂತಹ ವೇಷಧಾರಿಗಳು ಶಿವಶರಣರ ಗುಂಪಿನಿಂದ ಬೇರೆ ಅಂತಹವರಿಗೆ ಶಿವ ದೊರೆಯುವುದಾದರೂ ಹೇಗೆ ಎಂದು ಹೇಳುತ್ತಾರೆ.

೨. ವ್ರತಗಳನ್ನು ಕುರಿತಂತೆ ಘಟ್ಟಿವಾಳಯ್ಯನವರ ನಿಲುವೇನು?
ಅಂತೆಯೆ ಧ್ಯಾನ, ತಪಸ್ಸು , ಉಪವಾಸ, ವ್ರತ ಎಂಬುವುಗಳನ್ನು ಮನಸ್ಸಿಲ್ಲದೆಯೇ ಆಚರಿಸುವ ಜನರಿಗೆ ತಪಸ್ಸೆಂಬುದೇ ಬಂಧನವಾಗಿಯೂ ನಿಯಮವೆಂಬುದು ಕಟ್ಟುಪಾಡಾಗಿಯೂ ನಡತೆಯೆಂಬುದು ಮೈಲಿಗೆಯಾಗಿಯೂ ಕಾಡುವುದು. ಇಂತಹ ಕಟ್ಟುಪಾಡುಗಳೆಲ್ಲ ನಗೆಗೆ ಕಾರಣವಾಗಿ, ಆ ನಗೆಯಿಂದ ಕೋಪ ದ್ವೇಷಗಳು ಉಂಟಾಗಿ ಶಿವ ಅಲ್ಲಿ ಇಲ್ಲದವನಾಗುತ್ತಾನೆ. ಧ್ಯಾನ - ತಪಸ್ಸುಗಳೆಲ್ಲ ಮನಸ್ಸಿಟ್ಟು ಆಚರಿಸಬೇಕೇ  ಹೊರತು ಬಲವಂತದಿಂದಲ್ಲ. ಎಂದು ಹೇಳುತ್ತಾನೆ.

೩. ಘಟ್ಟಿವಾಳಯ್ಯನವಚನಗಳ ಆಶಯಗಳೇನು?
ಹೊಟ್ಟೆಯ ಪಾಡಿಗೋಸ್ಕರ ಜಂಗಮರಂತೆ, ಶಿವಶರಣರಂತೆ ವೇಷಧರಿಸಿದ ಜನರನ್ನು , ಮನಸ್ಸಿಲ್ಲದೆಯೇ ನೇಮ, ಧ್ಯಾನ, ತಪಸ್ಸು , ವ್ರತ, ಉಪವಾಸಗಳೇ ಮೊದಲಾದ, ಅನೇಕ ರೀತಿಯ ಕಟ್ಟುಪಾಡುಗಳನ್ನು ಹೊಂದಿದ್ದು ನಗೆಗೆ ಕಾರಣವಾಗುವ ಜನರನ್ನು ಖಂಡಿಸುತ್ತಾ ಡಾಂಬಿಕತನದಿಂದ , ಬಲವಂತದಿಂದ ಶಿವನನ್ನು ಒಲಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹವರು ಶಿವಭಕ್ತರ ಗುಂಪಿನಿಂದಲೂ ಹೊರಗೆ ಎಂದಿದ್ದಾನೆ.ತನುಮನಧನಗಳನ್ನು ಮರೆಯಲೆಂದು ಗುರು, ಲಿಂಗ, ಜಂಗಮರನ್ನು ತೋರಲಾಗಿದೆ. ಗುರು-ಲಿಂಗ-ಜಂಗಮಗಳನ್ನು ಮರೆವ ಭಾಷಾಹೀನರನ್ನು ಕಂಡು ನಾಚುತ್ತೇನೆ ಎಂದು ಘಟ್ಟಿವಾಳಯ್ಯ ಹೇಳುತ್ತಾನೆ. 
~~~ಓಂ~~~
ವಚನಗಳು - ಅಕ್ಕಮಹಾದೇವಿಯವರ ವಚನಗಳು
ಅಕ್ಕಮಹಾದೇವಿ : ಹನ್ನೆರಡನೇ ಶತಮಾನದ ಪ್ರಸಿದ್ಧ ವಚನಕಾರ್ತಿ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಉಡುತಡಿ ಯವಳು. ಬಾಲ್ಯದಿಂದಲೂ ಶಿವನಲ್ಲಿ ಅಪಾರವಾದ ಭಕ್ತಿಯಿದ್ದ ಈಕೆಗೆ ಕೌಶಿಕನೆಂಬ ರಾಜನೊಡನೆ ಬಲವಂತದ ವಿವಾಹವಾಗುತ್ತದೆ. ಶಿವಭಕ್ತಿಗೆ ಅಡ್ಡಿಪಡಿಸಿದ ಅವನನ್ನು ತೊರೆದು ವೈರಾಗಿಯಾಗಿ ಹೊರಟವಳು ಕಲ್ಯಾಣ ಸೇರುತ್ತಾಳೆ.  ಶಿವಶರಣರ ಜೊತೆ ಅಧ್ಯಾತ್ಮಿಕ ಚರ್ಚೆಯಲ್ಲಿ ಪಾಲ್ಗೊಂಡು ಕಡೆಯಲ್ಲಿ ಶ್ರೀಶೈಲದ ಕದಳಿವನದಲ್ಲಿ ಐಕ್ಯಳಾದಳು ಎಂಬ ಐತಿಹ್ಯವಿದೆ.
ಸಾರಾಂಶ
ರತ್ನದ ಸಂಕೋಲೆಯಾದರೂ ಅದು ಅಡ್ಡಿಯಲ್ಲವೇ? ಮುತ್ತಿನ ಬಲೆಯಾದರೇನು ಅದೂ ಬಂಧನವಲ್ಲವೇ? ಚಿನ್ನದ ಕತ್ತಿಯಲ್ಲಿ ತಲೆಗೆ ಹೊಡೆದರೆ ಸಾಯುವುದಿಲ್ಲವೇ? ಲೌಕಿಕವಾದ ವಿಚಾರಗಳಲ್ಲಿ ತೊಡಗಿದರೆ ಜನನ ಮರಣಗಳು ಬಿಡುವುವೇ? ಕೇವಲ ಬಾಹ್ಯ ಆಚಾರ , ವ್ಯವಹಾರಗಳಲ್ಲಿ ತೊಡಗಿ ಶಿವನನ್ನು ಮರೆತಂತ ಜನರನ್ನು ಕುರಿತು ಈ ಮಾತುಗಳನ್ನು ಹೇಳುತ್ತಾಳೆ. ರತ್ನದ ಸಂಕೋಲೆಯೂ ನಮಗೆ ತೊಂದರೆಯನ್ನೇ ಉಂಟುಮಾಡುತ್ತದೆ, ಮುತ್ತಿನ ಬಲೆಯೂ ನಮ್ಮನ್ನು ಬಂಧಿಸುತ್ತದೆ. ಅಂತೆಯೇ ಚಿನ್ನದ ಕತ್ತಿಯಿಂದ ಹೊಡೆಯಲು ಸಾವು ತಪ್ಪುವುದಿಲ್ಲ. ಲೌಕಿಕವಾದ ಜೀವನದದ ಬಗೆಗೆ ಸದಾ ಚಿಂತಿಸುತ್ತಿರುವ ಜನರನ್ನು ಈ ಜನನ – ಮರಣಗಳು ಬಿಡುವುದಿಲ್ಲ ಅಲ್ಲವೇ  ಎಂದು ಶಿವನಿಗೆ ಹೇಳಿದ್ದಾಳೆ.
ಲೋಕದ ವ್ಯವಹಾರಗಳಿಗೆ ರವಿ (ಸೂರ‍್ಯ) ಬೀಜವಾದಂತೆ ಇಂದ್ರಿಯಗಳ ಚಟುವಟಿಕೆಗೆ ಮನಸ್ಸು ಮೂಲ. ಲೋಕದ ಚಟುವಟಿಕೆಗಳೆಲ್ಲಕ್ಕೂ ಸೂರ್ಯನೇ ಮೂಲ. ಸೂರ್ಯೋದಯದೊಂದಿಗೆ ಜಗತ್ತಿನ ವ್ಯಾಪಾರ ಆರಂಭವಾಗುತ್ತದೆ.  ಅಂತೆಯೇ ಇಂದ್ರಿಯಗಳ ಚಟುವಟಿಕೆಗಳಿಗೆಲ್ಲಾ ಮನಸ್ಸೇ ಮೂಲ. ನನಗಿರುವ ಒಂದು ಮನವು ನಿಮಗೆ ಅರ್ಪಿತವಾದಮೇಲೆ  ನನಗೆ ಮತ್ತೆ ಹುಟ್ಟು-ಸಾವುಗಳೆಂಬುವು ಇರುವುದಿಲ್ಲ ಅಲ್ಲವೇ ಎಂದು ಶಿವನಲ್ಲಿ ಕೇಳುತ್ತಾಳೆ.
ಗುರುಹಿರಿಯರನ್ನು ಕಾಣುವುದೇ ಕಣ್ಣಿಗೆ ಅಲಂಕಾರ (ಭೂಷಣ), ಪುರಾತನರ ಸಂಗೀತಗಳನ್ನು ಕೇಳುವುದೇ ಕಿವಿಗೆ ಅಲಂಕಾರ. ಸತ್ಯವನ್ನು ನುಡಿಯುವುದೇ ನಮ್ಮ ಮಾತಿಗೆ ಅಲಂಕಾರವಾದರೆ.  ಶಿವಭಕ್ತರ ಸಮೂಹವು ಸಂಭಾಷಣೆಗೆ ಅಲಂಕಾರ. ಅರ್ಹರಾದವರಿಗೆ ದಾನ ನೀಡುವುದು ಕೈಗಳಿಗೆ ಶೃಂಗಾರ, ಶಿವಶರಣರ ಸಮೂಹದೊಡನೆ ಜೀವಿಸುವುದು ಜೀವನಕ್ಕೇ ಅಲಂಕಾರವಾಗುವುದು.
ಹಿರಿಯರನ್ನು ಪ್ರೀತಿಯಿಂದ ಕಾಣದ ಕಣ್ಣು ಪುರಾತನರ (ಶಿವಶರಣರ) ಸಂಗೀತಗಳನ್ನು ಕೇಳದ ಕಿವಿ, ಸತ್ಯವನ್ನು ನುಡಿಯದ ನಾಲಿಗೆ,  ಶಿವಶರಣರ ಸಮೂಹದೊಂದಿಗೆ ಮಾಡದ ಸಂಭಾಷಣೆ, ಶಿವಶರಣಸಮೂಹದಲ್ಲಿ ಬಾಳದ ಬಾಳು. ಸತ್ಪಾತ್ರರಿಗೆ ದಾನ ನೀಡದ ಕೈ, ಇವೆಲ್ಲ ವ್ಯರ್ಥ. ಇಂತಹ ಜೀವಿಯ ಜೀವನವು ವ್ಯರ್ಥವಾಗುವುದು ಇಂತಹ ಜೀವನ ಏತಕ್ಕಾಗಿ ಎಂದು ಶಿವನಲ್ಲಿ ಕೇಳುತ್ತಾಳೆ.

ಸಂದರ್ಭದೊಡನೆ ವಿವರಿಸಿ:
೧. ಮುತ್ತಿನ ಬಲೆಯಾದಡೆ ಬಂಧನವಲ್ಲವೇ?
ಈ ಮಾತನ್ನು ಅಕ್ಕಮಹಾದೇವಿಯವರ ವಚನಗಳಿಂದ ಆರಿಸಲಾಗಿದೆ.
ರತ್ನದ ಸಂಕೋಲೆಯೂ ನಮಗೆ ತೊಂದರೆಯನ್ನೇ ಉಂಟುಮಾಡುತ್ತದೆ, ಮುತ್ತಿನ ಬಲೆಯೂ ನಮ್ಮನ್ನು ಬಂಧಿಸುತ್ತದೆ. ಅಂತೆಯೇ ಚಿನ್ನದ ಕತ್ತಿಯಿಂದ ಹೊಡೆದರೆ ಸಾವು ತಪ್ಪುವುದಿಲ್ಲ. ಲೌಕಿಕವಾದ ಜೀವನದದ ಬಗೆಗೆ ಸದಾ ಚಿಂತಿಸುತ್ತಿರುವ ಜನರನ್ನು ಈ ಜನನ – ಮರಣಗಳು ಬಿಡುವುದಿಲ್ಲ ಅಲ್ಲವೇ  ಎಂದು ಶಿವನಿಗೆ ಹೇಳಿದ್ದಾಳೆ.


೨. ಎನಗೆ ಭವವುಂಟೆ?
ಈ ಮಾತನ್ನು ಅಕ್ಕಮಹಾದೇವಿಯವರ ವಚನಗಳಿಂದ ಆರಿಸಲಾಗಿದೆ. ಲೋಕದ ಜನ ಲೌಕಿಕವಿಚಾರಗಳಲ್ಲಿ ಮನವನ್ನಿಟ್ಟು ಜನನ-ಮರಣ ಚಕ್ರದಸುಳಿಯಲ್ಲಿ ಸಿಲುಕಿದ್ದಾರೆ. ಆದರೆ ನನಗಿರುವ ಒಂದು ಮನವು ನಿಮಗೆ ಅರ್ಪಿತವಾದಮೇಲೆ  ನನಗೆ ಮತ್ತೆ ಹುಟ್ಟು-ಸಾವುಗಳೆಂಬುವು ಇರುವುದಿಲ್ಲ ಅಲ್ಲವೇ ಎಂದು ಶಿವನಲ್ಲಿ ಕೇಳುತ್ತಾಳೆ.

೩. ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು.
ಈ ಮಾತನ್ನು ಅಕ್ಕಮಹಾದೇವಿಯವರ ವಚನಗಳಿಂದ ಆರಿಸಲಾಗಿದೆ.
ಗುರುಹಿರಿಯರನ್ನು ಕಾಣುವುದೇ ಕಣ್ಣಿಗೆ ಅಲಂಕಾರ (ಭೂಷಣ), ಪುರಾತನರ ಸಂಗೀತಗಳನ್ನು ಕೇಳುವುದೇ ಕಿವಿಗೆ ಅಲಂಕಾರ. ಸತ್ಯವನ್ನು ನುಡಿಯುವುದೇ ನಮ್ಮ ಮಾತಿಗೆ ಅಲಂಕಾರವಾದರೆ. ಅರ್ಹರಾದವರಿಗೆ ದಾನ ನೀಡುವುದು ಕೈಗಳಿಗೆ ಶೃಂಗಾರ,  ಸತ್ಪಾತ್ರರಿಗೆ ದಾನ ನೀಡುವುದು ಕೈಗೆ ಭೂಷಣ/ಅಲಂಕಾರ ಎಂದು ಅಕ್ಕ ಮಹಾದೇವಿ ಹೇಳುತ್ತಾಳೆ. ಸಂಸ್ಕೃತದ ಸುಭಾಷಿತವಾದ ಹಸ್ತಸ್ಯ ಭೂಷಣಂ ದಾನಂ, ಸತ್ಯಂ ಕಂಠಸ್ಯಭೂಷಣಂ ಎಂಬ ವಿಚಾರಗಳು ಈ ವಚನದಲ್ಲಿ ಕಾಣಬಹುದಾಗಿದೆ.
ಒಂದುವಾಕ್ಯದಲ್ಲಿ ಉತ್ತರಿಸಿ.
೧. ಅಕ್ಕನು ಹೇಳತೊಡಗುವ ತೊಡರು ಯಾವುದು?
ರತ್ನದ ಸಂಕೋಲೆಯನ್ನು ಅಕ್ಕ ತೊಡರು ಎಂದು ಹೇಳುತ್ತಾಳೆ.


೨. ಲೋಕದ ಚೇಷ್ಟೆಗೆ ಬೀಜವಾದುದು ಯಾವುದು?
ಲೋಕದ ಚೇಷ್ಟೆಗೆ ರವಿ ಬೀಜವಾಗುತ್ತಾನೆ.

೩. ಭವ ಯಾವಾಗ ಕೆಡುವುದು?
ಶಿವನಲ್ಲಿ ಮನವಿಟ್ಟಾಗ ಭವ ಕೆಡುವುದು.

೪. ಸತ್ಯವ ನುಡಿವುದು ಯಾವುದರ ಶೃಂಗಾರವಾಗಬೇಕು?
ಸತ್ಯವನ್ನು ನುಡಿಯುವುದು ವಚನಕ್ಕೆ / ಮಾತಿಗೆ ಶೃಂಗಾರವಾಗಬೇಕು

೫. ಅಕ್ಕನ ವಚನಗಳ ಅಂಕಿತ ಯಾವುದು?
ಚನ್ನಮಲ್ಲಿಕಾರ್ಜುನ ಎಂಬುದು ಅಕ್ಕನ ವಚನಗಳ ಅಂಕಿತ.

ಎರಡು- ಮೂರು ವಾಕ್ಯಗಳಲ್ಲಿ ಉತ್ತರಿಸಿ.

೧.ರತ್ನ ಮತ್ತು ಮುತ್ತು ಏನನ್ನು ಸೂಚಿಸುತ್ತವೆ?
ರತ್ನದ ಸಂಕೋಲೆ ಮತ್ತು ಮುತ್ತಿನ ಬಲೆಯು ಲೌಕಿಕ ಜೀವನದ ಬಂಧನವನ್ನು ಸೂಚಿಸುತ್ತವೆ. ಸಂಕೋಲೆಯಾವುದಾದರೇನು , ಬಲೆಯಾವುದಾದರೇನು ಅವು ನಮ್ಮ ನಡೆಗೆ ಅಡ್ಡಿಯಾಗುವುದು ಎಂದು ಅಕ್ಕ ಹೇಳುತ್ತಾಳೆ.

೨. ಲೋಕ ಹಾಗೂ ಕರಣಗಳ ಚೇಷ್ಟೆಗೆ ಬೀಜ ಯಾವುದು?
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ , ಕರಣಗಳ ಚೇಷ್ಟೆಗೆ ಮನವು ಬೀಜವಾಗುವುದು. ಲೋಕದವ್ಯವಹಾರಗಳಿಗೆಲ್ಲ ಮೂಲ ಸೂರ್ಯನಾದರೆ , ಪಂಚೇಂದ್ರಿಯಗಳ ವ್ಯವಹಾರಗಳಿಗೆ ಮೂಲ ಮನಸ್ಸು ಎಂದು ಅಕ್ಕ ಹೇಳುತ್ತಾಳೆ.

೩. ಕಣ್ಣು ಹಾಗೂ ಕರ್ಣಗಳಿಗೆ ಶೃಂಗಾರ ಯಾವುದು?
ಹಿರಿಯರನ್ನು ನೋಡುವುದು ಕಣ್ಣಿಗೆ ಶೃಂಗಾರವಾದರೆ, ಪುರಾತನರ (ಶಿವಶರಣರ) ವಚನಗಳ ಸಂಗೀತವನ್ನು ಕೇಳುವುದು ಕಿವಿಗಳಿಗೆ ಶೃಂಗಾರ ಎಂದು ಹೇಳಿದ್ದಾಳೆ.

ಐದಾರು ವಾಕ್ಯಗಳಲ್ಲಿ ಉತ್ತರಿಸಿ.

೧. ಲೋಕದ ಭಜನೆಯಲ್ಲಿ ಸಿಲುಕಿದವರಿಗೆ ಮುಕ್ತಿಯಿಲ್ಲ ಎಂಬುದನ್ನು ಅಕ್ಕ ಹೇಗೆ ನಿರೂಪಿಸಿದ್ದಾಳೆ?
ರತ್ನದ ಸಂಕೋಲೆಯಾದರೂ ಅದು ಅಡ್ಡಿಯಲ್ಲವೇ? ಮುತ್ತಿನ ಬಲೆಯಾದರೇನು ಅದೂ ಬಂಧನವಲ್ಲವೇ? ಚಿನ್ನದ ಕತ್ತಿಯಲ್ಲಿ ತಲೆಗೆ ಹೊಡೆದರೆ ಸಾಯುವುದಿಲ್ಲವೇ? ಲೌಕಿಕವಾದ ವಿಚಾರಗಳಲ್ಲಿ ತೊಡಗಿದರೆ ಜನನ ಮರಣಗಳು ಬಿಡುವುವೇ? ಕೇವಲ ಬಾಹ್ಯ ಆಚಾರ , ವ್ಯವಹಾರಗಳಲ್ಲಿ ತೊಡಗಿ ಶಿವನನ್ನು ಮರೆತಂತಹ ಜನರನ್ನು ಕುರಿತು ಈ ಮಾತುಗಳನ್ನು ಹೇಳುತ್ತಾಳೆ. ರತ್ನದ ಸಂಕೋಲೆಯೂ ನಮಗೆ ತೊಂದರೆಯನ್ನೇ ಉಂಟುಮಾಡುತ್ತದೆ, ಮುತ್ತಿನ ಬಲೆಯೂ ನಮ್ಮನ್ನು ಬಂಧಿಸುತ್ತದೆ. ಅಂತೆಯೇ ಚಿನ್ನದ ಕತ್ತಿಯಿಂದ ಹೊಡೆಯಲು ಸಾವು ತಪ್ಪುವುದಿಲ್ಲ. ಲೌಕಿಕವಾದ ಜೀವನದದ ಬಗೆಗೆ ಸದಾ ಚಿಂತಿಸುತ್ತಿರುವ ಜನರು ಜನನ ಮರಣ ಎಂಬ ಚಕ್ರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾಳೆ.
೨. ಹುಟ್ಟು ಸಾವನ್ನು ಮೀರುವುದು ಹೇಗೆಂದು ಅಕ್ಕಮಹಾದೇವಿ ತನ್ನ ವಚನದಲ್ಲಿ ಸಾರಿದ್ದಾಳೆ?
ಲೋಕದ ಚಟುವಟಿಕೆಗಳೆಲ್ಲಕ್ಕೂ ಸೂರ್ಯನೇ ಮೂಲ. ಸೂರ್ಯೋದಯದೊಂದಿಗೆ ಜಗತ್ತಿನ ವ್ಯಾಪಾರ ಆರಂಭವಾಗುತ್ತದೆ.  ಅಂತೆಯೇ ಇಂದ್ರಿಯಗಳ ಚಟುವಟಿಕೆಗಳಿಗೆಲ್ಲಾ ಮನಸ್ಸೇ ಮೂಲ. ಹಾಗಾಗಿ ಮನಸ್ಸನ್ನು ಶಿವನಲ್ಲಿ ಇಟ್ಟಮೇಲೆ ಮತ್ತೆ ಹುಟ್ಟು-ಸಾವುಗಳೆಂಬುವು ಇರುವುದಿಲ್ಲ. ಇಂದ್ರಿಯ ಚಟುವಟಿಕೆಗಳತ್ತ ಗಮನಹರಿಸಿದರೆ ಹುಟ್ಟು ಸಾವುಗಳ ಬಂಧನದಿಂದ ಬಿಡುಗಡೆಯೇ ಸಿಗುವುದಿಲ್ಲ. 

೩. ಬದುಕು ಸಾರ್ಥಕವಾಗಬೇಕಾದರೆ ಯಾವ ಅಂಶಗಳು ಇರಬೇಕೆಂದು ಅಕ್ಕಮಹಾದೇವಿ ಹೇಳುತ್ತಾಳೆ?
ಬದುಕು ಸಾರ್ಥಕವಾಗಬೇಕಾದರೆ ಗುರುಹಿರಿಯರನ್ನು ಪ್ರೀತಿಯಿಂದ  ಕಾಣುವ ಕಣ್ಣು,  ಪುರಾತನರ ಸಂಗೀತಗಳನ್ನು ಕೇಳುವ ಕಿವಿ, ಸತ್ಯವನ್ನು ನುಡಿಯುವುದು,  ಶಿವಭಕ್ತರ ಸಮೂಹದಲ್ಲಿ ಸಂಭಾಷಣೆ, ಅರ್ಹರಾದವರಿಗೆ ದಾನ ನೀಡುವ ಕೈ,  ಶಿವಶರಣರ ಸಮೂಹದೊಡನೆ ಜೀವಿಸುವಂತ ಅವಕಾಶಗಳಿದ್ದರೆ ಸಾಕು ಇಲ್ಲದಿರೆ ಇವೆಲ್ಲ ವ್ಯರ್ಥ. ಇಂತಹ ಜೀವಿಯ ಜೀವನವು ವ್ಯರ್ಥವಾಗುವುದು ಇಂತಹ ಜೀವನ ಏತಕ್ಕಾಗಿ ಬೇಕು ಎಂದು ಕೇಳುತ್ತಾಳೆ.

~~~ಓಂ~~~

ದುರ್ಯೋಧನ ವಿಲಾಪ

 ಭಾಗ 1- ದುರ್ಯೋಧನ ವಿಲಾಪ
ರನ್ನ
ಬಾಗಲಕೋಟೆ ಜಿಲ್ಲೆಯ ಮುದುವೊಳಲು (ಮುಧೋಳ) ಈತನ ಸ್ಥಳ. ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ. ಬಳೆಗಾರ ಮನೆತನದಲ್ಲಿ ಜನಿಸಿದನು. ದಾನ ಚಿಂತಾಮಣಿ ಅತ್ತಿಮಬ್ಬೆಯ ಪ್ರೋತ್ಸಾಹದಿಂದ ಗುರು ಅಜಿತಸೇನಾಚಾರ್ಯರ ಬಳಿ ವಿದ್ಯೆಕಲಿತನು. ಚಾಲುಕ್ಯರ ಎರಡನೆ ತೈಲಪ ಹಾಗೂ ಸತ್ಯಾಶ್ರಯ ಇರಿವಬೆಡಂಗನ ಆಸ್ಥಾನಕವಿಯಾಗಿದ್ದ.
ಸಾರಾಂಶ : 12  ವರ್ಷ ವನವಾಸವನ್ನೂ 1ವರ್ಷ ಅಜ್ಞಾತವಾಸವನ್ನೂಮುಗಿಸಿ ಬಂದ ಪಾಂಡವರು ತಮ್ಮ ಭೂಮಿಯನ್ನು ಹಿಂದಿರುಗಿಸುವಂತೆ ಕೇಳಿದಾಗ, ಕೌರವರು ಒಂದು ಸೂಜಿಮೊನೆಯಷ್ಟೂ ಭೂಮಿಯನ್ನು ಹಿಂದಿರುಗಿಸುವುದಿಲ್ಲ. ಆಗ 18ದಿನಗಳ ಘೋರ ಯುದ್ಧ ಆರಂಭವಾಗಿ ಎರಡೂಕಡೆ ಅಸಂಖ್ಯಾತ ವೀರರು ಮರಣ ಹೊಂದುತ್ತಾರೆ.
ಯುದ್ಧದಲ್ಲಿ ತನ್ನವರನ್ನು ಕಳೆದುಕೊಂಡ ದುರ್ಯೋಧನ ಅವರ ಕಳೆಬರ(ಹೆಣ)ಗಳನ್ನು ನೋಡಲು ಯುದ್ಧಭೂಮಿಗೆ ಬರುತ್ತಾನೆ. ಯುದ್ಧರಂಗದಲ್ಲಿಬಿದ್ದಿದ್ದ ಶವಗಳನ್ನು , ಆನೆಗಳನ್ನು ಮೆಟ್ಟಿ ಮೆಲ್ಲನೆ ಒಬ್ಬೊಬ್ಬರನ್ನೇ ನೋಡುತ್ತಾ ಬರುತ್ತಿದ್ದ ದುರ್ಯೋಧನನಿಗೆ ದುಷ್ಟದ್ರುಮ್ನ್ಯನಿಂದ ಹತರಾದ ದ್ರೋಣಾಚಾರ್ಯರ ಶವ ಕಾಣುತ್ತದೆ.
        ಸಾಕ್ಷಾತ್ ಪರಶಿವನೇ ನಿಮ್ಮ ಎದುರು ಯುದ್ಧಮಾಡಲು ಸಾಧ್ಯವಾಗುವುದಿಲ್ಲ ಅದರಲ್ಲಿ ನಿಮಗೆ ಇಂತಹ ದುರ್ಮರಣ ಬಂದಿರುವುದು ನನ್ನ ದುರಾದೃಷ್ಟವೇ ಸರಿ. ಎಂದು ದುಃಖಿಸುತ್ತಾ ನಮಸ್ಕರಿಸಿ ಮುಂದೆನಡೆಯುತ್ತಾನೆ.
ಮುಂದೆ ಅಭಿಮನ್ಯುವಿನ ಶವ ಕಂಡು ತನ್ನ ಶತ್ರುವಿನ ಮಗನಾದರೂ ಅವನ ವೀರತ್ವಕ್ಕೆ ಮಣಿದು ದ್ರೋಣರು ರಚಿಸಿದ ಚಕ್ರವ್ಯೂಹದಲ್ಲಿ ಹೋರಾಡಿ ವೀರ ಮರಣ ಹೊಂದಿದ ನಿನ್ನ ಶೌರ್ಯದಲ್ಲಿ ಸಾಹಸದಲ್ಲಿ ಒಂದು ಪಾಲು ನಮ್ಮಲ್ಲೂ ಇದ್ದರೆ ನಮಗೂ ನಿನ್ನಂತೆ ವೀರಮರಣ ಲಭಿಸಲಿ ಎಂದು ಕೋರುತ್ತಾನೆ. 
ಅಲ್ಲಿಂದ ಮುನ್ನಡೆದು ತನ್ನ ಮಗನಾದ ಲಕ್ಷಣಕುಮಾರನ ಶವವನ್ನು ಕಂಡು ತಂದೆ ಮರಣಿಸಿದಾಗ ಮಗನಾದವನು ತರ್ಪಣಾದಿಗಳನ್ನು ಕೊಡುವುದು ಸಹಜ ಆದರೆ ನಿನಗೆ ನಿನ್ನತಂದೆಯಾದ ನಾನು ತರ್ಪಣನೀಡುವಂತಾಯಿತಲ್ಲಾ ಎಂದು ಗೋಳಾಡುತ್ತಾನೆ ಅವನನ್ನು ಸಂಜ ಸಮಾಧಾನ ಮಾಡಿ ಕರೆದೊಯ್ಯುತ್ತಾನೆ.
ಅಲ್ಲಿಂದ ಮುಂದೆ ಸಾಗಿ ಭೀಮನ ಗಧೆಯ ಆಘಾತಕ್ಕೆ ಸಿಲುಕಿ ಮರಣಹೊಂದಿದ್ದ ದುಶ್ಯಾಸನನ ಶವವನ್ನು ಕಂಡು ನಿನ್ನನ್ನು ಕೊಂದ ಭೀಮ ಇನ್ನೂ ಬದುಕಿದ್ದಾನೆ. ನಿನ್ನನ್ನು ಕಳೆದುಕೊಂಡ ನಾನೂ ಬದುಕಿದ್ದೇನೆ. ನಿನಗಿಂತ ಮೊದಲು ತಾಯಿಯ ಹಾಲನ್ನು ನಾನು ಸವಿದೆ, ನಾನಾರೀತಿಯ ಸೋಮರಸಗಳನ್ನು , ದಿವ್ಯಭೋಜನಗಳನ್ನು ಸವಿದಿದ್ದೇನೆ ನನ್ನ ನಂತರ ನೀನು ಇವೆಲ್ಲವನ್ನು ಸವಿದಿದ್ದೆ ಆದರೆ ಮರಣದಲ್ಲಿ ಸರದಿಕ್ರಮವನ್ನು ಮೀರಿದೆಯಲ್ಲಾ ಇದು ಸರಿಯೇ ಎಂದು ರೋಧಿಸುತ್ತಾನೆ.
ಅಲ್ಲಿಂದ ಮುಂದೆ ನಡೆದು ದಿನಕರತನಯನಾದ ಕರ್ಣನ ಶವದ ಬಳಿಗೆ ಬಂದು ನಾನು ದುಶ್ಯಾಸನ , ನೀನು ಒಂದು ಜೀವ ಎಂಬಂತೆ ಇದ್ದೆವು ಈಗ ನಾನೊಬ್ಬನೇ ಉಳಿದಿದ್ದೇನೆ. ಮೊದಲು ದುಶ್ಯಾಸನ, ಬಳಿಕ ನೀನು ಎಲ್ಲರೂ ಹೋದಿರಿ. ನಿನ್ನ ಗೆಳೆಯನಾದ ನನ್ನನ್ನು ಕಾಣದೆ , ಮಾತನಾಡದೆ , ಅಪ್ಪಿಕೊಳ್ಳದೆ ಏನಪ್ಪಣೆ ಎಂದು ಕೇಳದೆ ಎಲ್ಲಿಹೋದೆ ಏಕೆ ಮಾತಾಡುತ್ತಿಲ್ಲ ಎಂದು ದುಃಖಿಸುತ್ತಾ, ಸುಳ್ಳು , ಲೋಭ, ಭಯ ಎಂಬುವು ನೀನು ಇದ್ದ ಸ್ಥಳದಲ್ಲಿ ಇರುವುದಿಲ್ಲ. ಸತ್ಯ ತ್ಯಾಗ , ಪರಾಕ್ರಮಗಳು ನೀನಿರುವೆಡೆಯಲ್ಲಿ ಮಾತ್ರ ಇರುತ್ತಿದ್ದವು. ಕರ್ಣಾ ನೀನು ಯಾರೆಂಬುದನ್ನು ನಾನು ಅರಿತಿದ್ದೆ. ನಿನ್ನ ತಾಯಿ ಕುಂತಿಗೂ ತಿಳಿದಿತ್ತು. ಕೃಷ್ಣ, ಸೂರ್ಯ ಹಾಗೂ ದಿವ್ಯಜ್ಞಾನಿಯಾದ ಸಹದೇವರಿಗೂ ತಿಳಿದಿತ್ತು. ನೀನು ನನ್ನೊಡನೆ ಇದ್ದಿದ್ದರೆ  ರಾಜ್ಯ ಬೆಳ್ಗೊಡೆ, ಸಿಂಹಾಸನ  ಇರುತ್ತಿದ್ದವು ಈಗ ಇವೆಲ್ಲವೂ ಇದ್ದೂ ಇಲ್ಲದಂತಾಗಿವೆ.  ಅಂದು ಇಂದ್ರ ಬೇಡಿದಾಗ ಕವಚವನ್ನು , ಕುಂತಿ ಬೇಡಿದಾಗ ದಿವ್ಯಾಸ್ತ್ರಗಳನ್ನು ಹಿಂಜರಿಯದೆ, ಅಳುಕದೆ ನೀಡಿದೆ. ದಾನದಲ್ಲಿ ನಿನ್ನ ಸಮನಾದ ದಾನಶೂರರಾರೂ ಇಲ್ಲ. ಎಂದು ದುಃಖಿಸುತ್ತಾ ಅಲ್ಲಿಂದ ಹೊರಟು ಶರಶಯ್ಯೆಯಲ್ಲಿ ಮಲಗಿದ್ದ ಗಂಗಾಸುತ ಭೀಷ್ಮನ ಬಳಿಗೆ ಬಂದನು.
ಪದವಿಭಾಗ :
ಉಡಿದು ಇರ್ದ ಕಯ್ದು ನೆತ್ತರ ಕಡಲೊಳಗೆ ಅಡಿಗಡಿಗೆ ತಳಮನ್ ಉರ್ಚುತ್ತಮ್ ಇರೆ ಕಾಲಿಡಲು ಎಡೆ ವಡಿಯದೆ ಕುರುಪತಿ ದಡಿಗ ವೆಣಂಗಳನೆ ಮೆಟ್ಟಿ ಮೆಲ್ಲನೆ ನಡೆದಂ
ಪದಗಳ ಅರ್ಥ :ಉಡಿದು – ಮುರಿದು ಕಯ್ದು – ಆಯುಧ  ಉರ್ಚು- ಚುಚ್ಚು , ದಡಿಗ – ದಾಂಡಿಗ ವೆಣ – ಹೆಣ
ನೆತ್ತರ ಕಡಲಲ್ಲಿ ಮುರಿದು ಬಿದ್ದಿದ್ದ ಆಯುಧಗಳು ಹೆಜ್ಜೆ ಹೆಜ್ಜೆಗೆ ಅಂಗಾಲುಗಳನ್ನು ಚುಚ್ಚುತ್ತಿರಲು ಕಾಲಿಡುವುದಕ್ಕೂ ಸ್ಥಳಕಾಣದೆ ಕುರುರಾಜನು ದಪ್ಪವಾದ ಹೆಣಗಳ ಮೇಲೆಯೇ ಕಾಲಿಟ್ಟು ಮೆಲ್ಲನೆ ನಡೆದನು.
ಇಭ ಶೈಲಂಗಳನ್ ಏರಿ ಯೇರಿ, ರುಧಿರ ಸ್ರೋತಂಗಳಂ ದಾಂಟಿ ದಾಂಟಿ ಇಭದೋರ್ ನೀಲಲತಾ  ಪ್ರತಾನ ವಿಪಿನ ವ್ರಾತಂಗಳೊಳ್ ಸಿಲ್ಕಿ ಸಿಲ್ಕಿ ಭರಂಗೆಯ್ದು ಉರದೆ ಎಯ್ದು ಸಂಜಯ ಶಿರ ಸ್ಕಂಧಂ ಅವಲಂಬಂ ಕುರು ಪ್ರಭು ಕಂಡು ಶರಜಾಲ ಜರ್ಜರಿತ ಅರಿ ಗಾತ್ರ ತ್ರಾಣನಂ ದ್ರೋಣನಂ
ಪದಗಳ ಅರ್ಥ : ಇಭ – ಆನೆ , ಶೈಲ – ಬೆಟ್ಟ  ರುಧಿರ – ರಕ್ತ ಸ್ರೋತ – ನದಿ , ಇಭದೋ- ಸೊಂಡಿಲು , ನೀಲಲತಾ- ಕಪ್ಪು ಬಳ್ಳಿಗಳು, ವ್ರಾತ – ಗುಂಪು, ಸಮೂಹ, ಪ್ರತಾನ– ಗುಂಪು, ಸಮೂಹ, ಭರಂಗೆಯ್ದು – ವೇಗವಾಗಿ, ಆತುರಾತುರನಾಗಿ,, ಉಱದೆ- ಲೆಕ್ಕಿಸದೆ, ಗಾತ್ರತ್ರಾಣ – ದೇಹರಕ್ಷಿಸುವ ಕವಚ , ಗಾತ್ರ –ದೇಹ
ಆನೆಗಳ ಬೆಟ್ಟದಂತಿರುವ ಹೆಣಗಳ ಮೇಲೆ ಹತ್ತಿ , ರಕ್ತದ ನದಿಗಳನ್ನು ದಾಟಿ,
ಆನೆಯ ಸೊಂಡಿಲುಗಳೆಂಬ ಕರಿಬಳ್ಳಿಗಳ ಕಾಡಿನಲ್ಲಿ ಸಿಲುಕಿ ಸಂಜಯನ ಹೆಗಲನ್ನು ಆಧರಿಸಿ ಕೊಂಡು ವೇಗವಾಗಿ, ಆತುರಾತುರನಾಗಿ ಧಾವಿಸಿ ಬಂದ ದುರ್ಯೋಧನನು ಬಾಣಗಳ ಸಮೂಹದಿಂದ ನಜ್ಜುಗುಜ್ಜಾದ ದ್ರೋಣಾಚಾರ್ಯರದೇಹವನ್ನು(ಅವರ ಕವಚವನ್ನೂ)  ಕಂಡನು  .
ಅಂತು ನಿಸರ್ಗದುಷ್ಟ ದೃಷ್ಟದ್ಯುಮ್ನ ಕಚ ನಿಗ್ರಹಕರ ವಿಲುಳಿತ ಮೌಳಿಯಾಗಿ ಇರ್ದ ಭಾರಧ್ವಾಜನ ಇರವಂ ರಾಜ ರಾಜಂ ನೋಡಿ
ಪದಗಳ ಅರ್ಥ : ಕಚ- ತಲೆಗೂದಲು, ನಿಗ್ರಹಕರ- ದಂಡನೆ,  ವಿಲುಳಿತ- ತಿರುಚಲ್ಪಟ್ಟ, ಮೌಳಿ- ತಲೆ ಭಾರಧ್ವಾಜ – ಭಾರಧ್ವಾಜ ಮುನಿಯ ಮಗನಾದ ದ್ರೋಣ.
ಹಾಗೆಯೇ ಸ್ವಭಾವತಃ ದುಷ್ಟನೆನಿಸಿದ್ದ ದೃಷ್ಟದ್ಯುಮ್ನನು ದ್ರೋಣರ ಜುಟ್ಟನ್ನು ಹಿಡಿದು ಎಳೆದುದರಿಂದ ಅವರ ತಲೆಯು ಅಸ್ತವ್ಯಸ್ತವಾಗಿದೆ ಹೀಗೆ ಬಿದ್ದಿರುವ ದ್ರೋಣಾಚಾರ್ಯರ ದೇಹನ್ನು ರಾಜರ ರಾಜನಾದ ಚಕ್ರವರ್ತಿಯಾದ ದುರ್ಯೋಧನನು ನೋಡಿ
ಅರಿಯೆಮೆ ಬಿಲ್ಲ ಬಿನ್ನಣಕೆ ಗಾಂಡೀವಿಯು ಅಲ್ತು ಪಿನಾಕಪಾಣಿಯುಂ ನೆರೆಯನ್ ಇದಿರ್ಚಿ ನಿಮ್ಮೊಡನೆ ಕಾದಿ ಗೆಲಲ್ಕೆ ಅದು ನಿಮ್ಮ ಉಪೇಕ್ಷೆಯೆಂದು ಅರಿಯೆನ್ ಇದು ಎನ್ನ ಕರ್ಮ ವಶಮ್ ಎಂದೆ ಅರಿಯೆಂ ನಿಮಗಿಂತು ಸಾವುಂ ಈ ತೆರದಿಂ ಅಕಾರಣಂ ನೆರೆಯೆ ಸಂಭವಿಸಿರ್ದುದು ಓ ಕುಂಭಸಂಭವಾ
ಪದಗಳ ಅರ್ಥ : ಪಿನಾಕ ಪಾಣಿ – ಶಿವ , ಗಾಂಡೀವಿ –ಅರ್ಜುನ , ಬಿನ್ನಣ – ಕೌಶಲ್ಯ , ಕುಂಭಸಂಭವ- ದ್ರೋಣಾಚಾರ್ಯ
ನಿಮ್ಮ ಧನುರ್ವಿದ್ಯಾ ಕೌಶಲ್ಯವನ್ನು ನಾವು ಅರಿಯೆವೇ.ದ್ರೋಣಾಚಾರ್ಯರೇ ನಿಮ್ಮೆದುರು ಅರ್ಜುನನು ಒತ್ತಟ್ಟಿಗಿರಲಿ, ಸ್ವತಃ ಪಿನಾಕಪಾಣಿ/ ಪಿನಾಕವೆಂಬ ಧನುಸ್ಸನ್ನು ಹಿಡಿದ ಶಿವನೇ ಯುದ್ಧಮಾಡಿ ಗೆಲ್ಲಲಾರ. ನಿಮ್ಮ ಉದಾಸೀನತೆಯೋ, ನನ್ನ ಕರ್ಮಫಲವೋ, ಅದೇಕೆ ನಿಷ್ಕಾರಣವಾಗಿ ನಿಮಗೆ ಇಂತಹ ಸಾವು ಬಂದು ಒದಗಿತೋ ನಾನರಿಯೆ.
ಎಂದು ದುಃಖಂಗೆಯ್ದು ಕುಂಭಸಂಭವನಂ ತ್ರಿಃ ಪ್ರದಕ್ಷಿಣಂ ಗೆಯ್ದು ಬರುತ್ತಂ ಆ ದಿಶಾಭಾಗದೊಳ್
ಎಂದು ದುಃಖದಿಂದ ಗುರು ದ್ರೋಣಾಚಾರ್ಯರನ್ನು ಮೂರು ಪ್ರದಕ್ಷಿಣೆಮಾಡಿ ಬರುತ್ತಿರಲು ಆ ದಿಕ್ಕಿನ ಭಾಗದಲ್ಲಿ
ಅರೆಮುಗಿದು ಇರ್ದ ಕಣ್ಮಲರ ಅಲರ್ದ ಮೊಗಂ ಕಡಿವೋದ ಕಯ್ಯುಂ ಅ ಸುರತರಮ್ ಆಗೆ ಕರ್ಚಿದವುಡಂ ಬೆರಸನ್ ಅನ್ಯ ಶರಪ್ರಹಾರ ಜರ್ಜರಿತ ಶರೀರನಾಗಿ ನವ ಲೋಹಿತವಾರ್ಧಿಯೊಳರ್ ಅಳ್ದು ಬಿಳ್ದನಂ ಕುರುಪತಿ ನೋಡಿ ಕಂಡನ್ ಅಭಿಮನ್ಯು ಕುಮಾರನ ಆಜಿ ವೀರನಂ
ಪದಗಳ ಅರ್ಥ : ಕಣ್ಮಲರ್ – ಕಣ್ಣೆಂಬ ಹೂವು , ಅಲರ್ದ- ಅರಳಿದ,  ಅಸುರತರ- ಭೀಕರ,ಅತಿಭಯಂಕರ, ಲೋಹಿತವಾರ್ಧಿ – ರಕ್ತದ ಕಡಲು ಅಳ್ದು – ಮುಳುಗಿ , ಆಜಿ-ಯುದ್ಧ
ಅರ್ಧ ಮುಚ್ಚಿದ್ದ ಕಣ್ಣು, ಉತ್ಸಾಹದಿಂದ ಅರಳಿದ ಮುಖ, ಕತ್ತರಿಸಿ ಹೋದ ಕೈಗಳು, ಅತ್ಯಂತ ಭೀಕರವಾಗಿ ಅವುಡು ಕಚ್ಚಿ ಶತ್ರು ಬಾಣಪ್ರಹಾರದಿಂದ ಮೈಯೆಲ್ಲಾ ಜರ್ಜರಿತವಾಗಿ ಬಿಸಿರಕ್ತದ ಕಡಲಿನಲ್ಲಿ ಮುಳುಗಿ ಬಿದ್ದಿದ್ದ ರಣವೀರ ಅಭಿಮನ್ಯುಕುಮಾರನನ್ನು ಕೌರವರಾಜನು ಕಂಡನು.
ಅಂತು ಆತನ ಅಹಿಕೇತನಂ ನೋಡಿ
ಹಾಗೆ ಅಭಿಮನ್ಯುವನ್ನು ನೋಡಿದ ಉರಗಪತಾಕ/ ಸರ್ಪಧ್ವಜನಾದ ದುರ್ಯೋಧನನು ನೋಡಿ
ಪದಗಳ ಅರ್ಥ : ಅಹಿಕೇತನಂ : ದುರ್ಯೋಧನ,  ಅಹಿ – ಸರ್ಪ,  ಕೇತನ- ಧ್ವಜ, ಪತಾಕೆ, ಝಂಡಾ, ಬಾವುಟ
ಗುರು ಪಣ್ಣಿದ ಚಕ್ರವ್ಯೂಹರಚನೆ ಪೆರರ್ಗೆ ಇದು ಪುಗಲದಂ ಪೊಕ್ಕು ರಣಾಜಿರದೊಳ್ ಅರಿ ನೃಪರ ಇಕ್ಕಿದ ನರಸುತ ನಿನ್ನೊರೆಗೆ ದೊರೆಗೆ ಗಂಡರುಂ ಒಳರೆ
ಪದಗಳ ಅರ್ಥ : ಪಣ್ಣು – ರಚಿಸಿದ , ಪುಗಲ್ – ಹೋಗಲು, ಪ್ರವೇಶಿಸಲು , ನರ- ಅರ್ಜುನ  ಒರೆದೊರೆ-ಸರಿಸಮ
ಗುರು ದ್ರೋಣರು ರಚಿಸಿದ್ದ ಚಕ್ರವ್ಯೂಹವನ್ನು ಭೇದಿಸುವುದು ಬೇರೆಯಾರಿಗೂ ಸಾಧ್ಯವಿರಲಿಲ್ಲ. ಅದನ್ನು ಭೇದಿಸಿ ಹೊಕ್ಕು ರಣರಂಗದಲ್ಲಿ ಶತ್ರುರಾಜರನ್ನು ಹೊಡೆದು ಕೊಂದ ಅರ್ಜುನ ಪುತ್ರನೇ ನಿನಗೆ ಸರಿಸಮನಾದ ವೀರರು ಯಾರಿರುವರು.
ಅಸಮಬಲ ಭವತ್ ವಿಕ್ರಮಂ ಅಸಂಭವಂ ಪೆರರ್ಗೆ ನಿನ್ನನಾನ್ ಇನಿತಂ ಪ್ರಾರ್ಥಿಸುವೆನ್ ಅಭಿಮನ್ಯು ನಿಜ ಸಾಹಸ ಏಕದೇಶಾಂ ಅನುಮರಣಂ ಎಮಗೆ ಅಕ್ಕೆ ಗಡಾ
ಪದಗಳ ಅರ್ಥ : ಭವತ್ ವಿಕ್ರಮಂ- ನಿನ್ನ ಶೌರ್ಯ, ನಿಜಸಾಹಸ – ಪರಾಕ್ರಮ , ಏಕದೇಶ- ಒಂದಂಶ  ಅನುಮರಣ- ಅನುಗುಣವಾದ ಮರಣ
ಅದ್ವಿತೀಯ ಬಲಶಾಲಿಯಾದ ಅಭಿಮನ್ಯುಕುಮಾರನೇ ನಿನ್ನ ಪರಾಕ್ರಮ ಇತರರಿಗೆ ಅಸಾಧ್ಯ. ನಾನು ನಿನ್ನಲ್ಲಿ ಇಷ್ಟನೇ ಬೇಡಿಕೊಳ್ಳುತ್ತೇನೆ. ನಿನ್ನ ಸಹವಾಸದಲ್ಲಿ ಒಂದಂಶವಾದರೂ ನಮ್ಮಲ್ಲಿದ್ದರೆ ಅದಕ್ಕೆ ಅನುಗುಣವಾದ ವೀರಮರಣ ನಮಗೆ ಒದಗಿ ಬರಲಿ.
ಎಂದು ಆತ್ಮಗತದೊಳೆ ಬಗೆದು ಅಂತು ಅಭಿಮನ್ಯುಗೆ ಕಯ್ಗಳಂ ಮುಗಿದು  ಬರುತ್ತುಂ ತನ್ನ ಮಗನಪ್ಪ ಲಕ್ಷಣಕುಮಾರನಂ ನೆನೆದು ಮನ್ಯೂದ್ಗತಕಂಠನಾಗಿ ,ತತ್ ಆಸನ್ನ ಪ್ರದೇಶದೊಳ್ ತನ್ನ ಕುಮಾರನ ಕಂಡು ಪುತ್ರ ಸ್ನೇಹ ಕಾತರ ಹೃದಯನಾಗಿ ಗಾಂಧಾರಿ ನಂದನಂ ಭಾನುಮತಿ ನಂದನನ ವದನ ಅರವಿಂದಂ ನೋಡಿ
ಪದಗಳ ಅರ್ಥ : ಮನ್ಯೂದ್ಗತಕಂಠನಾಗಿ- ಶೋಕಭರಿತವಾದ ಧ್ವನಿ ಉಳ್ಳವನಾಗಿ, ಗಾಂಧಾರಿ ನಂದನ – ದುರ್ಯೋಧನ , ಭಾನುಮತಿನಂದನ-ಲಕ್ಷಣಕುಮಾರ
ಎಂದು ಮನದಲ್ಲಿ ಚಿಂತಿಸಿ. ಅಭಿಮನ್ಯುವಿಗೆ ಕೈಮುಗಿದು, ಬರುತ್ತ ತನ್ನ ಮಗನಾದ ಲಕ್ಷಣಕುಮಾರನನ್ನು ನೆನೆದು ದುಃಖದಿಂದ ಕೊರಳು ಬಿಗಿದುಬಂದು, ಆ ಪ್ರದೇಶದ ಸಮೀಪವೇ ಮಗನ ಕಂಡು ಪುತ್ರಪ್ರೇಮದಿಂದ ಉದ್ವಿಗ್ನನಾಗಿ ದುರ್ಯೋಧನನು ಭಾನುಮತಿಯ ಮಗನಾದ ಲಕ್ಷಣಕುಮಾರನ ಮುಖವನ್ನು ನೋಡಿ
ಜನಕಂಗೆ ಜಲ ಅಂಜಲಿಯಂ ತನೂಭವಂ ಕುಡುವುದು ಉಚಿತಂ ಅದು ಕೆಟ್ಟು ಈಗಳ್ ನಿನಗೆ ನಾಂ ಕುಡುವಂತೆ ಆದೆ. ತನುಜಾ ನೀಂ ಕ್ರಮ ವಿಪರ್ಯಯಂ ಮಾಡುವುದೇ
ಪದಗಳ ಅರ್ಥ :   ಜಲಾಂಜಲಿ – ತರ್ಪಣ, ತನೂಭವ – ಮಗ ,
ಮಗನು ತಂದೆಗೆ ಎಳ್ಳು ನೀರಿನ ತರ್ಪಣ ಬಿಡುವುದು ಲೋಕರೂಢಿ. ಅದಕ್ಕೆ ವ್ಯತಿರಿಕ್ತವಾಗಿ ಈಗ ನಿನಗೆ ನಾನು ತರ್ಪಣ ಬಿಡುವಂತಾಯ್ತೇ ಮಗನೇ ನೀನು  ಹೀಗೆ ಕ್ರಮವನ್ನು ಬದಲಿಸಬಹುದೇ?
ಎಂದು ಪಶ್ಚಾತಾಪಂ ಗೆಯ್ಯೆ ಸಂಜಯಂ ಸಂತೈಸಿ ಮುಂದೊಯ್ಯೆ ಭೀಮಸೇನ ಗದಾ ಪರಿಘ ಪ್ರಹರಣದಿಂದ ರುಧಿರ ಪ್ರವಾಹ ವಶಗತನಾಗಿ ಇರ್ದ ಯುವರಾಜನ್ ಇರ್ದ ಎಡೆಯಂ ಕುರುರಾಜನ್ ಎಯ್ದಿ ವಂದಾಗಳ್
 ಎಂದು ಪಶ್ಚಾತಾಪದಿಂದ ನುಡಿಯಲು ಸಂಜಯನು ದುರ್ಯೋಧನನನ್ನು ಸಂತಯಿಸಿ. ಮುಂದೆ ಕರೆದೊಯ್ಯಲು ಭೀಮಸೇನನ ಗಧೆ, ಪರಿಘ,ಮೊದಲಾದ ಆಯುಧಗಳ ಹೊಡೆತದಿಂದ ರಕ್ತದ ನದಿಯಲ್ಲಿ ಬಿದ್ದಿದ್ದ ದುಶ್ಯಾಸನನ ಬಳಿಗೆ ಬಂದನು.
ನಿನ್ನಂ ಕೊಂದಂ ಗಡಮೊಳನಿನ್ನುಂ ಕೊಂದವನನ್ ಇಕ್ಕಿ ಕೊಲ್ಲದೆ ಮಾಣ್ದಾ ನಿನ್ನುಂ ಮೊಳೆಂ ಗಡ ಸಾಲದೆ ನಿನ್ನಯ ಕೂರ್ಮೆಗಮ್ ಅದೆನ್ನ ಸೌಧಮಿರ್ಕೆಗಂ
ನಿನ್ನ ಕೊಂದವನು ಇನ್ನೂ ಬದುಕಿದ್ದಾನೆ. ಕೊಂದವನನ್ನು ಕೊಲ್ಲದೆ ಬಿಟ್ಟ ನಾನೂ ಕೂಡ ಇನ್ನೂ ಜೀವಂತವಾಗಿಯೇ ಇದ್ದೇನೆ. ನಿನ್ನ ಪ್ರೀತಿಗೂ ನನ್ನ ಕುಟುಂಬ ವಾತ್ಸಲ್ಯಕ್ಕೂ (ಸಜ್ಜನಿಕೆಗೆ) ಇದು ಯೋಗ್ಯವೇ.
ಜನನೀ ಸ್ತನ್ಯಮನ್ ಉಂಡೆನಾಂ ಬಳಿಕ್ಕೆ ನೀಂ ಸೋಮಾಮೃತಂ ದಿವ್ಯ ಭೋಜನಮಂ ಎಂಬಿಂತಿವನ್ ಉಂಡೆ ನಾಂ ಬಳಿಕ್ಕೆ ನೀ ಬಾಲತ್ವದಿಂದ ಎಲ್ಲಿಯುಂ ವಿನಯ ಉಲ್ಲಂಘನಮ್ ಆದುದಿಲ್ಲ ಮರಣಕ್ಕೆ ನಿಂದೆ ನೀ ಮುಂಚಿದಯ್ ಮೊನೆಯೊಳ್ ಸೂಳ್ ತಡಮಾಯ್ತು ಇದೊಂದೆಡೆಯೊಳಂ ಹಾ ವತ್ಸ ದುಶ್ಯಾಸನಾ
ತಾಯ ಎದೆಹಾಲನ್ನು ನಾನು ಮೊದಲು ಉಂಡಬಳಿಕ್ಕ ನೀನು ಉಂಡೆ. ಸೋಮರಸವನ್ನು ಉತ್ತಮವಾದ ಭೋಜನವನ್ನು ನಾನು ಸೇವಿಸಿದ ಬಳಿಕವೇ ನೀನು ಸೇವಿಸಿದೆ. ಚಿಕ್ಕಂದಿನಿಂದ ಇಲ್ಲಿಯವರೆಗೆ ಎಲ್ಲೆಲ್ಲಿಯೂ ನೀನು ವಿನಯವನ್ನು ಮೀರಿ ನಡೆದವನಲ್ಲ. ಮರಣದ ವಿಷಯದಲ್ಲಿ ಮಾತ್ರ ನೀನು ನನಗಿಂತ ಮುಮ್ದೆ ಹೋದೆಯಲ್ಲಾ ಇದೊಂದರಲ್ಲಿ ಕ್ರಮ ತಪ್ಪಿತಲ್ಲ ದುಶ್ಯಾಸನ ಎಂದು ದುಃಖಿಸಿದನು.
ಎಂದು ವಿಪ್ರಳಾಪಂಗೆಯ್ದು ತನ್ನ ತಮ್ಮನ ಕಳೆಬರಮಂ ನೋಡಲಾರದೆ ಅಲ್ಲಿಂ ತಳರ್ದು  ದಿನಕರ ತನೂಜನಂ  ರಾಜ ರಾಜಂ ನೋಡಿ ಬಾಷ್ಪವಾರಿ ಧಾರಾಪೂರಿತಲೋಚನನುಂ ಆಗಿ
ಎಂದು ಬಹಳವಾಗಿ ದುಃಖಿಸಿ ತನ್ನ ತಮ್ಮನ ಶವವನ್ನು ನೋಡಲಾರದೆ ಅಲ್ಲಿಂದ ಹೊರಟು ಕರ್ಣನನ್ನು ನೋಡಿ ಕಣ್ಣೀರ ಕೋಡಿ ಹರಿಸುತ್ತಾ(ಕಣ್ಣೀರು ತುಂಬಿಕೊಂಡ ಕಣ್ಣಿನಿಂದ)
ಆನುಂ ದುಶ್ಯಾಸನನುಮ್  ನೀನುಂ ಮೂವರೆ ದಲ್ ಆತನುಮ್ ಕಳಿದ ಬಳಿಕ್ಕ ಆನುಂ ನೀನೆ ದಲ್ ಈಗಳ್ ನೀನುಂ ಅಗಲ್ದು ಎತ್ತ ಹೋದೆ ಅಂಗಾಧಿಪತಿ.
ನಾನು, ದುಶ್ಯಾಸನನು , ನೀನು ಮೂವರು ಒಂದು ಜೀವವಾಗಿ ಇದ್ದವರು. ಆತನು ಹೋದಬಳಿಕ ನಾನು ನೀನು ಇಬ್ಬರೇ ಆಗಿದ್ದೆವು. ಅಂಗರಾಜ ಕರ್ಣಾ ಈಗ ನೀನೂ ಕೂಡ ನನ್ನನ್ನು ಬಿಟ್ಟು ಎಲ್ಲಿಗೆ ಹೋದೆ?
ನಿನ್ನ ಕೆಳೆಯಂ ಸುಯೋಧನನಂ ನೋಡದೆ ನುಡಿಯದೆ ಅಪ್ಪಿಕೊಳದೆ ಬೆಸನೇನು ಎನ್ನದೆ ಜೀಯಾ ಎನ್ನದೆ ದೇವಾ ಎನ್ನದೆ ಏಕೆ ಉಸಿರದಿರ್ಪೆ ಅಂಗಾಧಿಪತಿ
ನಿನ್ನ ಗೆಳೆಯ ಸುಯೋಧನನನ್ನು ನೋಡದೆ, ಮಾತನಾಡಿಸದೆ, ಅಪ್ಪಿಕೊಳ್ಳದೆ, ಅಪ್ಪಣೆ ಏನು ಎಂದು ಕೇಳದೆ ಜೀಯಾ(ಒಡೆಯಾ)ಎನ್ನದೆ, ದೇವಾ ಎನ್ನದೆ ಏಕೆ ಮಾತನಾಡದೆ ಇರುವೆ ಕರ್ಣಾ
ಅನೃತಂ  ಲೋಭಂ ಭಯಂ ಎಂಬಿನಿತುಂ ನೀನಿರ್ದ ನಾಡೊಳ್ ಇರ್ಕುಮೆ. ರವಿನಂದನ ನನ್ನಿ, ತ್ಯಾಗಮಂ ,ಅಣ್ಮುಂ  ಎಂಬಿನಿತರ್ಕಂ ನೀನೆ ಮೊತ್ತ ಮೊದಲಿಗನಾದೆಯ್
ಕರ್ಣಾ ನೀನಿರುವ ದೇಶದಲ್ಲಿ ಸುಳ್ಳು , ಲೋಭ , ಭಯ , ಎಂಬಿವು ಲವಲೇಶವಾದರೂ ಇರುವುದುಂಟೇ, ಸತ್ಯ ತ್ಯಾಗ , ಪರಾಕ್ರಮ ಎಂಬಿವಕ್ಕೆಲ್ಲಾ ನೀನೇ ಮೊದಲಿಗನು. (ಅಗ್ರೇಸರ)
ಆನ್ ಅರಿವೆಂ , ಪೃಥೆಯು ಅರಿವಳ್ , ದಾನವರಿಪು ಅರಿವನ್ , ಅರ್ಕನ್ ಅರಿವನ್,ದಿವ್ಯಜ್ಞಾನಿ ಸಹದೇವನ್ ಅರಿವಂ ನೀ ಆರ್ಗೆ ಎಂದು ಆರುಂ ಅರಿಯರ್ ಅಂಗಾಧಿಪತಿ
ಕರ್ಣಾ ನೀನಾರೆಂದು ನನಗೆ ಗೊತ್ತು , ಕುಂತಿಗೂ ಗೊತ್ತು, ಕೃಷ್ಣನೂ ತಿಳಿದಿದ್ದಾನೆ, ಸೂರ್ಯನೂ ತಿಳಿದಿದ್ದಾನೆ, ದಿವ್ಯಜ್ಞಾನಿಯಾದ ಸಹದೇವನೂ ತಿಳಿದಿದ್ದಾನೆ. ಇನ್ನಾರು ನೀನಾರು ಎಂದು ಅರಿಯರ್.
ನೀ ನುಳ್ಳೊಡೆ ಉಂಟು ರಾಜ್ಯಂ ನೀನು ಉಳ್ಳೊಡೆ ಪಟ್ಟಂ ಉಂಟು, ಬೆಳ್ಗೊಡೆಯು ಉಂಟು ನೀನುಳ್ಳೊಡೆ ಉಂಟು ಪೀಳಿಗೆ, ನೀನಿಲ್ಲದೆ ಇವೆಲ್ಲಂ ಒಳವೆ ಅಂಗಾಧಿಪತಿ
ಕರ್ಣಾ ನೀನಿದ್ದರೆ ರಾಜ್ಯ, ನೀನಿದ್ದರೆ ರಾಜ್ಯಪಟ್ಟ, ಶ್ವೇತಚ್ಛತ್ರ, ನೀನಿದ್ದರೆ ಸಿಂಹಾಸನ , ಸಂತತಿಎಲ್ಲವೂ  ಉಂಟು ಇಲ್ಲವಾದರೆ ಇವೆಲ್ಲ ಇರುತ್ತವೆಯೇ?
ಹರಿ ಬೇಡೆ ಕವಚಮಂ ನೀನ್ ಅರಿದಿತ್ತೆಯ್ ಕುಂತಿ ಬೇಡೆ ಬೆಗಡದೆ ಕೊಟ್ಟಯ್ ಪುರಿಗಣೆಯಂ ನಿನಗೆಣೆ ಕಸವರಗಲಿ, ಮೆಯ್ಗಲಿಯುಂ ಆವನ್ ಅಂಗಾಧಿಪತಿ
ಕರ್ಣನೇ ನೀನು ಇಂದ್ರಬೇಡಿದಾಗ ಕವಚವನ್ನು ಕಿತ್ತುಕೊಟ್ಟೆ, ಕುಂತಿ ಬಂದು ಬೇಡಿದಾಗ ಅನುಮಾನಿಸದೆ ಮಂತ್ರಾಸ್ತ್ರಗಳನ್ನೇ ನೀಡಿಬಿಟ್ಟೆ, ನಿನಗೆ ಸರಿದೊರೆಯಾದ ಸಾಹಸ ಶೂರನೂ ದಾನಶೂರನೂ ಇನ್ನಾವನು ಇರುವನು.
ಎಂದು ಶೋಕಾಂಧಂ ಕರ್ಣ ವಿರಹಿತನಪ್ಪುದರಿಂ ಸಂಕ್ರಂದನ ನಂದನಂಗೆ ಮುಳಿದು ಶರಶಯನಗತನಾಗಿರ್ಪ ನದೀನಂದನನ ಚರಣಾರವಿಂದ ವಂದನಂ ಗೆಯ್ಯಲೆಂದು ಗಾಂಧಾರೀ ನಂದನನ್ ಎಯ್ದೆ ವಂದಂ
ಪದಗಳ ಅರ್ಥ :  ಸಂಕ್ರಂದನ – ಇಂದ್ರ, ನದೀನಂದನ – ಭೀಷ್ಮ , ನಂದನ - ಮಗ
ಎಂದು ಶೋಕದಿಂದ ಅಂಧನಾಗಿ ಕರ್ಣವಿಯೋಗದಿಂದಾಗಿ ಅರ್ಜುನನ ಮೇಲೆ ಕೋಪಗೊಂಡು ಶರಶಯ್ಯೆಯಲ್ಲಿ ವಿರಮಿಸಿದ್ದ ಭೀಷ್ಮರ ಚರಣಾರವಿಂದಗಳಿಗೆ ವಂದಿಸಲೆಂದು ಗಾಂಧಾರಿ ಪುತ್ರನು ಬಂದನು.
ಸಂದರ್ಭ ಸೂಚಿಸಿ  ವಿವರಿಸಿ.
೧. ಗಾಂಡೀವಿಯಲ್ತು ಪಿನಾಕ ಪಾಣಿಯುಂ ನೆಱೆಯನ್
ರನ್ನಕವಿಯ ಸಾಹಸ ಭೀಮ ವಿಜಯಂ (ಗದಾಯುದ್ಧಂ) ಎಂಬ ಚಂಪೂಕಾವ್ಯದಿಂದ ಸಂಗ್ರಹಿಸಲಾಗಿರುವ ದುರ್ಯೋಧನ ವಿಲಾಪ ಎಂಬ ಕಾವ್ಯ ಭಾಗದಿಂದ ಈ ಮಾತನ್ನು ಆರಿಸಲಾಗಿದೆ.
ದ್ರೋಣಾಚಾರ್ಯರ ಕ್ಷಾತ್ರಬಲವನ್ನು ಪ್ರಶಂಸಿಸುವಾಗ ದುರ್ಯೋಧನ ಈ ಮೇಲಿನ ಮಾತನ್ನು ಹೇಳುತ್ತಾನೆ.  ದ್ರೋಣಾಚಾರ್ಯರನ್ನು ಎದುರಿಸಲು ಗಾಂಡೀವ ಧಾರಿಯಾದ ಅರ್ಜುನ ಮಾತ್ರವಲ್ಲ, ಪಿನಾಕ ಪಾಣಿಯಾದ ಶಿವ ಧನಸ್ಸನ್ನು ಹಿಡಿದು ಬಂದರೂ ಸಾಧ್ಯವಿಲ್ಲ. ಆದರೆ ದ್ರೋಣರ ಉಪೇಕ್ಷೆಯ ಫಲವೋ, ಅಥವಾ ನನ್ನ ಕರ್ಮಫಲವೋ ನಾನರಿಯೆ ನಿಮಗೆ ಇಂಥ ಸಾವು ಸಂಭವಿಸಿದೆ. ಎಂದು ದುರ್ಯೋಧನನು ದುಃಖಿಸಿದನು

೨. ನಿನ್ನೊರೆಗೆ ದೊರೆಗೆ ಗಂಡರುಮೊಳರೇ
ರನ್ನಕವಿಯ ಸಾಹಸ ಭೀಮ ವಿಜಯಂ (ಗದಾಯುದ್ಧಂ) ಎಂಬ ಚಂಪೂಕಾವ್ಯದಿಂದ ಸಂಗ್ರಹಿಸಲಾಗಿರುವ ದುರ್ಯೋಧನ ವಿಲಾಪ ಎಂಬ ಕಾವ್ಯ ಭಾಗದಿಂದ ಈ ಮಾತನ್ನು ಆರಿಸಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಭಿಮನ್ಯುವಿನ ದೇಹವನ್ನು ದುರ್ಯೋಧನನು ಕಂಡು, ಶತ್ರುವಿನ ಮಗನೆಂಬುದನ್ನು ಮರೆತು ಶತ್ರುವಿನ ಮೇಲೆ ಹಗೆತನವಿದ್ದರೇನು ಆತನ ಮಗನ ಶೌರ್ಯಕ್ಕೆ ಮತ್ಸರವೆಲ್ಲಿ ಎಂದುಹೇಳುತ್ತಾ , ಗುರು ದ್ರೋಣರು ರಚಿಸಿದ ಚಕ್ರವ್ಯೂಹವನ್ನು ಭೇದಿಸಿ ಅನೇಕ ಶತ್ರುರಾಜರನ್ನು ಸಂಹರಿಸಿದ ನಿನಗೆ ಸರಿ ಸಮನಾರು ಇದ್ದಾರೆ ಎಂದು ಯುದ್ಧವೀರನಾದ ಅಭಿಮನ್ಯುವನ್ನು ಹೊಗಳಿದ್ದಾನೆ.

೩. ನೀಂ ಕ್ರಮವಿಪರ್ಯಯಂ ಮಾಡುವುದೇ
ರನ್ನಕವಿಯ ಸಾಹಸ ಭೀಮ ವಿಜಯಂ (ಗದಾಯುದ್ಧಂ) ಎಂಬ ಚಂಪೂಕಾವ್ಯದಿಂದ ಸಂಗ್ರಹಿಸಲಾಗಿರುವ ದುರ್ಯೋಧನ ವಿಲಾಪ ಎಂಬ ಕಾವ್ಯ ಭಾಗದಿಂದ ಈ ಮಾತನ್ನು ಆರಿಸಲಾಗಿದೆ.
ತನ್ನ ಮಗ ಲಕ್ಷಣಕುಮಾರನನ್ನು ಕುರಿತು ದುರ್ಯೋಧನ ಈ ಮೇಲಿನ ಮಾತನ್ನು ಹೇಳುತ್ತಾನೆ. ಮಗನು ತಂದೆಗೆ ತರ್ಪಣಾದಿ ಸಂಸ್ಕಾರ ವಿಧಿಗಳನ್ನು ಮಾಡಬೇಕು ಆದರೆ ತಂದೆಯು ಮಗನಿಗೆ ತರ್ಪಣ ಕೊಡುವಂತ ವಿಧಿ ನನ್ನದಾಗಿದೆ. ಎಂದು ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ಲಕ್ಷಣಕುಮಾರನ ಶವದ ಮುಂದೆ ನಿಂತು ಮಗನೇ ನೀನು ಹೀಗೆ ಕ್ರಮ ವ್ಯತ್ಯಾಸವನ್ನು ಮಾಡುವುದು ಸರಿಯೇ ಎಂದು ಹೇಳಿದನು.


೪. ಜನನೀಸ್ತನ್ಯಮನುಂಡೆನಾಂ ಬೞಿಕೆ ನೀಂ
ರನ್ನಕವಿಯ ಸಾಹಸ ಭೀಮ ವಿಜಯಂ (ಗದಾಯುದ್ಧಂ) ಎಂಬ ಚಂಪೂಕಾವ್ಯದಿಂದ ಸಂಗ್ರಹಿಸಲಾಗಿರುವ ದುರ್ಯೋಧನ ವಿಲಾಪ ಎಂಬ ಕಾವ್ಯ ಭಾಗದಿಂದ ಈ ಮಾತನ್ನು ಆರಿಸಲಾಗಿದೆ. ತನ್ನ ತಮ್ಮ ದುಶ್ಯಾಸನನನ್ನು ಕುರಿತು ದುರ್ಯೋಧನ ಈ ಮೇಲಿನ ಮಾತನ್ನು ಹೇಳುತ್ತಾನೆ. ಭೀಮನ ಗದಾಘಾತದಿಂದ ಛಿಧ್ರವಾಗಿ ಅಸ್ತವ್ಯಸ್ತವಾಗಿ ಬಿದ್ದಿದ್ದ ದುಶ್ಯಾಸನನನ್ನು ಕಂಡು ಅಯ್ಯ ಯುವರಾಜ! ನಿನಗಿಂತ ಮೊದಲು ತಾಯಿಹಾಲನ್ನು ನಾನು ಉಂಡೆನು, ಸೋಮರಸವಾಗಲಿ ರುಚಿಕರ ಭೋಜನವಾಗಲಿ ಮೊದಲು ನಾನು ಸ್ವೀಕರಿಸಿದ ಮೇಲೆ ನೀನು ಅವುಗಳನ್ನು ಸ್ವೀಕರಿಸಿದೆ.   ನೀನು ನನಗೆ ತೋರಿದ ವಿನಯಶೀಲತೆ ಶ್ರೇಷ್ಠವಾದುದು, ಎಲ್ಲಿಯೂ ಕ್ರಮ ಮೀರಿಲ್ಲ. ಆದರೆ ಈ ಯುದ್ಧಭೂಮಿಯಲ್ಲಿನನಗಿಂತ ಮೊದಲು ನೀನು ವೀರಮರಣವನ್ನು ಹೊಂದಿರುವೆ. ಈ ವಿಷಯದಲ್ಲಿ ವಿನಯ ಭಂಗಮಾಡಿದೆ. ಎಂದು ಹೇಳಿದನು.

೫. ಈಗಳ್ ನೀನುಮಗಲ್ದೆತ್ತವೋದೆಯಂಗಾಧಿಪತೀ
ರನ್ನಕವಿಯ ಸಾಹಸ ಭೀಮ ವಿಜಯಂ (ಗದಾಯುದ್ಧಂ) ಎಂಬ ಚಂಪೂಕಾವ್ಯದಿಂದ ಸಂಗ್ರಹಿಸಲಾಗಿರುವ ದುರ್ಯೋಧನ ವಿಲಾಪ ಎಂಬ ಕಾವ್ಯ ಭಾಗದಿಂದ ಈ ಮಾತನ್ನು ಆರಿಸಲಾಗಿದೆ. ಕರ್ಣನನ್ನು ಕುರಿತು ದುರ್ಯೋಧನ ಈ ಮೇಲಿನ ಮಾತನ್ನು ಹೇಳುತ್ತಾನೆ.  ಈ ಸಂದರ್ಭವು ಕರ್ಣ ಮತ್ತು ದುರ್ಯೋಧನರ ಸ್ನೇಹಕ್ಕೆ,ವಿಶ್ವಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ.   ಕರ್ಣನ ಶವವನ್ನು ಕಾಣುತ್ತಲೇ ಕಣ್ಣೀರು ತುಂಬಿಕೊಂಡು ನಾನು ನೀನು ದುಶ್ಯಾಸನ ಮೂವರು ಒಂದು ಜೀವ ಎಂಬಂತೆ ಇದ್ದೆವು. ದುಶ್ಯಾಸನನಂತು ನನ್ನನ್ನು ಅಗಲಿದ್ದಾನೆ.  ಈಗ ನೀನೂ ನನ್ನನ್ನು ಅಗಲಿ ಎಲ್ಲಿ ಹೋದೆ. ನಿನ್ನ ಗೆಳೆಯನನ್ನು ನೋಡದೆ, ಅಪ್ಪಿಕೊಳ್ಳದೆ, ಮಾತನಾಡಿಸದೆ ಒಡೆಯಾ , ಜೀಯಾ ಎನ್ನದೆ ಎಲ್ಲಿ ಹೋದೆ.ಎಂದು ಶೋಕಿಸಿದ್ದಾನೆ.

೬. ಆನಱಿವೆಂ ಪೃಥೆಯಱಿವಳ್ 
ರನ್ನಕವಿಯ ಸಾಹಸ ಭೀಮ ವಿಜಯಂ (ಗದಾಯುದ್ಧಂ) ಎಂಬ ಚಂಪೂಕಾವ್ಯದಿಂದ ಸಂಗ್ರಹಿಸಲಾಗಿರುವ ದುರ್ಯೋಧನ ವಿಲಾಪ ಎಂಬ ಕಾವ್ಯ ಭಾಗದಿಂದ ಈ ಮಾತನ್ನು ಆರಿಸಲಾಗಿದೆ.
ಕರ್ಣನನ್ನು ಕುರಿತು ದುರ್ಯೋಧನ ಈ ಮೇಲಿನ ಮಾತನ್ನು ಹೇಳುತ್ತಾನೆ. ಕರ್ಣನ ಜನ್ಮರಹಸ್ಯವನ್ನು ನಾನು ,ಸೂರ್ಯ,  ತಾಯಿ ಕುಂತಿ, ಸರ್ವಾಂತರ್ಯಾಮಿಯಾದ ಕೃಷ್ಣ, ಹಾಗೂ ಜ್ಞಾನಿಯಾದ ಸಹದೇವ ಮಾತ್ರವಲ್ಲದೆ ಇನ್ನಾರು ಅರಿಯರು. ಎಂದು ಹೇಳುತ್ತಾನೆ
ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಕುರುಪತಿ ರಣರಂಗದಲ್ಲಿ ಏನನ್ನು ಮೆಟ್ಟಿ ನಡೆದನು?
ಕುರುಪತಿಯು ರಣರಂಗದಲ್ಲಿ ರಕ್ತದ ನದಿಯಲ್ಲಿ ಬಿದ್ದಿದ್ದ ಭಾರಿಗಾತ್ರದ ಹೆಣಗಳನ್ನು ಮೆಟ್ಟಿ ನಡೆದನು

೨. ರಣರಂಗದಲ್ಲಿ ಸಾಗುವಾಗ ದುರ್ಯೋಧನ ಯಾರ ನೆರವನ್ನು ಅವಲಂಬಿಸಿದ್ದನು?
ರಣರಂಗದಲ್ಲಿ ಸಾಗುವಾಗ ದುರ್ಯೋಧನ ಸಂಜಯನ ನೆರವನ್ನು ಅವಲಂಬಿಸಿದ್ದನು.

೩. ಪಿನಾಕಪಾಣಿ ಎಂದರೆ ಯಾರು?
ಪಿನಾಕಪಾಣಿ ಎಂದರೆ ಶಿವ.

೪. ಚಕ್ರವ್ಯೂಹವನ್ನು ರಚಿಸಿದವನು ಯಾರು?
ದ್ರೋಣಾಚಾರ್ಯ ಚಕ್ರವ್ಯೂಹವನ್ನು ರಚಿಸಿದವನು

೫. ತಂದೆಗೆ ಜಲಾಂಜಲಿಯನ್ನು ಯಾರು ಕೊಡಬೇಕು?
ತಂದೆಗೆ ಜಲಾಂಜಲಿಯನ್ನು ಮಗ ಕೊಡಬೇಕು

೬. ದಿವ್ಯಜ್ಞಾನಿ ಎಂದು ಯಾರನ್ನು ಕರೆಯಲಾಗಿದೆ?
ಸಹದೇವನನ್ನು ದಿವ್ಯಜ್ಞಾನಿ ಎಂದು ಕರೆಯಲಾಗಿದೆ.

೭. ಅಂಗಾಧಿಪತಿ ಯಾರು?
ಅಂಗಾಧಿಪತಿ ಕರ್ಣ.

೮. ಹರಿಯು ಕರ್ಣನಿಂದ ಬೇಡಿದ್ದೇನು?
ಕರ್ಣನಿಗೆ ಹುಟ್ಟಿನಿಂದ ಅಂಟಿಕೊಂಡು ಬಂದಿದ್ದ ಕವಚವನ್ನು ಹರಿಯು ಬೇಡಿದನು.




ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ರಣರಂಗದಲ್ಲಿ ಬಿದ್ದಿದ್ದ ಅಭಿಮನ್ಯುವಿನ ಕಳೆಬರ ಯಾವ ರೀತಿ ಕಾಣುತ್ತಿತ್ತು?
ಅರ್ಧತೆರೆದ ಕಮಲದ ಹೂವಿನಂತೆ , ಯುದ್ಧೋತ್ಸಾಹದಿಂದ ಅರಳಿದಂತೆ,  ಅವುಡುಗಚ್ಚಿದ ಮುಖವು,ಬಾಣಗಳಿಂದ ಜರ್ಜರಿತವಾದ ಶರೀರ, ಕಡಿದು ಹೋದ ಕೈ, ಹೊಸ ರಕ್ತನದ ನದಿಯಲ್ಲಿಅದ್ದಿದ್ದಂತೆ ಬಿದ್ದಿದ್ದನು.

೨. ದುರ್ಯೋಧನ ತನ್ನ ಮಗನ ಶವವನ್ನು ಕಂಡು ಹೇಗೆ ವ್ಯಥೆಪಡುತ್ತಾನೆ?
ಭಾನುಮತಿ ಕುಮಾರನಾದ ಲಕ್ಷಣಕುಮಾರನ ದೇಹವನ್ನು ಕಂಡು ಮಗನೇ ತಂದೆಗೆ ಜಲಾಂಜಲಿಯನ್ನು ಕೊಡುವುದು ಮಗನ ಕರ್ತವ್ಯ ಆದರೆ ನಾನು ನಿನಗೆ ತರ್ಪಣಕೊಡುವಂತಾಗಿದೆ. ಈ ರೀತಿಯ ಕ್ರಮ ವ್ಯತ್ಯಾಸವನ್ನು ನೀನು ಮಾಡಬಹುದೇ ಎಂದು ಶೋಕಿಸಿದನು.

೩. ದುಶ್ಯಾಸನನು ಅಣ್ಣನಿಗೆ ತೋರಿದ್ದ ವಿನಯಶೀಲತೆ ಯಾವುದು?
ಭೀಮನ ಗದಾಘಾತದಿಂದ ಛಿಧ್ರವಾಗಿ ಅಸ್ತವ್ಯಸ್ತವಾಗಿ ಬಿದ್ದಿದ್ದ ದುಶ್ಯಾಸನನನ್ನು ಕಂಡು ಅಯ್ಯಾ ಯುವರಾಜ! ನಿನಗಿಂತ ಮೊದಲು ತಾಯಿಹಾಲನ್ನು ನಾನು ಉಂಡೆನು, ಸೋಮರಸವಾಗಲಿ ರುಚಿಕರ ಭೋಜನವಾಗಲಿ ಮೊದಲು ನಾನು ಸ್ವೀಕರಿಸಿದಮೇಲೆಯೇ ನೀನು ಸ್ವೀಕರಿಸಿದೆ. ಎಲ್ಲಿಯೂ ಕ್ರಮ ಮೀರಿಲ್ಲ.   ನೀನು ನನಗೆ ತೋರಿದ ವಿನಯಶೀಲತೆ ಶ್ರೇಷ್ಠವಾದುದು, ಆದರೆ ಈ ಯುದ್ಧ ಭೂಮಿಯಲ್ಲಿನನಗಿಂತ ಮೊದಲು ನೀನು ವೀರಮರಣವನ್ನು ಹೊಂದಿರುವೆ. ಈ ಒಂದು ವಿಷಯದಲ್ಲಿ ವಿನಯ ಭಂಗಮಾಡಿರುವೆ ಎಂದು ಹೇಳಿದನು.

೪. ಕರ್ಣನ ಜನ್ಮರಹಸ್ಯವನ್ನು ಯಾರು ಯಾರು ಅರಿತಿದ್ದರು?
ಕರ್ಣನ ಜನ್ಮರಹಸ್ಯವನ್ನು ದುರ್ಯೋಧನ ,ಸೂರ್ಯ,  ತಾಯಿ ಕುಂತಿ, ಸರ್ವಾಂತರ್ಯಾಮಿಯಾದ ಕೃಷ್ಣ, ಹಾಗೂ ದಿವ್ಯಜ್ಞಾನಿಯಾದ ಸಹದೇವ ಇವರು ಮಾತ್ರವಲ್ಲದೆ ಇನ್ನಾರು ಅರಿಯರು.

೫. ದುರ್ಯೋಧನನು ಕರ್ಣನ ದಾನಗುಣವನ್ನು ಹೇಗೆ ಪ್ರಶಂಸಿಸಿದ್ದಾನೆ?
ಅರ್ಜುನನನ್ನು ಗೆಲ್ಲಿಸಲೆಂದೇ ಇಂದ್ರನು ಬ್ರಾಹ್ಮಣವೇಷಧಾರಿಯಾಗಿ ಕವಚ ಬೇಡಲು ಸ್ವಲ್ಪವೂ ಹಿಂಜರಿಯದೆ ಕತ್ತರಿಸಿ ಕೊಟ್ಟೆ, ತಾಯಿ ಕುಂತಿಯು ಬೇಡಿದ ತಕ್ಷಣವೇ ಸ್ವಲ್ಪವೂ ಅಳುಕದೆ ದಿವ್ಯಾಸ್ತ್ರಗಳನ್ನು ಕೊಟ್ಟೆ.ನಿನಗೆ ಸರಿಸಮನಾದ ದಾನಶೂರನೂ ಪರಾಕ್ರಮಿಯೂ ಯಾರಿದ್ದಾರೆ. ಎಂದು ಪ್ರಶಂಸಿಸಿದ್ದಾನೆ.


*** ಓಂ ***