Sunday, April 17, 2011

ನನ್ನ ಹಳೆಯ ಕವನಗಳು ಇವು ಯುರೋಪ ಕವನಸಂಕಲನದಲ್ಲಿ ಪ್ರಕಟವಾಗಿವೆ.

ಬೇಂದ್ರೆ

ಬೆಂದರೆ ಬೇಂದ್ರೆಯಾದೇನು

ತನುವಿದೆ ಮನವಿದೆ

ಬೇಯಿಸುವವನಿಲ್ಲ!

***

ಕವನ

ಕವನ ಕವನ

ನೀನ್ಯಾರೆ ಕವನ

ಬಳಿ ಬಂದಂತೆ ತೋರುವೆ

ಮಿಂಚಿ ಮಾಯವಾಗುವೆ

ನಿನ್ನ ನೆಲೆ ಎಲ್ಲಿಯೇ

ಯಾರು ನಿನ್ನ ತಂದೆಯೆ

ಅವರ ಇವರ ತಲೆಯ ಕೆಡಿಸಿ

ಮತ್ತೆ ಎಲ್ಲಿ ಓಡುವೆ

ಬಳಿಬಾರೆ ಮೊಗತೋರೆ

ಕವನ ಕವನ

ನೀನ್ಯಾರೆ ಕವನ

***

ಆಸೆ

ಹಳೆಯ ರಾಡಿ ಬಿಡದೆ ನನ್ನ

ಸುಳಿಯ ಸೆಳವಿಗೆ ಎಳೆದಿದೆ

ಪಾರು ಆಗಲುಂಟು ಆಸೆ

ದಾರಿ ಕಾಣದಾಗ ನಿಂದು

ಗುರಿಯ ತೋರಿ ಪಾರುಮಾಡು

ನನ್ನ ಒಲಿದ ದೈವ ನೀನು

***

ಚಂದ್ರನ ಮೇಲೆ

ಇಟ್ಟನಂದು ಮೊದಲ ಹೆಜ್ಜೆ

ಕಂಡನಿಂದು ನೀರ ಗೆಜ್ಜೆ

ನಾಳೆ ಕಟ್ಟುವ ಮುತ್ತಿನ ಸಜ್ಜೆ

ನಾಡಿದ್ದು ಆಲಿಸುವ ಮಕ್ಕಳ ಕಾಲ್ಗೆಜ್ಜೆ

***

ಚಂದ್ರನಿಗೆ

ತಪ್ಪಿಸಿಕೋ ಚಂದಿರನೇ

ಹಾಳುಮಾಡುವರಿಂದು

ಕೈಗೆ ಸಿಕ್ಕರೆ ನೀನು

ಬೆಳದಿಂಗಳ ನೀಡದಂತೆ

ಮಂಗಳ ಗುರುಗಳನ್ನೇ

ಬಿಡದವರು

ನಿನ್ನ ಬಿಟ್ಟಾರೆಯೇ, ಹೋಗು ದೂರ

ಭುವಿಯ ಬಿಟ್ಟು , ಹಾಳಾಗದಿರು

ಭುವಿಯಂತೆ ಎಲ್ಲವನು ಕೊಟ್ಟು

***

ಮುದುಕ

ನಾನು ನನ್ನ ತಮ್ಮ

ಹೊರಟಿದ್ದೆವು ಕಾಲೇಜಿಗೆ,

ಅಡ್ಡಬಂದ ಮುದುಕನೊಬ್ಬ ನಮ್ಮಗಾಡಿಗೆ

ಬಿದ್ದೆವು, ಎದ್ದೆವು, ಬೈದೆವು

ನಮ್ಮಗಾಡಿಯೇ ಬೇಕಿತ್ತೆ ನಿನಗೆ?

ಪಾಪ! ಅವನ ನೋವು ಅವನಿಗೆ

ತಪ್ಪು ಮಾಡಿದ್ದರೂ

ಮನ ನೋಯುವಂತೆ

ಆಡಬಾರದಿತ್ತು, ಆಡಿದ್ದಾಗಿತ್ತು.

ಒಡೆದಿತ್ತು ಮುತ್ತು.

ಏನಾದನೋ ಹೇಗಿರುವನೋ ?

ಓ ಹಿರಿಯ ಕ್ಷಮಿಸು ನಿನ್ನ ನೋವಲಿ

ಒಂದಾಗದ ನಮ್ಮನು.

***

ನವ ಚಿಂತನ

ನವ ಚೇತನ

ನವ ವಿಶ್ವ ಸಂಚಾರಿ

ನವ ನವೀನ

ನವ ನೂತನ

ಯುವ ಚೇತನ ವಿಹಾರಿ.

***

ತಾಪ

ದಿನಮಣಿಯ ಝಳವಂ ತಾಳದೆ

ಹರನ್ ಓಡಿದನ್ ಹಿಮಾಲಯಕೆ

ಹಾಸಿದನ್ ಹರಿ ಹಾವ ಹಾಸಿಗೆಯ

ಕ್ಷೀರಸಮುದ್ರದಿ, ಬ್ರಹ್ಮನಡಗಿದನ್

ಕಮಲ ಮಧ್ಯದೊಳು

ನಾನೆಲ್ಲಿ ಹೋಗಲೋ ಪರಶಿವನೇ

ತಾಳಲಾರೆನೋ ನರಹರಿಯೇ

****

ಮೊರೆ

ತೀರುತಿದೆ ಎಣ್ಣೆ ನಂದುತಿದೆ ದೀಪ

ದಾರಿಯ ತೋರೋ ಪರಶಿವನೇ

ಕಳೆದ ಮುತ್ತು ಸಿಗಲೇ ಇಲ್ಲ

ಇರುವುದ ಕಳೆವುದು ಬಲ್ಲೆನು ಎಲ್ಲಾ

ಏನಮಾಡಲೂ ತೋರುತ ಇಲ್ಲ

ಹಿಡಿದು ನಿಲ್ಲಿಸೋ ಎನ್ನಮನವ

ಹರಿದು ಹಂಚಿ ಹೋಗದಂತೆ

****

ಅವ್ಯಕ್ತ

ನಾನುಯಾರು? ಹೌದು! ನಾನು ಯಾರು?

ಎಲ್ಲಿಂದ ಬಂದೆ ? ಕರೆತಂದವರಾರು?

ಇಲ್ಲಿಗೆ ಕಳುಹಿಸಿದವರಾರು ಏಕಾಗಿ?

ಯಾವುದು ನನ್ನದು ನನ್ನದು ಯಾವುದು?

ಈ ಗಾಳಿ-ಬೆಳಕು, ಈ ಗಿಡ-ಮರ ಈ ನೆಲ-ಜಲ

ಈ ಬೆಟ್ಟ-ಗುಡ್ಡ, ಈ ದೇಶ-ಭಾಷೆ, ಈಸಂಸ್ಕೃತಿ ನನ್ನದೇ

ಹೋಗಲಿ,

ಈರಕ್ತ –ಮಾಂಸ , ಈದೇಹ –ಉಸಿರು ಯಾವುದು ನನ್ನದು

ನನ್ನದು ಯಾವುದು?

ಛೇ ಏನೀ ಅಸಂಬದ್ಧ ಪ್ರಶ್ನೆ ಎಂದೆನ್ನ ತೆಗಳದಿರಿ

ತಿಳಿಸಿ ಹೇಳಿರಿ

ನಾನು ಯಾರು ? ಯಾವುದು ನನ್ನದು?

*****

ಪಯಣಿಗರು

ಪಯಣಿಗರು ನಾವು ಪಯಣಿಗರು

ಒಂದೇ ವಾಹನದ ಯಾತ್ರಿಕರು

ಅಕ್ಕಪಕ್ಕದವರ ಮಾತನಾಡಿಸಿ

ನಗಿಸಿ ಅಳಿಸಿ ಸವಿನೆನಪ ಉಳಿಸಿ

ಇಳಿದು ಹೋಗುವವರು

ಚಾಲಕನು ಅವನು ನಿರ್ವಾಹಕನೂ ಕೂಡ

ಅವಕರೆದೊಯ್ಯುವೆಡೆ ಹೋಗಬೇಕು

ಅವನಿಳಿಸಿದೆಡೆ ಇಳಿಯಬೇಕು

ಇಲ್ಲಿ ನಮಗಿಲ್ಲ ಸ್ವಾತಂತ್ರ್ಯ

ಎಲ್ಲ ಅವನದೇ ತಂತ್ರ

ನಮ್ಮ ಪಯಣವು ನೆಪ ಮಾತ್ರ

*****

ಕನಸು (ಭೂಕಂಪ ಆದಾಗ)

ಅವಶೇಷಗಳಿಯಲ್ಲಿ ಅಡಗಿತ್ತು

ಅಂತ್ಯವಿಲ್ಲದ ಕನಸು

ಸಿಡಿದಿತ್ತು ಹೃದಯ ಸಾವಿರ ಹೋಳಾಗಿ

ಕುಸಿದಿತ್ತು ದೇಹ ತನ್ನರಿವ ಮರೆತು

ಚಾಚಿತ್ತು ದೈವ ಲಕ್ಷಾಂತರ ಕೈಗಳ

ನೊಂದವರ ಕಣ್ಣೀರ ಒರೆಸಲು

ಏನೆ ಬರಲು ತಾಳಬೇಕು

ನೂರು ಕಾಲ ಬಾಳಬೇಕು

ತಾಯಿ ಮುನಿದಾಗ ನೆಲಕುಸಿದಾಗ

ಇರುವೆವೆಲ್ಲಿ ನಾವು ಕಟ್ಟುತ್ತ ಕನಸು.

***

ಗುಜರಾತ್ ಭೂಕಂಪ

ಭಾರತ ಮಾತೆಯ ಹೆಮ್ಮೆಯ ಮಕ್ಕಳೆ

ಆಲಿಸಿ ನನ್ನಯ ಮಾತುಗಳ

ಗಣರಾಜ್ಯೋತ್ಸವ ದಿನವದು ನುಂಗಿತು

ಸಾವಿರಾರು ಜನ ಬಂಧುಗಳ ||

ನಡುಗಿತು ಭೂಮಿ ಕುಸಿದಿತು ಮನೆಗಳು

ಸಿಲುಕಿತು ಜನತೆ ರಾಶಿಯಲಿ

ಮನೆಗಳ ರಾಶಿಯಲಿ

ವಿಶ್ವಕೆ ವಿಶ್ವವೆ ಚಾಚಿತು ತನ್ನಯ

ಸಹಾಯ ಹಸ್ತವ ಶೀಘ್ರದಲಿ

ಬಹು ಶೀಘ್ರದಲಿ ||

ನಾನೂರು ಮಕ್ಕಳು ಶಾಲೆಗೆ ಹೊರಟರು

ಭಾರತಮಾತೆಯ ಧ್ವಜವಿಡಿದು

ಬಿದ್ದವು ಕಟ್ಟಡ ದಡದಡ ಎನ್ನುತ

ಸಿಲುಕಿದರವರು ಅದರಡಿಗೆ ||

ಹಳ್ಳಿ ಹಳ್ಳಿಗಳು ಗ್ರಾಮ ಗ್ರಾಮಗಳು

ತುತ್ತಾದವು ಈ ಮಹಮಾರಿಗೆ

ಒಂದೇ ಕ್ಷಣದೊಳು ಲಕ್ಷಾಂತರ ಮಂದಿ

ಹೊರಟರು ಅಂತಕನರಮನೆಗೆ

ಪ್ರಕೃತಿ ಮುನಿದರೆ ಮಾರಿಯು ಅವಳಿಗೆ

ಹೆಣ್ಣು ಗಂಡುಗಳ ಬೇಧವಿಲ್ಲಾ

ಮಕ್ಕಳು ಮುದುಕರು ಧನಿಕರು ಬಡವರು

ಎನ್ನುವ ವಿವರವೇ ಗೊತ್ತಿಲ್ಲ!

ಹುಟ್ಟು ಸಾವುಗಳು ಅದು ನಿರಂತರ

ಎಂದಿದೆ ವೇದದ ವಾಣಿಗಳು

ಆದರೂ ಸಾಗಿದೆ ಜೀವನ ಶಾಶ್ವತ

ಎನ್ನುತ ನಮ್ಮಯ ಜನತೆಗಳು.



ಮೊಗವಾಡ

ಕಾಡುತಿದೆ ಮೊಗವಾಡ

ಅನುದಿನವು ಅನುಕ್ಷಣವು

ತೊಟ್ಟೆನಾನರಗಳಿಗೆ

ಅವನಾದೆ ಇವನಾದೆ ಏನೆಲ್ಲಾ ತಾನಾದೆ

ಯಾವುದೀ ಮೊಗವಾಡ ಎಂದರಿಯದಾದೆ

ಮೊಗವಾಡ ಕಳಚಿಟ್ಟು ಅರಗಳಿಗೆ ಇರದಾದೆ

ನನ್ನತನವನು ತಿಳಿಯದಾದೆ.

***


ಹಾಡು

ಯಾವುದೀ ಹಾಡು ಕಾಲದೆರೆಯನು ದಾಟಿ

ಬರುತಿಹುದು ಇಂದು ವ್ಯಾಸ ಬಾಸ ಕಾಳಿದಾಸ

ಹಾಡಿದರು ಅಂದು ಇಂದೇನಿದೆ ಎಲ್ಲದರ ಮೂಲ ಅಲ್ಲಿದೆ

ಹೊಸಸೃಷ್ಟಿ ಎಂಬುದೆಲ್ಲಾ ಹಳೆಯದರ ಪಡಿನೆರಳು

ನಾ ಮಾಡಿದೆ ನಾ ಹಾಡಿದೆ ಎಂಬುದೀ ಕೊರಳು

****


ಹಸಿವು

ಹಸಿವೆಂಬ ಅಗ್ನಿಯೊಳು ಮನ

ಬೆಂದು ಪಾಕವಾಗಿತ್ತಯ್ಯ

ಹಸಿವಿನಿಂದಲೇ ಶಕ್ತಿ ಯೋಗೀಶ್ವರಂಗೆ

ಹಸಿವಿನಿಂದಲೇ ಬಾಳು ಕವೀಶ್ವರಂಗೆ

ನಿತ್ಯ ಏಕಾದಶಿಯದು ದೈವವನು ತೋರುವುದು

ಬಿಡಿಸುವುದು ಭವ ಬಂಧ ನಾರಸಿಂಹ

*****


ವರ್ತಮಾನ

ಭೂತ ಭವಿಷ್ಯಗಳ

ನಡುವೆ ಮರೆತದ್ದು

ಭೂತ ಭವಿಷ್ಯಗಳ

ಹೊಡೆದಾಟದಲ್ಲಿ

ಕಳೆದುಕೊಂಡಿದ್ದು.


ತತ್ವ

ಬೇಡುವವ ಒಬ್ಬ

ನೀಡುವವ ಇನ್ನೊಬ್ಬ

ಕೊಡುವವನಿದ್ದರೆ

ಬೇಡುವವರೂ ಇರುತ್ತಾರೆ

ಬೇಡುವವರು ಇದ್ದರೆ

ಕೊಡುವವರೂ ಇರುತ್ತಾರೆ

ಬೇಡುವವ ನೀಡುವವ

ಒಬ್ಬನೇ ಎನ್ನುವುದು ಅದ್ವೈತ

ಬೇರೆ ಬೇರೆ ಎನ್ನುವುದು ದ್ವೈತ

ಒಂದೇ ಆದರೂ ಅವನು ಇವನಾಗಲಾರ

ಎನ್ನುವುದು ವಿಶಿಷ್ಟಾದ್ವೈತ.



ರಾಜ ಬೀದಿ

ಹಿಂದೊಂದು ಕಾಲವಿತ್ತು ಎಲ್ಲಿನೋಡಿದರಲ್ಲಿ

ರಾಜಬೀದಿಯೇ ಇತ್ತು.

ಇಂದೂ ಇದೆ ಜಗಮಗಿಸುವ ದೀಪಗಳ

ಸರಮಾಲೆ ಹೊತ್ತ ಅಂಗಡಿಬೀದಿಗಳು

ಸೈಕಲ್ಲು , ಬೈಕುಗಳೇ ತಿಣುಕುವ ಗಲ್ಲಿಗಳು

ನೀತಿ ನಿಯಮಗಳ ತೂರಿಬಿಟ್ಟ ಕಾಲು ಹಾದಿಗಳು

ಮನದ ನಡುವೆ ಮನೆಯ ನಡುವೆ ಸಂದಿ ಗೊಂದಿಗಳು

ನೋಡಬನ್ನಿ, ಹುಡುಕಬನ್ನಿ, ಮತ್ತೆ ರಚಿಸೋಣ ಬನ್ನಿ

ಮನೆ ಮನಗಳ ನಡುವೆ ರಾಜಬೀದಿ.



ಮಾತು

ಮಾತು ಹೇಗಿರಬೇಕು

ಮುಳ್ಳಿನ ಮೇಲಿನ ಸೀರೆಯ ತೆಗೆವಂತೆ

ಬಿಟ್ಟ ಬಾಣ ಗುರಿ ಸೇರುವಂತೆ

ಅರ್ಥ ಅನರ್ಥವಾಗದಂತೆ

ಮಿತವಾಗಿರಬೇಕು

ಹಿತವಾಗಿರಬೇಕು

ಋತವಾಗಿರಬೇಕು.



ಅಮ್ಮ

ಮಗುವಿನ ಮೊದಲ ನೋಟಕ್ಕೆ ಸಿಲುಕಿ

ಅದರ ನಗುಮೊಗದಲ್ಲಿ ತನ್ನ ನೋವ ಮರೆತವಳು

ಗಂಡ ಮಕ್ಕಳ ಸುಖಕ್ಕಾಗಿ ತನ್ನ ಸುಖವ ಬಲಿ ಕೊಟ್ಟವಳು

ಸಹನೆ ತಾಳ್ಮೆ ಕರುಣೆಯೇ ಮಯ್ಯೆತ್ತಿ ಬಂದವಳು

ಗಾಣದೆತ್ತಿನಂತೆ ಸದಾ ಕ್ರಿಯಾಶಾಲಿ

ನಿದ್ದೆಯಲ್ಲೂ ಇವಳಿಗೊಂದೇ ಚಿಂತೆ

ಗಂಡ ಮನೆ ಮಕ್ಕಳು . . .



ಸಾವು

ಹುಟ್ಟಿದಂದೇ ಬೆನ್ನಹಿಂದೆ ನೆರಳಿನಂದದಿ ಬಂದವ

ವ್ಯಕ್ತವಾಗದೆ ಗುಪ್ತವಾಗಿಯೇ ಕಾಡುವ

ಗೆಳೆಯ ನೀನೆಲ್ಲಿರುವೆ?

ನನ್ನ ಮನದ ಮನೆಯ ಕದವನೆಂದಿಗೆ ತಟ್ಟುವೆ?

ಮನೆ-ಮಠ ,ಆಸ್ತಿ-ಪಾಸ್ತಿ,

ಹೆಂಡತಿ ಮಕ್ಕಳು ನೆಂಟರು –ಇಷ್ಟರು

ನೀ ಬಂದು ಕರೆದರೆ. . .

ಎಲ್ಲರನ್ನೂ ಬಿಟ್ಟು ನಿನ್ನ ಹಿಂದೆ ನಡೆಯುವೆ.

ಗೆಳೆಯ ಹೇಳಿ ಬರುವೆಯೋ ಹೇಳದೆ ಬರುವೆಯೋ

ನೀ ಬರುವೆಯಾದರೆ ಸೂಚನೆಗಳೆಂತು?

ಒಂದು ಎರಡಾಗುವ ಮುನ್ನ

ಎರಡು ನಾಲ್ಕಾಗುವ ಮುನ್ನ

ನಿನ್ನ ಆಗಮನ ಚೆನ್ನ

ನಾನಾಗೆ ಕರೆಯುವವನಲ್ಲ

ನಿನ್ನಾಗಮನ ಬೇಡ ಎನ್ನುವವನಲ್ಲ

ನಿನಗಾಗಿಯೆ ತೆರೆದಿನೆ ನನ್ನ ಮನೆ, ಮನ.



ಹಕ್ಕಿಗಳು

ಹಕ್ಕಿಗಳುನಾವು ಹಕ್ಕಿಗಳು

ನೀಲಾಕಾಶದಿ ಸ್ವತಂತ್ರವಾಗಿ ಹಾರಬೇಕಿದ್ದ

ಹಕ್ಕಿಗಳು ನಾವು ಹಕ್ಕಿಗಳು

ಅವ್ಯವಸ್ಥೆಯ ಪಂಜರದಲ್ಲಿ ಸಿಲುಕಿ

ಓದು ಬರಹ ಕಲಿಯದ ನಾವು

ಬಾಲ್ಯವೆಲ್ಲ ಕಳೆದಿಹೆವು , ಕಳೆಯುತಿಹೆವು

ಹೋಟೆಲ್ಲು ಬಾರು ಪಬ್ಬುಗಳಲಿ

ಸಿರಿವಂತರ ಮನೆಗಳಲ್ಲಿ

ಕಸ ಮುಸುರೆ ಎತ್ತುತ್ತ ನೋವುಗಳ ನುಂಗುತ್ತಾ

ಇಲ್ಲ ರೆಕ್ಕೆಯು ನಮಗೆ ಕೋಳ ಹಾಕಿದೆ ಕಾಲಿಗೆ

ಹಾರುವ ಕನಸ ಕಾಣಲು ಇಲ್ಲ ಬಂಧನವು ನಮಗೆ

ಹಕ್ಕಿಗಳು ನಾವು ಹಕ್ಕಿಗಳು.



ಬಾಲ್ಯ

ಕಣ್ಣೆದುರಿಗೇ ಹುಟ್ಟಿ ಬೆಳೆವ , ಆಡಿ ನಲಿವ

ಮಕ್ಕಳ ಕಂಡರೆ ಎಂಥ ಸೊಗಸು

ಆಟದಲಿ ಭಾಗಿಯಾದರೆ ಸ್ವರ್ಗಕ್ಕೆ ಮೂರೇ ಗೇಣು

ಕೋಪ ತಾಪ ಏನೇ ಇದ್ದರೂ ಒಂದು ಚಣಮಾತ್ರವೇ

ಮೋಸ ವಂಚನೆ ಇರದ ಬಾಳು ಎಂದೆಂದಿಗೂ ಬೇಕದು

ಕಳೆದ ಬಾಲ್ಯವ ಮತ್ತೆ ಪಡೆಯುವ ದಾರಿಯದು ತಿಳಿಯದು

ಬಾಲ್ಯವನು ಹೊಂದಿದವರ ನೋಡಿ ನಲಿವ ಗುಣವದು ಚೆನ್ನದು.



ಬಣ್ಣ

ಕಷ್ಟ ಬಂದಾಗ

ಜನರ ಬಣ್ಣ

ತಿಳಿಯುತ್ತದೆ

ನನ್ನ ಗೆಳೆಯ ಕಪ್ಪು

ಆದರೂ

ಅವನ ಹೃದಯ ಬಿಳುಪು.



ಪೂರ್ವ - ಪಶ್ಚಿಮ

ಗೆಳೆಯ ನಿನ್ನ ಮನೆಯ, ಮನದ

ಬಾಗಿಲು ಮುಚ್ಚಿರುತ್ತದೆ ಏಕೆ

ಬೆಳಕಕಾಣಲು ಆಸೆಯಿಲ್ಲವೇ

ಪೂರ್ವದ ಗಾಳಿ ನಿನಗೆ ಬೇಡವೇ

ಪಶ್ಚಿಮದ್ದೇ ಸಾಕಾಯಿತೆ?

ಜ್ಞಾನಸೂರ್ಯನ ಉದಯ

ಭಾನುತೇಜರ ಜನನ ಇಲ್ಲಾಗಿದೆ, ಆಗುತ್ತಿದೆ,

ಇವರ ದರ್ಶನ ಬೇಡವೇ ನಿನಗೆ

ತೆರೆ ಒಮ್ಮೆ ನೋಡು ! ಭದ್ರನೆಲೆ ಇಲ್ಲಿದೆ

ಲೌಕಿಕವ ಮೀರಿದೆ ಇದರ ಸವಿನೋಡಿದರೆ

ಬಿಡಲಾರೆ ನೀನೆಂದೆಂದೂ. . .



ಇರುವೆ

ಇರುವೆ ಇರುವೆ

ಎಲ್ಲೆಡೆ ನೋಡಲು ನೀನೇ ಇರುವೆ

ಕೆಂಪು ಇರುವೆ , ಕಪ್ಪು ಇರುವೆ

ಚಿನ್ನದ ಬಣ್ಣದ ಇರುವೆ

ಸೈನಿಕ ಇರುವೆ , ರಾಣಿ ಇರುವೆ

ಇಂಜಿನಿಯರ್ ಡಾಕ್ಟರ್ ಇರುವೆ

ಟೈಲರ್ ಬಡಗಿ ಆಗಿರುವೆ

ಎಲೆಗಳ ಜೋಡಿಸಿ ಗೂಡನು ಮಾಡುವೆ

ನೆಲವನು ಬಗೆಯುತ ದಾರಿಯಮಾಡುವೆ

ಕಲ್ಗಳ ಅಡಿಯಲಿ ಮನೆಯನು ಕಟ್ಟುವೆ

ಮಳೆಗಾಲದಲಿ ಮೊಟ್ಟೆಯನಿಡುವೆ

ಸಕ್ಕರೆ ಡಬ್ಬವ ಹುಡುಕುತ ಬರುವೆ

ಸಿಹಿ ಸಿಹಿ ತಿಂಡಿಯ ಮುತ್ತುತ ಇರುವೆ

ಅಡ್ಡಬಂದವರನ್ನು ಕಚ್ಚುತಲಿರುವೆ

ಸೋಮಾರಿಯಾಗದೆ ಒಂದೆಡೆ ಕೂಡದೆ

ಕ್ರಿಯಾಶಾಲಿ ನೀ ಆಗಿರುವೆ ಓ ಓ ಇರುವೇ

ನಿನ್ನಯ ಬುದ್ಧಿಯ ನನಗೆಂದಿಗೆ ಕೊಡುವೆ.



ಅಂಕಿಯ ಆಟ

ಹತ್ತು ಹತ್ತು ಇಪ್ಪತ್ತು

ಹೊಟ್ಟೆಯು ತುಂಬಾ ಹಸಿದಿತ್ತು

ಇಪ್ಪತ್ತು ಹತ್ತು ಮೂವತ್ತು

ಊಟಕೆ ಬಂದನು ಸಂಪತ್ತು

ಮೂವತ್ತು ಹತ್ತು ನಲವತ್ತು

ಹಾಕಿದಳಮ್ಮ ಕೈತುತ್ತು

ನಲವತ್ತು ಹತ್ತು ಐವತ್ತು

ಇನ್ನೂ ಬೇಕೆಂದ ಸಂಪತ್ತು

ಐವತ್ತು ಹತ್ತು ಅರವತ್ತು

ಕುಡಿಯಲು ನೀರು ಬೇಕಿತ್ತು

ಅರವತ್ತು ಹತ್ತು ಎಪ್ಪತ್ತು

ತಟ್ಟೆ ಖಾಲಿ ಆಗಿತ್ತು

ಎಪ್ಪತ್ತು ಹತ್ತು ಎಂಭತ್ತು

ಹೊಟ್ಟೆ ತುಂಬಾ ತುಂಬಿತ್ತು

ಎಂಭತ್ತು ಹತ್ತು ತೊಂಭತ್ತು

ಆಡಲು ಹೋದನು ಸಂಪತ್ತು

ಹತ್ತರಿಂದ ನೂರು ಹೀಗಿತ್ತು

ಅಂಕಿಯ ಆಟ ಮುಗಿದಿತ್ತು.



ಮಗಳಿಗೆ

ಕೊಟ್ಟಹೆಣ್ಣು ಕುಲಕ್ಕೆ….

ಎಂದು ತಿಳಿಯದಿರು ಮಗು

ದೇಹ ಬೇರೆಯಾದರೂ ಆತ್ಮ ಒಂದೇ

ಉತ್ತರ-ದಕ್ಷಿಣಗಳ

ಪೂರ್ವ ಪಶ್ಚಿಮಗಳ

ಹಳತು ಹೊಸತುಗಳ

ಬೆಸೆಯುವ ಭದ್ರಕೊಂಡಿ

ಬಾಳು ನೂರ್ಕಾಲ ಬೆಳಗು…



ಏಕೆ ಹೀಗೆ

ಏನದ್ಭುತ ! ಅವ ಕುಳಿತ ಆದ ವಿಶ್ವಮಾನವ

ನಾನೂ ಕುಳಿತೆ , ಆಗಲಿಲ್ಲ ಅವನಂತೆ

ಏಕೆ ಹೀಗೆ?

ನಿರ್ಧರಿಸಿದೆ ನಾನೂ ಆಗುವೆ ಅವನಂತೆ

ಕಂಡೆ ಕನಸ, ಮಲಗಿಕೊಂಡೇ. .

ಏಕೆ ಹೀಗೆ?

ಅಂದನವ ಉತ್ತಿಷ್ಠತ! ಜಾಗ್ರತ. . .

ನಾನು ಏಳಲೇ ಇಲ್ಲ. .

ಏಕೆ ಹೀಗೆ?

ತೋರಿದ ಆತ್ಮೋದ್ಧಾರದ ಹಾದಿ, ಕರೆದ

ಆದರೂ ಸುಳಿಯಲಿಲ್ಲ ಅದರ ಕಡೆಗೆ

ಏಕೆ ಹೀಗೆ?



ತನ್ನ ತಾ ಮರೆತವಳಿಗೆ

ಮೈ ಕೊಡಹಿ ಮೇಲೇಳು ತೋರು ನಿನ್ನ ವಿರಾಡ್ರೂಪ

ನೆನೆ ತಾರಾ ಸೀತಾ ಮಂಡೋದರಿಯ

ಗಾರ್ಗಿ ಮೈತ್ರೇಯಿ ದ್ರೌಪದಿ ಕನ್ನಗಿಯ

ಆದಿಶಕ್ತಿ ಜಗನ್ಮಾತೆ ಜ್ಞಾನದಾಯಿ ನೀನು

ವೀರಮಾತೆ ಯಶೋಗಾಥೆ ಯೋಗಮಾತೆ ನೀನು

ಅರ್ಥ ಕಾಮಗಳಲಿ ಮುಳುಗಿದವರ ಧರ್ಮನೀನು

ಓ ಸ್ಫೂರ್ತಿಚಿಲುವೆ ಬತ್ತದಿರು ಎಂದೆಂದೂ

ಸರಿಸು ನಿನ್ನ ಮಾಯಾ ಮುಸುಕು ಬೆಳಗು ಜ್ಞಾನಜ್ಯೋತಿ!

ಪುನರ್ನವ ೨೦೧೦

೧. ರಾಮನಿಗೆ ಹಣ್ಣುಕೊಟ್ಟವಳು - ಶಬರಿ

೨. ಯಾರ ನೂರು ತಪ್ಪುಗಳನ್ನು ಕೃಷ್ಣ ಕ್ಷಮಿಸಿದ – ಶಿಶುಪಾಲ

೩. ಜನಕನಿಗೆ ಶಿವಧನಸ್ಸನ್ನು ನೀಡಿದವರು – ಶಿವ

೪. ಅಕ್ಷಯ ಪಾತ್ರೆಯನ್ನು ಪಾಂಡವರಿಗೆ ನೀಡಿದವರು – ಸೂರ್ಯ

೫. ದೃತರಾಷ್ಟ್ರನಿಗೆ ನಡೆಯುತ್ತಿದ್ದ ಯುದ್ಧವನ್ನು ಕುಳಿತಲ್ಲಿಂದಲೇ ನೋಡಿ ಹೇಳಿದವನು – ಸಂಜಯ

೬. ರಾಮ ಸೀತೆಗೆ ಕಳುಹಿಸಿದ ಮುದ್ರಿಕೆ – ಮುದ್ರೆಯುಂಗುರ

೭. ಶಂತನುವಿನ ಇಬ್ಬರು ಪತ್ನಿಯರು – ಗಂಗೆ ಮತ್ತು ಸತ್ಯವತಿ.

೮. ಜಾನಕಿಗೆ ಇರುವ ಇತರ ಹೆಸರುಗಳು – ಮೈಥಿಲಿ, ಸೀತೆ , ವೈದೇಹಿ , ಭೂಮಿಜಾ

೯. ರಾವಣನ ಸಹೋದರರು – ವಿಭೀಷಣ ಮತ್ತು ಕುಂಭಕರ್ಣಾ

೧೦. ದೃತರಾಷ್ಟ್ರನಿಗೆ ಇದ್ದ ಮಕ್ಕಳು – ೧೦೦+೧

೧೧. ೭ ಬೆಟ್ಟಗಳನ್ನು ಹೊಂದಿದ ದೇವಾಲಯ – ತಿರುಪತಿ

೧೨. ರಾಮ ಪೂಜಿಸುತ್ತಿದ್ದ ವಿಭೀಷಣನಿಗೆ ನೀಡಿದ ವಿಗ್ರಹ ಎಲ್ಲಿದೆ. ಶ್ರೀರಂಗಂ ನಲ್ಲಿದೆ. ರಂಗನಾಥ

೧೩. ದುರ್ಯೋಧನನ ಮಾವ – ಶಕುನಿ

೧೪. ಬಾಲಕೃಷ್ಣನ ದೇವಾಲಯ ಎಲ್ಲಿದೆ – ಗುರುವಾಯೂರು , ಕೇರಳ

೧೫. ಅನ್ನಪೂರ್ಣೇಶ್ವರಿ ದೇವಾಲಯ ಎಲ್ಲಿದೆ – ಹೊರನಾಡು

೧೬. ಕೃಷ್ಣ ಆಳಿದ ನಗರ – ದ್ವಾರಕ

೧೭. ಹಿಮದ ಶಿವಲಿಂಗ ಇರುವ ಸ್ಥಳ – ಅಮರನಾಥ

೧೮. ತನ್ನ ರಥಯಾತ್ರೆಯ ಮೂಲಕ ಪ್ರಸಿದ್ಧವಾದುದು – ಪುರಿಜಗನ್ನಾಥ ರಥಯಾತ್ರೆ

೧೯. ಸೀತೆಯನ್ನು ಅಶೋಕವನದಲ್ಲಿ ನೋಡಿಕೊಂಡವರು – ತ್ರಿಜಟಾ

೨೦ . ಮಹಾಭಾರತ ಯುದ್ಧನಡೆದ ಸ್ಥಳ – ಕುರುಕ್ಷೇತ್ರ

೨೧. ಬಸವಣ್ಣನವರು ಹುಟ್ಟಿದ ಸ್ಥಳ – ಬಾಗೇವಾಡಿ

೨೨. ಸೀತೆ ಲಂಕೆಯಲ್ಲಿ ಇದ್ದ ಸ್ಥಳ – ಅಶೋಕವನ

೨೩. ಹನುಮಂತನ ಕಥೆ ರಾಮಾಯಣದಲ್ಲಿ ಯಾವ ಕಾಂಡದಲ್ಲಿ ಇದೆ – ಸುಂದರಕಾಂಡ

೨೪. ಲಕ್ಷ್ಮಣನ ತಾಯಿ – ಸುಮಿತ್ರಾ

೨೫. ಧರ್ಮರಾಯನ ರಾಜಧಾನಿಯಾಗಿದ್ದಸ್ಥಳ : ಇಂದ್ರಪ್ರಸ್ಥ ಇವತ್ತಿನ ದೆಹಲಿ

೨೬. ರಾಮ ಸೇತುವಿನ ನಿರ್ಮಾಣದಲ್ಲಿ ಮುಖ್ಯಪಾತ್ರವಹಿಸಿದವರು – ನಲ , ನೀಲ

೨೭. ಭೀಮನನ್ನು ವಿವಾಹವಾದ ರಾಕ್ಷಸಿ – ಹಿಡಿಂಬಾ

೨೮. ಸೀತಾಪಹರಣ ಕಥೆ ಎಲ್ಲಿ ಕಂಡುಬರುತ್ತದೆ – ಅರಣ್ಯಕಾಂಡ

೨೯. ದಕ್ಷಿಣೇಶ್ವರದ ಸಂತ – ರಾಮಕೃಷ್ಣ ಪರಮಹಂಸ

೩೦. ರಾಮನ ಬಿಲ್ಲಿನ ಹೆಸರು – ಕೋದಂಡ

೩೧. ಪಾಂಡುಮಹಾರಾಜನ ಪತ್ನಿಯರು – ಕುಂತಿ, ಮಾದ್ರಿ,

೩೨. ರಾವಣನ ತಾಯಿ – ಕೇಕಸಿ

೩೩. ಶ್ಯಮಂತಕ ಮಣಿಗಾಗಿ ಕೃಷ್ಣನೊಡನೆ ಹೋರಾಟಮಾಡಿದವರು – ಜಾಂಬವಂತ

೩೪. ಗೋಕುಲದ ಜನರು ಅರ್ಚಿಸಿದ ಪರ್ವತ – ಗೋವರ್ಧನ

೩೫. ಶ್ರೀಕೃಷ್ಣ ದೇವಲೋಕದಿಂದ ತಂದ ಹೂವಿನ ಗಿಡ – ಪಾರಿಜಾತ

೩೬. ಗೀತಗೋವಿಂದ ಬರೆದವರು – ಜಯದೇವ

೩೭. ೧೦ನೇ ಸಿಕ್ ಗುರು – ಗುರುಗೋವಿಂದ ಸಿಂಗ್

೩೮. ನರಸಿಂಹ ಅವತಾರದ ಕಾಲದಲ್ಲಿ ಜಯ ವಿಜಯರು ಯಾವ ಹೆಸರು ಹೊಂದಿದ್ದರು – ಹಿರಣ್ಯಾಕ್ಷ , ಹಿರಣ್ಯಕಶ್ಯಪ