Sunday, April 29, 2018



*ಅಜ್ಜಿಯ ಮೌನ*

ನನ್ನಪ್ಪನ ಅಮ್ಮ ನನ್ನಜ್ಜಿಗೆ ತೊಂಬತ್ತು ವರ್ಷ
ಅವಳನ್ನು ಕಂಡಾಗಲೆಲ್ಲಾ ಹುಟ್ಟಿತ್ತಿರುತ್ತದೆ
ಮತ್ತೆ ಅದೇ ಪ್ರಶ್ನೆ, ಅಂದಿನವರೆಲ್ಲಾ ಹೇಗಿದ್ದರು?
ಹೇಗೆ ಬಾಳಿದ್ದರು, ಬದುಕಿದ್ದರು?
ಅವಳಿಗೆ ಅದು ಸಹಜ
ನೆನಪಿನ ಗಣಿಗೆ ಕೈ ಹಾಕಿ ಒಂದೊಂದೇ
ಮುತ್ತುಗಳ ಎತ್ತುತ್ತಾ ಹೇಳುತ್ತಾಳೆ...
ಅಂದು ಇಂತಿನಂತಿರಲಿಲ್ಲ
ಹೊಸಗಾಳಿ ಬೀಸಿರಲಿಲ್ಲ
ಅವರಿದ್ದರು.
ನಮ್ಮದೇ ಬದುಕು, ಅದೇ ಹೊಲ ಗದ್ದೆ,
ದನ ಕರ, ಆಗತಾನೇ ಕರೆದ
ಮೊಲೆಹಾಲ ಹೀರುವ ಮಕ್ಕಳು,
ನಲಿವಿತ್ತು, ಸೊಗಸಿತ್ತು, ಬೆವರು ಹರಿಸಿದ್ದು
 ಕೈಗೆ ಬಂದಾಗ, ನೆಮ್ಮದಿ ತುಂಬಿತ್ತು.
ಇನ್ನೆಂದಿಗೂ ಸಿಗದಂತಹ ಕನಸು ಕೈ ಗೂಡಿತ್ತು.
ಇನ್ನೂ ಆಳಕ್ಕೆ ಇಳಿಯುತ್ತಿದ್ದಳೇನೋ...
ಹೊರಕ್ಕೆಳೆದೆ. ಇಂದೇನಾಗಿದೆ? ಎಂದೆ.
ಕಣ್ಣತೇಜ ಉಡುಗಿ ಇಂದು
ಎಲ್ಲವೂ ಇದ್ದೂ ಇಲ್ಲದಂತಾಗಿದೆ.
ಬಯಸಿದ್ದು ಕೈಗೆಟುಕುತ್ತೆ. ಜಳ್ಳುಕಾಳುನಂತೆ
ಕ್ಷಣದಲ್ಲಿ ರಸಹೀನವಾಗಿ.
ನನಗೆ ನಾಲ್ಕು, ನಾಲ್ಕಕ್ಕೆ
ನಾಲ್ಕು ಸೇರಿ ಎಂಟು ಹೀಗೆ ಬೆಳೆದಿದೆ ನಂಟು
ಬೆಳೆದ ದಂಟನು ಕಾಣುವಲ್ಲಿ
ಅವರಿಲ್ಲ ಎಂಬ ಕೊರಗು ಕಾಡುವುದು ಇಂದು
ಎಂದಳು ಸೀರೆಯಂಚ ಕಣ್ಣಿಗೆ ಒತ್ತುತ್ತಾ
ಮೌನವ ತಾಳಿದಳು.



ಏಕೀ ಪರದಾಟ
ಅನ್ನಕ್ಕೋ ಹೊನ್ನಿಗೋ
ಹೆಸರಿಗೋ ಬಸರಿಗೋ

 ***
ಬಂದೆಯಾಶ್ಯಾಮ
ಬೆಂದೆದೆಗೆ ತಂಪು ತಂದೆಯಾ ಶ್ಯಾಮ
ನಿಂದೆಯಾ ಶ್ಯಾಮ ಕಣ್ಣಬಿಂಬದಲಿ
ಕುಂತೆಯಾರಾಮ ಬಲಭೀಮ ಹೃದಯ ಮಂದಿರದಲಿ
 ***
*ಮುರಳಿಯ ಆಲಾಪ*
ಕೃಷ್ಣಾ ನೀನಿಲ್ಲದೆ
ನನ್ನೊಳಗೆ ಜೀವ ಸಂಚಾರ ಹೇಗೆ
ನಾದ ಹೊಮ್ಮುವುದಾದರೂ ಹೇಗೆ
ನಿನ್ನುಸಿರು ನನ್ನೊಳಗೆ ತುಂಬಿದಾಗ
ನಾದೋಪಾಸನೆ ಅಲ್ಲವೇ
 ***
ನನ್ನೊಳಗಿನ
ಹೊರಗಿನ ಕಲ್ಮಶವ
ಕಳೆವವನೇ ಹೃಷೀಕೇಶ
ಊದು ಪಾಂಚಜನ್ಯ
 ****

ಎಣ್ಣೆ ತೀರಿದ ಬಳಿಕ
ಹಣತೆ ಉರಿದಿತ್ತಾದರೂ ಏಕೆ
ಬತ್ತಿಯ ಬೂದಿ ಮಾಡಲೆಂದೇ
***

ಬೀಜದೊಳಗೆ ಕಾಡು
ಹನಿಯೊಳಗೆ ಸಾಗರ
ಎನ್ನೊಳಗೆ ನೀನು
***

ಬಲವಂತದ ಸನ್ಯಾಸ
ಹಸಿರೆಲೆಯ ಕಿತ್ತಂತೆ,
ಒಣ ಎಲೆ ಉದುರಿದರೆ
ನೋವಿಲ್ಲ ಎಲ್ಲ ನಿರಾಳ
 ****
ಬಿತ್ತಿದ ಬೀಜ ಹೂವಾಗಲು
ಕಾಲಬೇಕು, ಕಾಯಬೇಕು
ಈ ಕೂಡಲೇ ಹೂವಾಗಬೇಕೆಂದರೆ
ಕಾಗದದಹೂವಾದರೂ ಸಾಕು
 ****

ನನ್ನೆಡೆಗೆ ಅನುಕಂಪದಿ
ಒಂದು ಕ್ಷಣ ನೀ ನೋಡಿದೆ
ನನ್ನ ಹೃದಯ ನಿನ್ನೆದೆಯ ಲಯವನ್ನೇ
ನುಡಿಸತೊಡಗಿತ್ತು
ಸಕಲವನ್ನೇ ಆವರಿಸಿದ ನಿನ್ನ ಕಣ್ಣಜ್ಯೋತಿ
ಅಗಾಧಸಾಗರದ ಮುತ್ತುಗಳ ರಾಶಿಯನ್ನೆ ಎಸೆದಿದೆ
ನನ್ನ ಮುಂದೆ ತಾಳಲಾರೆ ಪಡೆದುದ ಹೇಳದೆ ಇರಲಾದೆ

 *****
ಪ್ರತಿಯೊಂದು ಮುಂಜಾವು
ಎನ್ನನೆಚ್ಚರಿಸುವಾಗ ಹೇಳುತ್ತದೆ
ಇಂದು ನೀ ಸಂತಸದಿಂದಿರು
ಕಲಿ-ನಲಿ-ಹಂಚು-ಕಸಿದು ತಿನ್ನಬೇಡ
ಇರುವೆಯಿಂದಲೂ ಕೂಡಾ!
ಉಡುಗೊರೆಯ ಜೀವನವ
ಹಾಳುಮಾಡದೆ ದಿನವ ಕಳೆ
ನಾಳೆ ಮತ್ತೆ ಸಿಗೋಣ




ಎಲ್ಲಿ ಹೋದವು ಆ
ಬಲಿದಾನದ ದಿನಗಳು
ಧ್ಯೇಯಕ್ಕಾಗಿ, ದೇಶಕ್ಕಾಗಿ
ತಾಯಿಗಾಗಿ, ಮಣ್ಣಿಗಾಗಿ
ಬಲಿಯಾದ ಆತ್ಮಗಳು
ಕೊಟ್ಟವಚನವು ಮರೆತು
ಹೋಯಿತೇ “ಅಮ್ಮಾ ನಿನ್ನ
ರಕ್ಷಣೆಗಾಗಿ ಮರಳಿ ಬರುವೆವು”
ಎಂದ ನುಡಿ ಸುಳ್ಳಾಯಿತೇನು?
ಸಿಡಿದೇಳದೇಕೆ ಮನ
ದೌರ್ಜನ್ಯವನು ಕಂಡಾಗ!
ವಿಸ್ಮೃತಿಯೇಕೆ
ತಾಯಕರೆ ಬಂದಾಗ!
ನಾವೇ ಅಲ್ಲವೇ ಅಂದು
ಬಲಿದಾನ ಮಾಡಿದವರು
ಕುದಿವುದಿಲ್ಲವೇಕೆ ನೆತ್ತರು ಇಂದು
ತಾಯಿಗಾಗಿ , ತಾಯ್ನೆಲಕ್ಕಾಗಿ




ಕಸ ಹಾಕುವಾಗಲೆಲ್ಲ
ಒಮ್ಮೆ ಯೋಚಿಸಿ!
ಏನು ಹಾಕುತ್ತಿದ್ದೇವೆ?
ಏಕೆ ಹಾಕುತ್ತಿದ್ದೇವೆ?
ಎಲ್ಲಿ ಹಾಕುತ್ತಿದ್ದೇವೆ?
ಹೇಗೆ ಹಾಕುತ್ತಿದ್ದೇವೆ?
ಇಂದಿನ ಕಸ ಆನಂತರ ರಸವಾಗುವುದೇ
ಎಂಬುದ ಚಿಂತಿಸಿ ಕಸ ಹಾಕುವಾಗಲೆಲ್ಲ
ಒಮ್ಮೆ ಯೋಚಿಸಿ .
ಸರ್ವಜ್ಞ ಅಗಿದು ಉಗಿದ
ಮಾತು ನಮಗೆ ರಸಗವಳವಾಗಿಲ್ಲವೇ
ಅಂತೆಯೇ ನೀವು ಕಸ ಹಾಕುವಾಗಲೆಲ್ಲ
ಒಮ್ಮೆ ಯೋಚಿಸಿ




*ಹೋಗಬೇಕು ತಡವಾಗುತ್ತಿದೆ*

ಹೋಗಬೇಕು
ತಡವಾಗುತ್ತಿದೆ
ಎಂಬ ಮಾತೇ ಸದಾ
ಹುಟ್ಟಿನಿಂದ
ಸಾಯೋವರೆಗೂ

ಶಾಲೆ, ಕಾಲೇಜು, ಕಾರ್ಯಾಲಯಕ್ಕೆ,
ಮತ್ತೊಂದು ಮಗದೊಂದು ಕೆಲಸ ಕಾರ್ಯಕ್ಕೆ,
ಗೆಳೆಯರ ಭೇಟಿ, ಸಿನೆಮಾಕ್ಕೆ
ಹೊರೆಟಾಗಲೆಲ್ಲಾ ಇದೇ ಮಾತೇ
ಹೋಗಬೇಕು ತಡವಾಗುತ್ತಿದೆ.

ಪಾರ್ಕು, ಸಿನೇಮಾಗಳಲ್ಲಿ,
ಪ್ರಿಯಳ ತೆಕ್ಕೆಯಲ್ಲಿ
ಮೈ ಮರೆತಿರುವಾಗ,
ಮನೆ, ಮನೆಯಾಕೆ ನೆನಪಾಗಿ
ಮತ್ತೆ ಅದೇ ಮಾತು
ಹೋಗಬೇಕು ತಡವಾಗುತ್ತಿದೆ




*ಓಶೋ ಮಾತುಗಳ ಆಧರಿಸಿ ರಚಿಸಿದ್ದು*

·       ದುಃಖ ಮರೆಮಾಚಿಕೊಳ್ಳಲು ಕೆಲವರು
ಬಾರಿಗೆ ಹೋದರೆ, ಕೆಲವರು ಮಂದಿರಕ್ಕೆ ಹೋಗುತ್ತಾರೆ.
ಧರ್ಮಕ್ಕಿಂತ ದೊಡ್ಡ ಷರಾಬು ಬೇರೊಂದಿಲ್ಲ !

·       ನಾನುವಿನ ಅಬ್ಬರದಲಿ
ನೀನು ಕಳೆದುಹೋದೆ,
ನಿನ್ನ ಹುಡುಕಾಟದಲ್ಲಿ
ನಾನು ಕರಗಿಹೋದೆ,
ಎಲ್ಲಾ ನೀನೇ ಆಗಿದ್ದೆ!

·       ಚಿತ್ತಸರೋವರದಲ್ಲಿ
ಉಬ್ಬರವಿಳಿತ ಇದ್ದೇ ಇದೆ.
ಶಾಂತವಾಗುವ ದಾರಿ ಅಗೋಚರ!

·       ನಿನ್ನ ಹಿಂದೆ
ನಾನು ಬಂದಾಗ
ಬೆಳಕು
ಎಂದು ಗುರು ಹೇಳಿದಾಗ
ನಾನು
ಅರ್ಥಮಾಡಿಕೊಳ್ಳಲಿಲ್ಲ!
ನಿನ್ನ
ಹಿಂಬಲಿಸಲಿಲ್ಲ!
ಬೆಳಕು
ಕಾಣಲಿಲ್ಲ!


·       ಸುಮ್ಮನಿರು
ಸುಮ್ಮನೆ ಇರು ಎಂದು 
ಗುರು ಹೇಳಿದಾಗ
ಕೈ,ಕಾಲು ಆಡಿಸದೆ ಕುಳಿತೆ,
ಬಾಯಿ ಮುಚ್ಚಿ ಕುಳಿತೆ,
ಮನದೊಳಗಿನ ಮಾತು-ಕ್ರಿಯೆ
ನಿಲ್ಲಿಸಲೇ ಇಲ್ಲ ,
ನಾನು
ಸುಮ್ಮನಾಗಲೇ ಇಲ್ಲ
ನಾನು
ಸುಮ್ಮನಾದರೆ
ನೀನು
ಕಾಣಬಹುದು
ಎಂದ ಗುರುವಿನ ಮಾತು
ನಾನು
ಅರಿಯಲಿಲ್ಲ
೨೦೧೭



ತೊಟ್ಟು ಕಳಚಿದ ಮೇಲೆ
ಇನ್ನೇನು ಉಳಿದೀತು,
ಇದ್ದ ಗುರುತನು ಬಿಟ್ಟು.
ಹಣ್ಣಾದ ಎಲೆ ಉದುರಿ
ಎಳೆಚಿಗುರಿಗೆ ದಾರಿ.
ಚಿಗುರಿದಾಗ ಸಂತಸ,
ಕಳಚಿದಾಗ ದುಃಖ.
ಹುಟ್ಟು-ಸಾವಿನ ಆಟದ
ನಡುವಿನ ಬದುಕು
ಯಾತ್ರಿಕರಂತೆ
ಬಂದು ಹೋಗುವ
ಸಂಬಂಧಗಳು


Saturday, April 28, 2018


ನನ್ನ ದೇವರು

ಪತ್ರಂ, ಪುಷ್ಪಂ, ಫಲಂ , ತೋಯಂಗಳಲ್ಲೇ
ತಾ ತೃಪ್ತನಾಗುವವ ನನ್ನದೇವರು.

ಇವನಿಗಿಲ್ಲ ಹೊಟ್ಟೆಕಿಚ್ಚು,
ರಕ್ತಮಾಂಸಗಳನ್ನಂತೂ ಬೇಡುವುದೂ ಇಲ್ಲ
ಇವನಲ್ಲಿ ದೊಡ್ಡವರ ಸಣ್ಣತನವೂ ಇಲ್ಲ
ಸದಾ ಹಸನ್ಮುಖಿ, ನಾ ನೋಡುವ ವಿಗ್ರಹಗಳಲ್ಲಿ
ಭಿತ್ತಿಯಲ್ಲಿರುವ ಕ್ಯಾಲೆಂಡರುಗಳಲ್ಲಿ.

ಇವನಿಗೆ ಬಹುವಚನಗಳ ಹಂಗಿಲ್ಲ
ನಿರ್ಲಿಪ್ತ , ನಿರಂಜನ , ನಿರಂಹಂಕಾರ ಸ್ವರೂಪ, ಸ್ವಯಂಸಿದ್ಧ.
ನನ್ನೆಲ್ಲಾ ಬೇಡಿಕೆಗಳ ಪೂರೈಕೆದಾರ,
ತಂದೆ ತಾಯಿಗಿಂತ ಹೆಚ್ಚು, ಪ್ರೀತಿಸುವವಳಿಗಿಂತ ಮೆಚ್ಚು,
ನನ್ನ ಅಂತರಂಗದ ಗೆಳೆಯ , ಸಲಹೆಗಾರ,
ಸದಾ ಸರ್ವದಾ ನನ್ನ ಬೆನ್ನಿಗಿದ್ದೇ ಕಾಪಾಡುವ
ಸಂಬಳ ಬೇಡದ, ಗಿಂಬಳಕ್ಕಾಗಿ ಕಾಡದ ಬಾಡೀಗಾರ್ಡು!

ಎದುರುತ್ತರ ಹೇಳದ ಸಂಗಾತಿ,
ಮಾತುಮಾತಿಗೆ ಗದರದ ಅಪ್ಪ!
ಹಾಗಲ್ಲ ಹೀಗೆ ಎಂದು ಹೇಳದ ಅಮ್ಮ!
ರಾಮಾಯಣ ಮಹಾಭಾರತದ ಕಥೆ ಹೇಳಿ
ಕಲ್ಪನೆಯ ಬೀಜ ಬಿತ್ತಿದ ಅಜ್ಜ- ಅಜ್ಜಿ.
ಮೋಸಮಾಡದ ಬಂಧು- ಬಳಗ
ನನ್ನೊಳಗಿನ ನ್ಯಾಯಾಧೀಶ!  ನನ್ನದೇವರು.

ಅಕ್ಷರ ಹೇಳಿಕೊಟ್ಟು ಬದುಕಲು
ದಾರಿ ತೋರಿದ ಶಿಕ್ಷಕ,
ಬಿಸಿಲು ಮಳೆ ಗಾಳಿಗೆ ಅಂಜದ
ಕ್ರಿಯಾಶಾಲಿ ಕಾರ್ಮಿಕ,
ನೆಮ್ಮದಿಯ ನಿದ್ದೆಗೆ ಭಂಗಬರದಂತೆ
ದೇಶಕಾಯುವ ಸೈನಿಕ,
ಹೊತ್ತು ಹೊತ್ತಿಗೆ ಅನ್ನ ಸಿಗುವಂತೆ
ಮಾಡಿದ ರೈತ ನನ್ನ ದೇವರು.

ಕಾಲೆಳೆಯದ ಜೊತೆಗಾರ!
ಸ್ವಾತಂತ್ರ್ಯಕ್ಕೆ ಅಡ್ಡಿಮಾಡದ ಬಾಸ್!
ಕುಡಿದ ನೀರು ಕುಲುಕದಂತೆ
ಕರೆದೊಯ್ಯುವ ಚಾಲಕ
ನಿಷ್ಠಾವಂತ ಪೋಲಿಸ್
ತರಗತಿಯಲ್ಲಿ ಹೇಳಿದ್ದನ್ನೇ
ತಾಳ್ಮೆಯಿಂದಲಿ ಗ್ರಹಿಸಿ
ಉತ್ತಮ ಅಂಕ ಪಡೆವ
ವಿದ್ಯಾರ್ಥಿ ನನ್ನದೇವರು

ಮನಕೆ ಸಾಣೆಹಿಡಿದು, ಹೊಳಪು ನೀಡಿ,
 ಮನವ ರಂಜಿಸುವ ಕಲಾವಿದ ,
ಕಥೆಗಾರ, ಕವಿ- ನನ್ನದೇವರು.
ಸಾಂತ್ವಾನ ಹೇಳಿ ಕಣ್ಣೀರ ಒರೆಸಲು
ಅವಕಾಶ ನೀಡಿದ ನೊಂದ ಜೀವಿ ನನ್ನದೇವರು

ಗಾಳಿ, ಬೆಳಕು, ನೀರು , ಗಿಡ - ಮರ ,
ಪಶು - ಪಕ್ಷಿ, ಬೆಟ್ಟ ಗುಡ್ಡ, ನದಿ - ಸಮುದ್ರ ,
ಆಕಾಶ , ಈ ಭೂಮಿ, ಸೂರ್ಯ - ಚಂದ್ರ - ನಕ್ಷತ್ರಗಳು
ಎಲ್ಲಿ ನೋಡಲಲ್ಲಿ ನನ್ನದೇವರು... ನನ್ನ ದೇವರು... ನನ್ನದೇವರು. . .

1.ಒಳ್ಳೆಯವರಾಗಿರಿ ಆದರೆ ಅದನ್ನು ಸಾಬೀತುಪಡಿಸವಲ್ಲಿಯೇ 
ನಿಮ್ಮ ಜೀವನವನ್ನು ಮತ್ತು ಸಮಯವನ್ನು ವ್ಯರ್ಥ ಮಾಡಬೇಡಿ.

2.ನೀವೇ ನಿಮ್ಮ ಜೀವನದ ಚಾಲಕರು ಆ ಚಾಲನೆಯ ಅಧಿಕಾರವನ್ನು 
ಮತ್ತು ಆ ಸ್ಥಳವನ್ನು ಬೇರೆಯವರು ಕದಿಯಲು ಅವಕಾಶ ಮಾಡಿಕೊಡಬೇಡಿ.

3.ಯಾವತ್ತೂ ಬೆರೆಯವರಲ್ಲಿ ಕ್ಷಮೆ ಕೇಳಬೇಡಿ ಯಾಕೆಂದರೆ 
ಅವರು ನಿಮ್ಮ ಮಾತನ್ನು ತಪ್ಪು ಅರ್ಥ ಮಾಡಿಕೊಂಡರೆ 
ನೀವ್ಯಾಕೆ ಕ್ಷಮೆ ಕೇಳಬೇಕು.

4.ನಾವು ಒಂಟಿಯಾಗಿ ಇದ್ದರೆ ಅದರ ಅರ್ಥ ನಾವು 
ಒಂಟಿಯಾಗಿದ್ದೇವೆ ಎಂದು ಅಲ್ಲ.ಅದರ ಅರ್ಥ 
ನಾವು ಒಬ್ಬರೇ ಎಲ್ಲಾ ವಿಷಯಗಳನ್ನು 
ಎದುರಿಸುವ ಸಾಮರ್ಥ್ಯ ನಮಗಿದೆ ಎಂದು.

5.ಎಲ್ಲೇ ಆಗಲಿ ನೀವು ಒಂದೇ ತರದ ವ್ಯಕ್ತಿತ್ವವನ್ನು
 ಕಾಪಾಡಿಕೊಂಡು ಒಂದೇ ತರನಾದ ವ್ಯಕ್ತಿಯಾಗಿರಿ 
ಅದು ನಿಮ್ಮ ಸ್ವಂತ ವಿಷಯದಲ್ಲಾಗಲಿ,
ಸರ್ವಜನಿಕವಾಗಲಿ ಅಥವಾ ಖಾಸಗಿಯಾಗಲಿ.

ಸಮಯ ಉಳ್ಳವರು ತೀರ್ಥಯಾತ್ರೆಯ ಮಾಡುವರಯ್ಯಾ! 
ನಾನೇನಮಾಡಲಿ ಸಮಯವಿಲ್ಲದವನಯ್ಯಾ! 
ಇರುವಸ್ಥಳವೇ ಕೈಲಾಸ!! 
ಕುಡಿವನೀರೇ ಗಂಗೆ!! 
ಕೂಡಿ ತಿನ್ನುವಾನ್ನವೇ 
ದಾಸೋಹಪ್ರಸಾದವಯ್ಯಾ!!!
ಕೂಡಲಸಂಗಯ್ಯನ 
ಭಕ್ತರೆನ್ನ ಆತ್ಮಸಂಗಾತಿಗಳಯ್ಯ !!!
ವಿದ್ಯಾರಣ್ಯಪುರನಿವಾಸ 
ಶ್ರೀಕಂಠಕೇಳಯ್ಯ !!
ರತ್ತ ಅಣ್ಣ ರತ್ತ ಎಂದು ಬಳಿಬಂದ ಎರಡುವರ್ಷದ ಮಗಳು ತನ್ನ 
ಪುಟ್ಟಕೈಗಳನ್ನ ನನ್ನೆಡೆ ಚಾಚಿದಾಗ ಒಂದುಕ್ಷಣ ನಡುಗಿದ್ದೆ. 
ಅಂದು ಬೆಳಗ್ಗೆ ಶೇವ್ ಮಾಡಲಿಕ್ಕೆಂದು ತಂದಿದ್ದ ಬ್ಲೇಡ್ ಅವಳಕೈಲಿತ್ತು. 
ಅವಳ ಮುಖದಲ್ಲಿ ಗಾಬರಿ ಕಂಡು, ಬೈಯದೆ 
ಮೆಲ್ಲನೆ ಬ್ಲೇಡ್ ಕೆಳಗೆಹಾಕಲು ಸೂಚಿಸಿದೆ ಅಂತೆಯೇ ಅವಳು 
ಅದನ್ನ ಕೆಳಕ್ಕೆ ಬಿಸಾಡಿದಳು. ಕೂಡಲೇ ಅವಳನ್ನೆತ್ತಿಕೊಂಡು 
ಸಿಂಕ್ ಬಳಿಗೆ ಓಡಿದೆ. ನಲ್ಲಿಬಿಟ್ಟು ತಿಳಿನೀರಲ್ಲಿ ಕೈತೊಳೆದಾಗ
 ಬ್ಲೇಡ್ ಅವಳ ಅಂಗೈಯಲ್ಲಿ ಸಣ್ಣಗುರುತನ್ನ ಮೂಡಿಸಿತ್ತು. 
ಚಿನ್ನಾ ಬ್ಲೇಡು,ಚಾಕು,ಸೂಜಿ ಮುಟ್ಟಬಾರದು ಅಂದಾಗ 
ಅವಳು ಹೂ ಗುಟ್ಟಿದಳು. ಬ್ಲೇಡನ್ನ ಹೇಗೆ
 ಹಿಡಿದುಕೊಳ್ಳಬೇಕು,ಹೇಗೆ ಚಾಕು 
ಹಿಡಿದುಕೊಳ್ಳಬೇಕು ಎಂಬುದನ್ನು ತಿಳಿಸಿದಾಗ
 ಅವಳಕಣ್ಣು ಅರಳಿತು. ಆ ಅರಳಿದ ಕಣ್ಣು 
ಇವತ್ತು ಕೋಪತೋರುತ್ತಾ ನನ್ನ ಕೈ ಒರೆಸುತ್ತಿದೆ .
 ನನ್ನ ನಡುಗುವ ಕೈಬೆರಳು ಬ್ಲೇಡ್ ತಾಗಿ ಕೊಯ್ದಿತ್ತು. 
ಎದೆಯುದ್ದಕ್ಕೆ ಬೆಳೆದ ಮಗಳ ಕೈ ಅರಿಶಿನ ಒತ್ತುತ್ತಾ ಇತ್ತು .
ಪರರಚಿಂತೆ ಎಮಗೇಕಯ್ಯ, ಎಮ್ಮ ಚಿಂತೆಯೇ ಎಮಗೆ ಹಾಸಲುಂಟು, 
ಹೊದೆಯಲುಂಟು, ನೆರಮನೆಯವರ ದುಃಖಕ್ಕೆ ಅಳುವವರ ಮೆಚ್ಚ 
ನಮ್ಮ ಕೂಡಲಸಂಗಮದೇವ.  
ಕಲಬೇಡ, ಕೊಲಬೇಡ, 
ಹುಸಿಯ ನುಡಿಯಲು ಬೇಡ,ತನ್ನ ಬಣ್ಣಿಸಬೇಡ, 
ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ ,
ಇದೇ ಬಹಿರಂಗ ಶುದ್ಧಿ , ಇದೇ ಕೂಡಲಸಂಗನ ಒಲಿಸುವ ಪರಿ 
ಎಂಬ ಬಸವಣ್ಣನವರ ವಚನದಂತೆ
ನಾವು ಇತರರ ವಿಷಯದಲ್ಲಿ ತಲೆಹಾಕದೆ, 
ನಮ್ಮೊಳಗಿನ ಶತ್ರುಗಳಾದ ಕಾಮ, ಕ್ರೋಧ, 
ಲೋಭ, ಮೋಹ, ಮಧ, ಮತ್ಸರಗಳನ್ನು ಕಡಿಮೆ
 ಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿರುತ್ತೇವೋ 
ಆಗ ಗುರುವಿನ ಅನುಗ್ರಹ ಲಭ್ಯವಾಗುತ್ತದೆ. 
ಹೃದಯ ಪರಿಶುದ್ಧಗೊಳ್ಳುತ್ತದೆ. ಮೋಕ್ಷ ಸಿದ್ಧಿಯಾಗುತ್ತದೆ.
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ, 
ಬಿತ್ತಿದಂತೆ ಬೆಳೆ,
 ಮಾಡಿದ್ದುಣ್ಣೋ ಮಹರಾಯ ಎಂಬ ಮಾತುಗಳು 
ನಮಗೆ ದಾರಿದೀಪವಾಗುವಂತ ಮಾತುಗಳಾಗಿವೆ . 
ಮಾತು, ಧ್ಯಾನ, ಪೂಜೆ, ಸೇವೆ ಎಲ್ಲ ವಿಚಾರಗಳಲ್ಲಿ 
ಹೇಗೆ ವರ್ತಿಸುತ್ತೇವೆ ಅದಕ್ಕೆ ತಕ್ಕಂತೆ ಫಲವನ್ನು ಪಡೆಯುತ್ತೇವೆ.
 ಬೇವಿನ ಬೀಜವ ಬಿತ್ತಿ ಮಾವಿನಬೆಳೆ ಬೆಳೆಯಲಾಗದು. 
ಬಿತ್ತಿದಂತೆ ಬೆಳೆ, ಮಾಡಿದ್ದುಣ್ಣೋ ಮಹರಾಯ 
ಎಂಬ ಮಾತಿನಂತೆ ನಾವು ಮಾಡಿದ್ದನ್ನು ಅನುಭವಿಸಲೇ ಬೇಕು. 
ಯದ್ಭಾವಂ ತದ್ಭವತಿ ನಮ್ಮ ಭಾವ 
ಹೇಗಿರುತ್ತದೆಯೋ ಹಾಗೆ ನಮ್ಮ ಪರಿಸರ,
 ಸಮಸ್ಯೆ, ಸುಖ-ದುಃಖ ಎಲ್ಲವೂ ಬದಲಾಗುತ್ತದೆ.
ಭದ್ರಮ್ಮಾಶ್ರಮದೊಳು 
ವಾಸುದೇವಾಚಾರ್ಯರ 
ಪದತಲದಲ್ಲಿ ಕುಳಿತು
 ಧ್ಯಾನ,ಯೋಗ,ಪ್ರಾಣಾಯಾಮವ 
ಕಲಿತು ಯೋಗಿಯಾಗುವ ಅಸೆಯಯ್ಯಾ!!
ಅಲಸ್ಯ,ಸಮಯ ಅಭಾವ,
ನಿದ್ರಾಯೋಗಗಳೆಂಬ 
ತ್ರಿವಿಧಗಳಿಂದ ಬಾಧಿತನಯ್ಯಾ,
ಬಸ್ಸಲಿ ನಿಂತು ದೇಹಭಂಗಿಯ 
ಬದಲಿಸುವುದೇ ಯೋಗವಾಗಿ,
 ಕುಳಿತು ತೂಕಡಿಸುವುದೇ ಧ್ಯಾನವಾಗಿ, 
ಕಛೇರಿಯ ಮೆಟ್ಟಿಲ ಹತ್ತಿ ಇಳಿವಾ
ಪ್ರಾಣಾಯಾಮ ವಾಗಿದೆಯಯ್ಯಾ 
ಪತಂಜಲಿಶಾಖಾ ಒಡೆಯಾ 
ವಾಸುದೇವಾ ಎನ್ನಕಾಪಾಡು ಗುರುವೇ
ಒಂದೊಂದ್ ಹಣ್ಣೆಲೆ ಉದ್ರಿದಾಗ್ಲೆಲ್ಲ
 ಬೀಜ ಮೊಳೀತದೇನೋ 
ಅಂತ ನೆಲ ನೋಡ್ತಿದ್ದೆ . 
ಹೊಲ ಏನೋ ಹಸನಾಗೇ ಇದೆ. 
ಅಲ್ಲಿ ಇಲ್ಲಿ ಸ್ವಲ್ಪ ಮಟ್ಟಿಗೆ ಕಳೇನೂ ಬೆಳೆದಿದೆ. 
ಬೀಜ ಬಿತ್ತಿದ್ದರೆ ತಾನೇ. 
ಬೀಜ ಬಿತ್ತೋಕೆ ಸಮಯಾನೂ ಇಲ್ಲ,
ಮನಸ್ಸೂ ಇಲ್ಲ. 

ಯಾವತ್ತೋ ಬಿತ್ತಿದ ಬೀಜ 
ಇನ್ನೂ ಅಲ್ಲೇ ಇರ್ತದೆ ಅಂತೀಯಾ 
ಬೇರೆಯವ್ರ ಹೊಲಗದ್ದೆ ನಳನಳಿಸ್ತಾ ಇದೆ. 
ಯಾರೋ ಕೋಟ್ಯಾಧೀಶ ಆದ್ರೆ 
ನಿನ್ಗೇನ್ ಹೊಟ್ಟೆಉರಿ. 
ಹೆತ್ತೋರಿಗಷ್ಟೇಗೊತ್ತು, 
ಹೆರಿಗೆಸಂಕಟ.
 ನೋಡೋರಿಗೇನು?
 ಹೊಲಸನಾಲ್ಗೆ 
ಏನೇನೋ ಬಾಚತ್ತೆ
ಕರವಜೋಡಿಸ ಬನ್ನಿ
ಈ ರಾಷ್ಟ್ರಕಾರ್ಯದಲಿ
ಜೀವನದಿಗಳ ರಕ್ಷಿಸಲು
ಒಂದಾಗಿ ಬನ್ನಿ !!


ತುಂಗಭದ್ರೆಕಾವೇರಿಯರ
ವರದ ವಾರಾಹಿ ಹೇಮಾವತಿಯರ
ಶರಾವತಿ ಅರ್ಕಾವತಿ ಅಘನಾಶಿನಿಯರ
ಕಬಿನಿ ಕಾಳಿ ಕುಮುಧ್ವತಿಯರ
ಶಾಂಭವಿಯೋ ಶಾಲ್ಮಲೆಯೋ
ಯಾರಾದರೇನಂತೆ 
ಜೀವ ನದಿಗಳ ಜೀವ 
ಉಳಿಸಲು ಒಂದಾಗಿ ಬನ್ನಿ!!

ಮರಗಳಿಲ್ಲದೆ ಮಳೆಯಿಲ್ಲ 

ಮಳೆಯಿಲ್ಲದೆ ನದಿಗಳಿಲ್ಲ
ನದಿಗಳಿಲ್ಲದೆ ಜೀವನವಿಲ್ಲ 

ಕೊರಗುತಿಹುದುಜಗವೆಲ್ಲ 
ಸೊರಗುತಿಹುದುಇಳೆಯೆಲ್ಲ
ನಾಡಹಸಿವ ಕಳೆಯಲು 
ಪರಿಸರವಉಳಿಸಿ 
ಬೆಳೆಸೋಣ ನಾವೆಲ್ಲ 
ಕರವ ಜೋಡಿಸಬನ್ನಿ
ಈ ರಾಷ್ಟ್ರಕಾರ್ಯದಲಿ
ಜೀವನದಿಗಳ ಉಳಿಸಲು 
ಒಂದಾಗಿ ಬನ್ನಿ
🌿ಜಾತಿ🌿

ಗೆಳೆಯ ನೀನು ಯಾವಜಾತಿ?
ಹೌದು ಸರಿಯಾಗಿಯೇ ಕೇಳಿಸಿಕೊಂಡೆ, 
ಪ್ರಶ್ನೆ ನೇರವಾಗಿಯೇ ಇದೆ.
ನೀನು ಯಾವಜಾತಿ?
ಬ್ರಾಹ್ಮಣನೋ? ಕ್ಷತ್ರಿಯನೋ?

ವೈಶ್ಯನೋ? ಶೂದ್ರನೋ? 
ಈ ನಾಲ್ಕರೊಳಗೆ ನೀನಾವಜಾತಿ? 

ನೀನು ಯಾವ ಜಾತಿ?

ಧ್ಯಾನ ಪ್ರಾಣಾಯಾಮಗಳೆಂಬ

 ನೇಗಿಲು- ಎತ್ತುಗಳಿಡಿದು
ದೇಹವೆಂಬ ಹೊಲವ ಉತ್ತಿ,

 ದ್ವೇಷ ಅಸೂಯೆಗಳೆಂಬ ಕಳೆಯಕಿತ್ತು, 
ಜ್ಞಾನ ವೆಂಬ ಬೀಜಬಿತ್ತಿ,
 ಜ್ಞಾನದ ಬೆಳೆಯ ಬೆಳೆಯುವ ಶೂದ್ರನೋ?

ಸತ್ವ ರಜ ತಮಗಳೆಂಬ ಕಳ್ಳರಿಂದ 

ಜ್ಞಾನ ಸಂಪತ್ತನ್ನು ಕಾಯ್ದುಕೊಂಡು, 
ಯೋಗಸಾಧನೆ ಮಾಡಿಕೊಂಡು
 ಕಫವಾತಪಿತ್ತಗಳ 
ಸಮತೋಲದಲ್ಲಿರಿಸಿಕೊಂಡು 
ಮೆರೆವ ವೈಶ್ಯನೋ?

ಕಾಮಾದಿ ಅರಿ 

ಷಡ್ವರ್ಗಗಳೊಂದಿಗೆ ಹೋರಾಡಿ,
 ಸತ್ವ ರಜತಮೋಗುಣಗಳೆಂಬ 
ಕಳ್ಳರನ್ನು ಬಡಿದು ಸೆರೆಯೊಳಿಟ್ಟು 
ವಿರಾಜಮಾನನಾದ ಕ್ಷತ್ರಿಯನೋ?

ಶೂದ್ರ ಉತ್ತಿಬೆಳೆದ, 

ವೈಶ್ಯನಿಂದ ತೆಗೆದುಕೊಂಡ, 
ಕ್ಷತ್ರಿಯನು ಕಾಪಾಡಿದ 
ಜ್ಞಾನದ ಅಮೃತವನ್ನು 
ಮನಸ್ಸಿನ ಅಡುಗೆಮನೆಯಲ್ಲಿರಿಸಿ
 ಪ್ರಸಾದವನ್ನಾಗಿಸಿ 
ಎಲ್ಲರೊಡಗೂಡಿ ಉಣ್ಣುವ ,
 ಬ್ರಹ್ಮ ಜ್ಞಾನ ಹಂಚುವ ಬ್ರಾಹ್ಮಣನೋ?
ಹೇಳು ಗೆಳೆಯ, 

ನೀನಾವ ಜಾತಿ? 
ನೀನು ಯಾವ ಜಾತಿ?