Saturday, April 28, 2018


ನನ್ನ ದೇವರು

ಪತ್ರಂ, ಪುಷ್ಪಂ, ಫಲಂ , ತೋಯಂಗಳಲ್ಲೇ
ತಾ ತೃಪ್ತನಾಗುವವ ನನ್ನದೇವರು.

ಇವನಿಗಿಲ್ಲ ಹೊಟ್ಟೆಕಿಚ್ಚು,
ರಕ್ತಮಾಂಸಗಳನ್ನಂತೂ ಬೇಡುವುದೂ ಇಲ್ಲ
ಇವನಲ್ಲಿ ದೊಡ್ಡವರ ಸಣ್ಣತನವೂ ಇಲ್ಲ
ಸದಾ ಹಸನ್ಮುಖಿ, ನಾ ನೋಡುವ ವಿಗ್ರಹಗಳಲ್ಲಿ
ಭಿತ್ತಿಯಲ್ಲಿರುವ ಕ್ಯಾಲೆಂಡರುಗಳಲ್ಲಿ.

ಇವನಿಗೆ ಬಹುವಚನಗಳ ಹಂಗಿಲ್ಲ
ನಿರ್ಲಿಪ್ತ , ನಿರಂಜನ , ನಿರಂಹಂಕಾರ ಸ್ವರೂಪ, ಸ್ವಯಂಸಿದ್ಧ.
ನನ್ನೆಲ್ಲಾ ಬೇಡಿಕೆಗಳ ಪೂರೈಕೆದಾರ,
ತಂದೆ ತಾಯಿಗಿಂತ ಹೆಚ್ಚು, ಪ್ರೀತಿಸುವವಳಿಗಿಂತ ಮೆಚ್ಚು,
ನನ್ನ ಅಂತರಂಗದ ಗೆಳೆಯ , ಸಲಹೆಗಾರ,
ಸದಾ ಸರ್ವದಾ ನನ್ನ ಬೆನ್ನಿಗಿದ್ದೇ ಕಾಪಾಡುವ
ಸಂಬಳ ಬೇಡದ, ಗಿಂಬಳಕ್ಕಾಗಿ ಕಾಡದ ಬಾಡೀಗಾರ್ಡು!

ಎದುರುತ್ತರ ಹೇಳದ ಸಂಗಾತಿ,
ಮಾತುಮಾತಿಗೆ ಗದರದ ಅಪ್ಪ!
ಹಾಗಲ್ಲ ಹೀಗೆ ಎಂದು ಹೇಳದ ಅಮ್ಮ!
ರಾಮಾಯಣ ಮಹಾಭಾರತದ ಕಥೆ ಹೇಳಿ
ಕಲ್ಪನೆಯ ಬೀಜ ಬಿತ್ತಿದ ಅಜ್ಜ- ಅಜ್ಜಿ.
ಮೋಸಮಾಡದ ಬಂಧು- ಬಳಗ
ನನ್ನೊಳಗಿನ ನ್ಯಾಯಾಧೀಶ!  ನನ್ನದೇವರು.

ಅಕ್ಷರ ಹೇಳಿಕೊಟ್ಟು ಬದುಕಲು
ದಾರಿ ತೋರಿದ ಶಿಕ್ಷಕ,
ಬಿಸಿಲು ಮಳೆ ಗಾಳಿಗೆ ಅಂಜದ
ಕ್ರಿಯಾಶಾಲಿ ಕಾರ್ಮಿಕ,
ನೆಮ್ಮದಿಯ ನಿದ್ದೆಗೆ ಭಂಗಬರದಂತೆ
ದೇಶಕಾಯುವ ಸೈನಿಕ,
ಹೊತ್ತು ಹೊತ್ತಿಗೆ ಅನ್ನ ಸಿಗುವಂತೆ
ಮಾಡಿದ ರೈತ ನನ್ನ ದೇವರು.

ಕಾಲೆಳೆಯದ ಜೊತೆಗಾರ!
ಸ್ವಾತಂತ್ರ್ಯಕ್ಕೆ ಅಡ್ಡಿಮಾಡದ ಬಾಸ್!
ಕುಡಿದ ನೀರು ಕುಲುಕದಂತೆ
ಕರೆದೊಯ್ಯುವ ಚಾಲಕ
ನಿಷ್ಠಾವಂತ ಪೋಲಿಸ್
ತರಗತಿಯಲ್ಲಿ ಹೇಳಿದ್ದನ್ನೇ
ತಾಳ್ಮೆಯಿಂದಲಿ ಗ್ರಹಿಸಿ
ಉತ್ತಮ ಅಂಕ ಪಡೆವ
ವಿದ್ಯಾರ್ಥಿ ನನ್ನದೇವರು

ಮನಕೆ ಸಾಣೆಹಿಡಿದು, ಹೊಳಪು ನೀಡಿ,
 ಮನವ ರಂಜಿಸುವ ಕಲಾವಿದ ,
ಕಥೆಗಾರ, ಕವಿ- ನನ್ನದೇವರು.
ಸಾಂತ್ವಾನ ಹೇಳಿ ಕಣ್ಣೀರ ಒರೆಸಲು
ಅವಕಾಶ ನೀಡಿದ ನೊಂದ ಜೀವಿ ನನ್ನದೇವರು

ಗಾಳಿ, ಬೆಳಕು, ನೀರು , ಗಿಡ - ಮರ ,
ಪಶು - ಪಕ್ಷಿ, ಬೆಟ್ಟ ಗುಡ್ಡ, ನದಿ - ಸಮುದ್ರ ,
ಆಕಾಶ , ಈ ಭೂಮಿ, ಸೂರ್ಯ - ಚಂದ್ರ - ನಕ್ಷತ್ರಗಳು
ಎಲ್ಲಿ ನೋಡಲಲ್ಲಿ ನನ್ನದೇವರು... ನನ್ನ ದೇವರು... ನನ್ನದೇವರು. . .

No comments:

Post a Comment