Saturday, April 28, 2018


ಸತ್ಯಕಾಮ ಜಾಬಾಲಿ

ಪುಟ್ಟಬಾಲಕ, ಗುರು ಹಾರಿದ್ರುಮರ ಗುರುಕುಲದ ಬಾಗಿಲಲ್ಲಿ ಕೈಮುಗಿದು ನಿಂತಿದ್ದಾನೆ. ಕುಲಪತಿಗಳು ಯಜ್ಞಶಾಲೆಯ ಬಾಗಿಲಬಳಿಯಲ್ಲಿ ನಿಂತಿದ್ದಾರೆ. ಅವರು ಬಾಲಕನೆಡೆಗೆ ನೋಡುತ್ತಾ ಕುತೂಹಲದಿಂದ, ಮೆಲುಮಾತಿನಲ್ಲಿ
“ವತ್ಸಾ  ಯಾರು ನೀನು? ಏಕೆ ಬಂದೆ”?
ಎಂದುಕೇಳುತ್ತಲೇ ಗುರುವಿನ ಅನುಗ್ರಹಕ್ಕೆ ಕಾದಿದ್ದವನಂತೆ
“ಭಗವನ್ ನಾನು ಸತ್ಯಕಾಮ, ತಮ್ಮಬಳಿ ಶಿಷ್ಯವೃತ್ತಿಮಾಡುವ ಅಭಿಲಾಶೆಯಿಂದ ಬಂದಿದ್ದೇನೆ” ಅನುಗ್ರಹಿಸಬೇಕು
ಎಂದು ವಿನಯಪೂರ್ವಕವಾಗಿ ಬಾಗಿ ನಮಸ್ಕರಿಸುತ್ತಾ ಹೇಳಿದ ಮಗುವನ್ನು ಪ್ರೀತಿಯಕಂಗಳಿಂದ ನೋಡುತ್ತಾ
“ವತ್ಸಾ ನಿನ್ನ ಗೋತ್ರವಾವುದು”?
ಅಷ್ಟೇ ವಿನಯದಿಂದ
“ಭಗವನ್ ನನ್ನ ಗೋತ್ರಯಾವುದೆಂದು ನನಗೆ ತಿಳಿಯದು.”
ಯಾವುದೇ ಅಳುಕು ಹಿಂಜರಿಕೆಯಿಲ್ಲದೆ ನುಡಿದ ಮಗುವಿನ ಮಾತುಕೇಳಿ ಸಹಜವಾಗಿಯೇ
“ನಿನ್ನ ತಂದೆಯವರನ್ನು ಕೇಳಿಕೊಂಡು ಬಾ” ಎಂದಾಗ, 
ಕೈಮುಗಿದೇ “ಭಗವನ್ ನನ್ನ ತಂದೆ ಯಾರೆಂದು ನನಗೆ ತಿಳಿಯದು, ಇದುವರೆಗೆ ನಾನು ಅವರನ್ನು ಕಂಡಿಲ್ಲ, ಮನೆಯಲ್ಲಿ ನನ್ನ ತಾಯಿಮಾತ್ರವೇ ಇರುವುದು”.
“ಹಾಗಾದರೆ ತಾಯಿಯನ್ನೇ ಕೇಳಿಕೊಂಡು ಬಾ ಮಗು” ಎಂದಕೂಡಲೇ ಅವರಿಗೆ ನಮಸ್ಕರಿಸಿ, ಮನೆಗೆ ಬಂದ ಮಗನನ್ನು ಕಂಡು ಗಾಬರಿ, ಆತಂಕಗಳಿಂದ
“ಮಗು ಗುರುಗಳು ನಿನ್ನನ್ನು ಗುರುಕುಲಕ್ಕೆ ಸೇರಿಸಿಕೊಳ್ಳಲಿಲ್ಲವೇ ? ಏಕೆ ಹಿಂದಿರುಗಿಬಂದೆ? ಏನಾಯಿತು? ಯಾರಾದರೂ ಏನಾದರೂ ಹೇಳಿದರೆ”?
 ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದಳು. ಅವಳ ಪ್ರಶ್ನೆಗಳಿಗೆಲ್ಲಾ ಉತ್ತರವೆಂಬಂತೆ,
ಅಮ್ಮಾ “ನನ್ನ ತಂದೆ ಯಾರು? ನನ್ನ ಗೋತ್ರಯಾವುದು”? ಎಂದು ಗುರುಗಳು ಕೇಳಿದರು “ಗೊತ್ತಿಲ್ಲ” ಎಂದೆ ತಿಳಿದು ಬಾ ಎಂದರು, ಮನೆಗೆ ಬಂದೆ” ಎಂದ. ಒಂದುಕ್ಷಣ ಗಂಭೀರಳಾದ ತಾಯಿ ಜಬಲಾ,ತನ್ನ ನೆನಪಿನ ಗಣಿಗೆ ಕೈ  ಹಾಕಿದ್ದಳು.  ಬಹಳ ವರ್ಷಗಳ ಹಿಂದೆ ನಾನು ನನ್ನ ತಂದೆ ತಾಯಿಗಳೊಂದಿಗೆ ಕಾಡಿನಲ್ಲಿ ಇದ್ದಾಗ ಎಲ್ಲಿಂದಲೋಬಂದ ಸೈನಿಕರು ನಮ್ಮನ್ನೆಲ್ಲಾ ದನಗಳಹಾಗೆ ಯಾವುದೋರಾಜನ ಮನೆಗೆ ಎಳೆದೊಯ್ದರು. ಈ ಗಲಾಟೆಯಲ್ಲಿ ನನ್ನವರೆಲ್ಲಾ ಬೇರೆಯಾದರು . ಅರಮನೆಯ ಸೇವೆಯಕೆಲಸ ನನ್ನದಾಯಿತು. ಅದಾಗಿ ಕೆಲತಿಂಗಳಾದಮೇಲೇ ಅದಾವುದೋ ಯಜ್ಞವನ್ನು ನರವೇರಿಸಲು ಅನೇಕ ಋಷಿಮುನಿಗಳು , ಬ್ರಾಹ್ಮಣರೂ ಆಗಮಿಸಿದ್ದರು.ಹಲವಾರುದಿನಗಳು ನರವೇರಿದ ಆ ಯಜ್ಞದಲ್ಲಿ ಭಾಗವಹಿಸಿದ ಎಲ್ಲರಿಗೂ ಧನಕನಕಗೋವುಗಳನ್ನು ದಾಸದಾಸಿಯರನ್ನು ದಾನವಾಗಿ ಕೊಡಲ್ಪಡಲಾಯಿತು, ಹಾಗೆ ನಾನೂ ದಾನವಾಗಿ ಈ ಮನೆಯ ಗೃಹಸ್ವಾಮಿಗಳಿಗೆ ಕೊಡಲ್ಪಟ್ಟೆ. ದಾಸಿಯಾಗಿ ಬಂದನಾನು ಮನೆಯಮಗಳಾಗಿ ಇದ್ದೇನೆ. ಗೃಹಸ್ವಾಮಿಗಳು ಗೃಹಸ್ವಾಮಿನಿಯವರು ಎಂದೋ ಒಮ್ಮೆ ಹೇಳುತ್ತಿದ್ದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಇರುವುದಷ್ಟೇ ನನ್ನ ಕೆಲಸವಾಗಿತ್ತು. ದಿನನಿತ್ಯ ಗೃಹಸ್ವಾಮಿಗಳು ಹೇಳಿಕೊಳ್ಳುತ್ತಿದ್ದ ಮಂತ್ರಗಳು ನನ್ನ ಮನಸ್ಸನ್ನು ಅಯಾಸ್ಕಾಂತದ ಹಾಗೆ ಹಿಡಿದುಬಿಟ್ಟಿತ್ತು. ಕದ್ದುಮುಚ್ಚಿ ಕೇಳುತ್ತಿದ್ದೆ ಒಮ್ಮೆ ಅವರು ನನ್ನನ್ನು ಕರೆದು ನಿನಗೆ ಮಂತ್ರ ಕೇಳುವುದು ಇಷ್ಟವೆನಿಸಿದರೆ ಇಲ್ಲಿ ಕುಳಿತು ಕೇಳು , ಕದ್ದು ಮುಚ್ಚಿ ಕೇಳಬೇಡ ಎಂದು ಹೇಳಿದ್ರು ಅವ್ರು ಮಂತ್ರಹೇಳುವಾಗ ಅಲ್ಲಿಯೇ ಕುಳಿತುಕೊಳ್ಳುತ್ತಿದ್ದೆ. ಹೀಗೇ ಕಾಲ ಕಳೀತಿತ್ತು ಒಮ್ಮೆ ಈ ಆಶ್ರಮಕ್ಕೆ ಅನೇಕ ಜನ ಋಷಿಗಳು ಬಂದರು. ಗೃಹಸ್ವಾಮಿಗಳು ನನ್ನನ್ನು ಕರೆದು ಋಷಿಗಳ ಸೇವೆಮಾಡು ಯಾವುದಕ್ಕೂ ಲೋಪವಾಗಬಾರದು ಎಂದರು. ಕುಟೀರ ಕಸಗುಡಿಸಿ ಸಾರಿಸಿ ದೀಪ ಹಚ್ಚಿಡುವುದಷ್ಟೇ ನನ್ನ ಕೆಲಸವಾಗಿತ್ತು. ಬಂದ ಋಷಿಗಳೆಲ್ಲಾ ಬಹಳಹೊತ್ತು ಯಾಗಶಾಲೆಯಲ್ಲೇ ಮಾತನಾಡುತ್ತಾ ಕುಳಿತಿದ್ದರು. ಬಹಳಾ ಹೊತ್ತಾದಮೇಲೆ ಅಗ್ನಿಯಂತೆ  ಹೊಳೆಯುತ್ತಿದ್ದಋಷಿಯೊಬ್ಬರು ಕುಟೀರಕ್ಕೆ ಬಂದರು . ನನ್ನನ್ನೊಮ್ಮೆ ನೋಡಿದರು “ನನ್ನ ಸೇವೆ ಬಯಸಿದರು” ಯಾವ ಸೇವೆಯೂ ಲೋಪವಾಗದ ಹಾಗೆ “ಸೇವೆಸಲ್ಲಿಸಿದೆ”. “ಅವರು ಹೋದರು, ನೀನು ಜನಿಸಿದೆ”. ಇಷ್ಟೇ ನನಗೆ ಗೊತ್ತಿರುವುದು , ಆನಂತರ ನಿನ್ನ ನಾಮಕರಣ ವಾಯಿತು. ಗೃಹಸ್ವಾಮಿಗಳು ನನ್ನ ಕಥೆಯನ್ನು ತಿಳಿದವರು “ಸತ್ಯನಿನ್ನನ್ನು, ನಿನ್ನ ಮಗನನ್ನು ಕಾಪಾಡುವುದು” ಎಂದು ನಿನಗೆ “ಸತ್ಯಕಾಮ” ಎಂದು ಹೆಸರಿಟ್ಟರು. ನೀನು ಜಬಲಾಳ ಮಗ . ಹಾಗಾಗಿ “ಸತ್ಯಕಾಮ ಜಾಬಾಲಿ” ಇಷ್ಟೇ ನನಗೆ ತಿಳಿದಿರುವುದು ಎಂದಳು. ಮಗ ಅಮ್ಮನಿಗೆ ನಮಸ್ಕರಿಸಿ ಗುರುಕುಲಕ್ಕೆ ಓಡಿದ. ಯಜ್ಞಶಾಲೆಯ ಬಳಿ ಇದ್ದ ಅರಳಿವೃಕ್ಷದ ಬಳಿ ಧ್ಯಾನಾಸಕ್ತರಗಿದ್ದ ಕುಲಪತಿಗಳು ಕಣ್ತೆರೆದರು . ತಾಯಿಹೇಳಿದುದನ್ನೆಲ್ಲಾ ತಿಳಿಸಿದ. ಯಾಗಶಾಲೆಗೆ ಬರುವಂತೆ ಸನ್ನೆಮಾಡಿ ಅಗ್ನಿಮಂತ್ರಹೇಳಿ ಸಮಿತ್ತುಗಳನ್ನು ಸತ್ಯಕಾಮನಿಗೆ ಕೊಟ್ಟು ಅಗ್ನಿಗೆ ಅರ್ಪಿಸಲು ಹೇಳಿದರು. ಅಂತೆಯೇ ಅಗ್ನಿಗೆ ಅರ್ಪಿಸಿ ಕೈಮುಗಿದ.
ತಿಂಗಳಾಯಿತು  ಗುರುಗಳು ಏನನ್ನೂ ಹೇಳಿಕೊಡಲಿಲ್ಲ ಸತ್ಯಕಾಮನಿಗೆ ಬೇಸರ, ನಾನು ಇತರಮಕ್ಕಳಂತೆ ಉತ್ತಮಕುಲದಲ್ಲಿ ಜನಿಸಿಲ್ಲವಾದಕಾರಣ ಗುರುಗಳು ನನಗೆ ಏನನ್ನೂ ಕಲಿಸುತ್ತಿಲ್ಲ,ಕಡೇ ಪಕ್ಷ ಕಸಗುಡಿಸು, ಸಮಿತ್ತು ಆರಿಸಿ ತಾ, ಗೋವುಗಳಿಗೆ ನೀರು ಹುಲ್ಲು ನೀಡು ಎಂದೂ ಹೇಳುತ್ತಿಲ್ಲ. ಇತರ ಶಿಷ್ಯವರ್ಗಕ್ಕೆ ಏನೆಲ್ಲಾ ಹೇಳುತ್ತಾರೆ,  ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ್ದೇಕೆ? ಏನುಮಾಡಲಿ?, ಇರಲೋ ?ಹೋಗಲೋ? ಇದೇ ಗೊಂದಲದಲ್ಲಿ ಒಮ್ಮೆ ಆಶ್ರಮ ಬಿಟ್ಟು ಹೊರನಡೆದ ,   “ವತ್ಸಾ ಎಲ್ಲಿಗೆ ಹೊರಟೆ”? ಗುರುಗಳ ಧ್ವನಿ ಹಿಂಬಾಲಿಸಿತು. ಹಿಂದೆಯೇ ನಿಂತು ತನ್ನನ್ನೇ ನೋಡುತ್ತಿದ್ದ ಗುರುಗಳ ಬಳಿ ಮನದ ಸಂಶಯವನ್ನೆಲ್ಲಾ ತೋಡಿಕೊಂಡ. ಗುರುಗಳು ನಕ್ಕರು. ಮಗು ಕಲಿಕೆ ಎಂಬುದು ಕೇಳುವುದರಿಂದಲೋ, ಹೇಳುವುದರಿಂದಲೋ ಬಾರದು ಕಾಣುವಿಕೆಯಿಂದ ಬರುತ್ತದೆ. ಈ ವೇಳೆಗೆ ಇಲ್ಲಿರುವ ಗಿಡ ಮರ ಕುಟೀರಗಳೆಲ್ಲ ಮಹರ್ಷಿಗಳಾಗಬೇಕಿತ್ತು. “ಎಲ್ಲವನ್ನು ಕಾಣುವ ಕಣ್ಣು ನಿನ್ನದಾಗಲಿ” ಎಂದು ಇಷ್ಟುದಿನ ಕಾದೆ. ನಾಳೆ ಬೆಳಗ್ಗೆ ಗೋ ಶಾಲೆ ಬಳಿ ಬಾ, ನಿನ್ನ ವಿದ್ಯಾಭ್ಯಾಸ ಅಲ್ಲಿಂದ ಆರಂಭ ಎಂದಕೂಡಲೇ ಸಾಷ್ಟಾಂಗ ನಮನ ಸಲ್ಲಿಸಿದ. ಬೆಳಗಾಯಿತು. ನಿತ್ಯಕರ್ಮಗಳನ್ನೆಲ್ಲಮುಗಿಸಿ ಗೋಶಾಲೆ ಬಳಿಗೆ ಓಡಿದ. ಗುರುಗಳು ಆಶ್ರಮದ ನೂರಾರು ಗೋವುಗಳನ್ನು ಒಂದೆಡೆ ನಿಲ್ಲಿಸಿದ್ದರು ಮೇಲ್ನೋಟಕ್ಕೆ ಅವೆಲ್ಲ ಬಡಕಲು ಮುದಿಹಸುಗಳಂತೆ ಕಾಣುತ್ತಿದ್ದವು. ಗುರುಗಳು ಬ್ರಹ್ಮಚಾರಿಯೊಬ್ಬನ ಜೊತೆ ಬಂದರು. ವತ್ಸಾ! ತಗೋ ಈ ದಂಡ ಕಮಂಡಲ, ಈ ವಸ್ತ್ರ ಈ ಬುತ್ತಿ. ಈ ಗೋಮಾತೆಗಳ ಸೇವೆಮಾಡು ಆಶ್ರಮದ ಆಹಾರ ಇವುಗಳಿಗೆ ಸಾಲುತ್ತಿಲ್ಲ. ಈ ತಾಯಂದಿರನ್ನು ಸದೃಢರನ್ನಾಗಿ ಮಾಡಿ ತಾ ಎಂದಾಗ ಉತ್ಸಾಹದಿಂದ ಗುರುದೇವ ಈ ತಾಯಂದಿರು ಸಾವಿರಾರು ಆಗುವಹಾಗೆ ಮಾಡಿ ತರುತ್ತೇನೆ ಹರಸಿ ಎಂದಾಗ ತಥಾಸ್ತು ಎಂದರು . ಪುಟ್ಟಬಾಲಕ ಹಸುಗಳೊಂದಿಗೆ ಕಾಡಿಗೆ ನಡೆದ. ಹಸುಗಳಿಗೆ ಮೃಷ್ಟಾನ್ನ ಭೋಜನ ಇವನಿಗೆ ಗುರುಗಳಿತ್ತ ಅಮೃತಾನ್ನ. ಆಹಾರ ಸ್ವೀಕರಿಸಿದ ನಂತರ ಹಾಗೇ ಮುನ್ನಡೆದ ಜೊತೆಜೊತೆಗೆ ಸೂರ್ಯನೂ ಪಶ್ಚಿಮಾದ್ರಿಯೆಡೆಗೆ ಸಾಗುತ್ತಿದ್ದ. ಅಲ್ಲೆ ಒಂದೆಡೆ ರಾತ್ರಿಕಳೆವುದು ಎಂದು ಚಿಂತಿಸಿದ. ಇವನ ಯೋಜನೆ ಅರ್ಥವಾಯಿತೋ ಎಂಬಂತೆ ಗೋವುಗಳೆಲ್ಲಾ ಅಲ್ಲಲ್ಲೇ ಮಲಗಿ ಮೆಲುಕಾಡತೊಡಗಿದವು. ರಾತ್ರಿ ಚಳಿಯೊಂದಿಗೆ ಸೊಳ್ಳೆಗಳ ಕಾಟ, ಆಗಾಗ ಕೇಳಿಬರುವ ವನ್ಯಜೀವಿಗಳ ಘರ್ಜನೆ ಬೆಳಗಿನಿಂದ ಕಾಡುದಾರಿಯಲ್ಲಿ ನಡೆದ ಆಯಾಸದ ನಿದ್ದೆಯನ್ನು ಹಾಳುಮಾಡಲಾಗಲಿಲ್ಲ. ಹೊದ್ದಿದ್ದ ಉತ್ತರೀಯ ಮುಂಜಾನೆಯ ಇಬ್ಬನಿಗೆ ಒದ್ದೆಮುದ್ದೆಯಾಗಿತ್ತು. ಹೊಳೆಗೆಹೋಗಿ ನಿತ್ಯಕರ್ಮಗಳಮುಗುಸುವಷ್ಟರಲ್ಲಿ ಮಂಜು ಕರಗಿ ಬೆಳಕಾಗಿತ್ತು. ಗೋವುಗಳನ್ನು ಹೊಳೆಗೆ ಕರೆದೊಯ್ದು ಉಜ್ಜಿ ತೊಳೆಯತೊಡಗಿದ ಹೊಳೆಯಿಂದ ಹೊರಬಂದ ಗೋವು ಮೈ ಕೊಡವುತ್ತಿದ್ದರೆ ಗುರುಗಳು ಕಳಶದ ಮಂತ್ರಜಲವ ಪ್ರೋಕ್ಷಿಸಿದಂತೆ ಭಾಸವಾಯಿತು. ಹೊಟ್ಟೆ ಚುರುಗುಟ್ಟತೊಡಗಿತ್ತು. ಹಾಲುದುಂಬಿದ್ದ ಹಸುಗಳ ಕೆಚ್ಚಲಿಗೇ ಬಾಯಿಹಚ್ಚಿದ್ದ.  ಗೋವುಗಳು ಮಲಗಿದ್ದ ಎಡೆಯೆಲ್ಲಾ ಸಗಣಿಯಿಂದ ಆವೃತ್ತವಾಗಿತ್ತು.ಪ್ರತಿದಿನ ಇಷ್ಟೇ ಸ್ಥಳ ಹಾಳಾಗುತ್ತದೆ ಅದರ ಬದಲು ಇಲ್ಲೇ ಇದ್ದರೆ ಒಳಿತಲ್ಲವೇ ಎಂದು ಯೋಚಿಸಿ ರಾತ್ರಿಯ ಚಳಿ ನೆನಪಾಗಿ ಸಗಣಿಯನ್ನೆಲ್ಲಾ ನದಿಯ ಬಂಡೆಯ ಮೇಲೆ ಬೆರಣಿ ತಟ್ಟತೊಡಗಿದ. ಗೋವುಗಳು ಮಲಗಿದ್ದ ಅಷ್ಟೂ ಜಾಗವನ್ನು ಸ್ವಚ್ಛಗೊಳಿಸಿದ. ಅಲ್ಲಲ್ಲಿ ಒಣಗಿ ಬಿದ್ದಿದ್ದ ಮರದ ತುಂಡುಗಳನ್ನು ಬಲಿಷ್ಟವಾಗಿದ್ದ ಗೋವುಗಳ ಸಹಾಯದಿಂದ ಎಳೆತಂದು ಆಶ್ರಮನಿರ್ಮಾಣ ಮಾಡತೊಡಗಿದ. ಗೋವುಗಳೂ ಅವನಿಗೆ ಅನುಕೂಲವಾಗುವಂತೆ ಅಲ್ಲೇ ಸುತ್ತಾಮುತ್ತಾ ಇದ್ದ ಹುಲ್ಲನ್ನು ಮೇಯುತ್ತಾ ಇದ್ದವು ಅಲ್ಲೇ ಬಂಡೆಯಮೇಲೆಕುಳಿತು ಗಾಯತ್ರಿ ಜಪಿಸತೊಡಗಿದ್ದ. ಕತ್ತಲಾಯಿತು. ಯಥಾಪ್ರಕಾರ ಗೋವುಗಳೆಲ್ಲ ವಿಶ್ರಮಿಸತೊಡಗಿದವು. ಒಣಕಟ್ಟಿಗೆಗಳನ್ನು ಒಟ್ಟುಮಾಡಿದ್ದು ಅಗ್ನಿದೇವನಿಗೆ ಅರ್ಪಿಸಲು ಸಾಧ್ಯವಾಯಿತು. ಆಶ್ರಮದಲ್ಲಿ ಅಗ್ನಿಹೊತ್ತಿಸುವ ಕ್ರಿಯೆನೋಡಿದ್ದು ಈಗ ಉಪಯೋಗಕ್ಕೆ ಬಂತು. ಅಲ್ಲಲ್ಲಿ ಅಗ್ನಿಕುಂಡಗಳನ್ನು ಹೊತ್ತಿಸಿದ ಇಡೀ ಪ್ರದೇಶ ಬೆಚ್ಚಗಾಯಿತು. ಇದೆಲ್ಲಾ ಆಗುವಾಗ್ಗೇ ತಿಂಗಳಾರು ಆಗಿತ್ತು... ಇದ್ದಕ್ಕಿದ್ದಹಾಗೆ ಆಕಾಶ ಗುಡುಗತೊಡಗಿತು. ವರ್ಷಧಾರೆ ಕಾಡಿಗೆಕಾಡೇ ಮಳೆಯಲ್ಲಿ ಕೊಚ್ಚಿಹೋಗುವುದೋ ಎಂಬ ಭಯ. ಮಿಂಚೊಂದು ಮಿಂಚಿತು. ಹತ್ತಿರದ ಹೆಮ್ಮರವೊಂದು ಸಿಡಿಲಿಗೆ ಆಹುತಿಯಾಯಿತು. ಒಂದೆಡೆ ಸುರಿವಮಳೆ ಮತ್ತೊಂದೆಡೆ ಅಗ್ನಿನರ್ತನ ಪುಟ್ಟ ಹೃದಯ ಕಂಗೆಟ್ಟಿತು. ಬೆಳಗಾಯಿತು ಕಾಡಿನ ಒಂದುಭಾಗ ಸೀದು ಹೊಗೆಯಾಡುತ್ತಿತ್ತು. ನಾನ್ಯಾಕೆ ಕಾಡಿಗೆ ಬಂದೆ? ಅಲ್ಲಿ ಬಿದ್ದ ಬೆಂಕಿ ಇಲ್ಲಿಬಿದ್ದಿದ್ದರೆ , ಗೋವುಗಳಿಗೆ ಅಪಾಯವಾಗಿದ್ದಿದ್ದರೆ , ಗುರುಗಳಿಗೆ  ಏನೆಂದು ಹೇಳಬೇಕಿತ್ತು? ಬಡಕಲಾಗಿದ್ದ ಗೋವುಗಳೇನೋ ಈಗ ಮೈದುಂಬಿ ದಿವ್ಯಕಾಂತಿಯಿಂದ ಶೋಭಿಸುತ್ತಿದ್ದವು. ಆದರೆ ಸಾವಿರವಾಗುವುದು ಹೇಗೆ ? ಯೋಚಿಸುತ್ತಾ ಕುಳಿತ ಸಂಜೆಯಾಗುತ್ತಾ ಬಂದಿತ್ತು. ಅಳುಬಂತು ಅತ್ತ.
 “ಕುಮಾರ ಏಕೆ ಅಳುತ್ತಿರುವೆ? ನಿನ್ನಗೋವುಗಳೇನಾದರೂ ತಪ್ಪಿಸಿಕೊಂಡವೇ? ಇಲ್ಲ ಮನೆಯದಾರಿ ತಿಳಿಯದೆ ಅಳುತ್ತಿರುವೆಯಾ”? ಧ್ವನಿ ಬಂದಕಡೆ ತಲೆ ಎತ್ತಿ ನೋಡಿದ ಬಹಳ ದೂರಪ್ರಯಾಣ ಮಾಡಿದಂತೆ, ಸ್ವಲ್ಪಬಳಲಿದಂತೆಯೂ ಕಂಡ ತಪಸ್ವಿ ನಿಂತಿದ್ದಾನೆ . ಕಣ್ಣುಗಳಲ್ಲಿ ಕರುಣೆಯ ಅಮೃತವೇ ಸುರಿಸುತ್ತಿದ್ದಾನೆ.ಮನದ ದುಗುಡವೆಲ್ಲಾ ಕ್ಷಣಮಾತ್ರದಲ್ಲಿ ಕರಗಿಹೋಯಿತು. ಎಷ್ಟೋದಿನಗಳ ನಂತರ ಮನುಷ್ಯರನ್ನು ಕಾಣುತ್ತಿರುವುದು. ಕುಳಿತಲ್ಲೇ ಕಾಲಿಗೆರಗಿದ. “ಇಷ್ಟಾರ್ಥ ಸಿದ್ಧಿರಸ್ತು” ಎಂದು ಹರಸಿದರು. ಸ್ವಾಮಿ ಇಲ್ಲೇ ಕುಳಿತಿರಿ ಸ್ವಲ್ಪ ಹಾಲು ಹಣ್ಣುಗಳಿವೆ ಸ್ವೀಕರಿಸಿ ಎಂದು ಕೂಡಲೇ ನದಿಯಬಳಿಯಿದ್ದ ಕುಟೀರಕ್ಕೆ ಹೋಗಿ ಎಲೆಯಲ್ಲಿ ಕೆಲಹಣ್ಣುಗಳನ್ನು, ಕಮಂಡಲುವಿನಲ್ಲಿದ್ದ ಹಾಲನ್ನು ತಂದು ಅರ್ಪಿಸಿದ. ಸಂತೋಷದಿಂದಲೇ ಸ್ವೀಕರಿಸಿದ ಅವರು. “ಈಗ ಹೇಳು ನಿನ್ನ ನೋವಿಗೆ ಕಾರಣವೇನು? ಯಾರುನೀನು? ಈ ಕಾಡಿನಲ್ಲಿ ಏಕೆ ಇದ್ದೀಯೆ ನಿನ್ನತಂದೆತಾಯಿಗಳೆಲ್ಲಿ”? ಎಲ್ಲಕ್ಕೂ ಉತ್ತರವಾಗಿ ತಾನ್ಯಾರು ಯಾಕಾಗಿ ಇಲ್ಲಿಗೆ ಬಂದೆ ಎಂಬುದನ್ನು ಸವಿವರವಾಗಿ ತಿಳಿಸಿದ. ಅವರೂ ತಲೆಯಾಡಿಸುತ್ತ “ವೃಷಭಗಳನ್ನು ಕೊಟ್ಟಿದ್ದಾರೋ ಕೇವಲ ಹಸುಗಳಿದ್ದಾವೋ”? ಎಂದುಪ್ರಶ್ನಿಸಿದಾಗ ಸಹಜವಾಗಿಯೇ ಹಸುಗಳುಮಾತ್ರ ಇವೆ ಎಂದಾಗ ನಕ್ಕರು . ಮಗುಹುಟ್ಟಲು ತಂದೆ-ತಾಯಿ ಅವಶ್ಯವಿದ್ದಂತೆ ಹಸುಗಳೊಂದಿಗೆ ವೃಷಭದ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಇವು ಸಾವಿರವಾಗದು ಎಂದಾಗ ಇಷ್ಟುದಿನ ಪಟ್ಟಪಾಡೆಲ್ಲ ವ್ಯರ್ಥವಾಯಿತೇ? ಏನುಮಾಡಲಿ ದಾರಿತೋರಿ ಎಂದು ಬಾಲಕ ಕಾಲುಹಿಡಿದು ಬೇಡತೊಡಗಿದ. ಅವರು ಮಗು ಅದಕ್ಕೂ ದಾರಿ ಇದೆ. ಆದರೆ ಮಂತ್ರೋಪದೇಶ ಮಾಡಬೇಕೆಂದರೆ ಪುತ್ರನಿಗೆ ಇಲ್ಲವೇ ಶಿಷ್ಯನಿಗೆ ಮಾಡಬೇಕು.  ನೀನು ಇನ್ನೊಬ್ಬರ ಶಿಷ್ಯ ಹಾಗಾಗಿ ಮಾತು ಮುಗಿವಮೊದಲೇ ಭಗವನ್ ನೀವೇ ನನ್ನ ತಂದೆ ಎಂದು ಭಾವಿಸಿ ಉಪದೇಶಿಸಿ ಮಗುವಿನ ಬೇಡಿಕೆ ತಿರಸ್ಕರಿಸಲಾಗದೆ ನಗುತ್ತಾ , ಆಯಿತು ಮುಂಜಾನೆ ನಿನಗೆ ಮಂತ್ರೋಪದೇಶಮಾಡುತ್ತೇನೆ ಎಂದರು. ತನ್ನ ಕುಟೀರಕ್ಕೆ ಕರೆದೊಯ್ದ.  ಗೋವುಗಳು ಅವನು ಕುಟೀರದ ಕಡೆಗೆ ಹೋಗುತ್ತಿದ್ದುದನ್ನು ಕಂಡು ತಾವೂ ಹಿಂಬಾಲಿಸಿದವು. ನದಿಯಲ್ಲಿ ಮಿಂದು ಬಂದು ಅಗ್ನಿಹೊತ್ತಿಸಿ ಕೆಲಗೋವುಗಳಿಂದ ಹಾಲು ಕರೆದುತಂದು ಅಗ್ನಿಗೆ ಅರ್ಪಿಸಿ ತಪಸ್ವಿಗೆ ನೀಡಿದ, ತಾನೂ ಹೊಟ್ಟೆತುಂಬಾ ಕುಡಿದ. ಮುಂಜಾನೆ ನಿತ್ಯಕರ್ಮಗಳನ್ನು ಮುಗಿಸಿ ಬರುವಷ್ಟರಲ್ಲಿ ತಪಸ್ವಿಗಳೂ ಸಿದ್ಧವಾಗಿದ್ದರು. ಕೆಲಮಂತ್ರಗಳನ್ನು ಹೇಳುತ್ತಲೇ ಈ ಮೊದಲೇ ತಿಳಿದಿತ್ತು ಎಂಬಂತೆ ಮಂತ್ರಗಳು ಕರಗತವಾದವು.ದೀರ್ಘದಂಡ ನಮಸ್ಕಾರ ಮಾಡಿದ. ಹಾಲು ಹಣ್ಣುಗಳನ್ನು ಅರ್ಪಿಸಿದ. ಅವನ ಉಪಚಾರವನ್ನು ಸ್ವೀಕರಿಸಿ ಹೊರಡಲು ಅನುವಾದರು. ಮತ್ತೊಮ್ಮೆ ಕಾಲಿಗೆಬಿದ್ದ ಅವನನ್ನು ಮೇಲೆತ್ತುತ್ತಾ  ವತ್ಸ ಈಮಂತ್ರಗಳನ್ನು ಜಪಿಸುತ್ತಾ ಅಗ್ನಿಯನ್ನು ಪೂಜಿಸು ಮಂತ್ರದಿಂದ ಪವಿತ್ರವಾದ ಜಲವನ್ನು ಗೋವುಗಳ ಮೇಲೆ ಚುಮುಕಿಸು, ನಿನ್ನ ಇಷ್ಟಾರ್ಥಗಳು ನೆರವೇರುತ್ತವೆ. ನಿನಗೆ ಶುಭವಾಗಲಿ ಎಂದು ಹರಸಿದರು.
ಗಾಯತ್ರಿ ಜಪ ನಡದೇಇತ್ತು . ಜೊತೆಗೆ ಅಗ್ನಿಕಾರ್ಯ ಸೇರಿತು ಜೊತೆಗೆ ಸಾವಿರ ಹೇಗಾಗುತ್ತೆ ಯಾವಾಗ ಎಂಬ ಕುತೂಹಲವೂ ಕಾಡಿತ್ತು. ಒಂದು ಮುಂಜಾನೆ ಗೋಸೇವೆಯೆಲ್ಲಾ ಮಾಡಿ ಬಂಡೆಯಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾನೆ . ಮನದಲ್ಲಿ ಜಪನಿರಂತರವಾಗಿ ಸಾಗುತ್ತಿದೆ, ಸೂರ್ಯಮೇಲೆಮೇಲೆ ಹೋಗುತ್ತಿದ್ದಾನೆ, ಹಾಗೆಯೇ ಮಂಪರು ನಿದ್ದೆ. ನಿದ್ದೆಯಲ್ಲಿ ಸೂರ್ಯನಂತೆಯೇ ತೇಜಸ್ವಿಯಾದ ವೃಷಭ ಓಡಿ ಬರುತ್ತಿದೆ. ಬೆಟ್ಟವೇ ಎತ್ತಾಯಿತೋ ಎಂಬಂತಿದೆ. ಅದು ಬಳಿಬಂದು ವತ್ಸ ನನ್ನನ್ನೇಕೆ ಕರೆದೆ ಎಂದು ಕೇಳುತ್ತಿದೆ. ನಾನು ಗೋಮಂದೆಯನ್ನು ತೋರಿ ಸಾವಿರವಾಗಬೇಕು ಕೃಪೆಮಾಡಿ ಎನ್ನುತ್ತಿದ್ದೇನೆ. ಆ ಮಹಾವೃಷಭವು ತಥಾಸ್ತು ಎಂದಾಗ ಎಚ್ಚರ ಎದುರಿಗೆ ಕನಸಲ್ಲಿ ಕಂಡ ವೃಷಭ ನಿಂತಿದೆ. ಹಾಗೆಯೇ ಅದಕ್ಕೆ ತಲೆಬಾಗಿ ಹತ್ತಿರದಲ್ಲೇ ಇದ್ದ ಎಳೆಹುಲ್ಲನ್ನು ಕಿತ್ತುತಂದು ಅರ್ಪಿಸಿದ. ಅದೂ ಇವನ ಸೇವೆಯನ್ನು ಸ್ವೀಕರಿಸಿ ಹರಸಿತು. ಅಂದಿನಿಂದ ಗೋಸೇವೆ ಇನ್ನೂ ಸುಲಭವಾಯಿತು . ಗೋವುಗಳೆಲ್ಲ ವೃಷಭನ ಒಂದುಹೂಂಕಾರಕ್ಕೆ ತಾವೇ ಹೊಳೆಗೆ ಹೋಗಿ ಮೀಯುತ್ತವೆ ಇನ್ನೊಂದು ಹೂಂಕಾರಕ್ಕೆ ಮೇಯಲು ಹೋಗುತ್ತವೆ. ಜಪಕ್ಕೆ, ಅಗ್ನಿಕಾರ್ಯಕ್ಕೆ ಬಹಳಷ್ಟು ಸಮಯ ದೊರಕಿತು. ಜಪ ಹೆಚ್ಚಾಯಿತು ಗೋಸಂಪತ್ತೂ ಬೆಳೆಯಿತು. ದಿನವೆಲ್ಲ ಗಾಯತ್ರಿದೇವಿಯ ದರ್ಶನ ಎಲ್ಲೆಡೆ ಏನೋ ಅನನ್ಯಚೈತನ್ಯದ ಅನುಭವ. ರಾತ್ರಿ ಅಗ್ನಿದೇವನ ಜೊತೆಗೆ ವೃಷಭದೇವನ ಸೇವೆ. ಒಂದುದಿನ ಸಂಜೆ ಆ ಮಹಾವೃಷಭವು ವತ್ಸ ನಾನು ಬಂದ ಕಾರ್ಯ ಸಂಪನ್ನವಾಗಿದೆ ಎಂದಹಾಗೆ ಭಾಸವಾಯಿತು. ಅದರತ್ತ ನೋಡಿದಾಗ ಗೋವುಗಳತ್ತ ನೋಡು ಎಂಬಂತೆ ತಲೆಯಾಡಿಸಿತು. ತಲೆಬಾಗಿದೆ. ನಾಳೆ ಗುರುಕುಲಕ್ಕೆ ಹೊರಡು. ಎಂದುಹೇಳಿತು. ಭಗವನ್ ತಾವು ಯಾರು? ನಾನು ಬ್ರಹ್ಮ ಜ್ಞಾನಪಡೆವಂತೆ ಅನುಗ್ರಹಿಸಿರಿ ವತ್ಸ ನಾನು ವಾಯು ಏನೆಲ್ಲವನ್ನು ಕಾಣಬಲ್ಲೆಯೋ ಅವೆಲ್ಲವೂ ಬ್ರಹ್ಮ ಎಂದು ತಿಳಿ ಎಂದು ಅನುಗ್ರಹಿಸಿ ನೋಡನೋಡುತ್ತಿದ್ದಂತೆಯೇ ಗಾಳಿಯಲ್ಲಿ ಕರಗಿತು. ಅದರ ಸ್ಮರಣೆಯಲ್ಲೇ ರಾತ್ರಿಯೆಲ್ಲಾಕಳೆಯಿತು. ಬೆಳಗ್ಗೆ ಅಗ್ನಿಕಾರ್ಯಮಾಡಿ ನಮಸ್ಕರಿಸಿದಾಗ ಅಗ್ನಿಯು ಮಗು ನೆನ್ನೆ ವಾಯುದೇವನು ನಿನ್ನನ್ನು ಅನುಗ್ರಹಿಸಿದ್ದಾನೆ , ನಾನೂಕೂಡ ನಿನ್ನನ್ನು ಅನುಗ್ರಹಿಸಲು ಬಂದಿದ್ದೇನೆ ಎಂದಾಗ ಸತ್ಯಕಾಮನು ದೇವಾ ಧನ್ಯನಾದೆ ಬ್ರಹ್ಮ ಅನಂತವಾದವನು , ಆದಿ ಅಂತ್ಯಗಳಿಲ್ಲದವನೆಂದು ತಿಳಿ ಸೂರ್ಯ ಹೇಗೆ ಜಗತ್ತೆಲ್ಲವನ್ನು ಬೆಳಗುವನೋ ಅಂತೆಯೇ ಅನಂತವಾದ ಬ್ರಹ್ಮಾಂಡವನ್ನು ಬೆಳಗುವವನು . ನಿನಗೆ ಮಂಗಳವಾಗಲಿ ಗುರುಕುಲಕ್ಕೆ ಹೋಗು ನಿನ್ನ ಗುರುಗಳು ನಿನ್ನನ್ನೇ ಎದುರು ನೋಡುತ್ತಿದ್ದಾರೆ ಎಂದನು ಸತ್ಯಕಾಮನು ಅಗ್ನಿದೇವನಿಗೆ ನಮಸ್ಕರಿಸಿ ಗೋವುಗಳನ್ನು ಆಶ್ರಮದ ಕಡೆ ನಡೆಸಿದನು. ಗಿಡ ಮರ ಪಶು ಪಕ್ಷಿ ನದಿ ಬೆಟ್ಟ ಎಲ್ಲವೂ ತನಗೆ ಏನನ್ನೋ ಹೇಳುತ್ತಿವೆ ಎಂಬಂತೆ ಭಾಸವಾಗುತ್ತಿತ್ತು ಎಲ್ಲವೂ ಚೈತನ್ಯಸ್ವರೂಪವಾಗಿಯೇ ಕಾಣತೊಡಗಿತು. ಕಾಣುವ ಕಣ್ಣು ನಿನ್ನದಾಗಲಿ ಎಂದುಹರಸಿದ ಗುರುವಿನಮಾತು ನೆನಪಿಗೆ ಬಂದು ನಿಂತಲ್ಲೇ ಗುರುವಿಗೆ ನಮಿಸಿದ. ಸಂಜೆಯ ಸೂರ್ಯ ಹಣತೆಯ ಹೊತ್ತಿಸುವಂತೆ ಹೇಳುತ್ತಿದ್ದಾನೋ ಎಂಬಂತೆ ಪಶ್ಚಿಮದ ಸಾಗರದಿ ಮುಳುಗುತ್ತಿದ್ದ. ಗಿಡ ಮರಗಳು ಸತ್ಯಕಾಮನಿಗೆ ದಾರಿಮಾಡಿಕೊಡುತ್ತಿವೆಯೇನೋ ಎಂಬಂತೆ , ನಡೆವ ಹಾದಿಗೆ ಹೂವಿನ ಹಾಸಿಗೆ ಹಾಸಿದಂತೆ ಹೂ ಚೆಲ್ಲಿದ್ದವು. ಗೋವುಗಳ ಚಲನೆಯಿಂದ ಎದ್ದ ದೂಳು ಸತ್ಯಕಾಮನ ವಿಜಯ ಪತಾಕೆಯೋ ಎಂಬಂತೆ ಕಾಣುತ್ತಿತ್ತು. ಇತ್ತ ಹಾರಿದ್ರುಮರ ಆಶ್ರಮಕ್ಕೆ ಅನೇಕಾನೇಕ ತಾಪಸರ,ಋಷಿಮುನಿಗಳ ಆಗಮನವಾಗಿತ್ತು. ಎಲ್ಲರೂ ಸತ್ಯಕಾಮನ ಆಗಮನಕ್ಕೆ ಕಾದಿದ್ದರು. ಆಶ್ರಮದ ಬಾಗಿಲಲ್ಲಿ ಅಗ್ನಿಯೇ ಬಾಲಕನ ರೂಪದಲ್ಲಿ ನಿಂತಿದ್ದಾನೇ ಎಂಬಂತೆ ಇಡೀ ಆಶ್ರಮವು ಅವನಿಂದ ಪ್ರಕಾಶಮಾನವಾಯಿತು. ಬಂದವನೇ ಗುರುವಿನಪಾದಕ್ಕೆರಗಿದ. ಗುರುಗಳು ವತ್ಸಮೊದಲಿಗೆ ವಿಶ್ರಾಂತಿ ಪಡೆದುಕೋ ಬೆಳಗ್ಗೆ ಮಾತನಾಡೋಣ ಎಂದರು ಅಂತೆಯೇ ಅಲ್ಲಿನೆರೆದಿದ್ದ ತಾಪಸರಿಗೆ ವಂದಿಸುವಂತೆ ಸೂಚಿಸಿದರು . ಬೆಳಗ್ಗೆ ಎಲ್ಲರೂ ಯಾಗಶಾಲೆಯಲ್ಲಿ ಸೇರಿದ್ದಾರೆ. ಸತ್ಯಕಾಮನೇ ಕೇಂದ್ರಬಿಂದು. ಗುರುಗಳ ಪಾದಕ್ಕೆರಗಿ , ಎಲ್ಲ ಹಿರಿಯರಿಗೆ ನಮಿಸಿ ನಿಂತಾಗ, ಕುಲಪತಿಗಳಾದ ಹಾರಿದ್ರುಮರು ಮಗು ಗೋವುಗಳು ದಿವ್ಯಕಾಂತಿಪಡೆದುದು ಹೇಗೆ? ಸಾವಿರವಾದುದು ಹೇಗೆ? ನಿನ್ನಲ್ಲಿ ವ್ಯಕ್ತವಾಗುತ್ತಿರುವ ಬ್ರಹ್ಮತೇಜಸ್ಸಿಗೆ ಕಾರಣವೇನು ? ಎಲ್ಲವನ್ನು ತಿಳಿಸುವಂತವನಾಗು. ಎಂದಾಗ ಆಶ್ರಮದಿಂದ ಹೊರಟು ಬರುವವರೆಗಿನ ಎಲ್ಲವನ್ನೂ ವಿವರಿಸಿದಾಗ , ಕುಲಪತಿಗಳು ವತ್ಸ ನೀನೀಗಾಗಲೇ ಬ್ರಹ್ಮಜ್ಞಾನವನ್ನು ಪಡೆದುಬಂದಿರುವೆ ಇನ್ನು ಆಶ್ರಮವಾಸ ಅವಶ್ಯವಿಲ್ಲ ಮನೆಗೆ ಹೋಗಬಹುದು ಎಂದಾಗ ಗುರುದೇವಾ ತಮ್ಮ ಹರಕೆಯಿಂದಾಗಿ ದೇವತೆಗಳು ನನಗೆ ಬ್ರಹ್ಮಜ್ಞಾನವನ್ನು ಅನುಗ್ರಹಿಸಿದರು. ಆದರೂ ವಿದ್ಯೆ ಗುರುಮುಖೇನ ಲಭ್ಯವಾಗಬೇಕು . ತಮ್ಮ ಮಾತಿನಂತೆ ಗೋವುಗಳು ಸಾವಿರಮಾಡಿ ತಂದಿದ್ದೇನೆ. ನನಗೆ ಬ್ರಹ್ಮಜ್ಞಾನವನ್ನು ಕರುಣಿಸಿ ಎಂದು ಕಾಲಿಗೆರಗಿದ. ಮಹರ್ಷಿ ಸತ್ಯಕಾಮಜಾಬಾಲಿ ಎಂದೇ ಹೆಸರಾದ.
ಶುಭಮಸ್ತು

ಸತ್ಯಕಾಮಜಾಬಾಲಋಷಿಯು ನಮ್ಮನ್ನು ಸತ್ಯಮಾರ್ಗದಲ್ಲಿ ನಡೆವಂತೆ ಅನುಗ್ರಹಿಸಲಿ

No comments:

Post a Comment