Saturday, April 28, 2018

ರತ್ತ ಅಣ್ಣ ರತ್ತ ಎಂದು ಬಳಿಬಂದ ಎರಡುವರ್ಷದ ಮಗಳು ತನ್ನ 
ಪುಟ್ಟಕೈಗಳನ್ನ ನನ್ನೆಡೆ ಚಾಚಿದಾಗ ಒಂದುಕ್ಷಣ ನಡುಗಿದ್ದೆ. 
ಅಂದು ಬೆಳಗ್ಗೆ ಶೇವ್ ಮಾಡಲಿಕ್ಕೆಂದು ತಂದಿದ್ದ ಬ್ಲೇಡ್ ಅವಳಕೈಲಿತ್ತು. 
ಅವಳ ಮುಖದಲ್ಲಿ ಗಾಬರಿ ಕಂಡು, ಬೈಯದೆ 
ಮೆಲ್ಲನೆ ಬ್ಲೇಡ್ ಕೆಳಗೆಹಾಕಲು ಸೂಚಿಸಿದೆ ಅಂತೆಯೇ ಅವಳು 
ಅದನ್ನ ಕೆಳಕ್ಕೆ ಬಿಸಾಡಿದಳು. ಕೂಡಲೇ ಅವಳನ್ನೆತ್ತಿಕೊಂಡು 
ಸಿಂಕ್ ಬಳಿಗೆ ಓಡಿದೆ. ನಲ್ಲಿಬಿಟ್ಟು ತಿಳಿನೀರಲ್ಲಿ ಕೈತೊಳೆದಾಗ
 ಬ್ಲೇಡ್ ಅವಳ ಅಂಗೈಯಲ್ಲಿ ಸಣ್ಣಗುರುತನ್ನ ಮೂಡಿಸಿತ್ತು. 
ಚಿನ್ನಾ ಬ್ಲೇಡು,ಚಾಕು,ಸೂಜಿ ಮುಟ್ಟಬಾರದು ಅಂದಾಗ 
ಅವಳು ಹೂ ಗುಟ್ಟಿದಳು. ಬ್ಲೇಡನ್ನ ಹೇಗೆ
 ಹಿಡಿದುಕೊಳ್ಳಬೇಕು,ಹೇಗೆ ಚಾಕು 
ಹಿಡಿದುಕೊಳ್ಳಬೇಕು ಎಂಬುದನ್ನು ತಿಳಿಸಿದಾಗ
 ಅವಳಕಣ್ಣು ಅರಳಿತು. ಆ ಅರಳಿದ ಕಣ್ಣು 
ಇವತ್ತು ಕೋಪತೋರುತ್ತಾ ನನ್ನ ಕೈ ಒರೆಸುತ್ತಿದೆ .
 ನನ್ನ ನಡುಗುವ ಕೈಬೆರಳು ಬ್ಲೇಡ್ ತಾಗಿ ಕೊಯ್ದಿತ್ತು. 
ಎದೆಯುದ್ದಕ್ಕೆ ಬೆಳೆದ ಮಗಳ ಕೈ ಅರಿಶಿನ ಒತ್ತುತ್ತಾ ಇತ್ತು .

No comments:

Post a Comment