Saturday, March 20, 2010

ಮಾನವನೆಂಬ ಜೀವಿ ಭೂಮಿಯಲ್ಲಿ ಕಾಣಿಸಿಕೊಂಡಾಗಿನಿಂದ ಅವನು ತನ್ನ ಹೊಟ್ಟೆಹಸಿವನ್ನು ತೀರಿಸಲು ಹೋರಾಡುತ್ತಲೇ, ಮನದ ಹಸಿವನ್ನು ನೀಗಿಸಿಕೊಳ್ಳಲು ಪ್ರಾರಂಭಿಸಿದಾಗ ಅವನಿಗೆ ಎದುರಾದದ್ದು ನಾನು ಯಾರು? ಎಲ್ಲಿಂದ ಬಂದೆ? ಹೇಗೆ ಬಂದೆ? ಯಾಕೆ ಬಂದೆ? ಎಂಬ ಪ್ರಶ್ನೆಗಳು. ಹಾಗೆಯೇ ತನ್ನ ಸುತ್ತಮುತ್ತ ಇರುವುದೆಲ್ಲ ಯಾವುದರಿಂದ ಆದದ್ದು ಎಂದೂ ಚಿಂತಿಸಿದ.

ಸತ್ತವನನ್ನು ಕಂಡಾಗ ದೇಹ ಇಲ್ಲೇ ಇದೆ , ಆದರೆ , ಚಲಿಸುತ್ತಿಲ್ಲ, ಉಸಿರಾಡುತ್ತಿಲ್ಲ, ನೋಡುತ್ತಿಲ್ಲ ಹಾಗಾದರೆ ಇಷ್ಟುದಿನ ಈ ದೇಹದಲ್ಲಿ ಇದ್ದು , ನೋಡುತ್ತಿದ್ದವ, ಚಲಿಸುತ್ತಿದ್ದವ ಉಸಿರಾಡುತ್ತಿದ್ದವ ಯಾರು? ಸಾವು ಎಂದರೇನು? ಎಂಬ ಪ್ರಶ್ನೆಗಳು ಭೂತವಾಗಿ ಕಾಡತೊಡಗಿದವು. ಯೋಚಿಸಿದ , ವಿಚಾರಿಸಿದ, ಕಡೆಗೆ ಕಂಡುಕೊಂಡೆ ಎಂದ , ಹೀಗೆ ಕಂಡುಕೊಂಡವನನ್ನು ದಾರ್ಶನಿಕ, ಮಹಾತ್ಮ, ತಪಸ್ವಿ, ಮುನಿ ಎಂದೆಲ್ಲಾ ಕರೆದರು. ಅಂತಹ ವ್ಯಕ್ತಿಗಳು ಹೇಳಿದ್ದು “ಅಹಂ ಬ್ರಹ್ಮಾಸ್ಮಿ, ತತ್ ತ್ವಂ ಅಸಿ, ಸರ್ವಂ ಖಲ್ವಿದಂ ಬ್ರಹ್ಮಾ”, ನಾನು ಬ್ರಹ್ಮ , ನೀನು ಅದೇ ಆಗಿದ್ದೀಯೆ, ಎಲ್ಲವೂ ಬ್ರಹ್ಮವೇ ಆಗಿದೆ. ಹೇಗೆ ಬೆಂಕಿಯರಾಶಿಯಿಂದ ಸಿಡಿದ ಕಿಡಿ ಮತ್ತೆ ಅದನ್ನೇ ಸೇರುವುದೋ ಹಾಗೆ ಮೂಲವಸ್ತುವಿನಿಂದ ಸಿಡಿದುಬಂದನೀನು ಮತ್ತೆ ಅದರಲ್ಲೇ ಸೇರುವ ಅಂಶವಾದ ಆತ್ಮವಾಗಿದ್ದೀಯೇ ಎಂದು ಉದ್ಗಾರ ಮಾಡಿ ಹೇಳಿದರು.

ಕಾಣುವ, ಕೇಳುವ, ಮೂಸುವ , ಮುಟ್ಟುವ, ಎಲ್ಲ ಪ್ರಕ್ರಿಯೆಗಳು ಬೇರೆಬೇರೆಯಾಗಿ ಕಂಡರೂ ಆಂತರ್ಯದಲ್ಲಿ ಒಂದೇ ಆಗಿರುವಂತೆ , ಅವರವರ ಸಂಸ್ಕಾರಗಳಿಗನುಗುಣವಾಗಿ ಮಾರ್ಗದೊರೆಯುತ್ತದೆ, ಸತ್ಯಸಿಗುತ್ತದೆ , ಸತ್ಯವನ್ನು ಹುಡುಕ ಹೊರಟ ಕವಿ, ವಿಜ್ಞಾನಿ, ಸನ್ಯಾಸಿ, ಯಾರೇ ಆಗಿರಲಿ ಎಲ್ಲರೂ ಆನೆಯನ್ನು ಕಂಡ ಕುರುಡರಂತೆ ತಮ್ಮ ತಮ್ಮ ಅನುಭವಗಳನ್ನೇ ಸತ್ಯವೆಂದು ತಿಳಿದರು. ಅವರು ಮುಟ್ಟಿದ ಕಾಲು , ಹೊಟ್ಟೆ ಬಾಲ, ಸೊಂಡಿಲುಗಳೇ ಮಾತ್ರವಲ್ಲ ಇನ್ನೂ ಬೇರೆ ಬೇರೆ ಅಂಗಗಳು ಸೇರಿ ಆನೆಯಾಗಿದೆ. ಎಲ್ಲೋ ಕೆಲವರಿಗೆ ಪೂರ್ಣಸತ್ಯದ ಅರಿವಾಗುತ್ತದೆ. ಈ ಪರಮ ಸತ್ಯವನ್ನು ಕಂಡುಕೊಳ್ಳಬೇಕಾದರೆ, “ಇಂದ್ರಿಯಗಳ ಹತೋಟಿಯಲ್ಲಿಟ್ಟುಕೊಂಡು ಏಕಮನಸ್ಸಿನಿಂದ ಪ್ರಯತ್ನಿಸು ಎಂದು ಉಪನಿಷತ್ ವಾಣಿಗಳಲ್ಲಿ ತಿಳಿಯಪಡಿಸಿದ್ದಾರೆ.

ಮಾನ್ಯ ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗದಲ್ಲಿ

ಜಗದೀ ಜಗತ್ತ್ವವನು ಮಾಯಾವಿಚಿತ್ರವನು

ಒಗೆದಾಚೆ ಬಿಸುಡೆಲ್ಲ ಕರಣವೇದ್ಯವನು|

ಮಿಗುವುದೇಂ? ರೂಪಾಖ್ಯೆಯೊಂದುಮಿಲ್ಲದ ವಸ್ತು

ಹೊಗಿಸಾ ಕಡೆಗೆ ಮತಿಯ – ಮಂಕುತಿಮ್ಮ

ಜಗತ್ತಿನಲ್ಲಿರುವ ನಾನಾ ಆಕಾರಗಳನ್ನು ಮಾಯಾ ವಿಚಿತ್ರವನ್ನು ಮತ್ತು ಇಂದ್ರಿಯಕ್ಕೆ ಗೋಚರವಾಗುವ (ಕರಣವೇದ್ಯವಾಗುವ) ಈ ಪ್ರಪಂಚವನ್ನು , ಒಗೆ ಆಚೆ ಬಿಸಾಡು ಅವಾಗ ಉಳಿಯುವುದು ಆಕಾರ ಮತ್ತು ಹೆಸರಿಲ್ಲದ ವಸ್ತು ನಿನ್ನ ಮನಸ್ಸನ್ನು ಅದರ ಕಡೆಗೆ ತಿರುಗಿಸು.

ಆತ್ಮ ಎಂದರೇನು? ಎಲ್ಲಿದೆ? ಆತ್ಮ ಸ್ವರೂಪ

ಔಪಮನ್ಯು , ಪೌಲುಷಿ, ಭಾಲ್ಲವಿ, ಶಾರ್ಕರಾಕ್ಷ, ಬುಡಿಲ ಈ ಐದುಜನ ಕೂಡಿ ನಮ್ಮೆಲ್ಲರ ಆತ್ಮ ಯಾರು? ಬ್ರಹ್ಮಯಾವುದು? ಎಂದು ವಿಚಾರಮಾಡಿ ಆತ್ಮ – ಪರಮಾತ್ಮ ಅಭಿನ್ನ ಎಂದುಕಂಡುಕೊಂಡ ಉಪನಿಷತ್ ಋಷಿಗಳು.

ಉದ್ದಾಲಕ ಅರುಣಿಯ ಬಳಿಹೋಗಿ ಅವನನ್ನು ಕೂಡಿಕೊಂಡು ರಾಜ ಅಶ್ವಪತಿಯ ಬಳಿ ಹೋಗಿ ಆತ್ಮದ ವಿಚಾರಮಾಡಿದರು.

ದ್ಯುಲೋಕವು ಆತ್ಮನ ಒಂದಂಶ, ಇದು ವೈಶ್ವಾನರನ ತಲೆ, ಆದಿಯ್ಯನು ವೈಶ್ವಾನರನ ಕಣ್ಣು. ವಾಯುವು ವೈಶ್ವಾನರನ ಪ್ರಾಣ. ಆಕಾಶವು ವೈಶ್ವಾನರನ ನಡುಮೈ , ಆಪ್ ವು ವೈಶ್ವಾನರನ ಬಸ್ತಿ, ಪೃಥವಿಯು ವೈಶ್ವಾನರನ ಪಾದ ಎಂಬ ವಿಚಾರಗಳನ್ನು ಅರಿತರು.

ಭಗವದ್ಗೀತೆಯಲ್ಲಿ

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ |

ಪ್ರಾಣಾಪಾನ ಸಮಾಯುಕ್ತ ಪಚಾಮ್ಯನ್ನಂ ಚತುರ್ವಿಧಮ್ ||

ನಾನು ಪ್ರಾಣಿಗಳ ಜಠರದಲ್ಲಿರುವ ಅಗ್ನಿಯಾಗಿ ಪ್ರಾಣಿಗಳ ದೇಹವನ್ನು ಆಶ್ರಯಿಸಿ ಪ್ರಾಣಾಪಾನವಾಯುಗಳಿಂದ ಕೂಡಿದವನಾಗಿ ನಾಲ್ಕುವಿಧಗಳಾದ ಆಹಾರವನ್ನು ಜೀರ್ಣಗೊಳಿಸುತ್ತೇನೆ

“ಸರ್ವಸ್ಯ ಚಾಹಂ ಹೃದಿ ಸನಿವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ” ಎಲ್ಲರ ಹೃದಯದಲ್ಲಿ ಇದ್ದು ಸ್ಮೃತಿ, ಜ್ಞಾನಗಳನ್ನು ನೀಡುತ್ತೇನೆ. ಎಂದು ಭಗವಂತ ಶ್ರೀಕೃಷ್ಣ ಹೇಳಿದ್ದಾನೆ.

ಉಪನಿಷತ್ ಋಷಿಯಾದ ಅರುಣಿಯು ತನ್ನ ಮಗನಾದ ಶ್ವೇತಕೇತುವನ್ನು ಕುರಿತು ಸರ್ವವೇದಗಳ ಅಧ್ಯಯನ ಮಾಡಿ ತಿಳಿಯತಕ್ಕ ಬೇರೆಯೆಲ್ಲವನ್ನೂ ತಿಳಿದುಕೊಂಡಿದ್ದರೂ ಆತ್ಮತತ್ವವನ್ನು ಅರಿತುಕೊಳ್ಳದೆ ಇರುವವರೆಗೆ ಅಕೃತಾರ್ಥನೇ ಆಗಿರುತ್ತಾನೆ ಎಂದಿದ್ದನೆ.

“ಆಸೀತ್ ಏಕಮೇವಾದ್ವಿತೀಯಮ್” ಈ ಜಗತ್ತು ಉತ್ಪತ್ತಿಗೂ ಮೊದಲು ಒಂದೇ ಆದ ಸತ್ ಇತ್ತು ಇದೇ ಅಸತ್ ಕೂಡ ಆಗಿತ್ತು. ಜೀವ ದೇಹದಲ್ಲಿ ಸೇರಿದ್ದು ಕನ್ನಡಿಯಲ್ಲಿ ಬಿಂಬ ಸೇರಿದಂತೆ ನೀರು ಮುಂತಾದವುಗಳಲ್ಲಿ ಸೂರ್ಯಚಂದ್ರರ ಬಿಂಬ ಕಾಣುವಂತೆ ಜೀವನು ಎಲ್ಲ ಸ್ವರೂಪದಿಂದ ಆಗಿರುವ ಪರಮಾತ್ಮನೇ ಆಗಿದ್ದಾನೆ. ವಾಕ್ ಮನಸ್ಸಿನಲ್ಲಿ , ಮನಸ್ಸು ಪ್ರಾಣದಲ್ಲಿ ಪ್ರಾಣ ತೇಜದಲ್ಲಿ ತೇಜ ಸತ್ ನಲ್ಲಿ ಸೇರಿರುತ್ತದೆ . ಈ ಸತ್ ಎಂಬುದೇ ನೀನು. “ತತ್ ತ್ವಂ ಅಸಿ ನೀನು ಅದೇ ಆಗಿದ್ದೀಯಾ” ಎಂಬುದನ್ನು ತಿಳಿಸಿದ್ದಾನೆ.

ಜೇನುಹುಳುಗಳು ವಿವಿಧ ಹೂಗಳಿಂದ ಸಂಗ್ರಹಿಸಿದ ರಸವು ಒಂದುಗೂಡಿ ಜೇನಾಗುವಂತೆ ಏನೇನು ಕಾಣುತ್ತಿದೆಯೋ, ಏನೇನು ಕಾಣುತ್ತಿಲ್ಲವೋ ಎಲ್ಲವೂ ಒಂದೇ ಆದ ಆತ್ಮ- ಸತ್- ಬ್ರಹ್ಮ

ಒಂದು ಪುಸ್ತಕವನ್ನು ನೀವು ಓದುತ್ತಿದ್ದೀರಿ, ಅದನ್ನು ಆತ್ಮಎಂದುಭಾವಿಸಿಕೊಂಡರೆ ಅದರಲ್ಲಿರುವ ಹಾಳೆಗಳನ್ನು ದೇಹ ಎಂದು ತಿಳಿಯೋಣ. ವಿಷಯವನ್ನು ಓದುತ್ತಾ ಪುಟ ತಿರುವಿಹಾಕುವಿರಿ ಹಾಗೆಯೇ ಆತ್ಮ ಕರ್ಮಗಳನ್ನು ಕಳೆದುಕೊಳ್ಳುತ್ತಾ ದೇಹಗಳನ್ನು ಬದಲಿಸುತ್ತದೆ. ಇದೇರೀತಿ ಗ್ರಂಥಾಲಯದ ಪುಸ್ತಕಗಳೆಲ್ಲಾ ಬೇರೆ ಬೇರೆಯಾಗಿ ಕಂಡರೂ ಒಂದೇ ಮೂಲವಸ್ತುವಿನಿಂದ ರಚಿಸಲ್ಪಟ್ಟಿವೆ. “ಆತ್ಮೈವ ದೇವತಾಃ ಸರ್ವಾಃ ಸರ್ವಾಂ ಆತ್ಮನ್ಯವಸ್ಥಿತ” ಆತ್ಮನೇ ದೇವರು ಸರ್ವದರ ಸರ್ವವೂ, ಆತ್ಮನಲ್ಲವೇ? ಎಂದು ನಿತ್ಯ ಭಾವಿಸಬೇಕು , ಅಂತರ್ದಶನ ಮಾಡಿಕೊಳ್ಳಬೇಕು. ನಿರ್ವಾಣವಾಗಬೇಕು ಶೀತಲವಾದ ಅಂತಃಕರಣದಲ್ಲಿನಿತ್ಯಾತ್ಮ ಪರಮಾತ್ಮಸುಖದಲ್ಲಿರಬೇಕು ಎಂದು ಮುನಿ ರಮಣಶ್ರೀ ಹೇಳುತ್ತಾರೆ.

“ದೇಹವೆಂಬುದು ಕುದುರೆಯಾತ್ಮನದರಾರೋಹಿ” ದೇಹವೆಂಬುದು ಕುದುರೆ ಆತ್ಮ ಅದರ ಆರೋಹಿ ಮನಸ್ಸು ಬುದ್ಧಿಯ ಲಗಾಮುಗಳನ್ನು ಹಿಡಿದು ಸಾಗಬೇಕು.

ತೈಲಂ ತಿಲೇಷು ಕಾಷ್ಟೇಷುವಹ್ನಿ ಕ್ಷೀರೇ ಘೃತಂ ಯಥಾ ಗಂಧಂ ಪುಷ್ಪೇಷು ಭೂತೇಷು ತದಾತ್ಮಾವಸ್ಥಿತೇಹ್ಯಹಂ ಎಳ್ಳಿನಲ್ಲಿ ಎಣ್ಣೆಯೂ , ಕಟ್ಟಿಗೆಯಲ್ಲಿ ಬೆಂಕಿಯೂ , ಹಾಲಿನಲ್ಲಿ ತುಪ್ಪವೂ, ಹೂವಿನಲ್ಲಿ ಪರಿಮಳವೂ ಇರುವಂತೆ ಎಲ್ಲದರಲ್ಲಿ ಭಗವಂತ ಅಡಗಿದ್ದಾನೆ.ಆತ್ಮನು ಸತ್ವ ಸ್ವರೂಪ ನಿರ್ವಿಕಾರ, ಜ್ಯೋತಿರೂಪ,ನಿತ್ಯ, ಇದನ್ನೇ ಜೇಡರದಾಸೀಮಯ್ಯನವರು

ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ

ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ

ಶರೀರದೊಳು ಆತ್ಮವ ಆರೂ ಕಾಣದಂತಿರಿಸಿದೆ ನೀ

ಬೆರೆಸುವ ಬೇಧಕ್ಕೆ ಬೆರಗಾದನಯ್ಯ ರಾಮನಾಥ || ಎಂದಿದ್ದಾರೆ.

ನವದ್ವಾರೇ ಪುರೇ ದೇಹಿ ಹಂಸೋಲೇಲಾಯತೇ ಬಹಿಃ ವಶಿಸರ್ವಸ್ಯ ಲೋಕಸ್ಯ ಸ್ಥಾವರಸ್ಯ ಚರಸ್ಯಚ –ಶ್ವೇತಾಶ್ವರ ಉಪನಿಷತ್ತು ೩.೧೭

ಒಂಬತ್ತು ಬಾಗಿಲುಳ್ಳ ಪುರವೆಂಬ ಈ ದೇಹದಲ್ಲಿ ದೇಹಿಯಾದ ಹಂಸಸ್ವರೂಪಿ ಆತ್ಮನು ಸರ್ವಲೋಕ, ಸ್ಥಾವರ, ಜಂಗಮಗಳನ್ನು ವಶಮಾಡಿಕೊಂಡು ಒಳಹೊರಗೆ ಸಂಚರಿಸುತ್ತಾನೆ. ಸೋಹಂ ಅನ್ನು ಹಿಂದು ಮುಂದಾಗಿಸಿದರೆ ಹಂಸೋ ಎಂದಾಗುತ್ತದೆ. ಉಸಿರಾಟದಲ್ಲಿ ಕೂಡ ನಾವು ಉಸಿರು ಒಳಕ್ಕೆ ತೆಗೆದುಕೊಳ್ಳುವಾಗ ಸೋ ಎಂದೂ ಬಿಡುವಾಗ ಹಂ ಎಂದೂ ಹೇಳುವುದನ್ನು ಗಮನಿಸಬಹುದು. ನಮ್ಮ ನಿಜಸ್ವರೂಪ ಇಲ್ಲಿ ವ್ಯಕ್ತವಾಗುತ್ತದೆ ಎಂದು ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳುತ್ತಾರೆ. ನಮ್ಮ ಜೀವನದ ಗುರಿ ಪರಮ ಸತ್ಯವನ್ನು ತಿಳಿಯುವುದು. ಮುಖ್ಯವಾಗಿ ನಾನು ದೇಹ, ಜಡ ಸಾಯುತ್ತೇನೆ ಎಂಬ ಭಾವನೆಗಳನ್ನು ಕಡಿಮೆಮಾಡಿಕೊಂಡು ಅಮೃತಸ್ವರೂಪಿಯಾದವನು ನಾನು ಎಂದು ಯೋಚಿಸಿದಾಗಲೇ ಮುಕ್ತನಾಗಲು ಸತ್ಯಕಾಣಲು ಸಾಧ್ಯವಾಗುತ್ತದೆ ಎಂದು ತಿಳಿದವರು ಹೇಳುತ್ತಾರೆ.

ವಯಂ ಅಮೃತಸ್ಯ ಪುತ್ರಾಃ ನಾವು ಅಮೃತದ ಪುತ್ರರು. ಎಂದು ಉಪನಿಷತ್ ಘೋಷಿಸುತ್ತದೆ. ಪರಾತ್ಪರನದ ಆತ್ಮನು ನಾನು. ಬ್ರಹ್ಮನೂ ಅಲ್ಲ, ವಿಷ್ಣುವೂ ಅಲ್ಲ , ಶಿವನೂ ಅಲ್ಲ, ಮಾದಿಗನೂ ಅಲ್ಲ ಬ್ರಾಹ್ಮಣನೂ ಅಲ್ಲ ಇಂದ್ರಿಯಗಳೂ ಅಲ್ಲ, ಪೃಥಿವಿಯೂ ಅಲ್ಲ, ಆಕಾಶವೂ ಅಲ್ಲ , ನಿರ್ಮಲನೂ , ನಿರಂಜನನೂ, ಸಾಕ್ಷೀಭೂತನೂ ಪರಂಜ್ಯೋತಿಸ್ವರೂಪನೂ, ಶ್ರೇಷ್ಠನೂ, ಆನಂದಮಯನೂ, ಸತ್ಯನೂ, ಜ್ಞಾನಿಯೂ, ಸರ್ವೇಶ್ವರನೂ, ಸರ್ವತೋಮುಖನೂ, ಎಂದು ತಿಳಿಯುವುದೇ ನಿಜವಾದ ಜ್ಞಾನ. ಒಬ್ಬನನ್ನು ಅಜ್ಜ , ಅಪ್ಪ, ಅಣ್ಣ, ತಮ್ಮ ,ಗೆಳೆಯ, ಮಗ, ಮೊಮ್ಮಗ, ಮರಿಮಗ, ದೊಡ್ಡಪ್ಪ, ಚಿಕ್ಕಪ್ಪ, ಮಾವ , ಗುರು ಎಂದೆಲ್ಲಾ ಕರೆದರೂ ಇವುಗಳೆಲ್ಲಾ ಒಬ್ಬನಿಗೇ ಇರುವ ಉಪಾದಿಗಳಂತೆ ದೇವನೊಬ್ಬ ನಾಮಹಲವು . ದೇವನೊಬ್ಬ ಬೇರೆ ಬೇರೆ ವಸ್ತು , ಜೀವಿ ಮೊದಲಾದ ಉಪಾದಿಗಳ ರೂಪದಲ್ಲಿ ಕಾಣುತ್ತಿದ್ದಾನೆ. ಏಕಮೇವಾದ್ವಿತೀಯಂ ಬ್ರಹ್ಮಂ ಎಂದು ತಿಳಿವುದೆ ನಿಜವಾದ ಜ್ಞಾನ. ಎಂದು ಸಮಸ್ತ ಶಾಸ್ತ್ರಗಳು ಒಪ್ಪಿವೆ. ಲೋಕಗಳು, ಪದವಿಗಳು, ರೂಪಗಳು, ಚೇಷ್ಟೆಗಳೆಲ್ಲವೂ ನಾನೇ, ತನ್ನನ್ನು ಬಿಟ್ಟು ಬೇರೆ ಇಲ್ಲ ಎಂದು ತಿಳಿವುದೇ ಆಗಿದೆ.

ಒಬ್ಬ ವ್ಯಕ್ತಿ ಮನೆಯೊಳಗೆ ಮಲಗಿದ್ದವನು ಸ್ವಲ್ಪ ಹೊತ್ತಿನನಂತರ ಮನೆಯ ಅಂಗಳದಲ್ಲಿ ಕುಳಿತಿದ್ದು, ಮತ್ತೆ ಬೀದಿಯಲ್ಲಿ ನಡೆದ- ಮನೆಯಲ್ಲಿ ಮಲಗಿದ್ದವನು , ಅಂಗಳದಲ್ಲಿ ಕುಳಿತಿದ್ದವನು , ಬೀದಿಯಲ್ಲಿ ನಡೆದವನು ಇವರೆಲ್ಲರೂ ಒಬ್ಬನೋ ಬೇರೆ ಬೇರೆಯೋ? ಅಂತೆಯೇ ಆತ್ಮನೇ ಎಲ್ಲವೂ ಆಗಿದ್ದರೂ ಅವಿದ್ಯೆಯ ಭ್ರಾಂತಿಯಿಂದ ದುಃಖಿಯೂ ಸುಖಿಯೂ ಆಗುತ್ತ ಜನನ ಮರಣಗಳನ್ನು ಅನುಭವಿಸುತ್ತಲೂ ಇದ್ದೇವೆ. ಈ ಜಗತ್ತನ್ನು ಪರಮಾತ್ಮನು ಸೃಜಿಸಿ ರಕ್ಷಿಸಿ ಉಪಸಂಹಾರ ಮಾಡುವವನಾಗಿದ್ದಾನೆ. ಈ ಜಗತ್ತಿನ ಸೃಷ್ಠಿ, ಸ್ಥಿತಿ,ಲಯಗಳು ಯಾರಿಂದ ಆಗುವವೋ ಅವನೇ ಬ್ರಹ್ಮ ಎಂದು ಸೂತ್ರಕಾರರು ನಿರೂಪಿಸಿದ್ದಾರೆ. ಈ ಪರಮಾತ್ಮನನ್ನೇ ಶ್ರುತಿಗಳು ಪರಬ್ರಹ್ಮ, ಪರವಸ್ತು, ಸತ್, ಆಕಾಶ , ಜ್ಯೋತಿ, ಭೂಮಾ, ನಾರಾಯಣ, ಎಂದು ಬೇರೆಬೇರೆ ಹೆಸರುಗಳಿಂದ ಕೊಂಡಾಡುತ್ತವೆ. ಪರಬ್ರಹ್ಮನು ಪಂಚಭೂತಗಳು , ಪ್ರಪಂಚ ಮೊದಲಾದವುಗಳನ್ನು ಸೃಜಿಸಿ ತಾನು ಅದರೊಳಗೆ ಪ್ರವೇಶಿಸಿದ್ದಾನೆ ತದ್ ಸೃಷ್ಠ್ವಾ ತದೇವಾನು ಪ್ರಾವಿಶ್ಯ ಎಂದು ಹೇಳುತ್ತ ಭಗವಂತನು ಸರ್ವಾಂತರ್ಯಾಮಿಯೂ , ಸರ್ವಾತ್ಮನೂ ಆಗಿದ್ದಾನೆ ಎಂದು ಹೇಳುತ್ತಾರೆ. ಸತ್ಯಂ ಜ್ಞಾನಂ ಅನಂತಂ ಬ್ರಹ್ಮ ಎಂದೂ , ಸರ್ವವ್ಯಾಪಕನಾಗಿ ತನ್ನನ್ನುಳಿದು ಸಕಲ ಚೇತನಾಚೇತನ ಪದಾರ್ಥಗಳಿಗೆ ಶೇಷಿಯಾಗಿದ್ದಾನೆ. ಸ್ವಾಮಿಯಾಗಿದ್ದಾನೆ. ಈ ಎಲ್ಲ ಪದಾರ್ಥಗಳಿಗೆವೆ ದಾರಕನಾಗಿ, ನಿಯಾಮಕನಾಗಿ, ಶೇಷಿಯಾಗಿ, ಸರ್ವಶರೀರಿಯಾಗಿದ್ದಾನೆ. ಸರ್ವಾತ್ಮನಾಗಿದ್ದರೂ ಯಾವುದೇ ದೋಷಗಳಿಲ್ಲದೆ ಸಮಸ್ತ ಕಲ್ಯಾಣ ಗುಣಪೂರ್ಣನಾಗಿದ್ದಾನೆ. ಚೇತನ ಅಚೇತನಗಳನ್ನುನಿಯಂತ್ರಿಸುವವನೂ ಆಗಿದ್ದಾನೆ. ಅವಿಕಾರಾಯ ಶುದ್ಧಾಯ ನಿತ್ಯಾಯ, ಎಂದು ಅವನನ್ನು ಕರೆಯಲಾಗಿದೆ.

ಭಗವಂತನು ಜ್ಞಾನಸ್ವರೂಪಿ ಪಂಚೇಂದ್ರಿಯಗಳಿಗೆ ವಿಷಯವೆಂದು ಹೇಳಲಾಗದವನು. ಸರ್ವೇಶ್ವರನು ತನ್ನ ಪರಮ ಸೌಲಭ್ಯದ ಕಾರಣ ಚೇತನರ ಮನಸ್ಸಿನೊಳಗೆ ಪ್ರವೇಶಿಸಿ ಅಲ್ಲಿಯೇ ನೆಲೆಸಿರುತ್ತಾನೆ. ಹಕ್ಕಿ ಶಾಂತವಾಗಿ ಗೂಡುಸೇರುವಂತೆ ಜೀವನು ಪರಮಾತ್ಮನನ್ನು ಸೇರುತ್ತಾನೆ , ಜಗತ್ತೆಲ್ಲವೂ ಆತ್ಮವೇ ಆಗಿದೆ. ಲೋಕದ ಜನತೆ ಯಾರನ್ನೇ ಭಜಿಸಿದರೂ ಸರ್ವಶರೀರಾತ್ಮಕ ಭಗವಂತನನ್ನೇ ಸೇರುತ್ತದೆ.

ಆಕಾಶಾತ್ ಪತಿತಂ ತೋಯಂ ಯಥಾಗಚ್ಛತಿ ಸಾಗರಂ

ಸರ್ವದೇವ ನಮಸ್ಕಾರ ಕೇಶವಂ ಪ್ರತಿಗಚ್ಛತಿ.

ನಾನಾ ನದಿಗಳ ನೀರು ಸಾಗರಸೇರಿ ಸೂರ್ಯನ ಕೃಪೆಯಿಂದ ಆಗಸಕ್ಕೇರಿ ಮಳೆಯ ಮೋಡವಾಗಿ ಮಳೆಸುರಿಸುವಂತೆ ಸತ್ ನಿಂದ ಜೀವರು ಬರುತ್ತಾರೆ ಆಟಮುಗಿಸಿ ಮತ್ತೆ ಸತ್ ಸೇರುತ್ತಾರೆ. ಜ್ಞಾನಿಯಾದವನಿಗೆ ಎಲ್ಲಾವ್ಯವಹಾರಗಳೂ ಆತ್ಮನಿಂದಲೇ ನಡೆಯುತ್ತದೆ.

ಸರ್ವಕರ್ಮ ಸರ್ವ ಕಾಮ ಸರ್ವಗಂಧ ಸರ್ವರಸಗಳನ್ನು ವ್ಯಾಪಿಸಿರುವವನೇ ಆತ್ಮ : ಛಾಂದೋಗ್ಯ

ಸರ್ವಭೂತಗಳ ಶರೀರವನ್ನು ಅಂತರ್ಯಾಮಿಯಾಗಿ ಪಾಲಿಸುತ್ತಿರುವವನೇ ಅಂತರಾತ್ಮ ಅಂತರ್ಯಾಮಿ, ಅಮೃತ : ಸರ್ತ್ಯಂ ಜ್ಞಾನಂ ಅನಂತಂ ಬ್ರಹ್ಮ : ಬೃಹದಾರಣ್ಯಕ

ಬ್ರಹ್ಮಸ್ವರೂಪ

ಬ್ರಹ್ಮನನ್ನು ನಾಮ , ವಾಕ್ , ಮನಸ್ಸು , ಸಂಕಲ್ಪ , ಚಿತ್ತ,ಧ್ಯಾನ, ವಿಜ್ಞಾನ, ಬಲ ,ಅನ್ನ, ಆಪ್, ತೇಜ, ಆಕಾಶ , ಸ್ಮರಣ, ಆಶಾ, ಪ್ರಾಣ, ಮುಂತಾದರೂಪಗಳಲ್ಲಿ ಉಪಾಸನೆ ಮಾಡುತ್ತಾರೆ. ಯಾವುದರಿಂದ ಈ ಭೂತಗಳು ಹುಟ್ಟುವುವೋ ಯಾವುದರಲ್ಲಿ ಜೀವಿಸುವುವೋ ಯಾವುದರಲ್ಲಿ ಸೇರಿಕೊಳ್ಳುವುವೋ ಅದೇ ಬ್ರಹ್ಮ ಎಂದು ಶ್ರುತಿಗಳು ಹೇಳಿವೆ ಜೀವನು ಬ್ರಹ್ಮರೂಪಕ್ಕೆ ತಿರುಗುವುದೇ ಮೋಕ್ಷ.

ಅನೇಕ ಹೂಗಳ ರಸ ಒಂದಾಗಿ ಜೇನಿನಂತೆ ಆಗುವುದೇ ಮೋಕ್ಷ ; ಆತ್ಮನಿಗೆ ಉಂಟಾದ ಭ್ರಾಂತಿಯಿಂದ ಜೀವಾತ್ಮ ಎನಿಸುವನು. ಭ್ರಾಂತಿಯನ್ನು ಹೋಗಲಾಡಿಸಿಕೊಂಡು ಅದ್ವಿತೀಯನಾದ ಪರಬ್ರಹ್ಮಸ್ವರೂಪವನ್ನು ನಿರ್ಗುಣನನ್ನು ,, ಅಪಾರಮಹಿಮನನ್ನು ಅರಿಯುವವನು , ಅರಿಯಲಿರುವವನೂ ಅರಿಯುವ ವಸ್ತು ಎಲ್ಲವೂ ಒಬ್ಬನೇ, ತನ್ನ ನಿಜಸ್ವರೂಪ ಅರಿಯಬೇಕಾಗಿದೆ. ವೇಷ ಕಳಚಿದಾಗ ನಿಜರೂಪ ತಿಳಿಯುವಂತೆ , ಅವಿದ್ಯೆಯ ಮಾಯಾ ಮುಸುಗನ್ನು ಕಿತ್ತು ಸೆಳೆದಾಗ ನಿಜರೂಪ ವ್ಯಕ್ತವಾಗುತ್ತದೆ. ನಮ್ಮಲ್ಲಿ ಈ ಭ್ರಾಂತಿಯಿಂದ ಜಗತ್ತು ಜೀವಮಯವಾಗಿ ಕಾಣುತ್ತಿದೆ. ಭ್ರಾಂತಿ ತೊಲಗಿದರೆ ಬ್ರಹ್ಮಮಯವಾಗುತ್ತದೆ. ತಾನೇ ಜಗತ್ತು ; ಜಗತ್ತೇ ತಾನು. ಜಗದಂತರ್ಯಾಮಿಯಾದ ನಾನೊಬ್ಬನೇ ಜಗತ್ಕರ್ತನಾಗಿ ಇರುವವನೂ ನಾನೇ ಎಂದು ತಿಳಿಯುವುದು ನಿಜವಾದ ಜ್ಞಾನವಾಗುತ್ತದೆ. ಈ ಅವಿದ್ಯೆಯಿಂದಲೇ ಜೀವ ಎನಿಸಿಕೊಳ್ಳುವನು.

ನಾನು ನನ್ನದು ನನ್ನವರು ಎಂಬುದೆಲ್ಲಾ ಅವಿದ್ಯೆಯ ಕಾರಣದಿಂದ ಆವರಿಸಿಕೊಳ್ಳುತ್ತದೆ. ಎಲ್ಲವೂ ಭಗವಂತನ ಆಟ. ಚದುರಂಗದಾಟದಲ್ಲಿ ಚದುರಂಗದ ಹಾಸು, ಕಾಯಿಗಳು , ಆಡುವವನು, ಆಡಿಸಿಕೊಳ್ಳುವವನೂ, ಎದುರಾಳಿಯೂ, ಹೊಡೆಯುವವನೂ, ಹೊಡೆಸಿಕೊಳ್ಳುವವನು ಎಲ್ಲವೂ ಆಗಿ ತಾನೊಬ್ಬನೇ ಆಡುತ್ತಿದ್ದಾನೆ. ಜೊತೆಗೆ ಬೇರೆ ಬೇರೆಯದಂತೆಯೂ ಕಾಣುತ್ತಿದ್ದಾನೆ. ಮೂರ್ಖರಿರುವ ಸ್ಥಳದಲ್ಲಿ ಜ್ಞಾನಿಯು ಅವಸ್ಥೆ ಪಡುವಂತೆ ಅವಿದ್ಯೆಯಿಂದ ತುಂಬಿದ ದೇಹದಲ್ಲಿ ಮಂಗಳಸ್ವರೂಪನಾದ ಆತ್ಮನು ತಾನು ಸಂಕಲ್ಪಿಸಿದ ಕಾರ್ಯಗಳನ್ನು ಮಾಡುವುದು ಸಾಧ್ಯವಾಗುವುದಿಲ್ಲ ಎಂದಾಗ ಅವಿದ್ಯೆಗಳ ಶಕ್ತಿಯೇ ಹೆಚ್ಚೇನೋ ಎಂಬ ಸಂಶಯ ಬರುತ್ತದೆ. ಇದೆಲ್ಲ ಗುರುವಿನ ಪಾದಕಮಲಗಳಲ್ಲಿ ಭಕ್ತಿಯಿಟ್ಟು ಜೀವಿಸಿ ಜ್ಞಾನಪಡೆಯಲಿ ಎಂದು ಭಗವಂತನು ಹೂಡಿದ ಆಟವಿದು. ಶಾಂತಿ. ಶಮೆ, ದಮೆ, ಭಕ್ತಿ, ಜ್ಞಾನ ವೈರಾಗ್ಯಗಳನ್ನು ವಿದ್ಯೆ ಎಂದು ಕಾಮ , ಕ್ರೋಧ, ಮೋಹ, ತಾಮಸ ,ಅಹಂಕಾರ , ಮೂರ್ಖತ್ವ, ಹೆಂಡತಿ , ಮಕ್ಕಳು , ತಂದೆ , ತಾಯಿ, ಎಂಬ ದೇಹಾಭಿಮಾನ ಇದ್ದರೆ ಅದನ್ನು ಅವಿದ್ಯೆ ಎಂದು ತಿಳಿದವರು ಹೇಳುತ್ತಾರೆ.

ವಿದ್ಯಾ ಶರೀರದಿಂದ ಆತ್ಮನಿಗೆ ಮುಕ್ತಿಸಿಗುತ್ತದೆ. ಅವಿದ್ಯೆಯಿಂದ ಜೀವನು ಜನನ ಮರಣ ಚಕ್ರದಲ್ಲಿ ತೊಳಲುತ್ತ್ತಾನೆ. ಗುರುವಿನಿಂದ ಮಾತ್ರ ಈ ಅವಿದ್ಯೆ ನಾಶವಾಗುತ್ತದೆ. ವಿಷಯಗಳಿಂದ ಮುಕ್ತನಾಗದ ವರೆಗೆ ಜ್ಞಾನ ಬರುವುದಿಲ್ಲ. ನಾನು ಬ್ರಹ್ಮನಾದೆ ಎಂದು ಹೇಳಿಕೊಂಡ ಮಾತ್ರಕ್ಕೇ ಯಾರೂ ಬ್ರಹ್ಮನಾಗುವುದಿಲ್ಲ. ಕಪ್ಪೆ ನೀರಿನಲ್ಲಿ ಮುಳುಗಿ ಏಳುವುದರಿಂದ ಪವಿತ್ರವಾಗುವುದಿಲ್ಲ. ದೇಹವನ್ನು ರಥವೆಂದೂ, ಆತ್ಮನನ್ನು ರಥಿಕನೆಂದೂ ಇಂದ್ರಿಯಾದಿಗಳನ್ನು ಕುದುರೆ ಎಂದೂ, ಮನಸ್ಸನ್ನು ಸಾರಥಿಯನ್ನಾಗಿ ಮಾಡಿ ಬುದ್ಧಿಎಂಬ ಲಗಾಮನ್ನು ಕೊಡಲಾಗಿದೆ ಎಂದು ಯಮ ನಚಿಕೇತನಿಗೆ ಹೇಳುತ್ತಾನೆ.

ಪಂಡಿತಾಃ ಸಮದರ್ಶಿನಃ ಎಂಬಮಾತು ನಾಯಿಯಲ್ಲಿ, ಹಂದಿಯಲ್ಲಿ , ಕುದುರೆಯಲ್ಲಿ, ಆನೆಯಲ್ಲಿ , ಹುಲಿಯಲ್ಲಿ, ಸಿಂಹದಲ್ಲಿ, ಬಡವನಲ್ಲಿ,ಸಿರಿವಂತನಲ್ಲಿ ,ಉತ್ತಮನಲ್ಲಿ, ಅಧಮನಲ್ಲಿ, ಚೋರನಲ್ಲಿ ಪಂಡಿತನಲ್ಲಿ ಎಲ್ಲಜೀವಿಗಳಲ್ಲಿ ಇರುವ ಒಂದು ಸತ್ ಎಂಬುದನ್ನು ಮಾತ್ರ ಪಂಡಿತನಾದವನು ಕಾಣುತ್ತಾನೆ.

ಈಶನ ಪ್ರತಿರೂಪವೇ ವ್ಯಕ್ತಿ ಎಂದು ಹೇಳುವಲ್ಲಿ ಅವನಿಗೆ ಸೃಷ್ಠಿ ಏಕೆ ಸಾಧ್ಯವಿಲ್ಲ ? ಈಶನ ಸಾಮರ್ಥ್ಯ ಏಕೆ ವ್ಯಕ್ತವಾಗುತ್ತಿಲ್ಲ? ಎಂಬ ಪ್ರಶ್ನೆಗೆ ಉತ್ತರ ಅವಿದ್ಯೆ ಎಂಬ ಮಾಯೆ ಇವನನ್ನು ಮುಸುಗಿದೆ. ಹಾಗಾಗಿ ತನ್ನ ನಿಜಸ್ವರೂಪವನ್ನು ಮರೆತಿದ್ದಾನೆ .

ಪರಬ್ರಹ್ಮ ಒಬ್ಬನೇ ಎಂದು ಹೇಳುವಿರಲ್ಲಾ ಅವನು ಸರ್ವಾಂತರ್ಯಾಮಿ, ಸರ್ವಜ್ಞ , ಸರ್ವವ್ಯಾಪಿ ಇದು ಹೇಗೆ ಸಾಧ್ಯ?

ಸಾಗರದಲ್ಲಿ , ನದಿಯಲ್ಲಿ, ಕೆರೆಯಲ್ಲಿ ಒಬ್ಬನೇ ಸೂರ್ಯನ ಪ್ರತಿಬಿಂಬವಿರುತ್ತದೆ ಅಂತೆಯೇ ಈತ ಒಬ್ಬನೇ, ನೂರಾರು ಘಟಗಳಲ್ಲಿ , ಪಾತ್ರೆಗಳಲ್ಲಿ ನೀರುತುಂಬಿ ಇಟ್ಟಾಗ ಪ್ರತಿಯೊಂದರಲ್ಲೂ ಒಬ್ಬೊಬ್ಬ ಸೂರ್ಯನು ಕಾಣುವಂತೆ ಪ್ರತಿದೇಹದಲ್ಲಿ , ಜಡದಲ್ಲಿ ,ಚೇತನದಲ್ಲಿ ದೇವ ಅಡಗಿದ್ದಾನೆ. ಇದನ್ನೇ ತಿಳಿದವರು ಅಣುರೋ ಅಣಿಯಾನ್ ಮಹತೋ ಮಹೀಯಾನ್ ಎಂದರು. ಅಣುವಿನಲ್ಲಿ ಅಣುವಾಗಿಯೂ, ಮಹತ್ ನಲ್ಲಿ ಮಹತ್ ಆಗಿಯೂ ಇದ್ದಾನೆ ಎಂದು ಭಗವತ್ಸ್ವರೂಪವನ್ನು ಹೇಳುತ್ತಾರೆ. ಜಗಜ್ಜೀವಾದಿರೂಪೇಣ ಪಶ್ಯನ್ನಪಿಪರಾತ್ಮವಿತ್ ನತತ್ಪಶ್ಯತೆ ಚಿದ್ರೂಪಂ ಬ್ರಹ್ಮವಸ್ತ್ವಿತಿಪಶ್ಯತಿ (ಪಾಶುಪತ ಬ್ರಹ್ಮ ಉಪನಿಷತ್) ಪರಾತ್ಮರ ವಸ್ತುವನ್ನು ಜಗಜ್ಜೀವಾದಿರೂಪವಾಗಿ ಕಾಣಬೇಕು ಇದರಿಂದ ಸರ್ವರಲ್ಲಿಯೂ ಪರಮಾತ್ಮವಸ್ತು ಇರುವುದು ವ್ಯಕ್ತವಾಗುತ್ತದೆ.

ಸರ್ವಭೂತಸ್ಥಿತಂ ದೇವಂ ಸರ್ವೇಶಂನಿತ್ಯಮರ್ಚಯೇತ್ ಆತ್ಮರೂಪಂ ತಮಾಲೋಕ್ಯ ಜ್ಞಾನರೂಪಂ ನಿರಾಮಯಂ ಸರ್ವಭೂತಾಂತರಾತ್ಮ ಅಹಮಹಮಸ್ಮಿಸನಾತನ ( ಬ್ರಹ್ಮವಿದ್ಯೋಪನಿಷತ್) ಎಲ್ಲಭೂತಗಳಲ್ಲಿರುವ ಪರಮಾತ್ಮನನ್ನು ಅರ್ಚಿಸಬೇಕು , ಆತ್ಮಸ್ವರೂಪದಲ್ಲಿ ಅಂತರಂಗದಲ್ಲಿ ಕಾಣಬೇಕು.

ಸರ್ವಭೂತಗಳಲ್ಲಿ ಅಂತರಾತ್ಮನಾಗಿ ಬ್ರಹ್ಮವಿಷ್ಣುಮಾಹೇಶ್ವರರು ಸೇರಿದ್ದಾರೆ ( ರುದ್ರಹೃದಯೋಪನಿಷತ್)

ಏಕೋ ವಿಷ್ಣುರನೇಕೇಷು ಜಂಗಮ ಸ್ಥಾವರೇಷುಚ ಅನ್ಯಸ್ಯೂತೋವ ಸತ್ಯಾತ್ಮಭೂತೇ ಭೂಷ್ವಹಮವಸ್ಥಿತಃ (ವಾಸುದೇವೋಪನಿಷತ್) ಸ್ಥಾವರ ಜಂಗಮಗಳಲ್ಲೆಲ್ಲಾ ಇರುವವನು ವಿಷ್ಣುವೊಬ್ಬನೇ

ತ್ವಂ ಶಕ್ತಿರೇವ ಜಗತಾಖಿತ ಪ್ರಭಾವ ತ್ವಂನಿರ್ಮಿತಂಚ ಸಕಲಂ ಖಲುಭಾವ ಮಾತ್ರಂ (ದೇವೀ ಭಾಗವತ)

ಅಖಿಲಜಗತ್ತಿಗೆ ನೀನೇ ಶಕ್ತಿ, ಎಲ್ಲ ನಿರ್ಮಿತವಾಗಿರುವ ವಸ್ತುಗಳೂ ನೀನೆ ಇದರಲ್ಲಿ ನಟಿಸುತ್ತಿರುವವಳೂ ನೀನೆ ಎಂದು ಹೇಳಲಾಗಿದೆ.

ಊರ್ಧ್ವಮೂಲೋ ಅಧಃ ಶಾಕ ಏಷೋಶ್ವತ್ಥಸ್ಸನಾತನಃ ತದೇವಶುಕ್ರಂ ತದ್ಬ್ರಹ್ಮಂ ತದೇವಾಮೃತಮುಚ್ಯತೇ (ಕಠೋಪನಿಷತ್) ಬೇರುಗಳು ಮೇಲಿರುವ , ರೆಂಬೆಕೊಂಬೆಗಳು ಕೆಳಗಿರುವಂತೆ ಕಾಣುವ ಅಶ್ವಥ ವೃಕ್ಷದಂತೆ ಶುಕ್ರ , ಅಮೃತ, ಬ್ರಹ್ಮವೆಂದು ಹೇಳಲ್ಪಡುವವನು ಅವನೊಬ್ಬನೇ. ಜಗತ್ತಿನಲ್ಲಿರುವುದೆಲ್ಲ ಅವನೇ ಇದಕ್ಕೆಲ್ಲ ಅವನೇ ತಾಯಿ ಎಂದು ಬ್ರಹ್ಮಸೂತ್ರವೂ ಹೇಳುತ್ತದೆ.

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಮ್ ದೇಹಮಾಶ್ರಿತಃ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ನಾನು ವೈಶ್ವಾನರನಾಗಿ ಎಲ್ಲ ಪ್ರಾಣಿಗಳ ದೇಹದಲ್ಲಿ ಆಶ್ರಿತನಾಗಿದ್ದೇನೆ ಎಂದಿದ್ದಾನೆ.

ಸರ್ವ ಭೂತಗಳಿಗೂ ಹೃದಯವೇ ಆಧಾರ ಅಲ್ಲಿ ಪರಬ್ರಹ್ಮನಿದ್ದಾನೆ : ಬೃಹದಾರಣ್ಯಕ ಉಪನಿಷತ್

ಸಂಸಾರ ಎಂತಹುದು?

ಕ್ರೂರ ಮೃಗಗಳಿಂದ ಕೂಡಿದ ಭೀಕರವಾದ ಕಾಡು, ಸರ್ಪಗಳಿಂದ ತುಂಬಿದ ಪಾಳುಬಾವಿ, ಮೊಸಳೆಗಳಿಂದ ಕೂಡಿದ ಸಾಗರ , ಬ್ರಹ್ಮಾಂಡವನ್ನೇ ನಾಶಮಾಡುವ ದಾವಾನಲ, ಎಂದೆಲ್ಲ ಹೇಳುತ್ತಾ ಇದರಿಂದ ಬಿಡುಗಡೆ ಕೊಡಿಸು ಎಂದು ಶಂಕರರು ಕರಾವಲಂಬನ ಸ್ತೋತ್ರದಲ್ಲಿ ಹೇಳಿದ್ದ್ದಾರೆ.

ಕೌಪೀನ ಸಂರಕ್ಷಣಾರ್ಥೇ ಮಾರ್ಜಾಲಃ ( ಕೌಪೀನವನ್ನು ಕಾಪಾಡಿಕೊಳ್ಳಲು ಬೆಕ್ಕನ್ನು ತಂದಂತಹ ಕಥೆ)

ಸ್ವಾಮಿ ರಮಾನಂದರು ತಮ್ಮ ಮೆಚ್ಚಿನ ಶಿಷ್ಯನೊಂದಿಗೆ ಸಂಚಾರಮಾಡುತ್ತಸ ಒಂದು ಹಳ್ಳಿಯ ಬಳಿ ಬರುತ್ತಾರೆ. ಅಲ್ಲಿನ ಪ್ರಕೃತಿ ಶಿಷ್ಯನಿಗೆ ಇಷ್ಟವಾಗಿ ಗುರುಗಳ ಒಪ್ಪಿಗೆ ಪಡೆದು ಅಲ್ಲಿಯೇ ನೆಲೆನಿಂತು ಜಪ ತಪಗಳಲ್ಲಿ ತೊಡಗಿ , ಭಿಕ್ಷಾಟನೆಯಿಂದ ಜೀವಿಸುತ್ತಾ , ಪಾಳ್ದೇಗುಲದಲ್ಲಿ ರಾತ್ರಿಯನ್ನು ಕಳೆಯುತ್ತಾ ಇರುತ್ತಾನೆ. ಅವನ ಜೋಳಿಗೆಯನ್ನು , ಲಂಗೋಟಿಯನ್ನು ಒಂದು ಇಲಿ ಸದಾ ಕತ್ತರಿಸುತ್ತಾ ತೊಂದರೆ ಕೊಡುತ್ತಿರುತ್ತದೆ. ಊರಜನರಬಳಿ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಾನೆ. ಬೆಕ್ಕುಸಾಕಲು ಹೇಳುತ್ತಾರೆ. ಅದರಂತೆ ಬೆಕ್ಕನ್ನೂ ಕೊಡುತ್ತಾರೆ. ಅಂದಿನಿಂದ ತನಗಾಗಿ ಅನ್ನವನ್ನು ಬೆಕ್ಕಿಗಾಗಿ ಹಾಲನ್ನೂ ಬೇಡತೊಡಗುತ್ತಾನೆ. ಊರಜನರು ಹಾಲಿಗಾಗಿ ನೀವು ಬೇಡುವುದು ಬೇಡ ನಿಮಗಾಗಿ ಒಂದುಹಸುವನ್ನು ಕೊಡುತ್ತೇವೆ ಎಂದು ಹಸುವಿನ ವ್ಯವಸ್ಥೆ ಮಾಡುತ್ತಾರೆ. ಹಸುವಿಗಾಗಿ ಹುಲ್ಲುಬೇಡುವುದು ಆರಂಭವಾಗುತ್ತದೆ. ಹಳ್ಳಿಯ ಜನರೇ ಒಂದಷ್ಟು ಭೂಮಿಯನ್ನೂ, ಹಸುವನ್ನು ನೋಡಿಕೊಳ್ಳಲು ಒಬ್ಬ ವ್ಯಕ್ತಿಯನ್ನು ವ್ಯವಸ್ಥೆಮಾಡುತ್ತಾರೆ. ಜನ ನೀಡಿದ ಭೂಮಿಯಲ್ಲಿ ತರಕಾರಿಗಳನ್ನು ಬೆಳೆಸುತ್ತಾ ಹಸು , ಬೆಕ್ಕು, ಸೇವಕರನ್ನು ಸಾಕುತ್ತಾ ತಾನೂ ಹೊಲದ ಕೆಲಸದಲ್ಲಿ ನಿರತನಾಗಿರುತ್ತಾನೆ. ಇದೇವೇಳೆಗೆ ಅಲ್ಲಿಗೆ ಬಂದ ರಮಾನಂದರು ಅದೇವ್ಯಕ್ತಿಯನ್ನು ಕುರಿತು ಅಯ್ಯಾ ನನ್ನ ಶಿಷ್ಯನೊಬ್ಬ ಇಲ್ಲಿ ತಪಸ್ಸುಮಾಡುತ್ತಿದ್ದ. ಅವನು ಎಲ್ಲಿದ್ದಾನೆ ಎಂಬುದನ್ನು ದಯಮಾಡಿ ತಿಳಿಸುವೆಯಾ ಎಂದಾಗ ಆ ವ್ಯಕ್ತಿ ಸ್ವಾಮಿ ನಾನೇ ನಿಮ್ಮ ಶಿಷ್ಯ ಎಂದು ಕಾಲಿಗೆ ಬಿದ್ದು ನಡೆದ ಕಥೆಯನ್ನೆಲ್ಲಾ ವಿವರಿಸಿದಾಗ ಗುರು ಅಯ್ಯೋ ಮೂರ್ಖಾ ಕೌಪೀನ ರಕ್ಷಣೆಮಾಡಿಕೊಳ್ಳಲು ಹೋಗಿ ಸಂಸಾರಿಯಾದೆಯಾ ನಡಿ ನಡಿ ಎಂದು ತಮ್ಮೊಡನೆ ಕರೆದೊಯ್ಯುತ್ತಾರೆ. ಕೆಸರನ್ನು ತೊಳೆದುಕೊಳ್ಳುವುದಕ್ಕಿಂದ ಅಂಟದಂತೆ ದೂರವಿರಬೇಕು ಎಂದು ಬೋಧಿಸುತ್ತಾರೆ. ಇದನ್ನೇ ಯಶೋಧರಾ ನಾಟಕದಲ್ಲಿ ಮಾಸ್ತಿಯವರು ಮುಟ್ಟಬಹುದು ಮುಟ್ಟಿದರೆ ತಪ್ಪಲ್ಲ ಮುಟ್ಟದ್ದರೆ ಒಳಿತು ಎಂದು ಬುದ್ಧನು ಯಶೋಧರೆಗೆ ಹೇಳಿದಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ.

“ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವತು ಇಂದ್ರಿಯಾಣಿ ಹಯಾನಾಯುಃ” ಇಂದ್ರಿಯಗಳು ಕುದುರೆಗಳಂತೆ ಅವುಗಳನ್ನು ಹಿಡಿತದಲ್ಲಿಟ್ಟುಕೊಂಡು ಮುನ್ನಡೆದರೆ ಮೋಕ್ಷಸಾಧನೆ ಸಾಧ್ಯ ಎಂದು ಉಪನಿಷತ್ ಹೇಳುತ್ತದೆ.

ಆತ್ಮನೆಂದರೆ ದೇಹವಲ್ಲ ಅಥವ ಅವಯವ ಸಮೂಹವಲ್ಲ ಮನಸ್ಸಲ್ಲ ಈ ಎಲ್ಲವುಗಳಲ್ಲಿಯೂ ಇರತಕ್ಕ ಚೈತನ್ಯ, ಅದಕ್ಕೆ ನಾಶವೆಂಬುದಿಲ್ಲ, ಆತ್ಮನನ್ನು ಕೊಲ್ಲಲೂ ಯಾರಿಂದಲೂ ಸಾಧ್ಯವಿಲ್ಲ. ದೇಹ ಇಂದ್ರಿಯಗಳನ್ನು ಮೀರಿದ್ದು, ಇದು ಎಂದಿಗೂ ನಾಶವಾಗತಕ್ಕದ್ದಲ್ಲ. ದೇಹಕ್ಕೆ ಸೊಬಗು ಕೊಟ್ಟ ಚೈತನ್ಯವೇ ಆತ್ಮ, ಸ್ಪಪ್ನದಂತೆ ಈ ಜಗತ್ತೂಕೂಡ ಸ್ವಪ್ನದಲ್ಲಿ ಜಗತ್ತೂ ಸುಳ್ಳು, ಜಾಗೃತಿಯಲ್ಲಿ ಸ್ಪಪ್ನವೂ ಸುಳ್ಳು , ಸುಷುಪ್ತಿಯಲ್ಲಿ ಎಲ್ಲವೂ ಸುಳ್ಳಿ ಸ್ಪಪ್ನದಂತೆ ನಮ್ಮ ಬಾಳೂ ಕ್ಷಣಿಕ ಎಂದು ತಿಳಿದು ವ್ಯವಹರಿಸುವವನೇ ಜಾಣ ಎಂದು ಮಹರ್ಷಿ ಅಷ್ಟಾವಕ್ರರು ಹೇಳುತ್ತಾರೆ.

ಆತ್ಮವಿಕಾಸವೇ ಅಂತಃಶಕ್ತಿಯ ವೃದ್ಧಿ. ಆತ್ಮವೆಂಬುದು ಸ್ವರೂಪಸ್ಥಿತಿಯಲ್ಲ ಚೈತನ್ಯ ಚಿಚ್ಛಕ್ತಿ ಅಪಾರ ಅಚಿಂತ್ಯ ವ್ಯಕ್ತ ಅವ್ಯಕ್ತಸ್ವರೂಪ ಅಂತರ್ಯಾಮಿ ಶಕ್ತಿ. ಯಾವುದೇ ವಿಕಾರಪಡೆಯದೆ ಸರ್ವಕಾಲದಲ್ಲಿಯೂ ಇರತಕ್ಕದ್ದೇ ಆದ ಶಕ್ತಿ. ಗುಲಾಬಿ ಹೂವಿನ ಪಕ್ಕ ಗಾಜಿನ ಗೋಲಿ ಇಟ್ಟಾಗ ಗಾಜು ಗುಲಾಬಿ ಬಣ್ಣ ಪಡೆವಂತೆರ್, ಹೂವನ್ನು ನಾರಿನಿಂದ ಕಟ್ಟಿದಾಗ ಹೂವಿನ ಸುಗಂಧ ನಾರಿಗೂ ಬರುವಂತೆ, ಜಗತ್ತಿನ ಸಂಪರ್ಕ ಮಾಡಿದ ಮೇಲೆ ಅದನ್ನು ನಡಸಬೇಕು. ಈ ಉಪಾದಿಗಳೊಡನೆ ಕಾಣಿಸಿದಾಗ ಆತ್ಮವಸ್ತು ಜೀವ ಎನಿಸಿಕೊಳ್ಳುತ್ತದೆ. ಸ್ವತಃ ನಿಷ್ಕ್ರಿಯವಾದ ಆತ್ಮಕ್ಕೆ ಜಗತ್ಕಾರಣದಿಂದ ಕಾರ್ಯಾವಸ್ಥೆ ಬಂದಾಗ ಜೀವ ಎಂದೆನಿಸಿಕೊಳ್ಳುತ್ತದೆ.

ಜೀವದ ಮುಖ್ಯ ಕಾರ್ಯ ಆಹಾರಗ್ರಹಣ, ಮಲವಿಸರ್ಜನೆ, ವೃದ್ಧಿ ಮತ್ತು ಕ್ಷಯ

ಒಳಗಿನ ಚೈತನ್ಯಶಕ್ತಿಯನ್ನು , ಹೊರಗಿನ ಜಡಪ್ರಪಂಚವನ್ನೂ ಒಟ್ಟಾಗಿಸಿ ಹಿಡಿದುಕೊಂಡಿರುವುದೇ ಜೀವ.

ನಾನಾಕಾರ್ಯಸಾಧಿಸಲು ನಾನಾ ವೇಷ ಧರಿಸಿದೆ. ತಲೆನುಣ್ಣಗೆ ಮಾಡಿಸಿಕೊಂಡು ಕಾವಿಧರಿಸಿದವ ಸನ್ಯಾಸಿ ಎನಿಸಿಕೊಳ್ಳುತ್ತಾನೆ, ಖಾಕಿಧರಿಸಿದವ ಪೋಲೀಸ್ ಎಂದೂ ಹೇಳುವಂತೆ ದೇಹಧರಿಸಿದವನನ್ನು ಜೀವ ಎನ್ನುತ್ತೇನೆ ರೂಪಾಯಿ ನಾಣ್ಯ – ಅದರೊಳಗಿನ ಪೈಸೆ.

ಸಮುದ್ರದಲ್ಲಿ ನೊರೆ , ನೀರುಗುಳ್ಳೆ, ಇವೆ, ನೊರೆಯಲ್ಲಿ ಸಮುದ್ರವಿಲ್ಲ ಅಂತೆಯೇ ತ್ರಿಗುಣಗಳಿಂದ ಏನೆಲ್ಲಾ ವೈಪರಿತ್ಯಗಳು ಆದರೂ ಅದು ಬ್ರಹ್ಮಲಕ್ಷಣವಲ್ಲ , ತ್ರಿಗುಣ ಮೀರಿದರೆ ಬ್ರಹ್ಮನಾಗುತ್ತಾನೆ, ಹಗ್ಗದ ತುಂಡು ಸರ್ಪಸ್ಮೃತಿ ಎರಡೂ ಇಲ್ಲದೆ ಹೋಗಿದ್ದಿದ್ದರೆ ಭ್ರಾಂತಿ ಉಂಟಾಗುತ್ತಿರಲಿಲ್ಲ, ಭಯ ಆತಂಕ ಉಂಟುಮಾಡಿದ್ದೇ ಅವಿದ್ಯೆ.

ಮಣಿಯಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ

ಮನಗಾಣಿಸಲು ದೈವದದ್ಭುತವ

ಮನುಜರೊಳಗಾಗಾಗ ತೋರ್ಪ ಮಹನೀಯ ಗುಣ

ವನುವಾದ ಬೊಮ್ಮನದು ಮಂಕುತಿಮ್ಮ

ತಸ್ಮಾತ್ಸರ್ವಗತಂ ಬ್ರಹ್ಮ ಏಕೋದೇವ ಸರ್ವಭೂತೇಷು ಗೂಢ ಸರ್ವವ್ಯಾಪಿ ಸರ್ವಭೂತಾಂ ತದಾತ್ಮಾ ಓಂ ಮಿತ್ಯೇಕಾಕ್ಷರಂ ಬ್ರಹ್ಮ ಒಂದೇ ಆದ ಬ್ರಹ್ಮವು ಎಲ್ಲಜಡ,ಚೇತನಗಳಲ್ಲಿ ರಹಸ್ಯವಾಗಿ ಅಡಗಿದೆ ಎಂದು ಉಪನಿಷತ್ತು ಹೇಳುವುದು

ಮಿಠಾಯಿ ಅಂಗಡಿಯವನು ಬಗೆಬಗೆಯಾದ ರುಚಿರುಚಿಯಾದ ಮಿಠಾಯಿಗಳನ್ನು ತಯಾರಿಸುತ್ತಾನೆಯಾದರೂ ರುಚಿಗೆ ವಶನಾಗುವುದಿಲ್ಲವೋ ಅಂತೆ ಇಂದ್ರಿಯನಿಗ್ರಹಮಾಡಬೇಕು.

ನಿಜವಾದ ಜ್ಞಾನ

ನೀರಿನಲ್ಲಿ ಮುಳುಗಿದವನು ಉಸಿರಾಡಲು ಗಾಳಿಗಾಗಿ ಒದ್ದಾಡುವಂತೆ , ದಾರಿತಪ್ಪಿದ ವ್ಯಕ್ತಿ ತನ್ನ ಗುರಿಸೇರಲು ತವಕಿಸುವಂತೆ, ಯಾರಲ್ಲಿ ಆತ್ಮನನ್ನುಕುರಿತು ವ್ಯಾಕುಲತೆ ಇರುತ್ತದೋ ಅವನಿಗೆ ಗುರು ರಮಾನಂದರಂತೆ ಗುರು ದೊರೆಯುತ್ತಾನೆ. ಅವನ ಮೂಲಕ ಆತ್ಮದರ್ಶನವಾಗುತ್ತದೆ. ಕಫವಾತಪಿತ್ಥ ರಕ್ತಮಾಂಸ, ಕೊಬ್ಬು ಎಲುಬು ಮಜ್ಜೆ, ರೇತಸ್ಸು, ಕ್ರಿಮಿ. ಮೂತ್ರ ಪೂರಿಷಗಳು ಮುಂತಾದ ಅನೇಕ ದ್ವಂದ್ವದುಃಖಗಳ ಆಗರವಾದ ಈ ದೇಹಾರಣ್ಯದಲ್ಲಿ ಮೋಹಎಂಬ ಬಟ್ಟೆಯಿಂದ ಕಣ್ಣನ್ನು ಕಟ್ಟಿಕೊಂಡು ಸ್ನೇಹಿತರು, ಹೆಂಡತಿ, ಮಕ್ಕಳು, ದನ-ಕರು,ನೆಂಟರು –ಇಷ್ಟರು ಎಂಬ ಆಶಾಪಾಶದಿಂದ ಬಿಗಿಯಲ್ಪಟ್ಟು ಪಾಪಪುಣ್ಯವೆಂಬ ಕಳ್ಳರ ಕೈಗೆ ಸಿಕ್ಕಿ ಅಯ್ಯೋ ನಾನು ಇಂಥವರ ಬಂಧು , ಇಂಥವರ ಮಗ, ಇಂಥಹ ವ್ಯಕ್ತಿ ಎಂದೆಲ್ಲಾ ಹೇಳುತ್ತಿರುವಾಗ ಹೆಚ್ಚಿನ ಪುಣ್ಯಫಲಹೊಂದಿದ್ದರೆ ಗುರುವಿನ ಅನುಗ್ರಹವಾಗಿ ಎಲ್ಲದರಿಂದ ಬಿಡುಗಡೆ ಹೊಂದುವ ಮಾರ್ಗವನ್ನು ಕಂಡುಕೊಳ್ಳುತ್ತಾನೆ. ಹೀಗೆ ಅವಿದ್ಯೆ ನಾಶಗೊಳ್ಳಲು ಸತ್ ಸ್ವರೂಪವನ್ನು ತಿಳಿಯುತ್ತಾನೆ. ಜ್ಞಾನಿಗಳಿಗೆ ಶರೀರವುಂಟೆಂಬುದು ವ್ಯವಹಾರದೃಷ್ಠಿಯಿಂದಲೇ ಅವನ ದೃಷ್ಠಿಯಲ್ಲಿ

ಶರೀರವೆಂಬು ಮಿಥ್ಯೆಮಾತ್ರ ಪ್ರಾರಬ್ಧಕರ್ಮ ಮುಗಿವವರೆಗೆ ಜನನ-ಮರಣಗಳ ಆಟ ಇದ್ದದ್ದೇ. ಬಾಣವನ್ನು ಬಿಟ್ಟಾಗ ಅದುವೇಗವನ್ನು ಪಡೆದು ಹೋಗುತ್ತಾ ಗುರಿಮುಟ್ಟಿದಕೂಡಲೇ ಬೀಳುವಂತೆ ಕರ್ಮನಾಶವಾಗುವವರೆಗೆ ಇದೆಲ್ಲಾ ಇದ್ದದ್ದೇ.

ಸಾವು?

ಜೀವನು ಶರೀರ ಬಿಟ್ಟು ಹೋಗುವಾಗ ಪರಿಮಳವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಂತೆ ಹೋಗುತ್ತದೆ. ವೃಕ್ಷದಿಂದ ಕಳಚಿದ ಹಣ್ಣು ಭೂಮಿಗೆ ಬೀಳುವಂತೆ ಇತರ ಗರ್ಭವನು ಜೀವನು ಸೇರುತ್ತಾನೆ -ಬೃಹದಾರಣ್ಯಕ ಉಪನಿಷತ್.

ಮನಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ ಬಂಧಯಾ ವಿಷಯಾಸಕ್ತಿಂ ಮುಕ್ತ್ಯೈ ನಿರ್ವಿಷಯಂ ಮನಃ –ಮೈತ್ರಾವಣ್ಯುಪನಿಷತ್.

ದೇಹ ಹುಟ್ಟುತ್ತದೆ, ಸಾಯುತ್ತದೆ , ಹುಟ್ಟಿದಾಗ ಇದಕ್ಕೆ ಚೈತನ್ಯಕೊಡುವ , ಇರುವಾಗ ಸಲಹುವ, ಶವವಾದಾಗ ಬಿಟ್ಟುಹೋಗುವ ವಸ್ತುವೇ ಆತ್ಮ . ಅದು ಜನನ ಮರಣಸ್ಥಿತಿಯನ್ನು ಮೀರಿದುದು. ಯೋಗಿಗಳು ಸ್ವಪ್ರಯತ್ನದಿಂದ ತಮ್ಮ ಶರೀರದಲ್ಲಿ ಆತ್ಮನನ್ನು ಕಾಣುತ್ತಾರೆ.

ದ್ವಾಸುಪರ್ಣ--- ಸಮಾನಮ್ ವೃಕ್ಷಂ ಪರಿಷಸ್ವಜಾತೆ ತಯೋರನ್ಯ ಪಿಪ್ಪಿಲಂಸ್ಯದ್ವತ್ತ್ಯನ್ನಶ್ನನ್ನತ್ಯೌ ಅಭಿಚಾಕಶೀತಿ. ವೃಕ್ಷದ ಮೇಲೆ ಕುಳಿತ ಚಿನ್ನದ ರೆಕ್ಕೆಯುಳ್ಳ ಎರಡು ಹಕ್ಕಿಗಳಲ್ಲಿಒಂದು ಶಾಂತವಾಗಿ ಕುಳಿತು ಎಲ್ಲವನ್ನೂ ನೋಡುತ್ತಿದೆ. ಇನ್ನೊಂದು ಕೊಂಬೆ ಕೊಂಬೆಗಳಿಗೂ ಹೋಗಿ ಅಲ್ಲಿರುವ ಹಣ್ಣುಗಳನ್ನು ತಿಂದು ಬಳಲಿ ಮತ್ತೆ ಅದೇಕೊಂಬೆಗೆ ಬಂದು ಕುಳಿತಂತೆ ಜೀವಾತ್ಮ ಮತ್ತು ಪರಮಾತ್ಮನ ವಿವರಣೆಯನ್ನು ರಾಮಕೃಷ್ಣಪರಮಹಂಸರು ಹೇಳುತ್ತಾರೆ. ಬಳಲಿದ ಹಕ್ಕಿಯೇ ಜೀವಾತ್ಮ , ಸುಮ್ಮನೆ ಕುಳಿತು ಆಗುವುದನ್ನೆಲ್ಲ ನೋಡುತ್ತಿದ್ದದ್ದು ಪರಮಾತ್ಮ ಎಂದು ವಿವರಿಸುತ್ತಾರೆ.

ಹೇಗೆ ವೃಕ್ಷದ ಒಂದು ಕೊಂಬೆ ಒಣಗಿ ಬಿದ್ದರೂ ಅದರ ಇನ್ನೊಂದು ಕಡೆ ಚಿಗುರು ಬಂದು ವೃಕ್ಷ ಜೀವಂತವಾಗಿರುತ್ತದೋ ಹಾಗೆ ಜೀವನಿಗೆ ನಾಶವೆಂಬುದೇ ಇಲ್ಲ ಶರೀರ ನಾಶವಾಗುತ್ತದೆ ಹೊರತು ಜೀವವಲ್ಲ.

ಸ್ಥೂಲಶರೀರದ ಜನನ-ಮರಣಗಳನ್ನೇ ಜೀವನ ಜನನ-ಮರಣಗಳೆಂದು ಜನರು ಗೌಣವಾಗಿ ವ್ಯವಹರಿಸುತ್ತಾರೆ. ಮರಣದಲ್ಲಿ ಜೀವ ಬ್ರಹ್ಮನನ್ನು ಸೇರಿದಮೇಲೂ ಜನ್ಮಾಂತರ ಹೊಂದಬಹುದು. ಯಾವುದರಲ್ಲಿ ಸೇರಿಕೊಂಡರೆ ಜೀವನು ಸ್ವರೂಪದಿಂದ ಸಾಯದೆ ಇರುವನೋ ಅದೇ ಸೂಕ್ಷ್ಮವಾದ ಎಲ್ಲರ ಆತ್ಮ ಅದೇ ಸತ್ಯ , ನಿತ್ಯ.

ಆಲದ ಹಣ್ಣು ತಂದು ಸೀಳಿ ಅದರ ಬೀಜವನ್ನು ತೆಗೆದುಕೊಂದು ಸೀಳಿದರೆ ಏನೂ ಕಾಣುವುದಿಲ್ಲ. ಆದರೆ ಅದೇ ಬೀಜದ ಸೂಕ್ಷ್ಮ ಅಂಶದಿಂದ ವೃಕ್ಷ ಹುಟ್ಟುತ್ತದೆ. ಬೆಳೆಯುತ್ತದೆ. ಅಂತೆಯೇ ಅಣುವಿನಂತೆ ಇರುವ ಸತ್ ನಿಂದಲೇ ಜಗತ್ತು ಆಗಿದೆ. ಈ ಜಗತ್ತಿಗೆ ಮೂಲವಾದದ್ದೇ ಆತ್ಮ. ನೀರೊಳಗಿನ ಉಪ್ಪು, ಕರಗಿದ ಸಕ್ಕರೆ, ಹುಳಿ ಯಾವುದೇ ಆದರೂ ಕಣ್ಣಿಗೆ ಕಾಣದ ತೆರದಿ ಇದ್ದರೂ , ನಾಲಿಗೆಗೆ ತಿಳಿಯುವಂತೆ, ಬೀಜದ ಒಳಗಿರುವ ವೃಕ್ಷ ಕಣ್ಣಿಗೆ ಕಾಣದು. ವಿಶೇಷರೀತಿಯಿಂದ ಅರಿಯಬೇಕಾಗುತ್ತದೆ. ಹಾಗೆ ದೇಹದೊಳಗಿರುವ ಆತ್ಮ ಕಾಣೋಲ್ಲ ಇದನ್ನೇ ದಾಸೀಮಯ್ಯ ನೀ ಬೆರಸುವ ಬೇಧಕ್ಕೆ ಬೆರಗಾದೆ ಎಂದಿರುವುದು.

ಕನಸಿನ ಗಂಟನ್ನು ಕಳೆದುಕೊಂಡವನಂತೆ ಸತ್ತವರಿಗಾಗಿ ಅಳುವವನು ಮೂರ್ಖ ಎಂದು ಜ್ಞಾನಿಗಳು ಹೇಳುತ್ತಾರೆ.

ಸಾವೇ ಇಲ್ಲವೆಂದಮೇಲೆ ಸತ್ತವನಿಗಾಗಿ ಅಳುವುದು ಸರಿಯೇ ಎಂದು ಪ್ರಶ್ನಿಸುತ್ತಾರೆ.

ಸಾವು ಎಂಬುದು ದೇಹಸಂಬಂಧಿ, ಮಾತ್ರ, ರಾಮಾಯಣದ ನಾಟಕ ನಡೆಯುತ್ತಿದೆ , ರಾಮನ ಪಾತ್ರಧಾರಿ ನಿಜಕ್ಕೂ ರಾಮನೇ? ಸೀತೆ ನಿಜಕ್ಕೂ ಸೀತೆಯೆ ಎಂದು ಪ್ರಶ್ನಿಸಿದಾಗ ಇಲ್ಲ ಎಂಬ ಉತ್ತರವೇ ಸಿಗುತ್ತದೆ. ರಾಮನ ವೇಷದಾರಿ ಅಷ್ಟೆ ಎಂಬ ಸತ್ಯ ತಿಳಿದಿರುತ್ತದೆ. ಹಾಗೆಯೇ ಆತ್ಮನು ದೇಹಧರಿಸಿ ಮುಂದೆ ನಿಂತಿದ್ದಾನೆ. ಒಂದೊಮ್ಮೆ ಬಿಟ್ಟು ತೆರಳುತ್ತಾನೆ. ಅವಿದ್ಯೆ ಎಂಬುದು ಆವರಿಸಿರುವುದರಿಂದ ತಾನು ದೇಹ ಎಂದೇ ಭಾವಿಸಿ ದೇಹಕ್ಕಾಗುವ ನೋವು, ನಲಿವುಗಳನ್ನು ಆಚರಿಸುತ್ತಿದ್ದಾನೆ. ಅನುಭವಿಸುತ್ತಿದ್ದಾನೆ. ಅಷ್ಟೇ.

Monday, February 22, 2010

ಗೆದ್ದಲು ಹುಳುಗಳು ಮತ್ತು ಹಕ್ಕಿಗಳು.


ಕಾಡಿನ ಮರವೊಂದರಲ್ಲಿ ಹಕ್ಕಿಗಳು ವಾಸವಾಗಿದ್ದವು . ಅದೇ ಮರದಲ್ಲಿ ಒಂದು ಹಾವೂ ವಾಸವಾಗಿತ್ತು . ಅದು ಹಕ್ಕಿಯಮರಿಗಳನ್ನು ತಿನ್ನಲು ಆರಂಭಿಸಿತ್ತು. ಇದರಿಂದ ಹಕ್ಕಿಗಳು ಚಿಂತೆಗೀಡಾದವು. ಚಿಂತಿಸುತ್ತಾ ಮರದ ಕೆಳಗೆ ಇದ್ದ ಗೆದ್ದಲು ಹುಳುಗಳನ್ನು ತಿನ್ನಲೆಂದು ಬಂದವು. ಗೆದ್ದಲು ಹುಳುಗಳ ಮುಖಂಡ ಹಕ್ಕಿಗಳ ಚಿಂತೆ ಏನೆಂದು ಕೇಳಿದನು ಹಕ್ಕಿಗಳು ತಮ್ಮ ಚಿಂತೆಯನ್ನು ಹೇಳಿಕೊಳ್ಳಲು ಗೆದ್ದಲು ಹುಳುಗಳ ಮುಖಂಡ ತಾವೂ ವಿಪತ್ತಿನಿಂದ ಪಾರಾಗಲು ಯೋಚಿಸಿದನು. ಮೀನಿನ ಮಾಂಸವನ್ನು ಮುಂಗುಸಿಯ ಬಿಲದಿಂದ ಹಾವಿನ ಗೂಡಿನವರೆಗೆ ಹಾಕಿ ಎಂದನು . ಇದರ ಪರಿಣಾಮವನ್ನು ಯೋಚಿಸದ ಹಕ್ಕಿಗಳು ಗೆದ್ದಲು ಹುಳುಗಳ ಮುಖಂಡ ಹೇಳಿದಂತೆ ಮಾಡಿದವು. ಮೀನ ಮಾಂಸವನ್ನು ತಿನ್ನುತ್ತಾ ಬಂದ ಮುಂಗುಸಿ ಹಾವನ್ನು ತಿಂದು , ಹಕ್ಕಿಗಳ ಮರಿಗಳನ್ನೂ , ಹಕ್ಕಿಗಳನ್ನೂ ತಿಂದು ಹಾಕಿತು.
ತನ್ನ ಶತ್ರುವಿನ ಬಳಿ ಸಲಹೆ ಕೇಳುವುದು ಮೂರ್ಖತನ




ಸಿಗ್ನಲ್ ದೀಪ


ಒಂದು ದೊಡ್ಡರಸ್ತೆ. ಆ ರಸ್ತೆಯ ಸಿಗ್ನಲ್ ಬಳಿಯ ಮರವೊಂದರ ಮೇಲೆ ಕಾಗೆಯೊಂದು ವಾಸವಾಗಿತ್ತು. ಅದು ಪ್ರತಿದಿನ ವಾಹನಗಳು ಬರುವುದನ್ನು ನಿಲ್ಲುವುದನ್ನು ಮತ್ತು ಹೋಗುವುದನ್ನು ಗಮನಿಸುತ್ತಿತ್ತು. ಜೊತೆಗೆ ಸಿಗ್ನಲ್ ದೀಪದ ಬಣ್ಣ ಬದಲಾಗುವುದನ್ನೂ ಗಮನಿಸುತ್ತಿತ್ತು. ಒಮ್ಮೆ, ಎಲ್ಲಾ ಕಾಗೆಗಳನ್ನು ಕರೆದು ತಾನು ಇನ್ನು ಮುಂದೆ ಕಾಗೆಗಳ ರಾಜ ಎಂದಿತು. ತನ್ನಲ್ಲಿರುವ ಶಕ್ತಿಯನ್ನು ತೋರುವುದಾಗಿ ಹೇಳಿತು. ಇಲ್ಲಿ ಹೋಗುತ್ತಿರುವ ಎಲ್ಲಾ ವಾಹನಗಳನ್ನು ನಿಲ್ಲಿಸುವೆ ಎಂದಿತು. ಮಂತ್ರಗಳನ್ನು ಹೇಳುವಂತೆ ನಟಿಸುತ್ತಾ ಸಿಗ್ನಲ್ ದೀಪದ ಬಣ್ಣ ಬದಲಾಗುವುದನ್ನು ಗಮನಿಸುತ್ತಿತ್ತು. ಕೆಂಪು ದೀಪ ಉರಿಯಲು ಆರಂಭಿಸಿದ ಕೂಡಲೇ ಎಲ್ಲಾ ವಾಹನಗಳು ನಿಲ್ಲಲಿ ಎಂದಿತು. ಎಲ್ಲಾವಾಹನಗಳು ನಿಂತವು. ಹಳದಿ ದೀಪ ಉರಿಯಲು ಆರಂಭವಾದಾಗ ಎಲ್ಲ ವಾಹನಗಳು ಹೊರಡಲು ಸಿದ್ಧವಾಗಲಿ ಎಂದಿತು. ಎಲ್ಲಾ ವಾಹನಗಳೂ ಹೊರಡಲು ಸಿದ್ಧವಾದವು. ಹಸಿರು ದೀಪ ಉರಿಯಲು ಎಲ್ಲಾ ವಾಹನಗಳೂ ಹೊರಡಲಿ ಎಂದಿತು ಎಲ್ಲಾವಾಹನಗಳೂ ಹೊರಟವು ಇದನ್ನು ಕಂಡ ಕಾಗೆಗಳು ಅಚ್ಚರಿಗೊಂಡು ಸಿಗ್ನಲ್ ದೀಪದ ಕಾಗೆಯನ್ನು ರಾಜನನ್ನಾಗಿ ಮಾಡಿದವು.




ಬೆಕ್ಕುಮತ್ತು ನರಿ
ಒಂದು ಕಾಡಿನಲ್ಲಿ ಬೆಕ್ಕು ಮತ್ತು ನರಿ ವಾಸವಾಗಿದ್ದವು. ಒಮ್ಮೆ ಇವೆರಡೂ ಭೇಟಿಯಾಗಿ ಮಾತಿಗಿಳಿದವು. ನರಿಯು ತನ್ನ ಬಗ್ಗೆ ತಾನೇ ಹೊಗಳಿಕೊಳ್ಳಲು ಆರಂಭಿಸಿತು. ಬೇಟೆನಾಯಿಗಳಿಂದ ತಪ್ಪಿಸಿಕೊಳ್ಳಲು ತನ್ನ ಬಳಿ ಹಲವಾರು ಉಪಾಯಗಳು ಇರುವುದಾಗಿ ಜಂಭಕೊಚ್ಚಿಕೊಂಡಿತು. ಬೆಕ್ಕು ಮೌನವಾಗಿ ಆಲಿಸುತ್ತಿತ್ತು. ನರಿಯು “ ಬೇಟೆನಾಯಿಗಳು ಬಂದರೆ ನೀನು ಹೇಗೆ ತಪ್ಪಿಸಿಕೊಳ್ಳುವೆ” ಎಂದು ಬೆಕ್ಕಿಗೆ ಕೇಳಿತು. ಮರಹತ್ತಿ ತಪ್ಪಿಸಿಕೊಳ್ಳುವೆ ಎಂದಿತು ಬೆಕ್ಕು ನರಿಯಣ್ಣ ನಿನ್ನ ಹಿಂದೆನೋಡು ಬೇಟೆನಾಯಿಗಳು ಬರುತ್ತಿವೆ ಈಗನಿನ್ನ ಉಪಾಯಗಳನ್ನು ಬಳಸು ಎಂದಿತು. ನರಿ ಓಡಲು ಆರಂಭಿಸಿತು , ಬೇಟೆನಾಯಿಗಳು ನರಿಯನ್ನು ಹಿಡಿದು ಕೊಂದು ಹಾಕಿದವು
ನೀತಿ - ಅತಿಯಾದ ಜಂಬ ಒಳ್ಳೆಯದಲ್ಲಾ.



ಕುರಿಯ ಜಾಣತನ
ಒಂದು ಕಾಡಿನಲ್ಲಿ ಮೇಯುತ್ತಿದ್ದ ಕುರಿಯನ್ನು ತೋಳವೊಂದು ನೋಡಿತು. ತಿನ್ನಲೆಂದು ಓಡಿ ಬಂದಿತು. ಇದನ್ನು ಕಂಡು ಹೆದರಿದ ಕುರಿಯೂ ಓಡಿತು. ಓಡುತ್ತಾ ಓಡುತ್ತಾ ಎರಡೂ ಆಯಾಸಗೊಂಡವು. ಕುರಿಯು ಎತ್ತರದ ಬಂಡೆಯ ಮೇಲೆ ನಿಂತಿತು. ತೋಳವು ಚೇತರಿಸಿಕೊಳ್ಳಲು ಬಂಡೆಯ ಕೆಳಗೆ ಬಂದು ನಿಂತಿತು.ತೋಳದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವೆಂದು ತಿಳಿದಿದ್ದ ಕುರಿಗೆ ತೋಳದಿಂದ ತಪ್ಪಿಸಿಕೊಳ್ಳುವ ಉಪಾಯ ಹೊಳೆಯಿತು. ಬಂಡೆಯ ಮೇಲಿಂದಲೇ ತೋಳರಾಯನೇ ಇನ್ನು ನಾನು ನಿನ್ನಿಂದ ತಪ್ಪಿಸಿಕೊಳ್ಳಲಾರೆ ಆದುದರಿಂದ ನೀನು ಬಾಯಿತೆರೆದು ನಿಲ್ಲು ಇಲ್ಲಿಂದ ನಿನ್ನ ಬಾಯಿಗೆ ನೇರವಾಗಿ ಹಾರುತ್ತೇನೆ ಎಂದಿತು. ಮೂರ್ಖತೋಳವು ಬಾಯಿತೆರೆದು ನಿಂತಿತು. ಕುರಿಯು ತೋಳದ ತಲೆಯಮೇಲೆ ಬಿತ್ತು. ತಲೆಗೆ ಬಲವಾದ ಪೆಟ್ಟು ಬಿದ್ದುದರಿಂದ ತೋಳವು ಸತ್ತಿತು . ಕುರಿಯ ಉಪಾಯ ಫಲಿಸಿತು.
ನೀತಿ – ಇತರರ ಮಾತಿಗೆ ಕಿವಿಗೊಡುವ ಮುನ್ನ ಯೋಚಿಸು.



ನೀಲಿ ನರಿ

ಕಾಡಿನಿಂದ ಆಹಾರ ಹುಡುಕುತ್ತಾ ನರಿಯೊಂದು ನಾಡಿಗೆ ಬಂತು. ಅಗಸನೊಬ್ಬ ಇಟ್ಟಿದ್ದ ನೀಲಿಯ ಬಣ್ಣದ ನೀರಿಗೆ ಬಿದ್ದು ದೇಹವೆಲ್ಲ ನೀಲಿಯಾಯಿತು. ಕಾಡಿಗೆ ಹಿಂದಿರುಗಿದ ನರಿಯನ್ನು ಕಂಡು ಇತರ ಪ್ರಾಣಿಗಳು ಹೆದರಿದವು. ಈ ನರಿಯನ್ನು ರಾಜನನ್ನಾಗಿ ಮಾಡಿದವು . ಹುಲಿ,ಸಿಂಹದಂತಹ ಬಲಿಷ್ಠಪ್ರಾಣಿಗಳೂ ಇದರ ಸೇವೆಯಲ್ಲಿ ತೊಡಗಿದವು. ಇದು ನರಿಯೇ ಹೌದು ಎಂದು ತಿಳಿದಿದ್ದರೂ ಅದರ ಬಣ್ಣ ನೋಡಿ ಸುಮ್ಮನಿದ್ದವು. ಕೆಲದಿನಗಳ ನಂತರ ದೂರದಲ್ಲಿ ನರಿಗಳು ಊಳಿಡುವುದು ಕೇಳಿಸಿತು ನೀಲಿನರಿಯೂ ತಡೆಯದೆ ಊಳಿಟ್ಟಿತು. ನರಿಯ ನಿಜರೂಪ ಬದಲಾದೊಡನೆ ತಡಮಾಡದೆ ಇತರ ಪ್ರಾಣಿಗಳು ಇದನ್ನು ಕೊಂದುಹಾಕಿದವು.
ನೀತಿ – ಮೋಸ ಎಂದಾದರೊಮ್ಮೆ ಬಯಲಾಗುತ್ತದೆ.


ಕತ್ತೆಯ ಮೆದುಳು

ಒಂದು ಕಾಡು. ಆ ಕಾಡಿನಲ್ಲಿ ಸಿಂಹವೊಂದು ವಾಸವಾಗಿತ್ತು. ಅದರ ಶಿಷ್ಯನೆಂಬಂತೆ ನರಿಯೊಂದು ಸದಾ ಸಿಂಹದ ಜೊತೆಯಲ್ಲೇ ಇರುತ್ತಿತ್ತು. ಒಮ್ಮೆ ಸಿಂಹಕ್ಕೆ ಆರೋಗ್ಯ ಕೆಟ್ಟು ಬೇಟೆಯಾಡಲು ಆಗುತ್ತಿರಲಿಲ್ಲ . ನರಿಗೆ ಬೇಟೆಯಾಡಿ ಆಹಾರ ತರುವಂತೆ ಹೇಳಿತು . ನರಿ ಬೇಟೆಗೆ ಹೋದಾಗ ಕತ್ತೆಯೊಂದು ಕಂಡಿತು. ಅದರ ಬಳಿ ಹೋಗಿ ಮಿತ್ರ ಸಿಂಹರಾಜನು ನಿನ್ನನ್ನು ತನ್ನ ಮಂತ್ರಿಯನ್ನಾಗಿ ನೇಮಿಸಿಕೊಳ್ಳಲು ತೀರ್ಮಾನಿಸಿದ್ದಾನೆ. ನನ್ನ ಜೊತೆ ಬಾ ಎಂದು ಕತ್ತೆಗೆ ಹೇಳಿತು. ಮಂತ್ರಿಪಟ್ಟದ ಆಸೆಯಿಂದ ಕತ್ತೆ ನರಿಯ ಜೊತೆ ಹೊರಟಿತು. ಸಿಂಹವು ಕತ್ತೆಯನ್ನು ಕಂಡಕೂಡಲೇ ಹಾರಿ ನೆಗೆದು ಕೊಂದಿತು. ನೀರು ಕುಡಿದು ಬರುತ್ತೇನೆ ಅಲ್ಲಿಯವರೆಗೆ ಇದನ್ನು ನೋಡಿಕೋ ಎಂದುಹೇಳಿ ಸಿಂಹ ನದಿಗೆ ಹೋಯಿತು. ಹಸಿದಿದ್ದ ನರಿಯು ಕತ್ತೆಯ ಮೆದುಳನ್ನು ತಿಂದು ಹಾಕಿತು. ನೀರು ಕುಡಿದು ಬಂದ ಸಿಂಹ ಕತ್ತೆಯ ಮೆದುಳನ್ನು ತಿನ್ನಲು ತಲೆಯನ್ನು ಕಿತ್ತಿತು. ಮೆದುಳು ಇಲ್ಲದಿರುವುದನ್ನು ಕಂಡು ಕೋಪದಿಂದ ನರಿಯನ್ನು ನೋಡಿತು. ನರಿಯು ಸಿಂಹರಾಜ ಈ ಕತ್ತೆಗೆ ಮೆದುಳೇ ಇಲ್ಲ ಇದ್ದಿದ್ದರೆ ನನ್ನ ಜೊತೆಯಲ್ಲಿ ಬರುತ್ತಿರಲಿಲ್ಲ. ಎಂದು ಹೇಳಿತು ಕಷ್ಟದಿಂದ ಪಾರಾಯಿತು.
ನೀತಿ –ಆಮಿಷಗಳಿಗೆ ಬಲಿಯಾಗಬಾರದು.

Saturday, February 20, 2010

ಪುಟಾಣಿ ಕಥೆಗಳು

ಕೋತಿಯ ಹೃದಯ
ಒಂದುಸರೋವರದಲ್ಲಿ ಗಂಡ ಹೆಂಡತಿ ಮೊಸಳೆಗಳು ವಾಸವಾಗಿದ್ದವು. ಸರೋವರದ ಬಳಿಯ ನೇರಳೆ ಮರದಲ್ಲಿ ಕೊತಿಯೊಂದು ವಾಸವಾಗಿತ್ತು . ಕೋತಿಯ ಗೆಳೆತನ ಸಂಪಾದಿಸಿದ ಮೊಸಳೆ ಕೋತಿಯಿಂದ ನೇರಳೆ ಹಣ್ಣುಗಳನ್ನು ಪಡೆದು ತಿನ್ನುತ್ತಿತ್ತು. ಕೆಲವೊಮ್ಮೆ ತನ್ನ ಹೆಂಡತಿಗೂ ಕೊಡುತ್ತಿತ್ತು. ನೇರಳೆಹಣ್ಣುಗಳ ರುಚಿನೋಡಿದ ಹೆಣ್ಣುಮೊಸಳೆ ಕೋತಿಯನ್ನು ತಿನ್ನಲು ಬಯಸಿತು. ಈ ಕೂಡಲೆ ಕೋತಿಯ ಹೃದಯ ತರಲಿಲ್ಲವೆಂದಾದರೆ ನಿನ್ನ ಬಿಟ್ಟುಹೋಗುತ್ತೇನೆ ಎಂದು ತನ್ನಗಂಡನಾದ ಮೊಸಳೆಯನ್ನು ಹೆದರಿಸಿತು. ಸರಿ ಎಂದು ಹೊರಟ ಗಂಡು ಮೊಸಳೆ ಕೋತಿಯನ್ನು ಹೊಗಳುತ್ತಾ ತನ್ನ ಹೆಂಡತಿ ನಿನ್ನನ್ನು ಊಟಕ್ಕೆ ಕರೆದಿದ್ದಾಳೆ ಈಗಲೇ ಬರಬೇಕು ಎಂದು ಆಹ್ವಾನಿಸಿತು. ಗೆಳೆಯನ ಮಾತು ಸತ್ಯವೆಂದು ತಿಳಿದು ಕೋತಿಯು ಅದರ ಬೆನ್ನಮೇಲೆ ಕುಳಿತು ಹೊರಟಿತು.
ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಹೋಗುವಾಗ ಮೊಸಳೆ ನಿಜವನ್ನು ಹೇಳಿತು. ಇದರಿಂದ ಹೆದರಿದ ಕೋತಿಯು ತನ್ನ ಪ್ರಾಣ ಉಳಿಸಿಕೊಳ್ಳಲು ಒಂದು ಉಪಾಯ ಮಾಡಿತು. ತನ್ನ ಹೃದಯವನ್ನು ಮರದ ಮೇಲೆ ಬಿಟ್ಟು ಬಂದಿರುವುದಾಗಿ ಹೇಳಿತು. ತೆಗೆದುಕೊಂಡು ಬರಲು ಹಿಂದಿರುಗಿ ಹೋಗಬೇಕಾಗಿದೆ ಎಂದು ತಿಳಿಸಿತು. ಕೋತಿಯ ಉಪಾಯವನ್ನು ಅರಿಯದ ಪೆದ್ದಮೊಸಳೆ ಹಿಂದಿರುಗಿ ದಡಕ್ಕೆ ಬಂತು. ಕೋತಿ ದಡಕ್ಕೆ ಹಾರಿ ತನ್ನ ಪ್ರಾಣ ಉಳಿಸಿಕೊಂಡಿತು.


ಕರಡಿ ಮತ್ತು ನರಿ

ಒಂದು ಕಾಡಿನಲ್ಲಿ ಕರಡಿ ಮತ್ತು ನರಿ ವಾಸವಾಗಿದ್ದವು. ಒಮ್ಮೆ ಬೆಳೆ ಬೆಳೆಯಲು ಯೋಚಿಸಿದವು. ಭೂಮಿಯ ಮೇಲ್ಭಾಗದ ಬೆಳೆಯ ಭಾಗವು ತನಗೆ ಸೇರಬೇಕೆಂದು ನರಿ ಹೇಳಿತು. ಮುಗ್ಧಕರಡಿಯು ಒಪ್ಪಿಕೊಂಡಿತು. ಬಾಳೆಹಣ್ಣನ್ನು ಬೆಳೆಯಲು ನಿರ್ಧರಿಸಿದವು. ಬೆಳೆ ಫಲವತ್ತಾಗಿ ಬೆಳೆದು ನಿಂತಿತು. ಭೂಮಿಯ ಮೇಲ್ಭಾಗದಲ್ಲಿ ಇದ್ದುದರಿಂದ ಹಣ್ಣುಗಳೆಲ್ಲ ನರಿಯ ಪಾಲಾಯಿತು. ಕರಡಿಗೆ ನಿರಾಸೆಯಾಯಿತು. ಹಲವು ದಿನಗಳು ಕಳೆದವು ಕರಡಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂತು. ಪುನಃ ಬೆಳೆಬೆಳೆಯಲು ನರಿಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಈ ಬಾರಿ ಕಡಲೆಕಾಯಿ ಬೆಳೆಯುವಂತೆ ಕರಡಿ ತಿಳಿಸಿತು. ಬೆಳೆ ಫಲವತ್ತಾಗಿ ಬೆಳೆಯಿತು. ಭೂಮಿಯ ಕೆಳಭಾಗದ ಬೆಳೆಯನ್ನು ಕರಡಿ ಪಡೆಯಿತು. ನರಿಯ ದುರಾಸೆಗೆ ತಕ್ಕ ಪಾಠ ಕಲಿಸಿತು.









ಜಾಣ ಹಕ್ಕಿಗಳು
ಒಂದು ಕೊಳದ ಬಳಿ ಇದ್ದ ದೊಡ್ಡ ಮರದಲ್ಲಿ ಎರಡು ಹಕ್ಕಿಗಳು ವಾಸವಾಗಿದ್ದವು. ಪ್ರತಿಬಾರಿ ಮೊಟ್ಟೆಯಿಟ್ಟಾಗಲೂ ಹಾವೊಂದು ಬಂದು ಮೊಟ್ಟೆಗಳನ್ನು ತಿನ್ನುತ್ತಿತ್ತು. ಇದರಿಂದ ಹಕ್ಕಿಗಳಿಗೆ ತುಂಬಾ ದುಃಖವಾಯಿತು. ಒಮ್ಮೆ ರಾಣಿಯೊಬ್ಬಳು ತನ್ನ ಗೆಳತಿಯರ ಜೊತೆಗೂಡಿ, ಕೊಳದಲ್ಲಿ ಈಜಲು ಬಂದಳು. ತನ್ನ ಆಭರಣ ಮತ್ತು ಉಡುಪುಗಳನ್ನು ತೆಗೆದು ದಡದ ಬಳಿ ಇಟ್ಟಳು. ಆನಂದದಿಂದ ಗೆಳತಿಯರೊಂದಿಗೆ ಈಜುತ್ತಿದ್ದಳು. ಇದನ್ನು ಕಂಡ ಹಕ್ಕಿಗಳು ಒಂದು ಉಪಾಯ ಹೂಡಿದವು. ರಾಣಿಯ ರತ್ನಹಾರವನ್ನು ಹಾವಿನ ಹುತ್ತದಲ್ಲಿ ಹಾಕಿದವು . ರಾಣಿ ಇದನ್ನು ಗಮನಿಸಿದಳು ತನ್ನ ಭಟರಿಗೆ ಹುತ್ತವನ್ನು ಅಗೆಯಲು ಹೇಳಿದಳು ಭಟರು ಹುತ್ತವನ್ನು ಅಗೆಯುವಾಗ ಹಾವು ಹೊರಬಂತು. ಭಟರು ಅದನ್ನು ಕೊಂದರು. ಹಕ್ಕಿಗಳಿಗೆ ಸಂತೋಷವಾಯಿತು.





ಕಾಗೆ ಮತ್ತು ನವಿಲುಗರಿ
ಕಾಡಿನ ಒಂದುಮರದಲ್ಲಿ ಕಾಗೆಯೊಂದು ವಾಸವಾಗಿತ್ತು. ಮರದ ಕೆಳಗೆ ಬಿದ್ದಿದ್ದ ನವಿಲುಗರಿಗಳನ್ನು ಗಮನಿಸಿತು. ಅವುಗಳನ್ನು ತನ್ನ ರೆಕ್ಕೆಗಳಿಗೆ ಸಿಕ್ಕಿಸಿಕೊಂಡಿತು. ತಾನು ಅಂದವಾಗಿ ಇರುವುದಾಗಿ ಸಂಭ್ರಮ ಪಟ್ಟಿತು. ಉಳಿದ ಕಾಗೆಗಳನ್ನು ಮೂದಲಿಸಿತು. ಇತರ ಕಾಗೆಗಳು ಬೇಸರಗೊಂಡವು. ನವಿಲುಗಳ ಗುಂಪು ಸೇರುವುದಾಗಿ, ಕಾಗೆಯು ಅವುಗಳ ಬಳಿ ಜಂಭ ಕೊಚ್ಚಿಕೊಂಡಿತು.ಕಾಗೆಗಳ ಗುಂಪನ್ನು ತೊರೆದು ನವಿಲುಗಳ ಗುಂಪಿನ ಬಳಿಗೆ ಬಂದಿತು. ಕಾಗೆಯನ್ನು ಗುರುತಿಸಿದ ನವಿಲುಗಳು ಕೊಕ್ಕಿನಿಂದ ಕುಕ್ಕಲು ಆರಂಭಿಸಿದವು. ಕಾಗೆಯನ್ನು ಅಲ್ಲಿಂದ ಓಡಿಸಿದವು. ಇದರಿಂದ ಬೇಸರಗೊಂಡ ಕಾಗೆ ಹಿಂತಿರುಗಿದ ಕಾಗೆಯನ್ನು ಇತರ ಕಾಗೆಗಳು ಹತ್ತಿರ ಸೇರಿಸಲಿಲ್ಲ . ಇದರಿಂದ ಕಾಗೆಗೆ ತುಂಬಾ ದುಃಖವಾಯಿತು.
ತನ್ನ ತಪ್ಪನ್ನು ಮನ್ನಿಸುವಂತೆ ಬೇಡಿತು ಕಾಗೆಗಳು ಕ್ಷಮಿಸಿದವು.



ಅಗಸನ ಕತ್ತೆ
ಒಂದು ಊರಿನ ಅಗಸನು, ಒಂದು ಕತ್ತೆ ಮತ್ತು ಕುದುರೆಯನ್ನು ಸಾಕಿದ್ದನು . ಪ್ರತಿದಿನವೂ ಬಟ್ಟೆಗಳನ್ನು ತೊಳೆಯಲು ನದಿಯಬಳಿಗೆ ಬರುತ್ತಿದ್ದನು. ದಿನವೂ ಬಟ್ಟೆಯ ಗಂಟನ್ನು ಕತ್ತೆಯು ಹೊತ್ತು ತರುತ್ತಿತ್ತು. ಕುದುರೆ ಹಾಯಾಗಿ ಜೊತೆಗೆ ನಡೆದು ಬರುತ್ತಿತ್ತು. ಒಮ್ಮೆ ಬಟ್ಟೆಯ ಗಂಟು ಬಹಳಭಾರವಾಗಿತ್ತು. ಗಂಟಿನ ಸ್ವಲ್ಪ ಭಾಗವನ್ನು ಹೊತ್ತು ತರುವಂತೆ ಕುದುರೆಗೆ ಕತ್ತೆಯು ಬೇಡಿತು. ತಾತ್ಸಾರ ಮನೋಭಾವದಿಂದ ಕುದುರೆ ನಿರಾಕರಿಸಿತು. ದುಃಖಗೊಂಡ ಕತ್ತೆ ಒಂದು ಉಪಾಯವನ್ನು ಹೂಡಿತು. ಮಾರ್ಗದ ಮಧ್ಯದಲ್ಲಿ ಕುಸಿದು ಬಿದ್ದಂತೆ ನಟಿಸಿತು. ಅಗಸನು ಬಟ್ಟೆಯ ಗಂಟನ್ನು ಕುದುರೆಗೆ ಹೊರಿಸಿದನು. ಭಾರವಾದ ಗಂಟನ್ನು ಕುದುರೆ ಹೊತ್ತು ನಡೆಯಬೇಕಾಯಿತು. ಕತ್ತೆಗೆ ಸಹಾಯ ಮಾಡಿದ್ದರೆ ಅರ್ಧ ಭಾರ ಮಾತ್ರ ಹೊರಬೇಕಾಗುತ್ತಿತ್ತು ಈಗ ಪೂರ್ಣ ಹೊತ್ತಿದ್ದೇನೆ ಎಂದು ಪಶ್ಚಾತಾಪ ಪಟ್ಟಿತು.



ಜಿಂಕೆ ಮತ್ತು ಕೋತಿ

ಒಂದು ಕಾಡಿನಲ್ಲಿ ಜಿಂಕೆ ಮತ್ತು ಕೋತಿ ವಾಸವಾಗಿದ್ದವು . ಒಮ್ಮೆ ನದಿಯ ಆಚೆ ಬದಿಯ ತೋಟದ ಹಣ್ಣುಗಳನ್ನು ತಿನ್ನಲು ಯೋಚಿಸಿದವು. ಜಿಂಕೆಯು ಕೋತಿನನ್ನು ಬೆನ್ನಮೇಲೆ ಕೂರಿಸಿಕೊಂಡು ನದಿಯನ್ನು ದಾಟಿತು. ಕೋತಿಯು ಹಣ್ಣುಗಳನ್ನು ಬೇಗ ಬೇಗನೆ ತಿಂದಿತು. ಹೊಟ್ಟೆತುಂಬಿದೆ ಹಾಡಲು ಇಷ್ಟವಾಗಿದೆ ಎಂದು ಜೋರಾಗಿ ಹಾಡತೊಡಗಿತು. ಕೋತಿಯ ಅರಚಾಟವನ್ನು ಕೇಳಿ ತೋಟದ ಜನ ಓಡಿ ಬಂದರು.
ಹಣ್ಣು ತಿನ್ನುತ್ತಿದ್ದ ಜಿಂಕೆಯನ್ನು ಹೊಡೆದು ಓಡಿಸಿದರು. ಇದರಿಂದ ಬೇಸರಗೊಂಡ ಜಿಂಕೆ ಹಿಂದಿರುಗಿ ಹೋಗಲು ನದಿಯ ಬಳಿ ಬಂತು , ಕೋತಿಯನ್ನು ಬೆನ್ನಮೇಲೆ ಕೂರಿಸಿಕೊಂಡಿತು ನದಿಯ ಮಧ್ಯಕ್ಕೆ ಬಂದಿತು. ಜನರ ಹೊಡೆತದಿಂದ ನೋವಾಗಿದೆ ಎಂದು ನೀರಿನಲ್ಲಿ ಮುಳುಗಬೇಕೆನಿಸಿದೆ ಎಂದು ಮುಳುಗಿತು ಕೋತಿಗೆ ಉಸಿರು ಕಟ್ಟಿ ಸಂಕಟವಾಯಿತು . ತನ್ನ ತಪ್ಪಿನ ಅರಿವಾಗಿ ಜಿಂಕೆಯಲ್ಲಿ ಕ್ಷಮೆಯಾಚಿಸಿತು.
ರೈತನ ಶ್ರದ್ಧೆ

ಒಮ್ಮೆ ಭಾರಿ ಬರಗಾಲ ಬಂದಿತು. ಇನ್ನೂ ಮೂರು ವರ್ಷ ಮಳೆ ಬರಲಾರದೆಂದು ಪೂಜಾರಿಯು ತಿಳಿಸಿದನು. ಜನರಿಗೆ ಗಾಬರಿಯಾಗಿ, ಊರು ಬಿಡಲು ಆರಂಭಿಸಿದರು.
ಒಬ್ಬ ಕುಂಟ ರೈತ ಮಾತ್ರ ಒಣಗಿದ ಭೂಮಿ ಉಳುತ್ತಿದ್ದನು. ಮಳೆಯ ಮೋಡ ಅವನನ್ನು ನೋಡಿತು. ನೀನೂ ಏಕೆ ಊರು ಬಿಡಲಿಲ್ಲ ?” ಎಂದು ಕೇಳಿತು. ಅದಕ್ಕೆ ಕುಂಟ ರೈತನು “ಪೂಜಾರಿ ಹೇಳಿದ ಮಾತನ್ನು ಏಕೆ ನಂಬಲಿ, ಮಳೆ ಸುರಿಸೋದು ಅವನಲ್ಲವಲ್ಲ” ಎಂದು ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮುಂದುವರೆಸಿದನು. ಮೋಡಕ್ಕೆ ಇದು ಸರಿ ಎನಿಸಿತು ಮಳೆ ಸುರಿಸಿತು. ರೈತನಿಗೆ ಬೆಳೆಯಾಯಿತು.




ಕಿವುಡು ಮೋಡ

ವರುಣ ಮಳೆಯ ರಾಜ. ವರುಣನ ಕರುಣೆಯಿಲ್ಲದೆ ಮಳೆಯಾಗುವುದಿಲ್ಲ ಆದುದರಿಂದ ಅವನಿಗೆ ಭಾರಿ ಜಂಭ. ಒಮ್ಮೆ ಮೋಡಗಳ ಸಭೆ ಕರೆದ. ಈ ಬಾರಿ ಯಾರೂ ಮಳೆ ಸುರಿಸಬಾರದು ಎಂದು ತಿಳಿಸಿದ. ಆ ಮೋಡಗಳ ಮಧ್ಯೆ ಒಂದು ಕಿವುಡು ಮೋಡವಿತ್ತು. ಅದು ತಲೆಯಾಡಿಸಿತು. ಮಳೆಸುರಿಸಬೇಕು ಎಂದುಕೊಂಡಿತು. ಮಳೆಸುರಿಸಿತು. ಮಳೆ ಆದುದನ್ನು ಕಂಡ ವರುಣ ಮತ್ತೆ ಸಭೆ ಕರೆದ . ಮೋಡಗಳನ್ನು ಕೇಳಿದ . ಎಲ್ಲಾ ಮೋಡಗಳು ತಾವಲ್ಲವೆಂದು ಹೇಳುತ್ತಿದ್ದವು. ಆದರೆ ಕಿವುಡು ಮೋಡ ಕಣ್ಣು ಮಿಟುಕಿಸುತ್ತಾ ನೋಡುತ್ತಿತ್ತು. ಅದನ್ನು ಕಂಡ ವರುಣ ಏನೂ ಮಾಡಲಾಗದೆ ಸುಮ್ಮನಾದ. ರೈತರಿಗೆ ಮಳೆಯಿಂದ ಬೆಳೆಯಾಯಿತು.