Saturday, February 20, 2010

ಪುಟಾಣಿ ಕಥೆಗಳು

ಕೋತಿಯ ಹೃದಯ
ಒಂದುಸರೋವರದಲ್ಲಿ ಗಂಡ ಹೆಂಡತಿ ಮೊಸಳೆಗಳು ವಾಸವಾಗಿದ್ದವು. ಸರೋವರದ ಬಳಿಯ ನೇರಳೆ ಮರದಲ್ಲಿ ಕೊತಿಯೊಂದು ವಾಸವಾಗಿತ್ತು . ಕೋತಿಯ ಗೆಳೆತನ ಸಂಪಾದಿಸಿದ ಮೊಸಳೆ ಕೋತಿಯಿಂದ ನೇರಳೆ ಹಣ್ಣುಗಳನ್ನು ಪಡೆದು ತಿನ್ನುತ್ತಿತ್ತು. ಕೆಲವೊಮ್ಮೆ ತನ್ನ ಹೆಂಡತಿಗೂ ಕೊಡುತ್ತಿತ್ತು. ನೇರಳೆಹಣ್ಣುಗಳ ರುಚಿನೋಡಿದ ಹೆಣ್ಣುಮೊಸಳೆ ಕೋತಿಯನ್ನು ತಿನ್ನಲು ಬಯಸಿತು. ಈ ಕೂಡಲೆ ಕೋತಿಯ ಹೃದಯ ತರಲಿಲ್ಲವೆಂದಾದರೆ ನಿನ್ನ ಬಿಟ್ಟುಹೋಗುತ್ತೇನೆ ಎಂದು ತನ್ನಗಂಡನಾದ ಮೊಸಳೆಯನ್ನು ಹೆದರಿಸಿತು. ಸರಿ ಎಂದು ಹೊರಟ ಗಂಡು ಮೊಸಳೆ ಕೋತಿಯನ್ನು ಹೊಗಳುತ್ತಾ ತನ್ನ ಹೆಂಡತಿ ನಿನ್ನನ್ನು ಊಟಕ್ಕೆ ಕರೆದಿದ್ದಾಳೆ ಈಗಲೇ ಬರಬೇಕು ಎಂದು ಆಹ್ವಾನಿಸಿತು. ಗೆಳೆಯನ ಮಾತು ಸತ್ಯವೆಂದು ತಿಳಿದು ಕೋತಿಯು ಅದರ ಬೆನ್ನಮೇಲೆ ಕುಳಿತು ಹೊರಟಿತು.
ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಹೋಗುವಾಗ ಮೊಸಳೆ ನಿಜವನ್ನು ಹೇಳಿತು. ಇದರಿಂದ ಹೆದರಿದ ಕೋತಿಯು ತನ್ನ ಪ್ರಾಣ ಉಳಿಸಿಕೊಳ್ಳಲು ಒಂದು ಉಪಾಯ ಮಾಡಿತು. ತನ್ನ ಹೃದಯವನ್ನು ಮರದ ಮೇಲೆ ಬಿಟ್ಟು ಬಂದಿರುವುದಾಗಿ ಹೇಳಿತು. ತೆಗೆದುಕೊಂಡು ಬರಲು ಹಿಂದಿರುಗಿ ಹೋಗಬೇಕಾಗಿದೆ ಎಂದು ತಿಳಿಸಿತು. ಕೋತಿಯ ಉಪಾಯವನ್ನು ಅರಿಯದ ಪೆದ್ದಮೊಸಳೆ ಹಿಂದಿರುಗಿ ದಡಕ್ಕೆ ಬಂತು. ಕೋತಿ ದಡಕ್ಕೆ ಹಾರಿ ತನ್ನ ಪ್ರಾಣ ಉಳಿಸಿಕೊಂಡಿತು.


ಕರಡಿ ಮತ್ತು ನರಿ

ಒಂದು ಕಾಡಿನಲ್ಲಿ ಕರಡಿ ಮತ್ತು ನರಿ ವಾಸವಾಗಿದ್ದವು. ಒಮ್ಮೆ ಬೆಳೆ ಬೆಳೆಯಲು ಯೋಚಿಸಿದವು. ಭೂಮಿಯ ಮೇಲ್ಭಾಗದ ಬೆಳೆಯ ಭಾಗವು ತನಗೆ ಸೇರಬೇಕೆಂದು ನರಿ ಹೇಳಿತು. ಮುಗ್ಧಕರಡಿಯು ಒಪ್ಪಿಕೊಂಡಿತು. ಬಾಳೆಹಣ್ಣನ್ನು ಬೆಳೆಯಲು ನಿರ್ಧರಿಸಿದವು. ಬೆಳೆ ಫಲವತ್ತಾಗಿ ಬೆಳೆದು ನಿಂತಿತು. ಭೂಮಿಯ ಮೇಲ್ಭಾಗದಲ್ಲಿ ಇದ್ದುದರಿಂದ ಹಣ್ಣುಗಳೆಲ್ಲ ನರಿಯ ಪಾಲಾಯಿತು. ಕರಡಿಗೆ ನಿರಾಸೆಯಾಯಿತು. ಹಲವು ದಿನಗಳು ಕಳೆದವು ಕರಡಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂತು. ಪುನಃ ಬೆಳೆಬೆಳೆಯಲು ನರಿಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಈ ಬಾರಿ ಕಡಲೆಕಾಯಿ ಬೆಳೆಯುವಂತೆ ಕರಡಿ ತಿಳಿಸಿತು. ಬೆಳೆ ಫಲವತ್ತಾಗಿ ಬೆಳೆಯಿತು. ಭೂಮಿಯ ಕೆಳಭಾಗದ ಬೆಳೆಯನ್ನು ಕರಡಿ ಪಡೆಯಿತು. ನರಿಯ ದುರಾಸೆಗೆ ತಕ್ಕ ಪಾಠ ಕಲಿಸಿತು.









ಜಾಣ ಹಕ್ಕಿಗಳು
ಒಂದು ಕೊಳದ ಬಳಿ ಇದ್ದ ದೊಡ್ಡ ಮರದಲ್ಲಿ ಎರಡು ಹಕ್ಕಿಗಳು ವಾಸವಾಗಿದ್ದವು. ಪ್ರತಿಬಾರಿ ಮೊಟ್ಟೆಯಿಟ್ಟಾಗಲೂ ಹಾವೊಂದು ಬಂದು ಮೊಟ್ಟೆಗಳನ್ನು ತಿನ್ನುತ್ತಿತ್ತು. ಇದರಿಂದ ಹಕ್ಕಿಗಳಿಗೆ ತುಂಬಾ ದುಃಖವಾಯಿತು. ಒಮ್ಮೆ ರಾಣಿಯೊಬ್ಬಳು ತನ್ನ ಗೆಳತಿಯರ ಜೊತೆಗೂಡಿ, ಕೊಳದಲ್ಲಿ ಈಜಲು ಬಂದಳು. ತನ್ನ ಆಭರಣ ಮತ್ತು ಉಡುಪುಗಳನ್ನು ತೆಗೆದು ದಡದ ಬಳಿ ಇಟ್ಟಳು. ಆನಂದದಿಂದ ಗೆಳತಿಯರೊಂದಿಗೆ ಈಜುತ್ತಿದ್ದಳು. ಇದನ್ನು ಕಂಡ ಹಕ್ಕಿಗಳು ಒಂದು ಉಪಾಯ ಹೂಡಿದವು. ರಾಣಿಯ ರತ್ನಹಾರವನ್ನು ಹಾವಿನ ಹುತ್ತದಲ್ಲಿ ಹಾಕಿದವು . ರಾಣಿ ಇದನ್ನು ಗಮನಿಸಿದಳು ತನ್ನ ಭಟರಿಗೆ ಹುತ್ತವನ್ನು ಅಗೆಯಲು ಹೇಳಿದಳು ಭಟರು ಹುತ್ತವನ್ನು ಅಗೆಯುವಾಗ ಹಾವು ಹೊರಬಂತು. ಭಟರು ಅದನ್ನು ಕೊಂದರು. ಹಕ್ಕಿಗಳಿಗೆ ಸಂತೋಷವಾಯಿತು.





ಕಾಗೆ ಮತ್ತು ನವಿಲುಗರಿ
ಕಾಡಿನ ಒಂದುಮರದಲ್ಲಿ ಕಾಗೆಯೊಂದು ವಾಸವಾಗಿತ್ತು. ಮರದ ಕೆಳಗೆ ಬಿದ್ದಿದ್ದ ನವಿಲುಗರಿಗಳನ್ನು ಗಮನಿಸಿತು. ಅವುಗಳನ್ನು ತನ್ನ ರೆಕ್ಕೆಗಳಿಗೆ ಸಿಕ್ಕಿಸಿಕೊಂಡಿತು. ತಾನು ಅಂದವಾಗಿ ಇರುವುದಾಗಿ ಸಂಭ್ರಮ ಪಟ್ಟಿತು. ಉಳಿದ ಕಾಗೆಗಳನ್ನು ಮೂದಲಿಸಿತು. ಇತರ ಕಾಗೆಗಳು ಬೇಸರಗೊಂಡವು. ನವಿಲುಗಳ ಗುಂಪು ಸೇರುವುದಾಗಿ, ಕಾಗೆಯು ಅವುಗಳ ಬಳಿ ಜಂಭ ಕೊಚ್ಚಿಕೊಂಡಿತು.ಕಾಗೆಗಳ ಗುಂಪನ್ನು ತೊರೆದು ನವಿಲುಗಳ ಗುಂಪಿನ ಬಳಿಗೆ ಬಂದಿತು. ಕಾಗೆಯನ್ನು ಗುರುತಿಸಿದ ನವಿಲುಗಳು ಕೊಕ್ಕಿನಿಂದ ಕುಕ್ಕಲು ಆರಂಭಿಸಿದವು. ಕಾಗೆಯನ್ನು ಅಲ್ಲಿಂದ ಓಡಿಸಿದವು. ಇದರಿಂದ ಬೇಸರಗೊಂಡ ಕಾಗೆ ಹಿಂತಿರುಗಿದ ಕಾಗೆಯನ್ನು ಇತರ ಕಾಗೆಗಳು ಹತ್ತಿರ ಸೇರಿಸಲಿಲ್ಲ . ಇದರಿಂದ ಕಾಗೆಗೆ ತುಂಬಾ ದುಃಖವಾಯಿತು.
ತನ್ನ ತಪ್ಪನ್ನು ಮನ್ನಿಸುವಂತೆ ಬೇಡಿತು ಕಾಗೆಗಳು ಕ್ಷಮಿಸಿದವು.



ಅಗಸನ ಕತ್ತೆ
ಒಂದು ಊರಿನ ಅಗಸನು, ಒಂದು ಕತ್ತೆ ಮತ್ತು ಕುದುರೆಯನ್ನು ಸಾಕಿದ್ದನು . ಪ್ರತಿದಿನವೂ ಬಟ್ಟೆಗಳನ್ನು ತೊಳೆಯಲು ನದಿಯಬಳಿಗೆ ಬರುತ್ತಿದ್ದನು. ದಿನವೂ ಬಟ್ಟೆಯ ಗಂಟನ್ನು ಕತ್ತೆಯು ಹೊತ್ತು ತರುತ್ತಿತ್ತು. ಕುದುರೆ ಹಾಯಾಗಿ ಜೊತೆಗೆ ನಡೆದು ಬರುತ್ತಿತ್ತು. ಒಮ್ಮೆ ಬಟ್ಟೆಯ ಗಂಟು ಬಹಳಭಾರವಾಗಿತ್ತು. ಗಂಟಿನ ಸ್ವಲ್ಪ ಭಾಗವನ್ನು ಹೊತ್ತು ತರುವಂತೆ ಕುದುರೆಗೆ ಕತ್ತೆಯು ಬೇಡಿತು. ತಾತ್ಸಾರ ಮನೋಭಾವದಿಂದ ಕುದುರೆ ನಿರಾಕರಿಸಿತು. ದುಃಖಗೊಂಡ ಕತ್ತೆ ಒಂದು ಉಪಾಯವನ್ನು ಹೂಡಿತು. ಮಾರ್ಗದ ಮಧ್ಯದಲ್ಲಿ ಕುಸಿದು ಬಿದ್ದಂತೆ ನಟಿಸಿತು. ಅಗಸನು ಬಟ್ಟೆಯ ಗಂಟನ್ನು ಕುದುರೆಗೆ ಹೊರಿಸಿದನು. ಭಾರವಾದ ಗಂಟನ್ನು ಕುದುರೆ ಹೊತ್ತು ನಡೆಯಬೇಕಾಯಿತು. ಕತ್ತೆಗೆ ಸಹಾಯ ಮಾಡಿದ್ದರೆ ಅರ್ಧ ಭಾರ ಮಾತ್ರ ಹೊರಬೇಕಾಗುತ್ತಿತ್ತು ಈಗ ಪೂರ್ಣ ಹೊತ್ತಿದ್ದೇನೆ ಎಂದು ಪಶ್ಚಾತಾಪ ಪಟ್ಟಿತು.



ಜಿಂಕೆ ಮತ್ತು ಕೋತಿ

ಒಂದು ಕಾಡಿನಲ್ಲಿ ಜಿಂಕೆ ಮತ್ತು ಕೋತಿ ವಾಸವಾಗಿದ್ದವು . ಒಮ್ಮೆ ನದಿಯ ಆಚೆ ಬದಿಯ ತೋಟದ ಹಣ್ಣುಗಳನ್ನು ತಿನ್ನಲು ಯೋಚಿಸಿದವು. ಜಿಂಕೆಯು ಕೋತಿನನ್ನು ಬೆನ್ನಮೇಲೆ ಕೂರಿಸಿಕೊಂಡು ನದಿಯನ್ನು ದಾಟಿತು. ಕೋತಿಯು ಹಣ್ಣುಗಳನ್ನು ಬೇಗ ಬೇಗನೆ ತಿಂದಿತು. ಹೊಟ್ಟೆತುಂಬಿದೆ ಹಾಡಲು ಇಷ್ಟವಾಗಿದೆ ಎಂದು ಜೋರಾಗಿ ಹಾಡತೊಡಗಿತು. ಕೋತಿಯ ಅರಚಾಟವನ್ನು ಕೇಳಿ ತೋಟದ ಜನ ಓಡಿ ಬಂದರು.
ಹಣ್ಣು ತಿನ್ನುತ್ತಿದ್ದ ಜಿಂಕೆಯನ್ನು ಹೊಡೆದು ಓಡಿಸಿದರು. ಇದರಿಂದ ಬೇಸರಗೊಂಡ ಜಿಂಕೆ ಹಿಂದಿರುಗಿ ಹೋಗಲು ನದಿಯ ಬಳಿ ಬಂತು , ಕೋತಿಯನ್ನು ಬೆನ್ನಮೇಲೆ ಕೂರಿಸಿಕೊಂಡಿತು ನದಿಯ ಮಧ್ಯಕ್ಕೆ ಬಂದಿತು. ಜನರ ಹೊಡೆತದಿಂದ ನೋವಾಗಿದೆ ಎಂದು ನೀರಿನಲ್ಲಿ ಮುಳುಗಬೇಕೆನಿಸಿದೆ ಎಂದು ಮುಳುಗಿತು ಕೋತಿಗೆ ಉಸಿರು ಕಟ್ಟಿ ಸಂಕಟವಾಯಿತು . ತನ್ನ ತಪ್ಪಿನ ಅರಿವಾಗಿ ಜಿಂಕೆಯಲ್ಲಿ ಕ್ಷಮೆಯಾಚಿಸಿತು.
ರೈತನ ಶ್ರದ್ಧೆ

ಒಮ್ಮೆ ಭಾರಿ ಬರಗಾಲ ಬಂದಿತು. ಇನ್ನೂ ಮೂರು ವರ್ಷ ಮಳೆ ಬರಲಾರದೆಂದು ಪೂಜಾರಿಯು ತಿಳಿಸಿದನು. ಜನರಿಗೆ ಗಾಬರಿಯಾಗಿ, ಊರು ಬಿಡಲು ಆರಂಭಿಸಿದರು.
ಒಬ್ಬ ಕುಂಟ ರೈತ ಮಾತ್ರ ಒಣಗಿದ ಭೂಮಿ ಉಳುತ್ತಿದ್ದನು. ಮಳೆಯ ಮೋಡ ಅವನನ್ನು ನೋಡಿತು. ನೀನೂ ಏಕೆ ಊರು ಬಿಡಲಿಲ್ಲ ?” ಎಂದು ಕೇಳಿತು. ಅದಕ್ಕೆ ಕುಂಟ ರೈತನು “ಪೂಜಾರಿ ಹೇಳಿದ ಮಾತನ್ನು ಏಕೆ ನಂಬಲಿ, ಮಳೆ ಸುರಿಸೋದು ಅವನಲ್ಲವಲ್ಲ” ಎಂದು ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮುಂದುವರೆಸಿದನು. ಮೋಡಕ್ಕೆ ಇದು ಸರಿ ಎನಿಸಿತು ಮಳೆ ಸುರಿಸಿತು. ರೈತನಿಗೆ ಬೆಳೆಯಾಯಿತು.




ಕಿವುಡು ಮೋಡ

ವರುಣ ಮಳೆಯ ರಾಜ. ವರುಣನ ಕರುಣೆಯಿಲ್ಲದೆ ಮಳೆಯಾಗುವುದಿಲ್ಲ ಆದುದರಿಂದ ಅವನಿಗೆ ಭಾರಿ ಜಂಭ. ಒಮ್ಮೆ ಮೋಡಗಳ ಸಭೆ ಕರೆದ. ಈ ಬಾರಿ ಯಾರೂ ಮಳೆ ಸುರಿಸಬಾರದು ಎಂದು ತಿಳಿಸಿದ. ಆ ಮೋಡಗಳ ಮಧ್ಯೆ ಒಂದು ಕಿವುಡು ಮೋಡವಿತ್ತು. ಅದು ತಲೆಯಾಡಿಸಿತು. ಮಳೆಸುರಿಸಬೇಕು ಎಂದುಕೊಂಡಿತು. ಮಳೆಸುರಿಸಿತು. ಮಳೆ ಆದುದನ್ನು ಕಂಡ ವರುಣ ಮತ್ತೆ ಸಭೆ ಕರೆದ . ಮೋಡಗಳನ್ನು ಕೇಳಿದ . ಎಲ್ಲಾ ಮೋಡಗಳು ತಾವಲ್ಲವೆಂದು ಹೇಳುತ್ತಿದ್ದವು. ಆದರೆ ಕಿವುಡು ಮೋಡ ಕಣ್ಣು ಮಿಟುಕಿಸುತ್ತಾ ನೋಡುತ್ತಿತ್ತು. ಅದನ್ನು ಕಂಡ ವರುಣ ಏನೂ ಮಾಡಲಾಗದೆ ಸುಮ್ಮನಾದ. ರೈತರಿಗೆ ಮಳೆಯಿಂದ ಬೆಳೆಯಾಯಿತು.

No comments:

Post a Comment