Sunday, June 29, 2014

ವಚನಗಳು

ಪದ್ಯಭಾಗ 2 - ವಚನಗಳು
ಅಲ್ಲಮ ಪ್ರಭುದೇವರ ವಚನಗಳು:
ಅಲ್ಲಮಪ್ರಭು ( ೧೧೬೦) ಶಿವಮೊಗ್ಗ ಜಿಲ್ಲೆ ಬಳ್ಳಿಗಾವೆ ಇವನ ಜನ್ಮಸ್ಥಳ. ನಿರಹಂಕಾರ ಮತ್ತು ಸುಜ್ಞಾನಿ ಎಂಬ ದಂಪತಿಗಳ ಮಗನಾಗಿ ಹುಟ್ಟಿದ. ಮಾಯೆ ಎಂಬಾಕೆಯನ್ನು ವಿವಾಹವಾಗಿ,  ಬಸವಾಸಿ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆಬಾರಿಸುವ ಸೇವೆ ಮಾಡುತ್ತಾ ಇದ್ದ. ಪತ್ನಿಯ ಮರಣದಿಂದಾಗಿ ವೈರಾಗಿಯಾಗಿ  ಸತ್ಯಾನ್ವೇಷಣೆಯಲ್ಲಿ ತೊಡಗಿದವನು ಪ್ರಭುದೇವ ಎಂದೇ ಹೆಸರಾದ. ಅಲ್ಲದೆ ಬಸವಣ್ಣನವರ ಮಹಾಮನೆಯ ಶೂನ್ಯಪೀಠಾಧಿಪತಿಯಾಗಿ ಮಾರ್ಗದರ್ಶನಮಾಡಿದ. ಇವನನ್ನು ಕುರಿತು ಹರಿಹರ ಪ್ರಭುದೇವರ ರಗಳೆ ಎಂಬ ರಗಳೆಯನ್ನು ಬರೆದರೆ, ಚಾಮರಸ ಪ್ರಭುಲಿಂಗಲೀಲೆ ಎಂಬ ಷಟ್ಪದಿಕೃತಿಯನ್ನು ರಚಿಸುತ್ತಾನೆ. ಅಲ್ಲಮಪ್ರಭುವಿನ ವಚನಗಳು ಪ್ರತಿಭಟನಾತ್ಮಕ, ವಿಚಾರಾತ್ಮಕ, ಹಾಗೂ ವಿಮರ್ಶಾತ್ಮಕ  ಅಂಶಗಳನ್ನು ಒಳಗೊಂಡು ಸತ್ಯಾನ್ವೇಷಣೆಯ ದಿಕ್ಕಿಗೆ ಕರೆದೊಯ್ಯುತ್ತವೆ. ತಾನು ಪಡೆದ ಲೋಕಾನುಭವಗಳನ್ನು ಇತರರಿಗೆ ಹಂಚುವ ಪ್ರಯತ್ನಮಾಡಿದ್ದಾನೆ.
ಸಾರಾಂಶ : ದೇಹವನ್ನು ಬಂಡಿಗೆ ಹೋಲಿಸಿ ಅದರ ಚಾಲಕರು ಐದು ಜನ ಎಂದಿದ್ದಾನೆ.ಪಂಚೇಂದ್ರಿಯಗಳು ಒಂದಕ್ಕೊಂದು ಸಮವಿಲ್ಲ,  ಪಂಚೇಂದ್ರಿಯಗಳಾದ ಕಣ್ಣು(ಸುಂದರವಾದುದನ್ನುಕಾಣುವುದು), ಕಿವಿ (ನಮಗೆ ಹಿತವಾದುದನ್ನು ಕೇಳಲು ತವಕಿಸುವುದು), ಮೂಗು (ಸುಗಂಧವನ್ನು ಆಘ್ರಾಣಿಸುವುದು), ನಾಲಿಗೆ (ರುಚಿಯಾದುದನ್ನು ಸವಿ ನೋಡುವುದು) ಮತ್ತು ಚರ್ಮ ( ಹಿತವಾದುದನ್ನು ಸ್ಪರ್ಷಿಸುವುದು) ತಮ್ಮ ಕರ್ಮಗಳಿಗೆ ಅನುಸಾರವಾಗಿ ನಮ್ಮನ್ನು ಸೆಳೆಯುತ್ತವೆ. ಅವುಗಳನ್ನು ಹಿಡಿತದಲ್ಲಿಟ್ಟು ಮನಸ್ಸನ್ನು ಶಿವನಲ್ಲಿ ಕೇಂದ್ರೀಕರಿಸದಿದ್ದರೆ ಈ ದೇಹವೆಂಬುದು ಅಚ್ಚುಮುರಿದ ಬಂಡಿಯಂತೆ ಆಗುವುದು.
ಹೊಟ್ಟೆಯಮೇಲೆ ಅನ್ನದ ಗಂಟನ್ನು ಕಟ್ಟಿದರೆ ಹಸಿವು ಹೋಗುವುದೇ? ಶರೀರದ ಮೇಲೆ ಲಿಂಗವ ಧರಿಸಿದರೆ ಧರಿಸಿದವ ಭಕ್ತನಾಗಬಲ್ಲನೆ? ಪೊದೆಯಮೇಲೆ ಇಟ್ಟ ಕಲ್ಲು ಲಿಂಗವಾಗಬಲ್ಲದೆ?, ಪೊದೆ ಭಕ್ತನಾಗಬಲ್ಲುದೇ. ಪೊದೆಯ ಮೇಲೆ ಕಲ್ಲುಇಟ್ಟಾತ ಗುರುವಾಗಬಲ್ಲನೆ?, ಈ ರೀತಿ ವೇಷಧಾರಿಗಳ ಕಂಡು ನಾಚುವೆ ಎಂದು ಹೇಳುತ್ತಾನೆ. ಹಸಿವಾದಾಗ ಅನ್ನತಿನ್ನಬೇಕೇ ಹೊರೆತು ಅನ್ನದಗಂಟನ್ನು ಹೊಟ್ಟೆಮೇಲೆ ಕಟ್ಟಿದರೆ ಹಸಿವು ಇಂಗುವುದಿಲ್ಲ. ಹಾಗೆಯೇ ಶಿವಭಕ್ತಿಯಲ್ಲಿ ತನ್ನನ್ನು ತಾನು ಮರೆಯಬೇಕೇ ಹೊರತು ಲಿಂಗವನ್ನು ಕಟ್ಟಿಕೊಂಡು ಮೆರೆಯುವುದಲ್ಲ. ಈರೀತಿ ಲಿಂಗಧರಿಸಿ ಮೆರೆಯುವವನಿಗೆ ನೀನು  ಭಕ್ತನೇ? ಎಂದೂ, ಲಿಂಗದೀಕ್ಷೆಕೊಡುವ ಗುರುವಿಗೂ ನೀನು ಗುರುವೇ? ಎಂದು , ಕಟ್ಟಿಕೊಂಡ ಕಲ್ಲಿಗೂ ಇದು ಲಿಂಗವೇ? ಎಂದು ಪ್ರಶ್ನಿಸುತ್ತಾನೆ. ಭಕ್ತಿ ಮುಖ್ಯವೇ ಹೊರತು ಆಚರಣೆಯಲ್ಲ ಎಂಬ ಮನೋಭಾವ ಇಲ್ಲಿ ಕಾಣುತ್ತದೆ.
ಯಾರು ಹಸಿದಾಗ ಅನ್ನವನ್ನು ಕೊಟ್ಟು , ಬಾಯಾರಿದಾಗ ಬೊಗಸೆ ನೀರನ್ನು ನೀಡುತ್ತಾರೋ ಅವರು ದೈವಸಮಾನ ಅಥವಾ ದೇವರು ಎಂದು ಹೇಳುವ ಅಲ್ಲಮಪ್ರಭು ನಾನು ಅನ್ನವನ್ನು ನೀರನ್ನೂ ನೀಡುತ್ತಿರುವುದರಿಂದ ನಾನೇ ದೇವರು ಎಂದು ಹೇಳುತ್ತಾ ನೀನು ದೇವನಾಗಿದ್ದರೆ ಎನ್ನನ್ನು ಏಕೆ ಸಲಹುತ್ತಿಲ್ಲ ಎಂದು ಕೇಳುತ್ತಾನೆ.
ಸಂದರ್ಭ ಸೂಚಿಸಿ ವಿವರಿಸಿ.
೧.ಬಂಡಿಯ ಹೊಡೆವರೈವರು ಮಾನಿಸರು
ಈ ವಾಕ್ಯವನ್ನು ಅಲ್ಲಮಪ್ರಭುವಿನ  ವಚನಗಳಿಂದ ಆರಿಸಲಾಗಿದೆ. ಅಲ್ಲಮನು ಪಂಚೇಂದ್ರಿಯಗಳನ್ನೇ ದೇಹವೆಂಬ ಬಂಡಿಯ ಚಾಲಕರು ಎಂದು ಕರೆದಿದ್ದಾನೆ. ಪಂಚೇಂದ್ರಿಯಗಳು ತಮ್ಮ ಕರ್ಮಗಳಿಗೆ ಅನುಸಾರವಾಗಿ ನಮ್ಮನ್ನು ಸೆಳೆಯುತ್ತವೆ. ಅವುಗಳನ್ನು ಹಿಡಿತದಲ್ಲಿಟ್ಟು ಮನಸ್ಸನ್ನು ಶಿವನಲ್ಲಿ ಕೇಂದ್ರೀಕರಿಸದಿದ್ದರೆ ಈ ದೇಹವೆಂಬುದು ಅಚ್ಚುಮುರಿದ ಬಂಡಿಯಂತೆ ಆಗುವುದು.

೨.ಮೆಳೆ ಭಕ್ತನೆ? ಇಟ್ಟಾತ ಗುರುವೆ?
ಈ ವಾಕ್ಯವನ್ನು ಅಲ್ಲಮಪ್ರಭುವಿನ  ವಚನಗಳಿಂದ ಆರಿಸಲಾಗಿದೆ. ಹಸಿವಾದಾಗ ಅನ್ನ ತಿನ್ನಬೇಕೇ ಹೊರೆತು ಅನ್ನದ ಗಂಟನ್ನು ಹೊಟ್ಟೆಯ ಮೇಲೆ ಕಟ್ಟಿದರೆ ಹಸಿವು ಇಂಗುವುದಿಲ್ಲ. ಹಾಗೆಯೇ ಶಿವಭಕ್ತಿಯಲ್ಲಿ ತನ್ನನ್ನು ತಾನು ಮರೆಯಬೇಕೇ ಹೊರತು ಲಿಂಗವನ್ನು ಕಟ್ಟಿಕೊಂಡು ಮೆರೆಯುವುದಲ್ಲ. ಈ ರೀತಿ ಲಿಂಗಧರಿಸಿ ಮೆರೆಯುವವನಿಗೆ ನೀನು  ಭಕ್ತನೇ? ಎಂದೂ, ಲಿಂಗದೀಕ್ಷೆಕೊಡುವ ಗುರುವಿಗೂ ನೀನು ಗುರುವೇ? ಎಂದು , ಕಟ್ಟಿಕೊಂಡ ಕಲ್ಲಿಗೂ ಇದು ಲಿಂಗವೇ? ಎಂದು ಪ್ರಶ್ನಿಸುತ್ತಾನೆ. ಭಕ್ತಿ ಮುಖ್ಯವೇ ಹೊರತು ಆಚರಣೆಯಲ್ಲ ಎಂಬ ಮನೋಭಾವ ಇಲ್ಲಿ ಕಾಣುತ್ತದೆ.

೩.ನೀ ದೇವನಾದಡೆ ಎನ್ನನೇಕೆ ಸಲಹೆ
ಈ ವಾಕ್ಯವನ್ನು ಅಲ್ಲಮಪ್ರಭುವಿನ  ವಚನಗಳಿಂದ ಆರಿಸಲಾಗಿದೆ. ಯಾರು ಹಸಿದಾಗ ಅನ್ನವನ್ನು ಕೊಟ್ಟು , ಬಾಯಾರಿದಾಗ ಬೊಗಸೆ ನೀರನ್ನು ನೀಡುತ್ತಾರೋ ಅವರು ದೈವಸಮಾನರು ಅಥವಾ ದೇವರು ಎಂದು ಹೇಳುವ ಅಲ್ಲಮಪ್ರಭು ನಾನು ಅನ್ನವನ್ನು ನೀರನ್ನೂ ನೀಡುತ್ತಿರುವುದರಿಂದ ನಾನೇ ದೇವರು ಎಂದು ಹೇಳುತ್ತಾ, ನೀನು ದೇವನಾಗಿದ್ದರೆ ಎನ್ನನ್ನು ಏಕೆ ಸಲಹುತ್ತಿಲ್ಲ? ಎಂದು ದೇವರನ್ನೇ ಕೇಳುತ್ತಾನೆ.
ಒಂದುವಾಕ್ಯದಲ್ಲಿ ಉತ್ತರಿಸಿ.
೧.ಅಲ್ಲಮಪ್ರಭುವಿನ ಅಂಕಿತಯಾವುದು?
ಗುಹೇಶ್ವರಾ ಎಂಬುದು ಅಲ್ಲಮಪ್ರಭುವಿನ ಅಂಕಿತವಾಗಿದೆ.

೨.ಕಾಲುಗಳನ್ನು ಯಾವುದಕ್ಕೆ ಹೋಲಿಸಲಾಗಿದೆ
ಕಾಲುಗಳನ್ನು ಗಾಲಿಗೆ ಹೋಲಿಸಲಾಗಿದೆ.

೩. ದೇಹವೆಂಬುದು ಏನು?
ದೇಹವನ್ನು ತುಂಬಿದಬಂಡಿ ಎಂದು ಕರೆದಿದ್ದಾನೆ.

೪. ಕಟ್ಟೋಗರದ ಮೊಟ್ಟೆಯನ್ನು ಎಲ್ಲಿ ಕಟ್ಟಲಾಗಿದೆ?
ಕಟ್ಟೋಗರದ ಮೊಟ್ಟೆಯನ್ನು ಹೊಟ್ಟೆಯಮೇಲೆ ಕಟ್ಟಲಾಗಿದೆ.

೫.ಇಟ್ಟ ಕಲ್ಲು ಎಲ್ಲಿ ಸಿಕ್ಕರೆ ಲಿಂಗವೆಂದು ಕೇಳುತ್ತಾನೆ?
ಪೊದೆಯಮೇಲೆ ಇಟ್ಟಕಲ್ಲು ಲಿಂಗವೇ ಎಂದು ಕೇಳುತ್ತಾನೆ.

೬.ಹಸಿದಾಗ ಏನನ್ನುನೀಡಲಾಗಿದೆ. ?
ಹಸಿದಾಗ ಒಂದು ತುತ್ತು ಅನ್ನವನ್ನು ನೀಡಲಾಗಿದೆ.



ಎರಡು ಮೂರು ವಾಕ್ಯದಲಿ ಉತ್ತರಿಸಿ
೧.ಕಾಲು ಮತ್ತು ದೇಹವನ್ನು ಯಾವುದಕ್ಕೆ ಹೋಲಿಸಲಾಗಿದೆ?
ಕಾಲುಗಳನ್ನು ಗಾಲಿಗೂ , ದೇಹವನ್ನು ತುಂಬಿದ ಬಂಡಿಗೂ ಹೋಲಿಸಲಾಗಿದೆ. ಈ ಬಂಡಿಯನ್ನು ನಡೆಸುವವರು ಐದು ಜನ ಇಲ್ಲಿ ದೇಹದ ಪಂಚೇಂದ್ರಿಯಗಳೇ ಚಾಲಕರಾಗಿದ್ದಾರೆ. ಅವರ ಇಚ್ಚೆಯನ್ನು ಅರಿತು ಮುನ್ನಡೆದರೆ ಬಂಡಿಯ ಅಚ್ಚು ಮುರಿಯುತ್ತದೆ ಎಂದಿದ್ದಾನೆ.

೨.ಯಾರನ್ನು ಕಂಡರೆ ಅಲ್ಲಮ ನಾಚುವೆನೆಂದು ಹೇಳುವನು?
ಶಿವಶರಣರಂತೆ ವೇಷಧರಿಸುವವರನ್ನು ಕಂಡು ಈ ಮಾತನ್ನು ಹೇಳುತ್ತಾನೆ. ದೇಹದ ಮೇಲೆ ಲಿಂಗವನ್ನು ಧರಿಸಿ ಶಿವಭಕ್ತನಂತೆ ನಡೆದುಕೊಳ್ಳುವವರನ್ನು ಕಂಡು ಹೊಟ್ಟೆಮೇಲೆ ಅನ್ನದ ಗಂಟನ್ನು ಕಟ್ಟಿದರೆ ಹೊಟ್ಟೆಯ ಹಸಿವು ಹೋಗುವುದೇ ಅಂತೆಯೇ ಲಿಂಗವನ್ನು ಧರಿಸಿದರೆ ಕೊಟ್ಟಾತ ಗುರುವಾಗುವನೇ? ಧರಿಸಿದಾತ ಭಕ್ತನಾಗುವನೇ ಎಂದು ಹೇಳುತ್ತಾ ಇಂತವರನ್ನು ಕಂಡು ನಾಚುವೆನು ಎಂದಿದ್ದಾನೆ.

೩. ಅಲ್ಲಮ ಏನನ್ನು ನೀಡುವುದರಿಂದ ನಾ ದೇವ ಎಂದು ಹೇಳುತ್ತಾನೆ?
ಹಸಿದಾಗ ಅನ್ನವನ್ನು ನೀಡುವ, ಬಾಯಾರಿದಾಗ ನೀರನ್ನು ಕೊಡುವ ನಾನೇ ದೇವನು. ನೀನು ದೇವನೇ ಆಗಿದ್ದರೆ ನನ್ನನ್ನು ಏತಕ್ಕೆ ಸಲಹುತ್ತಿಲ್ಲ ಎಂದು ಅಲ್ಲಮಪ್ರಭು ದೇವರನ್ನೇ ಪ್ರಶ್ನಿಸುವ ಧೈರ್ಯ ತೋರಿದ್ದಾನೆ.

***** ಓಂ****
ಕವಿ ಪರಿಚಯ :- ಘಟ್ಟಿವಾಳಯ್ಯ : (೧೧೬೦) ಹನ್ನೆರಡನೆ ಶತಮಾನದ ವಚನಕಾರ ಮುದ್ದಣ್ಣ ಎಂಬುದು ಇವನ ಪೂರ್ವನಾಮ. ಶಿವಾನುಭವವನ್ನು ನರ್ತನದಮೂಲಕ ಸಾರುವಕಾಯಕವನ್ನು ಮಾಡುತ್ತಿದ್ದು ಕಪಟಿಗಳು ಇವನ ಸದಾಚಾರದ ಪ್ರಭಾವದಿಂದಾಗಿ ನಿಜ ಜಂಗಮರಾದದ್ದು ಇವನ ವೈಶಿಷ್ಟ್ಯ. ಒಮ್ಮೆ ಬಸವಣ್ಣನವರ ಮಹಾಮನೆಗೆ ಊಟಕ್ಕೆ ಹೋಗುತ್ತಿದ್ದ ಜಂಗಮರನ್ನು ಕಂಡು ಘಟ್ಟಿವಾಳಯ್ಯನು  ಬಸವಣ್ಣನ ಮನೆಯ ಮುಸುರೆ ಗಡಿಗೆಗೆ ಇವರೇ ಮಕ್ಷಿಕಗಳೆನ್ನಲು ಅವರು ಕೋಪದಿಂದ ಇವನ ಇಷ್ಟಲಿಂಗವನ್ನು ಕಿತ್ತುಕೊಂಡರು. ಆತನು ಅದನ್ನು ಕೊಡುವಂತೆ ಬೇಡಲು ಅವರು ಕುಹಕದಿಂದ ತಮ್ಮ ಮುಂದಿದ್ದ ಕಲ್ಲುಗುಂಡೊಂದನ್ನು ತೋರಿ ಅದೋ ಅಲ್ಲಿದೆ ನಿನ್ನ ಇಷ್ಟಲಿಂಗ ಎಂದು ಹಾಸ್ಯಮಾಡಿದರು. ಆತನು ಅದನ್ನೇ ಇಷ್ಟಲಿಂಗವೆಂದು ಕೊರಳಲ್ಲಿ ಕಟ್ಟಿಕೊಂಡು ಬಸವಣ್ಣನ ಮಹಾಮನೆಯ ಹೆಬ್ಬಾಗಿಲಿನಲ್ಲಿ ಕುಳಿತುಬಿಟ್ಟನು. ಸುದ್ದಿ ತಿಳಿದ ಬಸವಣ್ಣನು ಪ್ರಭುದೇವ , ಚನ್ನಬಸವಣ್ಣ ಮೊದಲಾದವರೊಂದಿಗೆ ಅಲ್ಲಿಗೆ ಬಂದು ಆ ಜಂಗಮರಿಗೆ ಆತನ ಇಷ್ಟಲಿಂಗವನ್ನು ನೀಡುವಂತೆ ಹೇಳಿದನು ಆಗ ಅವರು ಘಟ್ಟಿವಾಳಯ್ಯಗಳೇ ನಿಮಗೆ ಗುರುಕೊಟ್ಟಲಿಂಗ ಮತ್ತು ಬೆಟ್ಟದ ಈ ಗುಂಡು ಹೀಗೆ ಎರಡು ಲಿಂಗಗಳೇ? ನಿಮಗೆ ಇಬ್ಬರು ಗಂಡರೇ? ಎಂದು ವ್ಯಂಗವಾಡಿದರು.  ಅಲ್ಲಮ ಮೊದಲಾದವರು ಘಟ್ಟಿವಾಳಯ್ಯನದು ನಿಜವಾದ ನಡೆಯೆಂದು ಆತನನ್ನು ಸ್ತುತಿಸಿದರು. ಅಲ್ಲಮ, ಬಸವ, ಸಿದ್ಧರಾಮ, ಆದಯ್ಯ ಮೊದಲಾದ ಶರಣರು ಘಟ್ಟಿವಾಳಯ್ಯನ ಗಟ್ಟಿತನವನ್ನು ತಮ್ಮ ವಚನಗಳಲ್ಲಿ ಕೊಂಡಾಡಿದ್ದಾರೆ. ಸಿದ್ಧರಾಮನು “ಧೀರನಾದಡೆ ಘಟ್ಟಿವಾಳಯ್ಯನಂತಾಗಬೇಕಯ್ಯ” ಎಂದಿದ್ದಾನೆ.  ಬಸವಣ್ಣನವರು “ಕಾಯವಂಚಕನಲ್ಲ, ಜೀವ ವಂಚಕನಲ್ಲ, ನಿರಂತರ ಸಹಜ ನೋಡಯ್ಯಾ ಶಂಕೆಯಿಲ್ಲದ ಮಹಾಮಹಿಮನು ಕೂಡಲ ಸಂಗನ ಶರಣನುಪಮಾತೀತ ನೋಡಯ್ಯಾ” ಎಂದು ಹೊಗಳಿದರೆ,   “ಅಶನಕ್ಕಂಜಿ ವೇಷವನೆ ಹೊತ್ತು ದೇಶವ ತೊಳಲುವ ಹಿರಿಯರ ಗಂಡ, ಕಾಲದ ಗಂಡ, ಕರ್ಮದಗಂಡ, ಲಿಂಗವಿಡಿದು ಸಾವ ಹಿರಿಯರ ಗಂಡ, ಗೋಹೇಶ್ವರ” ಎಂದು ಅಲ್ಲಮ ಹೊಗಳಿದ್ದಾನೆ.
ಇಂತಹ ಘಟ್ಟಿವಾಳಯ್ಯ ನರ್ತನ ಮಾಡುತ್ತಿರುವಾಗಲೇ ಲಿಂಗೈಕ್ಯನಾದ.
ಸಾರಾಂಶ :
ಕೊಲ್ಲುವ ಆಯುಧಗಳಿಗೆ ದಯೆ ಧರ್ಮದ ಮೊನೆ ಇರುವುದೇ? ಅಂತೆಯೇ ಉಗ್ರಸರ್ಪದ ಹಲ್ಲಿನೊಳಗೆ ಅಮೃತದ ರುಚಿ ಇರುತ್ತದೆಯೇ? ಹೊಟ್ಟೆಪಾಡಿಗೋಸ್ಕರ ಜಂಗಮರ ವೇಷಧರಿಸಿದವರೆಲ್ಲ ಶಿವನನ್ನು ಹೇಗೆ ಅರಿಯುವರು ಎಂದು ಪ್ರಶ್ನಿಸುತ್ತಾನೆ. ಇಂತಹ ವೇಷಧಾರಿಗಳು ಶಿವಶರಣರ ಗುಂಪಿನಿಂದ ಬೇರೆ ಅಂತಹವರಿಗೆ ಶಿವ ದೊರೆಯುವುದಾದರೂ ಹೇಗೆ ಎಂದು ಹೇಳುತ್ತಾರೆ.
ಅಂತೆಯೆ ಧ್ಯಾನ, ತಪಸ್ಸು , ಉಪವಾಸ, ವ್ರತ ಎಂಬುವುಗಳನ್ನು ಮನಸ್ಸಿಲ್ಲದೆಯೇ ಆಚರಿಸುವ ಜನರಿಗೆ ತಪಸ್ಸೆಂಬುದೇ ಬಂಧನವಾಗಿಯೂ ನಿಯಮವೆಂಬುದು ಕಟ್ಟುಪಾಡಾಗಿಯೂ ನಡತೆಯೆಂಬುದು ಮೈಲಿಗೆಯಾಗಿಯೂ ಕಾಡುವುದು. ಇಂತಹ ನಿರ್ಬಂಧಗಳೆಲ್ಲ ನಗೆಗೆ ಕಾರಣವಾಗಿ, ಆ ನಗೆಯಿಂದ ಕೋಪ ದ್ವೇಷಗಳು ಉಂಟಾಗಿ ಶಿವ ಅಲ್ಲಿ ಇಲ್ಲದವನಾಗುತ್ತಾನೆ. ಧ್ಯಾನ ತಪಸ್ಸುಗಳೆಲ್ಲ ಮನಸ್ಸಿಟ್ಟು ಆಚರಿಸಬೇಕೇ  ಹೊರತು ಬಲವಂತದಿಂದಲ್ಲ. ಎಂದು ಹೇಳುತ್ತಾನೆ.
ತನ್ನ ದೇಹದ ಮೇಲಿನ ಮೋಹವನ್ನು ಬಿಡಬೇಕೆಂದು ಗುರುವನ್ನು ತೋರಿಸಲಾಗಿದೆ,ಮನಸ್ಸನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಲಿಂಗವನ್ನು ತೋರಿ, ಧನದ ಮೇಲಿನ ಆಸೆಯನ್ನು ತೊರೆಯಬೇಕೆಂದು (ಹಣವನ್ನು ದಾನಮಾಡಲಿ ಎಂದು) ಜಂಗಮವನ್ನು ತೋರಿಸಿದರೂ,  ಒಳ್ಳೆಯದನ್ನೆಲ್ಲ ಮರೆತು ಹೊಡೆದಾಡುವ ಭಾಷೆಹೀನರು (ಮಾತಿಗೆತಪ್ಪಿದವರನ್ನು) ಕಂಡು   ನಾಚಿಕೆಯಾಯಿತು.
ಗುರು, ಲಿಂಗ, ಜಂಗಮವನ್ನು ಮರೆತು ಅಶನ ವಶನಗಳಿಗೆ ಹೊಡೆದಾಡುವ ಜನರನ್ನು ಕಂಡು ನಾಚುವ ಘಟ್ಟಿವಾಳಯ್ಯನು ಡಾಂಬಿಕ ಭಕ್ತರ ನಡವಳಿಕೆಗಳನ್ನು ಖಂಡಿಸುತ್ತಾನೆ. ಇಂತಹವರು ಶಿವಭಕ್ತರಾಗಲು,  ಶಿವನನ್ನು ಕಾಣಲು ಸಾಧ್ಯವಿಲ್ಲ, ಎಂಬುದು ಈತನ ಅಭಿಮತ.

ಸಂದರ್ಭದೊಡನೆ ವಿವರಿಸಿ :
೧. ವೇಷಧಾರಿಗಳೆಲ್ಲ ನಿಮ್ಮ ಕೂಟಕ್ಕೆ ಹೊರಗು.
ಈ ಮಾತನ್ನು ಘಟ್ಟಿವಾಳಯ್ಯನ ವಚನಗಳಿಂದ ಆರಿಸಲಾಗಿದೆ. ಹೊಟ್ಟೆಪಾಡಿಗೋಸ್ಕರ ಜಂಗಮರ , ಶಿವಶರಣರ ವೇಷವನ್ನು ಧರಿಸುವ ಜನರನ್ನು ಕಂಡು ಅವರ ರೀತಿ ನೀತಿಗಳನ್ನು ಖಂಡಿಸುತ್ತಾ ಈ ಮಾತನ್ನು ಹೇಳುತ್ತಾನೆ. ಶಿವಶರಣರ ಗುಂಪಿನಲ್ಲಿ ಇವರು ಸೇರುವುದಿಲ್ಲ.

೨. ಶೀಲವೆಂಬುದು ಸೂತಕ
 ಈ ಮಾತನ್ನು ಘಟ್ಟಿವಾಳಯ್ಯನ ವಚನಗಳಿಂದ ಆರಿಸಲಾಗಿದೆ.
ಮನಸ್ಸಿಲ್ಲದೆಯೆ ತಪಸ್ಸು, ನೇಮ , ವ್ರತ ಎಂದೆಲ್ಲಾ ಆಚರಿಸುವ ಜನರನ್ನು ಕಂಡು ಈ ಮಾತನ್ನು ಹೇಳಿದ್ದಾನೆ. ಏಕೆ ಆಚರಿಸುತ್ತಿದ್ದೇವೆ ಎಂಬುದನ್ನು ಅರಿಯದೆ ಮಾಡುವವರನ್ನು ಗುರಿಯಾಗಿರಿಸಿಕೊಂಡು ಖಂಡಿಸುವಾಗ ಈ ಮಾತು ಬಂದಿದೆ.

೩. ಭಾಷೆಹೀನರ ಕಂಡು ನಾಚಿಕೆಯಾಯಿತ್ತು.
ಈ ಮಾತನ್ನು ಘಟ್ಟಿವಾಳಯ್ಯನ ವಚನಗಳಿಂದ ಆರಿಸಲಾಗಿದೆ.
ತನು ಮನ ಧನವನ್ನು ಮರೆಯಲೆಂದು ಗುರು , ಲಿಂಗ , ಜಂಗಮರನ್ನು ತೋರಿದ್ದರೂ ಒಳ್ಳೆಯದನ್ನು ಮರೆತು ಹೊಟ್ಟೆಯಪಾಡಿಗಾಗಿ ಮಾತಿಗೆ ತಪ್ಪಿ ಓಡಾಡುವ ಜನರನ್ನು ಕಂಡು ನಾಚಿಕೆಯಾಯಿತು ಎಂದಿದ್ದಾನೆ.


ಒಂದು ವಾಕ್ಯದಲ್ಲಿ ಉತ್ತರಿಸಿ.
೧. ದಯೆ ಧರ್ಮದ ಮೊನೆ ಯಾವುದಕ್ಕೆ ಇರುವುದಿಲ್ಲ?
ಇರಿವ ಆಯುಧಗಳಿಗೆ ದಯೆ ಧರ್ಮದ ಮೊನೆ ಇರುವುದಿಲ್ಲ

೨. ತಪವನ್ನು ಘಟ್ಟಿವಾಳಯ್ಯ ಏನೆಂದು ಕರೆಯುತ್ತಾನೆ?
ತಪವನ್ನು ಘಟ್ಟಿವಾಳಯ್ಯ ಬಂಧನ ಎಂದು  ಕರೆಯುತ್ತಾನೆ

೩. ನಗೆಗೆ ಈಡಾಗುವುದು ಯಾವುದು?
ವ್ರತದ ನಿರ್ಭಂದಗಳೆಲ್ಲ ನಗೆಗೆ ಈಡಾಗುತ್ತವೆ.

೪. ಭಾಷೆಹೀನರ ಕಂಡಾಗ ಏನಾಯಿತು?
ಭಾಷೆಹೀನರ ಕಂಡು ನಾಚಿಕೆಯಾಯಿತು.

೫. ಘಟ್ಟಿವಾಳಯ್ಯನ ಅಂಕಿತ ಯಾವುದು?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಎಂಬುದು ಘಟ್ಟಿವಾಳಯ್ಯನ ಅಂಕಿತ.



ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

೧. ಕೈದು , ಕಾಳೋರಗಗಳಿಗೆ ಏನೇನು ಇರುವುದಿಲ್ಲ?
ತಿವಿಯುವ ಆಯುಧಕ್ಕೆ ದಯೆ, ಧರ್ಮದ ಮೊನೆ ಇರುವುದಿಲ್ಲ. ಅಂತೆಯೇ ಉಗ್ರಸರ್ಪದ ದವಡೆಯಲ್ಲಿ ಅಮೃತವು ಇರುವುದಿಲ್ಲ.

೨. ತಗಹು , ಸೂತಕಗಳು ಯಾವುವು?
ನೇಮವೆಂಬುದು ತಗಹು (ನಿಯಮವೆಂಬುದು ಕಟ್ಟುಪಾಡು), ಶೀಲವೆಂಬುದು ಸೂತಕ  (ನಡತೆ ಎಂಬುದು ಮೈಲಿಗೆ) ಎಂದಿದ್ದಾನೆ.

೩. ತನುಮನ ಧನಗಳನ್ನು ಮರೆಯಲು ಏನನ್ನು ತೋರುತ್ತಾರೆ?
ತನುಮನ ಧನಗಳನ್ನು ಮರೆಯಲು ಗುರು , ಲಿಂಗ , ಜಂಗಮಗಳನ್ನು ತೋರುತ್ತಾರೆ.

ಐದಾರು ವಾಕ್ಯದಲ್ಲಿ ಉತ್ತರಿಸಿ.
೧. ಘಟ್ಟಿವಾಳಯ್ಯ ವೇಷಧಾರಿಗಳನ್ನು ಕೂಟದಿಂದ ಹೊರಗು ಎನ್ನಲು ಕಾರಣಗಳೇನು?
ಕೊಲ್ಲುವ ಆಯುಧಗಳಿಗೆ ದಯೆ ಧರ್ಮದ ಮೊನೆ ಇರುವುದೇ? ಅಂತೆಯೇ ಉಗ್ರಸರ್ಪದ ಹಲ್ಲಿನೊಳಗೆ ಅಮೃತವಿರುತ್ತದೆಯೇ? ಹೊಟ್ಟೆಪಾಡಿಗೋಸ್ಕರ ಜಂಗಮರ ವೇಷಧರಿಸಿದವರೆಲ್ಲ ಶಿವನನ್ನು ಹೇಗೆ ಅರಿಯುವರು ಎಂದು ಪ್ರಶ್ನಿಸುತ್ತಾನೆ. ಇಂತಹ ವೇಷಧಾರಿಗಳು ಶಿವಶರಣರ ಗುಂಪಿನಿಂದ ಬೇರೆ ಅಂತಹವರಿಗೆ ಶಿವ ದೊರೆಯುವುದಾದರೂ ಹೇಗೆ ಎಂದು ಹೇಳುತ್ತಾರೆ.

೨. ವ್ರತಗಳನ್ನು ಕುರಿತಂತೆ ಘಟ್ಟಿವಾಳಯ್ಯನವರ ನಿಲುವೇನು?
ಅಂತೆಯೆ ಧ್ಯಾನ, ತಪಸ್ಸು , ಉಪವಾಸ, ವ್ರತ ಎಂಬುವುಗಳನ್ನು ಮನಸ್ಸಿಲ್ಲದೆಯೇ ಆಚರಿಸುವ ಜನರಿಗೆ ತಪಸ್ಸೆಂಬುದೇ ಬಂಧನವಾಗಿಯೂ ನಿಯಮವೆಂಬುದು ಕಟ್ಟುಪಾಡಾಗಿಯೂ ನಡತೆಯೆಂಬುದು ಮೈಲಿಗೆಯಾಗಿಯೂ ಕಾಡುವುದು. ಇಂತಹ ಕಟ್ಟುಪಾಡುಗಳೆಲ್ಲ ನಗೆಗೆ ಕಾರಣವಾಗಿ, ಆ ನಗೆಯಿಂದ ಕೋಪ ದ್ವೇಷಗಳು ಉಂಟಾಗಿ ಶಿವ ಅಲ್ಲಿ ಇಲ್ಲದವನಾಗುತ್ತಾನೆ. ಧ್ಯಾನ - ತಪಸ್ಸುಗಳೆಲ್ಲ ಮನಸ್ಸಿಟ್ಟು ಆಚರಿಸಬೇಕೇ  ಹೊರತು ಬಲವಂತದಿಂದಲ್ಲ. ಎಂದು ಹೇಳುತ್ತಾನೆ.

೩. ಘಟ್ಟಿವಾಳಯ್ಯನವಚನಗಳ ಆಶಯಗಳೇನು?
ಹೊಟ್ಟೆಯ ಪಾಡಿಗೋಸ್ಕರ ಜಂಗಮರಂತೆ, ಶಿವಶರಣರಂತೆ ವೇಷಧರಿಸಿದ ಜನರನ್ನು , ಮನಸ್ಸಿಲ್ಲದೆಯೇ ನೇಮ, ಧ್ಯಾನ, ತಪಸ್ಸು , ವ್ರತ, ಉಪವಾಸಗಳೇ ಮೊದಲಾದ, ಅನೇಕ ರೀತಿಯ ಕಟ್ಟುಪಾಡುಗಳನ್ನು ಹೊಂದಿದ್ದು ನಗೆಗೆ ಕಾರಣವಾಗುವ ಜನರನ್ನು ಖಂಡಿಸುತ್ತಾ ಡಾಂಬಿಕತನದಿಂದ , ಬಲವಂತದಿಂದ ಶಿವನನ್ನು ಒಲಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹವರು ಶಿವಭಕ್ತರ ಗುಂಪಿನಿಂದಲೂ ಹೊರಗೆ ಎಂದಿದ್ದಾನೆ.ತನುಮನಧನಗಳನ್ನು ಮರೆಯಲೆಂದು ಗುರು, ಲಿಂಗ, ಜಂಗಮರನ್ನು ತೋರಲಾಗಿದೆ. ಗುರು-ಲಿಂಗ-ಜಂಗಮಗಳನ್ನು ಮರೆವ ಭಾಷಾಹೀನರನ್ನು ಕಂಡು ನಾಚುತ್ತೇನೆ ಎಂದು ಘಟ್ಟಿವಾಳಯ್ಯ ಹೇಳುತ್ತಾನೆ. 
~~~ಓಂ~~~
ವಚನಗಳು - ಅಕ್ಕಮಹಾದೇವಿಯವರ ವಚನಗಳು
ಅಕ್ಕಮಹಾದೇವಿ : ಹನ್ನೆರಡನೇ ಶತಮಾನದ ಪ್ರಸಿದ್ಧ ವಚನಕಾರ್ತಿ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಉಡುತಡಿ ಯವಳು. ಬಾಲ್ಯದಿಂದಲೂ ಶಿವನಲ್ಲಿ ಅಪಾರವಾದ ಭಕ್ತಿಯಿದ್ದ ಈಕೆಗೆ ಕೌಶಿಕನೆಂಬ ರಾಜನೊಡನೆ ಬಲವಂತದ ವಿವಾಹವಾಗುತ್ತದೆ. ಶಿವಭಕ್ತಿಗೆ ಅಡ್ಡಿಪಡಿಸಿದ ಅವನನ್ನು ತೊರೆದು ವೈರಾಗಿಯಾಗಿ ಹೊರಟವಳು ಕಲ್ಯಾಣ ಸೇರುತ್ತಾಳೆ.  ಶಿವಶರಣರ ಜೊತೆ ಅಧ್ಯಾತ್ಮಿಕ ಚರ್ಚೆಯಲ್ಲಿ ಪಾಲ್ಗೊಂಡು ಕಡೆಯಲ್ಲಿ ಶ್ರೀಶೈಲದ ಕದಳಿವನದಲ್ಲಿ ಐಕ್ಯಳಾದಳು ಎಂಬ ಐತಿಹ್ಯವಿದೆ.
ಸಾರಾಂಶ
ರತ್ನದ ಸಂಕೋಲೆಯಾದರೂ ಅದು ಅಡ್ಡಿಯಲ್ಲವೇ? ಮುತ್ತಿನ ಬಲೆಯಾದರೇನು ಅದೂ ಬಂಧನವಲ್ಲವೇ? ಚಿನ್ನದ ಕತ್ತಿಯಲ್ಲಿ ತಲೆಗೆ ಹೊಡೆದರೆ ಸಾಯುವುದಿಲ್ಲವೇ? ಲೌಕಿಕವಾದ ವಿಚಾರಗಳಲ್ಲಿ ತೊಡಗಿದರೆ ಜನನ ಮರಣಗಳು ಬಿಡುವುವೇ? ಕೇವಲ ಬಾಹ್ಯ ಆಚಾರ , ವ್ಯವಹಾರಗಳಲ್ಲಿ ತೊಡಗಿ ಶಿವನನ್ನು ಮರೆತಂತ ಜನರನ್ನು ಕುರಿತು ಈ ಮಾತುಗಳನ್ನು ಹೇಳುತ್ತಾಳೆ. ರತ್ನದ ಸಂಕೋಲೆಯೂ ನಮಗೆ ತೊಂದರೆಯನ್ನೇ ಉಂಟುಮಾಡುತ್ತದೆ, ಮುತ್ತಿನ ಬಲೆಯೂ ನಮ್ಮನ್ನು ಬಂಧಿಸುತ್ತದೆ. ಅಂತೆಯೇ ಚಿನ್ನದ ಕತ್ತಿಯಿಂದ ಹೊಡೆಯಲು ಸಾವು ತಪ್ಪುವುದಿಲ್ಲ. ಲೌಕಿಕವಾದ ಜೀವನದದ ಬಗೆಗೆ ಸದಾ ಚಿಂತಿಸುತ್ತಿರುವ ಜನರನ್ನು ಈ ಜನನ – ಮರಣಗಳು ಬಿಡುವುದಿಲ್ಲ ಅಲ್ಲವೇ  ಎಂದು ಶಿವನಿಗೆ ಹೇಳಿದ್ದಾಳೆ.
ಲೋಕದ ವ್ಯವಹಾರಗಳಿಗೆ ರವಿ (ಸೂರ‍್ಯ) ಬೀಜವಾದಂತೆ ಇಂದ್ರಿಯಗಳ ಚಟುವಟಿಕೆಗೆ ಮನಸ್ಸು ಮೂಲ. ಲೋಕದ ಚಟುವಟಿಕೆಗಳೆಲ್ಲಕ್ಕೂ ಸೂರ್ಯನೇ ಮೂಲ. ಸೂರ್ಯೋದಯದೊಂದಿಗೆ ಜಗತ್ತಿನ ವ್ಯಾಪಾರ ಆರಂಭವಾಗುತ್ತದೆ.  ಅಂತೆಯೇ ಇಂದ್ರಿಯಗಳ ಚಟುವಟಿಕೆಗಳಿಗೆಲ್ಲಾ ಮನಸ್ಸೇ ಮೂಲ. ನನಗಿರುವ ಒಂದು ಮನವು ನಿಮಗೆ ಅರ್ಪಿತವಾದಮೇಲೆ  ನನಗೆ ಮತ್ತೆ ಹುಟ್ಟು-ಸಾವುಗಳೆಂಬುವು ಇರುವುದಿಲ್ಲ ಅಲ್ಲವೇ ಎಂದು ಶಿವನಲ್ಲಿ ಕೇಳುತ್ತಾಳೆ.
ಗುರುಹಿರಿಯರನ್ನು ಕಾಣುವುದೇ ಕಣ್ಣಿಗೆ ಅಲಂಕಾರ (ಭೂಷಣ), ಪುರಾತನರ ಸಂಗೀತಗಳನ್ನು ಕೇಳುವುದೇ ಕಿವಿಗೆ ಅಲಂಕಾರ. ಸತ್ಯವನ್ನು ನುಡಿಯುವುದೇ ನಮ್ಮ ಮಾತಿಗೆ ಅಲಂಕಾರವಾದರೆ.  ಶಿವಭಕ್ತರ ಸಮೂಹವು ಸಂಭಾಷಣೆಗೆ ಅಲಂಕಾರ. ಅರ್ಹರಾದವರಿಗೆ ದಾನ ನೀಡುವುದು ಕೈಗಳಿಗೆ ಶೃಂಗಾರ, ಶಿವಶರಣರ ಸಮೂಹದೊಡನೆ ಜೀವಿಸುವುದು ಜೀವನಕ್ಕೇ ಅಲಂಕಾರವಾಗುವುದು.
ಹಿರಿಯರನ್ನು ಪ್ರೀತಿಯಿಂದ ಕಾಣದ ಕಣ್ಣು ಪುರಾತನರ (ಶಿವಶರಣರ) ಸಂಗೀತಗಳನ್ನು ಕೇಳದ ಕಿವಿ, ಸತ್ಯವನ್ನು ನುಡಿಯದ ನಾಲಿಗೆ,  ಶಿವಶರಣರ ಸಮೂಹದೊಂದಿಗೆ ಮಾಡದ ಸಂಭಾಷಣೆ, ಶಿವಶರಣಸಮೂಹದಲ್ಲಿ ಬಾಳದ ಬಾಳು. ಸತ್ಪಾತ್ರರಿಗೆ ದಾನ ನೀಡದ ಕೈ, ಇವೆಲ್ಲ ವ್ಯರ್ಥ. ಇಂತಹ ಜೀವಿಯ ಜೀವನವು ವ್ಯರ್ಥವಾಗುವುದು ಇಂತಹ ಜೀವನ ಏತಕ್ಕಾಗಿ ಎಂದು ಶಿವನಲ್ಲಿ ಕೇಳುತ್ತಾಳೆ.

ಸಂದರ್ಭದೊಡನೆ ವಿವರಿಸಿ:
೧. ಮುತ್ತಿನ ಬಲೆಯಾದಡೆ ಬಂಧನವಲ್ಲವೇ?
ಈ ಮಾತನ್ನು ಅಕ್ಕಮಹಾದೇವಿಯವರ ವಚನಗಳಿಂದ ಆರಿಸಲಾಗಿದೆ.
ರತ್ನದ ಸಂಕೋಲೆಯೂ ನಮಗೆ ತೊಂದರೆಯನ್ನೇ ಉಂಟುಮಾಡುತ್ತದೆ, ಮುತ್ತಿನ ಬಲೆಯೂ ನಮ್ಮನ್ನು ಬಂಧಿಸುತ್ತದೆ. ಅಂತೆಯೇ ಚಿನ್ನದ ಕತ್ತಿಯಿಂದ ಹೊಡೆದರೆ ಸಾವು ತಪ್ಪುವುದಿಲ್ಲ. ಲೌಕಿಕವಾದ ಜೀವನದದ ಬಗೆಗೆ ಸದಾ ಚಿಂತಿಸುತ್ತಿರುವ ಜನರನ್ನು ಈ ಜನನ – ಮರಣಗಳು ಬಿಡುವುದಿಲ್ಲ ಅಲ್ಲವೇ  ಎಂದು ಶಿವನಿಗೆ ಹೇಳಿದ್ದಾಳೆ.


೨. ಎನಗೆ ಭವವುಂಟೆ?
ಈ ಮಾತನ್ನು ಅಕ್ಕಮಹಾದೇವಿಯವರ ವಚನಗಳಿಂದ ಆರಿಸಲಾಗಿದೆ. ಲೋಕದ ಜನ ಲೌಕಿಕವಿಚಾರಗಳಲ್ಲಿ ಮನವನ್ನಿಟ್ಟು ಜನನ-ಮರಣ ಚಕ್ರದಸುಳಿಯಲ್ಲಿ ಸಿಲುಕಿದ್ದಾರೆ. ಆದರೆ ನನಗಿರುವ ಒಂದು ಮನವು ನಿಮಗೆ ಅರ್ಪಿತವಾದಮೇಲೆ  ನನಗೆ ಮತ್ತೆ ಹುಟ್ಟು-ಸಾವುಗಳೆಂಬುವು ಇರುವುದಿಲ್ಲ ಅಲ್ಲವೇ ಎಂದು ಶಿವನಲ್ಲಿ ಕೇಳುತ್ತಾಳೆ.

೩. ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು.
ಈ ಮಾತನ್ನು ಅಕ್ಕಮಹಾದೇವಿಯವರ ವಚನಗಳಿಂದ ಆರಿಸಲಾಗಿದೆ.
ಗುರುಹಿರಿಯರನ್ನು ಕಾಣುವುದೇ ಕಣ್ಣಿಗೆ ಅಲಂಕಾರ (ಭೂಷಣ), ಪುರಾತನರ ಸಂಗೀತಗಳನ್ನು ಕೇಳುವುದೇ ಕಿವಿಗೆ ಅಲಂಕಾರ. ಸತ್ಯವನ್ನು ನುಡಿಯುವುದೇ ನಮ್ಮ ಮಾತಿಗೆ ಅಲಂಕಾರವಾದರೆ. ಅರ್ಹರಾದವರಿಗೆ ದಾನ ನೀಡುವುದು ಕೈಗಳಿಗೆ ಶೃಂಗಾರ,  ಸತ್ಪಾತ್ರರಿಗೆ ದಾನ ನೀಡುವುದು ಕೈಗೆ ಭೂಷಣ/ಅಲಂಕಾರ ಎಂದು ಅಕ್ಕ ಮಹಾದೇವಿ ಹೇಳುತ್ತಾಳೆ. ಸಂಸ್ಕೃತದ ಸುಭಾಷಿತವಾದ ಹಸ್ತಸ್ಯ ಭೂಷಣಂ ದಾನಂ, ಸತ್ಯಂ ಕಂಠಸ್ಯಭೂಷಣಂ ಎಂಬ ವಿಚಾರಗಳು ಈ ವಚನದಲ್ಲಿ ಕಾಣಬಹುದಾಗಿದೆ.
ಒಂದುವಾಕ್ಯದಲ್ಲಿ ಉತ್ತರಿಸಿ.
೧. ಅಕ್ಕನು ಹೇಳತೊಡಗುವ ತೊಡರು ಯಾವುದು?
ರತ್ನದ ಸಂಕೋಲೆಯನ್ನು ಅಕ್ಕ ತೊಡರು ಎಂದು ಹೇಳುತ್ತಾಳೆ.


೨. ಲೋಕದ ಚೇಷ್ಟೆಗೆ ಬೀಜವಾದುದು ಯಾವುದು?
ಲೋಕದ ಚೇಷ್ಟೆಗೆ ರವಿ ಬೀಜವಾಗುತ್ತಾನೆ.

೩. ಭವ ಯಾವಾಗ ಕೆಡುವುದು?
ಶಿವನಲ್ಲಿ ಮನವಿಟ್ಟಾಗ ಭವ ಕೆಡುವುದು.

೪. ಸತ್ಯವ ನುಡಿವುದು ಯಾವುದರ ಶೃಂಗಾರವಾಗಬೇಕು?
ಸತ್ಯವನ್ನು ನುಡಿಯುವುದು ವಚನಕ್ಕೆ / ಮಾತಿಗೆ ಶೃಂಗಾರವಾಗಬೇಕು

೫. ಅಕ್ಕನ ವಚನಗಳ ಅಂಕಿತ ಯಾವುದು?
ಚನ್ನಮಲ್ಲಿಕಾರ್ಜುನ ಎಂಬುದು ಅಕ್ಕನ ವಚನಗಳ ಅಂಕಿತ.

ಎರಡು- ಮೂರು ವಾಕ್ಯಗಳಲ್ಲಿ ಉತ್ತರಿಸಿ.

೧.ರತ್ನ ಮತ್ತು ಮುತ್ತು ಏನನ್ನು ಸೂಚಿಸುತ್ತವೆ?
ರತ್ನದ ಸಂಕೋಲೆ ಮತ್ತು ಮುತ್ತಿನ ಬಲೆಯು ಲೌಕಿಕ ಜೀವನದ ಬಂಧನವನ್ನು ಸೂಚಿಸುತ್ತವೆ. ಸಂಕೋಲೆಯಾವುದಾದರೇನು , ಬಲೆಯಾವುದಾದರೇನು ಅವು ನಮ್ಮ ನಡೆಗೆ ಅಡ್ಡಿಯಾಗುವುದು ಎಂದು ಅಕ್ಕ ಹೇಳುತ್ತಾಳೆ.

೨. ಲೋಕ ಹಾಗೂ ಕರಣಗಳ ಚೇಷ್ಟೆಗೆ ಬೀಜ ಯಾವುದು?
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ , ಕರಣಗಳ ಚೇಷ್ಟೆಗೆ ಮನವು ಬೀಜವಾಗುವುದು. ಲೋಕದವ್ಯವಹಾರಗಳಿಗೆಲ್ಲ ಮೂಲ ಸೂರ್ಯನಾದರೆ , ಪಂಚೇಂದ್ರಿಯಗಳ ವ್ಯವಹಾರಗಳಿಗೆ ಮೂಲ ಮನಸ್ಸು ಎಂದು ಅಕ್ಕ ಹೇಳುತ್ತಾಳೆ.

೩. ಕಣ್ಣು ಹಾಗೂ ಕರ್ಣಗಳಿಗೆ ಶೃಂಗಾರ ಯಾವುದು?
ಹಿರಿಯರನ್ನು ನೋಡುವುದು ಕಣ್ಣಿಗೆ ಶೃಂಗಾರವಾದರೆ, ಪುರಾತನರ (ಶಿವಶರಣರ) ವಚನಗಳ ಸಂಗೀತವನ್ನು ಕೇಳುವುದು ಕಿವಿಗಳಿಗೆ ಶೃಂಗಾರ ಎಂದು ಹೇಳಿದ್ದಾಳೆ.

ಐದಾರು ವಾಕ್ಯಗಳಲ್ಲಿ ಉತ್ತರಿಸಿ.

೧. ಲೋಕದ ಭಜನೆಯಲ್ಲಿ ಸಿಲುಕಿದವರಿಗೆ ಮುಕ್ತಿಯಿಲ್ಲ ಎಂಬುದನ್ನು ಅಕ್ಕ ಹೇಗೆ ನಿರೂಪಿಸಿದ್ದಾಳೆ?
ರತ್ನದ ಸಂಕೋಲೆಯಾದರೂ ಅದು ಅಡ್ಡಿಯಲ್ಲವೇ? ಮುತ್ತಿನ ಬಲೆಯಾದರೇನು ಅದೂ ಬಂಧನವಲ್ಲವೇ? ಚಿನ್ನದ ಕತ್ತಿಯಲ್ಲಿ ತಲೆಗೆ ಹೊಡೆದರೆ ಸಾಯುವುದಿಲ್ಲವೇ? ಲೌಕಿಕವಾದ ವಿಚಾರಗಳಲ್ಲಿ ತೊಡಗಿದರೆ ಜನನ ಮರಣಗಳು ಬಿಡುವುವೇ? ಕೇವಲ ಬಾಹ್ಯ ಆಚಾರ , ವ್ಯವಹಾರಗಳಲ್ಲಿ ತೊಡಗಿ ಶಿವನನ್ನು ಮರೆತಂತಹ ಜನರನ್ನು ಕುರಿತು ಈ ಮಾತುಗಳನ್ನು ಹೇಳುತ್ತಾಳೆ. ರತ್ನದ ಸಂಕೋಲೆಯೂ ನಮಗೆ ತೊಂದರೆಯನ್ನೇ ಉಂಟುಮಾಡುತ್ತದೆ, ಮುತ್ತಿನ ಬಲೆಯೂ ನಮ್ಮನ್ನು ಬಂಧಿಸುತ್ತದೆ. ಅಂತೆಯೇ ಚಿನ್ನದ ಕತ್ತಿಯಿಂದ ಹೊಡೆಯಲು ಸಾವು ತಪ್ಪುವುದಿಲ್ಲ. ಲೌಕಿಕವಾದ ಜೀವನದದ ಬಗೆಗೆ ಸದಾ ಚಿಂತಿಸುತ್ತಿರುವ ಜನರು ಜನನ ಮರಣ ಎಂಬ ಚಕ್ರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾಳೆ.
೨. ಹುಟ್ಟು ಸಾವನ್ನು ಮೀರುವುದು ಹೇಗೆಂದು ಅಕ್ಕಮಹಾದೇವಿ ತನ್ನ ವಚನದಲ್ಲಿ ಸಾರಿದ್ದಾಳೆ?
ಲೋಕದ ಚಟುವಟಿಕೆಗಳೆಲ್ಲಕ್ಕೂ ಸೂರ್ಯನೇ ಮೂಲ. ಸೂರ್ಯೋದಯದೊಂದಿಗೆ ಜಗತ್ತಿನ ವ್ಯಾಪಾರ ಆರಂಭವಾಗುತ್ತದೆ.  ಅಂತೆಯೇ ಇಂದ್ರಿಯಗಳ ಚಟುವಟಿಕೆಗಳಿಗೆಲ್ಲಾ ಮನಸ್ಸೇ ಮೂಲ. ಹಾಗಾಗಿ ಮನಸ್ಸನ್ನು ಶಿವನಲ್ಲಿ ಇಟ್ಟಮೇಲೆ ಮತ್ತೆ ಹುಟ್ಟು-ಸಾವುಗಳೆಂಬುವು ಇರುವುದಿಲ್ಲ. ಇಂದ್ರಿಯ ಚಟುವಟಿಕೆಗಳತ್ತ ಗಮನಹರಿಸಿದರೆ ಹುಟ್ಟು ಸಾವುಗಳ ಬಂಧನದಿಂದ ಬಿಡುಗಡೆಯೇ ಸಿಗುವುದಿಲ್ಲ. 

೩. ಬದುಕು ಸಾರ್ಥಕವಾಗಬೇಕಾದರೆ ಯಾವ ಅಂಶಗಳು ಇರಬೇಕೆಂದು ಅಕ್ಕಮಹಾದೇವಿ ಹೇಳುತ್ತಾಳೆ?
ಬದುಕು ಸಾರ್ಥಕವಾಗಬೇಕಾದರೆ ಗುರುಹಿರಿಯರನ್ನು ಪ್ರೀತಿಯಿಂದ  ಕಾಣುವ ಕಣ್ಣು,  ಪುರಾತನರ ಸಂಗೀತಗಳನ್ನು ಕೇಳುವ ಕಿವಿ, ಸತ್ಯವನ್ನು ನುಡಿಯುವುದು,  ಶಿವಭಕ್ತರ ಸಮೂಹದಲ್ಲಿ ಸಂಭಾಷಣೆ, ಅರ್ಹರಾದವರಿಗೆ ದಾನ ನೀಡುವ ಕೈ,  ಶಿವಶರಣರ ಸಮೂಹದೊಡನೆ ಜೀವಿಸುವಂತ ಅವಕಾಶಗಳಿದ್ದರೆ ಸಾಕು ಇಲ್ಲದಿರೆ ಇವೆಲ್ಲ ವ್ಯರ್ಥ. ಇಂತಹ ಜೀವಿಯ ಜೀವನವು ವ್ಯರ್ಥವಾಗುವುದು ಇಂತಹ ಜೀವನ ಏತಕ್ಕಾಗಿ ಬೇಕು ಎಂದು ಕೇಳುತ್ತಾಳೆ.

~~~ಓಂ~~~

4 comments: