Sunday, June 29, 2014

ದೇವನೊಲಿದನ ಕುಲವೇ ಸತ್ಕುಲಂ

ಪದ್ಯಭಾಗ 3 - ದೇವನೊಲಿದನ ಕುಲವೆ ಸತ್ಕುಲಂ
ಹರಿಹರ ಕವಿ : ಕ್ರಿಸ್ತಶಕ ೧೩ನೇ ಶತಮಾನದವನು. ಭಕ್ತಿಕವಿ . ರಗಳೆಯ ಕವಿ ಎಂದು ಹೆಸರಾದವನು. ಬಲ್ಲಾಳನ ಆಸ್ಥಾನದಲ್ಲಿ ಕರಣಿಕ ವೃತ್ತಿಯನ್ನು ಮಾಡುತ್ತಿದ್ದು ಹಂಪೆಗೆ ಬಂದು ನೆಲೆನಿಂತವನು. ಅನೇಕ ರಗಳೆಗಳು, ಚಂಪೂಕಾವ್ಯಗಳನ್ನು ರಚಿಸಿದ್ದಾನೆ.
ತನ್ನ ಅಂತರಂಗ ಭಕ್ತನ ನಿಜ ಭಕ್ತಿಯನ್ನು ಲೋಕಕ್ಕೆ ತಿಳಿಸಿಕೊಡಬೇಕೆಂದು ಮನದೊಳು ಚಿಂತಿಸಿ ಲೋಕದೊಡೆಯ ಅವನ ಮನೆಯ ಅಂಬಲಿಯನ್ನು ಕುಡಿದು ಸಂತಸಪಟ್ಟು ಕೈಲಾಸಕ್ಕೆ ಕರೆದೊಯ್ದ ಪ್ರಸಂಗ ಇಲ್ಲಿದೆ.
ಸಾರಾಂಶ : ಚೋಳದೇಶವು ಶೈವ ಪುರವಾಗಿದ್ದು , ಶಿವಭಕ್ತರಿಂದ ತುಂಬಿದ್ದು ಎಲ್ಲೆಡೆ ಉತ್ತಮ ಮಳೆ-ಬೆಳೆ ಆಗುತ್ತಾ, ಶಿವಭಕ್ತರು ಸುಖದಿಂದ ಜೀವಿಸುತ್ತಿದ್ದರು. ಅಂತಹ ನಾಡಿನ ಸಮೃದ್ಧಿಗೆ ಕಾರಣೀಭೂತಳೆಂದರೆ  ಪರಮ ಪಾವನೆಯಾದ ಕಾವೇರಿನದಿ.ಇದು ಹರಭಕ್ತಿರಸವೆಂಬಂತೆ ಹರಿಯುತ್ತಾ ಇವಳ ಸ್ಮರಿಸಿದವರ, ಸೋಂಕಿದವರ ಪಾಪವನ್ನೆಲ್ಲಾ ನಿವಾರಿಸುವಂತ ನದಿಯಾಗಿತ್ತು.
ಇಲ್ಲಿ ಕರಿಕಾಲ ಚೋಳನೆಂಬ ದೊರೆ ಆಳುತ್ತಿದ್ದನು. ಇಂತಹ ನಾಡಿನಲ್ಲಿ ಶಿವನ (ಗುಪ್ತಭಕ್ತ) ಅಂತರಂಗ ಭಕ್ತನೊಬ್ಬ ಇದ್ದ. ಅವನೇ ಮಾದಾರ ಚೆನ್ನ. ಯಾರಿಗೂ ತಿಳಿಯದಂತೆ ಕಾಡಿನ ಪ್ರದೇಶಗಳಲ್ಲಿ ಶಿವಪೂಜೆಯನ್ನು ನಾನಾವಿಧಪರಿಮಳ ಪುಷ್ಪಗಳಿಂದ ಮಾಡಿ ರಾಜನ ಕುದುರೆಗಳಿಗೆ ಹುಲ್ಲು ತರುವ ಕಾಯಕವನ್ನು ಮಾಡುತ್ತಾ ಇದ್ದ. ಇವನ ಭಕ್ತಿಯು ಎಳ್ಳಿನೊಳಗಿನ ಎಣ್ಣೆಯಂತೆ, ಕಟ್ಟಿಗೆಯೊಳಡಗಿದ ಬೆಂಕಿಯಂತೆ , ಭೂಮಿಯೊಳಡಗಿರುವ ನಿಧಿಯಂತೆ ಇತ್ತು ಎಂದು ಕವಿ ಹೇಳುತ್ತಾನೆ.
 ಸಂಪಿಗೆ ಮರುಗ ದವನ ಪಚ್ಚೆ ಕೆಂಜಾಜಿ, ಸುರಹೊನ್ನೆ, ಸುರಗಿ , ಕಣಗಿಲೆ ಮೊದಲಾದ ಹೂಗಳಿಂದ ಶಿವನ ಸಿಂಗರಿಸಿ ಪೂಜಿಸುತ್ತಿದ್ದ. ಈ ರೀತಿ 60ವರ್ಷಗಳು ಕಳೆದಿರಲು ಅವನ ಭಕ್ತಿಯು ಹೆಚ್ಚುತ್ತಿರಲು ಶಿವನಿಗೆ ಮೆಚ್ಚುಗೆಯಾಗಿ ಇವನ ಭಕ್ತಿಯನ್ನು ಜಗತ್ತಿಗೆ ಗೋಚರವಾಗುವಂತೆ ಮಾಡಬೇಕು ಎಂದು ಶಿವನು ನಿರ್ಧರಿಸಿದ ದಿನ ಎಂದಿನಂತೆ ಕಾಯಕ ಮಾಡಿ ಮನೆಗೆ ಬಂದ ಮಾದಾರ ಚನ್ನನಿಗೆ ಅವನ ಹೆಂಡತಿ ರಾಗಿ ಅಂಬಲಿ ನೀಡುತ್ತಾಳೆ. ಆ ಅಂಬಲಿಯನ್ನು ಶಿವನಿಗೆ ನಿವೇದನೆ ಮಾಡಿ ಸೇವಿಸುತ್ತಿರಲು ಶಿವನು ಅಮೃತದ ಸವಿಯಂತಿರುವ ಆ ಅಂಬಲಿಯನ್ನು ಚನ್ನನೊಡಗೂಡಿ ಸ್ವರ್ಗ-ಮರ್ತ್ಯ ಒಂದಾಗುವಂತೆ , ಬೆರಗಾಗುವಂತೆ ಸವಿದನು.
ಇತ್ತ ಚೋಳರಾಜನು ನಿತ್ಯ ನಿಯಮದಂತೆ ನಾನಾವಿಧವಾದ ದಿವ್ಯಾನ್ನಗಳನ್ನು, ನಾನಾವಿಧ ಭಕ್ಷ್ಯಗಳನ್ನು, ಹಪ್ಪಳ ಸಂಡಿಗೆ ಕೆನೆಹಾಲು, ಕೆನೆಮೊಸರು, ತುಪ್ಪ, ಸಕ್ಕರೆ ಮೊದಲಾದವುಗಳನ್ನು ಶಿವನಿಗೆ ಅರ್ಪಿಸಿ ಆರೋಗಿಸುವಂತೆ ಬೇಡಿದರೂ ಶಿವ ಬಾರದಿದ್ದಾಗ ತನ್ನಿಂದ ಅಪರಾಧವಾಗಿರಬಹುದೆಂದು ಕತ್ತಿಯನ್ನು ತೆಗೆದುಕೊಂಡು ತನ್ನ ಕತ್ತನ್ನು ಕತ್ತರಿಸಿಕೊಳ್ಳಲು ಸಿದ್ಧನಾದಾಗ ಶಿವ ಪ್ರತ್ಯಕ್ಷನಾಗಿ ಈರೀತಿ ಮಾಡುವುದು ಸರಿಯಲ್ಲ. ಇಂದು ನನಗೆ ಹಸಿವಿಲ್ಲ. ಚನ್ನನೊಡನೆ ಅಂಬಲಿ ಉಂಡಿದ್ದೇನೆ. ಅದರ ಸವಿ ಬಣ್ಣಿಸಲು ಅಸದಳ ಎಂದು ಹೇಳಿ ಮರೆಯಾಗುತ್ತಾನೆ. ಪರಶಿವನಿಗೆ ಅಂಬಲಿ ನೀಡಿದ ಚನ್ನನಾರು ಎಂದು ಹುಡುಕಲು ದೂತರನ್ನು ಕಳುಹಿಸಿಕೊಟ್ಟನು.
ಅರಸನ ಸೇವಕರು ತನ್ನ ಮನೆಯ ಬಳಿ ಬಂದುದನ್ನು ತಿಳಿದು ಚೆನ್ನನು ಮನದಲ್ಲಿ ನೋಯುತ್ತ ರಾಜನ ದೂತರು ತನ್ನನ್ನು ಹುಡುಕುತ್ತಿರುವುದೇಕೆ ಎಂದು ಚಿಂತಿಸುತ್ತಿರುವಾಗಲೇ ಚೋಳರಾಜನು ಚೆನ್ನನ ಕಂಡು ಆತನ ಪಾದಗಳಿಗೆ ಎರಗುತ್ತಾನೆ. ದೊರೆ ನಿನ್ನಂಥವರು ನನ್ನಗುಡಿಸಲಿಗೆ ಬರುವುದು ನನ್ನ ಕುಲವನ್ನು ಪರಿಗಣಿಸದೆ ನನಗೆ ನಮಿಸುವುದು ಸರಿಯಲ್ಲ. ನೀನು ಚೋಳವಂಶಕ್ಕೇ ಸೂರ್ಯನಂತಿರುವವನು ನೀನು ಹೀಗೆ ಮಾಡಬಹುದೇ ಎಂದಾಗ ದೇವನೊಲಿದಾತನ ಕುಲವೇ ಸತ್ಕುಲಂ ಎಂದು ದೊರೆ ಹೇಳುತ್ತಾ ಚೆನ್ನನ ಪಾದಧೂಳಿಯನ್ನು ತಲೆಯಲ್ಲಿ ಧರಿಸುತ್ತಾನೆ. ಶಿವನೊಡನೆ ಊಟಮಾಡಿದ ನಿಮ್ಮ ಪಾದಕ್ಕೆ ನಾನು ಸಮನಲ್ಲ. ನನ್ನೊಡನೆ ಬನ್ನಿ ಎಂದು ದೇವಾಲಯಕ್ಕೆ ಆನೆಯ ಮೇಲೆ ಕುಳ್ಳರಿಸಿ ಮೆರವಣಿಗೆಯಲ್ಲಿ ಕರೆದೊಯ್ದು ಶಿವನನ್ನು ತೋರಿಸುತ್ತಾನೆ. ಅಲ್ಲಿ ಚೆನ್ನನು ಶಿವನ ಕುರಿತು. ನಾನು ನಿನ್ನಲ್ಲಿ ಗಣಪದವಿ ಬೇಡಿದೆನೇ? ಅರಿಯದೆ ಅಂಬಲಿಯನ್ನು ಅರ್ಪಿಸಿದರೆ ಅದನ್ನು ಜಗತ್ತಿಗೆ ತಿಳಿಯುವಂತೆ ಮಾಡಬಹುದೇ? ಇದು ಸರಿಯೇ ದೇವಾ? ಎಂದು ಹೇಳುತ್ತ ತನ್ನ ಭಕ್ತಿ ಬಯಲಾದುದರಿಂದ ನಾನಿನ್ನು ಇರಲಾರೆ ಎಂದು ಅಲ್ಲಿಯೇ ಇದ್ದ ಕತ್ತಿಯನ್ನು ತೆಗೆದುಕೊಳ್ಳಲು ಶಿವ ಪ್ರತ್ಯಕ್ಷನಾಗಿ ವಿವೇಕಿಯಾದರೂ ವಿಚಾರಹೀನನಹಾಗೆ ಮಾಡುವುದು ಸರಿಯೇ? ನಿನ್ನ ಭಕ್ತಿಯನ್ನು ಹೇಳಿದ್ದರಿಂದ ಕೋಪವೇಕೆ? ಸಮಾಧಾನ ಮಾಡಿಕೊ ಎಂದು ಹೇಳುತ್ತಾ ಎಲ್ಲರಿಗೂ ತನ್ನ ಗುಪ್ತ ಭಕ್ತನ ಪರಿಚಯಿಸುತ್ತಾ ಸ್ವರ್ಗದಿಂದ ಬಂದ ವಿಮಾನದಲ್ಲಿ ಕೈಲಾಸಕ್ಕೆ ಕರೆದೊಯ್ಯುತ್ತಾನೆ.

ಸಂದರ್ಭ ಸೂಚಿಸಿ ವಿವರಿಸಿ :
೧. ಕಾವೇರಿ ಸೋಂಕಿದರ ಪಾಪಮಂ ಸೋವೇರಿ.
ಹರಿಹರಕವಿಯ ದೇವನೊಲಿದನ ಕುಲವೇ ಸತ್ಕುಲಂ ಎಂಬ ರಗಳೆಯಿಂದ ಈ ಮಾತನ್ನು ಆರಿಸಿಕೊಳ್ಳಲಾಗಿದೆ. ಹರಿಹರಕವಿಯು ಚೋಳದೇಶವನ್ನು ಪರಿಚಯಿಸುವಾಗ ಚೋಳದೇಶದ ಸಮೃದ್ಧಿಗೆ ಕಾರಣವಾದ ಕಾವೇರಿ ನದಿಯನ್ನು ಕುರಿತು ಹೇಳುವಾಗ ಈ ಮಾತು ಬಂದಿದೆ. ಕಾವೇರಿ ನದಿಯು ತನ್ನನ್ನು ಸೋಕಿದವರ ಪಾಪಗಳನ್ನು ನಿವಾರಿಸುವ ಭಕ್ತಿರಸದಂತೆ ಹರಿಯುತ್ತಿದ್ದಾಳೆ.

೨. ನೆಲದ ಮಱೆಯೊಳಗೆ ತೊಳಗುವ ನಿಧಾನದ ತೆಱದೆ.
ಹರಿಹರಕವಿಯ ದೇವನೊಲಿದನ ಕುಲವೇ ಸತ್ಕುಲಂ ಎಂಬ ರಗಳೆಯಿಂದ ಈ ಮಾತನ್ನು ಆರಿಸಿಕೊಳ್ಳಲಾಗಿದೆ. ಮಾದಾರ ಚನ್ನನ ಗುಪ್ತಭಕ್ತಿಯನ್ನು ವರ್ಣಿಸುವಾಗ ಈ ಮಾತು ಬಂದಿದೆ. ಮಾದಾರ ಚನ್ನನ ಗುಪ್ತಭಕ್ತಿಯು ಎಳ್ಳಿನಲ್ಲಿ ಅಡಗಿದ ಎಣ್ಣೆಯಂತೆ, ಮರದೊಳಗೆ ಅಡಗಿದ ಬೆಂಕಿಯಂತೆ , ನೆಲದೊಳಗೆ ಅಡಗಿದ ನಿಧಿಯಂತೆ ಇದ್ದು.  ಹೊರಗೆ ಜಾತಿಗೆ ತಕ್ಕ ಕೆಲಸಮಾಡುತ್ತ ಅಂತರಂಗದಲ್ಲಿ ಶಿವಭಕ್ತನಾಗಿದ್ದ ಎಂದು ಕವಿ ಹರಿಹರ ಹೇಳುತ್ತಾನೆ. 



೩. ಸೊಂಪೇಱಿ ಚಿತ್ತಜಾರಿಯ ಚಿತ್ತಮಂ ಸೋಂಕಿ
ಹರಿಹರಕವಿಯ ದೇವನೊಲಿದನ ಕುಲವೇ ಸತ್ಕುಲಂ ಎಂಬ ರಗಳೆಯಿಂದ ಈ ಮಾತನ್ನು ಆರಿಸಿಕೊಳ್ಳಲಾಗಿದೆ. ಮಾದಾರ ಚನ್ನಯ್ಯನ ಗುಪ್ತಭಕ್ತಿ, ಶಿವನ ಔನ್ನತ್ಯವನ್ನು ವರ್ಣಿಸುವಾಗ ಈ ಮಾತು ಬಂದಿದೆ. ಮಾದಾರ ಚನ್ನಯ್ಯ ತನ್ನ ಗುಪ್ತ ಭಕ್ತಿಯಿಂದಾಗಿ ಮುದಗೊಳುತ್ತಿದ್ದ, ರೋಮಾಂಚಿತಗೊಳ್ಳುತ್ತಿದ್ದ. ಶಿವನದ್ದೇ ಧ್ಯಾನ, ಶಿವಪೂಜೆ ಮುಗಿದ ಬಳಿಕವೇ ಆತನ ಕಾಯಕ. ಕುದುರೆಗೆ ಹುಲ್ಲು ಕೊಯ್ಯಲು ವನಕ್ಕೆಹೋಗಿ ನದಿಈತೀರದಲಿ ಪೂಜೆಮಾಡಿ ನಂತರ ಹುಲ್ಲು ಕೊಯ್ಯುತ್ತಿದ್ದವೇಳೆಯಲ್ಲೂ ಶಿವಧ್ಯಾನ ಮಾಡುತ್ತಲೇ ಇರುತ್ತಾ, ಆ ಹುಲ್ಲನ್ನು ಎತ್ತಿನ ಮೇಲೆ ಹೇರಿಕೊಂಡು ಬಂದು ಕುದುರೆ ಲಾಯದ ಮುಂದೆ ಹಾಕುತ್ತಿದ್ದ. ಪ್ರತೀಕ್ಷಣ ಶಿವಸ್ಮರಣೆಯಲ್ಲಿ ತಲ್ಲೀನನಾಗಿ ಪುಳಕಗೊಳ್ಳುತ್ತಿದ್ದ. ಇವನ ಗುಪ್ತಭಕ್ತಿ, ಕಾಯಕನಿಷ್ಠೆ ಶಿವನಮನಸ್ಸನ್ನು ಮುಟ್ಟಿತು ಎಂದು ಹರಿಹರ ಹೇಳುತ್ತಾನೆ.


೪. ಉಂಡನಭವಂ ಸ್ವರ್ಗಮರ್ತ್ಯಕ್ಕೆ ಪೊಸತಾಗಿ.
ಹರಿಹರಕವಿಯ ದೇವನೊಲಿದನ ಕುಲವೇ ಸತ್ಕುಲಂ ಎಂಬ ರಗಳೆಯಿಂದ ಈ ಮಾತನ್ನು ಆರಿಸಿಕೊಳ್ಳಲಾಗಿದೆ. ಅರವತ್ತು ವರ್ಷಗಳಿಂದ ತನ್ನ ಗುಪ್ತಭಕ್ತಿ, ಕಾಯಕನಿಷ್ಠೆಯನ್ನು ಕಾಪಾಡಿಕೊಂಡುಬಂದಿದ್ದ ಮಾದಾರ ಚನ್ನಯ್ಯನು ಶಿವನೊಡನೆ ಮಧುರವಾದ ಮಾವಿನ ಹಣ್ಣಿನಂತೆ ರುಚಿಯಾಗಿದ್ದ  ಅಂಬಲಿಯನ್ನು  ಕುಡಿದ ಸಂದರ್ಭವನ್ನು ಕವಿಯು ಸ್ವರ್ಗಮರ್ತ್ಯಗಳಿಗೆ ಇದು ಹೊಸದಾಗಿ ಕಂಡಿತು ಎಂದಿದ್ದಾನೆ.


೫. ಆಹ ನಿಮ್ಮರಸುತನವೆಮ್ಮಲ್ಲಿ ಮಾಳ್ಪರೇ,
ಹರಿಹರಕವಿಯ ದೇವನೊಲಿದನ ಕುಲವೇ ಸತ್ಕುಲಂ ಎಂಬ ರಗಳೆಯಿಂದ ಈ ಮಾತನ್ನು ಆರಿಸಿಕೊಳ್ಳಲಾಗಿದೆ. ಕರಿಕಾಲ ಚೋಳನು ಶಿವನಿಗಾಗಿ ನಾನಾರೀತಿಯ ರುಚಿಕರವಾದ ಅನ್ನಗಳನ್ನು, ಹಾಲು, ಮೊಸರು, ಹಪ್ಪಳ, ಸಂಡಿಗೆಗಳನ್ನೆಲ್ಲ ಇಟ್ಟು ಕೈಮುಗಿದು ದೇವಾ ಸ್ವೀಕರಿಸಿ ಎಂದು ಬೇಡಿದರೂ ಶಿವ ಬಾರದೆ , ನೈವೇದ್ಯವನ್ನು ಸ್ವೀಕರಿಸದೆ ಇದ್ದುದನ್ನು ಕಂಡು ಚೋಳನು ನನ್ನಿಂದ ತಪ್ಪಾಗಿರುವುದರಿಂದ ಶಿವಬರಲಿಲ್ಲ ಎಂದು ದುಃಖದಿಂದ ತಾನಿನ್ನು ಬದುಕಿರಬಾರದು ಎಂದು ಕತ್ತಿಯನ್ನು ತೆಗೆದು ಕೊರಳಿಗೆ ಒತ್ತಿಕೊಳ್ಳಲು ಶಿವನು ಪ್ರತ್ಯಕ್ಷನಾಗಿ ವಿಚಾರಮಾಡದೆ ಈ ರೀತಿ ಮಾಡುವುದು ಸರಿಯೇ ಎಂದು ಈ ಮೇಲಿನ ಮಾತನ್ನು ಹೇಳುತ್ತಾನೆ.

೬. ನಿಂದು ಚೋಳಂ ಕೌತುಕ ಮಿಕ್ಕು ನೋಡುತಂ
ಪ್ರಸ್ತುತ ವಾಕ್ಯವನ್ನು ಹರಿಹರನ ದೇವನೊಲಿದನ ಕುಲವೆ ಸತ್ಕುಲಂ ಎಂಬ ರಗಳೆಯಿಂದ ಆರಿಸಿಕೊಳ್ಳಲಾಗಿದೆ. ಶಿವನೊಂದಿಗೆ ಅಂಬಲಿಯನ್ನು ಕುಡಿದ ಚನ್ನಯ್ಯನನ್ನು ಚೋಳರಾಜ ಕಂಡ ಪ್ರಸಂಗವನ್ನು ವರ್ಣಿಸುವಾಗ ಈ ಮೇಲಿನ ಮಾತು ಬಂದಿದೆ.  ಮಾದಾರ ಚನ್ನಯ್ಯ ಶಿವನೊಂದಿಗೆ ಅಂಬಲಿಯನ್ನು ಉಂಡ ಪ್ರಸಂಗ ಸ್ವರ್ಗ ಮತ್ಯಗಳಿಗೆ ಹೊಸತಾಗಿ ಕಾಣುತ್ತದೆ. ಸುದ್ದಿಯನ್ನು ತಿಳಿದು ತಾನು ಶಿವನಿಗೆ ಉಣಿಸಲು ಹೋಗಿ ಸೋತ ಚೋಳರಾಜನಿಗೆ ಚನ್ನಯ್ಯನ ಬಗೆಗೆ ಕೌತುಕವಾಗಿ ಕಾಣುತ್ತದೆ. ಶಿವನೊಂದಿಗೆ ಉಂಡ ಶರಣನ ಕಾಣುವ ಹಂಬಲ ಹೆಚ್ಚಾಗಿ ಆತ ಚನ್ನಯ್ಯನ ಗುಡಿಸಲಿಗೆ ಬರುತ್ತಾನೆ. ಶಿವಗಣದೊಂದಿಗೆ ನಿಂತಿದ್ದ ಚನ್ನಯ್ಯನನ್ನು ಕಂಡು ಆತ ಇನ್ನಷ್ಟು ಕೌತುಕ ತಾಳುತ್ತಾನೆ.



೭. ಇಳಿಪಿದಂ ಸರ್ವಾಂಗಮಂ ಚನ್ನನಂಘ್ರಿಯೊಳು
ಪ್ರಸ್ತುತ ವಾಕ್ಯವನ್ನು ಹರಿಹರನ ದೇವನೊಲಿದನ ಕುಲವೆ ಸತ್ಕುಲಂ ಎಂಬ ರಗಳೆಯಿಂದ ಆರಿಸಿಕೊಳ್ಳಲಾಗಿದೆ ಚೋಳರಾಜನು ಶಿವನನ್ನು ಗುಪ್ತಭಕ್ತಿಯಿಂದ ಒಲಿಸಿಕೊಂಡ ಶಿವನ ಅಂತರಂಗಭಕ್ತನಾದ ಚನ್ನಯ್ಯನಿಗೆ ನಮಸ್ಕರಿಸಿದ ಪ್ರಸಂಗ ಇಲ್ಲಿದೆ. ಚನ್ನಯ್ಯನ ಗುಪ್ತಭಕ್ತಿಯ ಪಾರಮ್ಯತೆ ತಿಳಿಯುತ್ತಿದ್ದಂತೆ ಚೋಳರಾಜನಿಗೆ ಚನ್ನನನ್ನು ಕಾಣುವ ಹಂಬಲ ಹೆಚ್ಚಾಗುತ್ತದೆ.ತನ್ನ ಭಟರನ್ನು ಎಲ್ಲೆಡೆ ಕಳುಹಿಸಿ ಹುಡುಕಿಸುತ್ತಾನೆ. ಚನ್ನಯ್ಯನ ಗುಡಿಸಲಿಗೆ ಬರುತ್ತಾನೆ. ಅಲ್ಲಿ ಗಣಪದವಿಗೆ ಅರ್ಹನಾದ ಚನ್ನಯ್ಯನನ್ನು ಕಂಡ ಭಾನುವಂಶಕ್ಕೆ ದರ್ಪಣನೆಂತಿದ್ದ ಕರಿಕಲಚೋಳ ಆತನ ಪಾದಗಳಲ್ಲಿ ತನ್ನಸರ್ವಾಂಗವನ್ನು ಇಟ್ಟು ನಮಸ್ಕರಿಸುತ್ತಾನೆ.


೮. ದೇವನೊಲಿದನ ಕುಲವೆ ಸತ್ಕುಲಂ
ಪ್ರಸ್ತುತ ವಾಕ್ಯವನ್ನು ಹರಿಹರನ ದೇವನೊಲಿದನ ಕುಲವೆ ಸತ್ಕುಲಂ ಎಂಬ ರಗಳೆಯಿಂದ ಆರಿಸಿಕೊಳ್ಳಲಾಗಿದೆ. ತನ್ನ ಕುಲವನ್ನು ವಿಚಾರಿಸದೆ ಹೀಗೆ ತನ್ನ ಮನೆಗೆ ಬರುವುದು ಸರಿಯಲ್ಲವೆಂದು ಚನ್ನಯ್ಯ ಹಳಿದ ಸಂದರ್ಭದಲ್ಲಿ ಈ ಮಾತು ಬಂದಿದೆ. ಚೋಳರಾಜ ಚನ್ನಯ್ಯನನ್ನು ಹುಡುಕಿಕೊಂಡು ಗುಡಿಸಿಲಿಗೆ ಬಂದು ಚನ್ನನ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಅವನ ಪಾದರಜವನ್ನು(ದೂಳು) ತನ್ನ ತಲೆಯಲ್ಲಿ ಧರಿಸಿದುದು ಕಂಡು ಅರಸನಾದವನು ತನ್ನಂತವನ ಪಾದಗಳಿಗೆ ನಮಸ್ಕರಿಸುವುದು ಸರಿಯಲ್ಲ ಎಂದು ನುಡಿದಾಗ, ಚೋಳರಾಜನು ಈ ಮೇಲಿನಂತೆ ಉತ್ತರಿಸುತ್ತಾನೆ.


೯. ಮೇದಿನಿಗೆ ಬೀದಿಗೆಱುವಾದುದೆನ್ನ ಭಕ್ತಿ
ಪ್ರಸ್ತುತ ವಾಕ್ಯವನ್ನು ಹರಿಹರನ ದೇವನೊಲಿದನ ಕುಲವೆ ಸತ್ಕುಲಂ  ಎಂಬ ರಗಳೆಯಿಂದ ಆರಿಸಿಕೊಳ್ಳಲಾಗಿದೆ.ಶಿವನಿಂದ ತನ್ನ ಗುಪ್ತಭಕ್ತಿಯು ಬಯಲಾದುದಕ್ಕೆ ಕೋಪಗೊಂಡ ಸಂದರ್ಭದಲ್ಲಿ ಚನ್ನಯ್ಯ ಈ ಮಾತನ್ನು ಹೇಳುತ್ತಾನೆ.
ಚೋಳರಾಜನು  ಚನ್ನಯ್ಯನನ್ನು ಆನೆಯಮೇಲೆ ಕುಳ್ಳಿರಿಸಿಕೊಂಡು ಶಿವದೇವಾಲಯಕ್ಕೆ ಕರೆದು ತಂದು ಶಿವಲಿಂಗವನ್ನು ತೋರುತ್ತಾನೆ. ಆಗ ಶಿವ ಪ್ರತ್ಯಕ್ಷನಾಗುತ್ತಾನೆ. ಆಗ ಶಿವನನ್ನು ಕುರಿತು ದೇವಾ ಅಂಬಲಿಯನ್ನು ಅರ್ಪಿಸಿಕೊಂಡು ನೆಮ್ಮದಿಯಾಗಿದ್ದೆ. ಚೋಳರಾಜನನನ್ನು ಕಳುಹಿಸಿ ನನ್ನನ್ನು ಏಕೆ ಹಿಡಿದು ತರಿಸಿದೆ? ನಾನು ಮಾಡಿದ ತಪ್ಪಾದರೂ ಏನು? ನಿನ್ನಲ್ಲಿ ಪದವಿ ಬೇಡಿದೆನೇ? ಎಂದೆಲ್ಲಾ ಕೇಳುತ್ತಾ ಜಗತ್ತಿಗೆ ನನ್ನ ಗುಪ್ತಭಕ್ತಿ ತಿಳಿಯುವಂತೆ ಏಕೆ ಮಾಡಿದೆ? ಎಂದು ಕೇಳುತ್ತಾನೆ.

ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಚೋಳದೇಶವು ಯಾರಿಗೆ ನೆಲೆಯಾಗಿತ್ತು?
ಚೋಳದೇಶವು ಶಿವಭಕ್ತರಿಗೆ ನೆಲೆಯಾಗಿತ್ತು

೨. ಚೋಳದೇಶವನ್ನು ಆಳುತ್ತಿದ್ದ ದೊರೆ ಯಾರು?
ಕರಿಕಾಲಚೋಳನೆಂಬ ದೊರೆ ಚೋಳದೇಶವನ್ನು ಆಳುತ್ತಿದ್ದ.

೩. ಚೆನ್ನಯ್ಯನು ಮಾಡುತ್ತಿದ್ದ ಕಾಯಕ ಯಾವುದು?
ಹುಲ್ಲುತರುವ ಕಾಯವನ್ನು ಚೆನ್ನಯ್ಯನು ಮಾಡುತ್ತಿದ್ದನು.
೪.ಚೆನ್ನಯ್ಯನು ಹುಲ್ಲನ್ನು ಯಾವುದರ ಮೇಲೆ  ಹೇರಿಕೊಂಡು ಬರುತ್ತಿದ್ದನು?
ಚೆನ್ನಯ್ಯನು ಹುಲ್ಲನ್ನು ಎತ್ತಿನ ಮೇಲೆ  ಹೇರಿಕೊಂಡು ಬರುತ್ತಿದ್ದನು.

 ೫. ಶಿವನು ಯಾರ ಜೊತೆ ಊಟಮಾಡಿದನು?
ಚನ್ನಯ್ಯನ ಜೊತೆ ಊಟಮಾಡಿದನು.

೬.ಚೆನ್ನಯ್ಯನನ್ನು ಹುಡುಕಲು ಚೋಳರಾಜನು ಯಾರನ್ನು ಕಳುಹಿಸಿದನು?
ಚೆನ್ನಯ್ಯನನ್ನು ಹುಡುಕಲು ಚೋಳರಾಜನು ದೂತರನ್ನು ಕಳುಹಿಸಿದನು

೭.ಚೋಳರಾಜನು ಚೆನ್ನಯ್ಯನನ್ನು ಶಿವಾಲಯಕ್ಕೆ ಹೇಗೆ ಕರೆತಂದನು?
ಚೋಳರಾಜನು ಚೆನ್ನಯ್ಯನನ್ನು ಶಿವಾಲಯಕ್ಕೆ ಆನೆಯಮೇಲೆ ಕುಳ್ಳರಿಸಿ ಕರೆತಂದನು

೮. ಕೈಲಾಸದಲ್ಲಿ ಚೆನ್ನಯ್ಯನಿಗೆ ಯಾವ ಪದವಿ ಲಭಿಸಿತು?
ಕೈಲಾಸದಲ್ಲಿ ಚೆನ್ನಯ್ಯನಿಗೆ ಗಣ ಪದವಿ ಲಭಿಸಿತು




ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಕಾವೇರಿ ನದಿಯ ಮಹಿಮೆ ಎಂತಹುದು?
ಚೋಳದೇಶದ ಸಸ್ಯಸಮೃದ್ಧಿಗೆ ಕಾರಣವಾದ ಕಾವೇರಿಯು ಹರಭಕ್ತಿರಸವೋ ಎಂಬಂತೆ ದೇಶದೊಳು ಹರಿಯುತ್ತಾ , ಭೂಮಂಡಲದ ಅಮೃತದಂತೆ, ಶ್ರೇಷ್ಠಸಾಗರದಂತೆ ಹರಿಯುತ್ತಿದ್ದು,  ತನ್ನನ್ನು  ಸೋಂಕಿದವರ ಪಾಪವೆಲ್ಲ ನಿವಾರಣೆ ಮಾಡುವಂತಹ ಪುಣ್ಯತೀರ್ಥವಾಗಿದೆ.

೨. ಚೆನ್ನಯ್ಯನ ಗುಪ್ತಭಕ್ತಿ ಯಾವ ರೀತಿಯದು?
ಚೆನ್ನಯ್ಯನ ಗುಪ್ತಭಕ್ತಿಯು ಎಳ್ಳಿನೊಳಗಿನ ಎಣ್ಣೆಯಂತೆ, ಮರದೊಳಗಿನ ಬೆಂಕಿಯಂತೆ, ಭೂಮಿಯಲಿ ಅಡಗಿರುವ ನಿಧಿಯಂತೆ ಇತ್ತು.

೩. ಶಿವಲಿಂಗವನ್ನು ಯಾವ ಯಾವ ಹೂಗಳಿಂದ ಚೆನ್ನಯ್ಯ ಸಿಂಗರಿಸುತ್ತಿದ್ದನು?
ಚೆನ್ನಯ್ಯನು ಪರಿಮಳದ ತಿರುಳು ಎನಿಸುವ ಮಲ್ಲಿಗೆ, ಸಂಪಿಗೆ , ಮರುಗ ದವನ ಪಚ್ಚೆ, ಕೆಂಜಾಜಿ, ಸುರಗಿ, ಸುರಹೊನ್ನೆ, ಚೆಂಗಣಗಿಲೆ ಮೊದಲಾದ ಹೂಗಳಿಂದ ಸಿಂಗರಿಸುತ್ತಿದ್ದನು

೪. ಚೋಳರಾಜ ಚೆನ್ನಯ್ಯನ ಪಾದಗಳನ್ನು ಹಿಡಿದಾಗ ಅವನ ಪ್ರತಿಕ್ರಿಯೆ ಏನು?
ಚೋಳರಾಜನು ಚನ್ನಯ್ಯನ ಪಾದಗಳಮೇಲೆ ತನ್ನ ಇಡೀ ದೇಹವನ್ನು ಇಟ್ಟು ನಮಸ್ಕರಿಸುತ್ತಿರುವಾಗ  ಚನ್ನಯ್ಯನು ಎನಯ್ಯ ಚೋಳ ನೀನು ಹೀಗೆ ಮಾಡಬಹುದೇ? ಭಾನು ಕುಲಕ್ಕೆ ಕನ್ನಡಿಯಂತಿರುವ ನೀನು ಹೀಗೆ ನನ್ನ ಕುಲವನ್ನೇ ತಿಳಿಯದೆ  ಈ ರೀತಿ ನಮಸ್ಕರಿಸಬಹುದೇ? ಎಂದು ಪ್ರಶ್ನಿಸಿದನು.

೫. ಶಿವನ ಮೇಲೆ ಚೆನ್ನಯ್ಯ ಮುನಿಸಿಕೊಳ್ಳಲು ಕಾರಣವೇನು?
ಶಿವಾಲಯಕ್ಕೆ ಬಂದ ಚನ್ನನು ಶಿವನೊಡನೆ ಮುನಿಸಿನಿಂದ ದೇವಾ ಈ ರೀತಿಯಲ್ಲಿ ನನ್ನ ಬಗ್ಗೆ ದೂರುವುದು ಸರಿಯೇ? ಚೋಳನು ನನ್ನನ್ನು ಹಿಡಿದು ತರುವಂತೆ ಮಾಡಿದೆಯಲ್ಲಾ ಹೇಳು ನಿನ್ನಲ್ಲಿ ಪದವಿಯನ್ನು ನಾನು ಬೇಡಿದೆನೇ? ಅಂಬಲಿಯನ್ನು ಅರ್ಪಿಸಿದರೆ ಈ ರೀತಿಯಲ್ಲಿ ದೂರುವುದೇ? ಚಂದ್ರಶೇಖರನೇ ನನ್ನಭಕ್ತಿಯ ಬಗ್ಗೆ ಇಡೀ ಪ್ರಪಂಚಕ್ಕೇ ತಿಳಿಯುವಂತಾಯಿತಲ್ಲಾ? ಅದೇಕೇ ಎನ್ನ ಭಕ್ತಿ ವೃಥಾ ಅಪವಾದವನ್ನು ತಂದಿತಲ್ಲ ಇನ್ನು ನಾನು ಇರುವುದಿಲ್ಲ. ಎಂದು ನುಡಿಯುತ್ತಿದ್ದ.

೬. ಶಿವನು ಚೆನ್ನಯ್ಯನನ್ನು ಹೇಗೆ ಸಮಾಧಾನ ಪಡಿಸಿದನು?
ತನ್ನ ಕೊರಳಿಗೆ ಕತ್ತಿಯನ್ನು ಒತ್ತಿ ಹಿಡಿದ ಚನ್ನನನ್ನು ಕುರಿತು ಶಿವನು ಎಲೈ ಚೆನ್ನನ್ನೆ ಅವಿಚಾರದಿಂದ ಇಂತಹ ಕೆಲಸ ಮಾಡುವುದು ಸರಿಯೇ? ನಿನ್ನ ಭಕ್ತಿಯನ್ನು ಚೋಳನಿಗೆ ತಿಳಿಸಿದುದರಿಂದ ಏನಾಯಿತು ಎಂದು ಸಮಾಧಾನ ಮಾಡಿದನು.

ಐದಾರು ವಾಕ್ಯಗಳಲ್ಲಿ ಉತ್ತರಿಸಿ.
೧. ಚನ್ನಯ್ಯ ತನ್ನ ಕಾಯಕವನ್ನು ಹೇಗೆ ಮಾಡುತ್ತಿದ್ದನು?
ಮಾದಾರ ಚನ್ನಯ್ಯ ತನ್ನ ಗುಪ್ತ ಭಕ್ತಿಯಿಂದಾಗಿ ಸಂತಸಗೊಳ್ಳುತ್ತಿದ್ದುದಲ್ಲದೆ ರೋಮಾಂಚಿತಗೊಳ್ಳುತ್ತಿದ್ದ.ಸದಾ ಶಿವಧ್ಯಾನ, ಶಿವಪೂಜೆ ಮುಗಿದ ಬಳಿಕವೇ ಆತನ ಕಾಯಕ. ಕರಿಕಾಲಚೋಳನ ಕುದುರೆಗಳಿಗೆ ಹುಲ್ಲು ಕೊಯ್ಯಲು ಮುಂಜಾನೆಯೇ ಕಾಡಿಗೆ ತೆರಳಿ ನದಿ ತೀರದಲ್ಲಿ ನುಣ್ಮಳಲ ದಿಣ್ಣೆಯ ಮೇಲೆ ಹಸಿರೆಲೆಗಳನ್ನು ಹಾಸಿ ನಾನಾ ವಿಧ ವಿಧವಾದ ಪರಿಮಳ ಹೂಳಾದ ಮಲ್ಲಿಗೆ, ಸಂಪಿಗೆ, ಮರುಗ, ದವನ, ಪಚ್ಚೆ ಪಡ್ಡಳಿ , ಸುರಗಿ ಸುರಹೊನ್ನೆ ಚಂಗಣಗಿಲೆ ಮೊದಲಾದವುಗಳನ್ನು ತಂದು ಶಿವನನ್ನು ಅರ್ಚಿಸಿ, ಪೂಜಿಸಿ ನಂತರ ಹುಲ್ಲು ಕೊಯ್ಯುತ್ತಿದ್ದವೇಳೆಯಲ್ಲೂ ಶಿವಧ್ಯಾನ ಮಾಡುತ್ತಲೇ ಇರುತ್ತಾ, ಆ ಹುಲ್ಲನ್ನು ಎತ್ತಿನ ಮೇಲೆ ಹೇರಿಕೊಂಡು ಬಂದು ಕುದುರೆ ಲಾಯದ ಮುಂದೆ ಹಾಕುತ್ತಿದ್ದ. ಹೊರಗೆ ಕಾಯಕನಿಷ್ಠೆಯ ಜೀವನ; ಒಳಗೆ ಭಕ್ತಿಯ ಜೀವನ ಇವನದಾಗಿತ್ತು.

೨. ಶಿವನು ಚೆನ್ನಯ್ಯನ ಮನೆಯಲ್ಲಿ ಊಟಮಾಡಿದ ಪ್ರಸಂಗವನ್ನು ವಿವರಿಸಿ.
ಅರವತ್ತುವರ್ಷಗಳಿಂದ ನಿರಂತರವಾಗಿ ಕಾಯಕನಿಷ್ಠೆಯಲ್ಲಿ ತೊಡಗಿದ ಚೆನ್ನನ ಗುಪ್ತಭಕ್ತಿಯು ಎಳ್ಳಿನಲ್ಲಿ ಅಡಗಿದ ಎಣ್ಣೆಯಂತೆ, ಮರದೊಳಗೆ ಅಡಗಿದ ಬೆಂಕಿಯಂತೆ,  ನೆಲದೊಳಗೆ ಅಡಗಿದ ನಿಧಿಯಂತೆ ಇದ್ದು.  ಹೊರಗೆ ಜಾತಿಗೆ ತಕ್ಕ ಕೆಲಸಮಾಡುತ್ತ ಅಂತರಂಗದಲ್ಲಿ ಶಿವಭಕ್ತನಾಗಿದ್ದನು.  ಮಾದಾರಚನ್ನನ ಗುಪ್ತಭಕ್ತಿಯನ್ನು ಲೋಕಕ್ಕೆ ತಿಳಿಯಪಡಿಸಬೇಕು ಎಂಬ ಇಚ್ಛೆಯಾಯಿತು. ಆದಿನವೇ ಕಾಯಕ ಮುಗಿಸಿ ಬಂದ ಚನ್ನಯ್ಯನೊಡನೆ ಮಧುರವಾದ ಮಾವಿನ ಹಣ್ಣಿನಂತೆ ರುಚಿಯಾದ ಅಂಬಲಿಯನ್ನು ಮನಸ್ಸುತಣಿಯುವಂತೆ ಊಟ ಮಾಡಿದನು. ಇದು ಸ್ವರ್ಗ ಮತ್ತು ಭೂಮಿಯಲ್ಲಿ ವಿಶೇಷವೆನಿಸಿತ್ತು.

೩. ಕರಿಕಾಲ ಚೋಳ ಶಿವನನ್ನು ಅರ್ಚಿಸುತ್ತಿದ್ದ ರೀತಿಯನ್ನು ವರ್ಣಿಸಿರಿ.
ಮಹಾಶಿವಭಕ್ತನಾದ ಕರಿಕಾಲಚೋಳನು ಬಹಳ ಆಡಂಬರದಿಂದಲೇ ಶಿವಪೂಜೆ ಮಾಡುತ್ತಿದ್ದ. ಪ್ರತಿನಿತ್ಯ ನಿಯಮದಂತೆ ಶಿವಾಲಯಕ್ಕೆ ಬಂದು ಕೈಮುಗಿದು ನಿಂದು ನಾನಾರೀತಿಯಲ್ಲಿ ಉಪಚಾರಮಾಡುತ್ತಾ, ನಾನಾ ವಿಧವಾದ, ರುಚಿಕರವಾದ ದಿವ್ಯಾನ್ನ, ದೇವಾನ್ನ, ಅಮೃತಾನ್ನಗಳನ್ನು, ತುಪ್ಪ, ಹಾಲು, ಸಕ್ಕರೆ, ಕೆನೆಮೊಸರುಗಳ ಕುಡಿಕೆಗಳನ್ನು, ಹಪ್ಪಳ, ಸಂಡಿಗೆಗಳನ್ನೆಲ್ಲ ಇಟ್ಟು ಪರದೆಯನ್ನು ಸರಿಸಿ , ಕೈಮುಗಿದು ದೇವಾ ಸ್ವೀಕರಿಸಿ ಎಂದುಬೇಡಿಕೊಳ್ಳುತ್ತಿದ್ದ. ಭಕ್ತಿಭಾವದಿಂದ ಪ್ರಾರ್ಥಿಸುತ್ತಿದ್ದ.
೪. ಚೋಳರಾಜ ಚನ್ನಯ್ಯನನ್ನು ಹುಡುಕಿದ ಬಗೆ ಹೇಗೆ?
ಚೋಳರಾಜನು ಅರ್ಪಿಸಿದ ರುಚಿಕರ ಆಹಾರವನ್ನು ಶಿವನು ಸ್ವೀಕರಿಸದಿದ್ದಾಗ ತನ್ನನ್ನು ಕೊಂದುಕೊಳ್ಳಲು ಕತ್ತಿಯನ್ನು ತೆಗೆದುಕೊಂಡು ಕೊರಳಿಗೆ ಇಟ್ಟಾಗ ಶಿವನು ಪ್ರತ್ಯಕ್ಷನಾಗಿ ನಾನು ಚೆನ್ನನೊಡನೆ ರುಚಿಕರವಾದ ಅಂಬಲಿಯನ್ನು ಊಟಮಾಡಿದ್ದೇನೆ ನನಗೆ ಇಂದು ಹಸಿವಿಲ್ಲ ಎಂದು ಹೇಳಿದನು. ಶಿವನೊಡನೆ ಆಹಾರ ಸ್ವೀಕರಿಸಿದ ಮಹಾನುಭಾವನನ್ನು ನೋಡಲೇಬೇಕೆಂಬ ಕಾತುರತೆಯಿಂದ ಬರಿಗಾಲಿನಲ್ಲಿ ನಡೆಯಲು ತಿಳಿಯದ ಪರಮಸುಖಿಯಾದ ಚೋಳನು ಬರಿಗಾಲಲ್ಲಿ ನಡೆಯುತ್ತಾ ಶಿವನೊಡನೆ ಊಟಮಾಡಿದ ಚನ್ನನ್ನು ನೀವು ಬಲ್ಲಿರಾ? ಎಂದು ಕೇಳುತ್ತಾ. ಚೆನ್ನನನ್ನು ಹುಡುಕಲು ದಿಕ್ಕುದಿಕ್ಕಿಗೂ ತನ್ನ ದೂತರನ್ನು ಕಳುಹಿಸಿದನು. ಚೆನ್ನನ ನೆರೆಮನೆಯವರು ಚೆನ್ನನ ಗುಡಿಸಲನ್ನು ತೋರಿಸಿದರು.
೫. ಚೆನ್ನಯ್ಯನಿಗೆ ಶಿವನು ಗಣಪದವಿಯನ್ನು ನೀಡಿದ ಪ್ರಸಂಗವನ್ನು ನಿರೂಪಿಸಿ.
ಕರಿಕಾಲಚೋಳನು ಆತುರಾತುರನಾಗಿ ಚೆನ್ನನನ್ನು ಹುಡುಕುತ್ತ ಬಂದು. ಚೆನ್ನನನ್ನು ಕಂಡು ಅವನ ಪಾದಗಳಿಗೆ ನಮಸ್ಕರಿಸಿ ಅವನ ಪಾದ ದೂಳಿಯನ್ನು ತನ್ನ ಶಿರದಲ್ಲಿ ಧರಿಸಿದಾಗ ಚೆನ್ನನು ಎಲೆ ಚೋಳ ಭಾನುವಂಶದ ದರ್ಪಣನಂತಿರುವ ನೀನು ಮಾಡಿದುದು ಸರಿಯೇ? ನನ್ನಂತವನ ಪಾದಗಳಿಗೆ ನೀನು ನಮಿಸುವುದು ಸರಿಯಲ್ಲ ಎಂದನು. ಚೋಳನು ನಿಮ್ಮಂತಹ ಭಕ್ತರ ಪಾದದೂಳಿಗೂ ನಾನು ಸರಿಸಮನಲ್ಲ ಎಂದು ಚೆನ್ನನನ್ನು ಆನೆಯಮೇಲೆ ಕುಳ್ಳಿರಿಸಿ ಶಿವಾಲಯಕ್ಕೆ ಕರೆದೊಯ್ದು ಶಿವನದರ್ಶನಮಾಡಿಸಿದಾಗ ಚೆನ್ನನು ಶಿವನೊಡನೆ ದೇವಾ ನನ್ನ ಪಾಡಿಗೆ ನಾನು ಅಂಬಲಿಯನ್ನು ಅರ್ಪಿಸುತ್ತಾ ಇದ್ದೆ ಚೋಳನನ್ನು ಕಳುಹಿಸಿ ನನ್ನನ್ನು ಹಿಡಿದು ತರಿಸಿದುದು ಏಕೆ? ನಾನು ಮಾಡಿದ ಅಪರಾಧವಾದರೂ ಏನು? ನಿನ್ನೊಳು ಪದವಿ ಅಧಿಕಾರಗಳನ್ನು ಬೇಡಿದ್ದೇನೆಯೇ ಎಂದೆಲ್ಲ ಕೇಳುತ್ತಾನೆ. ಶಿವನು ಅವನನ್ನು ಸಮಾಧಾನ ಪಡಿಸಿ ಪುಷ್ಪಕವಿಮಾನದಲ್ಲಿ ಕೈಲಾಸಕ್ಕೆ ಒಯ್ದು ಗಣಪದವಿಯನ್ನು ನೀಡುತ್ತಾನೆ.

~~~ಓಂ~~~

11 comments: