Sunday, June 29, 2014

ಜೀವಕೆ ಇಂದನ

ಪದ್ಯಭಾಗ - 15
ಜೀವಕೆ ಇಂದನ
ಬಸವರಾಜ ವಕ್ಕುಂದ : ಧಾರವಾಡ ಜಿಲ್ಲೆ ಯ ಅಮ್ಮಿನಭಾವಿಯಲ್ಲಿ ಜನಿಸಿದರು. ಧಾರವಾಡದ ಶ್ರೀಮಂಜುನಾಥೇಶ್ವರ ಪದವಿಪೂರ್ವಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ.
ಸಾರಾಂಶ :
ಇಂಧನಮೂಲಗಳು ಬರಿದಾದರೆ ನಾಗರಿಕ ಸಮಾಜದ ಎಲ್ಲಾ ಚಟುವಟಿಕೆಗಳು ನಿಂತುಹೋಗುತ್ತವೆ. ದಿನೇದಿನೆ ಮನುಷ್ಯ ಇಂದನವನ್ನು ಅವಲಂಬಿಸುವ ಪರಿಸ್ಥಿತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಮುಂದಿನ ತಲೆಮಾರಿಗೆ ಇಂದನ ಮತ್ತಿತರ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಡುವ ಜಬಾಬ್ದಾರಿ ನಮ್ಮ ಮೇಲಿರುವುದು. ಇಂಧನ ಮೂಲಗಳು ಬರಿದಾಗುತ್ತಿರುವುದರಿಂದ ಪರ್ಯಾಯ ಮಾರ್ಗವಾದ ಜೈವಿಕ ಇಂಧನ ಉಪಯುಕ್ತವಾಗಿದ್ದು. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಸಕಲಜೀವಜಾಲಕ್ಕೆ ಆಸರೆಯಾಗಿರುವ ಈ ಭೂಮಿಯಲ್ಲಿ ಜೀವಿಗಳ ಜೀವಿತಕ್ಕೆ ಅತಿ ಅವಶ್ಯಕತೆ ಇರುವ ಇಂಧನ ಎಂದರೆ ಗಾಳಿ,ನೀರು, ಬೆಳಕು ಮಾನವನ ದಾಹ ಜೀವಸೆಲೆಗಳನ್ನು ನಾಶಮಾಡುತ್ತಾ ಎಲ್ಲವನ್ನೂ ಹೀರಿ ಖಾಲಿಮಾಡುತ್ತಿದೆ. ಹಣಕ್ಕಾಗಿ ಜನ ಕೃಷೀಭೂಮಿಯನ್ನು , ದನಕರುಗಳನ್ನು ಜಾನುವಾರುಗಳನ್ನು ಮಾರಿಕೊಳ್ಳುತ್ತಾ ಶ್ರೀಮಂತರಾಗುತ್ತಿದ್ದಾರೆ. ಆದರೆ ಶ್ರೀಮಂತಿಕೆಯ ಭವನದ ಕೆಳಗೆ ಉಂಟಾಗುತ್ತಿರುವ ಬಿರುಕುಗಳನ್ನು ನೋಡುವ ಕಣ್ಣಿಲ್ಲ.ಅಪಾಯದ ಘಂಟಾನಾದ ಇವರ ಕಿವಿಗೆ ಬೀಳುತ್ತಿಲ್ಲ. ಎಷ್ಟೇ ಹಣವಿದ್ದರೂ ತಿನ್ನಲು ಅನ್ನಬೇಕಲ್ಲವೇ? ಚಿನ್ನದ ಸೂಜಿ ಎಂದು ಯಾರೂ ಕಣ್ಣನ್ನು ಚುಚ್ಚಿಕೊಳ್ಳುವುದಿಲ್ಲಎಲ್ಲಜೀವಿಗಳಿಗೆ ಆಹಾರ ಒದಗಿಸಬೇಕಾದರೆ ಕೃಷಿಅಗತ್ಯ.ಭೂಮಿಗೆ ಹಸಿರಹೊದಿಕೆ ಹೊದಿಸಬೇಕು , ಸಮತೋಲನ ಕಾಪಾಡಿಕೊಂಡುಬರಬೇಕು. ಜೈವಿಕ ಇಂಧನವೇ ಮೂಲಧನ . ಇದರ ಮೂಲಕ ಭೂಮಿ ಹಸಿರಾಗಿ ಮತ್ತೆ ಸಸ್ಯಶಾಮಲೆ ಬೆಳಗುತ್ತಾಳೆ.
ಸಂದರ್ಭ ಸೂಚಿಸಿ ವಿವರಿಸಿ :
೧. ಸುಡುತಿವೆ ಜೀವದ ಸೆಲೆಗಳನು
ಬಸವರಾಜ ವಕ್ಕುಂದರವರ ಜೀವಕೆ-ಇಂಧನ ಎಂಬ ಕವಿತೆಯಿಂದ ಈ ವಾಕ್ಯವನ್ನು ಆರಿಸಲಾಗಿದೆ. ಸಿರಿವಂತ ಜನ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿಮಾಡುತ್ತಿದ್ದಾರೆ. ಅವರ ಬಳಿ ಹಣವಿದೆ, ವಾಹನಗಳಿವೆ, ಬೇಕಾಬಿಟ್ಟಿ ಬಳಸುತ್ತಾರೆ. ನಿಸರ್ಗವು ನಮಗಾಗಿ ನೀಡಿದಸಂಪನ್ಮೂಲಗಳೆಲ್ಲ ಬತ್ತಿ ಹೋಗುತ್ತಿವೆ. ಎಂದು ಹೇಳುತ್ತಾರೆ.

೨. ಕೇಳರು ಮಾರಿಯ ಸದ್ದನು.
ಬಸವರಾಜ ವಕ್ಕುಂದರವರ ಜೀವಕೆ-ಇಂಧನ ಎಂಬ ಕವಿತೆಯಿಂದ ಈ ವಾಕ್ಯವನ್ನು ಆರಿಸಲಾಗಿದೆ. ಹೀಗೆ ಧನದಾಹದಿಂದಾಗಿ ಭೂಮಿಯನ್ನು ಮಾರುತ್ತಿರುವುದು, ಎಲ್ಲಿನೋಡಿದರಲ್ಲಿ ದೊಡ್ಡ ದೊಡ್ಡಮಹಲುಗಳು ತಲೆ ಎತ್ತಿ ನಿಂತಿರುವುದು. ಭೂಮಿಯ ಒಡಲೆಲ್ಲಾ ಬರಿದಾಗುತ್ತಿರುವುದರಿಂದ ಆಗಾಗ ಪ್ರಾಕೃತಿಕ ವಿಕೋಪಗಳು ಎದುರಾಗುತ್ತಿದ್ದರೂ ಎಚ್ಚರಗೊಳ್ಳುತ್ತಿಲ್ಲ ಎಂದು ವಿಷಾದದಿಂದ ನುಡಿದಿದ್ದಾರೆ.

೩. ಧನವಿದ್ದರು ಇಂಧನ ಬೇಕಲ್ಲವೆ
ಬಸವರಾಜ ವಕ್ಕುಂದರವರ ಜೀವಕೆ-ಇಂಧನ ಎಂಬ ಕವಿತೆಯಿಂದ ಈ ವಾಕ್ಯವನ್ನು ಆರಿಸಲಾಗಿದೆ. ಹಣವೊಂದಿದ್ದರೆ ಏನೆಲ್ಲ ಕೊಳ್ಳಬಹುದು ಎಂಬ ಮನೋಭಾವವನ್ನು ತಿರಸ್ಕರಿಸುತ್ತಾ ಇಂಧನ ಮೂಲಗಳೆಲ್ಲ ಬತ್ತಿ ಹೋದಮೇಲೆ ಎಲ್ಲಿಂದ ಇಂಧನವನ್ನು ಕೊಳ್ಳುತ್ತಾರೆ? ಜೀವಿಗಳು ಉಳಿಯಬೇಕಾದರೆ ಗಾಳಿ ನೀರು ಇಂಧನ ಬೇಕೇ ಬೇಕು. ಕಾಪಾಡಿಕೊಳ್ಳಿ ಎಂದು ಹೇಳುತ್ತಾರೆ.

೪. ಜೈವಿಕ ಇಂಧನ ಜೀವಕೆ ಇಂಧನ
ಬಸವರಾಜ ವಕ್ಕುಂದರವರ ಜೀವಕೆ-ಇಂಧನ ಎಂಬ ಕವಿತೆಯಿಂದ ಈ ವಾಕ್ಯವನ್ನು ಆರಿಸಲಾಗಿದೆ. ಇರುವ ಇಂಧನ ಮೂಲಗಳೆಲ್ಲಾ ಬತ್ತಿಹೋಗುವಮುನ್ನ ಜೈವಿಕ ಇಂಧನದ ತಯಾರಿಕೆಯಲ್ಲಿ ಮುಂದುವರೆಯಬೇಕು. ಆಗುತ್ತಿರುವ ಅಸಮತೋಲನವನ್ನು ಸರಿಪಡಿಸದಿದ್ದರೆ ಅಪಾಯ ತಪ್ಪಿದ್ದಲ್ಲ. ಎಂಬ ಎಚ್ಚರಿಕೆ ನೀಡಿದ್ದಾರೆ.

ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಜೀವ ಎಲ್ಲಿ ಅರಳಿದೆ?
ಚರಾಚರಗಳಲ್ಲಿ ಜೀವ ಅರಳಿದೆ.

೨. ಜೀವದ ಸೆಲೆಗಳು ಸುಡುತ್ತಿರುವುದು ಯಾವುದು?
ಉಳ್ಳವರ ಆಸೆಯ ಬೆಂಕಿ, ಗಾಳಿಗಳು ಜೀವದ ಸೆಲೆಯನ್ನು ಸುಡುತ್ತಿವೆ.

೩. ಈ ಭೂಮಿಯನ್ನು ಯಾರು ಮಾರಿಕೊಂಡರು?
ಧನದಮೇಲಿನ ಆಸೆಯಿಂದ ಧನದಾಹಿಗಳು ಭೂಮಿಯನ್ನು ಮಾರಿಕೊಂಡರು.

೪. ಈ ಭೂಮಿಯನ್ನು ಹೇಗೆ ಕಾಯಬೇಕು?
ಜೈವಿಕ ಬೆಳೆಗಳ ಹಸಿರನ್ನು ಹೊದಿಸಿ ಭೂಮಿಯನ್ನು ಕಾಯಬೇಕಾಗಿದೆ.

೫ ಜೀವ ಉಳಿಯುವ ದಾರಿ ಯಾವುದು?
ಸಮತೋಲನದಲ್ಲಿ ಬದುಕು ಸಾಗಿಸುವುದಾದರೆ ಜೀವ ಉಳಿಯುವ ದಾರಿ ಸಿಗಬಹುದು.


೬. ಎಂದೂ ಕರಗದ ಮೂಲಧನ ಯಾವುದು?
ಜೈವಿಕ ಇಂಧನವು ಎಂದೂ ಕರಗದ ಮೂಲಧನವಾಗಲಿದೆ.


ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.

೧.  ಒಡಲೊಳಗೆ ಏನೇನು ಸೇರಿಕೊಂಡಿದೆ.
ಉಸಿರಾಡುವ ಈ ಒಡಲೊಳಗೆ ಗಾಳಿ, ನೀರು , ಬೆಂಕಿಗಳು ಸೇರಿವೆ.

೨. ಉಳ್ಳವರ ಆಶೆಯ ಪರಿಣಾಮಗಳೇನು?
ಉಳ್ಳವರ ಆಸೆಯ ಪರಿಣಾಮ ಜೀವದ ಸೆಲೆಗಳೆಲ್ಲ ನಾಶವಾಗುತ್ತಿವೆ. ಆಸೆ ಎಂಬ ಬೆಂಕಿ ಜೀವದ ಸೆಲೆಗಳನ್ನು ಬತ್ತಿಹೋಗುವಂತೆ ಬರಡಾಗುವಂತೆ ಮಾಡಿವೆ.

೩. ಧನದಾಹದಿಂದ ಉಂಟಾದ ಪರಿಣಾಮಗಳೇನು?
ಧನ ದಾಹದಿಂದ ಭೂಮಿಯನ್ನು ಮಾರಿಕೊಳ್ಳುತ್ತಿದ್ದಾರೆ. ದೊಡ್ಡದೊಡ್ಡ ಮಹಲುಗಳು ಮೇಲೇಳುತ್ತಿವೆ. ಅಲ್ಲದೆ ಭೂಮಿಯ ಒಡಲು ಬತ್ತಿ ಬರಿದಾಗುತ್ತಿದೆ. ಮಹಲುಗಳ ಅಡಿಯಲ್ಲಿ ಬಿರುಕುಗಳು ಎದ್ದಿದ್ದರೂ ಕಾಣದಂತೆ ಇದ್ದಾರೆ.

೪. ಭೂಮಿ ಮತ್ತು ಜೀವವನ್ನು ಉಳಿಸುವ ದಾರಿ ಯಾವುದು?
ಜೈವಿಕ ಇಂಧನವನ್ನು ಬಳಸುವುದೊಂದೇ ಭೂಮಿಯನ್ನು ಉಳಿಸುವ ಮಾರ್ಗವಾಗಿದೆ. ಸಮತೋಲನದಲ್ಲಿ ಬದುಕುತ್ತ ಜೀವ ಉಳಿಸಬೇಕಾಗಿದೆ.







ಐದಾರು ವಾಕ್ಯಗಳಲ್ಲಿ ಉತ್ತರಿಸಿ.
೧. ಉಳ್ಳವರ ಸ್ವಾರ್ಥ ಭೂಮಿ ಮತ್ತು ಇಂಧನವನ್ನು ಹೇಗೆ ನಾಶಗೈದಿದೆ?
ಉಳ್ಳವರ ಆಸೆ ಎಂಬ ಬೆಂಕಿ ಮತ್ತು ಗಾಳಿಗಳು ಜೀವದ ಸೆಲೆಗಳನ್ನು ಸುಡುತ್ತಿವೆ. ಪರಿಣಾಮವಾಗಿ ನೈಸರ್ಗಿಕ ಮೂಲಗಳೆಲ್ಲವೂ ಬತ್ತಿಹೋಗಿ ಬರಡಾಗುತ್ತಿವೆ. ನಿಸರ್ಗದತ್ತವಾದ ಇಂಧನವನ್ನು ಅಪವ್ಯಯಮಾಡುತ್ತಾ ದುರ್ಬಳಕೆ ಮಾಡುತ್ತಲಿದ್ದಾರೆ. ಹೀಗೆ ಉಳ್ಳವರ ದುಂದುವೆಚ್ಚಕ್ಕೆ ಬಲಿಯಾಗಿ ಇಂಧನದ ಮೂಲಗಳೆಲ್ಲ ನಾಶಗೊಳ್ಳುತ್ತಿದೆ. ಇದರಿಂದಾಗಿ ಮುಂದೊಂದು ದಿನ ಎಷ್ಟೇ ಹಣವಿದ್ದರೂ ಇಂಧನವನ್ನು ಕೊಳ್ಳಲಾಗದೆ ಇರುವಂಥ ಸ್ಥಿತಿ ಬಂದೇ ಬರುತ್ತದೆ ಎಂದು ಕವಿ ಹೇಳುತ್ತಾರೆ.

೨. ಭೂಮಿಯ ಹಸಿರನ್ನು ಉಳಿಸಿ ಜೈವಿಕ ಇಂಧನ ಬಳಸುವ ಕವಿಯ ಆಶಯಗಳನ್ನು ವಿವರಿಸಿ.
ಭೂಮಿಯ ಮೇಲೆ ಹಸಿರನ್ನು ಉಳಿಸಿಕೊಳ್ಳಲು ಜೈವಿಕ ಇಂಧನವೊಂದೇ ಪರ್ಯಾಯಮಾರ್ಗವಾಗಿದೆ. ಇಂಧನ ಮೂಲಗಳು ಖಾಲಿಯಾದಮೇಲೆ ಹಣವಿದ್ದರೂ ಇಂಧನ ದೊರಕುವುದಿಲ್ಲ. ಮನುಷ್ಯನ ಬಹುಪಾಲು ಚಟುವಟಿಕೆಗಳು ಇಂಧನ ಆಧಾರಿತವಾಗಿರುವುದರಿಂದ ಜೈವಿಕ ಇಂಧನವನ್ನು ಸೃಷ್ಟಿಸಿ ಭೂಮಿಯನ್ನು ಉಳಿಸಿಕೊಳ್ಳಬೇಕಾಗಿದೆ. ಇದರಿಂದಾಗಿ ಸಮತೋಲನ ಕಾಪಾಡಿದಂತಾಗುತ್ತದೆ. ಜೈವಿಕ ಇಂಧನವು ಮೂಲಧನವಿದ್ದಂತೆ ಇದು ಎಂದೂ ಕರಗುವುದಿಲ್ಲ. ಬಂಡವಾಳವನ್ನು ಉಳಿಸಿಕೊಂಡು ಬಡ್ಡಿಯಿಂದ ಬದುಕಿದಂತೆ ಆಗುವುದು. ಎಂದಿದ್ದಾರೆ.

**********ಓಂ********

No comments:

Post a Comment