Sunday, June 29, 2014

ಅಖಂಡ ಕರ್ನಾಟಕ

ಅಖಂಡ ಕರ್ನಾಟಕ : ಕವಿ ಕುವೆಂಪು
ಸಾರಾಂಶ : ನಮ್ಮದು ಅಖಂಡವಾದ ರಾಜ್ಯ. ಇದು ಕೇವಲ ರಾಜಕೀಯ ನಾಟಕವಲ್ಲ. ಪ್ರತಿಯೊಬ್ಬಕನ್ನಡಿಗನ ಮಾತಿದು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನ ಆಶೀರ್ವಾದ ನಮ್ಮ ಮೇಲಿದೆ. ಋಷಿಮುನಿಗಳ ಪರಂಪರೆ ನಮ್ಮ ನಾಡಿಗಿದೆ. ಕನ್ನಡತನ ಏಕತೆಯಿಂದ ಮೂಡಿಬಂದ ಸ್ವರೂಪವಾಗಿದೆ. ಕನ್ನಡಾಂಭೆ ಬಂಜೆಯಲ್ಲ. ಭೂಮಂಡಲವೇ ಅವಳನ್ನು ಪೂಜಿಸುತ್ತದೆ. ನೂರುಕೋಟಿ ಕನ್ನಡ ಮನಸುಗಳ ದೊಡ್ಡ ಕನಸು ಆಸೆ ಆಕಾಂಕ್ಷೆಯೇ ಇದಾಗಿದೆ. ಯಾರ ವೈಯಕ್ತಿಕ ವಿಚಾರಗಳೂ ಇದರಲ್ಲಿಲ್ಲ.
ಕನ್ನಡ ನಾಡು ಎಂಬುದು ಬೂಟಾಟಿಕೆಯ ನಾಟಕವಷ್ಟೇ ಅಲ್ಲ ಇಂದು ನಿರ್ಮಿಸಿ ನಾಳೆ ಕಿತ್ತು ಬಿಸಾಡುವಂತಹ ಸರ್ಕಾರಗಳಲ್ಲ ಇದಕ್ಕೆ ಪರಂಪರೆ ಇದೆ. ಕನ್ನಡ ಸಾಂಸ್ಕೃತಿಕ ಪರಂಪರೆಗೆ  ಒಂದು ಇತಿಹಾಸವೇ ಇದೆ. ಇಲ್ಲಿ ನೃಪತುಂಗನೇ ಚಕ್ರವರ್ತಿ, ಪಂಪನೇ ಮುಖ್ಯಮಂತ್ರಿ, ರನ್ನ ಜನ್ನ ನಾಗವರ್ಮ, ರಾಘವಾಂಕ, ಹರಿಹರ, ಬಸವೇಶ್ವರ, ನಾರಣಪ್ಪ, ಸರ್ವಜ್ಞ, ಷಡಕ್ಷರಿ ಮೊದಲಾದವರೆಲ್ಲ ಮಂತ್ರಿಮಂಡಲದ ಸದ್ಯಸ್ಯರಾಗಿದ್ದಾರೆ. ಇದು ಸರಸ್ವತಿಯೇ ರಚಿಸಿದ ಸಚಿವ ಮಂಡಲ ಇದನ್ನು ಕವಿಯು ಸರಸ್ವತಿಯ ವಜ್ರ ಕರ್ಣಕುಂಡಲ ಎಂದು ಹೇಳುತ್ತಾನೆ.
ಅಖಂಡ ಕರ್ನಾಟಕ ರಚಿತವಾದುದು ಕೇವಲ ಹೊಟ್ಟೆ ಬಟ್ಟೆಗಾಗಿ ಜಾತಿ ಪಕ್ಷಗಳ ಕಲಹಕ್ಕಾಗಿ ಅಲ್ಲ. ಹಮ್ಮು ಬಿಮ್ಮು ಅಹಂಕಾರಕ್ಕಲ್ಲ, ಬಣ್ಣದ ಚಿಟ್ಟೆಯಂತೆ ಬೆಡಗು ತೋರಲಿಕ್ಕಲ್ಲ ಹೊಟ್ಟೆಪಾಡಿಗೆ ಅಲ್ಲ.ಅಹಂಕಾರ ಸ್ವಾರ್ಥಕ್ಕೆ ಅಲ್ಲ ರಾಜಕೀಯ ಅಧಿಕಾರ ಎಂಬುದು ಕಾರ್ಕೋಟಕ ವಿಷದಂತೆ ಇಲ್ಲಿ ಸ್ವಾರ್ಥದ ಮೇಲಾಟ ದ ವ್ಯವಸ್ಥೆ ಇರುತ್ತದೆ. ಇದರ ಬದಲಾಗಿ ಕರ್ನಾಟಕದ ಏಳಿಗೆಗಾಗಿ ಎಂದು ಹೇಳುತ್ತಾರೆ.
ಅಖಂಡ ಕರ್ನಾಟಕಕ್ಕೆ ಅದರದೇ ಆದ ಇತಿಹಾಸವಿದೆ. ಆತ್ಮಸಂಸ್ಕೃತಿಯನ್ನು ಮೆರೆಯಲು ಅದರ ಕಾಂತಿಯನ್ನು ಬೆಳಗಲು ಭಗವಂತನ ಚರಣದ ಕಾಂತಿಯನ್ನು ಹೆಚ್ಚಿಸಲು ಶರಣರು ತಮ್ಮ ಉಸಿರಿನಲ್ಲಿ ಹತ್ತಿಸಿದ ಹಣತೆ ಕನ್ನಡಿಗನ ಎದೆಯಲ್ಲಿ ಬೆಳಗಲಿ. ಅಂದರೆ ಕನ್ನಡಿಗನ ಬಾಳೆಂಬ ಹಣತೆ ಆರದಂತೆ ಸದಾ ಬೆಳಗಲಿ ಇದು ಭಗವಂತನ ಕಣ್ಣಿಗೂ ಬೀಳುವಂತಾಗಬೇಕು.
ಕೆಲವೊಮ್ಮೆ ಅಧಿಕಾರದ ಮಧದಲ್ಲಿ ಇರುವವರಿಗೆ ದೃಷ್ಟಿಹೀನತೆ ಕಾಡುತ್ತದೆ. ಇದು ಹುಟ್ಟಿನಿಂದ ಬಂದಿದೆಯೋ ಅಥವಾ ಬುದ್ಧಿಶೂನ್ಯವಾಗಿದೆಯೋ ಅಥವಾ ಬೇರೇನಾದರೂ ಸಂಚು ಇರಬಹುದೇ? ನೋಟಬೇರೆ ಮಾತುಬೇರೆ ಎಂಬ ಮೆಳ್ಳುಗಣ್ಣುತನವಿದೆಯೋ ತಿಳಿಯದು ಕನ್ನಡತನವನ್ನು ನಿರ್ಲಕ್ಷಿಸುತ್ತಿದ್ದಾರೆ ಇದು ಸರಿಯಲ್ಲ. ನಾಡು ನುಡಿಯ ರಕ್ಷಣೆಗಾಗಿ ಅಧಿಕಾರ ಪಡೆದು ಅದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಇದನ್ನು ನಾವು ಒಪ್ಪುವುದೂ ಇಲ್ಲ. ಕರ್ನಾಟಕ ಎಂಬುದು ಬರೀ ಒಂದು ಭೂಪ್ರದೇಶದ /ಮಣ್ಣಿನ ಹೆಸರಲ್ಲ. ಕನ್ನಡಿಗರ ಪಾಲಿಗೆ ಅದು ಮಂತ್ರ, ಶಕ್ತಿ , ದೇವಿ, ಬೆಂಕಿ , ಸಿಡಿಲು ಎಲ್ಲವೂ ಆಗಿದೆ. ಒಲಿದವರಿಗೆ ದೇವಿಯೂ ಕೆಣಕಿದವರಿಗೆ ಕಾಳಿಯೂ ಆಗುತ್ತಾಳೆ. ಇದನ್ನು ಅರಿಯುವ ಕಣ್ಣು ನಮ್ಮದಾಗಬೇಕು. ಕನ್ನಡ ವಿರೋಧಿಗಳಿಗೆ ಆಸ್ಫೋಟಕವಾಗುವುದು. ಇದು ಸರಸ್ವತಿಯೇ ರಚಿಸಿದ ಅಖಂಡಕರ್ನಾಟಕ ಎಂದು ಕವಿ ಹಾಡಿದ್ದಾರೆ.

೧. ಅಲ್ತೊ ನಮ್ಮ ಕೂಗಾಟದ ರಾಜಕೀಯ ನಾಟಕ
ಕುವೆಂಪು ಅವರು ರಚಿಸಿರುವ ಅಖಂಡಕರ್ನಾಟಕ ಎಂಬ ಕವಿತೆಯಿಂದ ಈ ಸಾಲನ್ನು ಆರಿಸಲಾಗಿದೆ.  ಅಖಂಡ ಕರ್ನಾಟಕವೆಂದರೆ ಬರೀ ರಾಜಕೀಯವಾಗಿ ಒಂದಾದ ನಾಡಲ್ಲ ನಮ್ಮ ರಾಜಕಾರಣಿಗಳ ಕೂಗಾಟದ ರಾಜಕೀಯ ನಾಟಕವಲ್ಲ. ಸಾಂಸ್ಕೃತಿಕವಾಗಿ ಒಂದಾದ ಹಿನ್ನೆಲೆಯನ್ನು ಹೊಂದಿರುವ, ಹಿರಿಯರ ಹರಕೆ,ಕನಸು ಕೋಟಿಕೋಟಿ ಮನಸುಗಳು ಒಂದಾಗಿ ನಿರ್ಮಾಣವಾದ ಕರ್ನಾಟಕ.

೨. ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲ
ಕುವೆಂಪು ಅವರು ರಚಿಸಿರುವ ಅಖಂಡಕರ್ನಾಟಕ ಎಂಬ ಕವಿತೆಯಿಂದ ಈ ಸಾಲನ್ನು ಆರಿಸಲಾಗಿದೆ.
ಅಖಂಡಕರ್ನಾಟಕದ ಕಲ್ಪನೆಯನ್ನು ವಿವರಿಸುತ್ತ ತಾವು ವಿವರಿಸುತ್ತಿರುವುದು ಇಂದು ಬಂದುನಾಳೆ ಹೋಗುವ ರಾಜಕೀಯನಾಟಕದ ಕರ್ನಾಟಕವಲ್ಲ. ಸರಸ್ವತಿಯ ವಜ್ರಕರ್ಣಕುಂಡಲವೆನಿಸಿದ ಮಂತ್ರಿಮಂಡಲಹೊಂದಿದ್ದು ಸಾಂಸ್ಕೃತಿಕ ಕರ್ನಾಟಕ ಪರಂಪರೆಯನ್ನು. ಇಂದು ಇರುವುದು ಪರಸ್ಪರ ಕೆಸರೆರಚಾಟದಲ್ಲಿ ಮುಳುಗಿರುವ ರಾಜಕೀಯನಾಟಕವನ್ನಲ್ಲ.  ಎಂದಿದ್ದಾರೆ.

೩. ನೃಪತುಂಗನೆ ಚಕ್ರವರ್ತಿ! ಪಂಪನಲ್ಲಿ ಮುಖ್ಯಮಂತ್ರಿ!
ಕುವೆಂಪು ಅವರು ರಚಿಸಿರುವ ಅಖಂಡಕರ್ನಾಟಕ ಎಂಬ ಕವಿತೆಯಿಂದ ಈ ಸಾಲನ್ನು ಆರಿಸಲಾಗಿದೆ. ಇಂದಿನ ರಾಜಕಾರಣಿಗಳು  ಆಳುತ್ತಿರುವ ಕರ್ನಾಟಕದ ಬಗ್ಗೆ ನಾನು ಹೇಳುತ್ತಿಲ್ಲ.  ತಾನು ವಿವರಿಸುತ್ತಿರುವುದು ಸರಸ್ವತಿಯ ವಜ್ರಕರ್ಣಕುಂಡಲವೆನಿಸಿರುವ ಮಂತ್ರಿಮಂಡಲ. ಇಲ್ಲಿ ನೃಪತುಂಗನೇ ಚಕ್ರವರ್ತಿ, ಪಂಪನೇ ಮುಖ್ಯಮಂತ್ರಿ ಮಹಾನ್ ಕವಿಗಣವು ಸಚಿವಮಂಡಲವಾಗಿದೆ. ಇದು ಶಾಶ್ವತವಾದ ಸಚಿವಮಂಡಲವಾಗಿದೆ. ಎಂದಿದ್ದಾರೆ.

೪. ಪಕ್ಷ ಜಾತಿ ಕಲಹಕಲ್ಲೊ
ಕುವೆಂಪು ಅವರು ರಚಿಸಿರುವ ಅಖಂಡಕರ್ನಾಟಕ ಎಂಬ ಕವಿತೆಯಿಂದ ಈ ಸಾಲನ್ನು ಆರಿಸಲಾಗಿದೆ. ಇಂದಿನ ರಾಜಕೀಯನಾಯಕರು ಕೀರ್ತಿ, ಪದವಿಯ ಆಸೆ, ಸ್ವಜನ ಪಕ್ಷಪಾತಗಳಲ್ಲಿ ಮುಳುಗಿ ಹೋಗುತ್ತಲಿದ್ದಾರೆ. ಆದರೆ ನಾನು ವರ್ಣಿಸುತ್ತಿರುವ ಅಖಂಡಕರ್ನಾಟಕದಲ್ಲಿ ಇಂತಹ ನಾಯಕರು ಯಾರೂ ಇಲ್ಲ. ಎಂದಿದ್ದಾರೆ.

೫. ಮೆರೆಯಲಾತ್ಮ ಸಂಸ್ಕೃತಿ
ಕುವೆಂಪು ಅವರು ರಚಿಸಿರುವ ಅಖಂಡಕರ್ನಾಟಕ ಎಂಬ ಕವಿತೆಯಿಂದ ಈ ಸಾಲನ್ನು ಆರಿಸಲಾಗಿದೆ. ಅಖಂಡಕರ್ನಾಟಕವೆಂಬುದು ಸರಸ್ವತಿಯೇ ನಿರ್ಮಿಸಿದ ರೂಪಕ. ಇದು ಭೌತಿಕ ಸ್ವರೂಪದಲ್ಲ.  ಇಲ್ಲಿ ಅಗೋಚರವಾದ ಆತ್ಮಶಕ್ತಿಅಡಗಿದೆ.  ಆತ್ಮಸಂಸ್ಕೃತಿಯು ಮೆರೆಯಲಿ ಎಂದೇ ನಿರ್ಮಿತವಾದುದು.

೬. ಮಂತ್ರ  ಕಣಾ! ಶಕ್ತಿ ಕಣಾ!
ಕುವೆಂಪು ಅವರು ರಚಿಸಿರುವ ಅಖಂಡಕರ್ನಾಟಕ ಎಂಬ ಕವಿತೆಯಿಂದ ಈ ಸಾಲನ್ನು ಆರಿಸಲಾಗಿದೆ.  ಕರ್ನಾಟಕ ಎಂಬುದು ನಾಡಿಗೆ ಇರುವ ಹೆಸರಲ್ಲ. ಈ ಮಣ್ಣಿಗಿರುವ ಹೆಸರಲ್ಲ. ಅದೊಂದು ಮಂತ್ರ. ಅದೊಂದು ಶಕ್ತಿ. ಕನ್ನಡ ನಮ್ಮೆಲ್ಲರ ತಾಯಿ, ನಮ್ಮೆಲ್ಲರ ದೇವಿ.  ಎಂದು ಹೇಳುತ್ತಾರೆ.

ಒಂದುವಾಕ್ಯದಲ್ಲಿಉತ್ತರಿಸಿ.
೧.ಅಖಂಡ ಕರ್ನಾಟಕವನ್ನು ಹರಸುತ್ತಿರುವವನು ಯಾರು?
ಅಖಂಡ ಕರ್ನಾಟಕವನ್ನು ಹರಸುತ್ತಿರುವವನು ದೇವಗಾಂಧಿ

೨. ಇಂದು ಬಂದು ನಾಳೆ ಹೋಗುವುದು ಯಾವುದು?
ಸಚಿವ ಮಂಡಲಕ್ಕೆ ಅಧಿಕಾರ ಇಂದು ಬರುತ್ತೆ ನಾಳೆ ಹೋಗುತ್ತೆ
೩. ಸಿರಿಗನ್ನಡವನ್ನು ಯಾವುದಕ್ಕೆ ಹೋಲಿಸಲಾಗಿದೆ?
ಸಿರಿಗನ್ನಡವನ್ನು ಸರಸ್ವತಿಯ ವಜ್ರದ ಕರ್ಣಕುಂಡಲಕ್ಕೆ ಹೋಲಿಸಲಾಗಿದೆ.

೪. ಅಖಂಡ ಕರ್ನಾಟಕದ ಚಕ್ರವರ್ತಿ ಯಾರು?
ಅಖಂಡ ಕರ್ನಾಟಕಕ್ಕೆ ನೃಪತುಂಗನೆ ಚಕ್ರವರ್ತಿ

೫. ಅಖಂಡ ಕರ್ನಾಟಕದ ಮುಖ್ಯಮಂತ್ರಿ ಯಾರು?
ಅಖಂಡ ಕರ್ನಾಟಕಕ್ಕೆ ಪಂಪನೇ ಮುಖ್ಯಮಂತ್ರಿ

೬. ಸರಸ್ವತಿಯು ಯಾವ ಸಂಸ್ಕೃತಿಯನ್ನು ಮೆರೆಯಲು ಕರ್ನಾಟಕವನ್ನು ರಚಿಸಿದ್ದಾಳೆ?
ಕರ್ನಾಟಕದ ಆತ್ಮ ಸಂಸ್ಕೃತಿಯನ್ನು ಮೆರೆಯಲು ಸರಸ್ವತಿಯೇ ಕರ್ನಾಟಕವನ್ನು ರಚಿಸಿದಳು.

೭. ಕರ್ನಾಟಕವು ಯಾರ ಹೃದಯಗಳಲ್ಲಿ ಹೊತ್ತಿರುವ ದೀಪವಾಗಿದೆ?
ಶರಣರ ಹೃದಯಗಳಲ್ಲಿ ಹೊತ್ತಿರುವ ದೀಪವಾಗಿದೆ.

೮. ಚಲದ ಚಂಡಿ ಯಾರು?
ಕರ್ನಾಟಕ,  ಕನ್ನಡದೇವಿ
೨-೩ವಾಕ್ಯಗಳಲ್ಲಿಉತ್ತರಿಸಿ.
೧. ಅಖಂಡ ಕರ್ನಾಟಕ ಬೂಟಾಟದ ರಾಜಕೀಯ ನಾಟಕವಲ್ಲವೇಕೆ?
ಕೋಟಿ ಕೋಟಿ ಹಿರಿಯ ಕನಸು-ನನಸು ಕವಿಯ ವಿಂಧ್ಯಕಲ್ಪನೆ ಆದುದರಿಂದ ಇದು ರಾಜಕೀಯ ನಾಟಕವಲ್ಲ. ಸರಸ್ವತಿಯೇ ರಚಿಸಿರುವ ಅಖಂಡಕರ್ನಾಟಕ. ಇಲ್ಲಿ ಇಂದು ಬಂದು ನಾಳೆ ಹೋಗುವ ಸಚಿವ ಮಂಡಲವಿಲ್ಲ.
೨. ಸರಸ್ವತಿಯ ಸಚಿವ ಮಂಡಲದ ಸದಸ್ಯರು ಯಾರು?
ನೃಪತುಂಗನೇ ಚಕ್ರವರ್ತಿಯಾಗಿ, ಕವಿಪಂಪ ಮುಖ್ಯಮಂತ್ರಿಯಾಗಿದ್ದಾನೆ. ರನ್ನ , ಜನ್ನ , ನಾಗವರ್ಮ, ರಾಘವಾಂಕ , ಹರಿಹರ, ಬಸವೇಶ್ವರ,ನಾರಣಪ್ಪ(ಕುಮಾರವ್ಯಾಸ), ಸರ್ವಜ್ಞ, ಷಡಕ್ಷರದೇವ,ಮೊದಲಾದವರನ್ನೊಳಗೊಂಡ ನಿತ್ಯ ಸಚಿವಮಂಡವನ್ನು ಸರಸ್ವತಿ ರಚಿಸಿದ್ದಾಳೆ.
೩. ಪರಮಾತ್ಮನ ಚರಣದೀಪ್ತಿ ಎಲ್ಲಿ ಮತ್ತು ಹೇಗೆ ಉರಿಯಬೇಕೆಂದು ಕವಿ
ಹೇಳುತ್ತಾರೆ?
ಕನ್ನಡದ ಆತ್ಮ ಸಂಸ್ಕೃತಿಯು, ಪರಮಾತ್ಮನ ಚರಣದಕಾಂತಿಯು ಶರಣರ ಹೃದಯದಲ್ಲಿಬೆಳಗಿ, ದೀಪವಾಗಿ ಉರಿಯಬೇಕೆಂದು ಕವಿಹೇಳುತ್ತಾರೆ.

೪.ಮೆಳ್ಳೆಗಣ್ಣನಿಗೆ ಕವಿ ಕೇಳುವ ಪ್ರಶ್ನೆಗಳು ಯಾವುವು?
ನಿನಗೆ ಹುಟ್ಟುಕುರುಡೋ? ನಿನ್ನ ಬುದ್ಧಿಗೆ ಬರವೆ? ಅಥವಾ ಬೇರೆಯದೇ ಆದ ಹಂಚಿಕೆ ಇದೆಯೇ? ಏಕೀ ಮೆಳ್ಳಗಣ್ಣು ? ಕರ್ನಾಟಕ ಎಂಬುದು ಕೇವಲ ಈ ಮಣ್ಣಿಗೆ ಹೆಸರು ಮಾತ್ರವೇ? ನಿನಗೆ ಕಣ್ಣು ಕಾಣುವುದಿಲ್ಲವೇ? ಎಂದೆಲ್ಲಾ ಪ್ರಶ್ನಿಸಿದ್ದಾರೆ.

೫-೬ವಾಕ್ಯಗಳಲ್ಲಿ ಉತ್ತರಿಸಿ.
೧.ಕುವೆಂಪು ಅವರು ಕೂಗಾಟದ ರಾಜಕೀಯ ನಾಟಕ ಎಂದು ಹೇಳಿರುವ ಹಿನ್ನೆಲೆ ಏನು?
ಇಂದಿನ ರಾಜಕೀಯ ಕೇವಲ ಹಾರಟದ, ಕೂಗಾಟದ ರಾಜಕೀಯ, ಇದು ಅಶಾಶ್ವತ, ಇಂದು ಬಂದು ನಾಳೆ ಇಲ್ಲವಾಗುವಂತಹುದು. ನಾಡಿನ ಅಭಿವೃದ್ಧಿಯನ್ನು ಮರೆತು ಕಚ್ಚಾಡುವ, ಅಧಿಕಾರಕ್ಕಾಗಿ ಮತೀಯ ಭಾವನೆಗಳನ್ನು ಜಾತಿ ಮತಗಳನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತ ಸ್ವಜನಪಕ್ಷಪಾತ ಮಾಡುತ್ತಾರೆ. ಅಹಂಕಾರ, ಮದಗಳನ್ನು ಪ್ರದರ್ಶಿಸುತ್ತಾರೆ. ಹಾಗೂ ಕೀರ್ತಿಶನಿಯ ಬೆನ್ನತ್ತಿರುವ ಇವರು ಅನ್ನದ ಋಣವನ್ನು ತೀರಿಸುವ ನಿಷ್ಟೆ ಇಲ್ಲದವರು. ಹೀಗಾಗಿ ಇಂದಿನ ರಾಜಕಾರಣವನ್ನು ಕೂಗಾಟದ ರಾಜಕೀಯ ನಾಟಕ ವೆಂದು ಕವಿ ಕುವೆಂಪು ಟೀಕಿಸಿದ್ದರೆ.

೨. ಸರಸ್ವತಿಯ ಸಚಿವ ಮಂಡಲವನ್ನು ಕುರಿತು ಬರೆಯಿರಿ.
ಕರ್ನಾಟಕದ ಸರ್ಕಾರ ತಾಯಿ ಸರಸ್ವತಿಯೇ ರಚಿಸಿರುವ ಸಚಿವ ಮಂಡಲ ಎಂದಿದ್ದಾರೆ. ಇದು ಇಂದು ಬಂದು ನಾಳೆ ಹೋಗುವಂತ ಸಚಿವ ಮಂಡಲವಲ್ಲ. ಇಲ್ಲಿ ನೃಪತುಂಗನೇ ಚಕ್ರವರ್ತಿ,  ಪಂಪನೇ ಮುಖ್ಯಮಂತ್ರಿ. ಮಹಾಕವಿಗಳಾದ ರನ್ನ , ಜನ್ನ, ನಾಗವರ್ಮ , ಹರಿಹರ , ರಾಘವಾಂಕ, ಬಸವೇಶ್ವರ, ನಾರಣಪ್ಪ, ಸರ್ವಜ್ಞ ಷಡಕ್ಷರಿಯಂತಹವರು ಸಚಿವ ಮಂಡಲಿಯಲ್ಲಿದ್ದಾರೆ. ಇದು ತಾಯಿ ಸರಸ್ವತಿಯ ವಜ್ರಕರ್ಣಕುಂಡಲವೇನೋ ಎಂಬಂತಿದೆ.ತಾಯಿ ಸರಸ್ವತಿಯ ಸಚಿವ ಮಂಡಲವಾದ್ದರಿಂದ ಇದು ಶಾಶ್ವತವಾಗಿದೆ.
೩. ಅಖಂಡ ಕರ್ನಾಟಕವು ಬರಿ ರಾಜಕೀಯ ನಾಟಕವಲ್ಲ ಏಕೆ?
ಅಖಂಡ ಕರ್ನಾಟಕವು ಬರೀ ರಾಜಕೀಯನಾಟಕವಲ್ಲ ಅದು ಸರಸ್ವತಿ ರೂಪಿಸಿರುವ ರೂಪಕ. ಅದರೊಳಗೆ ಆತ್ಮಸಂಸ್ಕೃತಿಯು ಮೆರೆಯುತ್ತಿರಬೇಕು. ಜೀವನ ದೀಪ್ತಿ ಬೆಳಗಬೇಕು. ಶರಣರ ಹೃದಯಗಳಲ್ಲಿ ಈ ಹಣತೆ ಹೊತ್ತಿದೆ , ರಸಸ್ಫೂರ್ತಿಯು ಭಗವಂತನ ಕಣ್ಣಾಗಬೇಕು . ಇದು ಸರಸ್ವತಿಯ ವಜ್ರಕರ್ಣಕುಂಡಲವಾಗಿದ್ದು. ಕವಿಯ ಕಲ್ಪನೆಯಾಗಿದೆ.  ಕರ್ನಾಟಕ ವೆಂಬುದು ಮಂತ್ರ, ಶಕ್ತಿ, ತಾಯಿ, ದೇವಿ ಮಹೋತ್ತರವಾದ ಕಲ್ಪನೆ. ಇದು ಶಾಶ್ವತವಾದುದು. ಅಶಾಶ್ವತವಾದ ರಾಜಕೀಯ ನಾಟಕವಲ್ಲ ಎಂದಿದ್ದಾರೆ.
೪. ರಾಜಕೀಯ ಶಕ್ತಿಯೇ ಮೇಳೈಸುತ್ತಿರುವ ಇಂದಿನ ಸಂದರ್ಭದಲ್ಲಿ ನಾಡನ್ನು ಒಂದು ಸಾಂಸ್ಕೃತಿಕ ಅಸ್ತಿತ್ವವಾಗಿ ಕಲ್ಪಿಸಲು ಈ ಕವನ ಹೇಗೆ ಪೂರಕವಾಗಿದೆ? 
ಈ ಕವಿತೆಯು ಅಖಂಡ ಕರ್ನಾಟಕದ ಕಲ್ಪನೆಯನ್ನು ಬಿತ್ತುತ್ತಿರುವ ಈ ಸಂದರ್ಭದಲ್ಲಿ ನಾಡನ್ನಾಳುವವರಿಗೆ ಸಾಂಸ್ಕೃತಿಕಧರ್ಮವನ್ನು ಬೋಧಿಸುವಂತಹುದು.
ಇಂದಿನ ದಿನಗಳಲ್ಲಿ ರಾಜಕೀಯಪಕ್ಷವೇ ನಾಡನ್ನಾಳುವ-ಪ್ರತಿನಿಧಿಸುವ ಬಲವಾಗಿದೆ. ಆಳುವವರಿಗೆ ನಮ್ಮ ಸಾಹಿತ್ಯ-ಸಂಸ್ಕೃತಿಪರಂಪರೆಗಳ ಅರಿವಿಲ್ಲದಿದ್ದರೆ ಈ ನಾಡನ್ನು ಅಖಂಡವಾಗಿ ಕಟ್ಟಲಾಗದು. ಮೌಲ್ಯಗಳು ಕಣ್ಮರೆಯಾಗಿ, ಜಾತಿರಾಜಕಾರಣ, ಸ್ವಜನಪಕ್ಷಪಾತ, ಅಧಿಕಾರ ದಾಹ ಕೀರ್ತಿಯ ಬೆನ್ನತ್ತಿರುವ ಸಂದರ್ಭಗಳಲ್ಲಿ ಕುವೆಂಪು ಹೇಳಿರುವ ಸಂಸ್ಕೃತಿಯನ್ನು ಕಾಣುವ ಕಣ್ನು ಆಳುವವರಿಗೆ ಇರಬೇಕಾಗುತ್ತದೆ.  ಇಲ್ಲದಿದ್ದರೆ ಇದು ಬೂಟಾಟಿಕೆಯ ರಾಜಕೀಯವಾಗುತ್ತದೆ.
೫. ಕರ್ನಾಟಕ ಎಂಬುದು ಬರೀ ಮಣ್ಣಿಗೆ ಹೆಸರಲ್ಲ ಎಂಬುದನ್ನು ಕವಿ ಹೇಗೆ ಹೇಳಿದ್ದಾರೆ?
ಕರ್ನಾಟಕ ಎಂಬ ಹೆಸರು ಕೇವಲ ಈ ಮಣ್ಣಿಗಿರುವ ಹೆಸರಲ್ಲಾ ಎಂದಿದ್ದಾರೆ. ಕರ್ನಾಟಕ ಎಂಬುದು ಒಂದು ಶಕ್ತಿ, ಮಂತ್ರ, ನಮ್ಮೆಲ್ಲರ ತಾಯಿ, ನಮ್ಮೆಲ್ಲರ ದೇವಿ . ನಿಷ್ಟೆ ಗೌರವ ತೋರುವವರಿಗೆ , ಇವಳು ಪ್ರೀತಿಯಿಂದ ಉಣಬಡಿಸುತ್ತಾಳೆ. ಬಲವನ್ನು ನೀಡಿ ರಕ್ಷಿಸುತ್ತಾಳೆ.  ಅದೇ ದ್ರೋಹಿಗಳಿಗೆ ಬೆಂಕಿ , ಸಿಡಿಲುಗಳಂತೆ ಸ್ಫೋಟಿಸುತ್ತಾಳೆ. ಚಲದ ಚಂಡಿಯಿವಳು. ಕವಿಯ ಕಣ್ಣಿಗೆ ಅಖಂಡ ದೇವೀ ಸ್ವರೂಪ.  ಕರ್ನಾಟಕ ನಮ್ಮದೆಂದು ಗಡಿರೇಖೆಗಳ ಹಾಕಿಕೊಂಡು ನರ್ತಿಸುತ್ತೇವೆ.  ಆ ಅರ್ಥದ ನಾಡಲ್ಲ. ಭೌತಿಕವಲ್ಲದ ಅಭೌತಿಕವಾದ, ಸಾಂಸ್ಕೃತಿಕ ಬಲ, ಒಗ್ಗಟ್ಟುಗಳೇ ಕನ್ನಡ ಕರ್ನಾಟಕ. ಇವರಡೂ ಬೇರೆ ಬೇರೆಯಲ್ಲ ಎಂದು ಕವಿ ಅಭಿಮಾನದಿಂದ ನುಡಿಯುತ್ತಾರೆ.

***ಓಂ***

8 comments: