Sunday, June 29, 2014

ಮಹಾತ್ಮರ ಗುರು

ಗದ್ಯಭಾಗ – 6
ಮಹಾತ್ಮರ ಗುರು

ಡಾ. ಮುಗಳವಳ್ಳಿ ಕೇಶವಧರಣಿ  : ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮುಗಳವಳ್ಳಿಯವರು. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಸಕಲೇಶಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ರಸ್ತೆ ಸುರಕ್ಷತೆ : ಸಮಸ್ಯೆಗಳು ಮತ್ತು ಪರಿಹಾರಗಳು ಎಂಬ ಕೃತಿಗೆ ಡಿ.ಲಿಟ್ ಪಡೆದಿದ್ದಾರೆ.  ಕುದ್ಮುಲ್ ರಂಗರಾವ್ ರಾಷ್ಟ್ರೀಯ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾಗಿರುವ ಅವರು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.

ಸಂದರ್ಭ
೧. ಶೋಷಿತ ಜನಾಂಗದವರ ಬಾಳಿನಲ್ಲಿ ನೈತಿಕ ಧೈರ್ಯದ ನಂದಾದೀಪ.
ಈ ವಾಕ್ಯವನ್ನು ಡಾ. ಮುಗಳವಳ್ಳಿ ಕೇಶವ ಧರಣಿ ಅವರ ಮಹಾತ್ಮರ ಗುರು ಎಂಬ ವ್ಯಕ್ತಿಪರಿಚಯ ಲೇಖನದಿಂದ ಆರಿಸಲಾಗಿದೆ.
ಭಾರತದಲ್ಲಿ ಆರಂಭವಾದ ಸಾಮಾಜಿಕ ಸುಧಾರಣಾ ಚಳವಳಿಯ ನಾಯಕತ್ವವನ್ನು ಮಹಾತ್ಮಾ ಜ್ಯೋತಿಬಾ ಫುಲೆ, ಶಾಹು ಮಹಾರಾಜ್, ನಾರಾಯಣಗುರು, ನಾಲ್ವಡಿ ಕೃಷ್ಣರಾಜ ಒಡೆಯರ್ , ಮಹಾತ್ಮಾಗಾಂಧಿ ಬಾಬಾಸಾಹೇಬ ಅಂಬೇಡ್ಕರ್ ಮೊದಲಾದ ಮಾರ್ಗದರ್ಶಕರಂತೆ ಸ್ಫೂರ್ತಿ , ಪ್ರೇರಣೆ ನೀಡಿ ದಕ್ಷಿಣಕನ್ನಡ ಜಿಲ್ಲೆಯ ಶೋಷಿತ ಜನಾಂಗದವರ ಬಾಳಿನಲ್ಲಿ ನೈತಿಕ ಧೈರ್ಯದ ನಂದಾದೀಪ ಹಚ್ಚಿದವರು ಕುದ್ಮುಲ್ ರಂಗರಾವ್ ಎಂದು ಪರಿಚಯ ಮಾಡಿಕೊಟ್ಟಿದ್ದಾರೆ.

೨. ಪ್ರಗತಿಗೆ ವಿದ್ಯೆಯೇ ಮೂಲ.
ಈ ವಾಕ್ಯವನ್ನು ಡಾ. ಮುಗಳವಳ್ಳಿ ಕೇಶವ ಧರಣಿ ಅವರ ಮಹಾತ್ಮರ ಗುರು ಎಂಬ ವ್ಯಕ್ತಿಪರಿಚಯ ಲೇಖನದಿಂದ ಆರಿಸಲಾಗಿದೆ. ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀಮಂತ ಕುಟುಂಬದಲ್ಲಿ ಜನಿಸಿದ ರಂಗರಾವ್ ಬುದ್ಧ ಮತ್ತು ಬಸವಣ್ಣನವರ ಸಾಮಾಜಿಕ ಕ್ರಾಂತಿಯಿಂದ ಪ್ರಭಾವಿತರಾಗಿದ್ದರು. ಇವರು ಪ್ರಗತಿಗೆ ವಿದ್ಯೆಯೇ ಮೂಲ ಎಂದು ನಂಬಿದ್ದರು.ಹಾಗಾಗಿ ಶೋಷಿತ ಸಮೂದಾಯದ ಮಕ್ಕಳಿಗೆ ಶಿಕ್ಷಣ ನೀಡುವ ಕುರಿತು ಚಿಂತಿಸಿದರು. ರಂಗರಾವ್ ಅವರ ಚಿಂತನೆಯನ್ನು ಈ ಮಾತಿನಲ್ಲಿ ನೋಡಬಹುದಾಗಿದೆ.

೩. ಜೀತದ ಕೆಲಸ ಯಾರು ಮಾಡುತ್ತಾರೆ?
ಈ ವಾಕ್ಯವನ್ನು ಡಾ. ಮುಗಳವಳ್ಳಿ ಕೇಶವ ಧರಣಿ ಅವರ ಮಹಾತ್ಮರ ಗುರು ಎಂಬ ವ್ಯಕ್ತಿಪರಿಚಯ ಲೇಖನದಿಂದ ಆರಿಸಲಾಗಿದೆ. ದಲಿತರ ಶೋಷಣೆ ಅಂದು ಯಾವ ಮಟ್ಟದಲ್ಲಿ ಆಗುತ್ತಿತ್ತು ಎಂಬುದನ್ನು ಈ ಮಾತಿನಲ್ಲಿ ಲೇಖಕರು ಹೇಳುತ್ತಾರೆ.
ದಲಿತರನ್ನು ವಿದ್ಯಾವಂತರನ್ನಾಗಿ ಮಾಡುವುದು ಮತ್ತು ಅವರ ಶ್ರೇಯಸ್ಸಿಗಾಗಿ ದುಡಿಯುವುದು ಅಂದಿನ ಕಾಲದಲ್ಲಿ ಸಮಾಜದ ನಂಬಿಕೆಗೆ ವಿರೋಧವಾಗಿತ್ತು. ‘ದಲಿತರು ವಿದ್ಯಾವಂತರಾದರೆ, ಆರ್ಥಿಕವಾಗಿ ಪ್ರಗತಿ ಹೊಂದಿದರೆ, ಜೀತದ ಕೆಲಸವನ್ನು ಯಾರು ಮಾಡುತ್ತಾರೆ’ ಎಂಬ ಭಯ ಸಮಾಜವನ್ನು ಕಾಡುತ್ತಿದ್ದುದರಿಂದ ದಲಿತರಿಗೆ ಶಿಕ್ಷಣ ನೀಡುವುದನ್ನು ವಿರೋಧಿಸುತ್ತಿದ್ದರು.

೪. ಅನ್ಯರ ಮನೆಯ ಅನ್ನಕ್ಕಿಂತ ಆತ್ಮಗೌರವದ ಗಂಜಿ ಊಟವೇ ದೊಡ್ಡದು.
ಈ ವಾಕ್ಯವನ್ನು ಡಾ. ಮುಗಳವಳ್ಳಿ ಕೇಶವ ಧರಣಿ ಅವರ ಮಹಾತ್ಮರ ಗುರು ಎಂಬ ವ್ಯಕ್ತಿಪರಿಚಯ ಲೇಖನದಿಂದ ಆರಿಸಲಾಗಿದೆ. ರಂಗರಾವ್ ಅವರು ದಲಿತರಿಗೆ ಸ್ವಾವಲಂಬಿ ಜೀವನದ ದಾರಿತೋರಿದ ಬಗ್ಗೆ ವಿವರಿಸುವಾಗ ಈ ಮಾತು ಬಂದಿದೆ.
ದಲಿತರಿಗೆ ವೃತ್ತಿಪರ ಶಿಕ್ಷಣ ನೀಡಲು ಶೇಡಿಗುಡ್ಡೆ ಎಂಬಲ್ಲಿ ಕೈಗಾರಿಕಾ ತರಬೇತಿ ಶಾಲೆಗಳನ್ನು ಪ್ರಾರಂಭಿಸಿದರು. ಜೀವ ಬೆದರಿಕೆ ಬಂದರೂ ಕುಗ್ಗದೆ ತಾವು ಸ್ಥಾಪಿಸಿದ್ದ ಡಿ.ಸಿ.ಎಂ ಮಿಷನ್ ಶಾಲೆಗಳಲ್ಲಿ ಮತ್ತು ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಬಡಗಿ, ನೇಯ್ಗೆ, ತೋಟಗಾರಿಕೆ ಕಸೂತಿ, ರೇಷ್ಮೆಹುಳುಸಾಕಣೆ ಮೊದಲಾದ ವೃತ್ತಿಗಳನ್ನು ಅವಲಂಬಿಸಲು ಅಗತ್ಯವಾದ ತರಬೇತಿ ಕೊಡಿಸಿದರು.

೫.ರಸ್ತೆಯಿಂದ ಏಳುವ ಧೂಳು ನನ್ನ ತಲೆಗೆ ತಾಕಬೇಕು.
ಈ ವಾಕ್ಯವನ್ನು ಡಾ. ಮುಗಳವಳ್ಳಿ ಕೇಶವ ಧರಣಿ ಅವರ ಮಹಾತ್ಮರ ಗುರು ಎಂಬ ವ್ಯಕ್ತಿಪರಿಚಯ ಲೇಖನದಿಂದ ಆರಿಸಲಾಗಿದೆ. ಶೋಷಿತರನ್ನು ಮೇಲೆತ್ತುವ ಕಾರ್ಯದಲ್ಲಿ ರಂಗರಾವ್ ಅನುಭವಿಸಿದ ಕಷ್ಟಗಳು ಅವರದ್ಯೇಯನಿಷ್ಠೆಯನ್ನು ಮತ್ತಷ್ಟು ದೃಢಪಡಿಸಿದವು. ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ , ದೊಡ್ಡವರಾಗಿ ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಗಳಲ್ಲಿಕಾರಿನಲ್ಲಿ ಓಡಾಡಬೇಕು. ಆಗ ರಸ್ತೆಯಲ್ಲಿ ಏಳುವ ಧೂಳು ನನ್ನತಲೆಗೆ ತಾಕಬೇಕು ಆಗ ನನ್ನ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳುತ್ತಿದ್ದರು. ಈ ಮಾತನ್ನೇ ಅವರ ಸಮಾಧಿಯಮೇಲೂ ಬರೆಯಲಾಗಿದೆ.

೬. ರಂಗರಾವ್ ಅವರಿಂದ ಸಾರ್ವಜನಿಕ ಸೇವಾ ನಿಷ್ಠೆಯನ್ನು ಮನಗಾಣಿಸಿಕೊಂಡೆ.
ಈ ವಾಕ್ಯವನ್ನು ಡಾ. ಮುಗಳವಳ್ಳಿ ಕೇಶವ ಧರಣಿ ಅವರ ಮಹಾತ್ಮರ ಗುರು ಎಂಬ ವ್ಯಕ್ತಿಪರಿಚಯ ಲೇಖನದಿಂದ ಆರಿಸಲಾಗಿದೆ. ಡಿ.ಸಿ.ಎಂ ಸಂಸ್ಥೆಗೆ ಗಾಂಧೀಜಿಯವರು ಭೇಟಿಕೊಟ್ಟಾಗ ಹೇಳಿದಂತಹ ಮಾತು.
ಮಹಾತ್ಮಾಗಾಂಧಿಯವರು 1934 ಫೆಬ್ರವರಿ 24ರಂದು ಮಂಗಳೂರಿಗೆ ಬಂದಿದ್ದಾಗ ಡಿ.ಸಿ.ಎಂ. ಸಂಸ್ಥೆಗೆ ಭೇಟಿನೀಡಿದರು. ರಂಗರಾವ್ ಅವರ ಸೇವಾಕಾರ್ಯಗಳನ್ನು ಕಂಡು ಅತ್ಯಂತ ಸಂತುಷ್ಟರಾಗಿ ಅದೇ ದಿನ ಸಂಜೆ ಸಾರ್ವಜನಿಕ ಸಭೆಯಲ್ಲಿ ಪೂಜ್ಯ ರಂಗರಾವ್ ಅವರಿಂದ ಸಾರ್ವಜನಿಕ ಸೇವಾ ನಿಷ್ಠೆಯನ್ನು ಮನಗಾಣಿಸಿಕೊಂಡೆ. ನಮಗೆ ಉತ್ತಮ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದ್ದಾರೆ.  ಅಸ್ಪೃಶ್ಯ ಜನಾಂಗದ ಪುನರುದ್ಧಾರ ಕಾರ್ಯದಲ್ಲಿ ಮುನ್ನಡೆದ ಇವರು ನನಗೆ ಸ್ಫೂರ್ತಿ. ಮಾರ್ಗದರ್ಶಕರು, ಅಸ್ಪೃಶ್ಯತಾ ನಿವಾರಣ ಕಾರ್ಯದಲ್ಲಿ ನಿಜವಾಗಿಯೂ ನನ್ನ ಗುರುಗಳು ಎಂದು ಘೋಷಿಸಿದರು.

ಒಂದುವಾಕ್ಯದಲ್ಲಿ ಉತ್ತರಿಸಿ.

೧. ಶೋಷಿತ ಜನಾಂಗದವರ ಬಾಳಿನಲ್ಲಿ ನೈತಿಕ ಧೈರ್ಯದ ನಂದಾದೀಪ ಹಚ್ಚಿದವರು ಯಾರು?
ಕುದ್ಮುಲ್ ರಂಗರಾವ್ ಅವರು ಶೋಷಿತ ಜನಾಂಗದವರ ಬಾಳಿನಲ್ಲಿ ನೈತಿಕ ಧೈರ್ಯದ ನಂದಾದೀಪ ಹಚ್ಚಿದರು.

೨. ಬಡವರ ವಕೀಲರೆಂದು ಪ್ರಸಿದ್ಧರಾದವರು ಯಾರು?
ಕುದ್ಮುಲ್ ರಂಗರಾವ್ ಅವರು ಬಡವರ ವಕೀಲರೆಂದು ಪ್ರಸಿದ್ಧರಾದರು.


೩. ರಂಗರಾವ್ ಅವರು ಸ್ಥಾಪಿಸಿದ ಸಂಸ್ಥೆಯ ಹೆಸರೇನು?
ಡಿ.ಸಿ.ಎಂ( ಡಿಪ್ರೆಸ್ಡ್ ಕ್ಲಾಸ್ ಮಿಷನ್) ಎಂಬ ಸಂಸ್ಥೆಯನ್ನುಸ್ಥಾಪಿಸಿದರು.

೪. ರಂಗರಾವ್ ಕೈಗಾರಿಕಾ ತರಬೇತಿ ಶಾಲೆ ಎಲ್ಲಿ ಸ್ಥಾಪಿಸಿದರು?
ದಲಿತರಿಗೆ ವೃತ್ತಿಪರ ಶಿಕ್ಷಣ ನೀಡಲು ಶೇಡಿಗುಡ್ಡೆಯಲ್ಲಿ ಕೈಗಾರಿಕಾ ತರಬೇತಿ ಶಾಲೆಯನ್ನು ಆರಂಭಿಸಿದರು.

೫. ರಂಗರಾವ್ ಕೋರ್ಟ್ ಹಿಲ್ಸ್ ನಲ್ಲಿ ಯಾವ ಸಂಘ ಸ್ಥಾಪಿಸಿದರು?
ರಂಗರಾವ್ ಕೋರ್ಟ್ ಹಿಲ್ಸ್ ನಲ್ಲಿ ಆದಿ ದ್ರಾವಿಡ ಸಹಕಾರ ಸಂಘವನ್ನು ಸ್ಥಾಪಿಸಿದರು.

೬. ಸರ್ಕಾರ ರಂಗರಾವ್ ಅವರಿಗೆ ನೀಡಿದ ಬಿರುದು ಯಾವುದು?
ಸರ್ಕಾರವು ರಂಗರಾವ್ ಅವರಿಗೆ ‘ರಾವ್ ಸಾಹೇಬ್’ ಎಂಬ ಬಿರುದು ಮತ್ತು ನೂರಾರುಪದಕಗಳನ್ನು ನೀಡಿತು.

ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಸಾಮಾಜಿಕ ಸುಧಾರಣಾ ಚಳುವಳಿಯ ಪ್ರಮುಖ ನಾಯಕರನ್ನು ಹೆಸರಿಸಿ.
ಭಾರತದಲ್ಲಿ ಆರಂಭವಾದ ಸಾಮಾಜಿಕ ಸುಧಾರಣಾ ಚಳವಳಿಯ ನಾಯಕತ್ವವನ್ನು ಮಹಾತ್ಮಾ ಜ್ಯೋತಿಬಾ ಫುಲೆ, ಶಾಹು ಮಹಾರಾಜ್, ನಾರಾಯಣಗುರು, ನಾಲ್ವಡಿ ಕೃಷ್ಣರಾಜ ಒಡೆಯರ್ , ಮಹಾತ್ಮಾಗಾಂಧಿ ಬಾಬಾಸಾಹೇಬ ಅಂಬೇಡ್ಕರ್ ಮೊದಲಾದವರು ವಹಿಸಿಕೊಂಡಿದ್ದರು.

೨. ಮಂಗಳೂರು ಜಿಲ್ಲಾ ಕೋರ್ಟ್ ನಲ್ಲಿ ನಡೆದ ಘಟನೆ ಯಾವುದು?
1888ರಲ್ಲಿ ಮಂಗಳೂರು ಜಿಲ್ಲಾ ಕೋರ್ಟ್ ನಲ್ಲಿ ಬೆಂದೂರು ಬಾಬು ಎಂಬ ಅಸ್ಪೃಶ್ಯವ್ಯಕ್ತಿ ಕೋರ್ಟ್ ನ ಪೇದೆಯ ಕೆಲಸಕ್ಕೆ ಅರ್ಜಿ ಹಾಕಿದ್ದ ಆತನನ್ನು ಆಗಿನ ಆಂಗ್ಲ ನ್ಯಾಯಾಧೀಶರು ಕೆಲಸಕ್ಕೆ ನೇಮಕ ಮಾಡಿಕೊಂಡರು. ಈ ವಿಷಯ ತಿಳಿದ ಕೆಲವರು ಒಟ್ಟಾಗಿ ಪ್ರತಿಭಟಿಸಿದರು.ನ್ಯಾಯಾಲಯವನ್ನು ಬಹಿಷ್ಕರಿಸಿ, ನ್ಯಾಯಾಧೀಶರಿಗೆ ಕೊಲೆ ಬೆದರಿಕೆಹಾಕಿದರು. ಈ ಘಟನೆಯಿಂದಾಗಿ ರಂಗರಾವ್ ಅವರು ಶೋಷಿತರ ಉದ್ಧಾರಕ್ಕಾಗಿ ಜೀವನವನ್ನು ಮೀಸಲಿಡುವಂತಾಯಿತು.

೩. ರಂಗರಾವ್ ಸಮಾಧಿಯ ಮೇಲೆ ಬರೆದ ಹೇಳಿಕೆ ಯಾವುದು?
ಜನರ ಅಪಮಾನ , ಬೆದರಿಕೆ, ಕಿರುಕುಳಗಳಿಗೆಲ್ಲ ಬೆದರದೆ ತಮ್ಮಕಾರ್ಯವನ್ನು ಮುಂದುವರೆಸುತ್ತಾ ಇದ್ದ ರಂಗರಾವ್ ಅವರು “ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ , ದೊಡ್ಡವರಾಗಿ ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಗಳಲ್ಲಿಕಾರಿನಲ್ಲಿ ಓಡಾಡಬೇಕು. ಆಗ ರಸ್ತೆಯಲ್ಲಿ ಏಳುವ ಧೂಳು ನನ್ನತಲೆಗೆ ತಾಕಬೇಕು ಆಗ ನನ್ನ ಜನ್ಮ ಸಾರ್ಥಕವಾಗುತ್ತದೆ” ಎಂದು ಹೇಳುತ್ತಿದ್ದರು. ಈ ಮಾತನ್ನೇ ಅವರ ಸಮಾಧಿಯಮೇಲೂ ಬರೆಯಲಾಗಿದೆ.

೪. ರಂಗರಾವ್ ಪ್ರಾರಂಭಿಸಿದ್ದ ಹೆಣ್ಣು ಮಕ್ಕಳ ಹಾಸ್ಟೆಲ್ ನಿಂದ ಉಂಟಾದ ಪ್ರಯೋಜನವೇನು?
ದೂರದ ಹಳ್ಳಿಗಳಿಂದ ಬರುವ ಹೆಣ್ಣುಮಕ್ಕಳಿಗಾಗಿ ಶೇಡಿಗುಡ್ಡೆಯಲ್ಲಿ ಹಾಸ್ಟಲ್ ತೆರೆದರು. ಕೈಗಾರಿಕಾ ತರಬೇತಿ ಶಾಲೆಯಲ್ಲಿ ಹೇಳಿಕೊಡುತ್ತಿದ್ದ ಬಡಗಿ, ನೇಯ್ಗೆ, ತೋಟಗಾರಿಕೆ, ಕಸೂತಿ, ರೇಷ್ಮೆಹುಳು ಸಾಕಣೆ ಮೊದಲಾದ ತರಬೇತಿಗಳು ದಲಿತ ಮಹಿಳೆಯರ ಜೀವನೋಪಾಯಕ್ಕೆ ವಿವಿಧ ವೃತ್ತಿಗಳನ್ನು ಅವಲಂಬಿಸಲು  ದಾರಿಯಾಯಿತು.

೫. ರಂಗರಾವ್ ಅಂತರ್ಜಾತಿ ವಿವಾಹಕ್ಕೆ ನೀಡಿದ ಪ್ರೋತ್ಸಾಹ ಗಾಂಧಿ ಮೇಲೆ ನೀಡಿದ ಪ್ರಭಾವ ಏನು?
1912ರಲ್ಲಿ ತಮ್ಮ ಮಗಳು ರಾಧಾಬಾಯಿಯನ್ನು ಮದ್ರಾಸಿನ ಡಾ. ಸುಬ್ರಾಯನ್ ಗೆ ಕೊಡುವಮೂಲಕ ತಮ್ಮ ಕುಟುಂಬದಲ್ಲೇ ಅಂತರ್ಜಾತಿ ವಿವಾಹಕ್ಕೆ ಅವಕಾಶ ಒದಗಿಸಿದರು. ಈ ಮದುವೆಯ ಪೌರೋಹಿತ್ಯವನ್ನು ಚಕ್ರವರ್ತಿ ರಾಜಗೋಪಾಲಾಚಾರ್ಯ ವಹಿಸಿದ್ದರು. ಆಡಂಬರ , ವಧುದಕ್ಷಿಣೆ, ವರದಕ್ಷಿಣೆ, ದುಂದುವೆಚ್ಚಗಳಿಗೆ ಸಂಪೂರ್ಣ ಕಡಿವಾಣ ಹಾಕಿದ್ದರು. ಇದು ಗಾಂಧೀಜಿಯವರ ಗಮನವನ್ನೂ ಸೆಳೆದು, ಸ್ವತಃ ಗಾಂಧಿಯವರು ತಮ್ಮ ಮಗನಿಗೆ ರಾಜಾಜಿಯವರ ಮಗಳನ್ನು ತಂದುಕೊಳ್ಳುವಂತೆ ಪ್ರಭಾವಬೀರಿತ್ತು.
೬. ರಂಗರಾವ್ ರಾಜಕೀಯ ಮೀಸಲಾತಿಗಾಗಿ ಹೇಗೆ ಪ್ರಯತ್ನಿಸಿದರು?
1888ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಸಮುದಾಯಕ್ಕೆ ರಾಜಕೀಯ ಮೀಸಲಾತಿ ಒದಗಿಸಿಕೊಟ್ಟ ಕೀರ್ತಿ ಕುದ್ಮುಲ್ ರಂಗರಾವ್ ಅವರಿಗೆ ಸಲ್ಲುತ್ತದೆ. ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಬೋರ್ಡ್ ಮತ್ತು ಪುರಸಭೆಗಳಲ್ಲಿ ದಲಿತ ಜನಾಂಗದ ಸದಸ್ಯರಿಗೆ ಅವಕಾಶ ನೀಡಬೇಕೆಂದು ಒತ್ತಯಿಸಲು ಜನರನ್ನು ಸಂಘಟಿಸಿ ಹೋರಾಟಕ್ಕಿಳಿದರು. ಅವರ ಅನವರತ ಹೋರಾಟದ ಫಲವಾಗಿ ಅಂಗರ ಮಾಸ್ತರ್ ಮತ್ತು ಗೋವಿಂದ ಮಾಸ್ತರ್ ಎಂಬ ಇಬ್ಬರು ದಲಿತರು ಪ್ರಥಮ ಬಾರಿಗೆ ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರಾದರು.

೭. ಡಿ.ಸಿ.ಎಂ. ಸಂಸ್ಥೆಗೆ ಯಾರು ಯಾರು ಭೇಟಿ ನೀಡಿದ್ದರು?
ರಂಗರಾವ್ ಅವರ ನಿಸ್ವಾರ್ಥಸೇವೆ ದೇಶ-ವಿದೇಶಗಳಲ್ಲಿ ಖ್ಯಾತಿಪಡೆದು, ಅವರ ಸಮಾಜ ಸುದಾರಣೆಯ ಕಾರ್ಯವನ್ನು ಮೆಚ್ಚಿಮಹಾತ್ಮಾಗಾಂಧಿ,  ಅಮೇರಿಕಾದ ಖ್ಯಾತ ಉದ್ಯಮಿ ಹೆನ್ರಿಫೋರ್ಡ್, ಜಸ್ಟಿಸ್ ಮಿಲ್ಬರ್ಟ್, ಡಾ.ಕಾರ್ನಾಟ್, ಗುರುದೇವ ರವೀಂದ್ರನಾಥ ಠಾಗೋರ್, ದೀನಬಂದು ಸಿ.ಎಸ್. ಆಂಡ್ರೂಸ್, ಡಾ. ಅನಿಬೆಸೆಂಟ್, ಗೋಪಾಲಕೃಷ್ಣಗೋಖಲೆ, ಜಿ.ಕೆ.ದೇವಧರ್ ಮೊದಲಾದವರು ಭೇಟಿ ನೀಡಿದ್ದರು.

೮. ರಂಗರಾವ್ ತಮ್ಮ ಉಯಿಲಿನಲ್ಲಿ ಏನು ಬರೆದಿದ್ದರು?
ರಂಗರಾವ್ ಅವರು ತಮ್ಮ ಕಡೆಯ ಆಸೆಯನ್ನು ತಮ್ಮ ವಿಲ್ ನಲ್ಲಿ “ಅಸ್ಪೃಶ್ಯಜನಾಂಗದಲ್ಲೇ ಅತಿಯಾಗಿ ಹಿಂದುಳಿದವರೆನಿಸಿದ ಜಾಡಮಾಲಿಗಳು ನನ್ನ ಪಾರ್ಥಿವಶರೀರಕ್ಕೆ ಶವಸಂಸ್ಕಾರ ಮಾಡಬೇಕು. ಆಗಮಾತ್ರ ನನಗೆ ಚಿರಶಾಂತಿ ದೊರೆಯುವುದು” ಎಂದು ಬರೆದಿದ್ದರು.

೯. ಗಾಂಧಿಯವರು ರಂಗರಾವ್ ಬಗ್ಗೆ ಏನು ಹೇಳಿದರು?
ಮಹಾತ್ಮಾಗಾಂಧಿಯವರು 1934 ಫೆಬ್ರವರಿ 24ರಂದು ಮಂಗಳೂರಿಗೆ ಬಂದಿದ್ದಾಗ ಡಿ.ಸಿ.ಎಂ. ಸಂಸ್ಥೆಗೆ ಭೇಟಿನೀಡಿದರು. ರಂಗರಾವ್ ಅವರ ಸೇವಾಕಾರ್ಯಗಳನ್ನು ಕಂಡು ಅತ್ಯಂತ ಸಂತುಷ್ಟರಾಗಿ ಅದೇ ದಿನ ಸಂಜೆ ಸಾರ್ವಜನಿಕ ಸಭೆಯಲ್ಲಿ ಪೂಜ್ಯ ರಂಗರಾವ್ ಅವರಿಂದ ಸಾರ್ವಜನಿಕ ಸೇವಾ ನಿಷ್ಠೆಯನ್ನು ಮನಗಾಣಿಸಿಕೊಂಡೆ. ನಮಗೆ ಉತ್ತಮ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದ್ದಾರೆ.  ಅಸ್ಪೃಶ್ಯ ಜನಾಂಗದ ಪುನರುದ್ಧಾರ ಕಾರ್ಯದಲ್ಲಿ ಮುನ್ನಡೆದ ಇವರು ನನಗೆ ಸ್ಫೂರ್ತಿ. ಮಾರ್ಗದರ್ಶಕರು, ಅಸ್ಪೃಶ್ಯತಾ ನಿವಾರಣ ಕಾರ್ಯದಲ್ಲಿ ನಿಜವಾಗಿಯೂ ನನ್ನ ಗುರುಗಳು ಎಂದು ಘೋಷಿಸಿದರು.


ಐದಾರು ವಾಕ್ಯಗಳಲ್ಲಿ ಉತ್ತರಿಸಿ.

೧. ರಂಗರಾವ್ ಅಸ್ಪೃಶ್ಯರ ಶಿಕ್ಷಣಕ್ಕಾಗಿ ನೀಡಿದ ಕೊಡುಗೆಯೇನು? ವಿವರಿಸಿ.

ರಂಗರಾವ್ ಅವರು ಅಸ್ಪೃಶ್ಯರ ಶಿಕ್ಷಣಕ್ಕಾಗಿ ಡಿ.ಸಿ.ಎಂ. ಶಾಲೆಗಳನ್ನು ಮಂಗಳೂರಿನ ಕಂಕನಾಡಿ, ಮೂಲ್ಕಿ, ಬೋಳೂರು,ಉಡುಪಿ, ಬನ್ನಂಜೆ, ನೇಜಾರು, ಅತ್ತಾವರ ಬಾಬುಗುಡ್ಡೆ ದಡ್ಡಲ್ ಕಾಡುಗಳಲ್ಲಿ ಉಚಿತ ಶಾಲೆಗಳನ್ನು ತೆರೆದರು. ಈ ಶಾಲೆಗಳನ್ನು ಪಂಚಮಶಾಲೆಗಳು ಎಂದು ಕರೆಯುತ್ತಿದ್ದರು.  ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆಮಾಡಿ, ಮಕ್ಕಳು ಶಾಲೆಗೆ ತಪ್ಪದೆ ಬರುವಂತೆ ಪ್ರೋತ್ಸಾಹಿಸಲು ದಿನಕ್ಕೆ ೨ಪೈಸೆ ನಗದು ಪ್ರೋತ್ಸಾಹಧನವನ್ನು ಮಕ್ಕಳ ತಂದೆತಾಯಿಗೆ ನೀಡುತ್ತಿದ್ದರು. ಶೇಡಿಗುಡ್ಡೆಯಲ್ಲಿ ಕೈಗಾರಿಕಾತರಬೇತಿ ಶಾಲೆಯನ್ನು ಆರಂಭಿಸಿ  ಪ್ರಾರಂಭಿಸಿದರು. ಜೀವ ಬೆದರಿಕೆ ಬಂದರೂ ಕುಗ್ಗದೆ ತಾವು ಸ್ಥಾಪಿಸಿದ್ದ ಡಿ.ಸಿ.ಎಂ ಮಿಷನ್ ಶಾಲೆಗಳಲ್ಲಿ ಮತ್ತು ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಬಡಗಿ, ನೇಯ್ಗೆ, ತೋಟಗಾರಿಕೆ ಕಸೂತಿ, ರೇಷ್ಮೆಹುಳುಸಾಕಣೆ ಮೊದಲಾದ ವೃತ್ತಿಗಳನ್ನು ಅವಲಂಬಿಸಲು ಅಗತ್ಯವಾದ ತರಬೇತಿ ಕೊಡಿಸಿದರು. ಸ್ವಾವಲಂಬಿ ಜೀವನಕ್ಕೆ ಆಗತ್ಯವಾದ ತರಬೇತಿ ನೀಡಿ ಆತ್ಮಗೌರವದ ಗಂಜಿಊಟವೇ ದೊಡ್ಡದೆಂದು ತೋರಿಸಿಕೊಟ್ಟರು.

೨. ರಂಗರಾವ್ ಅಸ್ಪೃಶ್ಯರನ್ನು ಶಿಕ್ಷಣ ಪಡೆಯಲು ಮನಸ್ಸು ಗೆದ್ದ ಬಗೆಯನ್ನು ತಿಳಿಸಿ.
೧೮೮೮ರಲ್ಲಿ ಕೋರ್ಟ್ ನಲ್ಲಿ ನಡೆದ ಘಟನೆ ರಂಗರಾವ್ ಅವರು ತಮ್ಮ ಜೀವನವೆಲ್ಲ ಅಸ್ಪೃಶ್ಯರ ಉದ್ಧಾರಕ್ಕಾಗಿ ವಿನಿಯೋಗಿಸಲು ನಿಶ್ಚಯಿಸುವಂತೆ ಆಯಿತು. ಪ್ರಗತಿಗೆ ವಿದ್ಯೆಯೇ ಮೂಲ ಎಂದು ಶೋಷಿತರಿಗೆ ವಿದ್ಯೆನೀಡುವ ಬಗ್ಗೆ ಚಿಂತಿಸಿ ಡಿಸಿಎಂ ಶಾಲೆಗಳನ್ನು ತೆರೆದುಶಿಕ್ಷಣ ನೀಡುತ್ತಿದ್ದರು. ರಂಗರಾವ್ ಅವರು ಅಸ್ಪೃಶ್ಯರ ಮಕ್ಕಳ ಮೈ-ಕೈತೊಳೆದು ಅವರನ್ನು ಶುಚಿಗೊಳಿಸುತ್ತಿದ್ದರು. ದಲಿತರ ಮನೆಗಳಿಗೆ ಹೋಗಿ ಮಕ್ಕಳ ತಲೆಯನ್ನು ನೇವರಿಸಿ, ಅವರ ಜೊತೆ ಕುಳಿತು ಊಟಮಾಡುತ್ತಿದ್ದರು.  ಅಸ್ಪೃಶ್ಯರ ಹಟ್ಟಿಗಳಲ್ಲಿ ಮಲಗಿ ಅವರ ಮನಸ್ಸುಗೆದ್ದರು. ಮಕ್ಕಳು ಶಾಲೆಗೆ ಬರುವಂತೆ ಮನ ಒಲಿಸಿದರು. ಇದರ ಫಲವಾಗಿ ಬಹುಸಂಖ್ಯಾತ ದಲಿತ ಜನಸಮುದಾಯದ ಪ್ರತಿಭೆಗಳು ಬೆಳಕಿಗೆ ಬರತೊಡಗಿದವು. ಅನ್ನಕ್ಕಾಗಿ ಧಣಿಗಳ ಮನೆಗಳಲ್ಲಿ ಬಂಧಿಯಾಗಿದ್ದ ನೂರಾರು ಜೀತದಾಳುಗಳನ್ನು ವಿಮುಕ್ತಿಗೊಳಿಸಿದ್ದರು.

೩. ರಂಗರಾವ್ ಅವರ ಸಾಮಾಜಿಕ ಸುಧಾರಣೆಯ ಕೊಡುಗೆಗಳೇನು?
ಸಾಮಾಜಿಕ ಸುಧಾರಣಾವಾದಿ ಚಳುವಳಿಯ ಮೊದಲ ತಲೆಮಾರಿನ ವ್ಯಕ್ತಿಗಳಲ್ಲಿ ಕುದ್ಮುಲ್ ರಂಗರಾವ್ ಪ್ರಮುಖರು. ಸಾರಸ್ವತ ಬ್ರಾಹ್ಮಣ ಜಾತಿಯವರಿಂದ ಬಹಿಷ್ಕಾರಕ್ಕೆ ಗುರಿಯಾಗಿದ್ದರೂ, ಕ್ಷೌರಿಕರು,ಅಗಸರುಕೂಡ ಇವರ ಕೆಲಸಮಾಡಲು ನಿರಾಕರಿಸುವಂತಹ ವಾತಾವರಣ ಇದ್ದರೂ, ಅಪಮಾನ, ಕಿರುಕುಳಗಳನ್ನು ಸಹಿಸುತ್ತಾ,ದಲಿತರ, ಅಸ್ಪೃಶ್ಯರ ಏಳಿಗೆಗಾಗಿ ಶ್ರಮಿಸಿ ಶೋಷಿತರನ್ನುಮುಖ್ಯವಾಹಿನಿಗೆ ತರುವ ಕೆಲಸ ಮಾಡಿದರು.

ಶಾಲೆ, ಕೈಗಾರಿಕಾತರಬೇತಿಕೇಂದ್ರಗಳು, ವಿದ್ಯಾರ್ಥಿನಿಲಯಗಳು, ಅಬಲೆಯರು ಮತ್ತು ವಿಧವೆಯರ ವಿದ್ಯಾಭ್ಯಾಸಕ್ಕಾಗಿ ಆಶ್ರಮಗಳನ್ನು ತೆರೆದರು. ವಿಧವೆಯರ, ದೇವದಾಸಿಯರ ಮರುವಿವಾಹ, ಅಂತರಜಾತಿ ವಿವಾಹಗಳನ್ನು ಏರ್ಪಡಿಸಿದರು. ದಲಿತರು ತಮ್ಮ ದಾಸ್ಯದ ಸಂಕೋಲೆಗಳನ್ನು ಕಳಚಿಕೊಳ್ಳಲು ಅಗತ್ಯವಾದ ಯೋಜನೆಗಳನ್ನು ರೂಪಿಸಿ ಕೈಗೆತ್ತಿಕೊಂಡರು ವಿರೋಧ , ಹಣದ ಬೆಂಬಲ ಇಲ್ಲದಾಗ್ಯೂ ಪತ್ರಿಕೆ, ರೈಲು, ಬಸ್ಸುಗಳಿಲ್ಲ ಆ ಕಾಲದಲ್ಲಿ ಕಾಲ್ನಡಿಗೆಯಲಿ ಊರೂರು ಅಲೆದು ದಲಿತರ ಧಮನಿಗಳಲ್ಲಿ ಹೊಸ ಚೈತನ್ಯ ತುಂಬಿದರು.
ದಲಿತ ಸಮಾಜಕ್ಕೆ ರಾಜಕೀಯ ಮೀಸಲಾತಿ ಒದಗಿಸಿದರು. ಹೀಗೆ ಸಾಮಾಜಿಕ ಸುಧಾರಣೆಯ ಕೊಡುಗೆ ನೀಡಿದ್ದಾರೆ.



~~~~~~ಓಂ~~~~~~

1 comment: