Sunday, June 29, 2014

ದೇವರಿಗೊಂದು ಅರ್ಜಿ

ಪದ್ಯಭಾಗ- 14
ದೇವರಿಗೊಂದು ಅರ್ಜಿ
ಲಕ್ಕೂರು ಆನಂದ
ಸಾರಾಂಶ: ಭಾರತೀಯ ಸಮಾಜದಲ್ಲಿ ಜಾತಿ ಎಂಬ ಪಿಡುಗು ಇರುವುದೆಷ್ಟು ಸಹಜವೋ ಅದನ್ನು ಉಳಿಸಿಕೊಳ್ಳಲು ಹೋರಾಡುವವರು ಅಷ್ಟೇ ಸಹಜ. ಜಾತಿಹೀನರ ಬಾಳು ಎಷ್ಟು ಹೀನವಾಗಿದೆ ಎಂಬುದನ್ನು ಚಿತ್ರಿಸುತ್ತಾ ಪ್ರಧಾನ ಸಂಸ್ಕೃತಿಯ ಭಾಗವಾಗದೆ ಹಾಗೆಯೇ ಉಳಿಯುವ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಕವಿಯು ಭೂಮಿಯಮೇಲೆ ನೋವಿನಿಂದ ಉರಿಯುತ್ತಿರುವ ಪಾದವನ್ನು ಊರಿ ನಡೆಯುವಾಗ ಯಾರೋ ಕವಿಯ ತಲೆಯಮೇಲೆ ನಡೆದಂತೆ ಆಗುತ್ತದೆ. ಯಾರಾದರೂ ಕೂಗಿ ಕರೆದರೆ ಬಂದೂಕು, ಬಾಂಬು ಎಂದೇ ಕೇಳುತ್ತದೆ.
ತನ್ನದಲ್ಲದ(ತನ್ನಜಾತಿಯವರದಲ್ಲದ) ಯಾರದೋ ಸಮಾಧಿಗಳನ್ನು ಮೃದುವಾಗಿ ಸವರುತ್ತಿದ್ದರೆ ಜೀವಂತ ವ್ಯಕ್ತಿಗಳನ್ನು ಬಚ್ಚಿಟ್ಟುಕೊಂಡ ಗೋಡೆಗಳು ನನ್ನ ಕೈಗುರುತುಗಳನ್ನೂ ಅಪ್ಪಿಕೊಳ್ಳುತ್ತಿವೆ. (ನಮ್ಮನ್ನು ಮುಟ್ಟಿದವ ಇವನೇ ಎಂದು ದೂರು ಹೇಳಲು ಕೈಗುರುತುಗಳನ್ನು ಅಪ್ಪಿಕೊಂಡಿರಬಹುದು) ಮತ್ತೆ ಗುಲಾಬಿಯನ್ನು ಮುತ್ತಿಡಲುಹೋದಾಗಲೂ ಜಾತಿ ಮತದ ಪ್ರಶ್ನೆಗಳು ಏಳುತ್ತವೆ.
ಒಂದಿಷ್ಟು ಸಮಾಧಾನಗೊಳ್ಳೋಣವೆಂದು ಬೊಗಸೆಯಲ್ಲಿ ನೀರುತುಂಬಿಕೊಂಡು, ಚಂದಿರನನ್ನು ಬಂಧಿಸಿ ಕುಡಿಯೋಣವೆಂದರೆ ಬೊಗಸೆಯೊಳಗಿನ ನೀರು ಬೆರಳಸಂದಿಯಿಂದ ಜಾರಿಹೋಗಿ ಚಂದಿರನ ಬಿಂಬ ಕೈಗೆ ಅಂಟಿಕೊಳ್ಳುತ್ತದೆ.
ಇವುಗಳಿಂದ ದೂರವಾಗಿ ಎಲ್ಲಾದರೂ ಹೋಗೋಣವೆಂದು ಹೋದರೆ ಅವರಿವರ ಉದಾಸೀನದ ಮಾತುಗಳು ಜೀವ ಹಿಂಡುತ್ತವೆ. ಎಲ್ಲವನ್ನು ಬಿಟ್ಟು ಸ್ಮಶಾನದ ಅಮೃತಶಿಲೆಯಮೇಲೆ ಮಲಗಿದರೆ ಅದೂ ಕೂಡಮುಳ್ಳಾಗಿ ಕಾಡುತ್ತದೆ.
ಹಾಗಾಗಿ ನನ್ನನ್ನು ಕ್ಷಮಿಸಿಬಿಡು ದೇವರೇ ಇವರನ್ನೆಲ್ಲಾ ಮುಟ್ಟಿ ಅಪವಿತ್ರವಾಗುವುದಕ್ಕಿಂತ ಇವರನ್ನು ಮುಟ್ಟಿಸಿಕೊಳ್ಳದೆಯೇ ಪವಿತ್ರನಾಗಿ ಉಳಿಯುತ್ತೇನೆ. ಎಂದು ದೇವರಿಗೆ ಒಂದು ಅರ್ಜಿಯನ್ನು ಕವಿ ಲಕ್ಕೂರು ಆನಂದ ಬರೆದಿದ್ದಾರೆ.

ಸಂದರ್ಭ ಸೂಚಿಸಿ ವಿವರಿಸಿ :
೧. ನನ್ನ ಕೈ ಗುರುತುಗಳನ್ನು ಅಪ್ಪಿಕೊಳ್ಳುತ್ತಿದೆ.
ಲಕ್ಕೂರು ಆನಂದರ ದೇವರಿಗೊಂದು ಅರ್ಜಿ ಎಂಬ ಕವಿತೆಯಿಂದ ಈ ಮಾತನ್ನು ಆರಿಸಿಕೊಳ್ಳಲಾಗಿದೆ. ನಮ್ಮದಲ್ಲದ ಯಾರದೋ ಸಮಾಧಿಯನ್ನು ಸವರುವಾಗಲೂ ಮೈಲಿಗೆಯ ಸೂತಕ ಸಮಾಧಿಯನ್ನೂ ಬಿಡದು. ಶೋಷಣೆಯ ಮುಖವಾಡ, ಗೋಡೆಯ ಹಿಂದಿನ ದನಿಗಳು ಕವಿಯ ಕೈಗುರುತುಗಳನ್ನು ಅಪ್ಪಿಕೊಂಡು ಮೈಲಿಗೆ ಮಾಡಿದ್ದನ್ನು ಪ್ರಕಟಿಸುತ್ತವೆಯಂತೆ. ಅಸ್ಪೃಷ್ಯತೆಯ ಪರಮಾವಧಿಯನ್ನು ಇಲ್ಲಿ ಸೂಚಿಸುತ್ತಾರೆ.
೨. ಯಾವ ಕುಲ? ಯಾವ ಮತ?
ಲಕ್ಕೂರು ಆನಂದರ ದೇವರಿಗೊಂದು ಅರ್ಜಿ ಎಂಬ ಕವಿತೆಯಿಂದ ಈ ಮಾತನ್ನು ಆರಿಸಿಕೊಳ್ಳಲಾಗಿದೆ. ಸಮಾಧಿಯನ್ನು ಸವರಲು ಹೋಗಿ ಅಸ್ಪೃಷ್ಯ ಎನಿಸಿಕೊಂಡು ದೂರಬಂದರೂ ಅಲ್ಲೇ ಕಂಡ ಗುಲಾಬಿಗೆ ಮುತ್ತಿಡಹೋದರೆ ಅದೂಕೂಡ ನೀನು ಯಾವಕುಲ? ಯಾವ ಜಾತಿ? ಯಾವ ಮತ ಎಂಬ ಪ್ರಶ್ನೆಯನ್ನೇ ಕೇಳುತ್ತಿದೆ. ಹೀಗೆ ಜಾತಿಯಲ್ಲಿ ಕೆಳವರ್ಗಕ್ಕೆ ಸೇರಿದವರನ್ನು ಸಕಲ ಚರಾಚರವಸ್ತುಗಳೂ ಧಿಕ್ಕರಿಸುತ್ತವೆ ಜಾತಿ ಕುಲವನ್ನು ಮುಂದುಮಾಡಿ ನಿರಾಕರಿಸುತ್ತವೆ ಎಂದು ಹೇಳುತ್ತಾರೆ.
೩. ನಗುವ ಚಂದಿರ ಕೈಗಂಟಿಕೊಳ್ಳುತ್ತಿದ್ದಾನೆ.
ಲಕ್ಕೂರು ಆನಂದರ ದೇವರಿಗೊಂದು ಅರ್ಜಿ ಎಂಬ ಕವಿತೆಯಿಂದ ಈ ಮಾತನ್ನು ಆರಿಸಿಕೊಳ್ಳಲಾಗಿದೆ. ಅಸಮಾನತೆಯಿಂದ ಬೇಸತ್ತು ಕಡೆಗೆ ಒಂದಷ್ಟುಸಮಾಧಾನ ಪಡೆಯಲು ಆಗಸದ ಚಂದಿರನನ್ನು ಕೈಯೊಳಗಣ ನೀರಲ್ಲಿಬಂಧಿಸಿ ಕುಡಿಯೋಣವೆಂದು  ಬೊಗಸೆಯೊಳಗೆ ನೀರು ತುಂಬಿಕೊಂಡರೆ ನೀರು ಬೆರಳ ಸಂದಿನಿಂದ ಸೋರಿಹೋಗಿ ನಗುವ ಚಂದಿರ ಕೈಗೆ ಅಂಟಿಕೊಳ್ಳುತ್ತಾನೆ. ಎನ್ನುತ್ತಾರೆ. ಎಟುಕದ್ದನ್ನು ಪಡೆಯಬೇಕೆಂಬ ಮನೋಭಾವ ಇಲ್ಲಿ ವ್ಯಕ್ತವಾಗಿದೆ.
೪. ಮುಟ್ಟಿಸಿಕೊಳ್ಳದೆ ಪವಿತ್ರನಾಗಬೇಕೆಂದು ಕೊಂಡಿದ್ದೇನೆ?
ಲಕ್ಕೂರು ಆನಂದರ ದೇವರಿಗೊಂದು ಅರ್ಜಿ ಎಂಬ ಕವಿತೆಯಿಂದ ಈ ಮಾತನ್ನು ಆರಿಸಿಕೊಳ್ಳಲಾಗಿದೆ. ತನ್ನನ್ನು ಜಾತಿಯ ಕಾರಣಕ್ಕಾಗಿ ನಿರಾಕರಿಸುವ ಜಗತ್ತನ್ನು ತಾನು ತಿರಸ್ಕರಿಸುವುದಾಗಿ ಹೇಳುವ ಕವಿ ಮುಟ್ಟಿದರೆ ಅವು ಅಪವಿತ್ರವಾಗುವ ಬದಲು ಅವುಗಳನ್ನು ಮುಟ್ಟದೆಯೇ ತಾವು ಪವಿತ್ರವಾಗಿ ಉಳಿದು ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಳ್ಳುವುದಾಗಿ ದೇವರಿಗೆ ಅರ್ಜಿ ಬರೆಯುತ್ತಾರೆ.

ಒಂದು ವಾಕ್ಯದಲ್ಲಿ ಉತ್ತರಿಸಿ.
೧. ತನ್ನನ್ನು ಕ್ಷಮಿಸುವಂತೆ ಕವಿ ಯಾರಲ್ಲಿ ಕೇಳುತ್ತಾನೆ?
ತನ್ನನ್ನು ಕ್ಷಮಿಸುವಂತೆ ಕವಿ ದೇವರಲ್ಲಿ ಕೇಳುತ್ತಾನೆ

೨. ಸಮಾಧಿಗಳು ಯಾರನ್ನು ಬಚ್ಚಿಟ್ಟುಕೊಂಡಿವೆ?
ಜೀವಂತ ವ್ಯಕ್ತಿಗಳನ್ನು ಬಚ್ಚಿಟ್ಟಿಕೊಂಡಿವೆ.

೩. ಬೊಗಸೆಯಲ್ಲಿ ಯಾರನ್ನು ಬಂಧಿಸಲು ಕವಿ ಬಯಸಿದ್ದಾನೆ?
ಬೊಗಸೆಯಲ್ಲಿ ಚಂದ್ರನನ್ನು ಬಂಧಿಸಲು ಬಯಸಿದ್ದಾನೆ.

೪. ಕವಿಯ ಗುಂಡಿಗೆಯನ್ನು ಹಿಂಡುತ್ತಿರುವುದು ಯಾವುದು?
ಅವರಿವರು ಬಿಟ್ಟಂತ ಬಿಸಿಯುಸಿರು ಕವಿಯ ಗುಂಡಿಗೆಯನ್ನು ಹಿಂಡುತ್ತಿವೆ.

೫. ಕವಿಯ ಬೆನ್ನನ್ನು ಮುಳ್ಳುಗಳಾಗಿ ಚುಚ್ಚುತ್ತಿರುವುದೇನು?
ನಗುವ ಅಮೃತಶಿಲೆಯ ಸಮಾಧಿಗಳೂಕೂಡ ಮುಳ್ಳುಗಳಾಗಿ ಚುಚ್ಚುತ್ತಿವೆ.



ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಧರೆಯ ಮೇಲಿನ ನಡಿಗೆ ಹಾಗೂ ಕರೆಯುವ ಧ್ವನಿ ಕವಿಗೆ ಹೇಗೆ ಭಾಸವಾಗುತ್ತಿದೆ?
ಧರೆಯಮೇಲೆ ತನ್ನ ಉರಿಯುವ ಪಾದವನ್ನು ಊರಿ ನಡೆಯುವಾಗ ಯಾರೋ ತನ್ನ ತಲೆಯಮೇಲೆ ನಡೆದಂತೆ ಆಗುತ್ತದೆ ಎಂದು ಭಾವಿಸುತ್ತಾನೆ. ಅಲ್ಲದೆ ಯಾರಾದರೂ ತನ್ನನ್ನು ಕೂಗಿ ಕರೆದಾಗ ಬಂದೂಕು, ಬಾಂಬು ಎಂದು ಕರೆದಂತೆ ಕೇಳಿಸುತ್ತದೆ ಎಂದು ಕವಿ ಹೇಳುತ್ತಾನೆ.

೨. ನಗುವ ಚಂದಿರ ಏಕೆ ಕೈಗಂಟಿಕೊಳ್ಳುತ್ತಿದ್ದಾನೆ?
ಎಲ್ಲಿಯೂ ಸಮಾಧಾನ ಸಿಗದೆ,  ಅಸಮಾನತೆಯಿಂದ ಬೇಸತ್ತು ಕಡೆಗೆ ಒಂದಷ್ಟುಸಮಾಧಾನ ಪಡೆಯಲು ಆಗಸದ ಚಂದಿರನನ್ನು ಕೈಯೊಳಗಣ ನೀರಲ್ಲಿಬಂಧಿಸಿ ಕುಡಿಯೋಣವೆಂದು  ಬೊಗಸೆಯೊಳಗೆ ನೀರು ತುಂಬಿಕೊಂಡರೆ ನೀರು ಬೆರಳ ಸಂದಿನಿಂದ ಸೋರಿಹೋಗಿ ನಗುವ ಚಂದಿರ ಕೈಗೆ ಅಂಟಿಕೊಳ್ಳುತ್ತಾನೆ. ಎಂದು ಹೇಳುವ ಕವಿಯಲ್ಲಿ ಎಟುಕದ್ದನ್ನು ಪಡೆಯಬೇಕೆಂಬ ಮನೋಭಾವ ವ್ಯಕ್ತವಾಗಿದೆ.

೩. ದಿಕ್ಕು ಬಂದ ಕಡೆಗೆ ನಡೆದ ಕವಿಗೆ ಆದ ಅನುಭವವೇನು?
ಯಾವುದೂ ಬೇಡ ಎಂದು ದೂರಕ್ಕೆ ಹೋಗೋಣ ಎಂದು ದಿಕ್ಕು ಬಂದ ಕಡೆ ನಡೆದರೆ ಅವರಿವರು ಬಿಟ್ಟ ಬಿಸಿಯುಸಿರು , ಜನರ ಉದಾಸೀನತೆ ಕವಿಯ ಜೀವ ಹಿಂಡುತ್ತದೆ. ಎಂದು ಹೇಳುತ್ತಾರೆ.


೪. ಕವಿಯನ್ನು ಚುಚ್ಚುತ್ತಿರುವುದು ಯಾವುದು. ಏಕೆ?
ಮಸಣದಲ್ಲಿ ಅಮೃತಶಿಲೆಯ ಸಮಾಧಿಯಮೇಲೆ ಮಲಗಿದರೆ ಅಮೃತಶಿಲೆಯೂ ಮುಳ್ಳುಗಳಾಗಿ ಬೆನ್ನನ್ನು ಚುಚ್ಚುತ್ತದೆ. ಅಸ್ಪೃಷ್ಯತೆಯ ತಿರಸ್ಕಾರದಿಂದಾಗಿ ಮುಳ್ಳಾಗಿವೆ ಎಂದು ಕವಿಯ ಭಾವನೆ.

ಐದಾರು ವಾಕ್ಯಗಳಲ್ಲಿ ಉತ್ತರಿಸಿ.

೧. ಜಗತು ತನ್ನನ್ನು ಕೀಳಾಗಿ ಕಂಡು ನಿರಾಕರಿಸುತ್ತಿರುವ ಬಗೆಯನ್ನು ಕವಿ ಹೇಗೆ ಚಿತ್ರಿಸಿದ್ದಾನೆ?
ಭೂಮಿಯಮೇಲೆ ತನ್ನ ಹೆಜ್ಜೆಯನ್ನು ಊರಿ ನಿಲ್ಲಲು ಬಿಡದಂತ ಜನ . ತಾನು ನಡೆದಾಡಿದರೆ ತನ್ನ ತಲೆಯಮೇಲೆ ಯಾರೋ ನಡೆದಾಡಿದಂತೆ ಭಾವಿಸುವ ಕವಿಯನ್ನು ಯಾರಾದರೂ ಕೂಗಿದರೂ ಬಂದೂಕು , ಬಾಂಬು ಎಂಬ ದನಿಯೇ ಕೇಳುತ್ತದೆ ಎನ್ನುತ್ತಾರೆ.  ಸಮಾಧಿಯಮೇಲೆ ಸವರಲು ಹೋದಾಗ , ಗುಲಾಬಿಯನ್ನು ಮುತ್ತಿಡಲುಹೋದಾಗ ಜಾತಿ, ಮತಗಳ ಪ್ರಶ್ನೆ ಏಳುತ್ತದೆ. ದೂರಕ್ಕೆ ನಡೆದರೆ ಅವರಿವರ ಉದಾಸೀನದ ನೋಡ ಜೀವ ಹಿಂಡುತ್ತದೆ . ಎಲ್ಲ ಬಿಟ್ಟು ಮಸಣದ ಅಮೃತಶಿಲೆಯ ಸಮಾಧಿಯಮೇಲೆ ಮಲಗಿದರೆ ಅದೂಕೂಡ ಮುಳ್ಳಾಗಿ ಕಾಡುತ್ತದೆ. ಹೀಗೆ ಎಲ್ಲವೂ ಜಾತಿಯಕಾರಣಕ್ಕಾಗಿ ತನ್ನನ್ನು ತಿರಸ್ಕರಿಸುವುದನ್ನು ಕವಿ ಹೇಳುತ್ತಾರೆ.


೨. ಮುಟ್ಟಿಸಿಕೊಳ್ಳದೆ ಪವಿತ್ರಾನಾಗಿರಬೇಕೆಂದು ಹೇಳುವ ಕವಿಯ ಮಾತಿನ ಅರ್ಥವೇನು? ವಿವರಿಸಿ.
ಜಾತಿಯಕಾರಣಕ್ಕಾಗಿ ತಿರಸ್ಕಾರಕ್ಕೆ ಒಳಗಾದ ಕವಿ ಮುಟ್ಟಿದರೆ ಅಪವಿತ್ರ ಎನ್ನುವವರಿಂದ ಮುಟ್ಟಿಸಿಕೊಂಡು ತಾನೇ ಅಪವಿತ್ರವಾಗಿರುವುದಾಗಿ ಹೇಳುತ್ತಾ ಯಾವುದನ್ನೂ ಮುಟ್ಟಿಸಿಕೊಳ್ಳದೆ ತಾನು ಪವಿತ್ರವಾಗಿ ಉಳಿಯಬೇಕೆಂದು ಹೇಳುತ್ತಾನೆ. ಹುಟ್ಟಿನಿಂದ ಹೀಗೆ ಅಪಮಾನಕ್ಕೊಳಗಾಗಿ ಈಗ ಎಲ್ಲವನ್ನು ತಿರಸ್ಕರಿಸುವ ದಿಟ್ಟತನ ತೋರುತ್ತಿರುವುದರಿಂದ ತನ್ನನ್ನು ಕ್ಷಮಿಸು ಎಂದು ದೇವರಿಗೆ ಕೇಳುತ್ತಿದ್ದಾನೆ. ತನ್ನದಾರಿಯೇ ಬೇರೆ ತಾನೇ ಬೇರೆ ಎಂದು ಅಹಂಕಾರವೂ ಇಲ್ಲಿ ಕಂಡುಬರುತ್ತಿದೆ.

೩. ದೇವರಿಗೊಂದು ಅರ್ಜಿ ಕವಿತೆಯ ಆಶಯವನ್ನು ವಿವರಿಸಿ
ಜಾತಿಸಮಸ್ಯೆಗಳು ಅಂದಿನಿಂದ ಇಂದಿನವರೆಗೂ ಎಲ್ಲರನ್ನೂ ಕಾಡುತ್ತಿವೆ. ಬದಲಾದ ಇಂದಿನ ಸಮಯದಲ್ಲೂ ಈ ಸಮಸ್ಯೆ ಕಾಡುತ್ತಿರುವುದು ದುರಂತವೇಸರಿ. ಭಾರತೀಯ ಸಮಾಜದಲ್ಲಿ ಜಾತಿ ಎಂಬ ಪಿಡುಗು ಇರುವುದೆಷ್ಟು ಸಹಜವೋ ಅದನ್ನು ಉಳಿಸಿಕೊಳ್ಳಲು ಹೋರಾಡುವವರು ಅಷ್ಟೇ ಸಹಜ. ಜಾತಿಹೀನರ ಬಾಳು ಎಷ್ಟು ಹೀನವಾಗಿದೆ ಎಂಬುದನ್ನು ಚಿತ್ರಿಸುತ್ತಾ ಪ್ರಧಾನ ಸಂಸ್ಕೃತಿಯ ಭಾಗವಾಗದೆ ಹಾಗೆಯೇ ಉಳಿಯುವ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಹುಟ್ಟಿನಿಂದ ಹೀಗೆ ಅಪಮಾನಕ್ಕೊಳಗಾಗಿ ಈಗ ಎಲ್ಲವನ್ನು ತಿರಸ್ಕರಿಸುವ ದಿಟ್ಟತನ ತೋರುತ್ತಿರುವುದರಿಂದ ತನ್ನನ್ನು ಕ್ಷಮಿಸು ಎಂದು ದೇವರಿಗೆ ಕೇಳುತ್ತಿದ್ದಾನೆ.

~~~ಓಂ~~~

4 comments:

  1. ಒಳ್ಳೆಯ ಕೆಲಸ. ಧನ್ಯವಾದಗಳು

    ReplyDelete
  2. Hsuqikwknsbshzhhjwkksoak2n2begdxyieiejshzggduejbsbzbzzjn

    ReplyDelete
  3. ಪಂದ್ಯದ ಸಾರಾಂಶ ಸೂಪರ್

    ReplyDelete