Sunday, June 29, 2014

ಹಲುಬಿದಳು ಕಲ್ಮರಂ ಕರಗುವಂತೆ

ಪದ್ಯ ಭಾಗ 4
ಹಲುಬಿದಳ್ ಕಲ್ಮರಂ ಕರಗುವಂತೆ
ಕವಿ ಲಕ್ಷ್ಮೀಶ  : ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ದೇವನೂರಿನವನು. ಉಪಮಾಲೋಲ, ಕವಿಚೂತವನ ಚೈತ್ರ , ಎಂಬ ಬಿರುದುಗಳಿವೆ. ವೈಶಂಪಾಯನ ಋಷಿಯ ಶಿಷ್ಯನಾದ ಜೈಮಿನಿ ಮುನಿಯು ರಚಿಸಿದ ಜೈಮಿನಿಭಾರತವನ್ನು ಕನ್ನಡದಲ್ಲಿ ರಚಿಸಿದ್ದಾನೆ.
ಸಾರಾಂಶ : ಜೈಮುನಿ ಮಹರ್ಷಿಯು ಜನಮೇಜಯನನ್ನು ಕುರಿತು ಹೇಳುತ್ತಿದ್ದಾನೆ. ಅರಸ ಕೇಳು ಲಕ್ಷ್ಮಣನು ಸೀತೆಯನ್ನು ವನಕ್ಕೆ ಕರೆದು ಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ರಥದ ಮೇಲಿದ್ದ ಪತಾಕೆಯೂ ಶ್ರೀರಾಮನು ತನ್ನ ಪತ್ನಿಯನ್ನು ತೊರೆಯುವುದು ಸರಿಯಾದ ನಿರ್ಣಯವಲ್ಲ ಎಂದು ತಲೆಗೊಡವುತ್ತಿದೆಯೇನೋ ಎಂಬಂತೆ ಅತ್ತಿತ್ತ ಆಡುತ್ತಿತ್ತು. ಜನರೂ ಕೂಡ ಇದು ಪರಮ ದಾರುಣಸಂಗತಿ ಎಂದು ತಮ್ಮತಮ್ಮೊಳಗೆ ಮಾತಾಡಿಕೊಳ್ಳುತ್ತಿದ್ದರು. ಲಕ್ಷ್ಮಣನು ವೇಗವಾಗಿ ರಥವನ್ನು ಗಂಗಾನದೀತೀರಕ್ಕೆ ತಂದನು. ಸೀತೆಯು ರಥದಿಂದ ಇಳಿದು ಗಂಗೆಗೆ ನಮಿಸಿದಳು. ನಂತರ ಲಕ್ಷ್ಮಣ ಹಾಗೂ ಸೀತೆ ನಾವಿಕರೊಡನೆ  ನಾವೆಯಲ್ಲಿ ಕುಳಿತು ಗಂಗೆಯನ್ನು ದಾಟಿದರು. ಸೀತೆಯನ್ನು ಕಾಡಿನಲ್ಲಿ ಬಿಡುವ ವಿಚಾರವಾಗಿ ಲಕ್ಷ್ಮಣ ಬಹಳವಾಗಿ ಮರುಗುತ್ತಿದ್ದನು.ಹೀಗೆ ಮುಂದೆ ಭೀಕರವಾದ , ಕಠಿಣತಮವಾದ , ದುರ್ಗಮವಾದ ಕಾಡಿನ ದಾರಿಯಲ್ಲಿ ಸಾಗುತ್ತಾ, ಇರಲು ಸದಾ ಸೂರ್ಯ, ಚಂದ್ರ ,ಅಗ್ನಿ, ಇಂದ್ರ , ವಿಷ್ಣು, ಶಿವ ಮೊದಲಾದವರ ಆವಾಸವಾಗಿದ್ದ, ಸೋಮಲತೆಗಳು , ಮೃದುವಾದ ಹುಲ್ಲುಗಳು, ಪೊದೆಗಳು, ಸುಂದರ ಕೊಳಗಳುಅಲ್ಲದೆ ಹವಳದಿಂದ ಕೂಡಿದ ಕಡಲಿನಂತೆ , ಸ್ವರ್ಗದಂತೆ, ಹಾಲ್ಗಡಲಿನಂತೆ , ಕೈಲಾಸಭೂಮಿಯಂತೆ ಕಂಗೊಳಿಸುತ್ತಿದ್ದ ಮಹಾ ಅಡವಿಯು ಇಂದು  ನರಿ, ಸಿಂಹ ,ಕೋತಿ, ಕರಡಿ , ಹುಲಿ, ನವಿಲು ಮೊದಲಾದ ಪಶುಪಕ್ಷಿಗಳಿಂದ , ಬೃಹತ್ ವೃಕ್ಷಗಳಿಂದ ಮುಳ್ಳುಗಳಿಂದ  ಕೂಡಿದ ಘೋರ ಅರಣ್ಯವಾಗಿ ತೋರುತ್ತಿರಲು ಸೀತೆಯು ಲಕ್ಷ್ಮಣಾ ಮುನಿಗಳ ತಪೋಭೂಮಿಗಳೆಲ್ಲಿ? , ಕುಟೀರಗೆಳೆಲ್ಲಿ? , ವೇದಘೋಷಗಳೆಲ್ಲಿ? ಹೋಮಧೂಮಗಳೆಲ್ಲಿ?,  ನನ್ನನ್ನೇಕೆ ಈ ಘೋರ ಅರಣ್ಯಕ್ಕೆ ಕರೆತಂದೆಎಂದು ಕೇಳಿದಳು.
ಸೀತೆಯ ಮಾತುಗಳನ್ನು ಕೇಳುತ್ತಲೇ ‘‘ದೇವೀ ನಿನಗಿನ್ನೂ ಹೇಳಿಲ್ಲ . ನಿನ್ನ ಮೇಲೆ ಅಪವಾದ ಬರಲು ಶ್ರೀರಾಮನು ಅದನ್ನು ಸಹಿಸಲಾರದೆ ನಿನ್ನನ್ನು ಕಾಡಿನಲ್ಲಿ ಬಿಟ್ಟುಬರುವಂತೆ ನನಗೆ ಆಜ್ಞಾಪಿಸಿದ್ದಾನೆ. ಅವನ ಮಾತನ್ನು ಮೀರಲಾರದೆ ಈ ಕಾಡಿಗೆ ನಿನ್ನೊಡನೆ ಬಂದಿದ್ದೇನೆ. ನೀನು ಇಲ್ಲಿಂದ ಎಲ್ಲಿಗಾದರೂ ಹೋಗು” ಎಂದು ಕಣ್ಣೀರನ್ನು ತುಂಬಿಕೊಂಡು ಹೇಳಿದ ಲಕ್ಷ್ಮಣನು ದುಃಖತಾಳದೆ ಬಿಕ್ಕಿ ಬಿಕ್ಕಿ ಅಳುತ್ತಾನೆ. ಅವನ ಮಾತುಗಳನ್ನು ಕೇಳುತ್ತಲೇ ಬಿರುಗಾಳಿಗೆ ಬೇರು ಕಿತ್ತು ಬೀಳುವ ಗೊನೆಬಿಟ್ಟ ಬಾಳೆಗಿಡದಂತೆ ಬಿದ್ದಳು. ಅವಳನ್ನು ಸಮಾಧಾನ ಪಡಿಸುತ್ತಾ ತನ್ನ ಉತ್ತರೀಯದಿಂದ  ಗಾಳಿಹಾಕುತ್ತಾ ರಾಮನಿಗೆ ಸಂದ ಸೇವೆ ಇದು ಎಂದು ಸೇವೆ ಮಾಡುತ್ತಿದ್ದನು. ಲಕ್ಷ್ಮಣನ ಉಪಚಾರಗಳಿಂದ ಎಚ್ಚರಗೊಂಡ ಸೀತೆಯು ರಾಮ ಒಬ್ಬನೇ ಇದ್ದಾನೆ , ನೀನು ಅವನ ಬಳಿಗೆ ಹೋಗು. ನನಗಾದರೂ ಗಿಡ-ಮರಗಳು , ಪಶು-ಪಕ್ಷಿಗಳ, ಉಗ್ರಜಂತುಗಳ ನೆರವಿದೆ, ಎಂದು ತಿಳಿಸುತ್ತಾಳೆ. ಆದರೂ ಶ್ರೀರಾಮನನ್ನು ಅಗಲಿರಬೇಕಲ್ಲ ಎಂದು ದುಃಖಿಸುತ್ತಾ ಭರತ ಶತ್ರುಘ್ನರು ಹನುಮಂತ, ಯಾರಾದರೂ ಈ ಕೆಲಸಕ್ಕೆ ಒಪ್ಪಿದರೆರಘುನಾಥ ಏಕಾಂಗಿಯಾಗಿರುತ್ತಾನೆ ಅವನಿಗೆ ಯಾರೂ ಇಲ್ಲ. ನೀನಾದರೂ ಹೋಗು ಅವನೊಂದಿಗೆ ಇರು. ಎಂದು ಹೇಳಿದಳು. ಕೊನೆಗೆ ತನಗೆ ತಾನೆ ಸಮಾಧಾನ ಮಾಡಿಕೊಳ್ಳುತ್ತಾ ಇದರಲ್ಲಿ ಕರುಣಾಳುವಾದ ರಾಘವನದ್ದು ಏನೂ ತಪ್ಪಿಲ್ಲ. ಕಡುಪಾಪಗಳನ್ನು ಮಾಡಿ  ಈ ಜನ್ಮದಲ್ಲಿ ಹೆಣ್ಣಾಗಿ ಜನಿಸಿರುವುದು ನನ್ನ ತಪ್ಪು. ನೀನು ಬೇಗನೆ ಹೋಗು ಎಂದು ದುಃಖಿಸುತ್ತಾಳೆ. ಆಗ ಲಕ್ಷ್ಮಣನುಪಂಚಭೂತಗಳು ದಿಕ್ ದೇವತೆಗಳಿಗೆ, ಭೂಮಿತಾಯಿಗೆ, ಧರ್ಮದೇವತೆಯಾದ ಗಂಗಾದೇವಿಗೆ ಪ್ರಾರ್ಥಿಸುತಾ ಕಾಡಿನ ಗಿಡ-ಮರ, ಪಶು-ಪಕ್ಷ್ಮಿ, ಕ್ರಿಮಿ-ಕೀಟಾದಿಗಳನ್ನೂ ಕುರಿತು ತನ್ನ ತಾಯಿ ಜಾನಕಿಯನ್ನು ನಿಮ್ಮ ಮಗಳಂತೆ ಸಲಹಿರಿ ಎಂದು ಬೇಡಿಕೊಳ್ಳುತ್ತಾನೆ. ಲಕ್ಷ್ಮಣನು ಅಲ್ಲಿಂದ ತೆರಳಿದಾಗ ಬುಡಕತ್ತರಿಸಿದ ಬಳ್ಳಿಯಂತೆ ಕುಸಿದು ಬೀಳುತ್ತಾಳೆ. ಮೈಕೈ ದೂಳಿನಿಂದ ಆವೃತವಾಗಿದ್ದು, ತಲೆಗೆದರಿಹೋಗಿದ್ದರೂ ಇದಾವುದರ ಪರಿವೆಯಿಲ್ಲದೆ ಸೀತೆಯು ಮಿಥಿಲೆಯ ರಾಜಕುಮಾರಿಯಾಗಿ ಜನಕನ ಮಗಳಾಗಿ, ದಶರಥನ ಸೊಸೆಯಾಗಿ ಶ್ರೀರಾಮನ ಪತ್ನಿಯಾಗಿದ್ದರೂ ತನಗೆ ಈ ಗತಿ ಬಂತಲ್ಲಾ ಅಯ್ಯೋ! ವಿಧಿಯೇ! ಎಂದು ಗೋಳಾಡಿದಳು  ಆಗ ಅಲ್ಲಿದ್ದ ಮೃಗ-ಪಕ್ಷಿ ಮೊದಲಾದ ಜೀವ-ಜಂತುಗಳು ಸೀತೆಯ ಸುತ್ತಲೂ ನಿಂದು ಅವಳ ದುಃಖದಲ್ಲಿ ಭಾಗಿಯಾದವು. ಗಿಡ-ಮರ-ಬಳ್ಳಿಗಳೂ ಬಾಡಿಸೊರಗಿದವು. ಸೀತೆಯ ಶೋಕಕ್ಕೆ ಕಲ್ಲುಕರಗುತ್ತಿದ್ದವು ಎಂದು ಕವಿ ಹೇಳುತ್ತಾ ಉತ್ತಮರ ನೋವಿಗೆ ಸ್ಪಂದಿಸದೇ ಇರಲು ಯಾರಿಗೆ ಸಾಧ್ಯ? ಎಂದಿದ್ದಾನೆ.
ಅದೇ ಸಮಯಕ್ಕೆ ಯಜ್ಞಕ್ಕೆ ಬೇಕಾದ ಕಟ್ಟಿಗೆಯನ್ನು ಹುಡುಕಿಕೊಂಡು ಶಿಷ್ಯರೊಡನೆ ಬಂದ ವಾಲ್ಮೀಕಿಮಹರ್ಷಿಯು ಸೀತೆಯನ್ನು ಕಂಡು ಸಮಾಧಾನ ಮಾಡುತ್ತಾ ನಿನ್ನ ಶೋಕಬಿಡು ಅವಳಿ ಮಕ್ಕಳ ತಾಯಿಯಾಗುವೆ. ಜನಕನಿಗೆ ನಾವು ಬೇರೆಯವನಲ್ಲ. ನನ್ನ ಆಶ್ರಮಕ್ಕೆ ಬಂದು ಸುಖವಾಗಿ ನೆಲೆಸು. ನಿನ್ನ ಬಯಕೆಗಳೆಲ್ಲವನ್ನು ಪೂರೈಸುವೆ. ಅಂಜದಿರು. ಎಂದು ಹೇಳಿ ರಾವಣನ ವೈರಿಯಾದ ಶ್ರೀರಾಮನ ಮಡದಿಯನ್ನು ತನ್ನ ಆಶ್ರಮಕ್ಕೆ ಕರೆದೊಯ್ದನು.
ಪದವಿಭಾಗ : ಅರಸ ಕೇಳ್ ಸೌಮಿತ್ರಿ ವೈದೇಹಿಯಂ ಕೊಂಡು ತೆರಳುವ ರಥಾಗ್ರದೊಳ್ ಚಲಿಸುವ ಪತಾಕೆ ರಘುವರನು ಅಂಗನೆಯನು ಉಳಿದಿಹನ್ ಅಹಹಾ ಎಂದು ಅಡಿಗಡಿಗೆ ತಲೆಗೊಡಹುವಂತೆ ಇರಲ್ಕೆ ಪರಮ ದಾರುಣಂ ಆಯ್ತು ಇದೆಂದು ಅಯೋಧ್ಯಾಪುರದ ನೆರವಿಯ ಜನಂ ಗುಜುಗುಜಿಸಿ ಮನದಿ ಕರಗಿ ಕಾತರಿಸುತ ಇರೆ, (ಹ)ಪರಿಸಿದಂ ಕಾಳಬಟ್ಟೆಗೊಂಡು ಅನಿಲವೇಗದಿಂದ ಆ ರಥವನು ||
ರಥಾಗ್ರದೊಳ್ - ರಥದ ತುದಿಯಲ್ಲಿ, ಪತಾಕೆ – ಧ್ವಜ, ಝಂಡಾ, ಬಾವುಟ. ಅಂಗನೆ- ಸ್ತ್ರೀ, ನಾರಿ, ಹೆಣ್ಣು, ಪತ್ನಿ. ದಾರುಣ-ಕರುಣಾಜನಕ,  ಕಾಳಬಟ್ಟೆ – ಕಾಡದಾರಿ, ಅನಿಲವೇಗ- ವಾಯುವೇಗ(ಅತೀವೇಗ)


ಇಳಿದು ರಥದಿಂದ ಮಂದಾಕಿನಿಗೆ ಪೊಡಮಟ್ಟು ಬಳಿಕ ನಾವಿಕರೊಡನೆ ನಾವದೊಳ್ ಗಂಗೆಯಂ ಕಳೆದು ನಿರ್ಮಲ ತೀರ್ಥದೊಳು ಮಿಂದು ಸೌಮಿತ್ರಿ ಮತ್ತೆ ಭೂಜಾತೆ ಸಹಿತ ಒಳಗೊಳಗೆ ಮರುಗಿ ಬಿಸುಸುಯ್ದು ಚಿಂತಿಸುವ ಮುಂದಳೆದು ಉಗ್ರ ಮೃಗಪಕ್ಷಿಗಣದಿಂ ಘೂರ್ಮಿಸುವ ಹಳುವಮಂ ಪೊಕ್ಕನು ಅಡಿಯಿಡುವೊಡೆ ಅಸದಳಂ ಎಂಬ ಕರ್ಕಶದ ಮಾರ್ಗದಿಂದ||
ಮಂದಾಕಿನಿ – ಗಂಗಾನದಿಯ ಇನ್ನೊಂದು ಹೆಸರು. ನಾವದೊಳ್ – ದೋಣಿಯಲ್ಲಿ, ಸೌಮಿತ್ರಿ – ಲಕ್ಷ್ಮಣ , ಭೂಜಾತೆ- ಸೀತೆ,  ಬಿಸುಸುಯ್ದು - ನಿಟ್ಟುಸಿರಿಟ್ಟು , ಘೂರ್ಮಿಸು - ಘರ್ಜಿಸು ,    ಹಳು-ಕಾಡು ,     ಅಸದಳ- ಅಸಾಧ್ಯ,  ಕರ್ಕಶಮಾರ್ಗ –ಕಠಿಣವಾದದಾರಿ.

ಇರುಳಂತೆ, ಹಗಲಂತೆ , ಮುಖದಂತೆ  ದಿವದಂತೆ ವರ ಪಯೋನಿಧಿಯಂತೆ ಕೈಲಾಸಗಿರಿಯಂತೆ ನಿರುತಮಂ ಸೋಮಾರ್ಕ ಶಿಖಿ ಸಹಸ್ರಾಕ್ಷ ಹರಿನುತ ಶಿವವಾಸಮ್ ಆಗಿ ಧುರದಂತೆ ಕೊಳದಂತೆ ಕಡಲಂತೆ ನಭದಂತೆ ಶರಪುಂಡರೀಕ ವಿದ್ರುಮಋಕ್ಷಮಯದೊಳ್ ಇಡಿದಿರುತಿರ್ದುದು ಆ ಮಹಾಟವಿ ಜಾನಕಿಯ ಕಣ್ಗೆ ಘೋರತರಮ್ ಆಗಿ ಮುಂದೆ||

ಮುಖ- ಯಜ್ಞ, ಪಯೋನಿಧಿ-ಹಾಲಿನಸಮುದ್ರ, ನಿರುತ-ನಿರಂತರ,ನಿತ್ಯ, ಯಾವಾಗಲೂ, ಸತತ, ಸೋಮ-ಚಂದ್ರ,ಸೋಮಲತೆ(ಇದು ಒಂದು ರೀತಿಯ ಬಳ್ಳಿ ಇದರಿಂದ ಮಧ್ಯತಯಾರಿಸುತ್ತಿದ್ದರೆಂದು ಹೇಳುತ್ತಾರೆ) ಅರ್ಕ-ಸೂರ್ಯ,ಎಕ್ಕದಗಿಡ. ಶಿಖಿ-ಅಗ್ನಿ, ನವಿಲು, ಸಹಸ್ರಾಕ್ಷ-ಇಂದ್ರ,ನವಿಲು. ಹರಿ-ಸಿಂಹ, ವಿಷ್ಣು, ಶಿವ-ಶಂಕರ,ನರಿ, ಮುಳ್ಳು, ಧುರ-ಯುದ್ಧ, ನಭ-ಆಕಾಶ, ಶರ-ಬಾಣ, ಹುಲ್ಲು, ಪುಂಡರೀಕ-ವಿಷ್ಣು, ಹುಲಿ, ಕಮಲ. ವಿದ್ರುಮ-ಮರ, ಹವಳ.ಋಕ್ಷ-ಕರಡಿ,ನಕ್ಷತ್ರ.

ಎಲ್ಲಿ ಮುನಿಪರು+ತಪೋತ್ತಮರ ಪಾವನದ ವನದ ಎಡೆಗಳು, ಎಲ್ಲಿ ಸಿದ್ಧಾಶ್ರಮಂಗಳ ಮಂಗಳ ಸ್ಥಳಗಳು , ಎಲ್ಲಿ ಸುಹವಿಗಳ ಕಂಪು+ಒಗೆದ ಪೊಗೆ(ಹೊಗೆ)ಎಳೆ ಅಗ್ನಿಹೋತ್ರದ ಕುಟೀರಂಗಳು, ಎಲ್ಲಿ ಪರಿಚಿತವಾದ ವೇದಶಾಸ್ತ್ರಧ್ವನಿಗಳು, ಅಲ್ಲಿಗೆ ಒಯ್ಯದೆ ದಾರುದಾರುಣದ ಕಟ್ಟಡವಿಗೆ ಏಕೆ ತಂದೆ ತಂದೆ ಸೌಮಿತ್ರಿ ಹೇಳು ಎಂದು ಜಾನಕಿ ಸುಯ್ದಳು.

ಸುಹವಿ-ಹವಿಸ್ಸು, ದಾರು-ಮರ ದಾರುದಾರುಣ-ಅತಿಭಯಂಕರ ಅಗ್ನಿಹೋತ್ರ-ಯಜ್ಞಕುಂಡ, ಕುಟೀರ- ಆಶ್ರಮ, ಕಂಪು-ಸುವಾಸನೆ,ಪರಿಮಳ,ಘಮಲು. ಸುಯ್ದಳು-ನಿಟ್ಟುಸಿರಿಟ್ಟಳು. ಎಡೆ-ಸ್ಥಳ,ತಾಣ,

ನರನಾಥ (ಅರಸ) ಕೇಳ್ ಅವನಿಸುತೆ(ಸೀತೆ) ನುಡಿದ ಮಾತಿಗೆ ಉತ್ತರವನು ಆಡದೆ ಮನದೊಳ್ ಉರೆ(ಬಹಳವಾಗಿ)ನೊಂದು ರಾಘವೇಶ್ವರನು ಎಂದ ಕಷ್ಟಮಂ ಪೇಳ್ದಪೆನೋ ಮೇಣ್ ಉಸಿರದಿರ್ದಪೆನೋ ನಿಷ್ಠುರದೊಳು ತರಣಿ ಕುಲ ಸಾರ್ವಭೌಮನ(ಅರಸ) ರಾಣಿಯಂ ಬನದೊಳ್ ಇರಿಸಿ ಪೋದಪೆನ್ ಎಂತೊ ಪೋಗದಿರ್ದೊಡೆ ಸಹೋದರನು ಅದೇನೆಂದಪನೋ ಹಾ! ಎಂದು ಲಕ್ಷ್ಮಣಂ ಬೆಂದು ಬೇಗುದಿಗೊಂಡನು.

ಆಡದೆ- ಹೇಳದೆ. ಮನದೊಳ್-ಮನದೊಳಗೆ, ಎಂದ-ಹೇಳಿದ, ತರಣಿಕುಲ-ಸೂರ್ಯವಂಶ, ಬೇಗುದಿ- ಸಂತಾಪ, ಉರೆ-ಬಹಳವಾಗಿ , ಪೋಗು(ಹೋಗು), ಬೇಗುದಿಗೊಳ್ಳು- ದುಃಖದಿಂದ ಬೆಂದುಹೋಗು.

ದೇವಿ ನಿನಗೆ ಇನ್ನೆಗಂ ಪೇಳ್ದುದು ಇಲ್ಲ, ಅಪವಾದಂ ಆವರಿಸೆ ನಿನ್ನನು ಒಲ್ಲದೆ ರಘುಕುಲೋದ್ಭವಂ(ರಘುಕುಲದಲ್ಲಿ ಜನಿಸಿದ ಶ್ರೀರಾಮ) ಸೀವರಿಸಿ ಬಿಟ್ಟು ಕಾಂತಾರಕ್ಕೆ ಕಳುಹಿ ಬಾ ಎಂದು ಎನಗೆ ನೋಮಿಸಿದೊದೆ ಆ ವಿಭುವಿನ(ರಾಮಚಂದ್ರ) ಆಜ್ಞೆಯಂ ಮೀರಲು ಅರಿಯದೆ ಮೆಲ್ಲನೆ ಈ ವಿಪಿನಕ್ಕೆ ಒಡಗೊಂಡು ಬಂದೆನ್ ಒಯ್ಯೊಯ್ಯನೆ ಆವಲ್ಲಿಗಾದೊಡಂ ಪೋಗು ಎಂದು ಲಕ್ಷ್ಮಣಂ ಬಾಷ್ಪಲೋಚನನ್ ಆದಂ

ಸೀವರಿಸು-ಸಹಿಸಲಾರದೆ, ವಿಭು-ಚಂದ್ರ, ರಾಜ, ರಾಮಚಂದ್ರ, ವಿಪಿನ-ಕಾಡು,ಕಾಂತಾರ, ವನ, ಒಯ್ಯೊಯ್ಯನೆ- ಮೆಲ್ಲಮೆಲ್ಲನೆ(ದ್ವಿರುಕ್ತಿ) ಬಾಷ್ಪಲೋಚನ- ಕಣ್ಣೀರುತುಂಬಿದ ಕಣ್ಣು

ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ ಮುರಿದು ಇಳೆಗೆ ಒರಗುವಂತೆ ಲಕ್ಷ್ಮಣನ ಮಾತು ಕಿವಿದೆರೆಗೆ ಬೀಳದ ಮುನ್ನ ಹಮ್ಮೈಸಿ ಬಿದ್ದಳ್ ಅಂಗನೆ ಧರೆಗೆ ನಡುನಡುಗುತ  ಮರೆದಳ್ ಅಂಗ+ಉಪಾಂಗಮಂ ಬಳಿಕ ಸೌಮಿತ್ರಿ ಮರುಗಿ ತಣ್ಣೀರ್ದಳೆದು ಪತ್ರದಿಂ ಕೊಡೆವಿಡಿದು ಸೆರಗಿಂದೆ ಬೀಸಿ ರಾಮನ ಸೇವೆ ಸಂದುದೇ ತನಗೆಂದು ರೋದಿಸಿದನು.

ಪೊಡೆ(ಹೊಡೆ) ಕಂಪಿಸು- ನಡುಗು ಕದಳಿ-ಬಾಳೆ , ಇಳೆಗೆ-ಭೂಮಿಗೆ, ಒರಗು-ಬೀಳು, ಹಮ್ಮೈಸು- ಪ್ರಜ್ಞೆತಪ್ಪು. ಅಂಗೋಪಾಂಗ-ದೇಹ,


ಬಿಟ್ಟನೆ ರಘೂದ್ವಹಂ ನನ್ನನು ಅಕಟಕಟಾ ತಾ ಮುಟ್ಟನೆ ನೆಗಳ್ದ ಬಾಳ್ವೆಗೆ ಸಂಚಕಾರಮಂ ಕೊಟ್ಟನೆ ಸುಮಿತ್ರಾ ತನುಜ ಕಟ್ಟ ಅರಣ್ಯದೊಳ್ ಕಳುಹಿ ಬಾ ಎಂದು ನಿನಗೆ ಕೊಟ್ಟನೆ ನಿರೂಪಮಂ ತಾನ್ ಎನ್ನ ಕಣ್ಬಟ್ಟೆಗೆಟ್ಟನೆ ಮನೋವಲ್ಲಭನ ಅಗಲ್ದು ಅಡವಿಲೊಳ್ ನೆಟ್ಟನೆ ಪಿಶಾಚದವೋಲ್ ಎಂತಿಹೆನೋ ಕೆಟ್ಟೆನಲ್ಲಾ ಎಂದು ಒರಲ್ದಳ್ ಅಬಲೆ

ರಘೂದ್ವಹಂ- ರಘುವಂಶಶ್ರೇಷ್ಠ(ರಾಮಚಂದ್ರ)ನೆಗಳ್ದ- ಶ್ರೇಷ್ಠವಾದ; ತನುಜ-ಮಗ, ಸುತ, ಪುತ್ರ,ಕುಮಾರ; ನಿರೂಪ-ಆಜ್ಞೆ; ಕಣ್ಬಟ್ಟೆ- ಮುಂದಿನ ದಾರಿ, ಅಗಲ್ದು-ಬಿಟ್ಟು ಪಿಶಾಚದವೋಲ್- ಪಿಶಾಚಿಯಂತೆ; ಒರಲ್ದಲ್ –ದುಃಖಿಸಿದಳು.

ಅಂದು ಕೌಶಿಕಮುನಿಪನೊಡನೆ ಮಿಥಿಲಾಪುರಕ್ಕೆ ಬಂದು ಹರಧನುವ ಮುರಿದು ಎನ್ನಂ ಮದುವೆಯಾದನು ಅಂದು ಮೊದಲಾಗಿ ರಮಿಸಿದನು ಎನ್ನೊಳನು ಅಗಲ್ದೊಡೆ ತಾಮ್ ನವೆದನಲ್ಲದೆ ವೊಂದಿದನೆ ಸೌಖ್ಯಮಂ ರಾಮನು ಎನಗಾಗಿ ಕಪಿ ವೃಂದಮಂ ನೆರಪಿ ಕಡಲಂ ಕಟ್ಟಿ ದೈತ್ಯರಂ ಕೊಂದು ಅಗ್ನಿಮುಖದೊಳ್ ಪರೀಕ್ಷಿಸಿದನು ಎನ್ನೊಳು ಅಪರಾಧಮಂ ಕಾಣಿಸಿದನೆ

ಕೌಶಿಕಮುನಿ- ವಿಶ್ವಾಮಿತ್ರ; ಹರಧನು-ಶಿವಧನಸ್ಸು; ಅಗಲ್ದೊಡೆ- ಬಿಟ್ಟರೆ; ನವೆದನ್- ದುಃಖಿಸುವನು; ಅಗ್ನಿಮುಖ – ಹೋಮದಬೆಂಕಿ;


ಏಕೆ ನಿಂದಿಹೆ ಪೋಗು(ಹೋಗು) ಸೌಮಿತ್ರಿ ಕೋಪಿಸನೆ ಕಾಕುತ್ಸ್ಥನ್ ಇಲ್ಲಿ ತಳುವಿದೊಡೆ ನೆರವುಂಟು ತನಗೀಕಾಡೊಳು ಉಗ್ರಜಂತುಗಳಲ್ಲಿ ರಘುನಾಥನ್ ಏಕಾಕಿಯಾಗಿರ್ಪನು ಲೋಕದ ಅರಸ ಏ ಗೈದೊಡಂ ತನ್ನ ಕಿಂಕರರು ಬೇಕು ಬೇಡೆಂದು ಪೇಳರೆ ಭರತ ಶತ್ರುಘ್ನರು ಈ ಕೆಲಸಕ್ಕೆ  ಒಪ್ಪಿದರೇ? ಹನುಮಂತನು ಇದ್ದನೆ. ಪೇಳ್ ಎಂದು ಅಳ್ದಲ್ ಅಬಲೆ.

ಕಾಕುತ್ಸ್ಥ – ಕಕುತ್ಸ್ಥವಂಶದಲ್ಲಿ ಜನಿಸಿದ ರಾಮಚಂದ್ರ;  ತಳುವಿದೊಡೆ –ತಡಮಾಡಿದರೆ; ಕಿಂಕರರು- ಸೇವಕರು;

ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ.  ಕಡುಪಾತಕಂ ಗೈದು ಪೆಣ್ಣಾಗಿ ಜನಿಸಿ ತನ್ನೊಡಲಂ ಪೊರೆವುದು ಎನ್ನೊಳು ಅಪರಾಧಮುಂಟು ಸಾಕು ಇಲ್ಲಿ ಇರಬೇಡ ನೀನು
ನಡೆ ಪೋಗು ನಿಲ್ಲದಿರ್ ನಿನಗೆ  ಮಾರ್ಗದೊಳ್ ಆಗಲಿ  ಅಡಿಗಡಿಗೆ ಸುಖಂ ಎಂದು ಸೀತೆ ಕಂಬನಿಗಳಂ ಮಿಡಿದು ಆರ್ತೆಯಾಗಿರಲು ಸೌಮಿತ್ರಿ ನುಡಿದನು ಆ ವಿಪಿನದ ಅಭಿಮಾನಿಗಳಿಗೆ

ಆರ್ತೆ – ದುಃಖಿತೆ, ಪಾತಕ –ಪಾಪ
ಎಲೆ ವನಸ್ಥಳಗಳಿರಾ ವೃಕ್ಷಂಗಳಿರಾ ಮೃಗಂಗಳಿರಾ ಕ್ರಿಮಿಕೀಟಂಗಳಿರ ಪಕ್ಷಿಗಳಿರಾ ಲತೆಗಳಿರಾ ತೃಣಗುಲ್ಮಂಗಳಿರಾ ಪಂಚಭೂತಂಗಳಿರಾ ದೆಸೆಗಳಿರಾ ಕಾವುದು ಎಲೆ ಧರ್ಮದೇವತೆ ಜಗತ್ ಜನನಿ ಜಾಹ್ನವಿಯನು ಎಲೆ ತಾಯೇ ಭೂದೇವಿ ನಿನ್ನ ಮಗಳಿಹಳು ಎಂದು ಸೌಮಿತ್ರಿ ಕೈ ಮುಗಿದನು.
ವನ-ಕಾಡು(ಬನ) , ವೃಕ್ಷ- ಮರ, ಮೃಗ-ಪ್ರಾಣಿ(ಮಿಗ ) ಲತೆ-ಬಳ್ಳಿ(ಲತಾ) ತೃಣ-ಹುಲ್ಲು, ಗುಲ್ಮ – ಪೊದೆ , ಪಂಚಭೂತಗಳು- ಭೂಮಿ, ಗಾಳಿ, ನೀರು ಬೆಂಕಿ, ಆಕಾಶ.  ಜಾಹ್ನವಿ –ಗಂಗೆ(ಜಹ್ನುಮಹರ್ಷಿಯಿಂದ ಬಂದವಳು) ಜಾನಕಿ-ಜನಕರಾಜನ ಪುತ್ರಿ , ಸೀತೆ,  ಸೌಮಿತ್ರಿ –ಸುಮಿತ್ರೆಯಮಗ ಲಕ್ಷ್ಮಣ.

ಅರಸ ಕೇಳು ಅಲ್ಲಿರ್ದ ಪಕ್ಷಿ , ಮೃಗ, ಜಂತುಗಳು(ಕ್ರಿಮಿ,ಕೀಟಾದಿಗಳು) ಧರಣಿಸುತೆಯಂ ಬಳಸಿ ನಿಂದು ಮೈಯುಡುಗಿ ಜೋಲದೆ ಇರದೆ ಕಂಬನಿಗರೆದು, ನಿಜ ವೈರಮಂ ಮರೆದು ಪುಲ್ಲು ಮೇವುಗಳನೆ ತೊರೆದು ಕೊರಗುತಿರ್ದುವು ಕೂಡೆ ವೃಕ್ಷಲತೆಗಳು ಬಾಡಿ ಸೊರಗುತಿರ್ದುವು ಶೋಕಭಾರದಿಂ ಕಲ್ಲುಗಳುಂ ಕರಗುತಿರ್ದುವು ಜಗದೊಳ್ ಉತ್ತಮರ ಹಾನಿಯಂ ಕಂಡು ಸೈರಿಸುವರುಂಟೇ

ಧರಣಿಸುತೆ- ಭೂಮಿಯ ಮಗಳು, ಸೀತೆ, ಜಾಹ್ನವಿ- ಗಂಗೆ ,
ಪೃಥವಿಯ ಆತ್ಮಜೆ ಬಳಿಕ ಚೇತರಿಸಿ ತನಗೆ ಇನ್ನು ಪಥಮ್ ಆವುದೆಂದು ದೆಸೆದೆಸೆಗಳಂ ನೋಡಿ ಸಲೆ ಶಿಥಿಲಂ ಆದ ಅವಯವದ ಧೂಳಿಡಿದ ಮೆಯ್ಯ ಬಿಡು ಮುಡಿಯಂ ವಿಕೃತಿನು ಎಣಿಸದೆ ಮಿಥಿಲೇಂದ್ರ ವಂಶದೊಳು ಜನಿಸಿ ರಘುಕುಲದ ದಶರಥ ನೃಪನ ಸೊಸೆಯಾಗಿ ತನಗೆ ಕಟ್ಟಡವಿಯೊಳುವ್ಯಥಿಸುವಂತೆ ಆಯ್ತು ಅಕಟಾ ವಿಧಿ ಎಂದು ಹಲುಬಿದಳು ಕಲ್ಮರಂ ಕರಗುವಂತೆ
ಪೃಥವಿಯ ಆತ್ಮಜೆ -ಭೂಮಿಯ ಮಗಳು, ಸೀತೆ ; ಬಳಿಕ -
ಆನಂತರ, ಪಥ – ದಾರಿ  ಅವಯವ- ಅಂಗಾಂಗಗಳು ಬಿಡುಮುಡಿ – ಕೆರದರಿದ ಕೂದಲು   , ಮಿಥಿಲೇಂದ್ರ- ಮಿಥಿಲಾ ದೇಶದ ಅರಸ, ನೃಪ – ರಾಜ, ವ್ಯಥೆ-ದುಃಖ ಕಟ್ಟಡವಿ ದಟ್ಟವಾದ ಕಾಡು.

ಅನ್ನೆಗಂ ಮುಖಕೆ ಯೂಪವನು ಅರಸುತಾ ಬನಕೆ ಸನ್ನುತ ತಪೋಧನಂ ವಾಲ್ಮೀಕಿ ಮುನಿವರಂ ತನ್ನ ಶಿಷ್ಯರು ಬೆರೆಸಿ ನಡೆತಂದು ಕಾಡೊಳು ಓರ್ವಳೇ ಪುಗಲು ದೆಸೆ ಕಾಣದೆ ಬನ್ನದಿಂ ಬಗೆ ಕೆಟ್ಟು ಪಾಡಳಿದು ಗ್ರೀಷ್ಮಋತು ವಿನ್ನವೆವ ಕಾಂತಾರದ ಅಧಿದೇವಿ ತಾನ್ ಎನಲ್ ಸನ್ನ ಗದ್ಗದ ಕಂಠೆಯಾಗಿ ರೋದಿಸುತಿರ್ದ ವೈದೇಹಿಯಂ ಕಂಡನು

ಮುಖ – ಯಜ್ಞ , ಯೂಪ-ಬಲಿಕಂಬ , ಅರಸುತ-ಹುಡುಕುತ , ಪಾಡಳಿದು – ಅನಾಥವಾಗಿ , ಪುಗಲು –ಹೋಗಲು , ದೆಸೆ-ದಿಶಾ(ದಿಕ್ಕು)  ಕಾಂತಾರ – ಕಾಡು, ವೈದೇಹಿ – ವಿದೇಹರಾಜ್ಯದ ರಾಜಕುಮಾರಿ (ಸೀತೆ)

ದೇವಿ ಬಿಡು ಶೋಕಮಂ ಪುತ್ರಯುಗಮಂ ಪಡೆವೆ ಭಾವಿಸದಿರು ಇನ್ನು ಸಂದೇಹಮಂ ಜನಕಂಗೆ ನಾವು ಅನ್ಯರಲ್ಲ ನಮ್ಮ ಆಶ್ರಮಕ್ಕೆ ಬಂದು ನೀಂ ಸುಖದೊಳ್ ಇರ್ದೊಡೆ ನಿನ್ನನ್ನು ಆವಾವ ಬಯಕೆಯುಂಟೊ ಎಲ್ಲಮಂ ಸಲಿಸಿ ತಾನು ಓವಿಕೊಂಡು ಇರ್ಪೆ ಅಂಜದಿರು ಎಂದು ಸಂತೈಸಿ ರಾವಣಾರಿಯ ರಾಣಿಯಂ ನಿಜ ತಪೋವನಕೆ ವಾಲ್ಮೀಕಿ ಕರೆತಂದನು.
ಯುಗಳ – ಅವಳಿ , ಓವಿ-ರಕ್ಷಿಸು , ರಾವಣಾರಿ –ಶ್ರೀರಾಮ  ರಾವಣನ  ಅರಿ(ಶತ್ರು,ವೈರಿ)



ಸಂದರ್ಭ ಸೂಚಿಸಿ ವಿವರಿಸಿ :
೧. ಅಹಹಯೆಂದಡಿಗಡಿಗೆ ತಲೆಗೊಡವುವಂತಿರಲ್
ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ಹಲುಬಿದಳ್ ಕಲ್ಮರಂ ಕರಗುವಂತೆ
ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ವೈಶಂಪಾಯನ ಋಷಿಯ ಶಿಷ್ಯನಾದ ಜೈಮಿನಿಮುನಿಯು ಜನಮೇಜಯರಾಜನಿಗೆ ಸೀತೆಯನ್ನು ಕಾಡಿಗೆ ಬಿಡಲು ಲಕ್ಷ್ಮಣನು ಹೊರಟ ಸಂದರ್ಭವನ್ನು ವಿವರಿಸುವಾಗ ಈ ಮಾತು ಬಂದಿದೆ. ಎಲೈ ಜನಮೇಜಯನೇ ಲಕ್ಷ್ಮಣನು ಸೀತೆಯನ್ನು ಕರೆದುಕೊಂಡು ಅಯೋಧ್ಯೆಯಿಂದ ಹೊರಟಾಗ ರಥದ ತುದಿಯಲ್ಲಿದ್ದ ಪತಾಕೆಯು ಗಾಳಿಗೆ ಅಲುಗಾಡುತ್ತಿದ್ದುದು ಶ್ರೀರಾಮನು ಸೀತೆಯನ್ನು ತೊರೆದುದು ಸರಿಯಲ್ಲ ದಾರುಣವಾದುದು ಎಂದು ತಲೆಯಾಡಿಸುವಂತೆ ಕಾಣುತ್ತಿತ್ತು ಎಂದು ಹೇಳುತ್ತಾನೆ.

೨. ಮೆಲ್ಲನೀ ವಿಪಿನಕೊಡಗೊಂಡು ಬಂದೆಂ
ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ಹಲುಬಿದಳ್ ಕಲ್ಮರಂ ಕರಗುವಂತೆ
ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಸೀತೆಯು ಲಕ್ಷ್ಮಣನನ್ನು ಕುರಿತು ಋಷಿಗಳ ಆಶ್ರಮಗಳೆಲ್ಲಿ, ಹೋಮ ಧೂಮಗಳೆಲ್ಲಿ, ವೇದಘೋಷಗಳು ಕೇಳಿಬರುತ್ತಿಲ್ಲವೇಕೆ? ಈ ಘೋರ ಕಾನನಕ್ಕೆ ಏಕೆ ಕರೆತಂದೆ ಎಂದು ಕೇಳಲು ಲಕ್ಷ್ಮಣನು, ತಾಯಿ ನಿನ್ನಲ್ಲಿ ಒಂದುಮಾತು ಮರೆಮಾಚಿದ್ದೆ. ರಘುನಂದನನು ನಿನ್ನನ್ನು ಕಾಡಿನಲ್ಲಿ ಬಿಟ್ಟುಬಾ ಎಂದು ನನ್ನನ್ನು ಕಳುಹಿಸಿದ್ದಾನೆ. ಅವನ ಆಜ್ಞೆಯನ್ನು ಮೀರಲಾರದೆ ನಿನ್ನನ್ನು ಈ ಘೋರ ಅರಣ್ಯಕ್ಕೆ ಕರೆದುಕೊಂಡು ಬಂದೆ. ನೀನು ಇಲ್ಲಿಂದ ಎಲ್ಲಿಗಾದರೂ ಹೋಗಬಹುದು ಎಂದು ಹೇಳುತ್ತ ಕಣ್ಣೀರು ಹಾಕಿದನು.

೩. ರಾಮನ ಸೇವೆ ಸಂದುದೇ ತನಗೆ
ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ಹಲುಬಿದಳ್ ಕಲ್ಮರಂ ಕರಗುವಂತೆ
ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಶ್ರೀರಾಮನು ತನ್ನನ್ನು ತೊರೆದಿರುವ ವಿಚಾರ ತಿಳಿಯುತ್ತಲೇ ಸೀತಾದೇವಿಯು ಬಿರುಗಾಳಿಗೆ ಉರುಳಿಬಿದ್ದ ಫಲಭರಿತ ಬಾಳೆಗಿಡದಂತೆ ಕುಸಿದುಬಿದ್ದಳು. ಲಕ್ಷ್ಮಣನು ಸೀತಾಮಾತೆಗೆ ಶೈತ್ಯೋಪಚಾರ ಮಾಡುತ್ತಾ ತನ್ನಲ್ಲಿ ತಾನು ಈ ಮಾತುಗಳನ್ನು ಹೇಳಿಕೊಳ್ಳುತ್ತಾನೆ.

೪. ಹರಧನುವನುಡಿದೆನ್ನಂ ಮದುವೆಯಾದಂ
ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ಹಲುಬಿದಳ್ ಕಲ್ಮರಂ ಕರಗುವಂತೆ
ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಶ್ರೀರಾಮನು ತನ್ನನ್ನು ತೊರೆದನು ಎಂಬ ಸುದ್ಧಿಕೇಳಿ ಹಿಂದಿನದೆಲ್ಲವನ್ನು ನೆನೆಯುತ್ತಾಳೆ.
ಅಂದು ಸ್ವಯಂವರದ ಕಾಲದಲ್ಲಿ ವಿಶ್ವಾಮಿತ್ರ ಮುನಿಯೊಂದಿಗೆ ತನ್ನ ಮಿಥಿಲೆಗೆ ಬಂದ ಶ್ರೀರಾಮನು ಸ್ವಯಂವರದ  ಪಣವಾಗಿದ್ದ ಶಿವಧನಸ್ಸನ್ನು ಮುರಿದು ತನ್ನನ್ನು ವಿವಾಹವಾಗಿದ್ದು. ಪ್ರೀತಿಯಿಂದ ಬಾಳುವೆ ಮಾಡಿದ್ದು ನೆನಪಿಸಿಕೊಳ್ಳುತ್ತಾಳೆ. ಇಷ್ಟೋಂದು ಪ್ರೀತಿಪಾತ್ರನಾಗಿದ್ದವನು ನನ್ನಲ್ಲಿ ಯಾವ ದೋಷವನ್ನು ಕಂಡ , ಏಕೆ ತ್ಯಜಿಸಿದ ಎಂದು ಚಿಂತಿಸುತ್ತಾಳೆ.



೫. ಲೋಕದರಸೇಗೈದೊಡಂ ತನ್ನ ಕಿಂಕರರ್ ಬೇಕು ಬೇಡೆಂದು ಪೇಳರೆ
ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ಹಲುಬಿದಳ್ ಕಲ್ಮರಂ ಕರಗುವಂತೆ
ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ರಾಮ ರಾಜನಾಗಿದ್ದು ಅವನು ಮನಸ್ಸಿಗೆ ಬಂದದ್ದನ್ನು ಮಾಡುವ ಸ್ವತಂತ್ರನು . ಲೋಕದ ಅರಸ ಏನೇ ಮಾಡಿದರೂ ಸೇವಕರು ಅದನ್ನು ಒಪ್ಪಲೇಬೇಕು. ಏಕೆಂದರೆ ನನ್ನನ್ನು ತೊರೆಯುವ ವಿಚಾರವನ್ನು ಯಾರೂ ವಿರೋಧಿಸಲಿಲ್ಲ ಏಕೆ? ಅರಸನನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲವೇ ಇಲ್ಲ ಅಲ್ಲವೇ ಸೌಮಿತ್ರಿ ಎಂದು ಕೇಳುತ್ತಾಳೆ. ರಾಜನಾದ ಮಾತ್ರಕ್ಕೆ ಅಪರಾಧಮಾಡಬಹುದೇ ಎಂಬ ಮೂಲಪ್ರಶ್ನೆಯನ್ನು ಕೇಳುತ್ತಾಳೆ.

೬. ಸಲಹಿಕೊಂಬುದು ತನ್ನ ಮಾತೆಯಂ
ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ಹಲುಬಿದಳ್ ಕಲ್ಮರಂ ಕರಗುವಂತೆ
ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಇತ್ತ ಸೀತಾಮಾತೆಯನ್ನು ಒಂಟಿಯಾಗಿ ಕಾಡಿನಲ್ಲಿ ಬಿಟ್ಟು ಹೋಗಲಾರದೆ ಬಹಳವಾಗಿ ದುಃಖಿಸುತ್ತಿದ್ದ ಲಕ್ಷ್ಮಣನು  ಸೀತೆಯನ್ನು ಕ್ಷೇಮವಾಗಿ ನೋಡಿಕೊಳ್ಳುವಂತೆ ಅರಣ್ಯದ ಮೃಗ ಪಕ್ಷಿ, ಕೀಟಾದಿಗಳಿಗೆ , ಗಿಡ , ಮರ, ಬಳ್ಳಿಗಳಿಗೆ, ದಿಕ್ ದೇವತೆಗಳಿಗೆ , ಕಾಡಿನ ಅಭಿಮಾನೀ ದೇವತೆಗಳಿಗೆ ಮತ್ತು ಪಂಚಭೂತಗಳನ್ನು ಕುರಿತು  ಬೇಡಿಕೊಳ್ಳುತ್ತಾನೆ. ಅಲ್ಲದೆ ಗಂಗಾ ಮಾತೆಯನ್ನು, ಭೂದೇವಿಯನ್ನು ಇವಳು ನಿನ್ನ ಮಗಳು ಎಂದು ಸಲಹು ಎಂದು ಬೇಡುತ್ತಾನೆ.


೭. ಜಗದೊಳುತ್ತಮರ ಹಾನಿಯಂ ಕಂಡು ಸೈರಿಸುವರುಂಟೆ
ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ಹಲುಬಿದಳ್ ಕಲ್ಮರಂ ಕರಗುವಂತೆ
ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಸೀತೆಗೆ ಒದಗಿದ ದುಃಖವನ್ನು , ಕಡುಕಷ್ಟವನ್ನು ಕಂಡು ಕಾಡಿನ ಪಶುಪಕ್ಷಿಗಳೆಲ್ಲ ಸೀತೆಯನ್ನು ಸುತ್ತುವರೆದು ಜೋಲುಮುಖದಿಂದ ದುಃಖಿಸುತ್ತಿದ್ದವಂತೆ, ಮರ ಗಿಡ ಬಳ್ಳಿಗಳು ಬಾಡಿದವಂತೆ ಮೃಗ ಪಕ್ಷಿಗಳು ತಮ್ಮೊಳಗಿನ ನಿಜ ವೈರತ್ವವನ್ನು ಬಿಟ್ಟು , ಆಹಾರವನ್ನು ಸೇವಿಸದೆಯೇ ಅವಳ ದುಃಖದಲ್ಲಿ ಭಾಗಿಯಾದವು. ಎಂದು ಹೇಳುತ್ತಾ ಕವಿಯು ಈ ಮೇಲಿನ ಮಾತನ್ನು ಹೇಳುತ್ತಾನೆ. ಲೋಕದಲ್ಲಿ ಉತ್ತಮರಿಗೆ ಆದ ನೋವು ಸಂಕಟಗಳನ್ನು ನೋಡಿಯೂ ಸಹಿಸಿಕೊಳ್ಳುವವರು ಇದ್ದಾರೆಯೇ? ಎಂದು ಪ್ರಶ್ನಿಸುತ್ತಾನೆ.

೮. ಹಲುಬಿದಳು ಕಲ್ಮರಂ ಕರಗುವಂತೆ
ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ಹಲುಬಿದಳ್ ಕಲ್ಮರಂ ಕರಗುವಂತೆ
ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಅಪಾರ ದುಃಖದಿಂದ ಗೋಳಾಡುತ್ತಾ ತನಗೆ ಒದಗಿದ ದುಃಸ್ಥಿತಿಯನ್ನು ನೆನೆಯುತ್ತಾ ಸೀತೆಯು ಜನಕ ಮಹಾರಾಜನ ಮಗಳಾಗಿ ಜನಿಸಿಯೂ, ರಘುವಂಶದ ದಶರಥ ಮಹಾರಾಜನ ಸೊಸೆಯಾಗಿಯೂ, ಶ್ರೀರಾಮನ ಮಡದಿಯಾಗಿಯೂ ಈ ಭೀಕರ ಕಾಡಿನಲ್ಲಿ ಒಂಟಿಯಾಗಿ ಅಲೆಯುವ ಸ್ಥಿತಿ ಬಂದಿತಲ್ಲಾ ಎಂದು ಕಲ್ಲು ಮರಗಳು ಕರಗುವಂತೆ ದುಃಖಿಸಿದಳು.


೯. ಜನಕಂಗೆ ನಾವನ್ಯರಲ್ಲ
ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ಹಲುಬಿದಳ್ ಕಲ್ಮರಂ ಕರಗುವಂತೆ
ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ವಾಲ್ಮೀಕಿಮಹರ್ಷಿಯು ಯೂಪಸ್ಥಂಬಕ್ಕಾಗಿ ಮರವನ್ನು ಹುಡುಕುತ್ತಾ ಸೀತೆ ಇರುವ ಸ್ಥಳಕ್ಕೆ ಬರುತ್ತಾನೆ. ವನದೇವತೆಯಂತೆ ಕಾಣುತ್ತಿದ್ದ ರೋಧಿಸುತ್ತಿದ್ದವಳ ಬಳಿಗೆ ಹೋಗಿ ನೋಡಿದರು. ತುಂಬುಗರ್ಭಿಣಿಯಾದ ಅವಳನ್ನು ಶೀಘ್ರದಲ್ಲಿಯೇ ಅವಳಿಮಕ್ಕಳಿಗೆ ಜನ್ಮಕೊಡುವೆ ಎಂದು ಹರಸಿದರು. ಅಂತೆಯೇ ತಾನು ಜನಕನಿಗೆ ಪರಿಚಿತನು. ತನ್ನ ಆಶ್ರಮಕ್ಕೆ ನಡೆ ಎಂದು ಆಶ್ರಮಕ್ಕೆ ಕರೆದೊಯ್ದರು.

ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಸೌಮಿತ್ರಿ ಸೀತೆಯನ್ನು ಎಲ್ಲಿಗೆ ಕರೆದುಕೊಂಡು ಹೋದನು?
ಸೌಮಿತ್ರಿಯು ಸೀತೆಯನ್ನು ಗಂಗಾನದೀತೀರದ ಅರಣ್ಯಕ್ಕೆ ಕರೆದೊಯ್ದನು.

೨. ರಾಮನ ಆಜ್ಞೆ ಏನು?
ಸೀತೆಯನ್ನು ಕಾಡಿನಲ್ಲಿ ಬಿಟ್ಟುಬರಬೇಕೆಂದು ರಾಮ ಆಜ್ಞೆಮಾಡಿದ್ದನು.

೩. ಲಕ್ಷ್ಮಣನ ಮಾತು ಕೇಳಿದ ಸೀತೆ ಭೂಮಿಗೆ ಹೇಗೆ ಬಿದ್ದಳು?
ಬಿರುಗಾಳಿಯ ಹೊಡೆತಕ್ಕೆ ಫಲಬಿಟ್ಟ ಬಾಳೆಯಗಿಡ ಭೂಮಿಗೆ ಬೀಳುವಂತೆ ಸೀತೆ ಬಿದ್ದಳು.

೪. ಕಾಡಿನಲ್ಲಿ ತನಗೆ ಯಾರ ನೆರವುಂಟೆಂದು ಸೀತೆ ಹೇಳುತ್ತಾಳೆ?
ಕಾಡಿನಲ್ಲಿತನಗೆ ಉಗ್ರಜಂತುಗಳ ನೆರವು ಇದೆ ಎಂದು ಸೀತೆ ಹೇಳಿದಳು.

೫. ಸೀತೆ ಯಾರಲ್ಲಿ ತಪ್ಪಿಲ್ಲವೆಂದು ಹೇಳುತ್ತಾಳೆ?
ರಘುನಾಥನಲ್ಲಿ ಯಾವತಪ್ಪೂ ಇಲ್ಲ ಎಂದು ಸೀತೆ ಹೇಳುತ್ತಾಳೆ.

೬. ಸೀತೆ ಲಕ್ಷ್ಮಣನಿಗೆ ಏನೆಂದು ಹಾರೈಸಿ ಬೀಳ್ಕೊಡುತ್ತಾಳೆ?
ಸೀತೆಯು ಲಕ್ಷ್ಮಣನಿಗೆ ನೀನು ಹೋಗುವ ದಾರಿಯಲ್ಲಿ ಹೆಜ್ಜೆಹೆಜ್ಜೆಗೆ ಸುಖವಾಗಲಿ ಎಂದು ಹರಸಿದಳು

೭. ಭೂದೇವಿಯ ಮಗಳು ಯಾರು?
ಭೂದೇವಿಯ ಮಗಳು ಸೀತೆ.

೮. ವಾಲ್ಮೀಕಿ ಏನನ್ನು ಹುಡುಕುತ್ತಾ ವನಕ್ಕೆ ಬಂದನು?
ಯೂಪಸ್ಥಂಭವನ್ನು ಹುಡುಕುತ್ತಾ ಬಂದನು.

೯. ರಾವಣಾರಿ ಎಂದರೆ ಯಾರು?
ರಾವಣಾರಿ ಎಂದರೆ ಶ್ರೀರಾಮ

೧೦ ಸೀತೆಯನ್ನು ಆಶ್ರಮಕ್ಕೆ ಕರೆತಂದವರು ಯಾರು?
ಸೀತೆಯನ್ನು ಆಶ್ರಮಕ್ಕೆ ಕರೆತಂದವರು ವಾಲ್ಮೀಕಿ ಮಹರ್ಷಿಗಳು.

ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.

೧. ಸೀತೆ ಪ್ರವೇಶಿಸಿದ ಕಾಡು ಹೇಗಿತ್ತು?
ಉಗ್ರವಾದ ಪಶುಪಕ್ಷಿಗಳಿಂದ ತುಂಬಿದ್ದ ಆ ಕಾಡು ಗಿಡ ಮರ ಪೊದೆಗಳಿಂದ ಕೂಡಿದ್ದು ಭಯಾನಕವಾಗಿತ್ತು ಇಂತಹ ಕಾಡಿನಲ್ಲಿ ಹೆಜ್ಜೆ ಇಡಲು ಕಷ್ಟವಾಗುತ್ತಿತ್ತು.

೨. ಲಕ್ಷ್ಮಣ ದುಃಖಿತನಾಗಲು ಕಾರಣವೇನು?
ಘೋರವಾದ ಅರಣ್ಯದಲ್ಲಿ ಸೀತೆಯನ್ನು ಏಕಾಂಗಿಯಾಗಿ ಬಿಟ್ಟು ಹೋಗಬೇಕಲ್ಲಾ ಎಂದು ಯೋಚಿಸುತ್ತಾ ಬಹಳವಾಗಿ ದುಃಖಿತನಾದನು.



೩. ಮೂರ್ಛಿತಳಾದ ಸೀತೆಯನ್ನು ಲಕ್ಷ್ಮಣ ಹೇಗೆ ಉಪಚರಿಸಿದನು?
ಮೂರ್ಛಿತಳಾದ ಸೀತೆಯನ್ನು ಕಂಡು ಲಕ್ಷ್ಮಣನು ದೊಡ್ಡದೊಂದು ಎಲೆಯನ್ನು ನೆರಳಿಗೆಂದು ಹಿಡಿದು, ತನ್ನ ವಸ್ತ್ರದಿಂದ ಗಾಳಿಹಾಕುತ್ತಾ,ರಾಮನ ಸೇವೆ ನನಗೆ ಸಿಗುವುದೇ ಎಂದು ಚಿಂತಿಸುತ್ತಾ ಇದ್ದನು.

೪. ಸೀತೆ ಸೌಮಿತ್ರ್ಯನ್ನು ಹಿಂತಿರುಗಿ ಹೋಗೆಂದು ಏಕೆ ಹೇಳಿದಳು?
ಸೀತೆಯು ರಾಮನು ಏಕಾಂಗಿಯಾಗಿದ್ದಾನೆ. ನೀನು ಹೋಗುವುದು ತಡಮಾಡಿದರೆ ಕೋಪಿಸಿಕೊಳ್ಳಬಹುದು. ಅರಸ ಏನೇ ಹೇಳಲಿ ಸೇವಕರಾದ ನಾವು ಅದನ್ನು ಕೇಳಲೇಬೇಕು. ಎಂದು ಹೇಳಿದಳು.

೫. ಸೀತೆಯನ್ನು ಕಾಡಿನ ಪ್ರಾಣಿಗಳು ಹೇಗೆ ಉಪಚರಿಸಿದವು?
ಕಾಡಿನ ಮೃಗಪಕ್ಷಿಗಳು ಸೀತೆಯ ಕಷ್ಟವನ್ನು ಕಂಡು ಮರುಗಿ ತಮ್ಮೊಳಗಿನ ದ್ವೇಷಭಾವವನ್ನು ಬಿಟ್ಟು ಆಹಾರವನ್ನು ತೊರೆದು ದುಃಖಿಸುತ್ತಿದ್ದವು. ಅವಳ ಸುತ್ತಲ್ಲೂನಿಂತು ಕಣ್ಣೀರುಹಾಕಿದವು.  ಉತ್ತಮರ ದುಃಖವನ್ನು ಕಂಡು ಮರುಗದವರು ಯಾರಿದ್ದಾರೆ ಎಂದುಕವಿ ಹೇಳುತ್ತಾನೆ.



ಐದಾರು ವಾಕ್ಯಗಳಲ್ಲಿ ಉತ್ತರಿಸಿ.
೧. ಸೀತೆ- ಲಕ್ಷ್ಮಣರು ಮಹಾರಣ್ಯವನ್ನು ಪ್ರವೇಶಿಸಿದ ಸನ್ನಿವೇಶವನ್ನು ವಿವರಿಸಿ.
ಅಯೋಧ್ಯೆಯಿಂದ ಹೊರಟು ಗಂಗಾತೀರವನ್ನು ತಲುಪಿ. ಗಂಗೆಗೆ ನಮಿಸಿ. ಗಂಗೆಯನ್ನು ನಾವಿಕರ ಸಹಾಯದಿಂದ ದೋಣಿಯಲ್ಲಿ ದಾಟಿ . ಗಂಗಾನದಿಯಲ್ಲಿ ಮಿಂದು. ಕಾಲಿಡಲು ಅಸಾಧ್ಯವಾದ  ಘೋರ ಅರಣ್ಯವನ್ನು ಸೇರಿದರು. ಆ ಅರಣ್ಯವು ಉಗ್ರವಾದ ಮೃಗಪಕ್ಷಿಗಳ ಸಮೂಹದಿಂದ ಕೂಡಿದ್ದು, ಪ್ರಾಣಿಗಳ ಧ್ವನಿ ಮಾರ್ದನಿಗೊಳ್ಳುತ್ತಿತ್ತು. ಈ ಅರಣ್ಯಪ್ರದೇಶವು ಸೀತೆಯ ಕಣ್ಣಿಗೆ ಘೋರತರವಾಗಿ ಕಂಡಿತು. ಋಷಿಮುನಿಗಳ ಆಶ್ರಮಗಳನ್ನು ಕಾಣದೆ ಕಂಗಾಲಾಗಿ, ಲಕ್ಷ್ಮಣನನ್ನು ಕುರಿತು ಮುನಿಗಳ ಆಶ್ರಮಗಳೆಲ್ಲಿ? ಅಗ್ನಿಹೋತ್ರಗಳನ್ನು ಅಚರಿಸುವ ತಾಣಗಳೆಲ್ಲಿ?, ವೇದಶಾಸ್ತ್ರಗಳ  ದನಿ ಎಲ್ಲಿ? ಎಂದು ಕೇಳಿದರೆ ಈ ಮಹಾ ಅರಣ್ಯದಲ್ಲಿ ಸೀತಾಮಾತೆಯನ್ನು ಬಿಟ್ಟು ಹೋಗಬೇಕಲ್ಲಾ ಎಂದು ಮನದೊಳಗೇ ಚಿಂತಿಸುತ್ತಿದ್ದನು.
೨. ಕಾಡಿನಲ್ಲಿ ಜಾನಕಿ ಏನೇನು ಕಾಣಲು ಬಯಸಿದಳು?
ಅಯೋಧ್ಯೆಯಿಂದ ಹೊರಟು ಗಂಗಾತೀರವನ್ನು ತಲುಪಿ. ಗಂಗೆಗೆ ನಮಿಸಿ. ಗಂಗೆಯನ್ನು ನಾವಿಕರ ಸಹಾಯದಿಂದ ದೋಣಿಯಲ್ಲಿ ದಾಟಿ . ಗಂಗಾನದಿಯಲ್ಲಿ ಮಿಂದು. ಕಾಲಿಡಲು ಅಸಾಧ್ಯವಾದ  ಘೋರ ಅರಣ್ಯವನ್ನು ಸೇರಿದರು.ಘೋರತರವಾದ ಅರಣ್ಯಕ್ಕೆ ಬಂದಿದ್ದು ಅರಣ್ಯದ ಭೀಕರತೆಯು ಸೀತೆಯು ಕಂಗಾಲಾಗುವಂತೆ ಮಾಡಿತು. ಋಷಿಮುನಿಗಳ ಆಶ್ರಮಗಳು , ಹೋಮ ಧೂಮಗಳಿಂದ ಕಂಗೊಳಿಸುವ ಸ್ಥಳಗಳು , ಹವಿಸ್ಸಿನ ಪರಿಮಳ , ವೇದಘೋಷದಧ್ವನಿ ಇವೆಲ್ಲವೂ ಇರುವ ಸ್ಥಳವನ್ನು ಬಯಸಿದ್ದಳು ಆ ಸ್ಥಳಗಳು ಎಲ್ಲಿವೆ ನನ್ನನ್ನು ಈ ಘೋರ ಅರಣ್ಯಕ್ಕೆ ಏಕೆ ಕರೆತಂದೆ ಎಂದು ಲಕ್ಷ್ಮಣನನ್ನು ಕೇಳುತ್ತಾಳೆ.

೩. ಸೀತೆಯನ್ನು ಕಾಡಿನಲ್ಲಿ ಬಿಡಲು ಬಂದ ಲಕ್ಷ್ಮಣನ ಬೇಗುದಿ ಹೇಗಿತ್ತು?
ಶ್ರೀರಾಮನ ಆಜ್ಞೆಯನ್ನು ಮೀರಲಾರದೆ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಹೋಗಲು ಬಂದ ಲಕ್ಷ್ಮಣನು ಮನದಲ್ಲಿಯೇ ಅಪಾರವಾದ ದುಃಖವನ್ನು ಅನುಭವಿಸುತ್ತಾ, ಮೌನವಾಗಿದ್ದನು.
ಶ್ರೀರಾಮನ ಆಜ್ಞೆಯನ್ನು ಅವಳಿಗೆ ತಿಳಿಸುವುದು ಹೇಗೆ ಎಂದು ಪೇಚಾಡುತ್ತಾ, ಸೀತಾಮಾತೆಯನ್ನು ಈ ಘೋರತರವಾದ ಅರಣ್ಯದಲ್ಲಿ ಬಿಟ್ಟುಹೋಗಲು ತಿಳಿಯದೆ , ಬಿಟ್ಟುಹೋಗದಿದ್ದರೆ ರಾಮನ ಕೋಪಕ್ಕೆ ಗುರಿಯಾಗಬೇಕಾಗಬಹುದು ಎಂಬ ಬೇಗುದಿಯಲ್ಲಿ ನರಳುತ್ತಾ ಅವಳ ರಕ್ಷಣೆಗಾಗಿ ದಿಕ್ ದೇವತೆಗಳನ್ನು ಬೇಡುತ್ತಾನೆ. ಗಿಡ , ಮರ, ಬಳ್ಳಿಗಳ ಬಳಿ ಬೇಡುತ್ತಾನೆ. ಪಂಚಭೂತಗಳನ್ನು ಬೇಡಿಕೊಳ್ಳುತ್ತಾ ಸೀತೆಯನ್ನು ಬಿಟ್ಟು ಹೋಗಲಾರದೆ ತಾಯಿಯನ್ನು ಎಳೆಯ ಕರು ಬಿಡಲಾರದೆ ಬಿಟ್ಟು ಹೋದಹಾಗೆ ಸೀತೆಯನ್ನು ತೊರೆದು ಹೋದನು.

೪. ರಾಮನ ಆಜ್ಞೆಯನ್ನು ಲಕ್ಷ್ಮಣನು ಸೀತೆಗೆ ಹೇಗೆ ತಿಳಿಸಿದ?
ಸೀತೆಯನ್ನು ಆ ಘೋರತರವಾದ ಅರಣ್ಯದಲ್ಲಿ ಬಿಟ್ಟು ಹೋಗಲಾರದೆ ,ಲಕ್ಷ್ಮಣನು ಕಣ್ಣೀರು ಹಾಕುತ್ತಾ, ಅಮ್ಮ ನಿನಗೆ ಒಂದು ಸಂಗತಿಯನ್ನು ನಾನು ಹೇಳಬೇಕು. ಶ್ರೀರಾಮನು ನಿನ್ನನ್ನು ಘೋರತರವಾದ ಅರಣ್ಯದಲ್ಲಿ ಬಿಟ್ಟು ಬರುವಂತೆ ಹೇಳಿದ್ದಾನೆ. ಅವನ ಆಜ್ಞೆಯನ್ನು ಮೀರಲಾರದೆ ಇಲ್ಲಿಗೆ ಕರೆತಂದಿದ್ದೇನೆ. ಇಲ್ಲಿಂದ ಮುಂದೆ ನೀನು ಬಯಸಿದೆಡೆಗೆ ಹೋಗಬಹುದಾಗಿದೆ . ಎಂದು ಹೇಳಿದಾಗ ಬಿರುಗಾಳಿಗೆ ಸಿಲುಕಿದ ಫಲಭರಿತ ಬಾಳೆಯ ಗಿಡ ಬೇರುಸಮೇತ ಕೆಳಗೆ ಬೀಳುವಂತೆ ಸೀತೆ ಕೆಳಕ್ಕೆ ಬಿದ್ದು ಮೂರ್ಛಿತಳಾಗುತ್ತಾಳೆ. ಕೂಡಲೇ ಲಕ್ಷ್ಮಣನು ಹಸಿರು ಎಲೆಗಳಿಂದ ಅವಳಿಗೆ ನೆರಳುಮಾಡಿ ತನ್ನ ಮೇಲ್ವಸ್ತ್ರದಿಂದ ಗಾಳಿಹಾಕುತ್ತಾ ಉಪಚರಿಸುತ್ತಾನೆ.                         


೫. ಸೀತೆ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡು ಹೇಗೆ ದುಃಖಿಸುತ್ತಾಳೆ?
ಲಕ್ಷ್ಮಣ ನನ್ನನ್ನು ಈ ದಟ್ಟ ಅಡವಿಯಲ್ಲಿ ಬಿಟ್ಟುಬಾ ಎಂದು ನಿನ್ನನ್ನು ಶ್ರೀರಾಮನು ಕಳುಹಿಸಿದನೇ? ನನ್ನ ಮನೋವಲ್ಲಭನನ್ನು ಅಗಲಿ (ಬಿಟ್ಟು) ಈ ಅರಣ್ಯದಲ್ಲಿ ಹೇಗಿರಲಿ? ವಿಶ್ವಾಮಿತ್ರ ಮುನಿಯೊಡನೆ  ಮಿಥಿಲಾಪುರಕ್ಕೆ ಬಂದು ಶಿವಧನಸ್ಸನ್ನು ಮುರಿದು ಎನ್ನನ್ನು ಮದುವೆಯಾದ ದಿನದಿಂದ ಮೊದಲಾಗಿ ನನ್ನನ್ನು ಎಲ್ಲವಿಧಗಳಲ್ಲಿ ಸಂತೋಷಪಡಿಸಿದ್ದು, ನನ್ನ ಕಷ್ಟದ ದಿನಗಳಲ್ಲಿ ತಾನು ಸುಖವಾಗಿರದೆ ತಾನೂ ನೋವನ್ನು ಅನುಭವಿಸಿದನು. ನನಗಾಗಿ ಕಪಿಸೈನ್ಯವನ್ನೇ ಜೊತೆಗೂಡಿಸಿಕೊಂಡು ವಿಶಾಲಸಾಗರಕ್ಕೆ ಸೇತುವೆಯನ್ನು ಕಟ್ಟಿ, ದೈತ್ಯರಾಕ್ಷಸರನ್ನು ಕೊಂದು, ಅಗ್ನಿಪರೀಕ್ಷೆಯಿಂದ ನನ್ನನ್ನು ಪರೀಕ್ಷಿಸಿ ಸ್ವೀಕರಿಸಿದ ರಾಮಚಂದ್ರ ಇಂದು ನನ್ನೊಳು ಯಾವ ಅಪರಾಧವನ್ನು ಕಂಡಿದ್ದಾನೆ? ಏಕೆ ನನ್ನನ್ನು ತ್ಯಜಿಸಿದ್ದಾನೆ? ಎಂದು ವಿಧವಿಧವಾಗಿ ದುಃಖಿಸಿದಳು.

೬. ಕಾಡಿನಲ್ಲಿ ಸೀತೆಯನ್ನು ರಕ್ಷಿಸುವ ಜವಾಬ್ದಾರಿಯನ್ನು ಲಕ್ಷ್ಮಣನು ಯಾರಿಗೆ, ಹೇಗೆ ವಹಿಸುತ್ತಾನೆ?
ಸೀತಾದೇವಿಯನ್ನು ಘೋರ ಅರಣ್ಯದಲ್ಲಿ ಬಿಟ್ಟು ಬರುವಂತೆ ರಾಮನ ಆಜ್ಞೆಯಾಗಿ ಅವಳನ್ನು ಅರಣ್ಯಕ್ಕೆ ಬಿಟ್ಟು ಬರಲು ಹೋದಂತಹ ಲಕ್ಷ್ಮಣನು ದುಃಖದಿಂದ ಕೂಡಿದ ಸೀತಾದೇವಿಯನ್ನು ಕಾಪಾಡುವಂತೆ ಕಾಡಿನ ಅಭಿಮಾನಿದೇವತೆಗಳಿಗೆ, ಗಿಡಮರಗಳಿಗೆ, ಮೃಗ, ಪಕ್ಷಿ , ಕೀಟಗಳಿಗೆ, ಪಂಚಭೂತಗಳಿಗೆ, ದಿಕ್ ದೇವತೆಗಳಿಗೆ, ಧರ್ಮದೇವತೆಗೆ, ಜಗತ್ತಿನ ಜನನಿಯಾದ ಗಂಗಾದೇವಿಯೇ, ತನ್ನ ಮಾತೆಯಾದ ಸೀತಾದೇವಿಯನ್ನು ಕಾಪಾಡಿರಿ ಎಂದೂ, ಭೂದೇವಿಯನ್ನು ನಿನ್ನ ಮಗಳಾದ ಇವಳನ್ನು ಕಾಪಾಡು ಲಕ್ಷ್ಮಣನು ಬಹಳ ದುಃಖಿತನಾಗಿ ಕೈಮುಗಿಯುತ್ತಾ ಬೇಡಿದನು.

೭. ಸೀತೆ ಕಲ್ಮರಂ ಕರಗುವಂತೆ ದುಃಖಿಸಿದ ಪರಿಯನ್ನು ವಿವರಿಸಿ.
ಲಕ್ಷ್ಮಣನು ಘೋರ ಅರಣ್ಯದಲ್ಲಿ ತನ್ನನ್ನು ಬಿಟ್ಟು ಹೋದ ಮೇಲೆ ಅವಳ ಸುತ್ತಮುತ್ತಮೃಗಪಕ್ಷಿಗಳು ನಿಜವೈರತ್ವವನ್ನು ಮರೆತು ಕಣ್ಣೀರು ಕರೆಯುತ್ತಾ ನಿಂತಿದ್ದಾಗ ಕಾಡಿನಲ್ಲಿ ಅಲೆಯುತ್ತಾ ಮನಸ್ಸು ಮೈ ಜರ್ಜರಿತಗೊಂಡಿದ್ದು, ಕೆದರಿದ ತಲೆಗೂದಲು, ಮೈತುಂಬಾ ಧೂಳಿಡಿದ ಸೀತೆಯು ತಾನಿನ್ನು ಯಾವಕಡೆಗೆ ಹೋಗಬೇಕು? ತನ್ನ ಮುಂದಿನ ದಾರಿಯಾವುದು? ಮಿಥಿಲೆಯ ಜನಕಮಹಾರಾಜನ ಮಗಳಾಗಿ ರಘುಕುಲದ ದಶರಥಮಹಾರಾಜನ ಸೊಸೆಯಾಗಿಯೂ ಇಂಥಹ ಘೋರತಮವಾದ ಅಡವಿಯಲ್ಲಿ ನಾನು ಸಂಚರಿಸುವಂತೆ ಆಯಿತೆ? ಅಯ್ಯೋ ವಿಧಿಯೇ ಎಂದು ಕಲ್ಲು ಮರಗಳೂ ಕರಗುವಂತೆ ಆ ಘೋರ ಅರಣ್ಯದಲ್ಲಿ ದುಃಖಿಸಿದಳು.

೮. ವಾಲ್ಮೀಕಿ ಸೀತೆಯನ್ನು ಹೇಗೆ ಸಂತೈಸುತ್ತಾನೆ?
ವಾಲ್ಮೀಕಿ ಮಹರ್ಷಿಯು ತನ್ನ ಶಿಷ್ಯರೊಡನೆ ಯೂಪವನ್ನು ಹುಡುಕುತ್ತಾ ಬಂದು ಬಿಸಿಲಿನ ಬಿಸಿಗೆ ಬಳಲಿದ್ದ ಸೀತೆಯನ್ನು ಕಂಡು ದೇವೀ ಶೋಕಿಸಬೇಡ ಶೀಘ್ರದಲ್ಲೇ ಅವಳಿಮಕ್ಕಳ ತಾಯಿ ಆಗಲಿರುವೆ. ನಾನು ಜನಕನ ಪರಿಚಿತ.ಆಶ್ರಮಕ್ಕೆ  ಬಂದು ಸುಖವಾಗಿ ಇರು .ನಿನ್ನನ್ನು ಕ್ಷೇಮವಾಗಿ ನೋಡಿಕೊಳ್ಳುತ್ತೇನೆ. ಅಲ್ಲಿ ನಿನ್ನ ಎಲ್ಲಾ ಬಯಕೆಗಳನ್ನು ಈಡೇರಿಸುತ್ತೇವೆ. ನಿನಗೆ ಇಷ್ಟ ಬಂದಂತೆ ಇರು ಎಂದು ರಾವಣನ ವೈರಿಯಾದ ರಾಮನ ಮಡದಿಯನ್ನ್ನು ಸಮಾಧಾನ ಪಡಿಸಿ ತನ್ನ ತಪೋವನಕ್ಕೆ ಕರೆದುಕೊಂಡು ಹೋದನು.



೯. ಕರುಣಾಳು ರಾಘವನಲ್ಲಿ ತಪ್ಪಿಲ್ಲ ಎಂಬ ಸೀತೆಯ ನಿಲುವನ್ನು ವಿಶ್ಲೇಷಿಸಿ.
ಘೋರವಾದ ಅರಣ್ಯಕ್ಕೆ ತನ್ನನ್ನು ಬಿಟ್ಟುಬರುವಂತೆ ರಾಮನ ಆಜ್ಞೆಯಾಗಿರುವುದನ್ನು ಕೇಳಿ ಬಹಳವಾಗಿ ದುಃಖಿಸಿದ ಸೀತಾದೇವಿಯು, ಕಷ್ಟದ ಸಮಯದಲ್ಲಿ ನನ್ನನ್ನು ಬಿಟ್ಟು ಇರದ ರಾಘವನು ನನ್ನ ಯಾವ ಅಪರಾಧಕ್ಕಾಗಿ ಈ ಶಿಕ್ಷೆಯನ್ನು ವಿಧಿಸಿದ್ದಾನೆ. ಬಹುಷಃ  ಹಿಂದಣ ಜನ್ಮದಲ್ಲಿ ನಾನು ಯಾವುದೋ ಅಪರಾಧಮಾಡಿ, ಈಗ ಹೆಣ್ಣಾಗಿ ಜನಿಸಿದ್ದೇನೆ. ಈ ಕಾಡಿನಲ್ಲಿ ಹೇಗಾದರೂ ಬದುಕಿರಬಲ್ಲೆ. ಈ ಪ್ರಾಣಿ ಪಕ್ಷಿಗಳಜೊತೆ ಬಾಳುತ್ತೇನೆ.   ಲೋಕದ ಅರಸ ಏನು ಹೇಳುತ್ತಾನೋ ಅಂತೆಯೇ ನಾವು ಪ್ರಜೆಗಳು ಕೇಳಬೇಕು. ಹಿಂದಿನ ಜನ್ಮದ ಅಪರಾಧವೇ ನನ್ನೆಲ್ಲಾ ಕಷ್ಟಗಳಿಗೆ ಕಾರಣ ಎಂದು ದುಃಖಿಸಿದಳು. . ನನ್ನ ಈ ಎಲ್ಲಾ ಕಷ್ಟಗಳಿಗೆ ಶ್ರೀ ರಾಮನು ಕಾರಣನಲ್ಲ ಎಂಬ ಚಿಂತನೆ ಅವಳ ಮಾತಿನಲ್ಲಿ ಕಾಣುತ್ತದೆ. ಹೆಣ್ಣಾಗಿ ಹುಟ್ಟಿದ್ದೇ ಯಾವುದೋ ಜನ್ಮದಲ್ಲಿ ಮಾಡಿದ ಪಾಪದಿಂದ ಎಂಬ ಮಾತಿನಲ್ಲಿ ಪುರುಷಪ್ರಧಾನ ಸಮಾಜದ ಧೋರಣೆಗಳು ಕಾಣಬರುತ್ತವೆ.

~~~ಓಂ~~~

No comments:

Post a Comment