Sunday, April 29, 2018



*ಅಜ್ಜಿಯ ಮೌನ*

ನನ್ನಪ್ಪನ ಅಮ್ಮ ನನ್ನಜ್ಜಿಗೆ ತೊಂಬತ್ತು ವರ್ಷ
ಅವಳನ್ನು ಕಂಡಾಗಲೆಲ್ಲಾ ಹುಟ್ಟಿತ್ತಿರುತ್ತದೆ
ಮತ್ತೆ ಅದೇ ಪ್ರಶ್ನೆ, ಅಂದಿನವರೆಲ್ಲಾ ಹೇಗಿದ್ದರು?
ಹೇಗೆ ಬಾಳಿದ್ದರು, ಬದುಕಿದ್ದರು?
ಅವಳಿಗೆ ಅದು ಸಹಜ
ನೆನಪಿನ ಗಣಿಗೆ ಕೈ ಹಾಕಿ ಒಂದೊಂದೇ
ಮುತ್ತುಗಳ ಎತ್ತುತ್ತಾ ಹೇಳುತ್ತಾಳೆ...
ಅಂದು ಇಂತಿನಂತಿರಲಿಲ್ಲ
ಹೊಸಗಾಳಿ ಬೀಸಿರಲಿಲ್ಲ
ಅವರಿದ್ದರು.
ನಮ್ಮದೇ ಬದುಕು, ಅದೇ ಹೊಲ ಗದ್ದೆ,
ದನ ಕರ, ಆಗತಾನೇ ಕರೆದ
ಮೊಲೆಹಾಲ ಹೀರುವ ಮಕ್ಕಳು,
ನಲಿವಿತ್ತು, ಸೊಗಸಿತ್ತು, ಬೆವರು ಹರಿಸಿದ್ದು
 ಕೈಗೆ ಬಂದಾಗ, ನೆಮ್ಮದಿ ತುಂಬಿತ್ತು.
ಇನ್ನೆಂದಿಗೂ ಸಿಗದಂತಹ ಕನಸು ಕೈ ಗೂಡಿತ್ತು.
ಇನ್ನೂ ಆಳಕ್ಕೆ ಇಳಿಯುತ್ತಿದ್ದಳೇನೋ...
ಹೊರಕ್ಕೆಳೆದೆ. ಇಂದೇನಾಗಿದೆ? ಎಂದೆ.
ಕಣ್ಣತೇಜ ಉಡುಗಿ ಇಂದು
ಎಲ್ಲವೂ ಇದ್ದೂ ಇಲ್ಲದಂತಾಗಿದೆ.
ಬಯಸಿದ್ದು ಕೈಗೆಟುಕುತ್ತೆ. ಜಳ್ಳುಕಾಳುನಂತೆ
ಕ್ಷಣದಲ್ಲಿ ರಸಹೀನವಾಗಿ.
ನನಗೆ ನಾಲ್ಕು, ನಾಲ್ಕಕ್ಕೆ
ನಾಲ್ಕು ಸೇರಿ ಎಂಟು ಹೀಗೆ ಬೆಳೆದಿದೆ ನಂಟು
ಬೆಳೆದ ದಂಟನು ಕಾಣುವಲ್ಲಿ
ಅವರಿಲ್ಲ ಎಂಬ ಕೊರಗು ಕಾಡುವುದು ಇಂದು
ಎಂದಳು ಸೀರೆಯಂಚ ಕಣ್ಣಿಗೆ ಒತ್ತುತ್ತಾ
ಮೌನವ ತಾಳಿದಳು.



ಏಕೀ ಪರದಾಟ
ಅನ್ನಕ್ಕೋ ಹೊನ್ನಿಗೋ
ಹೆಸರಿಗೋ ಬಸರಿಗೋ

 ***
ಬಂದೆಯಾಶ್ಯಾಮ
ಬೆಂದೆದೆಗೆ ತಂಪು ತಂದೆಯಾ ಶ್ಯಾಮ
ನಿಂದೆಯಾ ಶ್ಯಾಮ ಕಣ್ಣಬಿಂಬದಲಿ
ಕುಂತೆಯಾರಾಮ ಬಲಭೀಮ ಹೃದಯ ಮಂದಿರದಲಿ
 ***
*ಮುರಳಿಯ ಆಲಾಪ*
ಕೃಷ್ಣಾ ನೀನಿಲ್ಲದೆ
ನನ್ನೊಳಗೆ ಜೀವ ಸಂಚಾರ ಹೇಗೆ
ನಾದ ಹೊಮ್ಮುವುದಾದರೂ ಹೇಗೆ
ನಿನ್ನುಸಿರು ನನ್ನೊಳಗೆ ತುಂಬಿದಾಗ
ನಾದೋಪಾಸನೆ ಅಲ್ಲವೇ
 ***
ನನ್ನೊಳಗಿನ
ಹೊರಗಿನ ಕಲ್ಮಶವ
ಕಳೆವವನೇ ಹೃಷೀಕೇಶ
ಊದು ಪಾಂಚಜನ್ಯ
 ****

ಎಣ್ಣೆ ತೀರಿದ ಬಳಿಕ
ಹಣತೆ ಉರಿದಿತ್ತಾದರೂ ಏಕೆ
ಬತ್ತಿಯ ಬೂದಿ ಮಾಡಲೆಂದೇ
***

ಬೀಜದೊಳಗೆ ಕಾಡು
ಹನಿಯೊಳಗೆ ಸಾಗರ
ಎನ್ನೊಳಗೆ ನೀನು
***

ಬಲವಂತದ ಸನ್ಯಾಸ
ಹಸಿರೆಲೆಯ ಕಿತ್ತಂತೆ,
ಒಣ ಎಲೆ ಉದುರಿದರೆ
ನೋವಿಲ್ಲ ಎಲ್ಲ ನಿರಾಳ
 ****
ಬಿತ್ತಿದ ಬೀಜ ಹೂವಾಗಲು
ಕಾಲಬೇಕು, ಕಾಯಬೇಕು
ಈ ಕೂಡಲೇ ಹೂವಾಗಬೇಕೆಂದರೆ
ಕಾಗದದಹೂವಾದರೂ ಸಾಕು
 ****

ನನ್ನೆಡೆಗೆ ಅನುಕಂಪದಿ
ಒಂದು ಕ್ಷಣ ನೀ ನೋಡಿದೆ
ನನ್ನ ಹೃದಯ ನಿನ್ನೆದೆಯ ಲಯವನ್ನೇ
ನುಡಿಸತೊಡಗಿತ್ತು
ಸಕಲವನ್ನೇ ಆವರಿಸಿದ ನಿನ್ನ ಕಣ್ಣಜ್ಯೋತಿ
ಅಗಾಧಸಾಗರದ ಮುತ್ತುಗಳ ರಾಶಿಯನ್ನೆ ಎಸೆದಿದೆ
ನನ್ನ ಮುಂದೆ ತಾಳಲಾರೆ ಪಡೆದುದ ಹೇಳದೆ ಇರಲಾದೆ

 *****
ಪ್ರತಿಯೊಂದು ಮುಂಜಾವು
ಎನ್ನನೆಚ್ಚರಿಸುವಾಗ ಹೇಳುತ್ತದೆ
ಇಂದು ನೀ ಸಂತಸದಿಂದಿರು
ಕಲಿ-ನಲಿ-ಹಂಚು-ಕಸಿದು ತಿನ್ನಬೇಡ
ಇರುವೆಯಿಂದಲೂ ಕೂಡಾ!
ಉಡುಗೊರೆಯ ಜೀವನವ
ಹಾಳುಮಾಡದೆ ದಿನವ ಕಳೆ
ನಾಳೆ ಮತ್ತೆ ಸಿಗೋಣ




ಎಲ್ಲಿ ಹೋದವು ಆ
ಬಲಿದಾನದ ದಿನಗಳು
ಧ್ಯೇಯಕ್ಕಾಗಿ, ದೇಶಕ್ಕಾಗಿ
ತಾಯಿಗಾಗಿ, ಮಣ್ಣಿಗಾಗಿ
ಬಲಿಯಾದ ಆತ್ಮಗಳು
ಕೊಟ್ಟವಚನವು ಮರೆತು
ಹೋಯಿತೇ “ಅಮ್ಮಾ ನಿನ್ನ
ರಕ್ಷಣೆಗಾಗಿ ಮರಳಿ ಬರುವೆವು”
ಎಂದ ನುಡಿ ಸುಳ್ಳಾಯಿತೇನು?
ಸಿಡಿದೇಳದೇಕೆ ಮನ
ದೌರ್ಜನ್ಯವನು ಕಂಡಾಗ!
ವಿಸ್ಮೃತಿಯೇಕೆ
ತಾಯಕರೆ ಬಂದಾಗ!
ನಾವೇ ಅಲ್ಲವೇ ಅಂದು
ಬಲಿದಾನ ಮಾಡಿದವರು
ಕುದಿವುದಿಲ್ಲವೇಕೆ ನೆತ್ತರು ಇಂದು
ತಾಯಿಗಾಗಿ , ತಾಯ್ನೆಲಕ್ಕಾಗಿ




ಕಸ ಹಾಕುವಾಗಲೆಲ್ಲ
ಒಮ್ಮೆ ಯೋಚಿಸಿ!
ಏನು ಹಾಕುತ್ತಿದ್ದೇವೆ?
ಏಕೆ ಹಾಕುತ್ತಿದ್ದೇವೆ?
ಎಲ್ಲಿ ಹಾಕುತ್ತಿದ್ದೇವೆ?
ಹೇಗೆ ಹಾಕುತ್ತಿದ್ದೇವೆ?
ಇಂದಿನ ಕಸ ಆನಂತರ ರಸವಾಗುವುದೇ
ಎಂಬುದ ಚಿಂತಿಸಿ ಕಸ ಹಾಕುವಾಗಲೆಲ್ಲ
ಒಮ್ಮೆ ಯೋಚಿಸಿ .
ಸರ್ವಜ್ಞ ಅಗಿದು ಉಗಿದ
ಮಾತು ನಮಗೆ ರಸಗವಳವಾಗಿಲ್ಲವೇ
ಅಂತೆಯೇ ನೀವು ಕಸ ಹಾಕುವಾಗಲೆಲ್ಲ
ಒಮ್ಮೆ ಯೋಚಿಸಿ




*ಹೋಗಬೇಕು ತಡವಾಗುತ್ತಿದೆ*

ಹೋಗಬೇಕು
ತಡವಾಗುತ್ತಿದೆ
ಎಂಬ ಮಾತೇ ಸದಾ
ಹುಟ್ಟಿನಿಂದ
ಸಾಯೋವರೆಗೂ

ಶಾಲೆ, ಕಾಲೇಜು, ಕಾರ್ಯಾಲಯಕ್ಕೆ,
ಮತ್ತೊಂದು ಮಗದೊಂದು ಕೆಲಸ ಕಾರ್ಯಕ್ಕೆ,
ಗೆಳೆಯರ ಭೇಟಿ, ಸಿನೆಮಾಕ್ಕೆ
ಹೊರೆಟಾಗಲೆಲ್ಲಾ ಇದೇ ಮಾತೇ
ಹೋಗಬೇಕು ತಡವಾಗುತ್ತಿದೆ.

ಪಾರ್ಕು, ಸಿನೇಮಾಗಳಲ್ಲಿ,
ಪ್ರಿಯಳ ತೆಕ್ಕೆಯಲ್ಲಿ
ಮೈ ಮರೆತಿರುವಾಗ,
ಮನೆ, ಮನೆಯಾಕೆ ನೆನಪಾಗಿ
ಮತ್ತೆ ಅದೇ ಮಾತು
ಹೋಗಬೇಕು ತಡವಾಗುತ್ತಿದೆ




*ಓಶೋ ಮಾತುಗಳ ಆಧರಿಸಿ ರಚಿಸಿದ್ದು*

·       ದುಃಖ ಮರೆಮಾಚಿಕೊಳ್ಳಲು ಕೆಲವರು
ಬಾರಿಗೆ ಹೋದರೆ, ಕೆಲವರು ಮಂದಿರಕ್ಕೆ ಹೋಗುತ್ತಾರೆ.
ಧರ್ಮಕ್ಕಿಂತ ದೊಡ್ಡ ಷರಾಬು ಬೇರೊಂದಿಲ್ಲ !

·       ನಾನುವಿನ ಅಬ್ಬರದಲಿ
ನೀನು ಕಳೆದುಹೋದೆ,
ನಿನ್ನ ಹುಡುಕಾಟದಲ್ಲಿ
ನಾನು ಕರಗಿಹೋದೆ,
ಎಲ್ಲಾ ನೀನೇ ಆಗಿದ್ದೆ!

·       ಚಿತ್ತಸರೋವರದಲ್ಲಿ
ಉಬ್ಬರವಿಳಿತ ಇದ್ದೇ ಇದೆ.
ಶಾಂತವಾಗುವ ದಾರಿ ಅಗೋಚರ!

·       ನಿನ್ನ ಹಿಂದೆ
ನಾನು ಬಂದಾಗ
ಬೆಳಕು
ಎಂದು ಗುರು ಹೇಳಿದಾಗ
ನಾನು
ಅರ್ಥಮಾಡಿಕೊಳ್ಳಲಿಲ್ಲ!
ನಿನ್ನ
ಹಿಂಬಲಿಸಲಿಲ್ಲ!
ಬೆಳಕು
ಕಾಣಲಿಲ್ಲ!


·       ಸುಮ್ಮನಿರು
ಸುಮ್ಮನೆ ಇರು ಎಂದು 
ಗುರು ಹೇಳಿದಾಗ
ಕೈ,ಕಾಲು ಆಡಿಸದೆ ಕುಳಿತೆ,
ಬಾಯಿ ಮುಚ್ಚಿ ಕುಳಿತೆ,
ಮನದೊಳಗಿನ ಮಾತು-ಕ್ರಿಯೆ
ನಿಲ್ಲಿಸಲೇ ಇಲ್ಲ ,
ನಾನು
ಸುಮ್ಮನಾಗಲೇ ಇಲ್ಲ
ನಾನು
ಸುಮ್ಮನಾದರೆ
ನೀನು
ಕಾಣಬಹುದು
ಎಂದ ಗುರುವಿನ ಮಾತು
ನಾನು
ಅರಿಯಲಿಲ್ಲ
೨೦೧೭



ತೊಟ್ಟು ಕಳಚಿದ ಮೇಲೆ
ಇನ್ನೇನು ಉಳಿದೀತು,
ಇದ್ದ ಗುರುತನು ಬಿಟ್ಟು.
ಹಣ್ಣಾದ ಎಲೆ ಉದುರಿ
ಎಳೆಚಿಗುರಿಗೆ ದಾರಿ.
ಚಿಗುರಿದಾಗ ಸಂತಸ,
ಕಳಚಿದಾಗ ದುಃಖ.
ಹುಟ್ಟು-ಸಾವಿನ ಆಟದ
ನಡುವಿನ ಬದುಕು
ಯಾತ್ರಿಕರಂತೆ
ಬಂದು ಹೋಗುವ
ಸಂಬಂಧಗಳು