ಸೂರ್ಯೋದಯವಾಗುತ್ತಲೇ
ಪೊರಕೆಯೊಂದಿಗೆ ಬಂದು
ಪಾರ್ಕಿನಲಿ ಬಿದ್ದಿದ್ದ ಒಣ ಎಲೆಗಳ
ಗುಡಿಸುತ್ತ, ತನ್ನಪಾಡಿಗೆ ತಾನು
ಮಾತಾಡಿಕೊಳ್ಳುತ್ತಿದ್ದ ಮುದುಕಿ
ಅಂದು ಭಾನುವಾರ ಗಂಟೆ ಎಂಟಾದರೂ ಕದಲದೆ,
ಅರಳಿಮರಕ್ಕೆ ಒರಗಿ ಕಣ್ಣೀರು ಹಾಕುತ್ತಿದ್ದುದ ಕಂಡೆ.
ಸುಮ್ಮನಿರಲಾರದೆ , ಏಕೆ ಕುಂತೆ?
ಏನವ್ವಾ ಏನು ಚಿಂತೆ? ಎಂದೆ,
ಅವಳೋ ತನ್ನದೇ ಭಾಷೆಯಲ್ಲಿ ನುಡಿದಳು,
ಕುಡುಕ ಗಂಡ ಎಲ್ಲಿಗೋ
ಮೇಯಲಿಕ್ಕೆ ಹೋದವನು
ವಾರಕಳೆದರೂ ಹಟ್ಟಿಗೆ ಬಂದಿಲ್ಲ!
ಬೆಳೆದ ಮಗ ಬೀದಿಗೂಳಿಯಾಗಿ ಮೆರೆದು
ಎಳೆತಂದ ಹೆಣ್ಣು ಹಾಲುಕರೆಯದೆ
ಮುದುಕಿ ಸಾಯಲಿಲ್ಲ ಎಂಬಂತೆ ತಿವಿಯುತ್ತದೆ.
ಎಳೆಗರುವಿನೊಡನೆ ಆಡುವ ಆಸೆ ಕಾಡುತ್ತಿದ್ದರೂ
ಮುಂದೇನು ಮುಂದೇನು? ಎಂಬ ಚಿಂತೆ ಅಡರುತ್ತಿದೆ ಎಂದಳು.
ನಾನೂ ಕುಂತೆ ಅವಳೊಂದಿಗೆ
ನನ್ನ ಅಸ್ತಿತ್ವವನ್ನು ಕುರಿತು ಚಿಂತಿಸುತ್ತಾ.
ಗಂಡ –ಮನೆ- ಮಕ್ಕಳ ಬಗೆಗೆ ಚಿಂತಿಸುತ್ತಾ,
ನನ್ನಕತೆಯೂ ಇದೇ ಅಲ್ಲವೇ ಎನ್ನುತ್ತಾ,
ಮೇಲೇರುವ ಸೂರ್ಯನ ನೋಡುತ್ತಾ
-2014
No comments:
Post a Comment