Saturday, April 28, 2018

ಕಚ
ದೇವತೆಗಳು ನಮಗಿಂತಲೂ ಶಕ್ತಿಶಾಲಿಗಳು. ದೇವ ದಾನವ ಯುದ್ಧದಲ್ಲಿ ಅನೇಕ ರಕ್ಕಸರ ಸಾವು ದೈತ್ಯಅರಸರ ಚಿಂತೆಗೆ ಕಾರಣವಾಯ್ತು. ಅವರ ಚಿಂತೆ ದೂರಗೊಳಿಸಲು ದೈತ್ಯಗುರು ಶುಕ್ರಾಚಾರ್ಯರು ಪರಶಿವನ ಕುರಿತು ತಪವನ್ನಾಚರಿಸಿ , ಮೃತಸಂಜೀವಿನಿವಿದ್ಯೆಯನ್ನು ಕಲಿತು ದೇವ ದಾನವ ಹೋರಾಟದಲ್ಲಿ ಮೃತರಾದ ರಕ್ಕಸರನ್ನು ಮರುಜೀವಗೊಳಿಸುತ್ತಿದ್ದುದು ದೇವತೆಗಳ ಚಿಂತೆಗೆ ಕಾರಣವಾಗಿತ್ತು. ಹೀಗೆ ಚಿಂತಿಸುತ್ತಿರುವ ದೇವತೆಗಳು ದೇವಗುರು ಬೃಹಸ್ಪತಿಗಳ ಮೊರೆ ಹೋದರು. ದೇವಗುರುಗಳು ನಮ್ಮಲ್ಲಿ ಯಾರಾದರೊಬ್ಬರು ಶುಕ್ರಾಚಾರ್ಯರ ಬಳಿ ಹೋಗಿ ಅವರನ್ನು ಓಲೈಸಿ, ವಿದ್ಯೆ ಕಲಿತು ಬರಬೇಕು. ಶುಕ್ರಾಚಾರ್ಯರು ಸಾಮಾನ್ಯವಾಗಿ ಯಾರಿಗೂ ಅದರಲ್ಲೂ ದೇವತೆಗಳಿಗೆ ಕಂಡಿತಾ ಹೇಳಿಕೊಡುವುದಿಲ್ಲ. ಒಂದುವೇಳೆ ಅವರು ಹೇಳಿಕೊಡಲು ಮನಸ್ಸುಮಾಡಿದರೂ, ದೈತ್ಯರ ಕೋಪದಿಂದಲಾಗಲಿ, ಆಯುಧಗಳಿಂದಲಾಗಲಿ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಸಿದ ಸಿಂಹದ ಗುಹೆಗೆ ಹೋಗಲು ಯಾರು ಸಿದ್ಧರಿದ್ದೀರಿ ಎಂದಾಗ ಭಗವನ್ ನೀವೇದಾರಿತೋರಬೇಕು ಎಂದು ಬೇಡಿದರು. ದೇವಗುರುಗಳು ಪರಿಹಾರವಾಗಿ ಕಚನ ಹೆಸರನ್ನು ಸೂಚಿಸಿದರು. ದೇವತೆಗಳು ಗುರುಗಳ ಸಲಹೆಯನ್ನು ಅಂಗೀಕರಿಸಿದರು.
ಕಚ ದೇವಗುರು ಬೃಹಸ್ಪತಿಗಳ ಪುತ್ರ. ಹದಿನಾರರ ವಯಸ್ಸು, ಕಲಿಕೆಯಲ್ಲಿ ತುಂಬಾಚುರುಕು, ಒಮ್ಮೆಹೇಳಿಕೊಟ್ಟದ್ದನ್ನು ಗಮನವಿಟ್ಟು ಕಲಿವ ಚತುರ, ಜೊತೆಗೆ ಆಕರ್ಷಕ ರೂಪ. ತಂದೆಯಮಾತನ್ನು ಶಿರಸಾ ಪಾಲಿಸಲು ಶುಕ್ರಾಚಾರ್ಯರಲ್ಲಿ ಶಿಷ್ಯವೃತ್ತಿಮಾಡಲು ಸಿದ್ಧನಾದ. ದೇವತೆಗಳು ಹರಸಿದರು.
ದೈತ್ಯಗುರು ಶುಕ್ರಾಚಾರ್ಯರ ಕುಟೀರ ಹೋಮಧೂಮಾವೃತವಾಗಿದೆ, ಅಗ್ನಿಕಾರ್ಯದಲ್ಲಿ ಗುರುಗಳು ತೊಡಗಿದ್ದಾರೆ. ಅವರ ಮುದ್ದಿನ ಮಗಳು ದೇವಯಾನಿ ಒಂದೆರಡುಬಾರಿ ಏನನ್ನೋಹೇಳಲು ಬಂದವಳು ಹಾಗೇ ಹಿಂದಿರುಗಿದುದು ಗಮನಕ್ಕೆ ಬಂತು.  ಕಾರ್ಯಮುಗಿಸಿ, ಹವಿಸ್ಸುಗಳನ್ನು ಅರ್ಪಿಸಿಹೊರಬಂದರು. ಅವರು ಹೊರಬರುವುದನ್ನೇ ಎದುರು ನೋಡುತ್ತಿದ್ದ ದೇವಯಾನಿ ತಂದೆಯವರಿಗೆ ನಮಿಸಿ ಅಪ್ಪಾ ಯಾರೋ ಬ್ರಹ್ಮಚಾರಿ ತಮ್ಮಲ್ಲಿ ಶಿಷ್ಯವೃತ್ತಿಮಾಡುವ ಅಪೇಕ್ಷೆಯಿಂದ ಬಂದಿದ್ದಾನೆ. ಒಳಗೆ ಬರಲು ತಮ್ಮ ಅಪ್ಪಣೆ ಬೇಡುತ್ತಿದ್ದಾನೆ, ಕರೆತರಲೇ ಎಂದು ಒಂದೇಉಸುರಿನಲ್ಲಿ ಹೇಳುತ್ತಾ  ಅವರು ಹೂಗುಟ್ಟುವ ಮೊದಲೇ ಆ ಬ್ರಹ್ಮಚಾರಿಯನ್ನು ಕರೆತಂದಳು. ಅವಳಿಗೆ ಸಹಚಾರಿಯ ಅವಶ್ಯಕತೆ ಇತ್ತು. ಗೆಳೆತನಕ್ಕೆ ಅವಳ ಮನ ಕಾತರಿಸುತ್ತಿತ್ತು. ಕಚ ಬಂದವನೇ ಗೋತ್ರಪ್ರವರಗಳನ್ನು ಹೇಳಿ ಗುರುಗಳಿಗೆ ಅಭಿವಾದನಮಾಡಿ ಕೈಮುಗಿದು ನಿಂತ. ಗುರುಗಳ ಮನದಲ್ಲಿ ದ್ವಂದ್ವ. ಇಂತಹ ತೇಜಸ್ವಿಯನ್ನು, ದೇವಗುರುವಿನ ಪುತ್ರನನ್ನು, ಸಂಜೀವಿನಿಗೋಸ್ಕರವೇ ಬಂದಿರುವವನು ಎಂದು ತಿಳಿದೂ ಶಿಷ್ಯನನ್ನಾಗಿ ಸ್ವೀಕರಿಸಿದರೆ ಎಲ್ಲಿ ದೈತ್ಯರ ಅಸಹನೆಗೆ ಕಾರಣವಾಗುವುದೋ ಅವರಆಕ್ರೋಶಕ್ಕೆ ಇವನೆಲ್ಲಿ ತುತ್ತಾಗುವನೋ,ಎಂಬುದು ಒಂದುಕಡೆಯಾದರೆ ಇಂತಹ ತೇಜಸ್ವಿಯ ಗುರುವಾಗುವುದು ನನ್ನ ಕರ್ತವ್ಯ. ಇಂತವನನ್ನು ಶಿಷ್ಯನನ್ನಾಗಿ ಪಡೆಯದಿದ್ದರೆ ನಾನು ಕಲಿತವಿದ್ಯೆಸಾರ್ಥಕವಾಗುವುದಾದರೂ ಹೇಗೆ? ಎಂಬುದು ಇನ್ನೊಂದೆಡೆ. ಏನುಮಾಡಲಿ ಎಂಬ ಯೋಚನೆಯಲ್ಲಿ ಮುಳುಗಿರುವಾಗ ಮಗಳ ಒತ್ತಾಸೆ, ತನ್ನಮನದ ಆಸೆಯೂ ಆಗಿ ಶಿಷ್ಯನನ್ನಾಗಿ ಸ್ವೀಕರಿಸಲು ಒಪ್ಪಿದರು. ಆಶ್ರಮದ ಸಣ್ಣಪುಟ್ಟ ಕೆಲಸಗಳೊಂದಿಗೆ ದೇವಯಾನಿಯೊಡನೆ ಆಟಪಾಠಗಳಲ್ಲಿ ಕಾಲ ಸಾಗುತ್ತಿತ್ತಾದರೂ ಕಚ ಬಂದಕೆಲಸ ಕೈಗೂಡಿರಲಿಲ್ಲ. ಇತ್ತದೈತ್ಯರ ಚಾರರು ಆಶ್ರಮದಲ್ಲಿ ಕಚ ಎಂಬ ಬ್ರಹ್ಮಚಾರಿ ಇರುವುದಾಗಿಯೂ ಗುರುಪುತ್ರಿಯ ಜೊತೆ ಹೆಚ್ಚಿನ ಒಡನಾಟ ಹೊಂದಿರುವುದಾಗಿಯೂ, ಗುರುಗಳು ಕಲಿಸಿದ್ದನ್ನು ಮೊದಲೇ ಕಲಿತಿರುವವನಂತೆ ಕರಗತ ಮಾಡಿಕೊಳ್ಳುತ್ತಿದ್ದಾನೆ ಎಂಬೆಲ್ಲಾ ಸುದ್ಧಿಯನ್ನು ದೈತ್ಯರ ಅರಸನಲ್ಲಿ ಬಿತ್ತರಿಸಿದರು. ಅರಸನು ಆ ಬ್ರಹ್ಮಚಾರಿಯಬಗ್ಗೆ ವಿಚಾರಿಸಿದರೆ ಗುರುಗಳು ಕೋಪಗೊಳ್ಳಬಹುದು ಅಥವಾ ನನ್ನಿಷ್ಟ ನಾನು ಯಾರಿಗಾದರೂ ವಿದ್ಯೆ ಹೇಳಿಕೊಡುತ್ತೇನೆ ಕೇಳಲು ನೀನ್ಯಾರು ಎಂದಾರು. ಗುರುಗಳಿಗೆ ಅನುಮಾನ ಬರದ ಹಾಗೆ ಅವನನ್ನು ಗಮನಿಸುತ್ತಿರಿ. ಒಂಟಿಯಾಗಿ ದೊರೆತರೆ ಮುಗಿಸಿಬಿಡಿ ಎಂದು ಗುರುಮನೆಯಿಂದ ಸುದ್ಧಿತಂದಿದ್ದ ಚಾರರಿಗೆ ಸೂಚನೆ ಇತ್ತ. ಚಾರರು ಸಮಯ ಕಾಯುತ್ತಿದ್ದರು . ಆ ಸಮಯ ತಾನಾಗಿ ಒದಗಿಬಂತು. ಆಶ್ರಮದ ಗೋಪಾಲಕರೊಂದಿಗೆ ಗೋವುಗಳ ಜೊತೆ ಕಾಡಿಗೆ ಕಚ ಹೋಗಬೇಕಾಗಿತ್ತು. ಗುರುಗಳ ಅಗ್ನಿಕಾರ್ಯಕ್ಕೆ ಒಂದಷ್ಟು ವಿಶೇಷವಾದ ಸಮಿತ್ತುಗಳನ್ನು ತರುವ ಜವಾಬ್ದಾರಿ ವಹಿಸುದ್ದರು. ಸಮಿತ್ತುಗಳನ್ನು ಹುಡುಕುತ್ತಾ ಹುಡುಕುತ್ತಾ ಅರಣ್ಯದಲ್ಲಿ ಒಬ್ಬನೇ ಸಂಚರಿಸುತ್ತಿರುವುದು ಚಾರರ ಕಣ್ಣಿಗೆ ಗೋಚರಿಸಿತು. ಕೂಡಲೇ ಕಾರ್ಯಪ್ರವೃತ್ತರಾದರು. ಅವನನ್ನು ಕೊಂದು ಕಾಡಿನ ಪಶು ಪಕ್ಷಿಗಳಿಗೆ ಆಹಾರವನ್ನಾಗಿ ಮಾಡಿದರು. ಇತ್ತ ದೇವಯಾನಿಗೆ ತಳಮಳ. ಗೋವುಗಳು ಬಂದಾಯ್ತು ಕಚ ಇನ್ನೂ ಬರಲಿಲ್ಲ. ತಂದೆಯವರು ಧ್ಯಾನದಲ್ಲಿದ್ದಾರೆ, ಹೇಗೆ ಹೇಳುವುದು. ತಾನೂ ಧ್ಯಾನದಲ್ಲಿ ಕುಳಿತು ಕಚ ಎಲ್ಲಿದ್ದಾನೆಂದು ತಿಳಿಯೋಣವೆಂದರೆ ಮನಸ್ಸು ಅಶುಭವನ್ನೇ ನುಡಿಯುತ್ತಿದೆ. ಏನುಮಾಡಲಿ ಎಂದು ಚಿಂತಿಸುತ್ತಿರುವಾಗ ತಂದೆಯವರು ಧ್ಯಾನಮುಗಿಸಿ ಮೇಲೆದ್ದರು. ದೇವಯಾನಿ ಅಳುಮೋರೆಹೊತ್ತು ತಮ್ಮೆದುರು ನಿಂತಿದ್ದಾಳೆ. ಏನು ಎಂಬಂತೆ ನೋಡಿದರು. ಕಚ... ಮಾತೇಹೊರಡುತ್ತಿಲ್ಲ. ಮೆಲುದನಿಯಲ್ಲಿ ಕಚ ಎಲ್ಲಿ ಎಂದರು. ಸಾವರಿಸಿಕೊಂಡ ದೇವಯಾನಿ “ಅವ ಇನ್ನೂ ಬರಲಿಲ್ಲ ದಯಮಾಡಿ ನೋಡಿ ಎಲ್ಲಿದ್ದಾನೆ. ಏನಾದರೂ ಅಪಾಯಕ್ಕೆ ಸಿಲುಕಿದನೋ, ಕಾಡುಪ್ರಾಣಿಗಳು ಹೊತ್ತೊಯ್ದವೋ ಏನೋ” ಎಂದು ಆತಂಕದಲ್ಲಿ ನುಡಿದಾಗ, ಅರಮನೆಯ ಚಾರರ ಮೇಲೆ ಮೊದಲೇ ಇದ್ದ ಸಂಶಯ ಗುರುಗಳ ಮನದಲ್ಲೂ  ಆತಂಕದ ಹೊಗೆಮೂಡಿಸಿತು. ಅದನ್ನ ಹೊರಗೆ ತೋರಗೊಡದೆ ಹಾಗೇ ದ್ಯಾನಾಸಕ್ತರಾದರು ಎಲ್ಲವೂ ತಿಳಿಯಾಗಿತ್ತು. ರಕ್ಕಸರ ಕ್ರೌರ್ಯ ತಿಳಿಯಿತು. ತಮ್ಮ ಕಮಂಡಲದಲ್ಲಿದ್ದ ಮಂತ್ರಜಲವನ್ನು ಕೈಲಿಹಿಡಿದು “ಕಚ ಎದ್ದು ಬಾ” ಎಂದು ಅಗ್ನಿಕುಂಡಕ್ಕೆ ಚುಮುಕಿಸಿದರು. ಕಚನ ಅಂಶಗಳೆಲ್ಲಪ್ರಾಣಿ ಪಕ್ಷಿಗಳದೇಹದಿಂದ ಹೊರಬಂದು ಒಂದಾಗಿ ಕಚ ನಿದ್ದೆತಿಳಿದು ಎದ್ದವನಂತೆ ಮತ್ತಷ್ಟು ತೇಜಸ್ವಿಯಾಗಿ ಎದ್ದು ಬಂದ.
ಚಾರರಾಗಲಿ , ದೈತ್ಯ ಅರಸರಾಗಲಿ ಒಂದಷ್ಟುದಿನ ಗುರುಗಳ ಆಶ್ರಮದಕಡೆಗೆ ತಲೆ ಹಾಕಲಿಲ್ಲ. ತಾವು ಏನೇಮಾಡಿದರೂ ಗುರುಗಳು ಅವನನ್ನು ಬದುಕಿಸಿಬಿಡುತ್ತಾರೆ. ಬೇರೆ ಏನಾದರೂ ಮಾಡಬೇಕು ಎಂದು ಮಂತ್ರಾಲೋಚನೆಯಲ್ಲಿ ತೊಡಗಿದರು. ಅದಕ್ಕೆ ಪೂರಕವಾಗಿ ಆವುದೋ ಉತ್ಸವ ನಿಮಿತ್ತ ಗುರುಗಳು ಅರಮನೆಗೇ ಬರುವವರಿದ್ದರು. ಆಗ ಕಚನನ್ನು ಸುಟ್ಟು ಅವನ ಬೂದಿಯನ್ನು ದ್ರಾಕ್ಷಾರಸದಲ್ಲಿ ಗುರುಗಳಿಗೆ ಕುಡಿಸಿದರೆ ಹೇಗೆ ಎಂಬ ಆಲೋಚನೆ ಒಬ್ಬರಕ್ಕಸನಿಗೆ ಹೊಳೆಯಿತು. ಕಚ ಗುರುಗಳ ಹೊಟ್ಟೆಸೇರಿದರೆ ಶಾಶ್ವತವಾಗಿ ಶತ್ರುನಾಶವಾಗುವುದು ಎಂದು ಈ ಘನಕಾರ್ಯಕ್ಕೆ ಎಲ್ಲರೂ ಅನುಮೋದಿಸಿದರು. ಆ ಪರ್ವ ದಿನದಂದು ಕಚ ಆಶ್ರಮದಲ್ಲೇ ಇದ್ದ. ಗುರುಗಳು ತಮ್ಮ ಪುತ್ರಿಯೊಂದಿಗೆ ಅರಮನೆಗೆ ಆಗಮಿಸಿದ್ದರು ರಕ್ಕಸರ ಘನಕಾರ್ಯ ಯಾವ ಅಡೆತಡೆಯಿಲ್ಲದೆ ಶಾಂತವಾಗಿ ನೆರವೇರಿತ್ತು. ಕಚ ಗುರುಗಳ ಉದರ ಸೇರಿದ್ದ! ಆಶ್ರಮಕ್ಕೆ ಹಿಂದಿರುಗಿದಾಗ ದೇವಯಾನಿಯ ಹುಡುಕಾಟ ಕಂಡು ಸಂಶಯ ಹೊಗೆಯಾಡಿತ್ತು. ಧ್ಯಾನದಲ್ಲಿ ಕುಳಿತರು. ತಮ್ಮ ಉದರದಲ್ಲೇ ಕಚನನ್ನು ಕಂಡರು. ತಾವೊಂದು ಬಗೆದರೆ ದೈವವೊಂದು ಬಗೆಯಿತು. ರಕ್ಕಸರ ರಕ್ಷಿಸಲು ಪರಶಿವನ ಮೆಚ್ಚಿಸಿ ಪಡೆದವಿದ್ಯೆ ಇಂದು ಈ ಬಾಲಕನ ಮೂಲಕ ದೇವತೆಗಳ ವಶವಾಗುವುದು. ಇನ್ನು ಈ ವಿದ್ಯೆಯನ್ನು ಬಳಸುವುದಿಲ್ಲ. ಎಲ್ಲಾ ದೈವೇಚ್ಛೆ ಎಂದುಕೊಂಡು, ಅದೇ ಸ್ಥಿತಿಯಲ್ಲಿ ಕಚನಿಗೆ ಮರುಜೀವಕೊಡುವದರೊಂದಿಗೆ ವಿದ್ಯೆದಾನ ಮಾಡುವಯೋಜನೆಮಾಡುತ್ತಿರುವಾಗಲೇ ದೇವಯಾನಿಯ ಆತಂಕದ ಮಾತುಗಳು ಕೇಳಿತು. “ಅಪ್ಪಾ ಕಚ ಕಾಣುತ್ತಿಲ್ಲಾ, ಎಲ್ಲೆಡೆ ಹುಡುಕಿದೆ ಎಲ್ಲೂ ಇಲ್ಲಾ ಅಪ್ಪಾ” ಗುರುಗಳು ಗಂಭೀರದನಿಯಲ್ಲಿ “ಮಗಳೇ ಕಚ ನನ್ನ ಉದರದಲ್ಲಿದ್ದಾನೆ.”  ನಿನಗೆ ನಾನು ಬೇಕೋ? ಕಚ ಬೇಕೋ? ಕಚ ಬೇಕೆಂದಾದಲ್ಲಿ ನಾನು ಮರಣಹೊಂದಬೇಕಾಗುವುದು. ನಾನು ಬೇಕೆಂದಾದಲ್ಲಿ ಕಚ ಜೀವಂತವಾಗುವುದಿಲ್ಲ ಎಂದಾಗ ದೇವಯಾನಿಯ ಧರ್ಮಸಂಕಟ, ತಳಮಳ, ಒದ್ದಾಟ ನೋಡಲು ಆಗದಿದ್ದರೂ ಏನು ಹೇಳುತ್ತಾಳೋ ಎಂಬ ಕುತೂಹಲದಲ್ಲಿ ಹೂಂ ಬೇಗ ಹೇಳು ಯಾರು ಬೇಕು ಎಂದಾಗ ಧಾರಾಕಾರವಾಗಿ ಕಣ್ಣೀರುಹರಿಸುತಾ ಮೂಕಳಾಗಿ ಕುಳಿತ ದೇವಯಾನಿಯನ್ನು ಸಂತೈಸುತ್ತಾ, ಚಿಂತಿಸಬೇಡಮಗಳೇ ಯಾರೂ ಸಾಯುವುದಿಲ್ಲ. ನೀನು ಸ್ವಲ್ಪಹೊತ್ತು ಹೊರಗಿರು. ಯಾರನ್ನೂ ಒಳಗೆ ಬಿಡಬೇಡ! ಕರೆಯುವ ವರೆಗೆ ನೀನೂ ಬರಬೇಡ! ಎಂದು ಆಜ್ಞಾಪಿಸಿದರು. ದೇವಯಾನಿ ನಮಸ್ಕರಿಸಿ ಹೊರನಡೆದಳು. ದೇಹಮಾತ್ರಹೊರಹೋಗಿತ್ತು ಮನ ಅಲ್ಲೇ ತಳವೂರಿತ್ತು.
ಗುರುಗಳು ಧ್ಯಾನಾಸಕ್ತರಾದರು. ಕಚನ ಜೀವಕ್ಕೆ ಮೃತಸಂಜೀವಿನೀ ವಿದ್ಯೆ ಬೋಧಿಸಿದರು. ಮಗು ನಿನ್ನನ್ನು ಈಗ ಜೀವಂತಗೊಳಿಸುತ್ತೇನೆ, ದೇವಯಾನಿಗೋಸುಗ ಈ ದೇಹಕ್ಕೆ ಜೀವಕೊಡು ಎಂದು ಹೇಳಿ ಮಂತ್ರಜಲವನ್ನು ಅಗ್ನಿಗೆ ಅರ್ಪಿಸಿದಕೂಡಲೆ ಅವರದೇಹದಿಂದ ಕಚ ಹೊರಬಂದು ಮಂತ್ರಜಲವನ್ನು ಗುರುಗಳದೇಗದ ಮೇಲೆ ಚುಮುಕಿಸುತ್ತಾ ಸಂಜೀವಿನೀಮಂತ್ರ ಜಪಿಸಿದೊಡನೆ ಗುರುಗಳು ಜೀವತಳೆದರು. ಗುರುಗಳ ಕಾಲಿಗೆರಗಿದ. ಮಗು ಇಂದಿಗೆ ನಿನ್ನವಿದ್ಯಾಭ್ಯಾಸ ಮುಗಿಯಿತು, ನೀನಿ ಇಲ್ಲಿಬಂದ ಉದ್ದೇಶವೂ ನೆರವೇರಿತು. ಇನ್ನು ನಿನ್ನ ಸ್ವಗೃಹಕ್ಕೆ ತೆರಳಬಹುದು. ಹೋಗಿ ಬಾ ಶುಭವಾಗಲಿ ಎಂದು ಹರಸಿದರು. ಮರುದಿನ ಕಚ ಹೊರಟ ದೇವಯಾನಿ ಹೋಗಲು ಬಿಡುತ್ತಿಲ್ಲ. ಕಚ ತನ್ನ ಇಚ್ಛೆಯಿಂದ ವಿಚಲಿತನಾಗಲಿಲ್ಲ. ದೇವಯಾನಿ “ನೀನು ಕಲಿತ ವಿದ್ಯೆ ನಿನಗೆ ಸಿದ್ಧಿಸದಿರಲಿ” ಎಂದು ಶಾಪವಿಟ್ಟಳು. ಕಚ ನಗುತ್ತಲೇ ಸ್ವೀಕರಿಸಿದ. ದೇವಲೋಕದಲ್ಲಿ ಇತರದೇವತೆಗಳಿಗೆ ಅದನ್ನು ಉಪದೇಶಿಸಿದ ವಿದ್ಯೆ ಅವರಿಗೆ ಸಿದ್ಧಿಯಾಯಿತು. ಕಚನ ಏಕಾಗ್ರತೆ ನಮಗೂ ಸಿದ್ಧಿಸಲಿ. ಶುಭಮಸ್ತು

No comments:

Post a Comment