Tuesday, July 1, 2014

ಪದ್ಯಭಾಗ - 3 ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು- ಕುಮಾರವ್ಯಾಸ 2puc

ಪದ್ಯಭಾಗ - 3
ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು- ಕುಮಾರವ್ಯಾಸ

ಸಾರಾಂಶ : ಚಂದ್ರನಂತೆ ಕಾಂತಿಯುತವಾದ ಮುಖವುಳ್ಳವಳಾದ ದ್ರೌಪದಿಯು ತನಗಾದ ಅನ್ಯಾಯವನ್ನುಯಾರಬಳಿ ಹೋಗಿ ಹೇಳಿಕೊಳ್ಳಲಿ, ತನಗೆ ಸಹಾಯಮಾಡುವಂತೆ ಯಾರನ್ನು ಬೇಡಿಕೊಳ್ಳಲಿ, ಈ ಹಾಳು ಹೆಂಗಸು ಜನ್ಮ ಯಾಕಾದರೂ ನನಗೆ ದೊರಕಿತೋ? ಯಾವ ಪಾಪ ಮಾಡಿದುದರಿಂದ ಹೆಂಗಸು ಜನ್ಮ ಬಂತೋ? ಈ ಮೊದಲು ನನ್ನಂತೆ ಮೊದಲು ಯಾರು ದುಃಖವನ್ನು ಅನುಭವಿಸಿದ್ದಾರೆ. ಶಿವನೇ ನನಗೆ ಮರಣವಾದರೂ ಬಾರದೇ ಎಂದು ಹೊಟ್ಟೆಯನ್ನು ಹಿಸುಕಿಕೊಳ್ಳುತ್ತಾ ಗೋಳಾಡುತ್ತಾ, ಯಮಸುತನಿಗೆ ಹೇಳೋಣವೆಂದರೆ ಅವನಿಗೆ ಧರ್ಮ , ಕ್ಷಮೆ ಎಂಬ ದೆವ್ವಹಿಡಿದಿದೆ. ಅರ್ಜುನನು ಮಮತೆಯುಳ್ಳವನು ಎಂದು ತಿಳಿದು ಅವನಲ್ಲಿ ಹೇಳೋಣವೆಂದರೆ ಅವನು ತನ್ನಅಣ್ಣನ ಆಜ್ಞೆಯಲ್ಲಿ ಭ್ರಮಿತನಾಗಿದ್ದಾನೆ, ನಕುಲ-ಸಹದೇವ ನಿಸ್ಸಂದೇಹವಾಗಿಯೂ ಈ ನಾಯಿಯಾದ ಕೀಚಕನನ್ನು   ಕೊಲ್ಲಲು ಶಕ್ತಿಯಿಲ್ಲದವರು  ಚಿಂತಿಸಿ, ಈ ಐವರಲ್ಲಿ ಕಲಿ ಭೀಮನೇ ಪೌರುಷವುಳ್ಳವನು, ಸ್ವಾಭಿಮಾನ- ಕೆಚ್ಚುಗಳನ್ನು ಉಳ್ಳವನು, ನನ್ನ ಕಷ್ಟಗಳನ್ನು ಕೇಳಿ ಅವುಗಳನ್ನು ನಿವಾರಿಸಲು  ಕಾಳಜಿ ತೋರುವವನು  ,    ದುಷ್ಟನಾದ ಕೀಚಕನನ್ನು ಗೆಲ್ಲುವವನು . ಇವನ ಬಳಿ ನನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತೇನೆ  ಒಂದು ವೇಳೆ ನನ್ನ ಕಷ್ಟಗಳಿಗೆ ಮರುಗದಿದ್ದರೆ, ಕೀಚಕನ ಕೊಲ್ಲುವ ಕೆಚ್ಚು, ಸಾಮರ್ಥ್ಯ ಇಲ್ಲದಿರೆ ಘೋರವಾದ ವಿಷವನ್ನು ಕುಡಿಯುವೆನು ಎಂದು ನಿಶ್ಚಯಿಸಿದಳು.             

ಎಬ್ಬಿಸಲು ಎಲ್ಲಿ  ಕೋಪಗೊಳ್ಳುವನೋ, ಅಲ್ಲದೆ ಒಬ್ಬಳೇ ಏತಕೆ ಬಂದೆ , ಮುಖವೇಕೆ ಕಳೆಗುಂದಿದೆ, ಎಂದು ಮಾಧಾನ ಮಾಡುವನೋ, ನನ್ನನ್ನು ಅರ್ಥಮಾಡಿಕೊಳ್ಳುವನೋ, ಕಾರಣವಿಲ್ಲದೆ ಸುಮ್ಮನೆ ಬರುವವಳಲ್ಲ ಎಂದು ತಿಳಿಯುವನೋ, ಒಮ್ಮೆ ಎಬ್ಬಿಸಿಯೇ ಬಿಡುವೆನು ಎಂದು ಮಲಗಿದ್ದ ಭೀಮನ ಬಳಿ ಹೋಗಿ ಮೆಲ್ಲಮೆಲ್ಲನೆ ಅವನ ಮುಸುಕನ್ನು ಸರಿಸಿ, ಗಲ್ಲವನ್ನು ಹಿಡಿದು ಅಲುಗಿಸಲು, ಭೀಮಸೇನನು ಮೆಲ್ಲನೆ ಎದ್ದು, ಪಾಂಚಾಲನಂದನೆಯಾದ ತನ್ನ ಸತಿಯನ್ನು ನೋಡಿ ನಿನ್ನ ಮುಖದಲ್ಲಿ ಭಯ, ಹೆದರಿಕೆಯೇ ತೋರುತ್ತಿದೆ, ಈ ಹೊತ್ತು ಇಲ್ಲಿಗೆ ಬರಲು ಕಾರಣವೇನು, ತಡಮಾಡದೇ ಹೇಳು ಈ ಇರುಳಲ್ಲಿ ಏಕೆ ಬಂದೆ ಎಂದು ಕೇಳಿದನು. ಆಗ ದ್ರೌಪದಿಯು ನಿನ್ನೆ ಬೆಳಿಗ್ಗೆಯೇ ಅಡ್ಡಗಟ್ಟಿ ಕೀಚನೆಂಬ ಕುನ್ನಿಯು ರಾಜಸಭೆಯಲ್ಲಿ ನನ್ನನ್ನು ಒದ್ದಿದ್ದಾನೆ. ನಿನ್ನಂತ ಜೊತೆಗಾರರು ಇರುವಾಗ ಈ ರೀತಿಯ ಸೋಲು ಸರಿಯೇ? ನನ್ನ ಬೆನ್ನು ಹತ್ತಿದ್ದಾನೆ. ಅವನು ನನ್ನನ್ನು ಬಿಡುವುದಿಲ್ಲ, ಇನ್ನು ನಾನು ಬದುಕುವುದಿಲ್ಲ. ನನ್ನ ಸಾವಿನ ಪಾಪ ನಿನ್ನನ್ನು ಬಿಡುವುದಿಲ್ಲ ಎಂದು ಹೇಳಿದಾಗ ಭೀಮನು ಬಹಳವಾಗಿ ಕೋಪಗೊಂಡನು ಆಗ ದ್ರೌಪದಿಯು ರಮಣ ಕೇಳು ಉಳಿದವರು ನನ್ನನ್ನು ರಮಿಸುವರು (ಸಂತೋಷಪಡಿಸುವರು) ಮಾನ-ಅಪಮಾನದ ವಿಷಯ ಬಂದರೆ ದೂರಹೋಗುವರು ಹಾಗಾಗಿ ನನ್ನೆಡೆಗೆ ಮಮತೆಯಿಂದ ನೋಡು, ನನಗೆ ಸಂತೋಷವಾಗುವ ಹಾಗೆ ಕೀಚಕನನ್ನು ಕೊಲ್ಲುವೆನೆಂದು ನನಗೆ  ಮಾತುಕೊಡು ಎಂದು ಕೈಮುಗಿದು ಕೇಳಿದಳು.
ಹೋರಾಟಕ್ಕೆ ನಾನು, ಪ್ರೀತಿಗಾದರೆ ಉಳಿದವರು. ಕೆಲವರು ಗಳಿಸಿದರೆ ಕೆಲವರು ಉಂಡು ನಿದ್ರಿಸುವರು. ಯಾವುದಕ್ಕೂ ಹೆದರಿ ನಡೆವವರಲ್ಲ. ನಿನ್ನ ಕೆಟ್ಟಮಾತುಗಳು ನನ್ನ ಕರ್ತವ್ಯವನ್ನು ತಿಳಿಸಿದರೂ, ಧರ್ಮಜನ ಮಾತು ಮೀರಲು ಹೆದರಿಕೆಯಾಗುತ್ತದೆ ಎಂದನು.
ಹೆಂಡತಿಯ ಕಾರ್ಯದಲ್ಲಿ ಒಬ್ಬ ಗಂಡನಾದರೂ ಇದ್ದೀರಾ? ವೈರಿಯನ್ನು ಕಡಿದು ತುಂಡು ತುಂಡು ಮಾಡುವನು ಯಾರು? ಗಂಡರು ಐವರು ಇವರೆಲ್ಲ ಮೂರು ಲೋಕಕ್ಕೇ ಹೆಸರಾಂತ ವೀರರು ಆದರೆ ನನ್ನೊಬ್ಬಳನ್ನು ಆಳಲಾರಿರಿ. ನೀವು ಗಂಡಂದಿರಾ? ಇಲ್ಲ ಭಂಡಂದಿರಾ? ಹೇಳು ಎಂದು ಇಂದುಮುಖಿ(ದ್ರೌಪದಿ) ಕೇಳಿದಳು. ಹೆಣ್ಣಿನ ಕಾರ್ಯಕ್ಕೋಸ್ಕರವಾಗಿಯೇ ತಮ್ಮಣ್ಣನ ಆಜ್ಞೆಯನ್ನು ಮೀರಿ ಕುಂತಿಯ ಮಗ ಬದುಕಿದನೆಂದು ಕೆಟ್ಟವರು ನುಡಿವರು. ಅಣ್ಣನವರ ಬಳಿ ನಿನ್ನಕಷ್ಟ ಹೇಳಿಕೋ,. ನಾವೆಲ್ಲಾ ಧರ್ಮರಾಯನ ಆಜ್ಞೆಯೆಂಬ ಹಗ್ಗದಲ್ಲಿ ಕಟ್ಟಿಕೊಂಡು ಬಿದ್ದಿದ್ದೇವೆ.  ಇದು ನಾನು ಜೀರ್ಣಿಸಿಕೊಳ್ಳಲಾಗದ ಬೆಂಕಿ ಎಂದು ಹೇಳಿದನು.

ಇನ್ನು ಮುಂದೆ ನನ್ನಂತೆ ಅವಮಾನಿತರಾಗುವ ನಾರಿಯರು ಈ ಭೂಮಿಯಲ್ಲಿ ಹುಟ್ಟದೆಯಿರಲಿ. ಭೀಮನಂ ಬಲಶಾಲಿ ಗಂಡಂದರಿದ್ದೂ ನನ್ನಂತೆಯೂ, ಪಾಂಡವರಂತೆಯೂ ದುಃಖಿಗಳೂ ಅವಮಾನಿತರಾದವರು , ಯಾರಿದ್ದಾರೆ? ಎಂದು ದ್ರೌಪದಿಯು ಹಲುಬಿದಳು. ಅಂದು ಕೌರವನು ನನ್ನನ್ನು ಸಭೆಗೆ ಎಳೆಸಿ ತಂದು ಅವಮಾನ ಮಾಡಿದ. ಅರಣ್ಯದಲ್ಲಿದ್ದಾಗ ಸೈಂದವ (ಜಯದ್ರಥ) ನನ್ನನ್ನು ಎಳೆದೊಯ್ದಿದ್ದ. ಇಂದು ಈ ಕೀಚಕನೆಂಬ ನಾಯಿ ನನ್ನನ್ನು ಕಾಲಿನಿಂದ ಒದ್ದು ನೋಯಿಸಿ. ಈ ಮೂರುಬಾರಿಯೂ ಅವಮಾನ ಹೊಂದಿದ್ದೇನೆ ನನಗಿನ್ನು ಜೀವನ ಸಾಕಾಗಿದೆ ಎಂದು ಬಸವಳಿದಳು ಇಂದುಮುಖಿ.  ಕಾಲಯಮನೇ ಕೋಪಗೊಂಡು ಯುದ್ಧಕ್ಕೆ ಬಂದರೂ ಅವನನ್ನು ಸೋಲಿಸುವ ಬಿಲ್ವಿದ್ಯಾಪರಿಣತಿ ಹೊಂದಿದವರು ನೀವು. ನನ್ನೊಬ್ಬಳನ್ನು  ಆಳಲಾರಿರಿ. ಪಾಪಿಗಳಿರಾ! ತೋಳ್ಬಲ ನಿಮಗೇಕೆ?  ನೀವೇಕೆ ರಾಜವಂಶದಲ್ಲಿ ಹುಟ್ಟಿದಿರಿ? ನೀವೆಲ್ಲಾ ಹೊಟ್ಟೆ ಹೊರೆಯುವುದಕ್ಕಾಗಿ ಜನ್ಮವೆತ್ತಿದ್ದೀರಿ ಎಂದು ಹೀಯಾಳಿಸಿದಳು ಇಂದುಮುಖಿ.

ದ್ರೌಪದಿಯ ಮಾತನ್ನು ಕೇಳಿ ಮನಕರಗಿ ಕಣ್ಣಿರು ಹಾಕಿದ ಭೀಮನಲ್ಲಿ ರೋಷಹೆಚ್ಚಿ ಮನಸ್ಸಿನಲ್ಲಿಯೆ ವೈರಿಗಳನ್ನು ಹಿಂಡಿದನು. ಅಲ್ಲದೆ ದ್ರೌಪದಿಯನ್ನು ಅಪ್ಪಿ ಅವಳ ಕಣ್ಣೀರನ್ನು ತನ್ನ ಬಟ್ಟೆಯಿಂದ ಒರೆಸಿದನು. ಅವಳ ಮುಂಗುರುಳನ್ನು ನೇವರಿಸಿ , ಗಲ್ಲವನ್ನು ಒರೆಸಿ , ಮುದ್ದಾಡುತ್ತಾ, ಮಂಚದ ಬದಿಯಲ್ಲಿದ್ದ ನೀರಿನ ಪತ್ರೆ ತೆಗೆದುಕೊಂಡು ಅವಳ ಮುಖ ಕಮಲವನ್ನು ತೊಳೆದು ರಾಣಿ ನಿನ್ನ ಕೋಪವನ್ನು ಬಿಡು ಹೆಚ್ಚಿಗೆ ಮಾತೇಕೆ ನಮ್ಮ ಅಣ್ಣನ ಆಜ್ಞೆಯ ಗೆರೆಯನ್ನು ದಾಟಿದ್ದೇನೆ ಹೋಗು ಎನ್ನುತ್ತಾ, ಕೀಚಕನ ಹೊಟ್ಟೆಯನ್ನು ಬಗೆಯುತ್ತೇನೆ, ಏನಾದರೂ ಮಿಸುಕಾಡಿದರೆ ವಿರಾಟನವಂಶದ ಹೆಸರನ್ನೇ ಅಳಿಸಿಹಾಕುವೆನು. ಅಜ್ಞಾತವಾಸದಲ್ಲಿರುವ ನಮ್ಮನ್ನು ಕೀಚಕನ ವಧೆಯಿಂದ ದುರ್ಯೋಧನನು ಗುರುತಿಸಿದರೆ ಕೌರವ ಸಮೂಹವನ್ನು ಚೂರು ಚೂರಾಗಿ ಕತ್ತರಿಸುವೆನು. ನಾನು ಮಾಡಿದ್ದು ತಪ್ಪು ಎಂದು ದೇವತೆಗಳೇನಾದರೂ ಹೇಳಿದರೆ ಅಮರಾದ್ರಿಯಮೇಲೆ ಅವರಮುಖವನ್ನು ಉಜ್ಜುವೆನು ಎಂದು ಭೀಮ ಅಬ್ಬರಿತ್ತಾನೆ.




ಪದವಿಭಾಗ :
ಆರಿಗುಸುರುವೆನು, ಆರ ಸಾರುವೆನು , ಆರಿಗೆ ಒರಲುವೆನು , ಆರಿಗೆ ಅರುಹುವೆನು, ಆರ ಬೇಡುವೆನು, ಅಕಟ(ಅಯ್ಯೋ) ಹೆಂಗಸು ಜನ್ಮವನು ಸುಡಲಿ, ಘೋರ ಪಾತಕಿ ಎನ್ನವೊಲು ಮುನ್ನಾರು ನವೆದವರು ಉಂಟು ಮರಣವು ಬಾರದೇ ಎಂದೊರಲಿದಳು ಬಸುರನು ಹೊಯ್ದು ಶಶಿವದನೆ.||೧||

(ಶಶಿವದನೆ ,ಇಂದುಮುಖಿ) ಚಂದ್ರನಂತೆ ಕಾಂತಿಯುತವಾದ ಮುಖವುಳ್ಳವಳಾದ ದ್ರೌಪದಿಯು ತನಗಾದ ಅನ್ಯಾಯವನ್ನುಯಾರಬಳಿ ಹೋಗಿ ಹೇಳಿಕೊಳ್ಳಲಿ, ತನಗೆ ಸಹಾಯಮಾಡುವಂತೆ ಯಾರನ್ನು ಬೇಡಿಕೊಳ್ಳಲಿ, ಈ ಹಾಳು ಹೆಂಗಸು ಜನ್ಮ ಯಾಕಾದರೂ ನನಗೆ ದೊರಕಿತೋ? ಯಾವ ಪಾಪ ಮಾಡಿದುದರಿಂದ ಹೆಂಗಸು ಜನ್ಮ ಬಂತೋ? ಈ ಮೊದಲು ನನ್ನಂತೆ ಯಾರು ಯಾರು ದುಃಖವನ್ನು ಅನುಭವಿಸಿದ್ದಾರೆ. ಶಿವನೇ ನನಗೆ ಮರಣವಾದರೂ ಬಾರದೇ ಎಂದು ಹೊಟ್ಟೆಯನ್ನು ಹಿಸುಕಿಕೊಳ್ಳುತ್ತಾ ಗೋಳಾಡುತ್ತಿದ್ದಾಳೆ.

ಯಮಸುತಂಗೆ ಅರುಹುವೆನೆ ಧರ್ಮ - ಕ್ಷಮೆಯ ಗರ ಹೊಡೆದಿಹುದು, ಪಾರ್ಥನು ಮಮತೆಯುಳ್ಳವನ್ ಎಂಬೆನೇ ತನ್ನಣ್ಣನ ಆಜ್ಞೆಯಲಿ ಭ್ರಮಿತನಾಗಿಹನ್, ಉಳಿದವರಿಬ್ಬರು ರಮಣರ್ ಅವರೀ ನಾಯ ಕೊಲಲು ಅಕ್ಷಮರು, ನಿಸ್ಸಂದೇಹ ಎಂದಳು ತನ್ನ ಮನದೊಳಗೆ.||೨||

ಯಮಸುತನಿಗೆ(ಧರ್ಮರಾಜ) ಹೇಳೋಣವೆಂದರೆ ಅವನಿಗೆ ಧರ್ಮ , ಕ್ಷಮೆ ಎಂಬ ಗರ>ಗ್ರಹ(ತತ್ಸಮ-ತದ್ಭವ) ದೆವ್ವಹಿಡಿದಿದೆ. ಪಾರ್ಥನು(ಅರ್ಜುನ- ಪೃಥೆ(ಕುಂತಿ)ಯಮಗ)ಮಮತೆಯುಳ್ಳವನು ಎಂದು ಅವನಲ್ಲಿ ಹೇಳೋಣವೆಂದರೆ ಅವನು ತಮ್ಮ ಅಣ್ಣನ ಆಜ್ಞೆಯಲ್ಲಿ ಭ್ರಮಿತನಾಗಿದ್ದಾನೆ, ಉಳಿದ ಇಬ್ಬರು(ನಕುಲ-ಸಹದೇವ)ನಿಸ್ಸಂದೇಹವಾಗಿ ಈ ನಾಯಿಯಾದ ಕೀಚಕನನ್ನು   ಕೊಲಲು ಅಕ್ಷಮರು(ಶಕ್ತಿಯಿಲ್ಲದವರು)   ಎಂದು ತನ್ನ ಮನದೊಳಗೆ ಚಿಂತಿಸಿದಳು.

ಎಲ್ಲರೊಳು ಕಲಿಭೀಮನೇ ಮಿಡುಕು ಉಳ್ಳಗಂಡನು ಹಾನಿ ಹರಿಬಕೆ ನಿಲ್ಲದಂಗೈಸುವನು ಕಡು ಹೀಹಾಳಿಯುಳ್ಳವನು ಖುಲ್ಲನನ್ ಇವನು ಪಟಳವನಾತಂ ಗೆಲ್ಲವನು ಹೇಳುವೆನು ಬಳಿಕ ಅವನಲ್ಲಿ ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ||೩||

ದ್ರೌಪದಿಯು ಪಾಂಡವರಲ್ಲಿ ಕಲಿ ಭೀಮನೇ ಪೌರುಷವುಳ್ಳವನು, ಸ್ವಾಭಿಮಾನ- ಕೆಚ್ಚುಗಳನ್ನು ಉಳ್ಳವನು, ನನ್ನ ಕಷ್ಟಗಳ ನಿವಾರಿಸಲು  ಕಾಳಜಿ ತೋರುವವನು  ,    ದುಷ್ಟನಾದ ಕೀಚಕನನ್ನು ಗೆಲ್ಲುವವನು . ಇವನ ಬಳಿ ನನ್ನ ಕಷ್ಟಗಳನ್ನು ಹೇಳಿಕೊಳ್ಳುವೆನು ಇವನಲ್ಲಿ ಕೆಚ್ಚು, ಸಾಮರ್ಥ್ಯ ಇಲ್ಲದಿರೆ ಘೋರವಾದ ವಿಷವನ್ನು ಕುಡಿಯುವೆನು ಎಂದು ನಿಶ್ಚಯಿಸಿದಳು.             

ಎಬ್ಬಿಸಲು ಭುಗಿಲೆಂಬನೋ, ಮೇಣ್ ಒಬ್ಬಳೇ ಏತಕ್ಕೆ ಬಂದೆ ಮೋರೆ ಮಬ್ಬಿದುದು ಏಕೆ ಎಂದು ಎನ್ನ ಸಂತೈಸುವನೋ ಸಾಮದಲಿ ತುಬ್ಬುವುದೋ ತಾ ಬಂದ ಬರವಿದು ನಿಬ್ಬರವಲಾ ಜನದ ಮನಕಿನ್ನೆಬ್ಬಿಸಿಯೇ ನೋಡುವೆನ್ ಎನುತ ಸಾರಿದಳು ವಲ್ಲಭನ||೪||

ಎಬ್ಬಿಸಲು ಕೋಪಗೊಳ್ಳುವನೋ, ಅಲ್ಲದೆ ಒಬ್ಬಳೇ ಏತಕೆ ಬಂದೆ , ಮುಖವೇಕೆ ಕಳೆಗುಂದಿದೆ, ಎಂದು ಸಮಾಧಾನಮಾಡುವನೋ, ನನ್ನನ್ನು ಅರ್ಥಮಾಡಿಕೊಳ್ಳುವನೋ, ಕಾರಣವಿಲ್ಲದೆ ಸುಮ್ಮನೆ ಬರುವವಳಲ್ಲ ಎಂದು ತಿಳಿಯುವನೋ, ಒಮ್ಮೆ ಎಬ್ಬಿಸಿಯೇ ಬಿಡುವೆನು ಎಂದು ತನ್ನ ಗಂಡನಾದ ಭೀಮನ ಬಳಿ ಸಾರಿದಳು.

ಮೆಲ್ಲಮೆಲ್ಲನೆ ಮುಸುಕ ಸಡಿಲಿಸಿ ಗಲ್ಲವನು ಹಿಡಿದು ಅಲುಗಲ್ ಅಪ್ರತಿ ಮಲ್ಲನೆದ್ದನು ನೋಡಿದನು ಪಾಂಚಾಲ ನಂದನೆಯ ವಲ್ಲಭೆಯ ಬರವೇನು ಮುಖದಲಿ ತಲ್ಲಣವೆ ತಲೆದೋರುತಿದೆ ತಳುವಿಲ್ಲದುಸುರು ಇರುಳೇಕೆ ಬಂದೆ ಲತಾಂಗಿ ಹೇಳೆಂದ||೫||

ಮೆಲ್ಲಮೆಲ್ಲನೆ ಅವನ ಮುಸುಕನ್ನು ಸರಿಸಿ ಗಲ್ಲವನ್ನು ಹಿಡಿದು ಅಲುಗಿಸಲು ಸರಿಸಾಟಿಯಿಲ್ಲದ ವೀರ ಮೆಲ್ಲನೆ ಎದ್ದನು . ಪಾಂಚಾಲನಂದನೆ, ತನ್ನ ಸತಿಯನ್ನು ನೋಡಿ ನಿನ್ನ ಮುಖದಲ್ಲಿ ತಲ್ಲಣವೇ(ಭಯ,ಹೆದರಿಕೆ) ತೋರುತ್ತಿದೆ, ಬರಲು ಕಾರಣವೇನು, ತಡಮಾಡದೇ ಹೇಳು ಈ ಇರುಳಲ್ಲಿ ಏಕೆ ಬಂದೆ ಲತಾಂಗಿ ಎಂದು ಕೇಳಿದನು.

ನಿನ್ನೆ ಹಗಲು ಅರೆಯಟ್ಟಿ(ಬೆನ್ನಟ್ಟಿ-ಅಡ್ಡಗಟ್ಟಿ) ಕೀಚಕ ಕುನ್ನಿಯು ಒದೆದನು ರಾಜಸಭೆಯಲಿ ನಿನ್ನ ವಂದಿಗರ್ ಇರಲು ಪರಿಭವವು ಉಚಿತವೇ ತನಗೆ ಎನ್ನನವ ಬೆಂಬಳಿಯ ಬಿಡ ನಾನಿನ್ನು ಬದುಕುವವಳಲ್ಲ ಪಾತಕ ನಿನ್ನ ತಾಗದೆ ಮಾಣದೆನಲು ಅ ಭೀಮ ಖತಿಗೊಂಡ||೬||

ನೆನ್ನೆ ಬೆಳಿಗ್ಗೆ ಕೀಚನೆಂಬ ಕುನ್ನಿಯು ನನ್ನನ್ನು ಅಡ್ಡಗಟ್ಟಿ ರಾಜಸಭೆಯಲ್ಲಿ ಒದ್ದಿದ್ದಾನೆ. ನಿನ್ನಂತ ಜೊತೆಗಾರರು ಇರುವಾಗ ಈ ರೀತಿಯ ಸೋಲು ಸರಿಯೇ? ನನ್ನನ್ನು ಅವನು ಬಿಡುವುದಿಲ್ಲ, ನನ್ನ ಬೆನ್ನು ಹತ್ತಿದ್ದಾನೆ. ಇನ್ನು ನಾನು ಬದುಕುವುದಿಲ್ಲ. ನನ್ನ ಸಾವಿನ ಪಾಪ ನಿನ್ನನ್ನು ಬಿಡುವುದಿಲ್ಲ. ಎಂದು ಹೇಳಿದಾಗ ಭೀಮನ ಬಹಳವಾಗಿ ಕೋಪಗೊಂಡ.

ರಮಣ ಕೇಳ್ ಉಳಿದವರು ತನ್ನನು ರಮಿಸುವರು ಮಾನಾರ್ಥವೆನೆ ನಿರ್ಗಮಿಸುವರು ನೀನಲ್ಲದೆ ಉಳಿದವರ್ ಉಚಿತ ಬಾಹಿರರು ಮಮತೆಯಲಿ ನೀ ನೋಡು ಚಿತ್ತದ ಸಮತೆಯನು ಬೀಳ್ಕೊಡು ಕುಠಾರನ ಯಮನ ಕಾಣಿಸಿ ಕರುಣಿಸೆಂದಳು ಕಾಂತೆ ಕೈಮುಗಿದು.||೭||


ರಮಣ ಕೇಳು ಉಳಿದವರು ನನ್ನನ್ನು ರಮಿಸುವರು (ಸಂತೋಷಪಡಿಸುವರು) ಮಾನ-ಅಪಮಾನದ ವಿಷಯ ಬಂದರೆ ದೂರಹೋಗುವರು , ಹಾಗಾಗಿ ನನ್ನೆಡೆಗೆ ಮಮತೆಯಿಂದ ನೋಡು ನನಗೆ ಸಂತೋಷವಾಗುವ ಹಾಗೆ ವೈರಿಗೆ ಯಮನ ಕೊಡಲಿ ತೋರುವೆನೆಂದು ಮಾತುಕೊಡು ಎಂದು ಕೈಮುಗಿದು ಕೇಳಿದಳು.
.
ಕಲಕಾದೊಡೆ ನಾವು ರಮಿಸುವರುಳಿದವರು ಬಳಿಕೇನು ಕೆಲಬರು ಗಳಿಸಿದೊಡೆ ಕೆಲಬರು ಉಂಡು ಜಾರುವರು ಅಳುಕಿ ನಡೆವವರಲ್ಲ ನಿನ್ನಯ ಹಳಿವು ಹರಿಬವ ಹೇಳಿ ಚಿತ್ತವ ತಿಳುಹಿಕೊಂಬುದು ನಾವು ಭೀತರು ಧರ್ಮಜನ ಹೊರೆಗೆ ||೮||

ಹೋರಾಟಕ್ಕೆ ಆದರೆ ನಾನು ಪ್ರೀತಿಗಾದರೆ ಉಳಿದವರು ಉಳಿದುದೇನು. ಕೆಲವರು ಗಳಿಸಿದರೆ ಕೆಲವರು ಉಂಡು ನಿದ್ರಿಸುವರು. ಯಾವುದಕ್ಕು ಹೆದರಿ ನಡೆವವರಲ್ಲ. ನಿನ್ನ ಕೆಟ್ಟಮಾತುಗಳು ನನ್ನ ಕರ್ತವ್ಯವನ್ನು ತಿಳಿಸಿದರೂ ಧರ್ಮಜನ ಜೊತೆ ಇರುವುದಕ್ಕೆ(ಅವನ ಮಾತು ಮೀರಲು) ಹೆದರಿಕೆಯಾಗುತ್ತದೆ ಎಂದನು.

ಹೆಂಡತಿಯ ಹರಿಬದಲಿಯೊಬ್ಬನೆ ಗಂಡುಗೂಸೆ ವೈರಿಯನು ಕಡಿ ಖಂಡವನು ಮಾಡುವನು ಮೇಣ್ ತನ್ನೊಡಲನಿಕ್ಕುವನು ಗಂಡರೈವರು ಮೂರುಲೋಕದ ಗಂಡರು ಒಬ್ಬಳನಾಳಲಾರಿರಿ ಗಂಡರೋ ನೀವ್ ಭಂಡರೋ ಹೇಳೆಂದಳು ಇಂದುಮುಖಿ ||೯||

ಹೆಂಡತಿಯ ಕಾರ್ಯದಲ್ಲಿ ಒಬ್ಬ ಗಂಡನಾದರೂ ಇದ್ದೀರಾ? ವೈರಿಯನ್ನು ಕಡಿದು ತುಂಡು ತುಂಡುಮಾಡುವನು ಯಾರು? ಗಂಡರು ಐವರು ಇವರೆಲ್ಲ ಮೂರು ಲೋಕಕ್ಕೇ ಹೆಸರಾಂತ ವೀರರು ಆದರೆ ನನ್ನೊಬ್ಬಳನ್ನು ಆಳಲಾರಿರಿ. ಗಂಡಂದಿರಾ ನೀವು ಇಲ್ಲ ಭಂಡಂದಿರಾ? ಹೇಳು ಎಂದು ಇಂದುಮುಖಿ(ದ್ರೌಪದಿ) ಕೇಳಿದಳು.

ಹೆಣ್ಣು ಹರಿಬಕ್ಕೋಸುಗವೆ ತಮ್ಮಣ್ಣನಾಜ್ಞೆಯ ಮೀರಿ ಕುಂತಿಯ ಚಿಣ್ಣ ಬದುಕಿದನೆಂದು ನುಡಿವರು ಕುಜನರಾದವರು ಅಣ್ಣನವರಿಗೆ ದೂರುವುದು ನಾವುಣ್ಣದುರಿಯಿವು ರಾಯನಾಜ್ಞೆಯ ಕಣ್ಣಿಯಲಿ ಬಿಗಿವಡೆದು ಕೆಡೆದೆವು ಕಾಂತೆ ಕೇಳ್ ಎಂದ ||೧೦||

ಹೆಣ್ಣಿನ ಕಾರ್ಯಕ್ಕೋಸ್ಕರವಾಗಿಯೇ ತಮ್ಮಣ್ಣನ ಆಜ್ಞೆಯನ್ನು ಮೀರಿ ಕುಂತಿಯ ಮಗ ಬದುಕಿದನೆಂದು ಕೆಟ್ಟವರು ನುಡಿವರು. ಅಣ್ಣನವರಬಳಿ ನಿನ್ನಕಷ್ಟ ಹೇಳಿಕೋ, ನಾವೆಲ್ಲಾ ಧರ್ಮರಾಯನ ಆಜ್ಞೆಯೆಂಬ ಹಗ್ಗದಲ್ಲಿ ಕಟ್ಟಿಕೊಂಡು ಬಿದ್ದಿದ್ದೇವೆ. ನಾನು ಜೀರ್ಣಿಸಿಕೊಳ್ಳಲಾಗದ ಬೆಂಕಿ ಇದುಎಂದು ಹೇಳಿದನು

ಇನ್ನುಹುಟ್ಟದೆಯಿರಲಿ ನಾರಿಯರೆನ್ನವೊಲು ಭಂಗಿತರು ಭುವನದೊಳಿನ್ನು ಜನಿಸಲು ಬೇಡ ಗಂಡರು ಭೀಮಸನ್ನಿಭರು ಎನ್ನವೊಲು ಪಾಂಡವರವೊಲು ಸಂಪನ್ನ ದುಃಖಿಗಳಾರು ನವೆದರು ಮುನ್ನಿನವರೊಳಗೆಂದು ದ್ರೌಪದಿ ಹಿರಿದು ಹಲುಬಿದಳು.||೧೧||

ದ್ರೌಪದಿಯು ಇನ್ನು ಮುಂದೆ ನನ್ನಂತೆ ಅವಮಾನಿತರಾಗುವ ನಾರಿಯರು ಈ ಭೂಮಿಯಲ್ಲಿ ಹುಟ್ಟದೆಯಿರಲಿ. ಭೀಮನಂತ ಬಲಶಾಲಿ ಗಂಡಂದರಿದ್ದೂ ನನ್ನಂತೆ, ಪಾಂಡವರಂತೆ ದುಃಖಿಗಳು ಅವಮಾನಿತರಾದವರು , ಯಾರಿದ್ದಾರೆ ಎಂದು ಹಲುಬಿದಳು.

ಮಂದೆಗಳೆಸಿದ ಪಾಪಿ ಕೌರವನಂದು ಮುಂದಲೆವಿಡಿದು ಸೈಂದವ ಬಂದು ಬಳಿಕ ಅರಣ್ಯವಾಸದೊಳೆನ್ನನು ಒಯ್ದ ಇಂದು  ಕೀಚಕ ನಾಯ ಕಾಲಲಿ ನೊಂದೆ ನಾನೀ ಮೂರು ಬಾರಿಯೆ ಬಂದ ಭಂಗವೆ ಸಾಕೆನುತೆ ಬಸವಳಿದಳಿಂದುಮುಖಿ.||೧೨||

ಅಂದು ಕೌರವನು ನನ್ನನ್ನು ಸಭೆಗೆ ಎಳೆಸಿತಂದು ಅವಮಾನ ಮಾಡಿದ. ಅರಣ್ಯದಲ್ಲಿದ್ದಾಗ ಸೈಂದವ(ಜಯದ್ರಥ)ನನ್ನನ್ನು ಎಳೆದೊಯ್ದಿದ್ದ. ಇಂದು ಈ ಕೀಚಕನೆಂಬ ನಾಯಿ ನನ್ನನ್ನು ಕಾಲಿನಿಂದ ಒದ್ದು ನೋಯಿಸಿದೆ. ಈ ಮೂರುಬಾರಿಯೂ ಅವಮಾನ ಹೊಂದಿದ್ದೇನೆ ನನಗಿನ್ನು ಜೀವನ ಸಾಕಾಗಿದೆ ಎಂದು ಬಸವಳಿದಳು ಇಂದುಮುಖಿ.


ಕಾಲಯಮ ಕೆರಳಿದೊಡೆ ಮುರಿವ ಎಚ್ಚಾಳುತನದವರು ಎನ್ನನು ಒಬ್ಬಳನು ಆಳಲಾರಿರಿ ಪಾಪಿಗಳಿರ ಅಪಕೀರ್ತಿಗಳು ಕಿರಲ ತೋಳಹೊರೆ ನಿಮಗೇಕೆ ಭೂಮೀಪಾಲ ವಂಶದೊಳು ಉದಿಸಲೇತಕೆ ಕೂಳುಗೇಡಿಂಗೆ ಒಡಲ ಹೊರುವಿರಿ ಎಂದಳು ಇಂದುಮುಖಿ ||೧೩||

ಕಾಲಯಮನೇ ಕೋಪಗೊಂಡರೂ ಯುದ್ಧಕ್ಕೆಬಂದರೂ ಅವನನ್ನು ಸೋಲಿಸುವ ಬಿಲ್ವಿದ್ಯಾಪರಿಣತಿ ಹೊಂದಿದವರು ನನ್ನೊಬ್ಬಳನ್ನು  ಆಳಲಾರಿರಿ. ಪಾಪಿಗಳಾ ತೋಳ್ಬಲ ನಿಮಗೇಕೆ, ನೀವೇಕೆ ರಾಜವಂಶದಲ್ಲಿ ಹುಟ್ಟಿದಿರಿ, ಹೊಟ್ಟೆಹೊರೆಯುವುದಕ್ಕಾಗಿ ಜನ್ಮವೆತ್ತಿದ್ದೀರಿ ಎಂದಳು ಇಂದುಮುಖಿ.


ಎನಲು ಕಂಬನಿ ತುಂಬಿದನು ಕಡುನೆನೆದು ಅಂತಃಕರಣ ರೋಷದ ಘನತೆ ಹೆಚ್ಚಿತು ಹಗೆಗಳನು ಹಿಂಡಿದನು ಮನದೊಳಗೆ ತಾನು ಪುಳಕವುಬ್ಬರಿಸಿ ಮೆಲ್ಲನೆ ವನಿತೆಯನು ತೆಗೆದಪ್ಪಿದನು ಕಂಬನಿಯ ತೊಡೆದನು ಸೆರಗಿನಲಿ ಕಲಿಭೀಮ ಮಾನಿನಿಯ||೧೪||

ದ್ರೌಪದಿಯ ಮಾತನ್ನು ಕೇಳಿ ಮನಕರಗಿ ಕಣ್ಣಿರುಹಾಕಿದ ಭೀಮನಲ್ಲಿ ರೋಷಹೆಚ್ಚಿ ಮನಸ್ಸಿನಲ್ಲಿಯೆ ವೈರಿಗಳನ್ನು ಹಿಂಡಿದನು. ಅಲ್ಲದೆ ದ್ರೌಪದಿಯನ್ನು ಅಪ್ಪಿ ಅವಳ ಕಣ್ಣೀರನ್ನು ತನ್ನ ಬಟ್ಟೆಯಿಂದ ಒರೆಸಿದನು.

ಕುರುಳನೇವರಿಸಿದನು ಗಲ್ಲವನು ಒರೆಸಿ ಮುಂಡಾಡಿದನು ಮಂಚದ ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ ಅರಸಿ ಬಿಡು ಬಿಡು ಖಾತಿಯನು ವಿಸ್ತರಿಸಲೇಕೆ ಎಮ್ಮಣ್ಣನ ಆಜ್ಞೆಯ ಗೆರೆಯ ದಾಂಟಿದೆ ದಾಂಟಿದೆನು ಹೋಗೆಂದನು ಆ ಭೀಮ||೧೫||

ಮುಂಗುರುಳನ್ನು ನೇವರಿಸಿ , ಗಲ್ಲವನ್ನು ಒರೆಸಿ , ಮುದ್ದಾಡುತ್ತಾ, ಮಂಚದ ಬದಿಯಲ್ಲಿದ್ದ ನೀರಿನ ಪತ್ರೆ ತೆಗೆದುಕೊಂಡು ಅವಳ ಮುಖಕಮಲವನ್ನು ತೊಳೆದ ಭೀಮನು ರಾಣಿ ನಿನ್ನ ಕೋಪವನ್ನು ಬಿಡು ಹೆಚ್ಚಿಗೆ ಮಾತೇಕೆ ನಮ್ಮ ಅಣ್ಣನ ಆಜ್ಞೆಯ ಗೆರೆಯನ್ನು ದಾಟಿದ್ದೇನೆ ಹೋಗು ಎಂದನು .

ಬಸುರ ಬಗೆವೆನು ಕೀಚನಕ ನಸುಮಿಸುಕಿದೊಡೆ ವೈರಾಟ ವಂಶದ ಹೆಸರ ತೊಡೆವೆನು ನಮ್ಮನರಿದೊಡೆ ಕೌರವವ್ರಜವ ಕುಸುರಿದರಿವೆನು ಭೀಮ ಕಷ್ಟವನೆಸಗಿದನು ಹಾ ಎಂದರಾದೊಡೆ ಮುಸುಡನು ಅಮರಾದ್ರಿಯಲಿ ತೇವೆನು ದೇವಸಂತತಿಯ ||೧೬||

ಕೀಚಕನ ಹೊಟ್ಟೆಯನ್ನು ಬಗೆಯುತ್ತೇನೆ, ಏನಾದರೂ ಮಿಸುಕಾಡಿದರೆ ವಿರಾಟನವಂಶದ ಹೆಸರನ್ನೇ ಅಳಿಸಿಹಾಕುವೆನು. ಅಜ್ಞಾತವಾಸದಲ್ಲಿರುವ ನಮ್ಮನ್ನು ಈ ಕಾರ್ಯದಿಂದ ದುರ್ಯೋಧನನು ಗುರುತಿಸಿದರೆ ಅವರ ಸಮೂಹವನ್ನು ಚೂರು ಚೂರಾಗಿ ಕತ್ತರಿಸುವೆನು. ನಾನು ಮಾಡಿದ್ದು ತಪ್ಪು ಎಂದು ದೇವತೆಗಳೇನಾದರೂ ಹೇಳಿದರೆ ಅಮರಾದ್ರಿಯಲ್ಲಿ ಅವರಮುಖವನ್ನು ಉಜ್ಜುವೆನು ಎಂದು ಭೀಮ ಹೇಳುತ್ತಾನೆ.


ಅ. ಒಂದು ಅಂಕದ ಪ್ರಶ್ನೆಗಳು
೧. ದ್ರೌಪದಿ ತನ್ನನ್ನು ತಾನು ಏನೆಂದು ಕರೆದುಕೊಂಡಿದ್ದಾಳೆ?
ದ್ರೌಪದಿ ತನ್ನನ್ನು ತಾನು ಪಾತಕಿ ಎಂದು ಕರೆದುಕೊಂಡಿದ್ದಾಳೆ.


೨. ಧರ್ಮರಾಯನಿಗೆ ಎಂಥ ಗರ ಹೊಡೆದಿದೆ?
ಧರ್ಮರಾಯನಿಗೆ ಧರ್ಮ ಮತ್ತು ಕ್ಷಮೆಯ ಗರ ಹೊಡೆದಿದೆ.

೩. ಅಣ್ಣನಾಜ್ಞೆಯಲಿ ಭ್ರಮಿತನಾದವನು ಯಾರು?
ಅಣ್ಣನಾಜ್ಞೆಯಲಿ ಭ್ರಮಿತನಾದವನು ಅರ್ಜುನ.

೪. ಕಲಿಭೀಮನು ಎಂತಹ ಗಂಡನೆಂದು ದ್ರೌಪದಿ ಹೇಳಿದ್ದಾಳೆ?
ಕಲಿ ಭೀಮನು(ಮಿಡುಕುಳ್ಳ ಗಂಡ) ಪೌರುಷ, ಸ್ವಾಭಿಮಾನ- ಕೆಚ್ಚುಗಳನ್ನು ಉಳ್ಳವನು ಎಂದು ದ್ರೌಪದಿ ಹೇಳಿದ್ದಾಳೆ.

೫. ಪಾಂಚಾಲನಂದನೆ ಯಾರು?
ದ್ರೌಪದಿಯನ್ನು ಪಾಂಚಾಲನಂದನೆ ಎಂದು ಕರೆದಿದ್ದಾರೆ. ಪಾಂಚಾಲ ದೇಶದ ಅರಸ ದ್ರುಪದನ ಮಗಳೇ ದ್ರೌಪದಿ.

೬. ರಾಜಸಭೆಯೊಳಗೆ ದ್ರೌಪದಿಯನ್ನು ಒದೆದವರು ಯಾರು?
ರಾಜಸಭೆಯೊಳಗೆ ದ್ರೌಪದಿಯನ್ನು ಕೀಚಕ ಒದೆದನು.

೭. ಯಾರನ್ನು ಯಮಲೋಕಕ್ಕೆ ಕಳಿಸಲು ದ್ರೌಪದಿ ಭೀಮನಿಗೆ ಹೇಳುತ್ತಾಳೆ?
ಕೀಚಕನನ್ನು ಯಮಲೋಕಕ್ಕೆ ಕಳಿಸಲು ದ್ರೌಪದಿ ಭೀಮನಿಗೆ ಹೇಳುತ್ತಾಳೆ.

೮. ಧರ್ಮಜನ ಹೊರೆಗೆ ಭೀತರಾದವರು ಯಾರು?
ಭೀಮಾದಿಗಳು(ಭೀಮ,ಅರ್ಜುನ, ನಕುಲ,ಸಹದೇವರು)


೯. ಗಂಡರೋ ನೀವ್ ಭಂಡರೋ ಎಂದು ಕೇಳಿದವರಾರು?
ಗಂಡರೋ ನೀವ್ ಭಂಡರೋ ಎಂದು ಕೇಳಿದ್ದು ದ್ರೌಪದಿ.



೧೦. ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂದವರಾರು?
ದ್ರೌಪದಿಯು ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂದು ಹೇಳಿದಳು.

೧೧. ದ್ರೌಪದಿ ಮುಂದಲೆಯ ಹಿಡಿದವರಾರು?
ದ್ರೌಪದಿ ಮುಂದಲೆಯ ಹಿಡಿದವನು ದುಶ್ಯಾಸನ.

೧೨. ಅರಣ್ಯವಾಸದಲ್ಲಿದ್ದಾಗ ದ್ರೌಪದಿಯನ್ನು ಎಳೆದೊಯ್ದವರಾರು?
ಅರಣ್ಯವಾಸದಲ್ಲಿದ್ದಾಗ ದ್ರೌಪದಿಯನ್ನು ಎಳೆದೊಯ್ದದವನು ಸೈಂದವ(ಜಯದ್ರಥ).

೧೩. ಮನದೊಳಗೆ ಹಗೆಗಳನು ಹಿಂಡಿದವರಾರು?
ಮನದೊಳಗೆ ಹಗೆಗಳನು ಹಿಂಡಿದವನು ಭೀಮ.

೧೪.ದ್ರೌಪದಿಯ ಮುಖವನ್ನು ಭೀಮ ಯಾವುದರಿಂದ ತೊಳೆದನು?
ದ್ರೌಪದಿಯ ಮುಖವನ್ನು ಭೀಮನು ಮಂಚದ ಪಕ್ಕದಲ್ಲಿದ್ದ ಗಿಂಡಿಯ ನೀರಿನಿಂದ ತೊಳೆದನು.

೧೫. ಯಾರ ಬಸುರನ್ನು ಬಗೆಯುವುದಾಗಿ ಭೀಮ ಹೇಳುತ್ತಾನೆ?
ಕೀಚಕನ ಬಸುರನ್ನು ಬಗೆವುದಾಗಿ ಭೀಮ ಹೇಳುತ್ತಾನೆ.

ಎರಡು ಅಂಕದ ಪ್ರಶ್ನೆಗಳು
೧. ಕೊಲಲಕ್ಷಮರೆಂದು ದ್ರೌಪದಿ ಯಾರನ್ನು ಕುರಿತು ಹೇಳಿದ್ದಾಳೆ?
ಧರ್ಮಜನಿಗೆ ಧರ್ಮ-ಕ್ಷಮೆಯ ಗರ ಹೊಡೆದಿದೆ, ಪಾರ್ಥ ಅಣ್ಣನ ಆಜ್ಞೆಯಲ್ಲಿ ಭ್ರಮಿತನಾಗಿದ್ದಾನೆ ಇನ್ನು ನಕುಲ ಸಹದೇವರು ಕೀಚಕನನ್ನು ಕೊಲ್ಲಲು ಅಕ್ಷಮರು ಎಂದು ಹೇಳಿದ್ದಾಳೆ.

೨. ಮಲಗಿರುವ ಭೀಮನನ್ನು ದ್ರೌಪದಿ ಹೇಗೆ ಎಬ್ಬಿಸಿದಳು?
ಎಬ್ಬಿಸಿದರೆ ಎಲ್ಲಿ ಕೋಪಗೊಳ್ಳುವನೋ ಅಥವಾ ನನ್ನ ದುಃಖವನ್ನು ತಿಳಿದು ಸಮಾಧಾನ ಮಾಡುವನೋ ಎಂದು  ಮೆಲ್ಲಮೆಲ್ಲನೆ ಅವನ ಮುಸುಕನ್ನು ಸರಿಸಿ ಗಲ್ಲವನ್ನು ಹಿಡಿದು ಅಲುಗಿಸಲು ಪರಾಕ್ರಮಿಯಾದ ಭೀಮಸೇನ ಎದ್ದನು.

೩. ತಾನು ಘೋರತರ ವಿಷ ಕುಡಿಯುವುದಾಗಿ ದ್ರೌಪದಿ ಏಕೆ ಹೇಳುತ್ತಾಳೆ?
ಕಲಿಭೀಮನಲ್ಲಿ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತೇನೆ. ಅವನೊಬ್ಬನೇ ಪೌರುಷ, ಕೆಚ್ಚು , ಸ್ವಾಭಿಮಾನ ಉಳ್ಳವನು, ನನ್ನಕಷ್ಟಗಳನ್ನು ಅರಿತು ಕಾಳಜಿಯಿಂದ ಅದನ್ನು ನಿವಾರಿಸುವವನು ಇವನಲ್ಲಿ ಕೀಚಕನನ್ನು ಕೊಲ್ಲುವ ಸಾಮರ್ಥ್ಯವಿಲ್ಲದಿದ್ದರೆ ಘೋರವಾದ ವಿಷವನ್ನು ಕುಡಿಯುವೆನು ಎಂದು ನಿಶ್ಚಯಿಸಿದಳು.

೪. ಉಳಿದ ನಾಲ್ವರು ಪಾಂಡವರ ಬಗ್ಗೆ ದ್ರೌಪದಿಯ ಅಭಿಪ್ರಾಯವೇನು?
ಧರ್ಮಜನಿಗೆ ಧರ್ಮ-ಕ್ಷಮೆಯ ಗರ ಹೊಡೆದಿದೆ, ಅರ್ಜುನನಿಗೆ ಅಣ್ಣನ ಆಜ್ಞೆಯ ಭ್ರಮೆ ಹಿಡಿದಿದೆ, ಇನ್ನು ನಕುಲ ಸಹದೇವರು ಕೀಚಕನನ್ನು ಕೊಲ್ಲಲು ಅಕ್ಷಮರು ಉಳಿದವ ಕಲಿ ಭೀಮನೊಬ್ಬನೇ ಸಾಮರ್ಥ್ಯಹೊಂದಿರುವವನು ಅಲ್ಲದೆ ನನ್ನ ಬಗ್ಗೆ ಕಾಳಜಿ ಹೊಂದಿರುವವನು ಎಂದು ಅಭಿಪ್ರಾಯ ಪಟ್ಟಳು.

೫. ದ್ರೌಪದಿಯಗಂಡರೈವರು/ ಮೂರುಲೋಕದ ಗಂಡರಾರು ಹೆಸರಿಸಿ.
ಧರ್ಮರಾಜ ಯುಧಿಷ್ಠಿರ, ಕಲಿ ಭೀಮ , ಅರ್ಜುನ, ನಕುಲ ಮತ್ತು ಸಹದೇವರುಗಳನ್ನು ಮೂರುಲೋಕದ ಗಂಡಂದಿರು ಆದರೆ ತನ್ನಕಷ್ಟಗಳಿಗೆ ಆಗುವವರು ಯಾರೂ ಇಲ್ಲ ಎಂದು ಹೇಳುತ್ತಾಳೆ.

೬. ಹೆಂಡತಿಯ ಹರಿಬಕ್ಕಾಗಿ ಗಂಡುಗೂಸು ಏನು ಮಾಡುತ್ತಾನೆ?
ಹೆಂಡತಿಯ ಮಾನರಕ್ಷಣೆ ಮಾಡುವಲ್ಲಿ ಗಂಡನಾದವನು ವೈರಿಗಳ ದೇಹವನ್ನು ತುಂಡರಿಸಿ ಕೊಲ್ಲುವನು.  ನನಗೆ ಮೂರು ಲೋಕಗಳನ್ನೂ ಆಳುವಂತಹ ಗಂಡಂದಿರಿದ್ದೂ ವ್ಯರ್ಥ ಎಂದು ದುಃಖಿಸಿದ್ದಾಳೆ.                  

೭. ಕುಜನರಾದವರು ಏನೆಂದು ನುಡಿಯುತ್ತಾರೆ?
ನಾವು ಸಹೋದರರು ಅಣ್ಣನ ಮಾತಿಗೆ ಕಟ್ಟುಬಿದ್ದು ಸುಮ್ಮನಿದ್ದೇವೆ. ಇದನ್ನೇ ಕೆಟ್ಟಜನರು ಕುಂತಿಯ ಮಕ್ಕಳು ಬದುಕಿಕೊಂಡರು ಎಂದು ಹೀಯಾಳಿಸುತ್ತಾರೆ.

೮. ಸೋದರರ ಬಗ್ಗೆ ಭೀಮನು ವ್ಯಕ್ತಪಡಿಸಿದ ಅಭಿಪ್ರಾಯ ಯಾವುದು?
ಕಲಹಕ್ಕಾದರೆ ನಾನು ರಮಿಸಲು ಉಳಿದವರು ನಾವು ಗಳಿಸಿದರೆ ಉಳಿದವರು ಊಟಮಾಡುತ್ತ ನಿದ್ರಿಸುತ್ತಾ ಕಾಲಕಳೆಯುತ್ತಾರೆ.  ಯಾವುದಕ್ಕೂ ಹೆದರದೆ ನಡೆಯುತ್ತಾರೆ. ಧರ್ಮಜನ ಜೊತೆ ಇರಲು ಹೆದರಿಕೆಯಾಗುತ್ತದೆ. ಮತ್ತೆ ಮತ್ತೆ ಯಾವ ಕಷ್ಟಗಳನ್ನು ತಂದೊಡ್ಡುವನೋ ಎಂಬ ಭಾವನೆಯಿಂದ ಹೀಗೆ ಹೇಳಿದ್ದಾನೆ..

ಸಂದರ್ಭ(ಮೂರು ಅಂಕದ ಪ್ರಶ್ನೆಗಳು)
೧. ಎನ್ನವೊಲು ಮುನ್ನಾರು ನವೆದವರುಂಟು
ಈ ವಾಕ್ಯವನ್ನು ಕುಮಾರವ್ಯಾಸನ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು  ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ತನಗಾದ ಅನ್ಯಾಯಗಳನ್ನು ಸ್ಮರಿಸುತ್ತಾ ಬಹಳ ದುಃಖಿಯಾಗಿ ದ್ರೌಪದಿಯು ಈ ಮೇಲಿನ ಮಾತುಗಳನ್ನು ಆಡುತ್ತಾಳೆ. ತನ್ನ ನೋವು ಸಂಕಟಗಳನ್ನು ಯಾರಿಗೆ ಹೇಳಿಕೊಳ್ಳಲಿ ನಿವಾರಿಸುವಂತೆ ಯಾರನ್ನು ಬೇಡಿಕೊಳ್ಳಲಿ ಎಂತಹ ಘೋರ ಪಾಪವನ್ನು ಮಾಡಿದ್ದೇನೆ ಈ ಮೊದಲು ನನ್ನಂತೆ ಈರೀತಿಯ ಕಷ್ಟಗಳನ್ನು ಅನುಭವಿಸಿದವರು ಇದ್ದಾರೆಯೇ ಎಂದು ದುಃಖಿಸಿದ ಸಮಯದಲ್ಲಿ ಈ ಮಾತು ಬಂದಿದೆ.

೨. ಯಮಸುತಂಗರುಹುವೆನೆ ಧರ್ಮಕ್ಷಮೆಯ ಗರಹೊಡೆದಿಹುದು.
ಈ ವಾಕ್ಯವನ್ನು ಕುಮಾರವ್ಯಾಸನ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು  ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ತನಗಾದ ಅನ್ಯಾಯಗಳನ್ನು ಯಾರ ಬಳಿ ಹೇಳಿಕೊಳ್ಳಲಿ, ಯಮಸುತನಾದ ಧರ್ಮರಾಜನಿಗೆ ಹೇಳೋಣವೆಂದರೆ ಅವನಿಗೆ ಧರ್ಮದ, ಕ್ಷಮೆಯ ಗರಹೊಡೆದಿದೆ, ಅರ್ಜುನನಿಗೆ ಹೇಳೋಣವೆಂದರೆ ಅಣ್ಣನ ಆಜ್ಞೆಯಲ್ಲಿ ಭ್ರಮಿತನಾದವನು  ಎಂದು ಬಹಳ ದುಃಖಿಯಾಗಿ ದ್ರೌಪದಿಯು ಈ ಮೇಲಿನ ಮಾತುಗಳನ್ನು ಆಡುತ್ತಾಳೆ.

೩. ನಾಯ ಕೊಲಲಕ್ಷಮರು
ಈ ವಾಕ್ಯವನ್ನು ಕುಮಾರವ್ಯಾಸನ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು  ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ನಗಾದ ಅನ್ಯಾಯಗಳನ್ನು ಯಾರ ಬಳಿ ಹೇಳಿಕೊಳ್ಳಲಿ, ಯಮಸುತನಾದ ಧರ್ಮರಾಜನಿಗೆ ಹೇಳೋಣವೆಂದರೆ ಅವನಿಗೆ ಧರ್ಮದ, ಕ್ಷಮೆಯ ಗರಹೊಡೆದಿದೆ, ಅರ್ಜುನನಿಗೆ ಹೇಳೋಣವೆಂದರೆ ಅಣ್ಣನ ಆಜ್ಞೆಯಲ್ಲಿ ಭ್ರಮಿತನಾದವನು ನಕುಲ ಸಹದೇವರು ಕೀಚಕನೆಂಬ ನಾಯಿಯನ್ನು ಕೊಲ್ಲಲು ಅಸಮರ್ಥರು ಎಂದು ಬಹಳವಾಗಿ ದುಃಖಿಸುತ್ತಾ ದ್ರೌಪದಿಯು ಈ ಮೇಲಿನ ಮಾತುಗಳನ್ನು ಆಡುತ್ತಾಳೆ.

೪. ಕಲಿಭೀಮನೇ ಮಿಡುಕುಳ್ಳ ಗಂಡನು
ಈ ವಾಕ್ಯವನ್ನು ಕುಮಾರವ್ಯಾಸನ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು  ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ಮಿಕ್ಕನಾಲ್ವರು ಗಂಡಂದಿರಲ್ಲಿ ಮಿಡುಕುಳ್ಳಗಂಡನೆಂದರೆ ಕಲಿ ಭೀಮನೊಬ್ಬನೇ ಇವನ ಬಳಿ ನನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತೇನೆ ಇವನಲ್ಲಿ ಕೆಚ್ಚು ಸ್ವಾಭಿಮಾನ ಇದೆ. ನನ್ನ ಕಷ್ಟಗಳಿಗೆ ಸ್ಪಂದಿಸುತ್ತಾನೆ ಎಂಬ ಭಾವನೆಯಿಂದ ದ್ರೌಪದಿ ಈಮಾತುಗಳನ್ನು ಆಡುತ್ತಾಳೆ.

೫. ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ
ಈ ವಾಕ್ಯವನ್ನು ಕುಮಾರವ್ಯಾಸನ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು  ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ಮಿಕ್ಕನಾಲ್ವರು ಗಂಡಂದಿರಲ್ಲಿ ಮಿಡುಕುಳ್ಳಗಂಡನೆಂದರೆ ಕಲಿ ಭೀಮನೊಬ್ಬನೇ ಇವನ ಬಳಿ ನನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತೇನೆ ಇವನು ನನ್ನ ಕಷ್ಟಗಳಿಗೆ ಸ್ಪಂದಿಸುತ್ತಾನೆ. ಇವನಲ್ಲಿ ಕೀಚಕನನ್ನು ಕೊಲ್ಲುವ ಸಾಮರ್ಥ್ಯವಿಲ್ಲದಿದ್ದರೆ ಘೋರವಾದ ವಿಷವನ್ನು ಕುಡಿಯುತ್ತೇನೆ ಎಂದು ದ್ರೌಪದಿ ಈಮಾತುಗಳನ್ನು ಆಡುತ್ತಾಳೆ.


೬. ತಳುವಿಲ್ಲದುಸಿರಿರುಳೇಕೆ ಬಂದೆ?
ಈ ವಾಕ್ಯವನ್ನು ಕುಮಾರವ್ಯಾಸನ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು  ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ.ತನ್ನಬಳಿ ಅಪರಾತ್ರಿಯಲ್ಲಿ ಬಂದು ಎಬ್ಬಿಸಿದ ದ್ರೌಪದಿಯನ್ನು ಕುರಿತು ಭೀಮಸೇನನು ಈ ರೀತಿ ಹೇಳುತ್ತಾನೆ. ಅವಳನ್ನು ಬೇರೆ ಯಾರಾದರೂ ಇಲ್ಲಿಕಂಡರೆ ಅಪಾಯ ಎಂಬ ಭಾವನೆಯಿಂದ ಈ ರೀತಿ ಕೇಳಿರಬಹುದು.



೭.ಅವ ಬೆಂಬಳಿಯ ಬಿಡ ನಾನಿನ್ನು ಬದುಕುವಳಲ್ಲ
ಈ ವಾಕ್ಯವನ್ನು ಕುಮಾರವ್ಯಾಸನ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು  ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ತನ್ನನ್ನು ಹಿಂಸಿಸುತ್ತಿರುವ ಕೀಚಕನ ಬಗ್ಗೆ ತಿಳಿಸುತ್ತಾ ಅವನು ಮತ್ತೆ ಮತ್ತೆ ನನ್ನನ್ನು ಕಾಡುತ್ತಾನೆ. ನೀನು ಅವನನ್ನು ನಿವಾರಿಸದಿದ್ದರೆ ನಾನು ಬದುಕುವುದಿಲ್ಲ ಎಂದು ದುಃಖಿತ ದ್ರೌಪದಿ ಭೀಮನಿಗೆ ಹೇಳಿದಳು.


೮. ನೀನಲ್ಲದುಳಿದವರುಚಿತ ಬಾಹಿರರು.
ಈ ವಾಕ್ಯವನ್ನು ಕುಮಾರವ್ಯಾಸನ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು  ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ಉಳಿದವರು ನನ್ನನ್ನು ರಮಿಸುವರು, ಮಾನ-ಅಪಮಾನದ ವಿಷಯ ಬಂದರೆ ದೂರಹೋಗುವರು , ಹಾಗಾಗಿ ನನ್ನೆಡೆಗೆ ಮಮತೆಯಿಂದ ನೋಡು ನನಗೆ ಸಂತೋಷವಾಗುವ ಹಾಗೆ ಕೀಚಕನ ಕೊಲ್ಲುವೆನೆಂದು ಮಾತುಕೊಡು ಎಂದು ಕೈಮುಗಿದು ಕೇಳಿದಳು.

೯. ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು
ಈ ವಾಕ್ಯವನ್ನು ಕುಮಾರವ್ಯಾಸನ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು  ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ಇಲ್ಲಿ ಭೀಮನು ದ್ರೌಪದಿಯ ಮಾತಿಗೆ ಉತ್ತರವಾಗಿ ಈಮಾತುಗಳನ್ನು ಹೇಳುತ್ತಾನೆ. ಹೋರಾಟ, ಹೊಡೆದಾಟಗಳಿಗೆ ನಾನು ಬೇಕು ಉಳಿದ ಕೆಲಸಗಳಿಗೆ ಉಳಿದವರು ಬೇಕೋ ಎಂದು ಇಲ್ಲಿ ಉಳಿದ ಪಾಂಡವರು ಯಾವುದನ್ನು ಹಚ್ಚಿಕೊಳ್ಳದೆ ನೆಮ್ಮದಿಯಿಂದ ಇದ್ದಾರೆ ಎಂಬ ಕೋಪದಲ್ಲಿ ಹೇಳುವಾಗ ಈ ಗಾದೆಮಾತು ಬಂದಿದೆ.

೧೦. ಒಬ್ಬ್ಳನಾಳಲಾರಿರಿ ಗಂಡರೋ ನೀವ್ ಭಂಡರೋ
ಈ ವಾಕ್ಯವನ್ನು ಕುಮಾರವ್ಯಾಸನ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು  ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ತನ್ನ ನೋವು ಸಂಕಟಗಳಿಗೆ ಭೀಮನು ಸ್ಪಂದಿಸದೇ ಇದ್ದಾಗ ರೋಷದಿಂದ ದ್ರೌಪದಿಯು ಈ ಮಾತುಗಳನ್ನು ಹೇಳುತ್ತಾಳೆ. ಪತ್ನಿಯ ಕಷ್ಟಗಳನ್ನು ಕಂಡು ಅವಳಿಗೆ ತೊಂದರೆಕೊಟ್ಟ ವೈರಿಯನ್ನು ತುಂಡುತುಂಡಾಗಿ ಕತ್ತರಿಸುವವನು ನಿಜವಾದ ಗಂಡ ಮೂರುಲೋಕದ ಗಂಡಂದಿರು ನನ್ನೊಬ್ಬಳನ್ನು ಆಳಲು ಅಸಮರ್ಥರು ಎಂದು ದೂಷಿಸುತ್ತಾಳೆ.

೧೧. ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು
ಈ ವಾಕ್ಯವನ್ನು ಕುಮಾರವ್ಯಾಸನ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು  ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ತನ್ನಂತೆ ನೋವು ಸಂಕಟಕ್ಕೆ ಒಳಗಾದ ಹೆಂಗಸರು ಬೇರೆ ಯಾರೂ ಇರಲಿಕ್ಕಿಲ್ಲ. ಮೂರುಲೋಕವನ್ನು ಆಳುವಂತ ಗಂಡಸರನ್ನು ಪಡೆದೂ ಮೂರುಬಾರಿ ಅವಮಾನಗಳಿಗೆ ಒಳಗಾಗಿದ್ದೇನೆ. ನನ್ನಂತೆ ಕಷ್ಟಪಡುವ ಹೆಂಗಸರು ಈಲೋಕದಲ್ಲಿ ಹುಟ್ಟದೆ ಇರಲಿ ಎಂದು ಬಯಸುತ್ತಾಳೆ.


೧೨. ಕೂಳುಗೇಡಿಂಗೊಡಲ ಹೊರುವಿರಿ.
ಈ ವಾಕ್ಯವನ್ನು ಕುಮಾರವ್ಯಾಸನ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು  ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ಯಮನೇ ಎದುರಾಗಿನಿಂತರೂ ಅವನನ್ನು ಸೋಲಿಸುವ ಬಿಲ್ವಿದ್ಯೆ, ಪರಾಕ್ರಮಗಳನ್ನು ಹೊಂದಿರುವ ಮೂರುಲೋಕಗಳಲ್ಲೂ ಮಹಾವೀರರೆನಿಸಿರುವ ನೀವು ನನ್ನೊಬ್ಬಳನ್ನು ಆಳಲಾರಿರಿ. ನಿಮಗೇಕೆ ಪರಾಕ್ರಮ?ಈ ತೋಳ್ಬಲ, ನೀವುಗಳು ಹುಟ್ಟಿರುವುದೇ ಹೊಟ್ಟೆಪಾಡಿಗೆ ತಿಂದು ತಿರಿಯುವುದಕ್ಕೆ ಎಂದು ಕೋಪದಿಂದಲಿ ಹೇಳುತ್ತಾಳೆ.




೧೩. ಹಗೆಗಳನು ಹಿಂಡಿದನು ಮನದೊಳಗೆ
ಈ ವಾಕ್ಯವನ್ನು ಕುಮಾರವ್ಯಾಸನ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು  ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ದ್ರೌಪದಿಯ ಕೋಪದ ಮಾತುಗಳನ್ನು ಕೇಳಿದ ಭೀಮನಲ್ಲಿ ರೋಷಹೆಚ್ಚಿ ವೈರಿಗಳನ್ನು ಮನಸ್ಸಿನಲ್ಲಿಯೇ ಅವರನ್ನು ಕೊಚ್ಚುತ್ತಿದ್ದಾನೆ ಎಂಬುದನ್ನು ಕವಿ ಈ ಮಾತಿನಲ್ಲಿ ಹೇಳುತ್ತಾನೆ.

೧೪. ಮುಸುಡನಮರಾದ್ರಿಯಲಿ ತೇವೆನು ದೇವಸಂತತಿಯ
ಈ ವಾಕ್ಯವನ್ನು ಕುಮಾರವ್ಯಾಸನ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು  ಎಂಬ ಕಾವ್ಯಭಾಗದಿಂದ ಆರಿಸಲಾಗಿದೆ. ಕೀಚಕನ ವಧೆಯ ಸುದ್ಧಿ ಕೌರವನಿಗೆ ತಿಳಿದು ನಮ್ಮನ್ನು ಕೊಲ್ಲಲೆಂದು ಬಂದರೆ ಅವನ ವಂಶವನ್ನು ನಿರ್ವಂಶಮಾಡುತ್ತೇನೆ. ನಾನು ಮಾಡಿದ್ದು ತಪ್ಪು ಎಂದು ದೇವತೆಗಳೇನಾದರೂ ಹೇಳಿದರೆ ಅಮರಾದ್ರಿಯಲ್ಲಿಅವರ ಮುಖವನ್ನು ಉಜ್ಜುತ್ತೇನೆ ಎಂದು ಹೇಳುತ್ತಾನೆ.

ನಾಲ್ಕು ಅಂಕದ ಪ್ರಶ್ನೆಗಳು
೧. ತನಗೊದಗಿದ ಸಂಕಟವನ್ನು ಹೇಳಿಕೊಳ್ಳುವ ದ್ರೌಪದಿಯ ಸ್ವಗತದ ನುಡಿಗಳಾವುವು?
ದ್ರೌಪದಿಯು ತನಗಾದ ಅನ್ಯಾಯವನ್ನುಯಾರಬಳಿ ಹೋಗಿ ಹೇಳಿಕೊಳ್ಳಲಿ, ತನಗೆ ಸಹಾಯಮಾಡುವಂತೆ ಯಾರನ್ನು ಬೇಡಿಕೊಳ್ಳಲಿ, ಈ ಹಾಳು ಹೆಂಗಸು ಜನ್ಮ ಯಾಕಾದರೂ ನನಗೆ ದೊರಕಿತೋ? ಯಾವ ಪಾಪ ಮಾಡಿದುದರಿಂದ ಹೆಂಗಸು ಜನ್ಮ ಬಂತೋ? ಈ ಮೊದಲು ನನ್ನಂತೆ ಮೊದಲು ಯಾರು ದುಃಖವನ್ನು ಅನುಭವಿಸಿದ್ದಾರೆ. ಶಿವನೇ ನನಗೆ ಮರಣವಾದರೂ ಬಾರದೇ ಎಂದು ಹೊಟ್ಟೆಯನ್ನು ಹಿಸುಕಿಕೊಳ್ಳುತ್ತಾ ಗೋಳಾಡುತ್ತಾ, ಯಮಸುತನಿಗೆ ಹೇಳೋಣವೆಂದರೆ ಅವನಿಗೆ ಧರ್ಮ , ಕ್ಷಮೆ ಎಂಬ ದೆವ್ವಹಿಡಿದಿದೆ. ಅರ್ಜುನನು ಮಮತೆಯುಳ್ಳವನು ಎಂದು ತಿಳಿದು ಅವನಲ್ಲಿ ಹೇಳೋಣವೆಂದರೆ ಅವನು ತನ್ನಅಣ್ಣನ ಆಜ್ಞೆಯಲ್ಲಿ ಭ್ರಮಿತನಾಗಿದ್ದಾನೆ, ನಕುಲ-ಸಹದೇವ ನಿಸ್ಸಂದೇಹವಾಗಿಯೂ ಈ ನಾಯಿಯಾದ ಕೀಚಕನನ್ನು   ಕೊಲ್ಲಲು ಶಕ್ತಿಯಿಲ್ಲದವರು  ಚಿಂತಿಸಿ, ಈ ಐವರಲ್ಲಿ ಕಲಿ ಭೀಮನೇ ಪೌರುಷವುಳ್ಳವನು, ಸ್ವಾಭಿಮಾನ- ಕೆಚ್ಚುಗಳನ್ನು ಉಳ್ಳವನು, ನನ್ನ ಕಷ್ಟಗಳನ್ನು ಕೇಳಿ ಅವುಗಳನ್ನು ನಿವಾರಿಸಲು  ಕಾಳಜಿ ತೋರುವವನು  ,    ದುಷ್ಟನಾದ ಕೀಚಕನನ್ನು ಗೆಲ್ಲುವವನು . ಇವನ ಬಳಿ ನನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತೇನೆ  ಒಂದು ವೇಳೆ ನನ್ನ ಕಷ್ಟಗಳಿಗೆ ಮರುಗದಿದ್ದರೆ, ಕೀಚಕನ ಕೊಲ್ಲುವ ಕೆಚ್ಚು, ಸಾಮರ್ಥ್ಯ ಇಲ್ಲದಿರೆ ಘೋರವಾದ ವಿಷವನ್ನು ಕುಡಿಯುವೆನು ಎಂದು ನಿಶ್ಚಯಿಸಿದಳು

೨. ತನಗಾದ ಅವಮಾನವನ್ನು ದ್ರೌಪದಿ ಭೀಮನಿಗೆ ಹೇಳಿಕೊಂಡ ಬಗೆಯನ್ನು ವಿವರಿಸಿರಿ.
ದ್ರೌಪದಿಯು ಭಯಮಿಶ್ರಿತ ಭಾವದಲ್ಲಿ ಭೀಮನ ಬಳಿಬಂದು ಎಬ್ಬಿಸಲು ಮೆಲ್ಲಮೆಲ್ಲನೆ ಅವನ ಮುಸುಕನ್ನು ಸರಿಸಿ, ಗಲ್ಲವನ್ನು ಹಿಡಿದು ಅಲುಗಿಸಲು, ಭೀಮಸೇನನು ಮೆಲ್ಲನೆ ಎದ್ದು, ಪಾಂಚಾಲನಂದನೆಯಾದ ತನ್ನ ಸತಿಯನ್ನು ನೋಡಿ ನಿನ್ನ ಮುಖದಲ್ಲಿ ಭಯ, ಹೆದರಿಕೆಯೇ ತೋರುತ್ತಿದೆ, ಈ ಹೊತ್ತು ಇಲ್ಲಿಗೆ ಬರಲು ಕಾರಣವೇನು, ತಡಮಾಡದೇ ಹೇಳು ಈ ಇರುಳಲ್ಲಿ ಏಕೆ ಬಂದೆ ಎಂದು ಕೇಳಿದನು. ಆಗ ದ್ರೌಪದಿಯು ನಿನ್ನೆ ಬೆಳಿಗ್ಗೆಯೇ ಅಡ್ಡಗಟ್ಟಿ ಕೀಚನೆಂಬ ಕುನ್ನಿಯು ರಾಜಸಭೆಯಲ್ಲಿ ನನ್ನನ್ನು ಒದ್ದಿದ್ದಾನೆ. ನಿನ್ನಂತ ಜೊತೆಗಾರರು ಇರುವಾಗ ಈ ರೀತಿಯ ಸೋಲು ಸರಿಯೇ? ನನ್ನ ಬೆನ್ನು ಹತ್ತಿದ್ದಾನೆ. ಅವನು ನನ್ನನ್ನು ಬಿಡುವುದಿಲ್ಲ, ಇನ್ನು ನಾನು ಬದುಕುವುದಿಲ್ಲ. ನನ್ನ ಸಾವಿನ ಪಾಪ ನಿನ್ನನ್ನು ಬಿಡುವುದಿಲ್ಲ ಎಂದು ಹೇಳಿದಾಗ ಭೀಮನು ಬಹಳವಾಗಿ ಕೋಪಗೊಂಡನು ಆಗ ದ್ರೌಪದಿಯು ರಮಣ ಕೇಳು ಉಳಿದವರು ನನ್ನನ್ನು ರಮಿಸುವರು (ಸಂತೋಷಪಡಿಸುವರು) ಮಾನ-ಅಪಮಾನದ ವಿಷಯ ಬಂದರೆ ದೂರಹೋಗುವರು ಹಾಗಾಗಿ ನನ್ನೆಡೆಗೆ ಮಮತೆಯಿಂದ ನೋಡು, ನನಗೆ ಸಂತೋಷವಾಗುವ ಹಾಗೆ ಕೀಚಕನನ್ನು ಕೊಲ್ಲುವೆನೆಂದು ನನಗೆ  ಮಾತುಕೊಡು ಎಂದು ಕೈಮುಗಿದು ಕೇಳಿದಳು.

೩. ಭೀಮನು ದ್ರೌಪದಿಯನ್ನು ಹೇಗೆ ಸಂತೈಸಿದನು?
ತನ್ನ ಬಳಿಬಂದು ದುಃಖದಿಂದ ಕೀಚಕನು ಮಾಡಿದ ಅವಮಾನಗಳನ್ನು ಹೇಳಿಕೊಂಡು ಅತ್ತಾಗ ಕರಗಿದ ಭೀಮನಲ್ಲಿ ರೋಷಹೆಚ್ಚಿ ಮನಸ್ಸಿನಲ್ಲಿಯೆ ವೈರಿಗಳನ್ನು ಹಿಂಡಿದನು. ಅಲ್ಲದೆ ದ್ರೌಪದಿಯನ್ನು ಅಪ್ಪಿ ಅವಳ ಕಣ್ಣೀರನ್ನು ತನ್ನ ಬಟ್ಟೆಯಿಂದ ಒರೆಸಿದನು. ಅವಳ ಮುಂಗುರುಳನ್ನು ನೇವರಿಸಿ , ಗಲ್ಲವನ್ನು ಒರೆಸಿ , ಮುದ್ದಾಡುತ್ತಾ, ಮಂಚದ ಬದಿಯಲ್ಲಿದ್ದ ನೀರಿನ ಪತ್ರೆ ತೆಗೆದುಕೊಂಡು ಅವಳ ಮುಖ ಕಮಲವನ್ನು ತೊಳೆದು ರಾಣಿ ನಿನ್ನ ಕೋಪವನ್ನು ಬಿಡು ಹೆಚ್ಚಿಗೆ ಮಾತೇಕೆ ನಮ್ಮ ಅಣ್ಣನ ಆಜ್ಞೆಯ ಗೆರೆಯನ್ನು ದಾಟಿದ್ದೇನೆ ಹೋಗು ಎನ್ನುತ್ತಾ, ಕೀಚಕನ ಹೊಟ್ಟೆಯನ್ನು ಬಗೆಯುತ್ತೇನೆ, ಏನಾದರೂ ಮಿಸುಕಾಡಿದರೆ ವಿರಾಟನವಂಶದ ಹೆಸರನ್ನೇ ಅಳಿಸಿಹಾಕುವೆನು. ಅಜ್ಞಾತವಾಸದಲ್ಲಿರುವ ನಮ್ಮನ್ನು ಕೀಚಕನ ವಧೆಯಿಂದ ದುರ್ಯೋಧನನು ಗುರುತಿಸಿದರೆ ಕೌರವ ಸಮೂಹವನ್ನು ಚೂರು ಚೂರಾಗಿ ಕತ್ತರಿಸುವೆನು. ನಾನು ಮಾಡಿದ್ದು ತಪ್ಪು ಎಂದು ದೇವತೆಗಳೇನಾದರೂ ಹೇಳಿದರೆ ಅಮರಾದ್ರಿಯಮೇಲೆ ಅವರಮುಖವನ್ನು ಉಜ್ಜುವೆನು ಎಂದು ಭೀಮ ಅಬ್ಬರಿತ್ತಾನೆ.


೪. ದ್ರೌಪದಿ ಅವಮಾನಕ್ಕೊಳಗಾದ ಮೂರು ಪ್ರಸಂಗಗಳನ್ನು ವಿವರಿಸಿರಿ.
ನನ್ನಂತೆ ಅವಮಾನಿತರಾಗುವ ನಾರಿಯರು ಈ ಭೂಮಿಯಲ್ಲಿ ಹುಟ್ಟದೆಯಿರಲಿ. ಭೀಮನಂ ಬಲಶಾಲಿ ಗಂಡಂದರಿದ್ದೂ ನನ್ನಂಥಹ ದುಃಖಿಗಳು ಯಾರಿದ್ದಾರೆ? ಎಂದು ಹಲುಬುತ್ತಾ, ಅಂದು ಕೌರವನು ನನ್ನನ್ನು ಸಭೆಗೆ ಎಳೆಸಿ ತಂದು ಅವಮಾನ ಮಾಡಿದ. ಅರಣ್ಯದಲ್ಲಿದ್ದಾಗ ಸೈಂದವ (ಜಯದ್ರಥ) ನನ್ನನ್ನು ಎಳೆದೊಯ್ದಿದ್ದ. ಇಂದು ಈ ಕೀಚಕನೆಂಬ ನಾಯಿ ನನ್ನನ್ನು ಕಾಲಿನಿಂದ ಒದ್ದು ನೋಯಿಸಿ. ಈ ಮೂರುಬಾರಿಯೂ ಅವಮಾನ ಹೊಂದಿದ್ದೇನೆ ನನಗಿನ್ನು ಜೀವನ ಸಾಕಾಗಿದೆ ಎಂದು ದುಃಖಿಸಿದಳು. 


೫. ಈ ಕಾವ್ಯಭಾಗದಲ್ಲಿ ಮೂಡಿಬಂದಿರುವ ಭೀಮ ದ್ರೌಪದಿಯರ ಸಂಭಾಷಣೆಯ ಸ್ವಾರಸ್ಯವನ್ನು ವಿವರಿಸಿರಿ.


ತನ್ನ ಹೆಂಡತಿಯಲ್ಲಿ ಪ್ರೀತಿ ಇದ್ದರೂ ತೋರಿಸಿಕೊಳ್ಳಲಾಗದೆ ತೊಳಲುವ ಭೀಮ ಒಂದು ಕಡೆಯಾದರೆ, ತನಗೆ ಮೂರುಲೋಕಗಳನ್ನೂ ನಡುಗಿಸುವಂತಹ , ಯಮನ ಜನ್ಮವನ್ನೇ ಇಲ್ಲವಾಗಿಸುವ ಮಹಾವೀರರು ತನ್ನಗಂಡಂದರಾಗಿದ್ದೂ ತನಗೆ ಯಾವ ಸಹಾಯವನ್ನೂ ಮಾಡುತ್ತಿಲ್ಲವಲ್ಲ ಎಂಬ ಅಸಹಾಯಕತೆ ಅವಳಲ್ಲಿ ಕಠೋರಮಾತುಗಳನ್ನು ಆಡುವಂತೆ ಮಾಡುತ್ತದೆ. ದ್ರೌಪದಿಯ ಕಠೋರಮಾತುಗಳನ್ನು ಕೇಳಿದ ಭೀಮ ಕರಗಿ ಅವಳನ್ನು ಅಪ್ಪಿ, ಮುದ್ದಿಸಿ, ಗಿಂಡಿಯ ನೀರಿನಿಂದ ಅವಳ ಮುಖತೊಳೆದು ಕೀಚಕನನ್ನು ವಧಿಸುತ್ತೇನೆ. ಒಂದುವೇಳೆ ಕೌರವನಿಗೆ ತಿಳಿದು ನಮ್ಮನ್ನು ಹಿಂಸಿಸಲು ಬಂದರೆ ಅವನ ವಂಶವನ್ನು ನಾಶಮಾಡುತ್ತೇನೆ. ಒಂದುವೇಳೆ ನಾನು ಮಾಡಿದ್ದು ತಪ್ಪುಎಂದು ದೇವತೆಗಳೇನಾದರೂ ಅಪಸ್ವರ ತೆಗೆದರೆ ಅವರನ್ನು ಸ್ವರ್ಗದಲ್ಲಿಯೇ ಉಜ್ಜಿಬಿಡುತ್ತೇನೆ ಎಂದು ಅಬ್ಬರಿಸುತ್ತಾನೆ.

14 comments: