Tuesday, July 22, 2014

ರಸಬಳ್ಳಿ –ಜನಪದ



ಹಬ್ಬಲಿ ಅವರ ರಸಬಳ್ಳಿ ಜನಪದ
ಕವಿ ಪರಿಚಯ ಜನಪದ ತ್ರಿಪದಿಗಳನ್ನು ರಚಿಸಿದವರು ಅಜ್ಞಾತ ಕವಿಗಳುರಚಿಸಿದ್ದಾರೆ. ಯಾರು ಯಾವಾಗ ರಚಿಸಿರಬಹುದೆಂಬುದು ನಿಖರವಾಗಿ ಹೇಳಲಾಗದ ಸಾಮೂಹಿಕ ಸೃಷ್ಟಿಯ ರಚನೆಗಳಿವು. ಜನಪದ ಸಾಹಿತ್ಯದ ಪ್ರಕಾರಗಳಲ್ಲಿ ತ್ರಿಪದಿ ಅತ್ಯಂತ ಜನಪ್ರಿಯವಾದುದು, ಗೇಯಗುಣವನ್ನು ಪ್ರಧಾನವಾಗುಳ್ಳ ರಚನೆಗಳು ಸಾವಿರಾರು ವರ್ಷಗಳ ಹಿಂದಿನ ಜನರ ಸಂಸ್ಕೃತಿಯನ್ನು ಬಿತ್ತರಿಸುತ್ತವೆ.

ಸಾರಾಂಶ : ಜಾನಪದ ತ್ರಿಪದಿಗಳಲ್ಲಿ ತಾಯಿ-ತವರು , ಬಡತನ ಸಿರಿತನ ಮುಂತಾದ ವಿಚಾರಗಳ ಅಭಿವ್ಯಕ್ತಿಇದೆ. ಮಕ್ಕಳನ್ನುಲಾಲಿಸುವ ಪಾಲಿಸುವ ಸುಂದರವಾದ ವಾತ್ಸಲ್ಯಗೀತೆಗಳೂ ಇವೆ.

ಬಂಗಾರ ಬಳೆಯಿಟ್ಟು ಬೈಬ್ಯಾಡ ಬಡವರನ|
ಬಂಗಾರ ನಿನಗೆ ಸ್ಥಿರವಲ್ಲ| ಮಧ್ಹ್ಯಾನದ|
ಬಿಸಿಲು ಹೊಳ್ಳೋದು ತಡವಲ್ಲ ||1||

ಶ್ರೀಮಂತಿಕೆ ಬಂದಾಗ ಬಂಗಾರದ ಬಳೆಯನ್ನು ಕೈಗೆ ತೊಟ್ಟು ಬಡತನದಲ್ಲಿರುವವರ ಅಸಹಾಯಕತೆಯನ್ನು ನಿಂದಿಸಬಾರದು. ಬಡವರನ್ನು ಬೈಯಬಾರದು, ಬಂಗಾರ ಯಾರಲ್ಲೂ ಸ್ಥಿರವಾಗಿರುವುದಿಲ್ಲ. ಅದು ಬಂದಷ್ಟೇ ವೇಗವಾಗಿ ನಮ್ಮಿಂದ ದೂರಾಗಬಹುದು. ಮಧ್ಯಾಹ್ನನ ಬಿಸಿಲು ಸ್ವಲ್ಪಹೊತ್ತು ಇರುತ್ತದೆ ಬಿಸಿಲು ಇಳಿದು ನೆರಳು ಬರುವಂತೆ ಶ್ರೀಮಂತಿಕೆ ಇದೆಯೆಂದು ಬೀಗಿ ಬಡವರನ್ನು ಬಯ್ಯುವುದು ಸರಿಯಲ್ಲ. ಶ್ರೀಮಂತಿಕೆ ಅಶಾಶ್ವತ ಎಂದು ತಿಳಿದಿದ್ದರೂ ಬೀಗುವುದೇಕೆ ಎಂದು ಜನಪದರು ಪ್ರಶ್ನಿಸಿದ್ದಾರೆ.

ಬಡತನ ಬಂದರ ಬಡಿಬ್ಯಾಡ ಬಾಲರನ
ಅಡ್ಯಾಡಿ ಬಂದು ತೊಡಿಮ್ಯಾಲ| ಆಡಿದರ|
ಬಡತನವೆಲ್ಲ ಬಯಲಾಗೆ ||2||

ಬಡತನವಿದೆಯೆಂದು ಮನೆಯಲ್ಲಿರುವ ಮಕ್ಕಳನ್ನು ಹಿಡಿದು ಬಡಿಯಬಾರದು. ಬಡತನವನ್ನು ತಂದವರು ಅವರಲ್ಲ. ಬಡತನದ ನೋವನ್ನು ಮರೆಸುವ ಶಕ್ತಿ ಮಕ್ಕಳಿಗಿದೆ. ನಾವುದುಃಖ ಚಿಂತೆಯಲ್ಲಿರುವಾಗ ಆಡುತ್ತಾ ಮಕ್ಕಳು ಬಂದ ತೊಡೆಯಮೇಲೆ ಕುಳಿತು ಬಾಲಲೀಲೆಗಳನ್ನು ಪ್ರದರ್ಶಿಸಿದರೆ ಸಾಕು ನಮ್ಮ ಬಡತನದ ಚಿಂತೆ ದುಃಖ ಕಷ್ಟ- ನೋವುಗಳೆಲ್ಲ ಓಡಿಹೋಗುತ್ತವೆ. ಇಂತಹ ಶಕ್ತಿಯಿರುವ ಬಾಲರನ್ನು ಬಡತನವೆಂದು ಬಡಿಯುವುದು ತರವಲ್ಲ ಎಂದು ಈ ತ್ರಿಪದಿಯಲ್ಲಿ ನೀತಿಬೋಧೆ ಮಾಡಲಾಗಿದೆ.

ಉತ್ತಮರ ಗೆಳೆತನ ಪುತ್ಥಳಿ ಬಂಗಾರ
ಮತ್ತ ಹೀನರ ಗೆಳೆತನ ಮಾಡಿದರ
ಹಿತ್ತಾಳೆಗಿಂತ ಬಲು ಹೀನ ||3||


ಸಹವಾಸವೆಂಬುದು ತುಂಬಾ ಮುಖ್ಯ. ನಾವು ಯಾರೊಂದಿಗೆ ಸ್ನೇಹ ಬೆಳೆಸುತ್ತೇವೆ ಎನ್ನುವುದರ ಮೇಲೆ ನಮ್ಮ ವ್ಯಕ್ತಿತ್ವದ ಬೆಳವಣಿಗೆ ಅವಲಂಬಿಸಿರುತ್ತದೆ. ಆದ್ದರಿಂದ ಜನಪದರು ಉತ್ತಮರ ಗೆಳೆತನ ಮಾಡಿದರೆನಮ್ಮ ವ್ಯಕ್ತಿತ್ವಕ್ಕೆ ಅಪ್ಪಟ ಬಂಗಾರದ ಬೆಲೆ ಲಭಿಸುತ್ತದೆ. ಅದನ್ನು ಬಿಟ್ಟು ಬುದ್ಧಿಹೀನರೊಂದಿಗೆ ಗೆಳೆತನ ಮಾಡಿದರೆ ನಾವು ಹಿತ್ತಾಳೆ ಗಿಂತಲೂ ಬಲು ಹೀನರಾಗುತ್ತೇವೆ , ಕಳೆ ಗುಂದುತ್ತೇವೆ. ಎಂದಿದ್ದಾರೆ (ಸಜ್ಜನರ ಸಹವಾಸ ಹೆಜ್ಜೇನ ಸವಿದಂತೆ ದುರ್ಜನರ ಒಡನಾಟ ಬಚ್ಚಲಿನ ರೊಚ್ಚಿನಂತಿಹುದು ಸರ್ವಜ್ಞ)

ಮಂದಿಮಕ್ಕಳೊಳಗ ಛಂದಾಗೊಂದಿರಬೇಕು
ನಂದೀಯ ಶಿವನ ದಯದಿಂದ ಹೋಗಾಗ
ಮಂದಿ ಬಾಯಾಗ ಇರಬೇಕ ||4||

ಸಮಾಜದಲ್ಲಿ ಹೇಗೆ ಹೊಂದಾಣಿಕೆಯಿಂದ ಬದುಕಬೇಕು ಎಂಬುದನ್ನು ವ್ಯಕ್ತಪಡಿಸುವ ಈ ತ್ರಿಪದಿಯು ವ್ಯಕ್ತಿ ಬದುಕಿರುವಾಗ ಅಕ್ಕಪಕ್ಕದ ಜನರೊಂದಿಗೆ , ಮಕ್ಕಳು ಮರಿಗಳೊಂದಿಗೆ ಚೆನ್ನಾಗಿ ಹೊಂದಿಕೊಂಡ ಬಾಳಬೇಕು ಆಗ  ಅಂತಹ ಮನುಷ್ಯ ಸತ್ತಾಗ ಜನ ಸ್ಮರಿಸುತ್ತಾರೆ. ದೇವರದಯೆಯಿಂದ ನಾವು ಸತ್ತಮೇಲೂ ಜನರ ಬಾಯಲ್ಲಿ ಜೀವಿಸುವುದೇ ಸಾರ್ಥಕವಾದ ಜೀವನ ಎಂಬ ಆಶಯ ಇಲ್ಲಿದೆ.

ಇದ್ದರ ಇರಬೇಕು ಬುದ್ಧಿವಂತರ ನೆರೆಯ
ಖುದ್ದರಗೇಡಿ ಕುಲಗೇಡಿ ನೆರೆಯಿದ್ದು
ಇದ್ದುಟ್ಟು ಬುದ್ಧಿ ಕಳಕೊಂಡ ||5||

ನಾವು ಬದುಕುತ್ತಿರುವ ವಾತಾವರಣದಲ್ಲಿ ಅಕ್ಕಪಕ್ಕದಲ್ಲಿ ಎಂತಹ ಜನರಿರುತ್ತಾರೆ ಎಂಬುದು ಅತಿಮುಖ್ಯ. ಬುದ್ಧಿವಂತರು ನಮ್ಮ ನೆರೆಯಲ್ಲಿ ವಾಸಿಸಿದರೆ ಅವರಿಂದ ಉಪಯೋಗವಾಗುವುದು. ಅದಲ್ಲದೆ ದುಷ್ಟರು ನಮ್ಮ ನೆರೆಯಲ್ಲಿದ್ದರೆ ನಾವು ಇರುವ ಬುದ್ಧಿಯನ್ನು ಕಳಕೊಂಡು ಅವರಂತೆಯೇ ದುಷ್ಟಬುದ್ಧಿಬೆಳೆಸಿಕೊಳ್ಳುತ್ತೇವೆ. ಆದ್ದರಿಂದ ನಮಗೆ ಒಳ್ಳೆಯ ನೆರೆ ಹೊರೆಯವರ ಸಹವಾಸ ಅತಿ ಅಗತ್ಯ.


ಹುಟ್ಟುವಾಗ ತರಲಿಲ್ಲ ಹೋಗುವಾಗೊಯ್ಯಲಾರೆ
ಸುಟ್ಟು ಸುಟ್ಟು ಸುಣ್ಣದಹರಳಾಯ್ತು ದೇಹವು
ಕಷ್ಟವನು ಬಿಡಿಸೋ ಸೃಷ್ಟಿಗೊಡೆಯ||6||

ಕಷ್ಟದಿಂದ ಪಾರು ಮಾಡಬೇಕೆಂದು ಸೃಷ್ಟಿಗೊಡೆಯನಾದ ದೇವರಲ್ಲಿ ಜನಪದರು ಮೊರೆಯಿಡುವ ಚಿತ್ರಣ ಇಲ್ಲಿದೆ. ಹುಟ್ಟುವ ಮೊದಲು ಈ ದೇಹ ಇರಲಿಲ್ಲ ಹುಟ್ಟಿದ ಮೇಲಷ್ಟೇ ಈ ದೇಹ ದೊರೆತಿದೆ.  ಅದೇರೀತಿ ಸತ್ತಾಗಲೂ ಈ ದೇಹವನ್ನು ಭೂಮಿಯ ಮೇಲೆ ಬಿಟ್ಟು ಹೋಗುತ್ತೇವೆಯೇ ಹೊರೆತು ಹೊತ್ತು ಕೊಂಡು ಹೋಗುವುದಿಲ್ಲ. ಆದರೆ ಹುಟ್ಟಿದಾಗಿನಿಂದ ಸಾಯುವವರೆಗಿನ ಅವಧಿಯಲ್ಲಿ ಜೀವನ ನಡೆಸಲೇ ಬೇಕಿರುವುದರಿಂದ ಆ ಬದುಕಿನಲ್ಲಿ ಕಷ್ಟಗಳು ಬಂದಾಗ ಬಿಡಿಸಿ ಸಲಹಬೇಕೆಂದು ದೇವರಲ್ಲಿ ಪ್ರಾರ್ಥಿಸಿದ್ದಾನೆ. (ಜನಪದರು ಹುಟ್ಟುವಾಗ ಏನನ್ನೂ ತರದೆ,ಭೂಮಿಗೆ ಬಂದ ಜೀವ ಈ ಭೂಮಿಯಲ್ಲಿ ಗಳಿಸಿದ್ದೆಲ್ಲವನ್ನು ಸತ್ತಾಗ ಬಿಟ್ಟುಹೋಗಬೇಕು ಎಂಬ ಸತ್ಯವನ್ನು ಜನರಿಗೆ ತಿಳಿಸುತ್ತಿದ್ದಾರೆ)

ಬ್ಯಾಸಗಿ ದಿವಸಕ ಬೇವಿನ ಮರ ತಂಪ
ಭೀಮರತಿಯೆಂಬ ಹೊಳಿ ತಂಪ ಹಡೆದವ್ವ
ನೀ ತಂಪ ನನ್ನ ತವರೀಗಿ ||7||

ತಾಯಿಮನೆ ಅಥವಾ ತವರನ್ನು ನೆನೆದು ಹೆಣ್ಣೊಬ್ಬಳು ಹಾಡಿದ ತ್ರಿಪದಿಯಿದು. ಬೇಸಗೆಯ ದಿನಗಳಲ್ಲಿ ಉಷ್ಣತೆ ಹೆಚ್ಚಿರುವುದರಿಂದ ಬೇವಿಮರಗಳಿಂದ ಉಂಟಾದ ತಂಪಾದ ಹವೆ ಹಿತಕರವಾಗಿರುತ್ತದೆ. ಅದೇರೀತಿ ಭೀಮರತಿ ಎಂಬ ಹೊಳೆಯ ನೀರು ತಣ್ಣಗಿರುತ್ತದೆ. ಅಂತೆಯೇ ತವರಿನಲ್ಲಿರುವ ತಾಯಿಯ ನೆನಪು ಮಗಳಿಗೆ ತಂಪಾಗಿ ಕಂಡಿದೆ.

ಕಣ್ಣೆಂಜಲ ಕಾಡೀಗಿ ಬಾಯೆಂಜಲ ವೀಳ್ಯಾವ
ಯಾರೆಂಜಲುಂಡು ನನಮನವ ಹಡೆದೌವ್ನ
ಬಾಯೆಂಜಲುಂಡು ಬೆಳೆದೇನ ||8||

ತಾಯಿಯ ವಾತ್ಸಲ್ಯ ತಾಯಿ ತನ್ನ ಮಗುವಿಗೆ ದೃಷ್ಟಿತಾಗಬಾರದು ಎಂದು ಕಾಡಿಗೆಯನ್ನು ಮಗುವಿನ ಕೆನ್ನೆಗೋ , ಹಣೆಗೋ ಹಚ್ಚಿ ಮಗುವನ್ನು ಕಾಪಾಡುತ್ತಾಳೆ. ಅಂತೆಯೇ ಎಲೆ ಅಡಿಕೆಯನ್ನು ದೃಷ್ಟಿತೆಗೆಯುವಾಗ ಥೂ,ಥೂ ಥೂ  ಎಂದು ಉಗುಳಿ ದೃಷ್ಟಿತೆಗೆಯುತ್ತಾಳೆ. ಹೀಗಾಗಿ ಜನಪದರು ತಾಯಿಯ ಕಣ್ಣೆಂಜಲು , ಉಗುಳೆಂಜಲು ಉಂಡು ಮಗು ಬೆಳೆಯುತ್ತದೆ ಎಂದಿದ್ದಾರೆ. ತಾಯಿ ಮಕ್ಕಳಲ್ಲಿ ಬೇಧವಿಲ್ಲ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ.( ತಾಯಿಯ ಕಣ್ಣಲ್ಲಿ ಮಗು ಜಗತ್ತನ್ನು ಕಾಣುತ್ತಿರುವುದು + ತಾಯಿ ಶಬರಿಯಂತೆ ಮೊದಲು ರುಚಿನೋಡಿ ಒಳ್ಳೆಯದನ್ನು ತನ್ನಮಗುವಿಗೆ ನೀಡುವುದು ಬಾಯೆಂಜಲು ಎಂದಿರಬಹುದೇ?)

ಯಾರು ಇದ್ದರೂ ನನ್ನ ತಾಯವ್ವನ ಓಲ್ಹರು
ಸಾವಿರ ಕೊಳ್ಳಿ ಒಲಿಯಾಗ ಇದ್ದರ
ಜ್ಯೋತಿ ನಿನ್ಯಾರ ಹೋಲರ ||9||

ತಾಯಿಗಿಂತ ದೊಡ್ಡ ಬಂಧು ಇನ್ನೊಬ್ಬರಿಲ್ಲ. ಆದ್ದರಿಂದ ಅವಳ ಸ್ಥಾನವನ್ನು ಬೇರೆ ಯಾರಿಗೂ ತುಂಬಲು ಸಾಧ್ಯವಿಲ್ಲ. ಯಾರಿದ್ದರೂ ತಾಯಿ ಇದ್ದಂತೆ ಆಗುವುದಿಲ್ಲ. (ಹೆಂಡತಿ ಸತ್ತರೆ ಇನ್ನೊಬ್ಬ ಹೆಂಡತಿ ತರಬಹುದು, ಇನ್ನೊಬ್ಬ ಹೆತ್ತ ಅಮ್ಮನನ್ನು ತರಲಾಗದು) ಅವಳ ಸ್ಥಾನವನ್ನು ಯಾರೂ ತುಂಬಲಾಗದು. ಒಲೆಯಲ್ಲಿ ಸಾವಿರ ಕೊಳ್ಳಿ ಉರಿಯುತ್ತಿದ್ದರೂ ಅವು ದೇವರಕೋಣೆಯಲ್ಲಿ ಬೆಳಗುವ ಹಣತೆಯ ಜ್ಯೋತಿಗೆ ಸಮನಲ್ಲ. ಎಂದು ಈ ತ್ರಿಪದಿಯಲ್ಲಿ ಹೇಳಲಾಗಿದೆ.

ಹೆಣ್ಣು ಮಕ್ಕಳ ದುಃಖ ಹೆತ್ತವ್ವ ಬಲ್ಲಳು
ಹುತ್ತದ ಒಳಗಿರೋ ಸರುಪನ ಬೇಗೆಯ
ನೆತ್ತಿ ಮೇಲಿರುವ ಶಿವಬಲ್ಲ ||10||

ಹೆಣ್ಣುಮಕ್ಕಳ ದುಃಖವನ್ನು ತಾಯಿಮಾತ್ರವೇ ಅರ್ಥಮಾಡಿಕೊಳ್ಳಬಲ್ಲಳು. ತಂದೆಗಾಗಲಿ , ಗಂಡನಿಗಾಗಲಿ ಹೆಣ್ಣುಮಕ್ಕಳ ದುಃಖದ ತೀವ್ರತೆಯ ಅರಿವಾಗುವುದಿಲ್ಲ. ಹುತ್ತದಲ್ಲಿರುವ ಸರ್ಪದ ನೋವನ್ನು ನೆತ್ತಿಮೇಲಿರುವ ಶಿವನಿಗೆ ತಿಳಿಯುವಂತೆ ಹೆಣ್ಣುಮಕ್ಕಳ ದುಃಖ ಹೆತ್ತ ತಾಯಿಗೇ ಅರ್ಥವಾಗುವುದು. ಎಂದಿದ್ದಾರೆ.

ತಾಯವ್ನ ನೆನೆಯೂದು ಯಾಯಾಳಿ ಯಾಹೊತ್ತ
ಊರೆಲ್ಲ ಉಂಡು ಮಲಗಾನ ಬೆಳ್ಳಿಚಿಕ್ಕಿ
ಹೊಂದಾಗ ಹಡೆದವ್ನ ನೆನೆದೇನ ||11||

ಹೆತ್ತ ತಾಯಿಯನ್ನು ನೆನಪಿಸಿಕೊಳ್ಳಲು ಕಾಲದ ಪರಿಮಿತಿ ಇರುವುದಿಲ್ಲ. ಯಾವವೇಳೆಯಲ್ಲಾದರೂ ಯಾವಸ್ಥಳದಲ್ಲಾದರೂ ನೆನಪಿಸಿಕೊಳ್ಳಬಹುದು. ಆದರೂ ಇಲ್ಲಿ ಜಾನಪದ ಕವಯಿತ್ರಿಯು ಊರೆಲ್ಲ ಉಂಡು ಮಲಗಿದಮೇಲೆ, ಮುಂಜಾನೆ ಬೆಳ್ಳಿಚುಕ್ಕಿ (ಶುಕ್ರಗ್ರಹ) ಮೂಡಿದ ಸಮಯದಲ್ಲಿ ತನ್ನ ತಾಯಿಯನ್ನು ನೆನೆಯುವುದಾಗಿ ಹೇಳುತ್ತಾಳೆ.

ತಾಯವ್ನ ಬೈಬ್ಯಾಡ ತಿಳಿಗೇಡಿ ನನತಮ್ಮ
ಬಾಳದಿನದಾಕಿ ಹಡೆದವ್ವನ ಬೈದರ
ಭಾಳ ಮರುಗ್ಯಾಳ ಮನದಾಗ ||12||

ಅಣ್ಣ ಅಥವ ಅಕ್ಕ ತನ್ನ ತಮ್ಮನಿಗೆ ಹೇಳಿದ ಬುದ್ಧಿಮಾತು ಇಲ್ಲಿದೆ. ಸಾಮಾನ್ಯವಾಗಿ ಚಿಕ್ಕವರಲ್ಲಿ ವಯೋವೃದ್ಧರ ಬಗ್ಗೆ ಸಲ್ಲದ ತಾತ್ಸಾರ ಇರುತ್ತದೆ. ಮಾತು ಮಾತಿಗೂ ವಯಸ್ಸಾದ ತಂದೆ-ತಾಯಿಯರನ್ನು ದೂಷಿಸುತ್ತಲೇ ಇರುತ್ತಾರೆ. ಆದ್ದರಿಂದ ತಮ್ಮನಿಗೆ ಬುದ್ಧಿಹೇಳುತ್ತ ಬುದ್ಧಿಇಲ್ಲದವರಂತೆ ತಾಯಿಯನ್ನು ಬೈಯದಿರು, ಅಕೆ  ಹಿರಿಯಳು ಚಿಕ್ಕವನಾದ ನೀನು ಬೈದರೆ ಅವಳು ಮನದೊಳಗೇ ದುಃಖಿಸುತ್ತಾ ಕೊರಗಬಹುದು.

ತಾಯಿಯಿಲ್ಲದ ತವರೀಗಿ ಹೋಗದಿರು ನನ ಮನವೇ
ನೀರಿಲ್ಲದ ಕೆರಿಗೆ ಕರುಬಂದು ತಿರುಗಾಗ
ಆಗ ನೋಡವರ ದುಃಖಗಳ ||13||

ತಾಯಿ ಇದ್ದರೇ ತವರಲ್ಲಿ ಪ್ರೀತಿ ವಿಶ್ವಾಸ, ಆದರ , ಗೌರವ ಇತ್ಯಾದಿ. ತಾಯಿ ಯಿಲ್ಲದ ತವರನ್ನು ನೆನೆವ ಮನಕ್ಕೆ ಬುದ್ಧಿವಾದ ಹೇಳುತ್ತಿರುವ ಹೆಣ್ಣೊಬ್ಬಳು ತಾಯಿಯಿಲ್ಲದ ತವರಿಗೆ ಹೋಗಬೇಡ! ನೀರಿಲ್ಲದ ಕೆರೆಗೆ ನೀರನ್ನು ಅರಸುತ್ತಾ ಬಂದ ಬಾಯಾರಿದ ಕರು ಬೇಸರದಿಂದ ಹಿಂದಿರುಗಿ ಹೋಗುವಂತೆ ನಿನಗೆ ಕೂಡ ನಿರಾಸೆ, ದುಃಖಉಂಟಾಗುತ್ತದೆ. ಎಂದಿದ್ದಾಳೆ.

ಉಂಗೂರ ಉಡದಾರ ಮುರಿದರೆ ಮಾಡಿಸಬಹುದು
ಮಡದಿ ಸತ್ತರ ತರಬಹುದು| ಹಡೆದಂಥ
ತಂದಿ ತಾಯೆಲ್ಲಿ ಸಿಕ್ಕಾರ||14||

ತಂದೆ-ತಾಯಿಗಳು ಮಾರುಕಟ್ಟೆಯಲ್ಲಿ ಸಿಗುವಂತಹ ವಸ್ತುಗಳಲ್ಲ. ನಾವು ತೊಟ್ಟುಕೊಳ್ಳುವ ಉಂಗುರ ಮುರಿದುಹೋದರೆ, ಸೊಂಟದ ಉಡುದಾರ ಕಿತ್ತುಹೋದರೆ ಸರಿಮಾಡಿಕೊಂಡು ಮತ್ತೆ ಧರಿಸಬಹುದು. ಆದರೆ ತಂದೆ-ತಾಯಿಗಳನ್ನು ಕಳೆದುಕೊಂಡರೆ ತಿರುಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಅವರಿರುವಾಗಲೇ ಪ್ರೀತಿಯಿಂದ ಅವರ ಆರೈಕೆ ಮಾಡಬೇಕು ಎಂಬ ಬುದ್ಧಿವಾದ ಇಲ್ಲಿದೆ.

ಹಾಲುಂಡ ತವರೀಗಿ ಏನೆಂದು ಹರಸಲಿ
ಹೊಳೆದಂಡಿಲಿರುವ ಕರಕೀಯ ಕುಡಿಹಾಂಗ
ಹಬ್ಬಲಿ ಅವರ ರಸಬಳ್ಳಿ||15||

ಅತ್ಯಂತ ಜನಪ್ರಿಯವಾದ ಈ ತ್ರಿಪದಿಯು ಒಳ್ಳೆಯದನ್ನು ಬಯಸುವ ಹೆಣ್ಣುಮಗಳೊಬ್ಬಳ ಹೃದಯವೈಶಾಲ್ಯತೆಯನ್ನು ಇಲ್ಲಿ ತೋರಿಸುತ್ತಿದೆ. ತಾನು ಹಾಲುಕುಡಿದು ಬೆಳೆದಂತ ತವರಿಗೆ ಏನೆಂದು ಹರಸಲಿ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಳ್ಳುವ ಬಾಲೆ ಹೊಳೆಯ ದಂಡೆಯಮೇಲೆ ಇರುವಂತಹ ಗರಿಕೆಯ ಹುಲ್ಲಿನಂತೆ ನನ್ನ ತವರಿನ ವಂಶವೂ ಬೆಳೆಯಲಿ ಎಂದುಮನದುಂಬಿ ಹಾರೈಸಿದ್ದಾಳೆ.

ಸಂದರ್ಭ ಸ್ವಾರಸ್ಯವನ್ನು ವಿವರಿಸಿ.

೧. ಬಂಗಾರ ನಿನಗೆ ಸ್ಥಿರವಲ್ಲ
ಈಮೇಲಿನ ವಾಕ್ಯವನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ತ್ರಿಪದಿಗಳ ಸಂಕಲನದಿಂದ ಆರಿಸಲಾಗಿದೆ. ಶ್ರೀಮಂತಿಕೆ ಬಂದಾಗ ಕೆಲವರಿಗೆ ತುಂಬಾ ಜಂಭ ಉಂಟಾಗಿ, ಬಡವರನ್ನು ಬೈಯುವುದು, ಜರೆಯುವುದು ಮುಂತಾಗಿ ಕ್ರೂರವಾಗಿ ವರ್ತಿಸುತ್ತಾರೆ. ಆದ್ದರಿಂದ ಜನಪದರು ಬಂಗಾರದ ಬಳೆ ತೊಟ್ಟು ಬಡವರನ್ನು ಬೈಯಬೇಡಾ. ಬಂಗಾರ ನಿನಗೆ ಸ್ಥಿರವಾಗಿ ಇರುವುದಲ್ಲ. ಮಧ್ಯಾಹ್ನದ ಬಿಸಿಲು ಸ್ವಲ್ಪಹೊತ್ತಿನ ನಂತರ ಜಾರಿಹೋಗುವಂತೆ ಶ್ರೀಮಂತಿಕೆಯೂ ದೂರವಾಗುತ್ತದೆ. ಅಶಾಶ್ವತವಾದ ಈ ಶ್ರೀಮಂತಿಕೆಯನ್ನು ಬಿಟ್ಟು ಮಾನವೀಯತೆಯಿಂದ ವರ್ತಿಸು ಎಂಬ ನೀತಿಬೋಧೆ ಇಲ್ಲಿದೆ.

೨. ಹಿತ್ತಾಳೆಗಿಂತ ಬಲುಹೀನ
ಈಮೇಲಿನ ವಾಕ್ಯವನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ತ್ರಿಪದಿಗಳ ಸಂಕಲನದಿಂದ ಆರಿಸಲಾಗಿದೆ. ಉತ್ತಮರ ಸ್ನೇಹವನ್ನೇ ಮಾಡಬೇಕು ಎಂದು ಹೇಳುವ ಈ ತ್ರಿಪದಿಯು ಅಲ್ಪಜನರ ಸಹವಾಸ ಮಾಡಿದಾಗ ಹಿತ್ತಾಳೆಗಿಂತಲೂ ಕಡೆಯಾಗುತ್ತೇವೆ(ಬಂಗಾರ ಉತ್ತಮ- ಹಿತ್ತಾಳೆ –ಹೀನ  ಎಂಬ ಭಾವನೆ ಇಲ್ಲಿದೆ. ನಮ್ಮ ವ್ಯಕ್ತಿತ್ವದ ಘನತೆ ಹೆಚ್ಚುವುದು ಉತ್ತಮರ ಗೆಳೆತನದಿಂದಾಗಿ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ.

೩. ನೀ ತಂಪ ನನ್ನ ತವರೀಗೀ
ಈಮೇಲಿನ ವಾಕ್ಯವನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ತ್ರಿಪದಿಗಳ ಸಂಕಲನದಿಂದ ಆರಿಸಲಾಗಿದೆ. ಹೆಣ್ಣುಮಗಳೊಬ್ಬಳು ತನ್ನ ತಾಯಿಯನ್ನು ನೆನೆದು ಹೇಳಿದ ಮಾತಿದು. ಬೇಸಿಗೆಯ ದಿನಗಳಲ್ಲಿ ಬೇವಿನ ಮರ ತಂಪಾದಂತೆ, ಭೀಮರತಿ ಎಂಬ ಹೊಳೆ ತಂಪಾದಂತೆ ತನ್ನ ತವರಿನಲ್ಲಿ ತಾಯಿ ತಂಪು ಎಂದು ಹೇಳಿದ್ದಾರೆ.


೪. ಜ್ಯೋತಿ ನಿನ್ನ್ಯಾರ ಹೋಲಾರ
ಈಮೇಲಿನ ವಾಕ್ಯವನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ತ್ರಿಪದಿಗಳ ಸಂಕಲನದಿಂದ ಆರಿಸಲಾಗಿದೆ. ತಾಯಿಗಿಂತ ಹೆಚ್ಚು ಯಾರೂ ಇಲ್ಲ, ಎಂದು ಹೇಳುವಂತ ಸಂದರ್ಭದಲ್ಲಿ ಈ ಮಾತು ಬಂದಿದೆ. ಒಲೆಯಲ್ಲಿ ಸಾವಿರಸೌದೆ ಉರಿದರೂ ದೇವರ ಕೋಣೆಯಲ್ಲಿಬೆಳಗುವ ಜ್ಯೋತಿಗೆ ಸಮನಲ್ಲ. ಯಾರೇ ಜೊತೆಯಲ್ಲಿದರೂ ತಾಯಿಯಂತೆ ಆಗುವುದಿಲ್ಲ. ಎಂದಿದ್ದಾರೆ.

೫. ಭಾಳ ಮರುಗ್ಯಾಳ ಮನದಾಗ
ಈಮೇಲಿನ ವಾಕ್ಯವನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ತ್ರಿಪದಿಗಳ ಸಂಕಲನದಿಂದ ಆರಿಸಲಾಗಿದೆ. ತಾಯಿಯನ್ನು ನಿಂದಿಸುವ ತಮ್ಮನಿಗೆ ಹೇಳಿದ ಬುದ್ಧಿಮಾತಿದು. ವಯೋವೃದ್ಧಳಾದ ಅವಳನ್ನು ನೀನು ತಿಳಿಗೇಡಿತನದಿಂದ ಬೈದರೆ ಅವಳು ಮನದೊಳಗೇ ಬಹಳ ದುಃಖವನ್ನು ಅನುಭವಿಸುತ್ತಾಳೆ.

೬. ತಾಯಿ ಇಲ್ಲದ ತವರಿಗೆ ಹೋಗದಿರು ನನಮನವೆ
ಈಮೇಲಿನ ವಾಕ್ಯವನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ತ್ರಿಪದಿಗಳ ಸಂಕಲನದಿಂದ ಆರಿಸಲಾಗಿದೆ. ತಾಯಿ ಮತ್ತು ತವರು ನಮ್ಮ ಹೆಣ್ಣುಮಕ್ಕಳಿಗೆ ಪ್ರೀತಿ, ನೆಮ್ಮದಿ ನೀಡುವ ಕೇಂದ್ರಗಳು. ತಾಯಿ ಇದ್ದರೇನೇ ತವರಿಗೆ ಒಂದು ಅರ್ಥ. ತಾಯಿ ಇಲ್ಲದ ತವರನ್ನು ಯಾವ ಹೆಣ್ಣುಮಕ್ಕಳೂ ಬಯಸುವುದಿಲ್ಲ.ಕರು ಬಾಯಾರಿ ಕೆರೆಗೆ ನೀರುಕುಡಿಯಲು ಬಂದು, ನೀರಿಲ್ಲದೆ ಇರುವುದಕಂಡು ಬೇಸರಗೊಂಡು ಹೋಗುವಂತೆ ಆಗುತ್ತದೆ  ಹಾಗಾಗಿ ಹೆಣ್ಣೊಬ್ಬಳು ತನ್ನ ಮನಕ್ಕೆ ಈ ಮೇಲಿನಂತೆ ಸೂಚನೆ ನೀಡುತ್ತಿದ್ದಾಳೆ.

೭. ಹಬ್ಬಲಿ ಅವರ ರಸಬಳ್ಳಿ
ಈಮೇಲಿನ ವಾಕ್ಯವನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ತ್ರಿಪದಿಗಳ ಸಂಕಲನದಿಂದ ಆರಿಸಲಾಗಿದೆ. ತನಗೆ ಹಾಲು ಕುಡಿಸಿ ಬೆಳೆಸಿದ ತವರನ್ನು ಹಾರೈಸುವಲ್ಲಿ ಈ ಮಾತು ಬಂದಿದೆ. ತನ್ನ ತವರಿನ ವಂಶವು ಹೊಳೆದಂಡೆಯಲ್ಲಿರುವ ಗರಿಕೆ ಹುಲ್ಲಿನ ಗರಿಕೆಯಂತೆ ವಿಶಾಲವಾಗಿ ತನ್ನವಂಶವೂ ಹರಡಲಿ ಎಂಬುದು ಅವಳ ಹಾರೈಕೆ.

ಒಂದು ವಾಕ್ಯ ಪ್ರಶ್ನೆಗಳು:
೧. ಉತ್ತಮರ ಗೆಳೆತನ ಹೇಗೆ ಇರಬೇಕು?
ಉತ್ತಮರ ಗೆಳೆತನ ಬಂಗಾರದ ಪುತ್ಥಳಿಯಂತೆ ಇರಬೇಕು.

೨. ಮಂದಿ ಮಕ್ಕಳೊಂದಿಗೆ ಹೇಗಿರಬೇಕು?
ಮಂದಿ ಮಕ್ಕಳೊಂದಿಗೆ ಚೆನ್ನಾಗಿ ಹೊಂದಿಕೊಂಡು ಇರಬೇಕು.

೩. ಎಂತಹ ನೆರೆಯವರು ಇರಬೇಕು?
ಬುದ್ಧಿವಂತರಾದ ನೆರೆಯವರು ಇರಬೇಕು.

೪. ಸುಟ್ಟು ಸುಣ್ಣವಾದುದು ಯಾವುದು?
ಸುಟ್ಟು ಸುಣ್ಣವಾದುದು ಮಾನವದೇಹ

೫. ಬ್ಯಾಸಗಿ ದಿವಸಕ್ಕೆ ಯಾವಮರ ತಂಪು?
ಬ್ಯಾಸಗಿ ದಿವಸಕ್ಕೆ ಬೇವಿನ ಮರ ತಂಪು.

೬. ತಾಯಿಯನ್ನು ಯಾವುದಕ್ಕೆ ಹೋಲಿಸಲಾಗಿದೆ?
ತಾಯಿಯನ್ನು ದೇವರಕೋಣೆಯಲ್ಲಿರುವ ಜ್ಯೋತಿಗೆ ಹೋಲಿಸಲಾಗಿದೆ.

೭. ಹೆಣ್ಣುಮಕ್ಕಳ ದುಃಖವನ್ನು ಬಲ್ಲವರು ಯಾರು?
ಹೆತ್ತತಾಯಿಮಾತ್ರ ಹೆಣ್ಣುಮಕ್ಕಳ ದುಃಖವನ್ನುತಿಳಿಯಬಲ್ಲಳು.

೮. ತಾಯಿಯನ್ನು ಯಾವಾಗ ನೆನೆಯುತ್ತಾಳೆ?
ಊರೆಲ್ಲವೂ ಉಂಡುಮಲಗಿದಾಗ, ಬೆಳ್ಳಿಚುಕ್ಕಿ ಮೂಡುವಾಗ ತಾಯನ್ನು ನೆನೆಯುತ್ತಾಳೆ.

೯. ಗರತಿಯು ಹಾಲುಂಡ ತವರಿಗೆ ಏನೆಂದು ಹರಸುತ್ತಾಳೆ?
ಹೊಳೆದಂಡೆಯಲ್ಲಿರುವ ಗರಿಕೆಯ ಹುಲ್ಲಿನಂತೆ ನನ್ನ ತವರಿನವಂಶ ಹಬ್ಬಲಿ ಎಂದು ಹರಸುತ್ತಾಳೆ.

ಎರಡು ಅಂಕಗಳ ಪ್ರಶ್ನೆಗಳು :
೧. ಬಡತನ ಹೇಗೆ ಬಯಲಾಯಿತು?
ಮಕ್ಕಳು ತೊಡೆಯಮೇಲೆ ಆಡುತ್ತಾ ತಮ್ಮ ಬಾಲಲೀಲೆಗಳನ್ನು ತೋರುವಾಗ ಬಡತನವು ಮರೆಯಾಗುತ್ತದೆ.

೨. ಇದ್ದಷ್ಟು ಬುದ್ಧಿಯನ್ನುಹೇಗೆ ಕಳೆದುಕೊಳ್ಳುತ್ತಾರೆ?
ದುಷ್ಟರ ಸಹವಾಸ ಮಾಡಿದಾಗ ಇರುವ ಸ್ವಲ್ಪಬುದ್ಧಿಯನ್ನು ಕಳೆದುಕೊಳ್ಳುತ್ತಾರೆ.

೩. ಹಿತ್ತಾಳೆಗಿಂತಲೂ ಬಲು ಹೀನ ಯಾವುದು?
ಮತಿಹೀನರೊಂದಿಗೆ ಗೆಳೆತನ ಮಾಡುವುದು ಹಿತ್ತಾಳೆಗಿಂತಲೂ ಬಲುಹೀನ ಎನಿಸಿಕೊಳ್ಳುತ್ತದೆ.


೪. ಹಡೆದವ್ವನನ್ನು ಯಾವಾಗ ನೆನೆಯಬೇಕು?
 ಊರೆಲ್ಲವೂ ಉಂಡುಮಲಗಿದಾಗ, ಬೆಳ್ಳಿಚುಕ್ಕಿ ಮೂಡುವಾಗ ಹಡೆದವ್ವನನ್ನು ನೆನೆಯಬೇಕು.

೫. ಹಡೆದ ತಂದೆ-ತಾಯಿಯರ ಮಹತ್ವವನ್ನು ತಿಳಿಸಿರಿ.
ತಂದೆ-ತಾಯಿಗಳು ಮಾರುಕಟ್ಟೆಯಲ್ಲಿ ಸಿಗುವಂತಹ ವಸ್ತುಗಳಲ್ಲ. ನಾವು ತೊಟ್ಟುಕೊಳ್ಳುವ ಉಂಗುರ ಮುರಿದುಹೋದರೆ, ಸೊಂಟದ ಉಡುದಾರ ಕಿತ್ತುಹೋದರೆ ಸರಿಮಾಡಿಕೊಂಡು ಮತ್ತೆ ಧರಿಸಬಹುದು. ಆದರೆ ತಂದೆ-ತಾಯಿಗಳನ್ನು ಕಳೆದುಕೊಂಡರೆ ತಿರುಗಿ ಪಡೆದುಕೊಳ್ಳಲು ಸಾಧ್ಯವಿಲ್ಲ.

ನಾಲ್ಕು ಅಂಕಗಳ ಪ್ರಶ್ನೆಗಳು
೧. ಬಂಗಾರ ನಿನಗ ಸ್ಥಿರವಲ್ಲ ಎಂಬ ಮಾತಿನ ಸ್ವಾರಸ್ಯವನ್ನು ವಿವರಿಸಿ.
ಬಡತನವಾಗಲೀ, ಸಿರಿತನವಾಗಲೀ ಶಾಶ್ವತವಲ್ಲ ಎಂಬ ಅರಿವು ಇದ್ದರೂ ಮನುಷ್ಯ ಸಿರಿತನಕ್ಕೆ ಹಂಬಲಿಸುತ್ತಾನೆ. ಸಿರಿತನ ಬಂದಾಗ ಅಹಂಕಾರದಿಂದ ವರ್ತಿಸುತ್ತಾನೆ. ಬಂಗಾರದ ಆಭರಣಗಳನ್ನು ಧರಿಸಿ ಜಂಬದಿಂದ ಬಡವರನ್ನು ಜರಿಯುತ್ತಾನೆ. ಅವರ ಅಸಹಾಯಕತೆಯನ್ನು ಅಣಕಿಸುತ್ತಾನೆ. ಇದನ್ನು ಗಮನಿಸಿದ ಜನಪದರು ಬಂಗಾರನಿನಗೆ ಸ್ಥಿರವಲ್ಲ ಎಂದು ಹೇಳುತ್ತಾ ಸಿರಿತನವು ಹಗಲಿನ ಬಿಸಿಲಿನತರಹ ಒಂದುಗಳಿಗೆ ಇದ್ದು ಹೋಗುವಂತಹುದು ಎಲ್ಲರೊಡನೆ ಸಾಮರಸ್ಯದಿಂದ ಬಾಳುವುದೇ ನಿಜವಾದ ಬದುಕು ಎಂದು ಹೇಳುತ್ತಾರೆ.

೨. ಜನಪದರು ಹೇಳುವಂತೆ ನಮ್ಮ ನೆರೆಹೊರೆ ಹೇಗಿರಬೇಕು? ವಿವರಿಸಿ.
ಜನಪದರು ನಮ್ಮ ನೆರೆಹೊರೆಯಲ್ಲಿ ಬುದ್ಧಿವಂತರಿರಬೇಕು. ಅವರನ್ನು ಅನುಸರಿಸಿ ನಾವು ಬುದ್ಧಿವಂತಿಕೆಯಿಂದ ಬಾಳಬಹುದು. ಒಂದುವೇಳೆ ದುಷ್ಟರು , ಮತಿಹೀನರು, ಕುಲಗೇಡಿಗಳು ನಮ್ಮ ನೆರೆಹೊರೆಯಾಗಿದ್ದಲ್ಲಿ ಇರುವ ಅಲ್ಪಬುದ್ಧಿಯನ್ನೂ ಕಳೆದುಕೊಂಡು ಅವರ ಗುಣಗಳನ್ನೇ ನಾವೂ ರೂಢಿಸಿಕೊಳ್ಳುವ ಅಪಾಯ ಇರುತ್ತದೆ. ಆದ್ದರಿಂದ ನಮ್ಮ ಪರಿಸರದಲ್ಲಿ ಬುದ್ಧಿವಂತರಿರಬೇಕು ಎಂದು ಹೇಳಿದ್ದಾರೆ.

೩. ಹೆಣ್ಣುಮಕ್ಕಳ ದುಃಖವನ್ನು ಬಲ್ಲವರು ಯಾರು? ಹೇಗೆ?
ಹೆಣ್ಣುಮಕ್ಕಳ ದುಃಖ ಅರ್ಥವಾಗುವುದು ಹೆತ್ತ ತಾಯಿಗೆಮಾತ್ರ. ತನ್ನ ಮಗಳ ಕಷ್ಟ.ನೋವು/ನಲಿವುಗಳನ್ನು ಸ್ವ ಅನುಭವದಿಂದ ಅರಿಯಬಲ್ಲಳು. ತಂದೆಯಾಗಲಿ ಗಂಡನಾಗಲೀ ಹೆಣ್ಣಿನ ಕಷ್ಟಗಳನ್ನು ಅರಿಯುವ ಸೂಕ್ಷ್ಮಬುದ್ಧಿ ಹೊಂದಿರುವುದಿಲ್ಲ ತಾಯಿಮಾತ್ರ ಈ ಶಕ್ತಿಯನ್ನು ಹೊಂದಿರುವವಳು. ಹೇಗೆ ಹುತ್ತದೊಳಗಿರುವ ಸರ್ಪದ ನೋವನ್ನು ಶಿವ ಅರಿಯಬಲ್ಲನೋ ಹಾಗೆ ತಾಯಿಮಾತ್ರ ಹೆಣ್ಣುಮಕ್ಕಳ ದುಃಖವನ್ನು ಅರಿಯಬಲ್ಲರು.

೪. ಗರತಿ ತವರಿಗೆ ಏನೆಂದು ಹರಸುತ್ತಾಳೆ?
ತಾನು ಹಾಲುಕುಡಿದು ಬೆಳೆದಂತ ತವರಿಗೆ ಏನೆಂದು ಹರಸಲಿ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಳ್ಳುವ ಬಾಲೆ ಹೊಳೆಯ ದಂಡೆಯಮೇಲೆ ಇರುವಂತಹ ಗರಿಕೆಯ ಹುಲ್ಲಿನಂತೆ ನನ್ನ ತವರಿನ ವಂಶವೂ ಬೆಳೆಯಲಿ ಎಂದುಮನದುಂಬಿ ಹರಸುತ್ತಾಳೆ. ತವರಿನ ಋಣವನ್ನು ಏನುಮಾಡಿದರೂ ತೀರಿಸಲಾಗದು ಈರೀತಿ ಹರಸುವ ಮೂಲಕ ತನ್ನ ಪ್ರೀತಿ, ಕೃತಜ್ಞತೆ ವ್ಯಕ್ತಪಡಿಸಿದ್ದಾಳೆ.









7 comments:

  1. ಧನ್ಯವಾದಗಳು ಸರ್

    ReplyDelete
  2. ತುಂಬ ಸಹಾಯವಾಗಿದೆ,
    ನೀವು ತಯಾರಿಸಿದ್ಹನಂತಹ ಪಾಠದ ಚಿತ್ರಣವು ಚೆನ್ನಾಗಿದೆ

    ReplyDelete
  3. ದನ್ಯವಾದಗಳು ಸರ್,ನಿಜವಾಗಿ ಹೇಳಬೇಕೆಂದರೆ ನಮ್ಮ ಕಾಲೇಜಿನಲ್ಲಿ ಕನ್ನಡ ಸರ್ ಪದ್ಯಪಾಠ ಮಾಡುವುದು ನಮಗೆ ಸರಿಯಾಗಿ ಅಥ೯ ಆಗುಹುದಿಲ್ಲ,ಆದ್ದರಿಂದ ನೀವು ಎಲ್ಲಾ ಪದ್ಯಪಾಠಗಳ ಸಾರಾಂಶವನ್ನು ಸಂಪೂರ್ಣವಾಗಿ ಅಥ೯ ಮಾಡಿಸಿದ್ದೀರಿ.ನಿಮ್ಮಿಂದ ನಮಗೆ ತುಂಬಾ ಉಪಕಾರವಾಯಿತು ಸರ್🙏🙏🤝🤝

    ReplyDelete
  4. ಧನ್ಯವಾದಗಳು ಸರ್
    ಸರ್ ನಾವು ಈ ಉತ್ತರಗಳನ್ನು ಪರಿಕ್ಷೆಗಳಲ್ಲಿ ಬರೆದರೇ ಸಂಪೂರ್ಣ ಅಂಕಗಳು ಸಿಗುವುದೇ

    ReplyDelete
  5. ಧನ್ಯವಾದಗಳು ಸರ್

    ReplyDelete
  6. ಎಂದೋ ಓದಿದ ತ್ರಿಪದಿಗಳ ಮತ್ತಿಂದು ಓದಿದೇ,
    ಮತ್ತಿಂದು ಓದಿದೆ ತ್ರಿಪದಿಗಳ ....
    ಒದ್ದೆಯಾದವು ಎನ್ನ ಕಣ್ಣಾಲಿ

    ReplyDelete
  7. ಚನ್ನಾಗಿ ವರ್ಣಿಸಿದ್ದೀರಿ ಧನ್ಯವಾದಗಳು ತ್ರಿಪದಿಗಳ pdf ಕೊಡಿ

    ReplyDelete