Sunday, June 29, 2014

ರಾಗಿ ಮುದ್ದೆ

ಗದ್ಯಭಾಗ- 2
ರಾಗಿಮುದ್ದೆ : ರಘುನಾಥ .ಚ.ಹ
ಪ್ರಜಾವಾಣಿ ಉಪಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ  ಇವರು ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಹರಳಾಪುರದವರು , ಹೊಳೆಯಲ್ಲಿ ಹರಿದ ನಋ ಕವನ ಸಂಕಲನ ಹೊರಗೂ ಮಳೆ ಒಳಗೂ ಮಳೆ , ಕಥಾಸಂಕಲನ ಪ್ರಕಟಿಸಿದ್ದಾರೆ.
ಹಳ್ಳಿಯ ಬದುಕಿನಲ್ಲಿ ರಾಗಿಮುದ್ದೆಗಿರುವ ಮಹತ್ವವನ್ನು ಲೇಖಕರು ಇಲ್ಲಿ ಚಿತ್ರಿಸಿದ್ದಾರೆ. ಹಾಗೆಯೇ ರಾಗಿಲಕ್ಷ್ಮಣಯ್ಯನವರ ಪರಿಚಯವನ್ನು ಈ ಲೇಖನದಲ್ಲಿ ಮಾಡಿಕೊಡಲಾಗಿದೆ.

ಸಂದರ್ಭ ಸೂಚಿಸಿ ವಿವರಿಸಿ :
೧. ಅಂಗೈಯಲ್ಲಿ ಮತ್ತೊಂದು ಮುದ್ದೆ ಪ್ರತ್ಯಕ್ಷ!
ಈ ಮಾತನ್ನು ಚ.ಹ. ರಘುನಾಥರು ರಚಿಸಿದ ಪ್ರಬಂಧದಿಂದ ಆರಿಸಲಾಗಿದೆ. ಹಳ್ಳಿಗರ ಬದುಕಿನ ಚಿತ್ರಣವನ್ನು ಹೇಳುವಾಗ ಈ ಮಾತು ಬಂದಿದೆ.ಹೊಲದ ಒಡತಿಯು ಹೊಲದ ಬದಿಯಲ್ಲಿ ಮರದ ಕೆಳಗೆ ಕುಳಿತ ಒಬ್ಬೊಬ್ಬರ ಕೈಯಲ್ಲಿ ಒಂದೊಂದು ರಾಗಿಮುದ್ದೆಯನ್ನು ಕೊಟ್ಟಾಗ, ಅವರು ಮುದ್ದೆಯನ್ನುಅದುಮುತ್ತಾ ಇಡೀ ಮುದ್ದೆಯನ್ನೇ ಬಟ್ಟಲಿನಾಕಾರಕ್ಕೆ ಬದಲಿಸುತ್ತಾರೆ. ಆ ಮುದ್ದೆಗುಂಡಿಯಲ್ಲಿ ಸಾರನ್ನೋ ಗೊಜ್ಜನ್ನೋ ತುಂಬಿಸಿಕೊಂಡು ಎಡ ಅಂಗೈ ಗುಣಿಯಲ್ಲಿ ಇಟ್ಟುಕೊಂಡ ಮುದ್ದೆಯ ಮೇಲ್ಭಾಗದಿಂದ ತುತ್ತು ತುತ್ತಾಗಿ ಮುರಿಯುತ್ತಾ , ನುಂಗುತ್ತಾ ಇರುತ್ತಾರೆ. ಮುದ್ದೆ ಕರಗುವ ವೇಳೆಗಾಗಲೇ ಅಂಗೈಯಲ್ಲಿ ಮತ್ತೊಂದು ಮುದ್ದೆ ಪ್ರತ್ಯಕ್ಷವಾಗುತ್ತದೆ. ಇದು ಹಳ್ಳಿಯ ಬದುಕು. ದುಡಿವ ಜನರ ಬದುಕು ಎಂದು ಲೇಖಕರು ವಿವರಿಸುತ್ತಾರೆ.

೨. ಎಷ್ಟು ಜೋರಾಗಿ ಜಗ್ಗಿದರೂ ಚಿಮ್ಮುತಿದ್ದುದು ದಾರದಷ್ಟೇ ದಪ್ಪದ ನೀರು.
ಈ ಮಾತನ್ನು ಚ.ಹ. ರಘುನಾಥರು ರಚಿಸಿದ ಪ್ರಬಂಧದಿಂದ ಆರಿಸಲಾಗಿದೆ.
ಲೇಖಕರು ತಮ್ಮ ಹಳ್ಳಿಯ ಅಂತರ್ಜಲ ತಳಸೇರಿರುವುದನ್ನು ಹೇಳುವ ಸಂದರ್ಭದಲ್ಲಿ ಈಮಾತು ಬಂದಿದೆ.
ನಮ್ಮಹಳ್ಳಿಯಲ್ಲಿ ನೀರು ಪಾತಳದಲ್ಲಿ ನೆಲೆನಿಂತಿತ್ತು ಬೋರ್ ವೆಲ್ ಎಷ್ಟೇಜೋರಾಗಿ ಜಗ್ಗಿದರೂ ಚಿಮ್ಮುತ್ತಿದ್ದುದು ದಾರದಷ್ಟೇ ದಪ್ಪದ ನೀರು. ಆ ಬೋರ್ ವೆಲ್ ಬಡಿದೇ ಅಮ್ಮ ಸಣ್ಣಗಾಗಿದ್ದಳು. ಕರಿಯ ನೀರು ಜಗ್ಗುತ್ತಿದ್ದರೆ ಆ ಬೋರ್ ವೆಲ್ ಸದ್ದು ಫರ್ಲಾಂಗ್ ದೂರಕ್ಕೂ ಕೇಳಿಸುತ್ತಿತ್ತು. ಎಂದು ಲೇಖಕರು ಹೇಳುತ್ತಾರೆ.

೩. ಸೀಕನ್ನು ಚಪ್ಪರಿಸಿದ ರುಚಿ ಇನ್ನೂ ನಾಲಿಗೆಯಲ್ಲಿದೆ.
ಈ ಮಾತನ್ನು ಚ.ಹ. ರಘುನಾಥರು ರಚಿಸಿದ ಪ್ರಬಂಧದಿಂದ ಆರಿಸಲಾಗಿದೆ.
ರಾಗಿಮುದ್ದೆ ಮಾಡಿದನಂತರ ತಳದಲ್ಲಿ ಮುದ್ದೆಯ ಅಂಟಿನ ಎಳೆ ಯನ್ನು ಸೀಕು ಎಂದು ಹೇಳುತ್ತಾರೆ. ಒಣಗಿದ ಸೀಕು ಕುರುಂ ಕುರುಂ ಹಪ್ಪಳದಂತೆ ಸ್ವಾದಿಷ್ಟ. ಬಾಲ್ಯದಲ್ಲಿ ಅಮ್ಮ ಬಿಡಿಸಿ ಒಲೆ ಗುಂಡಿನ ಮೇಲಿಟ್ಟ ಸೀಕನ್ನು ಚಪ್ಪರಿಸಿದ ರುಚಿ ಇನ್ನೂ ನಾಲಿಗೆಯಲ್ಲಿದೆ. ಸೀಕನ್ನುಕಂಡರೆ ಮಕ್ಕಳಿಗೆ ಕಣ್ಣು ಅರಳುವುದು. ಬಡಮಕ್ಕಳ ಪಾಲಿಗೆ ಸೀಕು- ಚಾಕಲೇಟ್

೪. ಮುದ್ದೆ ಮಾಡಲಿಕ್ಕೆ ಪಳಗಿದ ಕೈಗಳೇ ಆಗಬೇಕು.
ಈ ಮಾತನ್ನು ಚ.ಹ. ರಘುನಾಥರು ರಚಿಸಿದ ಪ್ರಬಂಧದಿಂದ ಆರಿಸಲಾಗಿದೆ.
ರಾಗಿಮುದ್ದೆ ತಯಾರಿಸುವಲ್ಲಿ ಕಲಾತ್ಮಕತೆಯೂ ಇದೆ. ಕುದಿವ ನೀರಿಗೆ ರಾಗಿಹಿಟ್ಟು ಬೆರೆಸಿ ಹದವಾಗಿ ಕುದಿಸಿ, ಪಾಕಕ್ಕೆ ಬಂದ ಮಿಶ್ರಣವನ್ನು ಉಂಡೆಕಟ್ಟುವ ಪ್ರಕ್ರಿಯೆ ಮೇಲ್ನೋಟಕ್ಕೆ ಸುಲಭವಾಗಿಕಂಡರೂ ಅನುಭವ ಬಯಸುವ ಕಾರ್ಯವಾಗಿದೆ. ಮುದ್ದೆ ಗಂಟಾಗದಂತೆ, ಪೆಡುಸಾಗದಂತೆ ತಯಾರಿಸುವುದಕ್ಕೆ ಪಳಗಿದ ಕೈಗಳೇ ಆಗಬೇಕು ಎಂದು ಲೇಖಕರು ಹೇಳುತ್ತಾರೆ.

೫. ಸಂದು ಹೋದ ಜೀವನ ಶೈಲಿಯೊಂದರ ಮೆಲುಕು.
ಈ ಮಾತನ್ನು ಚ.ಹ. ರಘುನಾಥರು ರಚಿಸಿದ ಪ್ರಬಂಧದಿಂದ ಆರಿಸಲಾಗಿದೆ.
ಲೇಖಕರ ತಾತನ ಮನೆಯಲ್ಲಿ ಹತ್ತಾರು ಮಂದಿಗೆ ದೊಡ್ಡ ಬಾನಿಯಲ್ಲಿ ಮುದ್ದೆ ಮಾಡುತ್ತಿದ್ದ ದಿನಗಳ ಕಥೆಯನ್ನು ಇಲ್ಲಿ ವಿವರಿಸಿದ್ದಾರೆ. ತನ್ನ ತಾಯಿಯು ದೇಹದ ಶಕ್ತಿಯನ್ನೆಲ್ಲಾ ಕ್ರೂಢೀಕರಿಸಿ ದೊಡ್ಡದೊಂದು ಕಟ್ಟಿಗೆಯಲ್ಲಿ ಮುದ್ದೆಯ ಎಸರನ್ನು ತೊಳಸುವುದು ಕಷ್ಟದ ಕೆಲಸ. ಕೆಲವೊಮ್ಮೆ ಕೈಯ ಶಕ್ತಿ ಹೆಚ್ಚಾಗಿಯೋ , ಅಥವಾ ಮಡಕೆ ಹಳತಾಗಿಯೋ ಕೋಲು ಬಾನಿಯ ತಳ ಛೇದಿಸಿ ಎಸರೆಲ್ಲಾ ಒಲೆಯ ಪಾಲಾದಾಗ, ಹಿಟ್ಟಿನ ಕೋಲಲ್ಲಿ ಮಗಳನ್ನು ಅಟ್ಟಾಡಿಸುವ ಅಜ್ಜಿಯ ಸಿಟ್ಟು ಇವೆಲ್ಲ ಕೇವಲ ನೆನಪುಗಳಲ್ಲ. ಸಂದುಹೋದ ಜೀವನಶೈಲಿಯ ಮೆಲುಕು ಎಂದಿದ್ದಾರೆ.

೬. ತುಟಿಬಣ್ಣ ಕೆಡದಂತೆ ಚಮಚೆಯಲ್ಲಿ ತಿನ್ನುವ ಚೆಲುವೆಯರು.
ಈ ಮಾತನ್ನು ಚ.ಹ. ರಘುನಾಥರು ರಚಿಸಿದ ಪ್ರಬಂಧದಿಂದ ಆರಿಸಲಾಗಿದೆ.
೨೦೦೬ರಲ್ಲಿ ಜರ್ಮನಿಯ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಯು ನಡೆಯುತ್ತಿದ್ದ ಸಮಯದಲ್ಲಿ ಕ್ರೀಡಾಂಗಣದ ಕಚೇರಿ ಕ್ಯಾಂಟೀನ್ ನಲ್ಲಿ ವಾರಕ್ಕೆ ಎರಡುದಿನ ಮುದ್ದೆ ನೀಡುವ ನಿರ್ಣಯ ಜಾರಿಗೆ ಬಂತು. ಆಗ ರಾಗಿ ಬಾಲ್ ಗಳನ್ನು ತಟ್ಟೆಯಲ್ಲಿಟ್ಟುಕೊಂಡು ತುಟಿ ಬಣ್ಣ ಕೆಡದಂತೆ ಚಮಚೆಯಲ್ಲಿ ಮುದ್ದೆ ತಿನ್ನುವ ಚೆಲುವೆಯರು, ಒಮ್ಮೆಲೆ ಮುದ್ದೆಯನ್ನು ಎತ್ತಿಕೊಂಡು ಕಚ್ಚಿತಿನ್ನುವ ಚೆನ್ನಿಗರು ಇದ್ದರು ಈ ಕಾರಣದಿಂದ  ಕ್ಯಾಂಟೀನ್ ರಸಮಯ ಸನ್ನಿವೇಶಗಳ ರಂಗಸ್ಥಳವಾಗಿತ್ತು ಎಂದಿದ್ದಾರೆ.

೭. ಅದು ಪದಗಳಿಗೆ ನಿಲುಕದ ರಸಾನುಭವ.
ಈ ಮಾತನ್ನು ಚ.ಹ. ರಘುನಾಥರು ರಚಿಸಿದ ಪ್ರಬಂಧದಿಂದ ಆರಿಸಲಾಗಿದೆ.
ರಾಗಿಮುದ್ದೆಯನ್ನು ಸೊಪ್ಪಿನ ಸಾರು , ಕಿವುಚಿದ ಸಾರು, ಹಿತಕವರೆಸಾರು , ಮೊಳಕೆಹುರುಳಿ ಸಾರು , ಉಪ್ಪು ಮೆಣಸಿನಕಾಯಿ ಗೊಜ್ಜು ಹೀಗೆ ಯಾವುದರೊಂದಿಗೂ ಸೇರಿಸಿ ಸೇವಿಸಬಹುದಾಗಿದೆ. ಯಾವುದೂ ಇಲ್ಲದಿದ್ದರೂ ಕೊನೆಗೆ ನೀರು ಮಜ್ಜಿಗೆಯಿದ್ದರೂ ಸರಿಯೇ ಸೇರಿಸಿ ಸೇವಿಸಬಹುದು. ಆದರೆ ಉಪ್ಪು ಮೆಣಸಿನ ಕಾಯಿ ಗೊಜ್ಜಿನೊಂದಿಗೆ ಮುದ್ದೆ ಮೆದ್ದಿ ಮೆಲ್ಲುವ ಆನಂದವನ್ನು ಅನುಭವಿಸಿದವರೇ ಬಲ್ಲರು. ಇದು ಪದಗಳಿಗೆ ನಿಲುಕದ ರಸಾನುಭವ.





೮. ನನ್ನ ದೇಹದ ಮೇಲೆ ಒಂದು ಮುಷ್ಟಿ ರಾಗಿ ಸುರಿಯಿರಿ.
ಈ ಮಾತನ್ನು ಚ.ಹ. ರಘುನಾಥರು ರಚಿಸಿದ ಪ್ರಬಂಧದಿಂದ ಆರಿಸಲಾಗಿದೆ.
ಅನಾರೋಗ್ಯ ಪೀಡಿತರಾದ ರಾಗಿ ಲಕ್ಷ್ಮಣಯ್ಯನವರು ಶಸ್ತ್ರಚಿಕಿತ್ಸೆಗೆ ಒಳಗಾದಾಗ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿಲ್ಲ. ಅಂತ್ಯ ಸಂಸ್ಕಾರಕ್ಕೆಮೊದಲು ನನ್ನ ದೇಹದ ಮೇಲೆ ಒಂದು ಮುಷ್ಟಿ ರಾಗಿ ಸುರಿಯಿರಿ ಎಂದು ತಮ್ಮ ಪತ್ನಿಯ ಬಳಿ ಹೇಳಿಕೊಂಡಿದ್ದರು ಇದು ಅವರ ಕೊನೆಯ ಆಸೆಯಾಗಿತ್ತು. 

ಒಂದು ವಾಕ್ಯದಲ್ಲಿ ಉತ್ತರಿಸಿ.
. ಗ್ರಾಮದ ಅಧಿದೇವತೆ ಯಾರು?
ಗ್ರಾಮದ ಅಧಿದೇವತೆ ನಾಗಮ್ಮ.

೨. ಕಣ್ಣುಗಳಲ್ಲಿ ಯಾವುದರ ಸಾಲುಚಿತ್ರಗಳು ಮೂಡಿಕೊಂಡವು?
ಕಣ್ಣುಗಳಲ್ಲಿ ಮುದ್ದೆಯ ಸಾಲು ಸಾಲು ಚಿತ್ರಗಳು ಮೂಡಿಕೊಂಡವು.

೩. ಹೊಟೆಲ್ಲಿನಲ್ಲಿ ಕರಿಯ ಏನು ಕೆಲಸ ಮಾಡುತ್ತಿದ್ದ?
ಕರಿಯ ಹೊಟೆಲ್ಲಿನಲ್ಲಿ ಕಸ-ಮುಸುರೆ ಬಳಿಯುತ್ತಿದ್ದ.

೪. ಊರಿನ ನೀರು ಎಲ್ಲಿ ನೆಲೆ ನಿಂತಿತ್ತು?
ನೀರು ಪಾತಾಳದಲ್ಲಿ ನೆಲೆ ನಿಂತಿತ್ತು. ಅಂದರೆ ಅಂತರ್ಜಲ ಕಡಿಮೆಯಾಗಿದ್ದಂತಹ ಹಳ್ಳಿಯಾಗಿತ್ತು.

೫. ನೀರಿಗಾಗಿ ಕರಿಯ ಏನನ್ನು ತರುತ್ತಿದ್ದ?
ನೀರಿಗಾಗಿ ಕರಿಯ ದೊಡ್ಡದೊಂದು ಬಾನಿಯನ್ನೇ ತರುತ್ತಿದ್ದ.

೬. ಬಡಮಕ್ಕಳ ಪಾಲಿಗೆ ಚಾಕಲೇಟ್ ಯಾವುದು?
ಸೀಕು ಬಡಮಕ್ಕಳ ಪಾಲಿಗೆ ಚಾಕಲೇಟ್ ಆಗಿತ್ತು.

೭.ರಾಗಿಗೆ ಎಷ್ಟು ಸಾವಿರ ವರ್ಷಗಳ ಇತಿಹಾಸವಿದೆ?
ನಾಲ್ಕುಸಾವಿರ ವರ್ಷಗಳ ಇತಿಹಾಸವಿದೆ.

೮. ರಾಗಿಯಲ್ಲಿನ ಸ್ವಲ್ಪ ಸ್ವಲ್ಪವೇ ಬಿಡುಗಡೆಯಾಗುವ ಅಂಶ ಯಾವುದು?
ರಾಗಿಯಲ್ಲಿನ ಕಾರ್ಬೊಹೈಡ್ರೇಟ್ಸ್ ಎಂಬ ಅಂಶ ಸ್ವಲ್ಪಸ್ವಲ್ಪವಾಗಿ ಬಿಡುಗಡೆಯಾಗುವುದರಿಂದ ರಾಗಿಮುದ್ದೆ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

೯. ಅಕ್ಕಿ, ಗೋಧಿಗೆ ಹೋಲಿಸಿದರೆ ರಾಗಿ ಎಷ್ಟುಪಟ್ಟು ಹೆಚ್ಚು ಪೌಷ್ಟಿಕವಾಗಿದೆ?
ಅಕ್ಕಿ, ಗೋಧಿಗೆ ಹೋಲಿಸಿದರೆ ರಾಗಿ ಎಂಟು-ಹತ್ತು ಪಟ್ಟು ಹೆಚ್ಚು ಪೌಷ್ಟಿಕವಾಗಿದೆ.

೧೦. ಡಾ. ಸಿ.ಹೆಚ್. ಲಕ್ಷ್ಮಣಯ್ಯನವರು ತಮ್ಮ ಪತ್ನಿ ಬಳಿ ಹೇಳಿಕೊಂಡ ಕೊನೆಯ ಆಸೆ ಯಾವುದು?
ಮಹಾನ್ ರಾಗಿಪ್ರೇಮಿಯಾಗಿದ್ದ ಡಾ. ಸಿ.ಹೆಚ್. ಲಕ್ಷ್ಮಣಯ್ಯನವರು ಅಂತ್ಯಸಂಸ್ಕಾರಕ್ಕೆ ಮೊದಲು ನನ್ನ ದೇಹದ ಮೇಲೆ ಒಂದು ಮುಷ್ಟಿ ರಾಗಿ ಸುರಿಯಿರಿ ಎಂದು  ತಮ್ಮ ಪತ್ನಿ ಬಳಿ ಕೊನೆಯ ಆಸೆಯನ್ನು ಹೇಳಿಕೊಂಡರು.

ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಲೇಖಕರು ಹಾಗೂ ಅವರ ಅಣ್ಣನ ನಾಲಿಗೆಯ ಮೇಲೆ ನೀರೂರಲು ಕಾರಣವೇನು?
ಗ್ರಾಮದ ದೇಗುಲದ ಬಳಿ ಕಟ್ಟಡ ನಿರ್ಮಾಣಕ್ಕಾಗಿ ಬಂದಿದ್ದ ಶ್ರಮಿಕರ ಗುಂಪು ಊಟಮಾಡಲು ಬುತ್ತಿತೆಗೆದಾಗ ಮುದ್ದೆ ಮತ್ತು ಸಾರಿನ ಸೊಗಸಾದ ಘಮಘಮ , ಶ್ರಮಿಕರು ಮುದ್ದೆಯನ್ನು ಮುರಿಯುತ್ತ ಸಾರಿನಲ್ಲಿ ಹೊರಳಿಸಿ ನುಂಗುತ್ತಿದ್ದರೆ ಲೇಖಕರ ಮತ್ತು ಅವರ ಅಣ್ಣನ ನಾಲಿಗೆ ಮೇಲೆ ನೀರೊಡೆದಿತ್ತು.

೨. ನಮ್ಮ ಯಾವ ಜಿಲ್ಲೆಗಳು ರಾಗಿಯ ಕಣಜವಾಗಿವೆ?
ಭಾರತದಲ್ಲಿ ರಾಗಿಬೆಳೆ ಹಾಗೂ ಬಳಕೆಯಲ್ಲಿ ಕರ್ನಾಟಕ ಮುಂದು. ಮಂಡ್ಯ, ಮೈಸೂರು , ತುಮಕೂರು, ಕೋಲಾರಗಳು ರಾಗಿಯ ಕಣಜಗಳೇ ಆಗಿವೆ.

೩.ರಾಗಿ ಬೀಸುವ ಕಲ್ಲನ್ನು ಕುರಿತ ಜನಪದ ಹೆಣ್ಣುಮಗಳ ಪ್ರಾರ್ಥನೆ ಯಾವುದು?
ಜನಪದರು ಮುದ್ದೆ ಮತ್ತು ನಿದ್ದೆಗೆ ಕೊರತೆ ಮಾಡದಿರು ಶಿವನೇ ಎಂದು ಪ್ರಾರ್ಥಿಸುವಂತೆ ರಾಗಿಯ ಹಿಟ್ಟುಮಾಡುವಂತಹ ಕಲ್ಲನ್ನುಕಲ್ಲಮ್ಮ ಮಾತಾಯಿ ಮೆಲ್ಲಮ್ಮ ರಾಗೀಯ| ಜಲ್ಲ ಜಲ್ಲನೆ ಉದುರಮ್ಮ ಎಂದು ಹೆಣ್ಣುಮಕ್ಕಳು ಪ್ರಾರ್ಥಿಸುತ್ತಾರೆ.

೪. ಮುದ್ದೆಮಾಡಲು ಬೇಕಾದ ಕೌಶಲ್ಯವೇನು?
ಮುದ್ದೆಮಾಡುವುದೂ ಒಂದು ಕಲೆ, ಕುದಿವ ನೀರಿಗೆ ರಾಗಿಯ ಹಿಟ್ಟು ಬೆರೆಸಿ, ಹದವಾಗಿ ಕುದಿಸಿ, ಪಾಕಕ್ಕೆ ಬಂದ ಮಿಶ್ರಣವನ್ನು ಉಂಡೆಗಟ್ಟುವುದು.ಸುಲಭವಾಗಿ ಕಂಡರೂ ಗಂಟಾಗದಂತೆ, ಪೆಡುಸಾಗದಂತೆ ಮುದ್ದೆಮಾಡಲಿಕ್ಕೆ ಅನುಭವಿ ಕೈ ಇರಬೇಕು. ಅಲ್ಲದೆ ಹಬೆಯಾಡುವ ಮುದ್ದೆಯನ್ನು ಕೈ ಒದ್ದೆ ಮಾಡಿಕೊಂಡು ಉಂಡೆಕಟ್ಟುವುದಕ್ಕೂ ಕೌಶಲ್ಯ ಇರಬೇಕು.

೫. ಲೇಖಕರ ಪ್ರಕಾರ ದುಡಿವ ಜನಕ್ಕೆ ಯಾವರೀತಿಯ ಮುದ್ದೆ ಇರಬೇಕು.
ರಾಗಿಯಲ್ಲಿನ ಕಾರ್ಬೊಹೈಡ್ರೇಟ್ಸ್ ಎಂಬ ಅಂಶ ಸ್ವಲ್ಪಸ್ವಲ್ಪವಾಗಿ ಬಿಡುಗಡೆಯಾಗುವುದರಿಂದ ರಾಗಿಮುದ್ದೆ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈಕಾರಣಕ್ಕೆ ದುಡಿವ ಜನಕ್ಕೆ ರಾಗಿಮುದ್ದೆಯ ಊಟ ಅಚ್ಚುಮೆಚ್ಚು.

೬. ಯಾವ ಕಾರಣದಿಂದ ಕ್ಯಾಂಟೀನ್ ರಸಮಯ ಸನ್ನಿವೇಶಗಳ
 ರಂಗಸ್ಥಳವಾಗಿತ್ತು?
ಜರ್ಮನಿಯ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿದ್ದಾಗ ಕ್ಯಾಂಟಿನ್ ನಲ್ಲಿ ರಾಗಿಬಾಲ್ ಗಳನ್ನು ತಟ್ಟೆಯಲ್ಲಿಟ್ಟುಕೊಂಡು ತುಟಿಬಣ್ಣ ಕೆಡದಂತೆ ಚಮಚೆಯಲ್ಲಿ ತಿನ್ನುವ ಚೆಲುವೆಯರು, ಇಡೀ ಮುದ್ದೆಯನ್ನು ಎತ್ತಿಕೊಂಡು ಕಚ್ಚಿತಿನ್ನುವ ಚೆನ್ನಿಗರ ಕಾರಣದಿಂದ ಕ್ಯಾಂಟೀನ್ ರಸಮಯ ಸನ್ನಿವೇಶಗಳ ರಂಗಸ್ಥಳವಾಗಿತ್ತು.


೭. ರಾಗಿಯಲ್ಲಿ ಯಾವ ರೋಗಗಳನ್ನು ತಡೆಯಬಲ್ಲ ಗುಣವಿದೆ?
ಅಕ್ಕಿ ಮತ್ತು ಗೋಧಿಗೆ ಹೋಲಿಸಿದರೆ ರಾಗಿ ೮-೧೦ ಪಟ್ಟು ಹೆಚ್ಚು ಪೌಷ್ಟಿಕ, ರೋಗ ನಿರೋಧಕ, ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಿಸುತ್ತದೆ, ಪ್ರತ್ಯಾಮ್ಲೀಯ ಗುಣ ಹೊಂದಿರುವುದರಿಂದ ರಾಗಿ ತಿನಿಸು ದೇಹಕ್ಕೆ ತಂಪು, ರಾಗಿಯಲ್ಲಿ ಹೃದಯದ ಬೇನೆ, ಕ್ಯಾನ್ಸರ್ ಗಳನ್ನು ತಡೆಗಟ್ಟಬಲ್ಲ ಔಷಧೀಯಗುಣಗಳಿವೆ. ಅಲ್ಲದೆ ರಾಗಿಯಲ್ಲಿಯ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಮಕ್ಕಳ ಬೆಳವಣಿಗೆ ನಿಟ್ಟಿನಲ್ಲಿ ಟಾನಿಕ್ ನಂತೆ ಕೆಲಸಮಾಡುತ್ತದೆ.

೮. ಮುದ್ದೆಯ ಕುರಿತು ಕೋಮಲಾಂಗಿಯರಿಗೆ ಇರುವ ಹೆದರಿಕೆ ಯಾವುದು?
ಮುದ್ದೆ ಎಂದರೆ ಮೋರೆ ತಿರುಗಿಸುವವರೂ, ಮಧುಮೇಹಿಗಳ ಪಥ್ಯ ಎಂದು ಮೂಗು ಮುರಿಯುವವರೂ ಸಾಕಷ್ಟಿದ್ದಾರೆ ಅಲ್ಲದೆ ಮುದ್ದೆಯ ಬಣ್ಣ ಮೈಬಣ್ಣವನ್ನು ಕಂದಿಸುತ್ತದೆ ಎಂದು ಕಂಗಾಲಾಗುವ ಕೋಮಲಾಂಗಿಯರೂ ಇದ್ದಾರೆ.

ಐದಾರು ವಾಕ್ಯಗಳಲ್ಲಿ ಉತ್ತರಿಸಿ
೧. ಹಳ್ಳಿಯ ಜನ ಕೈಯಲ್ಲೇ ಮುದ್ದೆ ತಿನ್ನುವ ಚಿತ್ರಣ ವಿವರಿಸಿ.
ಹೊಲದ ಒಡತಿಯು ಹೊಲದ ಬದಿಯಲ್ಲಿ ಮರದ ಕೆಳಗೆ ಕುಳಿತ ಒಬ್ಬೊಬ್ಬರ ಕೈಯಲ್ಲಿ ಒಂದೊಂದು ರಾಗಿಮುದ್ದೆಯನ್ನುಕೊಟ್ಟಾಗ, ಅವರು ಮುದ್ದೆಯನ್ನು ಅದುಮುತ್ತಾ ಇಡೀ ಮುದ್ದೆಯನ್ನೇ ಬಟ್ಟಲಿನಾಕಾರಕ್ಕೆ ಬದಲಿಸುತ್ತಾರೆ. ಆ ಮುದ್ದೆಗುಂಡಿಯಲ್ಲಿ ಸಾರನ್ನೋ ಗೊಜ್ಜನ್ನೋ ತುಂಬಿಸಿಕೊಂಡು ಎಡ ಅಂಗೈ ಗುಣಿಯಲ್ಲಿ ಇಟ್ಟುಕೊಂಡ ಮುದ್ದೆಯ ಮೇಲ್ಭಾಗದಿಂದ ತುತ್ತು ತುತ್ತಾಗಿ ಮುರಿಯುತ್ತಾ , ನುಂಗುತ್ತಾ ಇರುತ್ತಾರೆ. ಮುದ್ದೆ ಕರಗುವ ವೇಳೆಗಾಗಲೇ ಅಂಗೈಯಲ್ಲಿ ಮತ್ತೊಂದು ಮುದ್ದೆ ಪ್ರತ್ಯಕ್ಷವಾಗುತ್ತದೆ. ಇದು ಹಳ್ಳಿಯ ಬದುಕು. ದುಡಿವ ಜನರ ಬದುಕು ಎಂದು ಲೇಖಕರು ವಿವರಿಸುತ್ತಾರೆ.




೨.ಕರಿಯನ ಜೀವನ ಹೇಗಿತ್ತು ಜನರು ಆತನನ್ನು ಕಾಣುವ ರೀತಿಯನ್ನು ಲೇಖಕರು ಹೇಗೆ ವಿವರಿಸಿದ್ದಾರೆ?

ಊರಿನ ಹೋಟೆಲ್ ಒಂದರಲ್ಲಿ ಕರಿಯ ಕಸಮುಸುರೆ ಬಳಿಯುವ ಕೆಲಸಮಾಡುತ್ತಿದ್ದ.  ನೋಡಲಿಕ್ಕೆ ಅವನೂ ಒಂದು ದೊಡ್ಡ ರಾಗಿಮುದ್ದೆಯಂತೆ ಕಾಣುತ್ತಿದ್ದ. ಅವನ ನಿಜ ಹೆಸರು ಯಾರಿಗೂ ತಿಳಿಯದು ನೋಡಲಿಕ್ಕೆ ಕಪ್ಪು ಇದ್ದುದರಿಂದ ಎಲ್ಲರೂ ಕರಿಯ ಎಂದೇ ಕರೆಯುತ್ತಿದ್ದರು. ಗಟ್ಟಿಮುಟ್ಟಾಗಿದ್ದ ಇವನು ಬೋರ್ ವೆಲ್ ನೀರಿಗಾಗಿ ಬರುತ್ತಿದ್ದಾಗ ದೊಡ್ಡ ಬಾನಿಯನ್ನು ಹೊತ್ತು ತರುತ್ತಿದ್ದ.  ಅವನ ಬಲಪ್ರಯೋಗಕ್ಕೆ ಬೋರ್ ವೆಲ್ ಮುರಿದುಹೋಗುವ ಭಯ ನಮ್ಮನ್ನು ಕಾಡುತ್ತಿತ್ತು ಎಂದು ಲೇಖಕರು ಹೇಳುತ್ತಾರೆ. ದೊಡ್ಡ ದೊಡ್ಡ ಅರವಿಯನ್ನು ತುಂಬಿಕೊಂಡು ಭುಜದಮೇಲಿಟ್ಟುಕೊಂಡು ಸಾಗುತ್ತಿದ್ದರೆ ಎರಡು ಬೃಹತ್ ಗುಡಾಣಗಳು ಒಟ್ಟಿಗೆ ಸಾಗುತ್ತಿರುವಂತೆ ಭಾಸವಾಗುತ್ತಿತ್ತು. ಇವನಿಗೆ ಇಷ್ಟೋಂದು ಶಕ್ತಿ ಎಲ್ಲಿಂದ ಎಂಬುದು ಲೇಖಕರಿಗೆ ಅಚ್ಚರಿ ತರಿಸಿತ್ತು.


೩. ರಾಗಿಮುದ್ದೆ ಕುರಿತು ಇರುವ ಹತ್ತಾರು ಮೆಚ್ಚುಗೆಯ ನಂಬಿಕೆಯ ಮಾತುಗಳಾವುವು?

ಅಕ್ಕಿ ಮತ್ತು ಗೋಧಿಗೆ ಹೋಲಿಸಿದರೆ ರಾಗಿ ೮-೧೦ ಪಟ್ಟು ಹೆಚ್ಚು ಪೌಷ್ಟಿಕ, ರೋಗ ನಿರೋಧಕ, ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಿಸುತ್ತದೆ, ಪ್ರತ್ಯಾಮ್ಲೀಯ ಗುಣ ಹೊಂದಿರುವುದರಿಂದ ರಾಗಿ ತಿನಿಸು ದೇಹಕ್ಕೆ ತಂಪು, ರಾಗಿಯಲ್ಲಿ ಹೃದಯದ ಬೇನೆ, ಕ್ಯಾನ್ಸರ್ ಗಳನ್ನು ತಡೆಗಟ್ಟಬಲ್ಲ ಔಷಧೀಯಗುಣಗಳಿವೆ. ತೆಳ್ಳಗಾಗಬೇಕೆನ್ನುವವರಿಗೆ ಹೇಳಿಮಾಡಿಸಿದ ಊಟ ,  ಅಲ್ಲದೆ ರಾಗಿಯಲ್ಲಿಯ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಮಕ್ಕಳ ಬೆಳವಣಿಗೆ ನಿಟ್ಟಿನಲ್ಲಿ ಟಾನಿಕ್ ನಂತೆ ಕೆಲಸಮಾಡುತ್ತದೆ. ಹೀಗೆ ಮೆಚ್ಚುಗೆಯ, ನಂಬಿಕೆಯ ಮಾತುಗಳಿವೆ.





೪. ರಾಗಿಮುದ್ದೆ ಯಾವ ಬಗೆಯ ಸಾರುಗಳ ಜೊತೆ ಸೇರಿ ಎಂತಹ ರಸಾನುಭವವನ್ನು ಸೃಷ್ಟಿಸುತ್ತದೆ? ವಿವರಿಸಿ.
ರಾಗಿಮುದ್ದೆಗೂ ಸೊಪ್ಪಿನ ಸಾರಿಗೂ ಹೇಳಿಮಾಡಿಸಿದ ಜೋಡಿ,ಹಾಗೆನೋಡಿದರೆ ಎಲ್ಲ ಸಾರಿನೊಂದಿಗೂ ಮುದ್ದೆ ಹೊಂದಿಕೊಳ್ಳುತ್ತದೆ. ಕಿವುಚಿದ ಸಾರು , ಸೊಪ್ಪುಸಾರು, , ಹಿತಕವರೆ, ಮೊಳಕೆಯೊಡೆದ ಹುರಳಿಕಾಳು ಸಾರು, ಉಪ್ಪು ಮೆಣಸಿನಕಾಯಿ ಗೊಜ್ಜು, ಕೋಳಿಸಾರು ಹೀಗೆ ಎಲ್ಲದರೊಂದಿಗೆ ರಾಗಿಮುದ್ದೆ ಅನುರೂಪ ಜೋಡಿಯಾಗಬಲ್ಲುದು.ಯಾವುದೂ ಇಲ್ಲವೆಂದರೆ ಕೊನೆಗೆ ನೀರುಮಜ್ಜಿಗೆಯ ಜೊತೆ ಮುದ್ದೆಯನ್ನು ಕದರಿ ಕುಡಿಯುವ ಸುಖ, ಉಪ್ಪು ಮೆಣಸಿನಕಾಯಿಯೊಂದಿಗೆ ಮುದ್ದೆಯನ್ನು ಮೆದ್ದಿ ಮೆಲ್ಲುವ ಆನಂದವನ್ನು ಅನುಭವಿಸಿದವರೇ ಬಲ್ಲರು ಇದು ಪದಗಳಿಗೆ ನಿಲುಕದ ರಸಾನುಭವ.

೫. ಡಾ. ಸಿ. ಹೆಚ್. ಲಕ್ಷ್ಮಣಯ್ಯನವರ ರಾಗಿ ಸಂಶೋಧನೆ ಮತ್ತು ರಾಗಿ ಪ್ರೀತಿಯನ್ನು ವಿವರಿಸಿರಿ.
ರಾಗಿ ಲಕ್ಷ್ಮಣಯ್ಯ ಎಂದೇ ಹೆಸರಾದವರು ಡಾ. ಸಿ. ಹೆಚ್. ಲಕ್ಷ್ಮಣಯ್ಯನವರು.
ಮೈಸೂರು ತಾಲ್ಲೂಕಿನ ಹಾರೋಹಳ್ಳಿಯ ಇವರು ರೈತರಿಗೆ ಉಪಯೋಗವಾಗುವಂತ ಅನೇಕ ಹೊಸತಳಿಗಳ ಅಧ್ಯಯನದಲ್ಲಿ ತೊಡಗಿಸಿಕೊಂಡು ರಾಗಿಕ್ರಾಂತಿಗೆ ಕಾರಣರಾದರು. ಕಡಿಮೆ ಅವಧಿಯಲ್ಲಿ , ವರ್ಷದ ಎಲ್ಲಾ ಕಾಲದಲ್ಲಿ ಬೆಳೆಯಬಹುದಾದ ತಳಿಗಳನ್ನು ಅಭಿವೃದ್ಧಿಪಡಿಸಿದರು. ಅನಾರೋಗ್ಯ ಪೀಡಿತರಾದಾಗಲೂ ರಾಗಿಧ್ಯಾನವನ್ನು ಮರೆಯಲಿಲ್ಲ. ಶಸ್ತ್ರಚಿಕಿತ್ಸೆಗೆ ತೆರಳುವಾಗ, ನಾನು ಮರಣ ಹೊಂದಿದರೆ ಅನ್ನ ದೇಹದ ಮೇಲೆ ಒಂದು ಮುಷ್ಟಿ ರಾಗಿ ಸುರಿಯಿರಿ ಎಂದು ತಮ್ಮ ಕೊನೆ ಆಸೆಯನ್ನು ಹೇಳಿಕೊಂಡಿದ್ದರು.

~~~~~ಓಂ~~~~~~


No comments:

Post a Comment