Sunday, June 29, 2014

ಶಿಶು ಮಕ್ಕಳಿಗೆ ಒಲಿದ ಮಾದೇವ

ಪದ್ಯ ಭಾಗ 6
ಶಿಶುಮಕ್ಕಳಿಗೊಲಿದ ಮಾದೇವ
ಜನಪದ ಕಾವ್ಯ
ಮಲೆಮಹದೇಶ್ವರ ಕಾವ್ಯ : 15ನೇ ಶತಮಾನದಲ್ಲಿದ್ದ ಶರಣ, ದೇವಮಾನವ.ಇವನು ಏಳುಮಲೆ ಎಪ್ಪತ್ತೇಳು ಮಲೆಗಳ ನಡುವನ ವಜ್ರಮಲೆ ಇಂದಿನ ಮಹದೇಶ್ವರ ಬೆಟ್ಟಾದಲ್ಲಿ ಲಿಂಗರೂಪತಾಳಿ ಭಕ್ತಾದಿಗಳಿಂದ ಪೂಜೆಗೊಳ್ಳುತ್ತಿದ್ದಾನೆ. ಇವನನ್ನು ಕುರಿತು ಕಂಸಾಳೆ ಕಾವ್ಯವನ್ನು ಕಂಸಾಳೆ ಕಲಾವಿದರು ಹಾಡುತ್ತಾ ಬಂದಿದ್ದಾರೆ.
ಈ ಕಾವ್ಯವು ಕನ್ನಡ ಜನಪದ ಕಾವ್ಯಗಳಲ್ಲೇ ದೊಡ್ಡದಾದುದು. ಇದು ಏಳು ವಿಭಾಗವಾಗಿ ವಿಂಗಡಣೆಗೊಂಡಿದೆ. ವಿಭಾಗಗಳನ್ನು ಸಾಲು ಎಂದು ಹೇಳುತ್ತಾರೆ. ಒಂದೊಂದು ವಿಭಾಗವೂ ಸ್ವತಂತ್ರವೆಂಬಂತೆ ವೈಶಿಷ್ಟ್ಯಪೂರ್ಣವಾಗಿವೆ. ಅವುಗಳೆಂದರೆ ತಾಳುಗತೆ, ಶ್ರವಣದೊರೆ ಸಾಲು, ಜುಂಜೇಗೌಡನ ಸಾಲು, ಸಂಕಮ್ಮನಸಾಲು , ಇಕ್ಕೇರಿ ದೇವಮ್ಮನ ಸಾಲು , ಸರಗೂರಯ್ಯನ ಸಾಲು ಬೇವಿನಹಟ್ಟಿ ಕಾಳಿಯ ಸಾಲು . ಪ್ರಸ್ತುತ ಕಾವ್ಯಭಾಗವು ಸಂಕಮ್ಮ ಸಾಲಿನಿಂದ ಆರಿಸಲಾಗಿದೆ.
ಕಥೆ ಹಿನ್ನೆಲೆ :
ಸಂಕಮ್ಮ ಎಂಬುವವಳು ಸೋಲಿಗರ ನೀಲಪ್ಪನನ್ನು ಮದುವೆಯಾಗುತ್ತಾಳೆ. ನೀಲಪ್ಪ ತನ್ನ ಪತ್ನಿ ಸಂಕಮ್ಮನನ್ನು ಕರೆದುಕೊಂಡು ಮೂಡಲಮನೆ ಕಾನಿಗೆ(ಅರಣ್ಯ)ಬಂದು ಅಲ್ಲಿ ಗುಡಿಸಲನ್ನು ಕಟ್ಟಿಕೊಂಡು ವಾಸಿಸುತ್ತಾನೆ. ಒಮ್ಮೆ ತನ್ನ ಹೆಂಡತಿಯನ್ನು ಗುಡಿಸಲಲ್ಲಿ ಬಿಟ್ಟು ಬೇಟೆಗೆಂದು ವಜ್ರದಮಲೆಕಾನಿಗೆ ಹೋಗುವಾಗ ನಾನು ಸುಮಾರು ೯ ತಿಂಗಳು ಇಲ್ಲಿರುವುದಿಲ್ಲ ಒಬ್ಬಳನ್ನೇ ಬಿಟ್ಟು ಹೋಗುವುದು ಹೇಗೆಎಂದು ಚಿಂತಿಸಿ ಗುಡಿಸಲಮುಂದೆ ೭೭ಮಂಡಲಮಾಡಿ ಚೀಟಿ ಬರೆದಿಟ್ಟು ಬಾಗಿಲಲ್ಲಿ ರಾಕ್ಷಸಿಗೊಂಬೆ ಮಾಡಿಟ್ಟು ಸಂಕಮ್ಮನ ಮೇಲೆ ಸಂಶಯಪಟ್ಟು, ಅವಳ ವಸ್ತ್ರಗಳನ್ನು ಕಳಚಿ, ಸೊಪ್ಪಿನ ಉಡುಗೆ ತೊಡಿಸಿ, ಕೈಕಾಲುಗಳನ್ನೂ ಕಟ್ಟಿ ಬೇಟೆಗೆ ಹೊರಡುತ್ತಾನೆ.
ಹೀಗೆ ಗಂಡ ನೀಡಿದ ಚಿತ್ರಹಿಂಸೆಯಿಂದ ಬೇಸರಗೊಂಡು ದುಃಖಿತಳಾದ ಸಂಕಮ್ಮ ತನ್ನ ತಂದೆಯ ಮನೆದೇವರಾದ ಮಾದಯ್ಯನಲ್ಲಿ ಮೊರೆಯಿಡುತ್ತಾಳೆ. ನರಲೋಕದಲ್ಲಿಯಾರೋ ಹೆಣ್ಣು ಗೋಳಾಡುತ್ತಿದ್ದಾಳೆ ಎಂದು ತಿಳಿದ ಮಾದೇವ ಮಾರುವೇಷದಲ್ಲಿ ಸಂಕಮ್ಮನ ಗುಡಿಸಲ ಬಳಿಬಂದು ನೀಲಪ್ಪಮಾಡಿದ್ದ ಮಂಡಲಗಳನ್ನು, ರಾಕ್ಷಸಿಬೊಂಬೆಯನ್ನು ನಾಶಮಾಡಿ, ಭಿಕ್ಷೆಬೇಡುತ್ತಾನೆ. ಮೈಮೇಲೆ ಬಟ್ಟೆಯಿಲ್ಲದೆ, ಕೈಕಾಲುಗಳನ್ನು ಕಟ್ಟಿಸಿಕೊಂಡಿರುವ ಸಂಕಮ್ಮ ಏನೂ ತೋಚದೆ ಕಣ್ಣೀರಿಡುತ್ತಾಳೆ. ಅವಳ ದುಃಖವನ್ನು ನೋಡಲಾರದೆ ಮಾದೇವ ಕೃಪಾದೃಷ್ಟಿಯನ್ನು ಬೀರುತ್ತಾನೆ.  ಆ ಕೂಡಲೇ ಗುಡಿಸಲು ಏಳು ಉಪ್ಪರಿಗೆ ಮನೆಯಾಗುತ್ತದೆ. ಮನೆ ಸಕಲ ಐಶ್ವರ್ಯದಿಂದ ತುಂಬಿ ತುಳುಕುತ್ತದೆ. ಸಂಕಮ್ಮ ಪಟ್ಟೆಸೀರೆ, ರವಿಕೆ, ಆಭರಣಗಳನ್ನು ತೊಟ್ಟು ಆ ಭಾಗ್ಯಕೊಟ್ಟ ಭಗವಂತನಿಗೆ ನಮಿಸಿ ಭಿಕ್ಷೆನೀಡಲು ಬರುತ್ತಾಳೆ. ಮಾದಪ್ಪ ಬಂಜೆಯ ಕೈಲಿ ಭಿಕ್ಷೆ ಪಡೆಯುವುದಿಲ್ಲ.
 ಆಗ ಸಂಕಮ್ಮ ಮಕ್ಕಳ ಫಲ ಕೊಡು ಇಲ್ಲವೇ ನಿನ್ನ ಪಾದಗಳಲ್ಲಿ ಪ್ರಾಣಬಿಡುತ್ತೇನೆ ಎಂದು ಹೇಳುತ್ತಾಳೆ. ಅದಕ್ಕೆ ಪ್ರತಿಯಾಗಿ ಮಾದೇವ ಮಕ್ಕಳ ಭಾಗ್ಯಕೊಟ್ಟರೆ ನನಗೇನು ಕೊಡುವೆ ಎಂದು ಕೇಳಿದಾಗ ಸಂಕಮ್ಮ ಹೆಣ್ಣಾಗಲಿ , ಗಂಡಾಗಲಿ ಹುಟ್ಟಿದ ಒಂಬತ್ತೇ ದಿನಕ್ಕೆ ನಿನಗೆ ಭಿಕ್ಷೆಕೊಟ್ಟುಬಿಡುತ್ತೇನೆ ಎಂದು ಭರವಸೆ ನೀಡುತ್ತಾಳೆ. ಮಾದೇವ ಅಂತೆಯೇ ಆಗಲಿ ಎಂದು ಹರಸುತ್ತಾನೆ. ಅವಳ ರಕ್ಷಣೆಗೆಂದು ಬಿಳಿ ಪಲ್ಲಿಯಾಗಿ ಉಳಿಯುತ್ತಾನೆ.
ಮಾದಪ್ಪ ತನ್ನ ಮಾಯೆಯಿಂದ ಬೇಟೆಗೆಹೋಗಿದ್ದ ನೀಲಪ್ಪ ಬೇಗ ಹಿಂದಿರುಗುವಂತೆ ಮಾಡುತ್ತಾನೆ. ಮರಳಿದ ನೀಲಪ್ಪ ಗುಡಿಸಲಜಾಗದಲ್ಲಿ ಉಪ್ಪರಿಗೆ ಅರಮನೆ ನೋಡಿ ಕೋಪಗೊಳ್ಳುತ್ತಾನೆಸಂಕಮ್ಮನ ಮೇಲೆ ಸಂಶಯಗೊಂಡು ಅವಳನ್ನು ಕೊಲ್ಲಲು ಹೋಗುತ್ತಾನೆ. ಮಾದೇವ ಸಂಕಮ್ಮಳಂತೆಯೇ ಗೊಂಬೆ ಸೃಷ್ಟಿಸಿ ನೀಲಪ್ಪನ ಮುಂದೆ ಇಡುತ್ತಾನೆ ನೀಲಪ್ಪನ ಕೋಪ ಅದನ್ನು ಕತ್ತರಿಸಿದ ತಗ್ಗುತ್ತದೆ. ಆಗ ಸಂಕಮ್ಮ ಇದೆಲ್ಲವು ತನ್ನದೇವರು ಕೊಟ್ಟಭಾಗ್ಯ ಎಂದು ಹೇಳುತ್ತಾಳೆ. ದಿನಗಳೆದಂತೆ ಸಂಕಮ್ಮಳಿಗೆ ೨ಗಂಡುಮಕ್ಕಳು ಜನಿಸುತ್ತಾರೆಮಾದಪ್ಪ ೯ನೇ ದಿನ ಜಂಗಮನಾಗಿ ಭಿಕ್ಷೆ ಬೇಡಿದಾಗ ನೀಲಪ್ಪ ಮಾದಪ್ಪನನ್ನು ಹೊಡೆಯಲು ಹೋಗುತ್ತಾನೆ. ಮಾದಪ್ಪ ತನ್ನ ಹುಲಿಯನ್ನು ಕರೆದು ನೀಲಪ್ಪನನ್ನು ಬೆದರಿಸುತ್ತಾನೆ. ಕೊನೆಗೆ ನೀಲಪ್ಪ ಶರಣಾಗುತ್ತಾನೆ. ಸಂಕಮ್ಮ ಕೊಟ್ಟಮಾತಿನಂತೆ ತನ್ನ ಮಕ್ಕಳಾದ ಕಾರಯ್ಯ- ಬಿಲ್ಲಯ್ಯರನ್ನು ಮಾದಪ್ಪನಿಗೆ ಭಿಕ್ಷೆನೀಡುತ್ತಾಳೆ. ಅವರಿಬ್ಬರೂ ಮಾದಪ್ಪನಲ್ಲಿ ಅಪಾರಭಕ್ತಿ ಇಟ್ಟುಕೊಂಡು ಮಾದಪ್ಪನ ಸನ್ನಿಧಿಯಲ್ಲಿ ಸೇವೆಸಲ್ಲಿಸುತ್ತಾರೆ.
ಸಾರಾಂಶ :
ಯೋಗದಲ್ಲಿ ಕುಳಿತಿದ್ದ ಶಿವ ತಾನು ಸತ್ಯವಂತೆ ಸಂಕಮ್ಮನ ಮಕ್ಕಳಾದ ಕಾರಯ್ಯ ಬಿಲ್ಲಯ್ಯರನ್ನು ದತ್ತುವಾಗಿ ಪಡೆದಿದ್ದು ಈ ಮಕ್ಕಳನ್ನು ಪರೀಕ್ಷಿಸಲು ದೇವೇಂದ್ರ, ವಾಯುದೇವ, ಗುಡುಗಾಜಮ್ಮಬೊಮ್ಮರಾಯ ರಿಗೆ ಸೂಚನೆ ನೀಡುತ್ತಾನೆ . ಹಳ್ಳ ಕೊಳ್ಳಗಳನ್ನು ತುಂಬಿ ಹರಿಯುವಂತಹ ಮಳೆಯನ್ನು ಕಳುಹಿಸು ಎಂದು ದೇವೆಂದ್ರನಲ್ಲಿ ಹೇಳಿ ವಾಸುದೇವನಿಗೆ ಈ ಭೂಮಿಯನ್ನೇ ಬುಗುರಿಯಂತೆ ತಿರುಗಿಸುವಂತಹ ಸುಂಟರಗಾಳಿಯನ್ನು ಉಂಟುಮಾಡು ಎಂದು ಹೇಳಿ, ಗುಡುಗಾಜಮ್ಮನನ್ನು ಕರೆದು ನೀನು ಗುಡುಗಬೇಕು ನಿನ್ನ ಮಗ ಬೊಮ್ಮರಾಯ ಜೊತೆ ಸೇರಿ ಮಾಯದಂತ ಸಿಡಿಲನ್ನು ಉಂಟುಮಾಡಬೇಕು ಎಂದು ಹೇಳುತ್ತಾನೆಅಂತೆಯೇ ಆಕಾಶ ಭೂಮಿ ಒಂದಾಗುವಂತೆ ಚೆಂಡಿನ ಗಾತ್ರದ ಮಳೆಹನಿ ಬೀಳುತ್ತದೆ. ಮಳೆಯ ರೌದ್ರತೆಗೆ ಕಾಡಿನ ಆನೆ ಮೊದಲಾದ ಪ್ರಾಣಿಗಳೆಲ್ಲ ಕೊರಕಲುಗಳಲ್ಲಿ ತೇಲಿಹೋಗುವಂತಾಯಿತು. ಗುಡುಗು ಸಿಡಿಲ ರಭಸಕ್ಕೆ ಮೂರುಲೋಕಗಳೇ ಬೆದರುವಂತಾಯಿತು.
ಹೂ ತರಲು ಹೋಗಿದ್ದ ಕಾರಯ್ಯ ಬಿಲ್ಲಯ್ಯ ಬೇದರ ಕನ್ನಯ್ಯರು ಎಂದೂ ಬಾರದ ಮಾರಿಮಳೇ ಬಂದ ಕಾರಣ ತಿಳಿಯುತ್ತಿಲ್ಲವಲ್ಲ ಎಂದು ಯೋಚಿಸುತ್ತಾರೆ. ಘೋರವಾದ ಮಳೆಗೆ ಹೆದರಿ ಹುಚ್ಚುಮಳೆಗೆ ಮಾದೇವನ ಗುಡಿ ಮುಚ್ಚಿಹೋಗುವುದನ್ನು ಕಂಡು ದೇವಾದಿ ದೇವನೇ ಹೋದಮೇಲೆ ನಾವು ಹೇಗೆ ಬದುಕುವುದು. ನಮ್ಮಂತ ಬೇಡರಿಗೆ ಒಲಿದ ಮಾದೇವ ನಮಗೆ ನಿನ್ನ ಮುಖವತೋರು, ಇಲ್ಲದಿದ್ದರೆ ನಾವು ಪ್ರಣಬಿಡುತ್ತೇವೆ. ಎಂದು ದುಃಖಿಸುತ್ತಾರೆ.
ಮಳೆಯನೀರು ಪ್ರವಾಹವಾಗಿ ಬರುವಾಗ ಶಿವಲಿಂಗವು ಕೊಚ್ಚಿಹೋಗುತ್ತದೆ. ಆಗ ಬ್ಯಾಡರ ಕನ್ನಯ್ಯನು ನನ್ನಪ್ಪ ಮಾದೇವ ತೇಲಿಹೋಗುತ್ತಿದ್ದಾನೆ ಏನುಮಾಡಲಿ ಎಂದು ಯೋಚಿಸುತ್ತ ಒಂದು ಕೈಲಿ ಲಿಂಗವನ್ನು ಇನ್ನೊಂದು ಕೈಲಿ ಬಲಿಕಲ್ಲನ್ನು ತಬ್ಬಿನಿಲ್ಲುತ್ತಾನೆ ಇದನ್ನೆಲ್ಲ ನೋಡುತ್ತಿದ್ದ ಕಾರಯ್ಯಬಿಲ್ಲಯ್ಯರು ಕಣ್ಣೀರುಹಾಕುತ್ತಾ ಶಿವನೇ ನೀನು ನಮ್ಮನ್ನು ಬಿಟ್ಟು ಹೋದರೆ ಗುರುವಿಗೆ ಶಿಷ್ಯರು , ಶಿಷ್ಯರಿಗೆ ಗುರುವು ಇಲ್ಲದಂತಾಗುವುದು ನಾವು ಸತ್ತರೂ ಚಿಂತೆಯಿಲ್ಲ ನಿನ್ನನ್ನು ಬಿಡುವುದಿಲ್ಲ. ನಮ್ಮನ್ನು ಬೇಡರ ಮಕ್ಕಳು ಗೆಡ್ಡೆ ಗೆಣಸು ತಿಂದು ಇರಲಿ ಎಂದು ಬಿಡದೆ ಹಾಲು ಹಣ್ಣು, ಬೆಣ್ಣೆ-ತುಪ್ಪಕೊಟ್ಟು ತಾಯಿಯಂತೆ ಸಲಹಿದೆ. ಎಂದು ಗೋಳಾಡುತ್ತಿದ್ದಾಗ ಮಹದೇವ ಅವರನ್ನು ಮೆಚ್ಚಿ ಎರಡೂಕೈಗಳಿಂದ ತಬ್ಬಿಹರಸುತ್ತಾನೆ. ತನ್ನಕಣ್ಸನ್ನೆಯಿಂದಲೇ ಮಾಯದ ಮಳೆಯನ್ನು ನಿಲ್ಲಿಸಿ ಆ ಮಕ್ಕಳನ್ನು ಹೆಗಲಮೇಲೆ ಹೊತ್ತು ಗುಡಿಗೆ ತರುತ್ತಾನೆ. ನಂಬಿದವ ಮನದಲ್ಲೇ ಶಿವ ತುಂಬಿ ತುಳುಕುತ್ತಾನೆ ಎಂದು ಕವಿ ಹೇಳುತ್ತಾನೆ.

ಸಂದರ್ಭ ಸೂಚಿಸಿ ವಿವರಿಸಿ :
೧. ಮಾಯಾದ ಮಳೆಯ ಕಳುಗಪ್ಪ
ಡಾ|| ಪಿ.ಕೆ. ರಾಜಶೇಖರ್ ಅವರು ಸಂಗ್ರಹಿಸಿರುವ ಶಿಶುಮಕ್ಕಳಿಗೊಲಿದ ಮಾದೇವ ಎಂಬ ಜಾನಪದ ಪದ್ಯಭಾಗದಿಂದ ಈ ಮಾತನ್ನು ಆಯ್ದುಕೊಳ್ಳಲಾಗಿದೆ.
ಮಾದೇಶ್ವರರಿಗೆ ತನ್ನ ಮಕ್ಕಳಾದ ಬ್ಯಾಡರ ಕನ್ನಯ್ಯ ಮತ್ತು ಸತ್ಯವಂತೆ ಸಂಕವ್ವನಿಂದ ದತ್ತುಪಡೆದ ಕಾರಯ್ಯ ಮತ್ತು ಬಿಲ್ಲಯ್ಯರು ಎಂದಾದರೂ ತನ್ನನ್ನು ತೊರೆದು ಹೋಗುವರೇ ಎಂದು ಪರೀಕ್ಷೆಮಾಡಿನೋಡಬೇಕೆನಿಸಿದ್ದರಿಂದ ದೇವತೆಗಳ ದೊರೆಯಾದ ಇಂದ್ರನಿಗೆ ಮಾಯದ ಮಳೆಯನ್ನು ಭೂಮಿಗೆ ಕಳುಹಿಸು ಎಂದು ಹೇಳುವ ಸಂದರ್ಭದಲ್ಲಿ ಈಮಾತು ಬಂದಿದೆ.

೨. ನೀವೊಪ್ಪುದಂಗೆ ಮಾಡುತೀವಿ.
ಡಾ|| ಪಿ.ಕೆ. ರಾಜಶೇಖರ್ ಅವರು ಸಂಗ್ರಹಿಸಿರುವ ಶಿಶುಮಕ್ಕಳಿಗೊಲಿದ ಮಾದೇವ ಎಂಬ ಜಾನಪದ ಪದ್ಯಭಾಗದಿಂದ ಈ ಮಾತನ್ನು ಆಯ್ದುಕೊಳ್ಳಲಾಗಿದೆ.
ತನ್ನ ಮಕ್ಕಳನ್ನು ಪರೀಕ್ಷೆಮಾಡಲು ಮಾಯದ ಮಳೆಯನ್ನು ಕಳುಹಿಸುವಂತೆ ದೇವೇಂದ್ರನಿಗೆ ಹೇಳಿ ಜಗತ್ತನ್ನೆಲ್ಲ ಬುಗುರಿಯಂತೆ ಆಡಿಸುವ ಸುಂಟರಗಾಳಿಯನ್ನು ಕಳಿಸುವಂತೆ ವಾಯುದೇವನಿಗೆ ಹೇಳಿ ನನ್ನ ಮಾತಿಗೆ ನಿಮ್ಮ ಒಪ್ಪಿಗೆ ಇದೆಯೇ ಎಂದಾಗ  ದೇವೆಂದ್ರ ಮತ್ತು ವಾಯುದೇವರು ಈಮೇಲಿನಂತೆ ಹೇಳುತ್ತಾರೆ. (ವಾಯುದೇವರನ್ನೇ ವಾಸುದೇವ ಎಂದು ಹೇಳಲಾಗಿದೆ.)

೩. ಒನೊನ್ ಚಂಡುನ ಗಾತ್ರ ಹನಿಗಳು
ಡಾ|| ಪಿ.ಕೆ. ರಾಜಶೇಖರ್ ಅವರು ಸಂಗ್ರಹಿಸಿರುವ ಶಿಶುಮಕ್ಕಳಿಗೊಲಿದ ಮಾದೇವ ಎಂಬ ಜಾನಪದ ಪದ್ಯಭಾಗದಿಂದ ಈ ಮಾತನ್ನು ಆಯ್ದುಕೊಳ್ಳಲಾಗಿದೆ.
ಅಂದು ಸುರಿದ ಮಳೆ ಹನಿಗಳು ಒಂದೊಂದು ಚೆಂಡಿನ ಗಾತ್ರವಿದ್ದವಂತೆ , ಈ ಬಗೆಯ ದಪ್ಪದಪ್ಪದ ಹನಿಗಳು ಬೆಟ್ಟದ ಸುತ್ತೆಲ್ಲಾ ಸುರಿಯತೊಡಗಿತು. ಇದರಿಂದ ಭೂಮಿಯಾವುದು ಆಕಾಶಯಾವುದು ಎಂದು ತಿಳಿಯದಾಯಿತು. ಎಂದಿದ್ದಾರೆ.

೪. ನೀನಿಂತ ಬಂಧಾನ ಕೊಟ್ಯಪ್ಪ
 ಡಾ|| ಪಿ.ಕೆ. ರಾಜಶೇಖರ್ ಅವರು ಸಂಗ್ರಹಿಸಿರುವ ಶಿಶುಮಕ್ಕಳಿಗೊಲಿದ ಮಾದೇವ ಎಂಬ ಜಾನಪದ ಪದ್ಯಭಾಗದಿಂದ ಈ ಮಾತನ್ನು ಆಯ್ದುಕೊಳ್ಳಲಾಗಿದೆ.
ಭೀಕರವಾದ ಮಳೆಗುಡುಗು-ಸಿಡಿಲು ನಾಲ್ಕುಲೋಕವನ್ನೆಲ್ಲಾ ಅಡಿಮೇಲು ಮಾಡುವ ಹಾಗೆ ಸುರಿಯುತ್ತಿರುವಾಗ ಬೇಡರ ಕನ್ನಯ್ಯ , ಕಾರಯ್ಯ ಬಿಲ್ಲಯ್ಯರಿಗೆ ದಿಕ್ಕುಕೆಡುತ್ತದೆ. ಬಂದುಬಳಗ ಇಲ್ಲದ ತಮಗೆ ನೀವೇ ದಿಕ್ಕು ಮಾದೇಶ್ವರ, ದೇವರು ನಮಗೆ ಇಂತ ಕಷ್ಟಕೊಡಬಹುದೇ? ಎಂದು ದುಃಖಿಸುತ್ತಾರೆ.

೫, ಸ್ವತಂತ್ರವುಳ್ಳ ಬ್ಯಾಡ್ರ ಕನ್ನಯ್ಯ
ಡಾ|| ಪಿ.ಕೆ. ರಾಜಶೇಖರ್ ಅವರು ಸಂಗ್ರಹಿಸಿರುವ ಶಿಶುಮಕ್ಕಳಿಗೊಲಿದ ಮಾದೇವ ಎಂಬ ಜಾನಪದ ಪದ್ಯಭಾಗದಿಂದ ಈ ಮಾತನ್ನು ಆಯ್ದುಕೊಳ್ಳಲಾಗಿದೆ.
ಭಾರಿಮಳೆಯಿಂದಾಗಿ ಮಾದೇಶ್ವರನ ಗುಡಿ ಮುಚ್ಚಿಹೋಯ್ತು ಗಂಗೆಯ ಪ್ರವಾಹದಲ್ಲಿ ಮಾದೇಶ್ವರ ತೇಲಿಹೋದುದ ಕಂಡು ಬೇಡರ ಕನ್ನಯ್ಯ ಸುತ್ತ ಮುತ್ತ ನೋಡುತ್ತಾ ಮಾದೇಶ್ವರನನ್ನೇ ಕೊಚ್ಚಿಕೊಂಡು ಹೋದಂತೆ ತನ್ನನ್ನೂ ಎಳೆದೊಯ್ಯಬಹುದೆಂದು ಭಾವಿಸಿ ಬಲಿಯಕಂಬವನ್ನು ಬಿಗಿಯಾಗಿ ತಬ್ಬಿನಿಂತ ಪ್ರಸಂಗ ವನ್ನು ಈಮಾತಿನಲ್ಲಿ ಹೇಳಲಾಗಿದೆ.

೬. ಕಣ್ಣಲ್ಲಿ ನೀರ ಕೆಡುಗಿದರು
ಡಾ|| ಪಿ.ಕೆ. ರಾಜಶೇಖರ್ ಅವರು ಸಂಗ್ರಹಿಸಿರುವ ಶಿಶುಮಕ್ಕಳಿಗೊಲಿದ ಮಾದೇವ ಎಂಬ ಜಾನಪದ ಪದ್ಯಭಾಗದಿಂದ ಈ ಮಾತನ್ನು ಆಯ್ದುಕೊಳ್ಳಲಾಗಿದೆ.
ಮಾದೇಶ್ವರ ತೇಲಿಹೋದುದ ಕಂಡು ಬೇಡರ ಕನ್ನಯ್ಯ ಸುತ್ತ ಮುತ್ತ ನೋಡುತ್ತಾ ಮಾದೇಶ್ವರನನ್ನೇ ಕೊಚ್ಚಿಕೊಂಡು ಹೋದಂತೆ ತನ್ನನ್ನೂ ಎಳೆದೊಯ್ಯಬಹುದೆಂದು ಭಾವಿಸಿ ಬಲಿಯಕಂಬವನ್ನು ಬಿಗಿಯಾಗಿ ತಬ್ಬಿನಿಂತುದ್ದನ್ನು ಕಂಡ ಕಾರಯ್ಯ , ಬಿಲ್ಲಯ್ಯ ಕಣ್ಣಲ್ಲಿ ನೀರು ತುಂಬಿಕೊಂಡು ನಮ್ಮನ್ನು ಬಿಟ್ಟು ಗಂಗೆಯನ್ನು ಸೇರಿದೆಯಾ ಮಾದೇವಾ ಎಂದು ಗೋಳಾಡಿದರು.

೭. ಹೆತ್ತವ್ವುನಂಗೆ ಸಲುವೀದೆ
ಡಾ|| ಪಿ.ಕೆ. ರಾಜಶೇಖರ್ ಅವರು ಸಂಗ್ರಹಿಸಿರುವ ಶಿಶುಮಕ್ಕಳಿಗೊಲಿದ ಮಾದೇವ ಎಂಬ ಜಾನಪದ ಪದ್ಯಭಾಗದಿಂದ ಈ ಮಾತನ್ನು ಆಯ್ದುಕೊಳ್ಳಲಾಗಿದೆ.
ಮಾದೇಶ್ವರನು ಕೊಚ್ಚಿಕೊಂಡು ಹೋಗುತ್ತಿರುವಾಗ ಹೆತ್ತತಾಯಿಯ ಹಾಗೆ ಹಾಲು ಕುಡಿಸಿ, ಬೆಣ್ಣೆ ತಿನ್ನಿಸಿ, ಬೆಳೆಸಿದ್ದೆ. ನಿನ್ನ ನಾವೆಂದಿಗೂ ಮರೆಯಲಾರೆವು ಎಂದು ಮಾದಯ್ಯನ ಉಳಿಸಲು ನೀರಿಗೆ ಇಳಿದರು. ಮಕ್ಕಳ ಪ್ರೀತಿ ವಿಶ್ವಾಸ ಇಲ್ಲಿ ವ್ಯಕ್ತವಾಗುತ್ತದೆ. ಅಂತೆಯೇ ಮಹದೇಶ್ವರ ಕಾಡಿನ ಮಕ್ಕಳನ್ನು ಸಲಹಿದ ಬಗೆ ತಿಳಿಯುತ್ತದೆ.

೮. ಗುಡಿಗೆ ಬಂದಾರು ಮಾದೇವ
ಡಾ|| ಪಿ.ಕೆ. ರಾಜಶೇಖರ್ ಅವರು ಸಂಗ್ರಹಿಸಿರುವ ಶಿಶುಮಕ್ಕಳಿಗೊಲಿದ ಮಾದೇವ ಎಂಬ ಜಾನಪದ ಪದ್ಯಭಾಗದಿಂದ ಈ ಮಾತನ್ನು ಆಯ್ದುಕೊಳ್ಳಲಾಗಿದೆ.
ಮಕ್ಕಳಲ್ಲಿದ್ದ ಭಕ್ತಿ, ಪ್ರೀತಿಯನ್ನು ಪರೀಕ್ಷಿಸಿದ ಮಹದೇವ ಕಣ್ಣಸನ್ನೆಯಲ್ಲೇ ಮಾಯದ ಮಳೆಯನ್ನು ಹಿಂದಿರುಗಿಸಿ, ಮಕ್ಕಳನ್ನು ಹೆಗಲಲ್ಲಿ ಹೊತ್ತು ಗುಡಿಗೆ ಹಿಂದಿರುಗುತ್ತಾನೆ.

ಒಂದು ವಾಕ್ಯದಲ್ಲಿ ಉತ್ತರಿಸಿ.
೧.  ಮಾದೇವ ಎಲ್ಲಿ ಒರಗಿದ್ದಾನೆ?
ಮಹದೇವನು ಮೂಡಲಮನೆ(ಪೂರ್ವದಿಕ್ಕು)ಯಲ್ಲಿ ಯೋಗದಲ್ಲಿ ಒರಗಿದ್ದಾನೆ.

೨. ಯಾರ ಮಕ್ಕಳನ್ನು ಮಾದೇವ ದತ್ತುವಾಗಿ ಪಡೆದನು?
ಸತ್ಯವಂತೆ ಸಂಕವ್ವನ ಮಕ್ಕಳನ್ನು ದತ್ತುವಾಗಿ ಪಡೆದನು.

೩. ಶಿಶುಮಕ್ಕಳು ಹೂ ತರಲು ಎಲ್ಲಿಗೆ ಹೋಗಿದ್ದರು?
ಶಿಶುಮಕ್ಕಳು ಹೂ ತರಲು ಕಡ್ಡಿಹಳ್ಳಕ್ಕೆ  ಹೋಗಿದ್ದರು.

೪. ಮಾದೇವ ಮಕ್ಕಳ ಸತ್ಯನೋಡಲು ಏನು ಮಾಡಬೇಕೆನ್ನುತ್ತಾನೆ?
ಮಾಯದ ಮಳೆಯನ್ನು ಸುರಿಸಿ ಮಕ್ಕಳ ಸತ್ಯನೋಡಲು ಬಯಸುತ್ತಾನೆ.

೫. ಮಳೆಯನ್ನು ಕಳುಹಿಸು ಎಂದು ಯಾರನ್ನು ಕೇಳುತ್ತಾನೆ?
ಮಳೆಯನ್ನು ಕಳುಹಿಸು ಎಂದು ದೇವೇಂದ್ರನನ್ನು ಕೇಳುತ್ತಾನೆ.

೬. ವಾಯುದೇವನನ್ನು ಎಂತಹ   ಸುಂಟರಗಾಳಿ ಕಳುಹಿಸು ಎಂದು ಮಾದೇವ ಕೇಳುತ್ತಾನೆ?
ವಾಯುದೇವನನ್ನು ಜಗತ್ತನ್ನೆಲ್ಲಾ ಬುಗುರಿಯಂತೆ  ಗರಗರನೆ ತಿರುಗಿಸುವ   ಸುಂಟರಗಾಳಿ ಕಳುಹಿಸು ಎಂದು ಮಾದೇವ ಕೇಳುತ್ತಾನೆ.


೭. ಕಾರೆಂಬೋ ಕತ್ತಲಲ್ಲಿ ಎಂತಹ ಮಳೆ ಬಂತು?
ಒಂದೊಂದು ಹನಿ ಚೆಂಡಿನ ಗಾತ್ರದ, ಜೋರಾದ ಮಳೆ ಬಂತು.

೮.  ಗಂಗೆ ಸುರಿಯುವ ರಭಸಕ್ಕೆ ಏನೇನು ಒಂದಾದವು?
ಗಂಗೆ ಸುರಿಯುವ ರಭಸಕ್ಕೆ ಆಗಸ ಭೂಮಿ ಒಂದಾಯಿತು.

೯. ಗಂಗಮ್ಮ ಏನನ್ನು ಹೊತ್ತುಕೊಂಡು ಹೋದಳು?
ಗಂಗಮ್ಮ ಮದ್ದಾನೆ ಹಿಂಡನ್ನು  ಹೊತ್ತುಕೊಂಡು ಹೋದಳು

೧೦. ನೀರಿನ ಸುಳಿಗೆ ಸಿಲುಕಿದ ಮಾದೇವ ಹೇಗೆ ತಿರುಗಿದನು?
ನೀರಿನ ಸುಳಿಗೆ ಸಿಲುಕಿದ ಮಾದೇವ ಗರಗರನೆ ತಿರುಗಿದನು.

೧೧. ಮಾದೇವ ಯಾವುದಕ್ಕೆ ಒಲಿದನು?
ಮಾದೇವ ಪ್ರೇಮಕ್ಕೆ ಒಲಿದನು.

೧೨. ನಂಬಿದವರ ಮನದಲ್ಲಿ ಮಾದೇವ ಹೇಗಿರುತ್ತಾನೆ?
ನಂಬಿದವರ ಮನದಲ್ಲಿ ಮಾದೇವ ತುಂಬಿ ತುಳುಕಾಡುತ್ತಾನೆ.
ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಮಾದೇವನ ಶಿಶುಮಕ್ಕಳ ಹೆಸರೇನು?
ಸಂಕಮ್ಮನ ಮಕ್ಕಳಾದ  ಕಾರಯ್ಯ, ಮತ್ತು ಬಿಲ್ಲಯ್ಯರು ಮಾದೇವನ ಶಿಶುಮಕ್ಕಳು.

೨. ಸಿಡಿಲು ಗುಡುಗುಗಳನ್ನು ಕಳುಹಿಸು ಎಂದು ಮಾದೇವ ಯಾರನ್ನು ಕೇಳುತ್ತಾನೆ?
ಗುಡುಗುಗಳನ್ನು ಕಳುಹಿಸು ಎಂದು ಮಾದೇವನು ಗುಡುಗಾಜಮ್ಮನಿಗೂ, ಅವಳ ಮಗ ಬೊಮ್ಮರಾಯಪ್ಪನಿಗೆ ಭಯಂಕರವಾದ ಸಿಡಿಲುಗಳನ್ನು ಕಳುಹಿಸು ಎಂದು ಕೇಳುತ್ತಾನೆ.

೩. ಮಳೆಯನ್ನು ನೋಡಿ ಕನ್ನಯ್ಯ ತನ್ನೊಳಗೆ ಏನೆಂದುಕೊಳ್ಳುತ್ತಾನೆ?
ಎಂದೂ ಬಾರದ ಮಾರಿಮಳೆ ಇಂದು ಬಂದುದರ ಕಾರಣ ತಿಳಿಯದು, ಈ ಗಂಗಾ ಪ್ರವಾಹ ನಮ್ಮನ್ನು ಹೊತ್ತುಕೊಂಡು ಹೋಗುತ್ತದೆ ಎಂದು ಕನ್ನಯ್ಯ ತನ್ನೊಳಗೇ ಹೇಳಿಕೊಳ್ಳುತ್ತಾನೆ.
೪. ಶಿಶುಮಕ್ಕಳು   ಏಕೆ ಬಾಯಿ ಬಾಯಿ ಬಾಡಿದುಕೊಳ್ಳುತ್ತಾರೆ?
ಮಾಯದಂತ ಮಳೆಬಂದು ಜೋರಾಗಿಹರಿದ ಗಂಗೆ ಮಾದೇಶ್ವರನ ಗುಡಿಯನ್ನು ಮುಳುಗಿಸಿದ್ದನ್ನು ಕಂಡು ಶಿಶುಮಕ್ಕಳು ಬಾಯಿ ಬಾಯಿ ಬಡಿದುಕೊಂಡರು.
೫. ಬಲಿಯ ಕಲ್ಲನ್ನು ಕನ್ನಯ್ಯ ಬಲವಾಗಿ ಹಿಡಿದುಕೊಳ್ಳುವುದು ಏಕೆ?
ಹುಚ್ಚು ಪ್ರವಾಹವು ಬಂದು ಮಹದೇವನ ಗುಡಿಯನ್ನು ಮುಚ್ಚಿತು. ಇಂತಹ ಮಾದೇವನನ್ನೇ ಕೊಚ್ಚಿಕೊಂಡುಹೋಗುವ ಗಂಗೆ ನನ್ನನ್ನು ಬಿಡುವುದಿಲ್ಲ. ಎಂದುಕೊಂಡು ಬಲಿಕಂಬವನ್ನು ತಬ್ಬುತ್ತಾನೆ.
೬. ಶಿಶುಮಕ್ಕಳು ನಾವು ಸತ್ತರೂ ಚಿಂತಿಲ್ಲ ಎನ್ನಲು ಕಾರಣವೇನು?
ಮಾದೇವ ಗಂಗೆಯ ಪ್ರವಾಹದ ಸುಳಿಗೆ ಸಿಲುಕಿ ಗರಗರನೆ ತಿರುಗುತ್ತಿರುವುದನ್ನು ಕಂಡ ಶಿಶುಮಕ್ಕಳು ತಮ್ಮನ್ನು ಹೆತ್ತ ತಾಯಿತಂತೆ ಸಲಹಿದ ಮಾದೇವನ ಸ್ಥಿತಿಯನ್ನು ಕಂಡು ಕಣ್ಣೀರು ಹಾಕುತ್ತಾ ನಮ್ಮನ್ನು ಬಿಟ್ಟು ಗಂಗೆಯಜೊತೆ ಹೋದೆಯಾ ಮಾದೇವ ಶಿಷ್ಯರ ಬಿಟ್ಟುಹೋದ ಗುರುವಿನಂತೆ ನಾವು ಸತ್ತರೂ ನಿನ್ನನ್ನು ಬಿಡುವುದಿಲ್ಲ ಎಂದು ನೀರಿಗೆ ಧುಮುಕಿದರು.
. ಮಾದೇವ ತನ್ನ ಶಿಶುಮಕ್ಕಳಿಗೆ ಏನೇನು ನೀಡಿ ಸಲಹಿದನು?
ಕಾಡಿನ ಮಕ್ಕಳು ಗೆಡ್ಡೆಗೆಣಸು ತಿಂದು ಬದುಕುವುದು ಸಹಜ. ಆದರೆ ಗೆಡ್ಡೆಗೆಣಸುಗಳನ್ನು ನೀಡದೆ ಹಾಲು ತುಪ್ಪ ಬೆಣ್ಣೆಗಳನ್ನು ನೀಡುತ್ತ ಮಾದೇವ ಹೆತ್ತ ತಾಯಿಯಂತೆ ಸಲಹಿದ .
೮. ಶಿಶುಮಕ್ಕಳ ಪ್ರೇಮಕ್ಕೆ ಮಾದಪ್ಪ ಹೇಗೆ ಬಂದನು?
ತನಗಾಗಿ ಮಕ್ಕಳು ಪ್ರಾಣವನ್ನು ಲೆಕ್ಕಿಸದೆ ನೀರಿಗೆ ಧುಮುಕಿದ್ದು ಮಾದೇವನ ಮನಸ್ಸು ಕರಗಿತು. ಮಕ್ಕಳ ಪ್ರೇಮಕ್ಕೆ ಸೋತ ಮಾದೇವ ತನ್ನ ಎಡಬಲದಲ್ಲಿ ಮಕ್ಕಳನ್ನು ತಬ್ಬಿ ಅವರನ್ನು ಹೆಗಲಲ್ಲಿ ಹೊತ್ತು ಗುಡಿಗೆ ಹಿಂದಿರುಗಿದ.

ಐದಾರು ವಾಕ್ಯಗಳಲ್ಲಿ ಉತ್ತರಿಸಿ.
೧. ಮಾದಪ್ಪ ತನ್ನ ಶಿಶುಮಕ್ಕಳನ್ನು ಪರೀಕ್ಷಿಸಲು ಕಾರಣಗಳೇನು?
ಮಾದೇವ/ಮಾದಪ್ಪ ಮೂಡಲಮನೆಯಲ್ಲಿ ಯೋಗದಲ್ಲಿಮಲಗಿದ್ದವನಿಗೆ ತನ್ನ ಶಿಶುಮಕ್ಕಳನ್ನು ಪರೀಕ್ಷಿಸಬೇಕೆಂಬ ಮನಸ್ಸಾಯ್ತು. ಬೇಡರಕಣ್ಣಪ್ಪನಿಂದ ಕಣ್ಣನ್ನು ಪಡೆದಿದ್ದೇನೆ. ಹಾಗೆ ಸತ್ಯವಂತೆ ಸಂಕವ್ವನಿಂದ ಮಕ್ಕಳನ್ನು ದತ್ತುವಾಗಿಪಡೆದಿದ್ದೇನೆ. ಈ ಮಕ್ಕಳು ಏನೇ ಆದರೂ ನನ್ನ ಬಿಟ್ಟುಹೋಗುವುದಿಲ್ಲ. ಕಡ್ಡಿಹಳ್ಳಕ್ಕೆ ಹೂವನ್ನು ತರಲು ಹೋದ ಕಾರಯ್ಯ,  ಬೇಡರ ಕನ್ನಯ್ಯ, ಮತ್ತು ಬಿಲ್ಲಯ್ಯರ ಸತ್ಯವನ್ನು ಪರೀಕ್ಷಿಸಬೇಕು.  ಅದಕ್ಕಾಗಿ ಮಾಯದ ಮಳೆಯನ್ನು ಉಂಟುಮಾಡಬೇಕು ಎಂದು ಆಲೋಚಿಸಿದನು.

೨. ಮಾದೇವ ತನ್ನ ಶಿಶುಮಕ್ಕಳನ್ನು ಪರೀಕ್ಷಿಸಲು ಯಾರು ಯಾರ ಸಹಕಾರವನ್ನು ಹೇಗೆ ಪಡೆದನು?
ಮಾಯದಂತ ಮಳೆಯನ್ನು ಬರಿಸಿ ತನ್ನ ಶಿಶುಮಕ್ಕಳ ಸತ್ಯವನ್ನು ಪರೀಕ್ಷಿಸುವ ಉದ್ದೇಶದಿಂದ ಮಾದೇವನು ದೇವೇಂದ್ರನ ಬಳಿ ಬಂದು ಹಳ್ಳ ಕೊಳ್ಳ ತುಂಬಿ ಹರಿಯುವಂತ ಮಾಯದಂತ ಮಳೆ ಕಳುಹಿಸು ಎಂದು ಕೇಳುತ್ತಾರೆ. ಜಗತ್ತನ್ನೆಲ್ಲಾ ಬುಗುರಿಯಂತೆ ತಿರುಗಿಸುವ ಸುಂಟರಗಾಳಿ/ಬಿರುಗಾಳಿಯನ್ನು ಕಳುಹಿಸುವಂತೆ ವಾಯುದೇವರನ್ನು ಕೇಳುತ್ತಾರೆ.  ಗುಡುಗಾಜಮ್ಮನನ್ನು ಕರೆದು ಗುಡುಗುವಂತೆ ಹೇಳಿ, ಅವಳ ಮಗನಾದ ಬೊಮ್ಮರಾಯನನ್ನು ಕರೆದು ಭಯಂಕರವಾದ ಸಿಡಿಲನ್ನು ಕೊಡಬೇಕು ಎಂದು ಹೇಳಿದ. ಹೀಗೆ  ದೇವೇಂದ್ರ, ವಾಯುದೇವ, ಗುಡುಗಾಜಮ್ಮ, ಮತ್ತು ಬೊಮ್ಮರಾಯನ ಸಹಕಾರ ಪಡೆದನು.

೩. ಮಳೆ ಉಂಟುಮಾಡಿದ ಪರಿಣಾಮಗಳನ್ನು ವಿವರಿಸಿ.
ಮಳೆಯ ಮೋಡ ಮುಸುಗಿ ಕತ್ತಲಾಯಿತು. ಅಕಾಲದಲ್ಲಿ ಬಂದ ಮಳೆಯ ಒಂದೊಂದು ಹನಿಯು ಚೆಂಡಿನಗಾತ್ರವಿತ್ತು.  ಗಂಗೆ ಸುರಿಯುವ ರಭಸಕ್ಕೆ ಆಕಾಶ ಭೂಮಿ ಒಂದಾದಂತೆ ತೋರುತ್ತಿತ್ತು.  ಕಾಡಿನ ಪ್ರಾಣಿಗಳೆಲ್ಲ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವು. ಮದ್ದಾನೆಗಳ ಹಿಂಡನ್ನೇ ಗಂಗೆ ಕೊಚ್ಚಿಕೊಂಡು ಹೋದಳು. ಗುಡುಗು ಸಿಡಿಲ ರಭಸಕ್ಕೆ ನಾಲ್ಕು ಲೋಕಗಳೇ ನಡುಗಿದವು. ಗಂಗೆಯ ಪ್ರವಾಹವು ಮಾದಪ್ಪನ ಗುಡಿಯನ್ನು ಮುಚ್ಚಿ ಮಾದೇವನನ್ನು ತನ್ನ ಸುಳಿಯಲ್ಲಿ ಗರಗರ ಸುತ್ತುವಂತೆ ಮಾಡಿತು. ಮಾದೇವನನ್ನು ಉಳಿಸಲು ಶಿಶುಮಕ್ಕಳು ತಾವೂ ನೀರಿಗೆ ಧುಮುಕಿದರು.
೪. ಮಳೆಯಲ್ಲಿ ಸಿಲುಕಿದ ಮಾದೇವನನ್ನು ಶಿಷ್ಯರು ಹೇಗೆ ರಕ್ಷಿಸಿದನು?
ಹುಚ್ಚುಗಂಗೆಯ ಪ್ರವಾಹಕ್ಕೆ ಸಿಲುಕಿ ಮಾದಪ್ಪನ ಗುಡಿ ಮುಚ್ಚಿಹೋಯಿತು. ಮಾದೇವ ನೀರಿನ ಸುಳಿಯಲ್ಲಿ ಗರಗರ ತಿರುಗುತ್ತಿದ್ದುದ್ದನ್ನು ಕಂಡ ಶಿಶುಮಕ್ಕಳು ಕಣ್ಣೀರು ಹಾಕಿದರು.  ನಮ್ಮಂತ ದಡ್ಡರಿಗೆ ಒಲಿದ  ನೀನು ಮುಖತೋರದಿದ್ದರೆ ನಾ ಪ್ರಾಣ ಬಿಡುತೀನಿ ಎಂದ ಕನ್ನಯ್ಯ ಬಲಿಕಂಬ ತಬ್ಬಿ ಹಿಡಿದಿದ್ದ.  ನಮ್ಮನ್ನು ಬಿಟ್ಟು ನೀನು ಗಂಗೆಯ ಜೊತೆ ಹೋದೆಯಾ. ಶಿಷ್ಯರನ್ನು ಬಿಟ್ಟ ಗುರುವಿನಂತೆ , ನಾವು ಸತ್ತರೂ ಚಿಂತೆಯಲ್ಲಿ ನಿನ್ನನ್ನು ಬಿಡುವುದಿಲ್ಲ. ಈ ಜಗವನ್ನು ಆಳುವ ಗುರುವನ್ನು ನಾವು ಇವತ್ತು ಹಿಡಿಯೋಣ. ಹಾಲು ಬೆಣ್ಣೆ ತುಪ್ಪವನ್ನು ನೀಡಿ ಸಲಹಿದವನನ್ನು ನಾವೆಂದಿಗೂ ಮರೆಯುವುದಿಲ್ಲ. ಎಂದು ನೀರಿಗೆ ಧುಮುಕಿ ಹಿಡಿದರು.

೫. ಮಾದೇವ ಶಿಷ್ಯರನ್ನು ಹೇಗೆ ಸಲಹಿದನು ? ವಿಶ್ಲೇಷಿಸಿ.
ಬ್ಯಾಡರ ಕನ್ನಯ್ಯನನ್ನು , ಸತ್ಯವಂತೆ ಸಂಕವ್ವನ ಮಕ್ಕಳಾದ ಕಾರಯ್ಯ , ಬಿಲ್ಲಯರನ್ನು ತನ್ನ ಶಿಶುಮಕ್ಕಳಂತೆ ಸಾಕಿಸಲಹಿದ ಮಾದೇವ ಗೆಡ್ಡೆಗೆಣಸಿನ ಬದಲಿಗೆ ಹಾಲು ಬೆಣ್ಣೆ, ತುಪ್ಪಗಳನ್ನು ನೀಡಿ ಪೊರೆದನು. ಎಂತಹ ಸಂದರ್ಭದಲ್ಲೂ ಅವರು ಮಾದೇವನನ್ನು ಬಿಟ್ಟು ಹೋಗದಂತೆ ನಿಕಟ ಬಾಂಧವ್ಯ ಹೊಂದಿದ್ದರು. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ತನ್ನನ್ನು ಕಾಪಾಡುವ ನೆಪದಲ್ಲಿ ಗಂಗಾಪ್ರವಾಹಕ್ಕೆ ಧುಮುಕಿದ ಮಕ್ಕಳನ್ನು ಪ್ರೀತಿಯಿಂದ ತಬ್ಬಿಹಿಡಿದು ಹೆಗಲಮೇಲೆ ಹೊತ್ತು ಗುಡಿಗೆ ಹಿಂದಿರುಗಿದ ಮಾದೇವ ತಾಯಿಮಗುವಿನ ಪ್ರೀತಿ ಬಾಂಧವ್ಯಕ್ಕಿಂತ ಹೆಚ್ಚಿನದನ್ನೆ ತೋರಿದ್ದಾನೆ.

***ಓಂ***

10 comments:

  1. ಕನ್ನಡಕ್ಕಾಗಿ ಸೇವೆ ಸಲ್ಲಿಸುತ್ತಿರುವುದಕ್ಕಾಗಿ ಧನ್ಯವಾದಗಳು

    ReplyDelete
  2. Replies
    1. ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ

      Delete
  3. ಧನ್ಯವಾದಗಳು ಸರ್

    ReplyDelete
  4. Pls ಶ್ರವಣ ದೊರೆ ಸಾಲು ಸಾರಾಂಶ ಹಾಕಿ

    ReplyDelete