ಪದ್ಯ ಭಾಗ 11
ಮತ್ತೆ ಸೂರ್ಯ ಬರುತ್ತಾನೆ
ಲೋಕೇಶ ಅಗಸನಕಟ್ಟೆ : ದಾವಣಗೆರೆ ಜಿಲ್ಲೆ
ಅಗಸನಕಟ್ಟೆಗ್ರಾಮದಲ್ಲಿ ಜನನ. ಕುವೆಂಪು ವಿವಿ. ಚಿತ್ರದುರ್ಗ ಸ್ನಾತಕೋತ್ತರ ಕೇಂದ್ರದ
ಕನ್ನಡವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಡೆದು ಹೋದ ದುರ್ಘಟನೆಗಳಿಗೆ
ನೊಂದುಕೊಳ್ಳದೆ ಧೈರ್ಯವಾಗಿರಬೇಕು ಬದುಕಿನಲ್ಲಿ ಭರವಸೆ ತಾಳಬೇಕು. ಭರವಸೆಯಿಂದ ಬಾಳುವುದೇ ಜೀವನ.
ಮತ್ತೆ ಸೂರ್ಯ ಬರುತ್ತಾನೆ ಹೊಸ ಜೀವನವನ್ನು ತರುತ್ತಾನೆ. ಎಂಬ ಆಶಾಭಾವನೆ ಇಲ್ಲಿ
ವ್ಯಕ್ತವಾಗುತ್ತದೆ.
ಸಾರಾಂಶ : ಅತಿ ಆಸೆಗೆ ಒಳಗಾದ ಮಾನವ ತನ್ನ ಬದುಕನ್ನು ನರಕವನ್ನಾಗಿಸಿಕೊಂಡಿದ್ದಾನೆ.
ದೇವರು ,
ಧರ್ಮ,
ಮತಾಚರಣೆ,
ಮತವೈಭವೀಕರಣಗಳಿಂದಾಗಿ
ದಿಕ್ಕುತಪ್ಪಿದ್ದಾನೆ , ಅರಾಜಕತೆ, ಅಸಹಾಯಕತೆ, ದಾರುಣತೆಯಿಂದ ಮಾನವ ಹತಾಶನಾಗಿರುವಾಗ ಕನಕದಾಸರು ಹೇಳಿದಂತೆ ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಂಬಂತೆ ಮತ್ತೆ ನಿಮ್ಮ ಬಾಳಿನಲ್ಲಿ ಒಳ್ಳೆಯ ದಿನಗಳು ಬರುತ್ತವೆ ಹೆದರದಿರಿ ಎಂದು
ಲೋಕೇಶ ಅಗಸನಕಟ್ಟೆ ತಮ್ಮ ಕವನದಲ್ಲಿ ಭರವಸೆ ನೀಡಿದ್ದಾರೆ.
ಸಸ್ಯಶ್ಯಾಮಲೆಯಾದ ಮಲೆನಾಡಿನ ಕಾಡುಗಳ ಶ್ರೀಗಂಧಮರಗಳು ಯಜ್ಞಯಾಗಾದಿಗಳಿಗೆ ಬೂದಿಯಾಗುತ್ತಿವೆ , ಕಳ್ಳಸಾಗಣೆದಾರರ ಬಂದೂಕಿನ ನಳಿಗೆಗೆ ಅರಣ್ಯದ ಜೀವಿಗಳು ನರಳುತ್ತಿವೆ,
ಅವುಗಳನರಳಿಕೆ
ಕಣಿವೆಗಳಲ್ಲಿ ಪ್ರತಿಧ್ವನಿಗೊಳ್ಳುತ್ತಿವೆ.
ಕಾಡಿಗೆ ,
ಗಂಧದ ಮರಗಳಿಗೆ
ಕವಿಯು ಚಿಂತಿಸದಿರಿ ನಿಮ್ಮ ಬಾಳಿನಲ್ಲಿಯೂ ಮತ್ತೆ ಬೆಳಕು ಬಂದೇಬರುತ್ತದೆ ಎಂದಿದ್ದಾರೆ.
ಸ್ವಾತಂತ್ರ್ಯಹೋರಾಟಕ್ಕಾಗಿ ಶ್ರಮಿಸಿದ ಲಕ್ಷಾಂತರ ಯೋಧರು ಬ್ರಿಟೀಷರ ಸೆರೆಯಾಳಾಗಿ ಅಂಡಮಾನಿನ
ಜೈಲುಗಳಲ್ಲಿ ಕರಿನೀರಿನ ಶಿಕ್ಷೆಯನ್ನು ಅನುಭವಿಸಿದರು. ಅಲ್ಲಿ ಅನುಭವಿಸಿದ ಹಿಂಸೆಯನ್ನು ಇಲ್ಲಿ ನೆನಪು
ಮಾಡಿಕೊಳ್ಳಲಾಗಿದೆ. ಎಣ್ಣೆಯ ಗಾಣದ ನೊಗಕ್ಕೆ ಹೆಗಲುಕೊಟ್ಟು
ದಿನಕ್ಕೆ 30ಪೌಂಡು ಎಣ್ಣೆತೆಗೆದರೇ ಊಟ. ಅಂದಿನ ಶ್ರಮ ವ್ಯರ್ಥವಾಯಿತೆಂದು ಇಂದು ಕೆಲವರಿಗಂತೂ ಅನ್ನಿಸಿದೆ ದೇಶದ
ಆಡಳಿತ ದಿಕ್ಕುತಪ್ಪಿದ ದೋಣಿಯಂತಾಗಿದೆ,. ಸ್ವಾರ್ಥ, ದ್ವೇಷ, ಭ್ರಷ್ಟಾಚಾರ, ಲಂಚಗುಳಿತನಗಳಿಂದ ತುಂಬಿದ ಅಧಿಕಾರಿವರ್ಗ,
ಆಡಳಿತವರ್ಗಗಳನ್ನು
ಕಂಡು ರೋಸಿಹೋದ ದೇಶಭಕ್ತರಿಗೆ ಚಿಂತಿಸದಿರಿ ನಿಮ್ಮ ಶ್ರಮ ವ್ಯರ್ಥವಾಗಿಲ್ಲ,
ದೇಶವನ್ನು
ಮುನ್ನಡೆಸಲು ಉತ್ತಮ ವ್ಯಕ್ತಿಗಳು ಬಂದೇಬರುತ್ತಾರೆ ಎಂಬ ಬರವಸೆಯ ಮಾತುಗಳನ್ನು ಹೇಳುತ್ತಿದ್ದಾರೆ.
ಜನರು ದೇವರು, ಧರ್ಮ , ಮತಾಚರಣೆ, ಮತಾಂಧತೆ, ಮತಾಂತರ ಮೊದಲಾದ ಅಂಧವಿಶ್ವಾಸಗಳನ್ನು
ಮೈಗೂಡಿಸಿಕೊಂಡು ದಿಕ್ಕು ತಪ್ಪುತ್ತಿದ್ದಾರೆ. ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ
ನಡೆದುಕೊಳ್ಳುವುದನ್ನು ಖಂಡಿಸುತ್ತಾ ಗಂಟೆ ಜಾಗಟೆಗಳ ಸದ್ದಿನಲ್ಲಿ ಕರಿಹೋಗಿರುವ ಜನರೇ ಹೊರಬನ್ನಿ
ನಿಮ್ಮ ಬಾಳಲ್ಲೂ ಸೂರ‍್ಯ ಬರುತ್ತಾನೆ. ಎಂದಿದ್ದಾರೆ.
ಜನರ ಮುಗ್ಧತೆಯನ್ನು ತಮ್ಮ ವೋಟ್ ಬ್ಯಾಂಕ್ ರಾಜಕೀಯ ಮಾಡಿಕೊಂಡ ರಾಜಕಾರಣಿಗಳು ನಾನಾವಿಧವಾದ
ಆಮಿಷಗಳನ್ನು ತೋರಿಸುತ್ತಾ ಜಾತಿರಾಜಕಾರಣದಲ್ಲಿ ತೊಡಗಿ, ಭೂಮಂಡಲದ ಸಸ್ಯಸಂಪತ್ತಿಗೇ ಪಾರ್ಥೇನಿಯಂನಂತೆ
ವಿಷಕಾರಿಯಾಗಿ ನಾಡಿನ ಭವಿಷ್ಯವನ್ನೇ ಅಂಧಕಾರ ಕೂಪಕ್ಕೆ ತಳ್ಳುತ್ತಿದ್ದಾರೆ.
ಇದಕ್ಕೂ ಕೊನೆಗಾಲ
ಬರಲಿದೆ ಎಂದಿದ್ದಾರೆ.
ಇಂದು ನಮ್ಮ ದೇಶಾದ್ಯಂತ
ಎಲ್ಲೆಡೆ ಎಳೆಮಕ್ಕಳಿಂದ ವೃದ್ಧರ ವರೆಗೆ ಎಲ್ಲರೂ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ.
ಎಳೆಯ
ಕಂದಮ್ಮಗಳನ್ನೋ ಉದ್ಯೋಗಿ ಮಹಿಳೆಯರನ್ನೋ, ಮನೆಯಲ್ಲಿರುವ ಒಂಟಿ ಮಹಿಳೆಯರನ್ನೋ ಅತ್ಯಾಚಾರಿಗಳು ತಮ್ಮ
ಕ್ರೂರಕೃತ್ಯಕ್ಕೆ ಬಲಿಕೊಡುತ್ತಿದ್ದಾರೆ ಹೀಗೆ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕವಿಯು “ಕಾರ್ನಿಯಾ ಕಬಳಿಸ ಬಂದ ನಖಗಳೇ,
ಕರುಳಬಳ್ಳಿಗೆ
ತೊಡರಿದ ಕ್ಯಾನ್ಸರ್” ಮಾತುಗಳಲ್ಲಿ ಹೇಳುತ್ತಾ ಹೃದಯದಲ್ಲಿ ಇದರ ಬಗ್ಗೆ ಎದ್ದಿರುವ ಭಯವನ್ನು ಬಿಡಿ ಇದನ್ನೆಲ್ಲ
ಕೊನೆಗಾಣಿಸುವ ಸೂರ‍್ಯ ಮತ್ತೆ ಬರುತ್ತಾನೆ ಎಂದಿದ್ದಾರೆ.
ಸಂದರ್ಭ ಸೂಚಿಸಿ
ವಿವರಿಸಿ :
೧. ಚಿತಾಭಸ್ಮವಾದ ಶ್ರೀಗಂಧ ತರುಗಳೇ
ಈ ವಾಕ್ಯವನ್ನು ಡಾ||ಲೋಕೇಶ ಅಗಸನಕಟ್ಟೆ ಯವರ ಮತ್ತೆಸೂರ್ಯಬರುತ್ತಾನೆ ಎಂಬ ಕವಿತೆಯಿಂದ
ಆರಿಸಿಕೊಳ್ಳಲಾಗಿದೆ. ಪ್ರಕೃತಿಯ ಮೇಲೆ ಮಾನವನ ದೌರ್ಜನ್ಯ ಅನಾಚಾರಗಳಿಂದಾಗಿ ಸಸ್ಯಸಂಪತ್ತೆಲ್ಲ
ನಾಶವಾಗಿ ಅನಾಥವಾದ ಅವುಗಳ ಕಾಂಡಗಳು ಮಾತ್ರ ಉಳಿದಿವೆ. ಶ್ರೀಗಂಧದ ತುಂಡುಗಳು ಯಜ್ಞಯಾಗಗಳ
ಬೆಂಕಿಯಲ್ಲಿ ಬೆಂದು ಭಸ್ಮವಾಗಿವೆ. ಚಿಂತಿಸಬೇಕಿಲ್ಲ ಮತ್ತೆ ಸೂರ್ಯಬರುತ್ತಾನೆ. ಹೊಸ ಜೀವನ
ತರುತ್ತಾನೆ ಎಂಬ ಆಶಾ ಭಾವ ಇಲ್ಲಿದೆ.
೨. ದಿಕ್ಕು ತಪ್ಪಿದ ಹಡಗು ಹಾಯಿಯೇ
ಈ ವಾಕ್ಯವನ್ನು ಡಾ||ಲೋಕೇಶ ಅಗಸನಕಟ್ಟೆ ಯವರ ಮತ್ತೆಸೂರ್ಯಬರುತ್ತಾನೆ ಎಂಬ ಕವಿತೆಯಿಂದ
ಆರಿಸಿಕೊಳ್ಳಲಾಗಿದೆ.
ವಿಶಾಲ ಸಾಗರದ ನೀರೆಲ್ಲ ವಿಷಯುಕ್ತವಾಗಿದ್ದು. ಇಂತಹ ಸಾಗರದಲ್ಲಿ ದಿಕ್ಕುತಪ್ಪಿದ ಹಡಗಿನಂತೆ
ಅಲೆಯುತ್ತಿರುವವರೇ , ಸದಾ ಗಾಣದೆತ್ತಿನಂತೆ ದುಡಿಯುತ್ತಿರುವವರೇ ಚಿಂತೆ ಮಾಡುವ ಅಗತ್ಯವಿಲ್ಲ
ಮತ್ತೆ ಸೂರ್ಯಬರುತ್ತಾನೆ ಎಂದಿದ್ದಾರೆ.
೩. ಗಂಟೇ ಜಾಗಟೆಗಳ ಸದ್ದಿನಲಿ ಕರಗಿದ ಸನ್ನಿಪಾತ ಸಮೂಹವೇ
ಈ ವಾಕ್ಯವನ್ನು ಡಾ||ಲೋಕೇಶ ಅಗಸನಕಟ್ಟೆ ಯವರ ಮತ್ತೆಸೂರ್ಯಬರುತ್ತಾನೆ ಎಂಬ ಕವಿತೆಯಿಂದ
ಆರಿಸಿಕೊಳ್ಳಲಾಗಿದೆ.
ಶೋಷಣೆಗೆ ಸಿಲುಕಿದ ಅಮಾಯಕರ ಬಗ್ಗೆ ಹೇಳುತ್ತಾ ಅಧಿಕಾರಿಗಳ ಲಾಠಿ, ಬೂಟುಗಳ ಏಟಿಗೆ ನರಳುವವರ
ಬಗ್ಗೆ ಕನಿಕರ ತೋರುತ್ತಾ ಕಷ್ಟದಿಂದ ಪಾರಾಗಲು
ಪೂಜೆ, ಪುನಸ್ಕಾರಗಳ, ಮಂತ್ರ - ತಂತ್ರಗಳ ಮೊರೆಹೋಗಿರುವ ಜನರ ಕುರಿತು ಜನ ಸಮೂಹಸನ್ನಿಗೆ ಏಕೆ ಒಳಗಾಗುತ್ತಾರೆ? ಜಪ ತಪಗಳಲ್ಲಿ ಪೂಜೆ ಹರಕೆಗಳಲ್ಲಿ ಏಕೆ ಮುಳುಗುತ್ತಾರೆ?
ಇಂತವರ ಬಾಳಿನಲ್ಲಿಯೂ ಬದಲಾವಣೆಯ ಸೂರ್ಯ ಬರುತ್ತಾನೆ. ಎಂದಿದ್ದಾರೆ.
೪. ಕರುಳಬಳ್ಳಿಗೆ ತೊಡರಿದ ಕ್ಯಾನ್ಸರ್ ಹುಳವೇ
ಈ ವಾಕ್ಯವನ್ನು ಡಾ||ಲೋಕೇಶ ಅಗಸನಕಟ್ಟೆಯವರ ಮತ್ತೆ ಸೂರ್ಯಬರುತ್ತಾನೆ ಎಂಬ ಕವಿತೆಯಿಂದ
ಆರಿಸಿಕೊಳ್ಳಲಾಗಿದೆ. ಪ್ರಕೃತಿ ಮತ್ತು ಮಾನವರ ನಡುವೆ ತಾಯಿ ಮಗನ ಸಂಬಂಧವಿದೆ. ಇಂತಹ
ಕರುಳುಬಳ್ಳಿಗಳನ್ನೇ ನಾಶಮಾಡುವ ಕ್ಯಾನ್ಸರ್ ರೀತಿಯಲ್ಲಿ ದುಷ್ಟಶಕ್ತಿಗಳು ಮೆರೆಯುತ್ತಿವೆ.
ಮಾನವೀಯಸಂಬಂಧಗಳು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಈಮಾತನ್ನು ಹೇಳುತ್ತಾರೆ. ಚಿಂತೆ ಮಾಡುವ
ಅಗತ್ಯವಿಲ್ಲ ಮತ್ತೆ ಸೂರ್ಯಬರುತ್ತಾನೆ ಎಂದಿದ್ದಾರೆ.
೫. ಕಾಡು ಕಣಿವೆ ಬೆಟ್ಟಗಳು ಮಾರ್ದನಿಸಲಿ
ಈ ವಾಕ್ಯವನ್ನು ಡಾ||ಲೋಕೇಶ ಅಗಸನಕಟ್ಟೆ ಯವರ ಮತ್ತೆಸೂರ್ಯಬರುತ್ತಾನೆ ಎಂಬ ಕವಿತೆಯಿಂದ
ಆರಿಸಿಕೊಳ್ಳಲಾಗಿದೆ. ಬದಲಾವಣೆಯ ಸೂರ್ಯಬರುವುದನ್ನು ಕೋಟಿಕೋಟಿ ಕಂಠಗಳ ಮೂಲಕ ಹಾಡ ಬೇಕೆಂದು
ಬಯಸುವ ಕವಿ ಆ ಹಾಡು ಗಿರಿ ಗಹ್ವರಗಳಲ್ಲಿ ಬೆಟ್ಟ
ಕಣಿವೆಗಳಲ್ಲಿ ಮಾರ್ದನಿಸುತ್ತಿರಲಿ ಜೀವನ ಪ್ರೀತಿ
ಭರವಸೆ ತುಂಬುತ್ತಿರಲಿ ಎಂದಿದ್ದಾರೆ.
ಒಂದು ವಾಕ್ಯದಲ್ಲಿ
ಉತ್ತರಿಸಿ.
೧. ಮಲೆಯ ಮಾಲೆ
ಯಾವುದು?
ಭೂಮಿಯನ್ನೇ ಸಸ್ಯಶಾಮಲೆ ಎಂದಿದ್ದಾರೆ. ಭೂಮಿಯ
ಮೇಲ್ಭಾಗವೇ ಮಲೆಯ ಮಾಲೆಯಾಗಿದೆ.
೨. ಶ್ರೀಗಂಧ ತರುಗಳು ಏನಾದವು?
ಯಜ್ಞಯಾಗಾದಿಗಳ ಬೆಂಕಿಗೆ ಸಿಲುಕಿ
ಬೂದಿಯಾಗಿವೆ.
೩. ಅಣುಬಾಂಬುಗಳಿಗೆ ನೆಲ ಏನಾಗಿದೆ?
ಅಣುಬಾಂಬುಗಳಿಂದಾಗಿ ನೆಲ ಬಂಜೆಯಾಗಿದೆ.
೪. ನಖಗಳು ಏನನ್ನು ಕಬಳಿಸಲು ಬಂದಿವೆ?
ನಖಗಳು(ಉಗುರು) ಕಾರ್ನಿಯಾವನ್ನು ಕಬಳಿಸಲು
ಬಂದಿವೆ.
೫. ಕರುಳ ಬಳ್ಳಿಗೆ ತೊಡರಿದ ಹುಳು ಯಾವುದು?
ಕ್ಯಾನ್ಸರ್ ಎಂಬ ರೋಗವು ಕರುಳಬಳ್ಳಿಗೆ ತೊಡರಿದ
ಹುಳುವಾಗಿದೆ.
ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಚಿತಾಭಸ್ಮವಾದ ತರು ಯಾವುದು ಮತ್ತು ಎಲ್ಲಿ?
ಶ್ರೀಗಂಧದ ಮರಗಳು ಯಜ್ಞ-ಯಾಗಾದಿಗಳಲ್ಲಿ ಉರಿದು
ಬೂದಿಯಾಗಿರುವುದನ್ನು ಕವಿಯು ಚಿತಾಭಸ್ಮವಾಗಿದೆ ಎಂದಿದ್ದಾರೆ.
೨. ಅಮಾಯಕರಿಗೆ ಕವಿ ನೀಡುವ ಆಶ್ವಾಸಾನೆ
ಯಾವುದು?
ಅಮಾಯಕರನ್ನು ಜೈಲಿನ ಸರಳಿನ ಹಿಂದೆ ಇಡಲಾಗಿದೆ
(ಸೆರೆಯಲ್ಲಿ). ಇವರ ಜೀವನದಲ್ಲಿ ಆವರಿಸಿರುವ ಕತ್ತಲೆ ಕಳೆದು ಮತ್ತೆ ಬಿಡುಗಡೆಯ ಸೂರ್ಯಬರುತ್ತಾನೆ
ಎಂಬ ಆಶ್ವಾಸನೆ ನೀಡುತ್ತಾರೆ.
೩. ಜನರು ತತ್ತರಿಸಿರುವುದು ಯಾವುದಕ್ಕೆ?
ಹಿರಿಯ ಅಧಿಕಾರಿಗಳ ಬೂಟಿನ –
ಲಾಠಿಯ ಏಟುಗಳಿಗೆ ತತ್ತರಿಸಿ ಹೋಗಿದ್ದಾರೆ. ಎಂದಿದ್ದಾರೆ.
೪. ಹಕ್ಕಿಗಳು ತಮ್ಮ ಕಂಠಗಳಿಂದ ಏನೇನನ್ನು
ಮಾರ್ಧನಿಸುತ್ತಿವೆ?
ಪುಟ್ಟ ದಿಟ್ಟ ಹಕ್ಕಿಗಳು ಬದಲಾವಣೆಯ
ಸೂರ್ಯಬರುವುದನ್ನು ಕೋಟಿಕೋಟಿ ಕಂಠಗಳ ಮೂಲಕ ಹಾಡ ಬೇಕೆಂದು ಬಯಸುವ ಕವಿ ಆ ಹಾಡು ಗಿರಿ ಗಹ್ವರಗಳಲ್ಲಿ ಬೆಟ್ಟ ಕಣಿವೆಗಳಲ್ಲಿ
ಮಾರ್ದನಿಸುತ್ತಿರಲಿ ಜೀವನ ಪ್ರೀತಿ ಭರವಸೆ
ತುಂಬುತ್ತಿರಲಿ ಎಂದಿದ್ದಾರೆ.
ಐದಾರು ವಾಕ್ಯಗಳಲ್ಲಿ ಉತ್ತರಿಸಿ.
೧. ಕವಿಯ ಆತಂಕಕ್ಕೆ ಕಾರಣವಾದ ಸನ್ನಿವೇಶಗಳು
ಕವಿತೆಯಲ್ಲಿ ಹೇಗೆ ಮೂಡಿವೆ?
ಜಗತ್ತು ಅವನತಿಯತ್ತ ನಾಶದತ್ತ
ಸಾಗುತ್ತಿರುವುದನ್ನು ಕಂಡ ಕವಿ ಸಸ್ಯಶಾಮಲೆ ಬರಿಯ ಬೋಡು ಕಾಂಡಗಳನ್ನು ಉಳಿಸಿಕೊಂಡು
ನಿಂತಿದ್ದಾಳೆ, ಶ್ರೀಗಂಧದ ಮರಗಳೆಲ್ಲಾ ಯಜ್ಞ-ಯಾಗಾದಿಗಳ ಹೆಸರಿನಲ್ಲಿ ಉರಿದು ಬೂದಿಯಾಗಿದೆ.
ಅರಣ್ಯದ ಪ್ರಾಣಿ-ಪಕ್ಷಿಸಂಕುಲವು ಅಪಾಯದ ಅಂಚಿನಲ್ಲಿದೆ. ಜನ ಮೂಕ ಎತ್ತಿನಂತೆ
ದುಡಿಯುತ್ತಿದ್ದಾರೆ. ಸಿರಿವಂತರು, ಅಧಿಕಾರಿಗಳು ಅವರನ್ನು ಶೋಷಿಸುತ್ತಿದ್ದಾರೆ. ಅಣುಬಾಂಬುಗಳು
ನೆಲವನ್ನು ಬಂಜರನ್ನಾಗಿಸುತ್ತಿವೆ. ಪಾರ್ಥೇನಿಯಂ ಸಸ್ಯವೂ ಕೂಡ ಜೀವಜಾಲದ ಜೀವ ಹಿಂಡುತ್ತಿದೆ
ಎಂದಿದ್ದಾರೆ.
೨. ಪ್ರಸ್ತುತ ಕಾಲದೊಂದಿಗೆ ಈ ಕವಿತೆ ಹೇಗೆ
ಹೊಂದಿಕೊಳ್ಳುತ್ತದೆ?
ನ ಭೂತೋ ಎಂಬಂತೆ ಹಿಂದೆಂದೂ ಕಾಣದಷ್ಟು ಪರಿಸರ
ನಾಶ ಇಂದು ಕಾಣುತ್ತಿದ್ದೇವೆ. ಅರಣ್ಯಸಂಪತ್ತನ್ನು- ಪ್ರಾಣಿಪಕ್ಷಿಗಳನ್ನು
ನಾಶಮಾಡುತ್ತಿರುವುದನ್ನು ಹೇಳುತ್ತಾ ಅದೆಷ್ಟೋ ಅಮಾಯಕರು
ಶೋಷಣೆಗೆ ಒಳಗಾಗುತ್ತಿದ್ದಾರೆ. ಮಾನವೀಯ ಸಂಬಂಧಗಳಿಗೆ ಬೆಲೆಯೇ ಇಲ್ಲವಾಗಿದೆ.
ಅಣುಬಾಂಬುಗಳು ಮನುಕುಲವನ್ನೇ ಏಳಹೆಸರಿಲ್ಲದಂತೆ ಮಾಡಲು ತೊಡಗಿವೆ. ಪ್ರಸ್ತುತ ಕವಿತೆ ಈ ಎಲ್ಲ
ವಿಚಾರಗಳ ಬಗ್ಗೆ ಮಾತನಾಡುತ್ತಿರುವುದರಿಮ್ದ ಇಂದಿನ ಕಾಲದೊಂದಿಗೆ ಇದು ಹೊಂದಿಕೊಳ್ಳುತ್ತದೆ.
೩. ಮತ್ತೆ ಸೂರ್ಯಬರುತ್ತಾನೆ ಕವಿತೆಯ
ಆಶಯವನ್ನು ಚರ್ಚಿಸಿ.
ಮಾನವನ ದುರಾಸೆ ದೌರ್ಜನ್ಯದಿಂದ ಜಗತ್ತು
ತಲ್ಲಣಗೊಳ್ಳುತ್ತಿದೆ. ಮಾನವರ ದುರಾಸೆಯಿಂದಾಗಿ ಜಗತ್ತು ತಲ್ಲಣಗೊಂಡಿದೆ. ಅವನ ಬದುಕನ್ನು
ನರಕವಾಗಿಸಿದೆ.
ಪರಿಸರದ ನಾಶ ವಿನಾಶದ ಅಂಚಿಗೆ ಬಂದು ನಿಂತಿದೆ.
ಮುಗ್ಧರು, ಅಮಾಯಕರು ಸಿರಿವಂತರ ದೌರ್ಜನ್ಯಕ್ಕೆ ಸಿಲುಕು ನರಳುತ್ತಿದ್ದಾರೆ. ಧರ್ಮ , ದೆವರುಗಳ
ಹೆಸರಿನಲ್ಲಿ ಸುಲಿಗೆ, ಸ್ವಾರ್ಥಸಾಧನೆ ತುಂಬಿ ತುಳುಕುತ್ತಿದೆ. ಇಂತಹ ಸಂದರ್ಭದಲ್ಲಿ ಹೆದರುವ
ಅಗತ್ಯವಿಲ್ಲ. ಮತ್ತೆ ಎಲ್ಲರ ಬಾಳಿನಲ್ಲಿ ಬದುಕುವ , ಬದಲಾವಣೆ ತರುವ ಸೂರ್ಯ ಮತ್ತೆ ಬರುತ್ತಾನೆ.
ಜಗತ್ತನ್ನು ಬೆಳಗುತ್ತಾನೆ. ಎಂದು ಲೇಖಕರು ಹೇಳುತ್ತಾರೆ.
No comments:
Post a Comment