Sunday, June 29, 2014

ನಾ ಬರೀ ಬ್ರೂಣವಲ್ಲ

ಪದ್ಯ ಭಾಗ 10
ನಾ ಬರೀ  ಭ್ರೂಣವಲ್ಲ
ಮಾಲತಿ ಪಟ್ಟಣ ಶೆಟ್ಟಿ
ಆಶಯ : ಭ್ರೂಣಾವಸ್ಥೆಯಲ್ಲಿರುವ ಹೆಣ್ಣು ಮಗುವು ತನ್ನ ತಾಯಿಯೊಂದಿಗೆ ನಡೆಸುವ ಆಪ್ತಸಂವಾದವನ್ನು  ಈ ಕವಿತೆ ವ್ಯಕ್ತಪಡಿಸುತ್ತದೆ. ತಾಯಿಯ ಗರ್ಭವು ಅತ್ಯಂತ ಸುರಕ್ಷಿತ ತಾಣವೆಂದು ಭಾವಿಸುವ ಮಗುವಿಗೆ ತನ್ನ ಅಸ್ತಿತ್ವವನ್ನೇ ನಿರಾಕರಿಸುವ, ನಿರ್ಲಕ್ಷಿಸುವ, ಲಿಂಗತಾರತಮ್ಯ ಧೋರಣೆಯು ಆತಂಕ ಉಂಟುಮಾಡಿದೆ. ಇದು ನಾಗರಿಕ ಸಮಾಜದಲ್ಲಿ ಹಲವಾರು ಗಂಭೀರವಾದ ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ಹೆಣ್ಣು ಬದುಕುವುದು ಮಾತ್ರವಲ್ಲ ಹುಟ್ಟುವುದಕ್ಕೂ ಆತಂಕ ಪಡಬೇಕಾದ ವಿಷಮ ಪರಿಸ್ಥಿತಿಯಲ್ಲಿ ತಾಯಿ ತನ್ನನ್ನು ರಕ್ಷಿಸಬಲ್ಲಳೆಂಬ ಮನೋಭಾವದಿಂದ ಹೊಟ್ಟೆಯೊಳಗಿನ ಮಗು ತನ್ನನ್ನು ಕಾಪಾಡುವಂತೆ ದೀನವಾಗಿ ಮೊರೆಯಿಟ್ಟಿದ್ದಾಳೆ , ಇಂದು ನಾವು  ಹೆಣ್ಣನ್ನು ಕೇವಲ ದೇಹವಾಗಿ ಪರಿಭಾವಿಸದೆ ಅವಳ ಮನೋವ್ಯಕ್ತಿತ್ವವನ್ನೂ ಗೌರವಿಸುವ ಮಾನವೀಯ ಧೋರಣೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕಾಗಿದೆ. ಬದುಕಿನ ಎಲ್ಲರಂಗಗಳಲ್ಲಿಯೂ ತಾರತಮ್ಯಕ್ಕೆ ಅವಕಾಶವಿಲ್ಲದಂತೆ ಸ್ತ್ರೀ-ಪುರುಷರಿಬ್ಬರೂ ಸಮಾನ ಸಹಭಾಗಿತ್ವದಲ್ಲಿ ಸ್ವಸ್ಥ ಸಮಾಜದ ನಿರ್ಮಾಣ ಮಾಡಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ.
ಮಗುವಿಗೆ ತನ್ನ ಅಸ್ತಿತ್ವವನ್ನು ನಿರಾಕರಿಸುತ್ತಿರುವ ವ್ಯವಸ್ಥೆಯ ಧೋರಣೆಗಳು ಆತಂಕ ಸೃಷ್ಟಿ ಆಗಿರುವುದನ್ನು ಕಂಡು ಲೇಖಕಿ ಈ ಕವಿತೆಯನ್ನು ರಚಿಸಿದ್ದಾರೆ.
ನಾನು ನಿನ್ನ ದೇಹದ ಮೊಗ್ಗು, ನಿನ್ನ ಕನಸನ್ನು ಅರಳಿಸುವವಳು, ನನ್ನನ್ನು ಔಷಧಿಯಿಂದ ಗುಳಿಗೆಯಿಂದ ನಾಶಪಡಿಸುತ್ತಿರುವುದು ಅಸಮಾಧಾನದ ಸಂಗತಿ. ಈ ಜಗತ್ತನ್ನು ನೋಡುವ ಮೊದಲೇ ನನ್ನನ್ನು ಕೊಲ್ಲುವುದು ಸರಿಯೇ? ತಣ್ಣನೆಗಾಳಿ, ನೀಲಿಯಾಕಾಶ, ಹಸಿರು ಭೂಮಿಯನ್ನು ಕಾಣುವುದಕ್ಕಾಗಿಯಾದರೂ ನನ್ನನ್ನು ಉಳಿಸಿ. ನನ್ನರಕ್ತದಲ್ಲಿ ನಿನ್ನ ಪ್ರೀತಿಯರಸ ಹರಿಯುತ್ತಿದೆ. ನನ್ನನ್ನು ಕೊಂದರೆ ಮಡಿಲಲ್ಲಿದ್ದ ಮುತ್ತನ್ನು ಚೆಲ್ಲಿದಹಾಗೆ. ಉಳಿಸಿಕೊಂಡರೆ ನಿನ್ನ ಕೀರ್ತಿ ಹೆಚ್ಚಾಗುವ ರೀತಿಯಲ್ಲಿ ನಿನ್ನ ಬಾಳಿಗೆ ಹೂವಾಗಿರುತ್ತೇನೆ ಎಂದು ಮಗು ಮೊರೆಯಿಡುತ್ತಿದೆ.  ಭ್ರೂಣಹತ್ಯೆ ಮಾಡುವ ಹಕ್ಕು ನಮಗಿಲ್ಲ ಎಂಬುದನ್ನು ಈ ಕವಿತೆ ವ್ಯಕ್ತಪಡಿಸುತ್ತದೆ.
ಸಾರಾಂಶ : ಹೆಣ್ಣು ಭ್ರೂಣವೊಂದು ತನ್ನ ತಾಯಿಯನ್ನು ಕುರಿತು ಅಮ್ಮ ನಾನು ಬರಿ ಭ್ರೂಣವಲ್ಲ ನಿನ ದೇಹದ ಮೊಗ್ಗು ನಿನ್ನ ಕನಸಿನ ಅರಳು ನನಗೆ ಔಷಧಿಗಳೆಲ್ಲ ವಿಷವಾಗಿ  ನಶೆಬರಿಸುತ್ತಾ ನನ್ನ ಉಸಿರಿಗೆ ಪಾಶವಾಗಿವೆ. ಇವುಗಳಿಂದ ನನ್ನನ್ನು ಉಳಿಸು. ಎಂದು ಬೇಡಿಕೊಳ್ಳುತದೆ. ಅಲ್ಲದೆ ನನ್ನನ್ನು ನಾಶಮಾಡಲು ಕರಿಯುಗುರು ಬೆನ್ನಟ್ಟುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ( ಗರ್ಭಪಾತ ಮಾಡುವ ಮಂದಿ) ಇಂತಹವರಿಂದ ರಕ್ಷಿಸು. ಆಕಾಶದ ನೀಲಿಯನ್ನೋ , ನೆಲದ ಹಸಿರನ್ನೋ  ಗಾಳಿಯ ಮೃದುಸ್ಪರ್ಷವನೋ ಕಾಣಬೇಕೆಂಬ ಹಂಬಲವಿದೆ ನನ್ನನ್ನು ಕೊಲ್ಲಬೇಡ! ನಿನ್ನ ತಾಯಿಯಾಗಿ ಹುಟ್ಟಿಬಂದು ನಿನ್ನನ್ನು ಕಾಪಾಡುತ್ತೇನೆ. ನನ್ನ ರಕ್ತ ಅದು ರಕ್ತವಲ್ಲ ಪ್ರೀತಿಯರಸ ! ನಿನ್ನಿಂದ ನನ್ನ ಬೇರೆಮಾಡಿದರೆ ನಾನು ಸತ್ತಂತೆಯೇ ! ಯಾರಾದರೂ ತಮ್ಮ ಮಡಿಲಿನಲ್ಲಿರುವ ಮುತ್ತನ್ನು ಚೆಲ್ಲಬಯಸುತ್ತಾರೆಯೇ! ನನಗೆ ಜನ್ಮನೀಡು ನಿನ್ನ ಬಾಳಿಗೆ , ಬಾಳಿನ ಸಮೃದ್ಧಿಗೆ ನೆಮ್ಮದಿ ತರುವೆನು ಎಂದು ಗರ್ಭದಲ್ಲಿನ ಭ್ರೂಣ ತನ್ನ ತಾಯಿಯಲ್ಲಿ ಬೇಡಿಕೊಳ್ಳುತ್ತದೆ.

ಸಂದರ್ಭ ಸೂಚಿಸಿ ವಿವರಿಸಿ :
೧. ನಿನ್ನ ಕನಸಿನ ಅರಳವ್ವಾ
ಪ್ರಸ್ತುತ ಈ ವಾಕ್ಯವನ್ನು ಮಾಲತಿ ಪಟ್ಟಣಶೆಟ್ಟಿ ಅವರು ಬರೆದಿರುವ ನಾ ಬರೀ ಭ್ರೂಣವಲ್ಲ ಎಂಬ ಕವನದಿಂದ ಆರಿಸಿಕೊಳ್ಳಲಾಗಿದೆ. ಹೊಟ್ಟೆಯಲ್ಲಿರುವ ಮಗು ತನ್ನ ತಾಯಿಗೆ ಹೇಳುವ ಮಾತು.ನಾನು ನಿನ್ನ ಹೊಟ್ಟೆಯಲ್ಲಿ ಜನಿಸುವ ನಾನು ನಾನು ಬರೀ ಭ್ರೂಣವಲ್ಲ , ನಿನ್ನ ದೇಹದ ಮೊಗ್ಗು ನಿನ್ನ ಕನಸುಗಳನ್ನು ಅರಳಿಸುವೆನು. ಎಂದು ಹೇಳಿದೆ.
೨.ಪಾಶವಾಗಿದೆಯವ್ವ ನನ್ನುಸಿರಿಗೆ
ಪ್ರಸ್ತುತ ಈ ವಾಕ್ಯವನ್ನು ಮಾಲತಿ ಪಟ್ಟಣಶೆಟ್ಟಿ ಅವರು ಬರೆದಿರುವ ನಾ ಬರೀ ಭ್ರೂಣವಲ್ಲ ಎಂಬ ಕವನದಿಂದ ಆರಿಸಿಕೊಳ್ಳಲಾಗಿದೆ. ಅಮ್ಮಾ ನೀನು ತಗೆದುಕೊಳ್ಳುತ್ತಿರುವ ಔಷಧಿಯೆಲ್ಲಾ ವಿಷವಾಗಿ ಮಾತ್ರೆಗಳು ನಶೆಯನ್ನು ಉಂಟುಮಾಡುತ್ತ ನನ್ನ ಕೊರಳಿಗೆ ಪಾಶವಾಗಿದೆ. ಎಂದು  ಹೊಟ್ಟೆಯಲ್ಲಿರುವ ಮಗು ತನ್ನ ತಾಯಿಗೆ ಹೇಳುವ ಮಾತು.ಈ ಮಾತಿನಲ್ಲಿ ಮಗುವಿನ ನೋವು ಸಂಕಟ  ವ್ಯಕ್ತವಾಗುತ್ತದೆ.

೩.ಕಂಡಿಲ್ಲ ನಾನಿನ್ನೂ ಬದುಕಿನಾಗಸದ ನೀಲ
ಪ್ರಸ್ತುತ ಈ ವಾಕ್ಯವನ್ನು ಮಾಲತಿ ಪಟ್ಟಣಶೆಟ್ಟಿ ಅವರು ಬರೆದಿರುವ ನಾ ಬರೀ ಭ್ರೂಣವಲ್ಲ ಎಂಬ ಕವನದಿಂದ ಆರಿಸಿಕೊಳ್ಳಲಾಗಿದೆ. ಆಗಸದ ನೀಲಿ,ಗಾಳಿಯ ಮೃದು ಸ್ಪರ್ಷ, ಹಸಿರಿನ ನೆಲದ ಅನುಭವ ನನಗೆ ಇನ್ನೂ ಆಗಿಲ್ಲ.ಜೀವನದ ಎಲ್ಲ ಅನುಭವ ಪಡೆಯುವ ಮುನ್ನವೇ ನನ್ನ ತೆಗೆಸಿ ಬಿಡಬೇಡ. ಎಂದು ಹೊಟ್ಟೆಯಲ್ಲಿರುವ ಮಗು ತನ್ನ ತಾಯಿಗೆ ಹೇಳುವುದು.

೪. ಯಾರದ್ಯಾಕವ್ವಾ ಒತ್ತಾಸೆ
ಪ್ರಸ್ತುತ ಈ ವಾಕ್ಯವನ್ನು ಮಾಲತಿ ಪಟ್ಟಣಶೆಟ್ಟಿ ಅವರು ಬರೆದಿರುವ ನಾ ಬರೀ ಭ್ರೂಣವಲ್ಲ ಎಂಬ ಕವನದಿಂದ ಆರಿಸಿಕೊಳ್ಳಲಾಗಿದೆ. ಹೊಟ್ಟೆಯಲ್ಲಿರುವ ಮಗು ತನ್ನ ತಾಯಿಗೆ ಹೇಳುವ ಮಾತು.ಯಾರದೋ ಬಲವಂತ , ಆಸೆಗಳಿಗೆ ತುತ್ತಾಗಿ ಹೆಣ್ಣಾಯಿತಲ್ಲಾ ಎಂಬ ದುಃಖದಿಂದ ನಿರಾಸೆಯಿಂದ ಇರಬೇಡ, ನನ್ನ ತೆಗೆಸುವ ಯೋಚನೆ ಮಾಡಬೇಡ, ಎಂದು ಹೊಟ್ಟೆಯಲ್ಲಿರುವ ಮಗು ತನ್ನ ತಾಯಿಗೆ ಧೈರ್ಯ ಹೇಳುವುದು.
೫. ನಿನ್ನವ್ವನಾಗಿಯೆ ಬರುವೆನೆ
ಪ್ರಸ್ತುತ ಈ ವಾಕ್ಯವನ್ನು ಮಾಲತಿ ಪಟ್ಟಣಶೆಟ್ಟಿ ಅವರು ಬರೆದಿರುವ ನಾ ಬರೀ ಭ್ರೂಣವಲ್ಲ ಎಂಬ ಕವನದಿಂದ ಆರಿಸಿಕೊಳ್ಳಲಾಗಿದೆ. ಹೊಟ್ಟೆಯಲ್ಲಿರುವ ಮಗು ತನ್ನ ತಾಯಿಗೆ ಹೇಳುವ ಮಾತು.ನೀನು ನನಗೆ ಜನ್ಮನೀಡಿದರೆ,ನಿನ್ನ ಅಮ್ಮನಂತೆಯೇ ನಾನು ಪ್ರೀತಿಯ ರಸವನ್ನೇ ಹರಿಸುತ್ತಾ ನಿನ್ನೊಡನೆ ಇರುತ್ತೇನೆ ಎಂದು ಹೇಳುವುದು.

೬. ಚೆಲ್ಲಬೇಕೆ ಉಡಿಯ ಮುತ್ತು
ಪ್ರಸ್ತುತ ಈ ವಾಕ್ಯವನ್ನು ಮಾಲತಿ ಪಟ್ಟಣಶೆಟ್ಟಿ ಅವರು ಬರೆದಿರುವ ನಾ ಬರೀ ಭ್ರೂಣವಲ್ಲ ಎಂಬ ಕವನದಿಂದ ಆರಿಸಿಕೊಳ್ಳಲಾಗಿದೆ. ನಿನ್ನಿಂದ ನನ್ನನ್ನು ಯಾರಾದರೂ ಬೇರೆಮಾಡಿದರೆ ನಾ ಸಾಯುತ್ತೇನೆ, ಯಾರಾದರೂ ಉಡಿಯಲ್ಲಿರುವ ಮುತ್ತನ್ನು ಚೆಲ್ಲುತ್ತಾರೆಯೇ? ಅಂತೆಯೇ ನಾನು ಒಂದು ಮುತ್ತುಎಂದೇ ತಿಳಿ. ಎಂದು ಹೊಟ್ಟೆಯಲ್ಲಿರುವ ಮಗು ತನ್ನ ತಾಯಿಗೆ ಹೇಳುವ ಮಾತು.

೭. ಹೂ ತರುವೆನೇ ನಿನ್ನ ಹೆಸರಿಗೆ.
ಪ್ರಸ್ತುತ ಈ ವಾಕ್ಯವನ್ನು ಮಾಲತಿ ಪಟ್ಟಣಶೆಟ್ಟಿ ಅವರು ಬರೆದಿರುವ ನಾ ಬರೀ ಭ್ರೂಣವಲ್ಲ ಎಂಬ ಕವನದಿಂದ ಆರಿಸಿಕೊಳ್ಳಲಾಗಿದೆ. ನಾನು ಬರೀ ಭ್ರೂಣವಲ್ಲ ನಿನ್ನ ಮಗಳು ನನ್ನ ನೀ ಕಾಪಾಡುವೆ ಎಂಬ ವರ ಕೊಡು ನಾನು ನಿನ್ನ ಹಸಿರಿನ ಬಾಳಿಗೆ  ಹೂವಾಗುತ್ತೇನೆ. ನಿನಗೆ ಕೀರ್ತಿ ತರುತ್ತೇನೆ , ನನ್ನನ್ನು ಕಾಪಾಡಿಕೋ ಎಂದು ಹೊಟ್ಟೆಯಲ್ಲಿರುವ ಮಗು ತನ್ನ ತಾಯಿಗೆ ಹೇಳುವುದು.


ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಅವ್ವನ ದೇಹದ ಮುಗುಳು ಯಾರು?
ಅವ್ವನ ದೇಹದ ಮುಗುಳು  ಗರ್ಭದಲ್ಲಿರುವ ಮಗು.

೨.ಭ್ರೂಣಾವಸ್ಥೆಯಲ್ಲಿರುವ ಮಗುವಿಗೆ ವಿಷವಾಗಿರುವುದು ಯಾವುದು?
ಭ್ರೂಣಾವಸ್ಥೆಯಲ್ಲಿರುವ ಮಗುವಿಗೆ ತಾಯಿ ಸೇವಿಸುವ ಔಷಧಿಯು ವಿಷವಾಗಿರುವುದು

೩. ಭ್ರೂಣಾವಸ್ಥೆಯಲ್ಲಿರುವ ಮಗುವನ್ನು ಬೆನ್ನಟ್ಟಿರುವುದು ಯಾವುದು?
ಕರಿಯುಗುರು ( ಹೆಣ್ಣು ಭ್ರೂಣ ತಿರಸ್ಕರಿಸುವ ಮನೋಭಾವ )

೪. ಒಡಲೊಳಗಿನ ಮಗು ತನ್ನ ರಕ್ತವನ್ನು ಏನೆಂದು ಭಾವಿಸುತ್ತದೆ?
ಒಡಲೊಳಗಿನ ಮಗು ತನ್ನ ರಕ್ತವನ್ನು ಪ್ರೀತಿಯರಸ ಎಂದು ಭಾವಿಸುತ್ತದೆ

೫.ತನ್ನನ್ನು ಉಳಿಸಿದರೆ ತಾಯಿಗೆ ಏನನ್ನು ತರುವೆನೆಂದು ಮಗುವು ಹೇಳುತ್ತದೆ?
ತನ್ನನ್ನು ಉಳಿಸಿದರೆ ತಾಯಿಯ ಹಸಿರಿನ ಬಾಳಿಗೆ ಹೂವನ್ನು ತರುವೆನೆಂದು ಮಗುವು ಹೇಳುತ್ತದೆ  ( ಸಮೃದ್ಧಿಯ ಬಾಳಿಗೆ ಕೀರ್ತಿ)

ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧.ಹೊಟ್ಟೆಯಲ್ಲಿರುವ ಮಗುವು ತನ್ನ ಉಸಿರಿಗೆ ಯಾವುದು ಪಾಶವಾಗಿದೆಯೆಂದು ಭಾವಿಸುತ್ತದೆ?
ಹೊಟ್ಟೆಯಲ್ಲಿರುವ ಮಗುವು  ತನ್ನತಾಯಿ ಸೇವಿಸುವ ಔಷಧಿಯು ವಿಷವಾಗಿ, ಮಾತ್ರೆಗಳು ನಶೆಯಾಗಿ ತನ್ನ ಉಸಿರಿಗೆ ಪಾಶವಾಗಿದೆಯೆಂದು ಭಾವಿಸುತ್ತದೆ.

೨. ತಾನು ಬದುಕಿನಲ್ಲಿ ಇನ್ನೂ ಕಾಣಬೇಕಾಗಿರುವುದು ಏನೆಂದು ಒಡಲೊಳಗಿನ ಮಗು ಹೇಳುತ್ತದೆ?
ಒಡಲೊಳಗಿನ ಮಗು ಬದುಕಿನ ಆಗಸದ ನೀಲಿ, ಪಚ್ಚೆಯಂತ ನೆಲ, ಗಾಳಿಯ ಮೃದು ಸ್ಪರ್ಷವನ್ನು ತಾನು ಕಾಣಬೇಕಾಗಿದೆ ಎಂದು ಹೇಳುತ್ತದೆ.

೩. ಭ್ರೂಣಾವಸ್ಥೆಯ ಮಗುವು ಏಕೆ ಗಾಬರಿಗೊಂಡಿದೆ?
ಯಾರದೋ ಒತ್ತಾಸೆ, ಅಥವಾ ನಿರಾಸೆಯಿಂದ ಎಲ್ಲಿ ನನ್ನನ್ನು ದೂರಮಾಡುವರೋ ಎಂದು ಮಗು ಗಾಬರಿಗೊಂಡಿದೆ.

೪. ತನ್ನನ್ನು ಏಕೆ  ಕಿತ್ತುಕೊಳ್ಳಬಾರದೆಂದು ಹೊಟ್ಟೆಯೊಳಗಿನ ಮಗುವು ಹೇಳುತ್ತಿದೆ?
ಉಡಿಯಲ್ಲಿರುವ ಮುತ್ತನ್ನು ಚೆಲ್ಲುವವರುಂಟೇ ನಾನು ನಿನ್ನ ಮುತ್ತು, ಮಗಳು ನನ್ನನ್ನು ಕೊಲ್ಲಬೇಡ ಎಂದು ಹೇಳುತ್ತದೆ


೫. ಹೊಟ್ಟೆಯೊಳಗಿನ ಮಗುವು ಯಾವ ವರವನ್ನು ಬೇಡುತ್ತಿದೆ?
ಭ್ರೂಣಹತ್ಯೆ ಮಾಡದಂತೆ , ತನಗೊಂದು ಬದುಕುವ ಅವಕಾಶ ನೀಡುವಂತೆ ಮಗು ಬೇಡಿಕೊಳ್ಳುತ್ತಿದೆ.

ಐದಾರು ವಾಕ್ಯಗಳಲ್ಲಿ ಉತ್ತರಿಸಿ.
೧. ಹೆಣ್ಣು ಭ್ರೂಣಹತ್ಯೆಯನ್ನು ಈ ಕವಿತೆ ಹೇಗೆ ವಿರೋಧಿಸುತ್ತದೆ?
ಪರಿಸ್ಥಿತಿಯ ಒತ್ತಡಕ್ಕೆ ಬಲಿಯಾಗಿ ಗರ್ಭದಲ್ಲಿರುವುದು ಹೆಣ್ಣುಶಿಶು ಎಂದು ತಿಳಿದಕೂಡಲೇ ಅದನ್ನು ಕೊಲ್ಲುವಂತಹ ಮನೋಭಾವ ಇರುವ ಜನರನ್ನು ಕುರಿತಾಗಿ ಹೇಳಿರುವಂತ ಈಕವಿತೆ  ಗರ್ಭದಲ್ಲಿ ನ ಮಗು ತಾನು ನಿಮ್ಮ ಶಿಶು ನನಗೂ ಬದುಕುವ ಹಕ್ಕಿದೆ. ಗಾಳಿ , ನೀರು , ಭೂಮಿ , ಆಕಾಶಗಳನ್ನು ನೋಡುವ ಆಸೆಯಿದೆ. ಹುಟ್ಟುವ ಮುನ್ನವೇ ಔಷಧಿ, ಮಾತ್ರೆಗಳಿಂದ ನನ್ನ ಉಸಿರು ಕಟ್ಟಿಸದಿರಿ ಎಂಬ ಬೇಡಿಕೆ ಮನಕರಗುವಂತೆ ಇದೆ. ಇಂದಿನ ಸಮಾಜದಲ್ಲಿ ಸ್ತ್ರೀವಿರೋಧಿ, ಲಿಂಗತಾರಮ್ಯಧೋರಣೆ, ಹೆಣ್ಣುಭ್ರೂಣಹತ್ಯೆ, ಅತ್ಯಾಚಾರ ಮಾತ್ರವಲ್ಲದೆ ಪುರುಷರ ದಬ್ಬಾಳಿಕೆಯ ದನಿಯೂ ಅಡಗಿದೆ.

~~~~~ಓಂ~~~~~

6 comments: