ನಾಟಕ - ಬೋಳೇಶಂಕರ
ಡಾ. ಚಂದ್ರಶೇಖರ
ಕಂಬಾರ
ಸಂದರ್ಭದೊಡನೆ ವಿವರಿಸಿ :
೧. ಬ್ಯಾಂಕಿನಲ್ಲಿ
ಕೂಡಿಸಿಟ್ಟು ಮದುವೆ ಆದಮೇಲೆ ಹೆಂಡತಿಗೆ ಕೊಡ್ತೀನಿ.
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ. ಈ ಮಾತನ್ನು ಕೋಡಂಗಿಯು ಸೂತ್ರದಾರನಿಗೆ ಹೇಳಿದನು.
ಕೋಡಂಗಿಯು ತಾನು ಬೋಳೆಶಂಕರನಲ್ಲಿ ಕೆಲಸಕ್ಕೆ ಇದ್ದೇನೆ ಎಂದು ಭಾಗವತನೊಂದಿಗೆ ಹೇಳುತ್ತಿದ್ದಾಗ
ಭಾಗವತನು ನಿನ್ನ ಸಂಬಳ ಎಷ್ಟು ಎಂದು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ದಿನಕ್ಕೆ ಕೆನ್ನೆಮೇಲೆ ಹತ್ತು ಏಟು ಎಂದು
ಹೇಳುತ್ತಾನೆ. ಭಾಗವತನು ಅದನ್ನೇ ಲೆಕ್ಕಾ ಹಾಕಿ ದಿನಕ್ಕೆ
ಹತ್ತಾದರೆ ತಿಂಗಳಿಗೆ ಮುನ್ನೂರಾಯ್ತು ವರ್ಷಕ್ಕೆ ಮೂರು ಸಾವಿರದ ಆರುನೂರು ಏಟು ಯಾರಿಗುಂಟು
ಯಾರಿಗಿಲ್ಲ. ಇಷ್ಟೆಲ್ಲಾ ಸಂಬಳ
ತೆಗೆದುಕೊಂಡು ಏನು ಮಾಡುತ್ತೀ ಎಂದಾಗ ಕೋಡಂಗಿ ಈ ಮೇಲಿನಂತೆ ಹೇಳುತ್ತಾನೆ.
೨. ಇವನಿಗೇನು
ಹೆಂಡತೀನೇ ಮಕ್ಕಳೇ?
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ. ಈಮಾತನ್ನು ಸರದಾರನ ಹೆಂಡತಿ ಸರದಾರನಿಗೆ
ಹೇಳುತ್ತಾಳೆ. ಆಸ್ತಿಯನ್ನು ಹಂಚಿಕೊಳ್ಳುವ ವಿಷಯಬಂದಾಗ ಬೋಳೇಶಂಕರನು ತನ್ನ ಅಣ್ಣಂದಿರನ್ನು ಕುರಿತು “
ನೀವಾಗಲಿ ನಿಮ್ಮ
ಹೆಂಡಂದಿರಾಗಲಿ ಹೊಲದಲ್ಲಿ ದುಡಿದವರಲ್ಲ, ಕಷ್ಟಪಟ್ಟವರಲ್ಲ” - ಹೇಗೆ ಬದುಕುತ್ತೀರಿ ಎಂಬ ಅರ್ಥದಲ್ಲಿ ಕೇಳಿದರೆ ಸರದಾರ ಅಣ್ಣ
ಆಸ್ತಿಯನ್ನು ಮೂರು ಭಾಗ ಮಾಡೋಣ ಒಂದು ಭಾಗ ನೀನು
ತಗೋ ಎಂದಾಗ ಸರದಾರನ ಹೆಂಡತಿ ಈ ಮೇಲಿನ ಮಾತನ್ನು ಹೇಳುತ್ತಾಳೆ.
ಒಂದು ವೇಳೆ ಮದುವೆಯಾಗಲು ಒಪ್ಪಿದರೂ ಯಾರೂ ಹೆಣ್ಣು ಕೊಡಲು ಮುಂದೆ ಬರುವುದಿಲ್ಲ ಎಂದು ಕೇವಲವಾಗಿ ಮಾತನಾಡುತ್ತಾಳೆ
೩. ಕೊಳೆತ ಬಲೆ ಹಾಕಿ
ಎಳೆದರೂ ಬರುವಂಥವರು.
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ. ಸೈತಾನ ದೊರೆಯಿಂದ ಕಳುಹಿಸಲ್ಪಟ್ಟ ಮೊದಲನೆಯ
ಪಿಶಾಚಿಯು ಈ ಮಾತನ್ನು ಹೇಳುತ್ತದೆ. ತನ್ನನ್ನು ಪರಿಚಯ ಮಾಡಿಕೊಡುತ್ತಾ, ಬೋಳೇಶಂಕರನ ಅಣ್ಣಂದಿರ ಬಗ್ಗೆ ಹೇಳುವಾಗ ಈ ಮಾತು ಬಂದಿದೆ. ತನ್ನ ಅಣ್ಣಂದಿರು ತಲೆ ತುರಿಸಿಕೊಳ್ಳುವ ಮೊದಲೇ ವಶವಾದವರು.
ಆದರೆ ಬೋಳೇ ಶಂಕರ
ಮಹಾ ಪಾಕಡ ಎಲ್ಲರಿಗಿಂತ ಚುರುಕು ಎಂದು ಹೇಳಿಕೊಂಡಿತು. ಬೋಳೇಶಂಕರನ ಅಣ್ಣಂದಿರು ಎಷ್ಟು ದುರ್ಬಲರು
ಎಂಬುದು ಈಮಾತಿನಲ್ಲಿ ಗೋಚರವಾಗುತ್ತದೆ.
೪. ಒಂದು ಹೊತ್ತು
ರೊಟ್ಟಿ ತಿನ್ನದಿದ್ದರೆ ನಾನೇನು ಸಾಯುವುದಿಲ್ಲ.
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ. ಮೊದಲನೆ ಪಿಶಾಚಿಯು ಬೋಳೇಶಂಕರನನ್ನು ತನ್ನ
ವಶಮಾಡಿಕೊಳ್ಳಲು ಅವನ ರೊಟ್ಟಿಯನ್ನು ಕದಿಯುತ್ತದೆ.
ಇದರಿಂದ ಅವನು
ಕೋಪಗೊಂಡು ವಾಚಾಮಗೋಚರವಾಗಿ ಬೈದಾಡುತ್ತಾನೆ ಎಂದು ಭಾವಿಸುತ್ತದೆ. ಆದರೆ
ರೊಟ್ಟಿ ತಿನ್ನಲು ಬಂದ ಬೋಳೇಶಂಕರ ರೊಟ್ಟಿಕಾಣದೆ ಬಹುಷಃ ಹಸಿದವರಾರೋ ತೆಗೆದುಕೊಂಡು
ತಿಂದಿರಬೇಕು. ಒಂದು ಹೊತ್ತು ರೊಟ್ಟಿ ತಿನ್ನದಿದ್ದರೆ ನಾನೇನು
ಸಾಯುವುದಿಲ್ಲ ಎಂದು ಉಳಿದ ಕೆಲಸ ಮುಗಿಸಲು ಹೋಗುತ್ತಾನೆ.
ಬೋಳೇಶಂಕರನ ಉದಾರತೆ , ಒಳ್ಳೆಯತನ ಇಲ್ಲಿ ಗೋಚರವಾಗುತ್ತದೆ.
೫. ನಾನೇನಾದರೂ
ರಾಜನಾದರೆ ನಿಮ್ಮಂಥ ಸೋಂಬೇರಿಗಳೀಗೆ ಊಟ ಹಾಕೋದೇ ಇಲ್ಲ.
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ. ಮೊದಲನೆ ಪಿಶಾಚಿಯು ಬೋಳೇಶಂಖರನನ್ನು ತನ್ನ
ವಶಮಾಡಿಕೊಳ್ಳಲು ಮನುಷ್ಯರಂತೆ ವೇಷ ಬದಲಿಸಿಕೊಂಡು ಬರುತ್ತದೆ. ಎರಡು ಎರಡು ಸೇರಿ ಐದಾಗುವ ಆಟ ಆಡೋಣ ಬರುವೆಯಾ
ಎಂದು ಮಾತಿಗೆಳೆಯುತ್ತದೆ. ಬೋಳೆಶಂಕರ ಒಪ್ಪುವುದಿಲ್ಲ.
ಆದರೂ ಕಳೆಯೋ ಆಟ
ಆಡೋಣ ಬಾ ಎಂದು ಪಿಶಾಚಿಯು ಹೇಳುತ್ತಾ ನಿನ್ನ ಹತ್ತಿರ ಹತ್ತು ರೂಪಾಯಿ ಇದೆ, ಐದು ರೂಪಾಯಿ ನನಗೆ ಕೊಟ್ಟರೆ ಎಷ್ಟು ಉಳಿಯುತ್ತದೆ ಎಂದು ಕೇಳಿದಾಗ
ನಾನು ನಿನಗೆ ಹಣ ಕೊಡೋದಿಲ್ಲ ಎಂದು ಹೇಳುತ್ತಾನೆ. ಕದಿಯುತ್ತೇನೆ ಎಂದು ಪಿಶಾಚಿ ಹೇಳಿದಾಗ ಬೋಳೇಶಂಕರ ಈ ಮೇಲಿನ ಮಾತನ್ನು
ಹೇಳುತ್ತಾನೆ.
೬. ಹೆಣ್ಣಿದ್ದ ಮನೆಯ
ಸೌಭಾಗ್ಯವೇ ಬೇರೆ
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ.
ಈ ಮಾತನ್ನು ಬೋಳೇಶಂಕರ ತನ್ನಲ್ಲಿ ತಾನು ಹೇಳಿಕೊಳ್ಳುತ್ತಾನೆ. ಒಬ್ಬನ ಜೀವನದಲ್ಲಿ ಒಳ್ಳೆಯ ದಿನಗಳು ಬರುವುದು
ಅಪರೂಪ. ಅಣ್ಣತಮ್ಮಂದಿರು
ಒಟ್ಟಿಗೆ ಕುಳಿತು ಊಟಮಾಡಿ ಎಷ್ಟುದಿನವಾಯಿತು. ಅತ್ತಿಗೆಯವರ ಹಸ್ತಗುಣದಿಂದ ಅಡುಗೆ ಪರಿಮಳ
ಭರಿತವಾಗಿದೆ. ಬನ್ನಿ ಅಣ್ಣತಮ್ಮಂದಿರು ಒಟ್ಟಿಗೆ ಊಟಮಾಡೋಣ
ಎಂದು ತನ್ನ ಅಣ್ಣಂದಿರನ್ನು ಕರೆಯುತ್ತಾನೆ. ಈ ಸಂದರ್ಭದಲ್ಲಿ ಈಮೇಲಿನ ಮಾತು ಬಂದಿದೆ.
೭. ಹಸಿರು ಸಾಮ್ರಾಜ್ಯದ
ನಮ್ರಪ್ರಜೆ ಕಣಯ್ಯ ನಾನು
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ.ಬೋಳೇಶಂಕರನು ಕೋಡಂಗಿಯೊಡನೆ ಮಾತನಾಡುವಾಗ ಈ
ಮೇಲಿನ ಮಾತು ಬಂದಿದೆ.
ಕೋಡಂಗಿಯು ನಿನ್ನ ಅಣ್ಣಂದಿರು ನಿನ್ನ ಹಣವನ್ನೆಲ್ಲ ಖರ್ಚುಮಾಡುತ್ತಿದ್ದಾರೆ.
ಎಂದು ದೂರಿದಾಗ
ಬೋಳೇಶಂಕರನು ಹಸಿರನ್ನು ನೋಡು ಹಸಿರನ್ನು ಪ್ರೀತಿಸಬೇಕಾದರೆ ನೀನು ಪುಸ್ತಕದ ಭಾಷೆಯಲ್ಲಿ
ಸಮರ್ಥಿಸಿಕೊಳ್ಳಬೇಕಾಗಿಲ್ಲ ಅಂತಃಕರಣ ತೆರೆದರೆ ಸಾಕು. ಅದು ಒಳಗೆ ಪ್ರವೇಶಿಸುತ್ತದೆ.
ಒಳಗಿನ ಕೊಳೆ
ತೊಳೆದು ಹೃದಯವನ್ನು ಪರಿಶುದ್ಧವಾದ ಸ್ವಚ್ಛವಾದ ಕೊಳದ ಥರ ಮಾಡುತ್ತದೆ ನಾನು ಹಸಿರು ಸಾಮ್ರಾಜ್ಯದ
ನಮ್ರಪ್ರಜೆ ಕಾಣಯ್ಯಾ ಎಂದು ಹೇಳಿದನು. ಈ ಮಾತಿನಲ್ಲಿ ಬೋಳೇಶಂಕರನ ಬೋಳೇತನ ಕಾಣುತ್ತದೆ.
೮. ರಾಜಕುಮಾರಿಗೆ
ಬಂದಿರೋದು , ರಾಜರೋಗ
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ. ಮಂತ್ರಿಯು ಸೇವಕನಿಗೆ ಹೇಳಿದ ಮಾತು. ರಾಜಕುಮಾರಿಯ ಹೊಟ್ಟೆನೋವನ್ನು ನಿವಾರಿಸಲು ಬೆಪ್ತಕ್ಕಡಿ ಬೋಳೇಶಂಕರ ಬಂದಿದ್ದಾನೆ ಎಂದಾಗ ಮಂತ್ರಿ
ಸಾಮಾನ್ಯರಿಗೆಲ್ಲ ಬಗ್ಗುವಂತಹ ಕಾಯಿಲೆ ಇದಲ್ಲ . ಇದು ರಾಜರೋಗ ರಾಜವೈದ್ಯರೇ ಬರಬೇಕು ಎಂದು
ಹೇಳುವಾಗ ಈ ಮಾತು ಬಂದಿದೆ.
೯. ರಾಜರಾಣೀಯರಿಂದ
ಹಿಡಿದು ಎಲ್ಲರೂ ದುಡಿಯುತ್ತಾರೆ.
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ.ರಾಜಕುಮಾರಿಯನ್ನು ವಿವಾಹವಾಗುವಂತೆ ರಾಜನ
ತೀರ್ಮಾನವನ್ನು ತಿಳಿಸಲು ಬಂದ ಮಂತ್ರಿಗಳಿಗೆ ಬೋಳೇಶಂಕರ ಹೇಳುವ ಮಾತು.
ನಾನು ರಾಜನಾದರೆ ರಾಜ್ಯದಲ್ಲಿ ಸೈನ್ಯವಿರುವುದಿಲ್ಲ. ತೆರಿಗೆ ಇರೋದಿಲ್ಲ, ನಾಣ್ಯ ಇರೊದಿಲ್ಲ, ರಾಜ ರಾಣಿಯರಿಂದ ಹಿಡಿದು ಎಲ್ಲರೂ ದುಡೀತಾರೆ. ಎಲ್ಲರೂ ಉಣ್ಣುತ್ತಾರೆ. ದುಡಿಯದ ಸೋಂಬೇರಿಗಳಿಗೆ ಖಂಡಿತಾ ಅವಕಾಶವಿಲ್ಲ ಎಂದು ಹೇಳುತ್ತಾನೆ. ಈ ಮಾತಿನಲ್ಲಿ ಬೋಳೇಶಂಕರನ ಸ್ವಭಾವ
ವ್ಯಕ್ತವಾಗುತ್ತದೆ.
೧೦. ದಾರಿತಪ್ಪಿದವರಿಗೆ
ಗಾದೆ ಬಲ್ಲವರು ಬುದ್ಧಿ ಹೇಳುತ್ತಾರೆ
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ.ಬೋಳೇಶಂಕರ ಮಂತ್ರಿಗಳಿಗೆ ಹೇಳಿದ ಮಾತು .
ಬೋಳೇಶಂಕರನ ಆದರ್ಶ
ರಾಜ್ಯದ ಕಲ್ಪನೆಯನ್ನು ಕೇಳುತ್ತಿದ್ದ ಮಂತ್ರಿಯು ಅನ್ಯರ ದಾಳಿಗಳಿಂದ ಪ್ರಜೆಗಳಿಗೆ ರಕ್ಷಣೆ ಬೇಡವೇ
ಎಂದರೆ ನಾವು ಏನನ್ನಾದರೂ ಸಂಗ್ರಹಿಸಿದ್ದರೆ ಕೊಳ್ಳೆಹೊಡೆಯುತ್ತಾರೆ. ನಮ್ಮಲ್ಲಿ ನಾಣ್ಯವೇಇಲ್ಲ ಎಂದು ಹೇಳುತ್ತಾನೆ .
ಕಾನೂನು ಅದರ
ರಕ್ಷಣೆ ಬಗ್ಗೆ ಮಂತ್ರಿಕೇಳಿದಾಗ ದಾರಿತಪ್ಪಿದವರಿಗೆ ಗಾದೆಬಲ್ಲವರು ಬುದ್ದಿಹೇಳುತ್ತಾರೆ.
ಎಂದು ಹೇಳುತ್ತಾನೆ.
ಗಾದೆ ಬಲ್ಲವರು
ಬುದ್ದಿವಂತರು, ಮಾರ್ಗದರ್ಶಕರು ಎಂಬ ವಾದ ಇಲ್ಲಿ
ಕಂಡುಬರುತ್ತದೆ.
೧೧ ಚಿನ್ನ ತಿಂದು ಬದುಕಲಾಗುತ್ತ!
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ.
ಬೋಳೇಶಂಕರ ದಾನ್ಯದಿಂದ ಚಿನ್ನದ ನಾಣ್ಯಮಾಡುವ ವಿದ್ಯೆಯನ್ನು ಕಲಿತಿದ್ದಾನೆ ಎಂಬುದನ್ನು
ತಿಳಿದ ಸಾವ್ಕಾರಣ್ಣ ಅವನ ಬಳಿ ಬಂದು ಚಿನ್ನವನ್ನು ಬೇಡಿದಾಗ ಚಿನ್ನ ಮಾಡಿಕೊಡುತ್ತಾನೆ.
ಚಿನ್ನದ
ನಾಣ್ಯವನ್ನು ಮತ್ತೆ ದಾನ್ಯಮಾಡಲೇ ಎಂದು ಕೇಳಿದಾಗ ಬೇಡ ಚಿನ್ನವೇ ಇರಲಿ ಎಂದು ಹೇಳಿದಾಗ ಬೋಳೇಶಂಕರ
ಈ ಮೇಲಿನ ಮಾತನ್ನು ಹೇಳುತ್ತಾನೆ. ಸಾವ್ಕಾರಣ್ಣನಿಗೆ ಚಿನ್ನಮುಖ್ಯವಾದರೆ
ಬೋಳೇಶಂಕರನಿಗೆ ದಾನ್ಯಮುಖ್ಯವಾಗಿ ತೋರುತ್ತದೆ.
೧೨. ಜನ ಎಲ್ಲಿ ಸೇರಿದರೆ
ಅಲ್ಲೇ ದರ್ಬಾರು
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ.
ಸಾವ್ಕಾರಣ್ಣ ಮತ್ತು ಸರದಾರಣ್ಣ ಇಬ್ಬರೂ
ಹೊಲದಲ್ಲಿ ಕೆಲಸಮಾಡುತ್ತಿದ್ದ ಬೋಳೆಶಂಕರನ ಬಳಿ ಬಂದು ಆತ ರಾಜನಾದದ್ದು ಕೇಳಿ ತಾವೇ
ರಾಜರಾದಷ್ಟು ಸಂತೋಷಪಟ್ಟೆವೆಂದು ಹೇಳುತ್ತಾ ಇದೇ ಏನು ನಿನ್ನ ದರ್ಬಾರು ಎಂದು ಕೇಳಿದಾಗ ಜನ ಎಲ್ಲಿ
ಸೇರಿದರೆ ಅಲ್ಲೇ ದರ್ಬಾರು ಎಂದು ಉತ್ತರ ಕೊಡುತ್ತಾನೆ. ಬೋಳೇಶಂಕರನ ಸರಳತೆಯನ್ನು ಇಲ್ಲಿ ಕಾಣಬಹುದು.
೧೩. ನಾವು ಜಗಳದ ಭಾಷೆ
ಆಡಿದರೆ ಅವರು ಸ್ನೇಹದ ಭಾಷೆ ಆಡುತ್ತಾರೆ.
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ.
ಬೋಳೇಶಂಕರನ ರಾಜ್ಯದಲ್ಲಿನ ಜನರ ಸ್ವಭಾವವನ್ನು ತಿಳಿಸುವಾಗ ಸೈನಿಕ ಸೈತಾನನೊಡನೆ ಈ ಮಾತನ್ನು
ಆಡುತ್ತಾನೆ. ಜನರನ್ನು ಪೀಡಿಸಿ ಅವರೊಂದಿಗೆ ಜಗಳವಾಡದ ನೀನೂ
ಒಬ್ಬ ಸೈನಿಕನೇ ಎಂದು ಸೈತಾನ ಕೇಳಿದಾಗ ನಾವು ಜಗಳದ ಭಾಷೆ ಆದಿದರೆ ಅವರು ಸ್ನೇಹದ ಭಾಷೆ
ಆಡುತ್ತಾರೆ. ನಿಜ ಹೇಳುತ್ತೇನೆ.
ಇರುವೆಗೆ
ಸಿಟ್ಟಿರಬಹುದು ಈ ಜನಗಳಲ್ಲಿ ಇಲ್ಲ ಎಂದು ಹೇಳುತ್ತಾನೆ.
೧೪. ಕೆಲಸ ಮಾಡಿದವರು ಊಟ
ಮಾಡಿದ ನಂತರ ಸೋಮಾರಿಗಳ ಊಟ
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೇಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ. ಹಸಿದ ಸೈತಾನ ಊಟಕ್ಕಾಗಿ ಬೋಳೇಶಂಕರನ ಬಳಿಬಂದಾಗ
ನೀನು ಮುಜುಗರ ಇಲ್ಲದೆ ನಮ್ಮ ಮನೆಯಲ್ಲಿ ಊಟಮಾಡಬಹುದು ಎಂದು ಪಂಕ್ತಿಯಲ್ಲಿ ಕೂಡುವಂತೆ
ಹೇಳುತ್ತಾನೆ. ಊಟಬಡಿಸುತ್ತಾ ಬಂದ ರಾಜಕುಮಾರಿಯು ಸೈತಾನನನ್ನು
ಕುರಿತು ನಿನ್ನ ಕೈತೋರಿಸು ತಪ್ಪು ತಿಳೀಬೇಡ ಬೇರೊಂದು ಪಂಕ್ತಿಯಲ್ಲಿ ಕೂರು ಎಂದು ಹೇಳುತ್ತಾಳೆ.
ಆಗ ಬೋಳೇ ಶಂಕರ ಈ
ಮೇಲಿನ ಮಾತನ್ನು ಹೇಳುತ್ತಾನೆ. ಶ್ರಮಜೀವಿಗಳಿಗೆ ಮೊದಲ ಆಧ್ಯತೆ
ಕೊಟ್ಟಿದ್ದನ್ನು ಕಾಣುತ್ತೇವೆ.
೧೫.ತಲೆಯಿಂದ ಕೆಲಸ
ಮಾಡುವುದು ಹೇಗೆಂದು ನಿಮಗೆ ಹೇಳಿಕೊಡುತ್ತೇನೆ.
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ. ಬೋಳೇಶಂಕರನ ಮನೆಗೆ ಊಟಕ್ಕೆಂದು ಬಂದ ಸೈತಾನ
ಬೋಳೇಶಂಕರನೊಂದಿಗೆ ಮಾತನಾಡುತ್ತಾ ಈ ಮೇಲಿನ ಮಾತನ್ನು ಹೇಳುತ್ತಾನೆ.
ನೀವು
ಬೆಪ್ತಕ್ಕಡಿಗಳು ನಿನ್ನ ಈ ಬೆಪ್ತಕ್ಕಡಿರಾಜ್ಯದಲ್ಲಿ ಜನ ಕೈಯಿಂದ ಮಾತ್ರ ಕೆಲಸ ಮಾಡಬೇಕೆ?
ಬುದ್ಧಿವಂತರು
ಯಾವುದರಿಂದ ಕೆಲಸ ಮಾಡ್ತಾರೆ ಎಂಬುದು ನಿನಗೆ ತಿಳಿದಿದೆಯೇ.ಕೈಗಳಿಗಿಂತ ತಲೆಯಿಂದ ಕೆಲಸ ಮಾಡುವುದು ಹೆಚ್ಚು
ಲಾಭಕರ. ನಾನು ನಿಮಗೆ
ತಲೆಯಿಂದ ಕೆಲಸ ಮಾಡುವುದನ್ನು ಹೇಳಿಕೊಡುತ್ತೇನೆ ಇಲ್ಲದಿದ್ದರೆ ನೀವು ಬೆಪ್ತಕ್ಕಡಿಗಳಾಗಿಯೇ
ಇರುತ್ತೀರಿ ಎಂದು ಹೇಳಿದನು.
೧೬. ಬಂಧುಗಳೇ ಚರಿತ್ರೆ
ಮುಂದೆ ಮುಂದೆ ಹೋಗುತ್ತದೆ. ಹಿಂದೆ ಹಿಂದಲ್ಲಾ
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ
ಆರಿಸಲಾಗಿದೆ. ಸೈತಾನ ಬೆಪ್ತಕ್ಕಡಿ ರಾಜ್ಯದ ಜನತೆಯೊಂದಿಗೆ
ಮಾತನಾಡುವಾಗ ನೀವೆಲ್ಲ ನಗರದ ಸುಖಗಳಿಂದ ವಂಚಿತರಾಗಿದ್ದೀರಿ ನಿಮಗೆ ತಲೆಯ ಬೆಲೆತಿಳಿದಾಗ ಹೆಚ್ಚು
ಸುಖಪಡೆಯಬಹುದು. ಸುಖಗಳ ಸಂಖ್ಯೆಹಾಗೂ ದಾಹವನ್ನು ದಿನದಿನ
ಹೆಚ್ಚಿಸಬಹುದು. ನಿಮ್ಮ ಬೆಪ್ತಕ್ಕಡಿ ರಾಜನಿಗೆ ತಲೆ ಇಲ್ಲವಾದ್ದರಿಂದ
ಇವೆಲ್ಲ ಮಾತು ನಿಮಗೆ ತಿಳಿಯುವುದಿಲ್ಲ. ಎಂದು ಸೈತಾನ ಹೇಳಿದನು.
ಒಂದುವಾಕ್ಯದಲ್ಲಿ ಉತ್ತರಿಸಿರಿ
೧.ಬೋಳೇಶಂಕರನ ಊರು ಯಾವುದು?
ಬೋಳೇಶಂಕರನ ಊರು ಶಿವಪುರ
೨. ಬೋಳೇಶಂಕರನ ಅಣ್ಣ ಅತ್ತಿಗೆಯರಿಗೆ ಉಂಟಾದ ಆಸೆ ಯಾವುದು?
ಬೋಳೇಶಂಕರನ ಅಣ್ಣ ಅತ್ತಿಗೆಯರಿಗೆ ಎತ್ತರವಾದ ಬೆಟ್ಟದ ಮೇಲಿನಿಂದ ಕೆಳಕ್ಕೆ ನೆಗೆಯುವ ಆಸೆ ಉಂಟಾಯಿತು.
೩. ಪಿಶಾಚಿಗಳು ಮನುಷ್ಯರನ್ನು ಯಾವುದರ ಮೂಲಕ ಪ್ರವೇಶಿಸುತ್ತವೆ?
ಮನುಷ್ಯರ ದೌರ್ಬಲ್ಯಗಳ ಮೂಲಕ ಅವರನ್ನು ಪ್ರವೇಶಿಸುತ್ತವೆ.
೪. ಬದುಕಿನ ಬಗ್ಗೆ ಅವನಿಗೆ ಒಂದೂ ತಕರಾರಿಲ್ಲ ಎಂದು ಪಿಶಾಚಿಯು ಯಾರ ಬಗ್ಗೆ ಹೇಳುತ್ತದೆ?
ಬದುಕಿನ ಬಗ್ಗೆ ಅವನಿಗೆ ಒಂದೂ ತಕರಾರಿಲ್ಲ ಎಂದು ಪಿಶಾಚಿಯು ಬೋಳೇಶಂಕರನ ಬಗ್ಗೆ ಹೇಳುತ್ತದೆ.
೫. ಪಿಶಾಚಿಗಳು ಯಾರ ಹೆಸರು ಕೇಳಿದರೆ ಹೆದರುತ್ತವೆ?
ಶಿವನ ಹೆಸರನ್ನು ಕೇಳಿದರೆ ಪಿಶಾಚಿಗಳು ಹೆದರುತ್ತವೆ.
೬. ಬೋಳೇಶಂಕರನ ಹೊಟ್ಟೆನೋವು ಯಾವುದರಿಂದ ಮಾಯವಾಯಿತು?
ಪಿಶಾಚಿಕೊಟ್ಟ ಬೇರು ತಿಂದುದರಿಂದ ಬೋಳೇಶಂಕರನ ಹೊಟ್ಟೆನೋವು ಮಾಯವಾಯಿತು.
೭. ಬೋಳೇಶಂಕರ ಎಲ್ಲಿ ಕುಳಿತು ಊಟಮಾಡಬೇಕೆಂದು ಅವನ ಅತ್ತಿಗೆ ಹೇಳುತ್ತಾಳೆ?
ಬೋಳೇಶಂಕರನು ದನದ ಕೊಟ್ಟಿಗೆಯಲ್ಲಿಕುಳಿತು ಊಟಮಾಡಬೇಕೆಂದು ಅವನ ಅತ್ತಿಗೆ ಹೇಳುತ್ತಾಳೆ.
೮. ಬೋಳೇಶಂಕರನಿಂದ ಬೇರು ಕಿತ್ತುಕೊಳ್ಳಲು ಪಿಶಾಚಿ ಯಾವ ವೇಷದಲ್ಲಿ ಬರುತ್ತದೆ?
ಬೋಳೇಶಂಕರನಿಂದ ಬೇರು ಕಿತ್ತುಕೊಳ್ಳಲು ಪಿಶಾಚಿಯು ಮುದುಕಿಯ ವೇಷದಲ್ಲಿ ಬರುತ್ತದೆ.
೯. ರಾಜಕುಮಾರಿಗೆ ಬಂದ ರೋಗ ಯಾವುದು?
ರಾಜಕುಮಾರಿಗೆ ಪಿಶಾಚಿ ಹಿಡಿದುದರಿಂದ ಹೊಟ್ಟೆನೋವಿನ ರೋಗ ಬಂದಿತು.
೧೦. ಹುಡುಗಿಯರ ಹಾಡಿಗೆ ಬೋಳೇಶಂಕರ ಬಹುಮಾನವಾಗಿ ಏನನ್ನು ಕೊಡುವನು?
ಹುಡುಗಿಯರ ಹಾಡಿಗೆ ಬೋಳೇಶಂಕರನು ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ಕೊಟ್ಟನು.
೧೧. ಸೈನಿಕರು ಯಾವುದಕ್ಕೆ ಜಯವಾಗಲಿ ಎಂದು ಹಾಡಿದರು?
ಸೈನಿಕರು ಕೋವಿಗೆ ಮತ್ತು ಹಿಂಸೆಗೆ ಜಯವಾಗಲಿ ಎಂದು ಹಾಡಿದರು.
೧೨. ಕತ್ತಲೆಯ ನಿಜಜನಕ ಯಾರು?
ಎಲ್ಲರ ಕೆಡುಕಿಗೆ ಒಡೆಯನಾದ ಸೈತಾನ ಕತ್ತಲೆಯ ನಿಜಜನಕನಾಗಿದ್ದಾನೆ.
೧೩. ಅಣ್ಣಂದಿರಿಗೆ ಯಾವ ರೋಗ ಹಿಡಿದಿದೆ ಎಂದುಬೋಳೇಶಂಕರ ಹೇಳುತ್ತಾನೆ?
ಬೋಳೇಶಂಕರನು ತನ್ನ ಅಣ್ಣಂದಿರಿಗೆ ಅತಿ ಆಸೆ ಎಂಬ ರೋಗ ಹಿಡಿದಿದೆ ಎಂದು ಹೇಳುತ್ತಾನೆ.
ಎರಡು-ಮೂರುವಾಕ್ಯಗಳಲ್ಲಿ ಉತ್ತರಿಸಿ.
೧. ಬೆಟ್ಟದಮೇಲಿನ ದೇವತೆಯು ಬೋಳೇಶಂಕರನ ಅಣ್ಣ ಅತ್ತಿಗೆಯರಿಗೆ ಹೇಗೆ ಕಾಣಿಸುತ್ತದೆ?
ಬೆಟ್ಟದ ಮೇಲಿನ ದೇವತೆ ಬೋಳೇಶಂಕರನ ಅಣ್ಣ ಅತ್ತಿಗೆಯರಿಗೆ ಕೆಂಪು ಹೂವಿನ ಪೊದೆಯ ಹಿಂದೆ
ನಿಂತು ಕೈಮಾಡಿ ಕರೆದಂತೆ, ಮತ್ತು ದುಂಡಗೆ ಉರಿಯವ ಕಣ್ಣುಗಳು, ಎತ್ತಿನ ಹಾಗೆ ಕೊಂಬು ಹೊಂದಿರುವ
ಇಬ್ಬರು ದೇವತೆಗಳು ಕಾಣುತ್ತಾರೆ.
೨.ಸಾವ್ಕಾರಣ್ಣನು ತಾನು ಸಹೋದರಾರಿಗೆ ಆಸ್ತಿಯನ್ನುಹೇಗೆ ಹಂಚಿದ?
ಸಾವ್ಕಾರಣ್ಣ ದುಡ್ಡಿರುವ ಪೆಟ್ಟಿಗೆಯನ್ನು ತನಗೆ ಇಟ್ಟುಕೊಂಡು, ಒಳ್ಳೆಯ ಗದ್ದೆ, ತೋಟ,
ಹೊಲವನ್ನೆಲ್ಲ ಸರದಾರನಿಗೆ ಕೊಟ್ಟು ನದಿಬಳಿಯ ಕಲ್ಲು ಮರಡಿ ಭಾಗವನ್ನು ಬೋಳೇಶಂಕರನಿಗೆಂದು ಹಂಚಿದ.
೩. ಸೈತಾನನು ಮೂರು ಪಿಶಾಚಿಗಳನ್ನು ಭೂಲೋಕಕ್ಕೆ ಕಳುಹಿಸಿದ್ದು ಏಕೆ?
ಸೈತಾನದೊರೆಯು ಬೋಳೇಶಂಕರ ಮತ್ತು ಅವನ ಅಣ್ಣಂದಿರ ನಡುವೆ ವಿರಸ ಹುಟ್ಟಿಸಿ ಮೂವರನ್ನೂ
ನರಕಕ್ಕೆ ಕರೆತನ್ನಿ ಎಂದು ಮೂರು ಪಿಶಾಚಿಗಳನ್ನು ಕಳುಹಿಸಿದ್ದ.
೪. ಕೋಡಂಗಿಯು ತಾನು ಬೆಳಗ್ಗೆಯಿಂದ ಏನೇನು ಕೆಲಸಮಾಡಿದನೆಂದು ಹೇಳುತ್ತಾನೆ?
ಹದಿನೆಂಟು ರೊಟ್ಟಿ ತಿಂದು, ಎಂಟು ಮುದ್ದೆ ನುಂಗಿ, ಸೊಲಗೆ ಅನ್ನ ಊಟಮಾಡಿದ್ದಲ್ಲದೆ ಅಂಬಲಿಯನ್ನೂ
ಕುಡಿದು, ಗಡದ್ದಾಗಿ ಮೂರುಗಂಟೆ ನಿದ್ದೆಮಾಡಿದೆ ಎಂದು ಹೇಳಿದನು.
೫. ರಾಜಕುಮಾರಿಯ ಹೊಟ್ಟೆನೋವು ವಾಸಿಮಾಡುವವರಿಗೆ ಏನೇನು ಬಹುಮಾನ ಕೊಡುವುದಾಗಿ ಡಂಗುರ
ಸಾರಿಸುತ್ತಾರೆ?
ರಾಜಕುಮಾರಿಯ ಹೊಟ್ಟೆನೋವನ್ನು ಎಂತೆಂತಹ ವೈದ್ಯರು ಬಂದರೂ ವಾಸಿಮಾಡಲಾಗದೆ ಇದ್ದಾಗ ರಾಜನು
ರಾಜಕುಮಾರಿಯ ಹೊಟ್ಟೆನೋವು ವಾಸಿ ಮಾಡುವವರಿಗೆ ಇಡೀರಾಜ್ಯವನ್ನು ಕೊಡುವುದರ ಜೊತೆಗೆ
ರಾಜಕುಮಾರಿಯೊಂದಿಗೆ ವಿವಾಹ ಮಾಡಿಕೊಡುವುದಾಗಿ ಡಂಗೂರ ಸಾರಿಸಿದನು.
೬. ಪಿಶಾಚಿಗಳು ಯಾವುದರಿಂದ ನಾಣ್ಯ ಹಾಗೂ ಸಿಪಾಯಿಗಳನ್ನು ಮಾಡಿಕೊಡುತ್ತಾರೆ?
ಬೋಳೇಶಂಕರನಿಗೆ ಪಿಶಾಚಿಗಳು ಧಾನ್ಯಗಳಿಂದ ನಾಣ್ಯಗಳನ್ನು , ಹುಲ್ಲಿನಿಂದ ಸಿಪಾಯಿಗಳನ್ನು
ಮಾಡಿಕೊಡುತ್ತವೆ. ಅಲ್ಲದೆ ನಾಣ್ಯಮಾಡುವ, ಸಿಪಾಯಿಮಾಡುವ ವಿದ್ಯೆಯನ್ನು ಕಲಿಸಿಕೊಟ್ಟಿದ್ದಲ್ಲದೆ
ಮೊದಲಿನ ಸ್ಥಿತಿಗೆ ತರುವ ವಿದ್ಯೆಯನ್ನೂ ಹೇಳಿಕೊಡುತ್ತವೆ.
೭.ಬೋಳೇಶಂಕರ ಹುಡುಗಿಯರಿಗೆ ಚಿನ್ನಕೊಟ್ಟಿದ್ದಕ್ಕೆ ಸಾವ್ಕಾರಣ್ಣ ಏನು ಹೇಳುತ್ತಾನೆ?
ಬೋಳೇಶಂಕರ ಹುಡುಗಿಯರಿಗೆ ಚಿನ್ನಕೊಟ್ಟಿದ್ದಕ್ಕೆ ಸಾವ್ಕಾರಣ್ಣನು ಆಕ್ಷೇಪಿಸುತ್ತಾ,
ಬೇಜವಾಬ್ದಾರೀ ಹುಡಿಗೇರಿಗೆ ಆಡೋ ಮಕ್ಕಳಿಗೆ ಚಿನ್ನದ ನಾಣ್ಯಕೊಟ್ಟೆಯಂತಲ್ಲ, ನನಗೇ
ಕೊಡಬಾರದಿತ್ತೇ? ನನಗೆ ತುಸು ಹಣ ಸಿಕ್ಕಿದ್ದರೆ ವ್ಯಾಪಾರ ಮಾಡಿ ಅದು ಪ್ರಪಂಚದ ಮೂಲೆ ಮೂಲೆಯಲ್ಲಿ
ಚಿನ್ನದ ಮೊಟ್ಟೆಯಿಡೋ ಹಾಗೆ ಮಾಡ್ತಿದ್ದೆ. ಎಂದು ಹೇಳುತ್ತಾನೆ.
೮. ಸೈತಾನನ ಆಗಮನವನ್ನು ಭಾಗವತ ಹೇಗೆ ತಿಳಿಸಿದ್ದಾನೆ?
ಬಿರುಗಾಳಿ ಬೀಸುವಂತೆ, ನದಿ ಹರಿಯೋದನ್ನ ನಿಲ್ಲಿಸಿ ಯಾರದೋ ಪಿಸುದನಿ ಕೇಳಿಸಿಕೊಳ್ತಾ ಇದೆ.
ಅಕಾ, ಕಾಲು ಭೂಮಿಮ್ಯಾಲಿದ್ದರೂ ಮೋಡಗಳಲ್ಲಿ ಯಾರದೋ ತಲೆ ಕಂಡ ಹಾಗಾಯ್ತು. ಸರ್ವಕೆಡುಕಿನ ಒಡೆಯ
ತನ್ನ ಚಿನ್ನದ ಹಲ್ಲುಸಿಡಿವಂತೆ ಹಲ್ಲುಕಡಿಯುತ್ತಾ, ನಗುತ್ತಾ ಮನಸ್ಸಿನಲ್ಲಿ ನರಕಗಳನ್ನೇ
ಸೃಷ್ಟಿಸಿ ಜೀವರಸವನ್ನು ಬತ್ತಿಸುತ್ತಾ, ಬೆಳಕನ್ನು ಓಡಿಸುತ್ತಾ ಬಂದ ಎಂದು ಸೈತಾನನ ಆಗಮನದ ಸುದ್ಧಿಯನ್ನು
ಭಾಗವತ ಹೇಳುತ್ತಾನೆ.
೯. ಸೈತಾನನಿಗೆ ಮೊದಲ ಪಕ್ತಿಯ ಊಟ ನಿರಾಕರಿಸಿದ್ದು ಏಕೆ?
ಬೋಳೇಶಂಕರನ ರಾಜ್ಯದಲ್ಲಿ ಕೆಲಸಮಾಡುವವರಿಗೆ ಮಾತ್ರ ಮೊದಲಪಂಕ್ತಿಯಲ್ಲಿ ಊಟ ಹಾಗಾಗಿ ಮೊದಲ
ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದ ಸೈತಾನನ ಕೈ ಪರೀಕ್ಷಿಸಿ ಯಾರ ಕೈ ಕೆಲಸ ಮಾಡಿ
ಜಡ್ಡುಗಟ್ಟಿಲ್ಲವೋ ಅವರ ಊಟ ಆಮೇಲೆ ಎಂದು ಮೊದಲ ಪಂಕ್ತಿಯ ಊಟವನ್ನು ನೀಡಲು ನಿರಾಕರಿಸಿದರು.
೧೦. ಬೋಳೇಶಂಕರ ಏನೆಂದು ಡಂಗೂರ ಸಾರಿಸುತ್ತಾನೆ?
ಸೈತಾನನು ಬೋಳೇಶಂಕರನನ್ನು ತನ್ನ ವಶಮಾಡಿಕೊಳ್ಳಲು
ತಲೆಯಿಂದ ಕೆಲಸ ಮಾಡುವ ಮೂಲಕ ಸುಖವಾಗಿರಬಹುದು ಎಂದು ಹೇಳುತ್ತದೆ. ಬೋಳೇಶಂಕರನು
ಚಳಿಗಾಲದಲ್ಲಿ ಕೈಸೆಟೆದುಕೊಂಡಿದ್ದಾಗ ತಲೆಯಿಂದ ಕೆಲಸ ಮಾಡಬಹುದು.ಎಂದು ಕೋಡಂಗಿಯೊಡನೆ
“ನಮ್ಮರಾಜ್ಯಕ್ಕೆ ಒಬ್ಬ ದೊಡ್ಡಮನುಷ್ಯ ಬಂದಿದ್ದಾನೆ. ತಲೆಯಿಂದ ಕೆಲಸಮಾಡೋದನ್ನ ಕಲಿಸಿಕೊಡ್ತಾನೆ.
ಜನ ಎಲ್ಲರೂ ಊರಾಚೆ ಇರುವ ಎತ್ತರವಾದ ಗೋಪುರಾ ಇದೆಯಲ್ಲಾ, ಅಲ್ಲಿ ಸೇರಬೇಕೆಂದು ಡಂಗೂರ ಸಾರು ಎಂದು
ಸೂಚಿಸುತ್ತಾನೆ.
ಐದಾರುವಾಕ್ಯಗಳಲ್ಲಿ ಉತ್ತರಿಸಿ.
೧. ಬೋಳೇಶಂಕರ ಮತ್ತು ಅವನ ಅಣ್ಣಂದಿರನ್ನು ಭಾಗವತ ಹೇಗೆ ಪರಿಚಯಿಸುತ್ತಾನೆ?
ಶಿವಪುರದಲ್ಲಿ ಮಾನವರು ವಾಸವಾಗಿದ್ದರು. ಅವರಲ್ಲಿ ಮೂರುಜನ ಅಣ್ಣತಮ್ಮಂದಿರು. ದೊಡ್ಡವನು
ಸರದಾರ ಸೋಮಣ್ಣ ಸೋಮಣ್ಣ ಆಳೋದಕ್ಕೆ ಎಂದೇ ಹುಟ್ಟಿದವನು. ಕುರಿ ಕೋಳಿ ಕೊಂದವನು ಅವು ಸಿಗದಿದ್ದರೆ
ಮತ್ತು ಸಾಧ್ಯವಾದರೆ ಮನುಷ್ಯರನ್ನೂ ಕೊಲ್ಲಬಲ್ಲವನು. ಎರಡನೆಯವನು ಸಾವ್ಕಾರ ಕಾಮಣ್ಣ ಹೊಟ್ಟೆ
ಮಜಬೂತಣ್ಣ ಅವನ ಇನ್ನೊಂದು ಹೆಸರು ಡಬ್ಬಣ್ಣ.
ಎಣಿಸೋದರಲ್ಲಿ ಜಾಣ. ಹಸು , ಹಣ ಎಣಿಸುತ್ತಾನೆ. ಯಾರ್ಯಾರ ಜಮೀನು ಎಷ್ಟು ಎಕರೆ ಇದೆ
ಎಂದರೆ ಅಂಕಿಯೊಳಗೆ ಹೇಳುವಾತ. ಮೂರನೆಯವನು ಬೆಪ್ತಕ್ಕಡಿ ಬೋಳೇಶಂಕರ . ಅವನಾಯ್ತು ಭೂಮಿ ಸೀಮೆ
ಆಯ್ತು . ಮಳೆ ಬೆಳೆ ಆಯ್ತು. ಒಂದು ನೊಣ ನೋಯಿಸಿದವನಲ್ಲ. ಮಳೆ ಬರೊದನ್ನು ಒಂದು ವಾರಕ್ಕೆ ಮುಂಚೆ
ಹೇಳಬಲ್ಲಾ. ನಿಂತ ನೀರಿಗೆ ಹರಿಯೋದಕ್ಕೆ ಕಾಲುವೆ ತೋಡಬಲ್ಲ. ಹಕ್ಕಿ ಹಾಡಿನ ಅರ್ಥ ಹೇಳಬಲ್ಲ.
ಹೂವಿಗೆ ಬೀಳುವ ಕನಸು ಹೇಳಬಲ್ಲ. ಎನಪ್ಪಾ ಅಂದರೆ ಇವನಿಗೆ ಕೈಬೆರಳಿಲ್ಲದೆ ಎಣಿಸೋಕೆ
ಬರೋದಿಲ್ಲ. ಎಂದು ಮೂವರು ಅಣ್ಣ ತಮ್ಮಂದಿರನ್ನು
ಪರಿಚಯಿಸಿದನು.
೨. ಬೋಳೇಶಂಕರನ ಅಣ್ಣಂದಿರೇ ವಾಸಿ ಎಂದು ಪಿಶಾಚಿ ಹೇಳಲು ಕಾರಣವೇನು?
ಪಿಶಾಚಿಗಳು ಸೈತಾನದೊರೆಯ ಆದೇಶದಂತೆ
ಬೋಳೇಶಂಕರ ಮತ್ತು ಅವನ ಅಣ್ಣಂದಿರಲ್ಲಿ ವಿರಸ ಹುಟ್ಟಿಸಿ ಮೂವರನ್ನು ನರಕಕ್ಕೆ
ಕರೆದೊಯ್ಯಲು ಬಂದಿದ್ದವು ಆಗ ಮೊದಲನೆ ಪಿಶಾಚಿಯು ಬೋಳೇಶಂಕರ ಮಹಾ ಪಾಕಡ , ಮಾತು ಮಾತಿಗೆ ಶಿವನ
ಹೆಸರನ್ನು ಹೇಳುತ್ತಾ. ನನ್ನ ಇಷ್ಟುವರ್ಷದ ಅನುಭವಕ್ಕೆ ಸವಾಲು ಹಾಕುತ್ತಾಇದ್ದಾನೆ.ಇದುವರೆಗೆ
ನನ್ನ ಅನುಭವಕ್ಕೆ ಮಸಿ ಬಳಿಯುವಂತ ವ್ಯಕ್ತಿಯನ್ನು ನೋಡಿರಲೇ ಇಲ್ಲ. ಬೋಳೇಶಂಕರನ ಅಣ್ಣಂದಿರು
ಕೊಳೆತ ಬಲೆಹಾಕಿ ಎಳೆದರೂ ಬರುವಂಥರು. ತನ್ನ ಪಿಶಾಚಿ ಅಣ್ಣಂದಿರು ತಲೆಕೆರೆದುಕೊಳ್ಳುವ ಮೊದಲೇ ಅವರ
ವಶವಾದವರು. ತನ್ನ ಪಿಶಾಚಿ ಅಣ್ಣಂದಿರು ಅವರಿಬ್ಬರ ಹಿಂದೆ ನಿಲ್ಲುವುದೇ ತಡ ಬೆಟ್ಟದ ತುದಿಯಿಂದ
ನೆಗೆದು ಬೀಳಲು ಆಸೆಪಟ್ಟವರು. ಇವನಿಗೆ ಹೋಲಿಸಿದರೆ ಇವನ ಅಣ್ಣಂದಿರೇ ವಾಸಿ ಎಂದು
ಹೇಳುತ್ತದೆ.
೩. ಬೋಳೇಶಂಕರನ ನಾಣ್ಯ ಹಾಗೂ ಸೈನಿಕರನ್ನು ಪಡೆದ ಪ್ರಸಂಗವನ್ನು ವಿವರಿಸಿ.
ಬೋಳೇಶಂಕರನು ರಾಜಕುಮಾರಿಗೆ ಬಂದಿದ್ದ ಹೊಟ್ಟೆನೋವನ್ನು ವಾಸಿಮಾಡಲು ತನ್ನ ಬಳಿಇರುವ ಬೇರನ್ನು
ತೆಗೆದುಕೊಂಡು ಹೋಗುತ್ತಾನೆ.ದಾರಿಯಲ್ಲಿ ಪಿಶಾಚಿಯು ಮುದುಕಿಯ ವೇಷಧರಿಸಿ ಅಳುತ್ತಾ ಬಂದು
ಹೊಟ್ಟೆನೋವು ಕರುಳು ಕಿತ್ತುಬರುವಂತಹ ಹೊಟ್ಟೆನೋವು ಏನಾದರೂ ಮದ್ದು ಇದ್ದರೆ ಕೊಡಿ ಎಂದು
ಬೇಡುತ್ತಾಳೆ. ಬೋಳೇ ಶಂಕರನು ಬೇರಿನ ಚೂರನ್ನು ಅವಳಿಗೆ ನೀಡಿ ಇದನ್ನು ಬಾಯಲ್ಲಿಟ್ಟುಕೊಂಡು ಅಗಿ
ಶಿವ ನಿನಗೆ ಒಳ್ಳೆದು ಮಾಡ್ಲಿ ಎಂದಾಗ ಮುದುಕಿವೇಷದ ಪಿಶಾಚಿಯು ಅಯ್ಯೋ ಆ ಹೆಸರು ಮಾತ್ರ ಹೇಳಬೇಡಿ
ಹೊಟ್ಟೆನೋವು ಜಾಸ್ತಿಯಾಗುತ್ತೆ ಎಂದು ಹೇಳುತ್ತದೆ. ಶಿವನ ಹೆಸರನ್ನು ಹೇಳಬೇಡ ನಿನಗೆ ಬೇಕಾದಷ್ಟು
ಚಿನ್ನದ ನಾಣ್ಯ ಕೊಡುತ್ತೇನೆ ಎಂದು ಚಿನ್ನದನಾಣ್ಯಮಾಡುವ ವಿದ್ಯೆ ಕಲಿಸುತ್ತದೆ. ಬೋಳೇಶಂಕರನು
ರಾಜಕುಮಾರಿ ಬಳಿ ಹೋಗಿ ಅವಳಿಗೆ ಬೇರನ್ನುಕೊಟ್ಟು ಜಗಿದು ನುಂಗು ಶಿವ ಒಳ್ಳೇದು ಮಾಡುತ್ತಾನೆ
ಎಂದಾಗ ರಾಜಕುಮಾರಿಯನ್ನು ಹಿಡಿದಿದ್ದ ಪಿಶಾಚಿ ಹೊರಬಂದು ನನ್ನನ್ನು ಬಿಟ್ಟುಬಿಡು ಬೇಕಾದರೆ ನಿನಗೆ
ಸಿಪಾಯಿಗಳನ್ನು ಮಾಡಿಕೊಡುತ್ತೇನೆ ಎಂದು ಹೇಳೂತ್ತಾ ಹುಲ್ಲಿನಿಂದ ಸಿಪಾಯಿಮಾಡುವುದನ್ನು
ತೋರಿಸುತ್ತದೆ.ಅಂತೆಯೇ ಸಿಪಾಯಿಗಳನ್ನು ಹುಲ್ಲುಮಾಡುವುದು ತೋರಿಸಿಕೊಟ್ಟು ಶಿವನಾಮ ಕೇಳುತ್ತಾ
ಸಾಯುತ್ತದೆ. ಹೀಗೆ ನಾಣ್ಯ ಮತ್ತು ಸಿಪಾಯಿಗಳನ್ನು ಮಾಡುವುದು ಕಲಿಯುತ್ತಾನೆ.
೪. ರಾಜಕುಮಾರಿಯ ಹೊಟ್ಟೆನೋವು ಪ್ರಸಂಗದಿಂದ ಬೋಳೇಶಂಕರ ರಾಜನಾದ ಕಥೆಯನ್ನು ತಿಳಿಸಿ.
ಪಿಶಾಚಿಯೊಂದು ಬೋಳೇಶಂಕರನನ್ನು ಹೇಗಾದರೂ ಮಾಡಿ ದಾರಿಗೆ ತರಬೇಕು, ನಮ್ಮ ತಮ್ಮ ಅವನಿಗೆ
ಕೊಟ್ಟ ಬೇರು ಇದೆಯಲ್ಲ. ನಾನು ಹೋಗಿ ರಾಜಕುಮಾರಿನ ಹಿಡಿತೀನಿ , ಅವನು ರಾಜಕುಮಾರಿ ರೋಗ
ವಾಸಿಮಾಡಬೇಕಂತ ಬರ್ತಾನೆ ದಾರಿಯಲ್ಲಿ ನೀನು ಯಾವುದೋ ವೇಷದಲ್ಲಿ ಅವನನ್ನು ಭೇಟಿಮಾಡಿ ಆ ಬೇರು ಕಿತ್ತುಕೋ. ಅರಮನೆಗೆ ಬಂದಮೇಲೆ ರೋಗ ವಾಸಿ
ಮಾಡಲಿಕ್ಕಾಗದಿಲ್ಲವಲ್ಲ ಅವಾಗ ರಾಜನಿಂದ ನಾನು ಅವನ ಕತ್ತುಕುಯ್ಸಿ ಹಾಕ್ತಿನಿ ಎಂದು ಉಪಾಯ ಮಾಡಿತು. ಅಂತೆಯೇ ರಾಜಕುಮಾರಿಗೆ
ಹೊಟ್ಟೆನೋವು ಉಂಟಾಗಿ ಅದನ್ನು ನಿವಾರಿಸುವವರಿಗೆ ರಾಜ್ಯವನ್ನೂ ರಾಜಕುಮಾರಿಯನ್ನು ಕೊಡಲಾಗುವುದು
ಎಂದು ರಾಜ ಡಂಗೂರ ಸಾರಿಸಿದನು. ಬೋಳೇಶಂಕರ ಮತ್ತು ಕೋಡಂಗಿ ಹೊರಟಾಗ ಪಿಶಾಚಿಯು ಮುದುಕಿವೇಷದಲ್ಲಿ
ಬಂದು ಹೊಟ್ಟೆನೋವು ಎಂದು ಹೇಳುತ್ತ ಬೇರಿನ ಚೂರನ್ನುಪಡೆಯಲು ಪ್ರಯತ್ನಿಸುತ್ತದೆ. ಶಿವನಾಮ
ಹೇಳುತ್ತ ಬೇರನ್ನು ಕೊಡಲು ಆ ಹೆಸರನ್ನು ಮಾತ್ರ ಹೇಳಬೇಡ ಎಂದು ಹೇಳುತ್ತಾ ನಿಜರೂಪಧರಿಸಿದ ಪಿಶಾಚಿ
ಚಿನ್ನದ ನಾಣ್ಯಮಾಡುವುದನ್ನು ಹೇಳಿಕೊಟ್ಟು ಶಿವನಾಮದಿಂದ ಸಾಯುತ್ತದೆ. ಅಂತೆಯೇ ರಾಜಕುಮಾರಿಗೆ
ಬೇರಿನ ಚೂರನ್ನು ಕೊಡುವಾಗ ಬೋಳೇಶಂಕರನು ಜಗಿದು
ನುಂಗು ಶಿವ ಒಳ್ಳೇದು ಮಾಡುತ್ತಾನೆ ಎಂದಾಗ ರಾಜಕುಮಾರಿಯನ್ನು ಹಿಡಿದಿದ್ದ ಪಿಶಾಚಿ ಹೊರಬಂದು
ನನ್ನನ್ನು ಬಿಟ್ಟುಬಿಡು ಬೇಕಾದರೆ ನಿನಗೆ ಸಿಪಾಯಿಗಳನ್ನು ಮಾಡಿಕೊಡುತ್ತೇನೆ ಎಂದು ಹೇಳುತ್ತಾ
ಹುಲ್ಲಿನಿಂದ ಸಿಪಾಯಿಮಾಡುವುದನ್ನು ತೋರಿಸುತ್ತದೆ ಶಿವನಾಮ ಕೇಳುತ್ತಾ ಸಾಯುತ್ತದೆ.
೫. ತನ್ನ ಕನಸನ್ನು ಕುರಿತು ಬೋಳೇಶಂಕರ ಮಂತ್ರಿಗೆ ಹೇಳಿದ್ದೇನು?
ರಾಜಕುಮಾರಿಯ ಹೊಟ್ಟೆನೋವನ್ನು ಹೋಗಲಾಡಿಸಲು ಅರಮನೆಗೆ ಬಂದು ರಾಜಕುಮಾರಿಯನ್ನು ಪಿಶಾಚಿಯ ಹಿಡಿತದಿಂದ
ಬಿಡಿಸಿದ ಬೋಳೇಶಂಕರನ ಕುರಿತು ಮಂತ್ರಿಗಳು ನೀವು ಕೊಟ್ಟ ಮದ್ದಿನಿಂದ ರಾಜಕುಮಾರಿಯ ಹೊಟ್ಟೆನೋವು ವಾಸಿಯಾದ್ದು
ಮಾತ್ರವಲ್ಲ ನಿಮಗೇ ಅವಳನ್ನು ಕೊಟ್ಟು ಮದುವೆ ಮಾಡಿ ರಾಜನನ್ನಾಗಿ ಮಾಡಬೇಕೆಂದು ರಾಜರು ತೀರ್ಮಾನಿಸಿಬಿಟ್ಟಿದ್ದಾರೆ. ಬೇಗ ಬಂದು ಪದವಿಯನ್ನು ಒಪ್ಪಿಕೋಬೇಕು
ಎಂದಾಗ ಅವರ ಅಭಿಲಾಷೆಯನ್ನು ಒಪ್ಪದೆ ನದಿಯನ್ನು ಬಂದಿಸಲಾಗದು ನೀರಿಗೆ ಅದರದೇ ನಿಯಮಗಳಿವೆ.
ನಾನು ರಾಜನಾದರೆ ಸೈನ್ಯ ಇರೋದಿಲ್ಲ ,ರಾಜ-ರಾಣಿಯರಿಂದ ಹಿಡಿದು ಎಲ್ಲರೂ ದುಡಿಯುತ್ತಾರೆ ಎಲ್ಲರು ಉಣುತ್ತಾರೆ. ದುಡಿಯದ ಸೋಮಾರಿಗಳಿಗೆ ಖಂಡಿತಾ ಅವಕಾಶ ಇರುವುದಿಲ್ಲ. ಪ್ರಜೆಗಳಿಗೆ
ರಕ್ಷಣೆಗೆ ಸೈನ್ಯಬೇಡವೇ ಬೇಕಿಲ್ಲಎಂದೇ ಉತ್ತರಿಸುತ್ತಾ ದಾರಿತಪ್ಪಿದವರಿಗೆ ಗಾದೆ ಬಲ್ಲವರು ಬುದ್ದಿ
ಹೇಳುತ್ತಾರೆ. ನಾಣ್ಯ ಇಲ್ಲ
ಎಂದಾದರೆ ಸಂಗ್ರಹ ಬೇಕಿಲ್ಲ ಎಂದು ಹೇಳುತ್ತಾನೆ.
೬. ಸೈನಿಕರು ಹಾಡಿದ ಸಿಟಿ ಹಾಡಿನ ಸಾರಾಂಶವೇನು?
ಜಯವು ನಮ್ಮಕೋವಿಗೆ , ದೇವರಂಥ ಕೋವಿಗೆ,ಕೆಂಪುಭಾಷೆಯಾಡುವ , ಗುಂಡು ಮಳೆಯ ಸುರಿಸಿ ಶಾಂತಿ
ಬೆಳೆವ ಕೋವಿಗೆ ಎಂದು ಹಾಡುತ್ತಾ ಮಿಲ್ಲಿನ ಹೊಗೆ ದಟ್ಟವಾಗಿ ತುಂಬಿದ ನೀಲಿಯ ಬಾನು. ಸೈರನ್ನಿನ
ದನಿತುಂಬಿದೆ, ಕೊಳಗೇರಿ ಕೊಚ್ಚೆಯಲ್ಲಿ ತೇಲಾಡುವ ಮಕ್ಕಳು, ಆಲದೆಲೆಯಮೇಲೆ ಆಡುವ ಕ್ಯಾಲೆಂಡರ್
ಕೃಷ್ಣ, ಪೆಟ್ರೋಲ್ ವಾಸನೆಯನ್ನು ಹೊಂದಿರುವ ತಣ್ಣನೆ ಗಾಳಿ, ಕುಂಡದ ಗಿಡ,ಬಳ್ಳಿಗಳೆಲ್ಲ
ಮಸಿಹಿಡಿದು ಕಪ್ಪಾಗಿರುವುದು, ಎಂದು ಸಿಟಿ ಬಗ್ಗೆ
ಸೈನಿಕರು ಹಾಡುತ್ತಾರೆ. ಈ ಮಾತುಗಳಲ್ಲಿ ಹಿಂಸೆ, ಕ್ರಾಂತಿ , ನಗರದ ಕಲುಷಿತ ವಾತಾವರಣ,
ಕೊಳೇಗೇರಿ, ಮಾಲಿನ್ಯದಿಂದ ಹಾಳಾಗಿರುವ ನೆಲ, ಜಲ,
ಗಾಳಿ , ಜನ ಎಲ್ಲದರ ಬಗ್ಗೆ ಹೇಳುತ್ತಾರೆ. ಗಿಡಮರಗಳೆಲ್ಲ ವಾಹನದ ಹೊಗೆಯಿಂದ ಕಪ್ಪಾಗಿವೆ ,
ಗಾಳಿಯಲ್ಲಿ ಪೆಟ್ರೋಲ್ ವಾಸನೆಯೇ ತುಂಬಿದೆ ಎಂದು ಹಾಡುತ್ತಾರೆ.
೭. ಸೈತಾನನು ತನ್ನ ಪರಿಚಯ ಮಾಡಿಕೊಂಡ ಬಗೆ ಹಾಗೂ ಬಂದಂಥ ಕಾರಣವನ್ನು ತಿಳಿಸಿ.
ಸರ್ವರ ಕೆಡುಕಿನ ಒಡೆಯನಾದ ಎಲ್ಲರ ಚಿತ್ತದಲ್ಲಿ ನರಕಗಳನ್ನು ಸೃಷ್ಟಿಸಿ ಜೀವರಸವನ್ನು
ಬತ್ತಿಸುತ್ತ ಕತ್ತಲೆಯ ನಿಜಜನಕ ಬಂದ ಎಂದು ಭಾಗವತ ಹೇಳಿದರೆ, ಸೈತಾನನು ಈ ಭೂಮಿಯಲ್ಲಿ ಎಲ್ಲರಿಗೆ
ಅಹಂಕಾರವನ್ನು ನೀಡಿ ಅವರಿಗೆ ದುರ್ವ್ಯಸನಗಳನ್ನು ಅಂಟಿಸಿ ನಿರ್ವಂಶಮಾಡುತ್ತಾ, ಸೃಷ್ಟಿಯನ್ನು
ಹಾಳು ಮಾಡುವಂತಹ ಸುಳ್ಳಿಗೆ ಹಳಬ, ಸತ್ಯಕ್ಕೆ ಹೊಸಬ , ಬಗೆ ಬಗೆ ಭ್ರಮೆಗಳನ್ನು ಸೃಷ್ಟಿಸಿ ಸುಂದರ
ಸುಳ್ಳುಗಳ ಸಾಗರದಲ್ಲಿ ಮಾನವರನ್ನು ಅದ್ದುತ್ತಾ, ಅವರ ನಾಶವನ್ನು ಜೀವನಾಧಾರ ಮಾಡಿಕೊಂಡಿರುವ
ಧೀಮಂತ ನಾನು ಎಂದು ಸೈತಾನ ದೊರೆ ಹೇಳಿಕೊಳ್ಳುತ್ತಾನೆ. ಅಲ್ಲದೆ ಬೋಳೇಶಂಕರ ಮತ್ತು ಅವನ ಅಣ್ಣಂದಿರ
ನಡುವೆ ಕಲಹ ಉಂಟುಮಾಡಿಸಿ, ಪರಸ್ಪರ ಕಿತ್ತಾಡುವಂತೆ ಮಾಡಿ ಅವರನ್ನು ಸಾಯುವಂತೆ ಮಾಡುವುದು. ಎಂದು
ಸೈತಾನ ದೊರೆ ಹೇಳಿಕೊಳ್ಳುತ್ತಾನೆ
೮. ಬೋಳೇಶಂಕರ ತನ್ನ ಅಣ್ಣಂದಿರಿಗೆ ಸಿಪಾಯಿ ಮತ್ತು ನಾಣ್ಯಗಳನ್ನು ಮಾಡಿಕೊಡಲು ಏಕೆ
ನಿರಾಕರಿಸುತ್ತಾನೆ?
ಅನ್ಯರಿಂದ ಕಿರೀಟ ಕಸಿಯಬೇಕಾದರೆ
ಹತ್ತುಪಟ್ಟು ಹೆಚ್ಚಿನ ಸೈನ್ಯ ಬೇಕು. ಬೋಳೇಶಂಕರನ
ದಡ್ಡತನವನ್ನು ಸೈನ್ಯವನ್ನಾಗಿ ಮಾರ್ಪಡಿಸಿ ಲಾಭ ಮಾಡಿಕೊಳ್ಳಬೇಕೆಂದು ಕೊಂಡ ಸರದಾರನು ತಮ್ಮನ
ಬಳಿಗೆ ಬಂದು ನನ್ನ ಬಳಿ ಸಾಕಾಗುವಷ್ಟು ಜವಾನಾರಿಲ್ಲ. ಹುಲ್ಲಿನ ಒಂದೆರಡು ಬಣವೆಯಷ್ಟು ಜವಾನರನ್ನು
ಮಾಡಿಕೊಡು ಪ್ರಪಂಚದ ರಾಜರನ್ನೆಲ್ಲ ಗೆದ್ದು ನೀನು ಅಭಿಮಾನ ಪಡುವಹಾಗೆ ಮಾಡುತ್ತೇನೆ ಎಂದಾಗ ನಿನ್ನ
ಜವಾನರು ಜನರನ್ನು ಕೊಲ್ಲುತ್ತಿದ್ದಾರೆ. ಮಕ್ಕಳು , ವಯಸ್ಸಾದವರು ಅನಾಥರಾಗುತ್ತಿದ್ದಾರೆ,
ಆದುದರಿಂದ ನಿನಗೆ ಜವಾನರನ್ನು ಮಾಡಿಕೊಡುವುದು ಮೂರ್ಖತನ ಎಂದು ಹೇಳಿದನು . ಸಾವ್ಕಾರಣ್ಣನು
ತಮ್ಮರಾಜ್ಯದಲ್ಲಿ ತೆರಿಗೆ ಕೊಡುವ ಜನರೆಲ್ಲ ತಮ್ಮನ ರಾಜ್ಯಕ್ಕೆ ವಲಸೆಹೊಗುತ್ತ ಇರುವುದು, ರಾಜ್ಯದ
ಬಂಡಾರ ಖಾಲಿಯಾಗಿರುವುದು ಚಿಂತೆಗೆ ಕಾರಣವಾಗಿ ಬೋಳೇಶಂಕರಬಳಿ
ಬಂದು ನಾನು ನಿನ್ನ ಹಿತೈಷಿ ನನಗೆ
ಮಾತುಕೊಟ್ಟಿದ್ದಂತೆ ಹತ್ತೆಂಟು ಲಾರಿ ಚಿನ್ನದ ನಾಣ್ಯ ಮಾಡಿಕೊಡುತ್ತೀ ತಾನೆ ಎಂದಾಗ ಬೋಳೇಶಂಕರನು
ನಿನ್ನ ತೆರಿಗೆ ಭಾರಸಹಿಸದೆ ಜನ ತಮ್ಮಲ್ಲಿಯ ಹಸು-ಕರು ಮಾರಿ ತೆರಿಗೆ ಕಟ್ಟಿ ನನ್ನ ರಾಜ್ಯಕ್ಕೆ
ವಲಸೆ ಬರುತ್ತಿದ್ದಾರೆ. ನಿನ್ನ ಕಾರ್ಖಾನೆಗಳ ಹೊಗೆ ನುಂಗಲಾರದೆ ಜನ ಓಡಿ ಬರುತ್ತಿದ್ದಾರೆ.
ಬೆಳೆಯೋ ಮಕ್ಕಳಿಗೆ ಹಾಲು ಸಿಕ್ಕೋದಿಲ್ಲ ಹಾಗಾಗಿ ನಿನಗೆ ನಾನು ಚಿನ್ನದ ನಾಣ್ಯ ಮಾಡಿಕೊಡುವುದಿಲ್ಲ
ಎಂದು ಹೇಳಿದನು.
೯. ಯುದ್ಧಮಾಡಲು ಸೈನಿಕರು ಏಕೆ ನಿರಾಕರಿಸುತ್ತಾರೆ?
ಬೋಳೆಶಂಕರನನ್ನು ನಾಶಮಾಡಲು ಪಿಶಾಚಿಗಳು ಪ್ರಯತ್ನಿಸಿ ವಿಫಲರಾದಮೇಲೆ ಅವರನ್ನು ಭೂಲೋಕಕ್ಕೆ
ಕಳುಹಿಸಿದ್ದ ಸೈತಾನನೇ ಭೂಮಿಗೆ ಬಂದು ಸೈನಿಕರನ್ನು ಸೃಷ್ಟಿಸಿ ಬೋಳೇಶಂಕರನ ಊರಿನ ಜನರನ್ನು ಹಿಂಸೆ
ಮಾಡಿರಿ ಎಂದಾಗ ಅವರು ಅದರಂತೆ ಮಾಡಲಾಗಲಿಲ್ಲ
ಸೈತಾನ ಪ್ರಶ್ನಿಸಿದಾಗ ಆ ಊರಿನ ಜನ ತಮ್ಮನ್ನು ಪ್ರೀತಿಯಿಂದ , ಗೆಳೆತನದಿಂದ
ಕಾಣುತ್ತಿದ್ದರು. ಮನೆಗಳನ್ನು ಲೂಟಿಮಾಡಲು ಹೋದರೆ ಏನು ಬೇಕೋ ತೆಗೆದುಕೊಂಡು ಹೋಗಿ ಎಂದು
ಹೇಳುತ್ತಿದ್ದರು. ಜಗಳದ ಭಾಷೆ ಮಾತನಾಡಿದರೆ ಸ್ನೇಹದ ಭಾಷೆಯಲ್ಲಿ ಉತ್ತರಿಸುತ್ತಿದ್ದರು. ಹಾಗಾಗಿ ಯುದ್ಧಮಾಡಲು ಸೈನಿಕರು ನಿರಾಕರಿಸಿದರು.
೧೦. ಸೈನಿಕರು ಏನೇನನ್ನು ನಾಶ ಮಾಡಿದರು ಎಂದು ಶಿವಪುರದ ಜನರು ಹೇಳುತ್ತಾರೆ?
ಮುಗ್ಧಜನರ ಮನೆಗಳಿಗೆ ಬೆಂಕಿ ಹಾಕಿದರು, ಮನೆಗೆ ನುಗ್ಗಿ ಲೂಟಿಮಾಡಲು ಜನ ಏನುಬೇಕೋ ತೆಗೆದುಕೊಂಡು ಹೋಗಿ ಎಂದು ಹೇಳಿದರೂ
ಮನೆಯನ್ನು ಹಾಳುಗೆಡವುತ್ತಿದ್ದರು. ದನಕರುಗಳನ್ನು ಕೊಂದರು, ತೋಟಗಳಿಗೆ ನುಗ್ಗಿ ಎಳನೀರು ಕುಡಿದು
ಮರಗಳನ್ನೇ ಕತ್ತರಿಸಿದರು. ಹಸಿರಾದ ಗದ್ದೆಗಳನ್ನು ಸುಟ್ಟರು ಏನೆಲ್ಲಾ ಮಾಡಿದರೂ ಶಿವಪುರದ ಜನ
ಅಸಮಧಾನ ಗೊಳ್ಳಲಿಲ್ಲ.
೧೧. ಚಿನ್ನ ತೆಗೆದುಕೊಂಡು ಅನ್ನಕೊಡಿ ಎಂದ ಸೈತಾನನಿಗೆ ಶಿವಪುರದ ಜನರು ಹೇಗೆ
ಪ್ರತಿಕ್ರಿಯಿಸಿದರು?
ಸೈತಾನ ಮನುಷ್ಯರೂಪದಲ್ಲಿ ಬಂದು ಹಸಿವೆಯಾಗಿದೆ ಅನ್ನಕೊಡಿ ಪುಕ್ಕಟೆಬೇಡ ಚಿನ್ನದ
ನಾಣ್ಯಕೊಡುತ್ತೇನೆ ಎಂದಾಗ ಜನ ಚಿನ್ನದ ನಾಣ್ಯ ತೆಗೆದುಕೊಂಡು ಅನ್ನಕೊಡಲು ಸಾಧ್ಯವಿಲ್ಲ ನೀನು ಕೊಡುವಂತ
ನಾಣ್ಯಗಳನ್ನು ನಮ್ಮ ಮಕ್ಕಳು ಆಟವಾಡಲು ಇಟ್ಟುಕೊಂಡಿದ್ದಾರೆ. ಚಿನ್ನಕ್ಕೆ ಯಾವಬೆಲೆಯೂ ಇಲ್ಲ.
ನಮ್ಮ ಬಳಿಯೇ ಬೊಗಸೆ ಚಿನ್ನದ ನಾಣ್ಯಗಳಿವೆ. ಎಂದು ಹೇಳಿದರು. ದೇವರ ಹೆಸರಲ್ಲಿ ಊಟಹಾಕುವುದಾಗಿ
ಹೇಳಿದರೆ ಸೈತಾನ ಊಟಮಾಡಲು ಒಪ್ಪಲಿಲ್ಲ. ಆಗ ಒಪ್ಪತ್ತು ಕೆಲಸ ಮಾಡಿ ಊಟಮಾಡಬಹುದು ಎಂದು
ಸಲಹೆನೀಡಿದರು.
೧೨. ತಲೆಯಿಂದ ಕೆಲಸ ಮಾಡಬೇಕೆಂಬ ಸೈತಾನನ ಭಾಷಣದ ಸ್ವಾರಸ್ಯವನ್ನು ವಿವರಿಸಿ.
ಸೈತಾನ ತಲೆಯಿಂದ ಕೆಲಸ ಮಾಡಿ ಬದುಕುವುದು ಜಾಣ್ಮೆ. ಮನುಷ್ಯನಿಗಿರುವ ತಲೆ ಉಪಯೋಗ ವಾಗಬೇಕು.
ಮೊದಲನೆಯದಾಗಿ ನಾಣ್ಯಗಳ ಬಳಕೆಯನ್ನು ಜಾರಿಗೆ ತಂದರೆ ೧೦ ಜೀಲದ ಧಾನ್ಯವನ್ನು ನಾಣ್ಯದ ರೂಪದಲ್ಲಿ
ಕೈಲಿ ಇಟ್ಟುಕೊಳ್ಳಬಹುದು ನಾಣ್ಯದ ಬಳಕೆಯಿಂದ ಜನಕೋಟಿಯನ್ನು ನಿಯಂತ್ರಿಸಬಹುದು. ಬುದ್ದಿಯನ್ನು
ಉಪಯೋಗಿಸುವುದರಿಂದ ಮಾತ್ರ ಇದು ಸಾಧ್ಯ. ತಲೆಯನ್ನು ಉಪಯೋಗಿಸದೆ ಇರುವುದರಿಂದ ನೀವೆಲ್ಲ ನಗರದ
ಸುಖದಿಂದ ವಂಚಿತರಾಗಿದ್ದೀರಿ. ತಲೆಯ ಬೆಲೆ ತಿಳಿದರೆ ಸ್ವರ್ಗಸುಖ ಸಿಗುವ ಸಿಟಿಯನ್ನು ಕಟ್ಟಬಹುದು
ಎಂದು ಹೇಳುವುದರ ಮೂಲಕ ತಲೆಯಿಂದ ಕೆಲಸ ಮಾಡುವ ಅಗತ್ಯವನ್ನು ಹೇಳುತ್ತಾನೆ.
೧೩. ಶ್ರಮಜೀವನ ಹಾಗೂ ಸರಳ ಬದುಕನ್ನು ರೂಢಿಸಿಕೊಂಡವರಿಗೆ ಪಿಶಾಚಿಗಳು ಏನೂ ಮಾಡಲಾರವು
ಎಂಬುದು ನಾಟಕದಲ್ಲಿ ಹೇಗೆ ಮೂಡಿಬಂದಿದೆ?
ಶ್ರಮವಿಲ್ಲದೆ ಅತ್ಯಧಿಕ ಹಣವನ್ನು ಸಂಪಾಧಿಸುವ , ವೈಭವದ ಜೀವನ ನಡೆಸುವುದೇ ಆದರ್ಶ ಎಂಬ
ಬಗೆಯನ್ನು ಪಿಶಾಚಿಗಳು ಸಾರಿ ಸಾರಿ ಹೇಳಿದರೂ ಅದರ ಕಡೆಗೆ ಸಾಗದೆ ದುಡಿಮೆಯೇ ಬದುಕು ಹಸಿರೇ ಉಸಿರು
ಎಂಬಂತೆ ಬಾಳಿದ ಸರಳ ಬದುಕಿನ ಬೋಳೇಶಂಕರನನ್ನು ಪಿಶಾಚಿಗಳು ಏನೂ ಮಾಡಲಾರದೆ ಸೋತು ಸಾಯುವುದನ್ನು
ಚಿತ್ರಿಸಲಾಗಿದೆ. ಬೋಳೇಶಂಕರನ ಈ ನಂಬಿಕೆಯೇ
ಪಿಶಾಚಿಗಳೊಂದಿಗೆ ಅದರ ಮಾಲಿಕ ಸೈತಾನನನ್ನೂ ನಿವಾರಿಸಲು ಸಹಕಾರಿಯಾಯಿತು. ಅಣ್ಣಂದಿರು
ಆಸ್ತಿಯನ್ನು ಲಪಟಾಯಿಸಿ ದುಡಿಯದೆ ಉಣ್ಣುವ ಪ್ರವೃತ್ತಿಯಿಂದ ಎಲ್ಲವನ್ನೂ ಕಳೆದುಕೊಂಡು
ಮತ್ತೆಬೋಳೇಶಂಕರನ ಆಶ್ರಯಕ್ಕೆ ಬರುವಂತಾಯಿತು.
ಪಿಶಾಚಿಗಳು ತೋರಿಸಿಕೊಟ್ಟ ನಾಣ್ಯ ಮತ್ತು ಸಿಪಾಯಿಗಳನ್ನು ಉಂಟುಮಾಡುವ ವಿಧಾನವನ್ನು ಆಟದ ಮೋಜಿಗೆ
ಬಳಸಿಕೊಂಡ, ರಾಜಕುಮಾರಿಯನ್ನು ವಿವಾಹವಾದರೂ ಸೈನ್ಯವಿಲ್ಲದೆ , ಹಣದ ಅವಶ್ಯಕತೆ ಬಾರದಂತೆ
ಸರಳತೆಯಿಂದ ಬದುಕಿ ಜನಾನುರಾಗಿಯಾಗಿದ್ದು, ದುಡಿದವರಿಗೆ ಮೊದಲ ಪಂಕ್ತಿಯ ಊಟಹಾಕುವ ಪದ್ದತಿ
ಎಲ್ಲವೂ ಶ್ರಮಜೀವನ , ಸರಳಬದುಕನ್ನು ರೂಪಿಸಿಕೊಂಡವರನ್ನು ಯಾರೂ ಏನೂ ಮಾಡಲಾರರು ಎಂಬುದನ್ನು
ಸೂಚಿಸುತ್ತವೆ.
೧೪. ಹಸಿರೇ ಉಸಿರು ಎಂಬುದನ್ನು ಬೋಳೇಶಂಕರನ ಪಾತ್ರದ ಮೂಲಕ ನಾಟಕಕಾರರು ಹೇಗೆ
ಸ್ಪಷ್ಟಪಡಿಸಿದ್ದಾರೆ? ವಿಮರ್ಶಿಸಿ.
ಹಸಿರು ಸಮೃದ್ಧಿಯ ಸಂಕೇತ. ಗ್ರಾಮೀಣ ಸಂಸ್ಕೃತಿಯ ಸೊಗಡು.
ಶ್ರಮಜೀವನದ ಮೂಲಕ
ಹಸಿರನ್ನು ಕಾಪಾಡಿಕೊಳ್ಳಬಹುದು. ಎರಡು+ಎರಡು =ಐದು ಮಾಡುವ ಸಂಸ್ಕೃತಿ ನಗರ ಜೀವನದ ಸಂಸ್ಕೃತಿ.
ಮೈಗಳ್ಳರ ಸಂಸ್ಕೃತಿ.
ಇದಕ್ಕೆ ವಿರೋಧಿ
ನಮ್ಮ ಬೋಳೇಶಂಕರ . ಸರಳ ಬದುಕು, ಅಧಿಕಾರ ವಿಮುಖತೆ, ಶ್ರಮಜೀವನ, ಕೃಷಿ ಪ್ರೀತಿ, ದುಡಿದವರಿಗೆ ಊಟ ಇತ್ಯಾದಿ ಅಂಶಗಳು ಬೋಳೇಶಂಕರನ ಸಹಜ ಮೌಲ್ಯಗಳು.
ನಾಟಕದ
ಪ್ರಾರಂಭದಿಂದ ಅಂತ್ಯದ ವರೆಗೆ ಇದನ್ನೇ ನಾವು ಬೋಳೇಶಂಕರನ ಮಾತುಗಳಲ್ಲಿ ಕಾಣುತ್ತೇವೆ.
ಸೋದರರು ಆಸ್ತಿ ಲಪಟಾಯಿಸಿದಾಗ,
ಆಸ್ತಿ ಕಳೆದುಕೊಂಡು
ಮತ್ತೆ ಬೋಳೇಶಂಕರನ ಮನೆಯಲ್ಲಿ ಇರಲು ಬಂದಾಗ, ತನ್ನ ಮನೆಯಲ್ಲೇ ಕೊಟ್ಟಿಗೆಯಲ್ಲಿ ಊಟಕ್ಕೆ
ಕುಳಿತುಕೋ ಎಂದಾಗ , ರಾಜಕುಮಾರಿಯ ವಿವಾಹ ಸಂದರ್ಭದಲ್ಲಿ
ಎಲ್ಲಸಮಯದಲ್ಲೂ ಹಸಿರೇ ಉಸಿರು ಎಂಬ ಭಾವ ಪ್ರಕಟವಾಗುವುದಲ್ಲದೇ ಹಸಿರುಸಾಮ್ರಾಜ್ಯದ ನಮ್ರಪ್ರಜೆ
ಎಂಬುದನ್ನು ತೋರಿಸಿಕೊಳ್ಳುತ್ತಾನೆ.
*************ಓಂ************