Tuesday, September 9, 2014

vachanagaLu basavaNNa , urilimga peddi



ವಚನಗಳು
ಬಸವಣ್ಣನವರು ತಮ್ಮ ವಚನದಲ್ಲಿ ಮನುಷ್ಯ ಮನುಷ್ಯರ ನಡುವೆ ಇರಬೇಕಾದ ಮಾನವೀಯ ಅಂತಃಕರಣಾನ್ನು , ಹೃದಯವೈಶಾಲ್ಯತೆಯನ್ನು ಇಲ್ಲಿ ತಿಳಿಸುತ್ತಾರೆ.
ಮನಮನಗಳು ಬೆರೆತಾಗ ಅಹಂಕಾರಕ್ಕೆ ಸ್ಥಳವಿರದಂತೆ ತನು ಕರಗುತ್ತದೆ. ಪರಸ್ಪರ ಸ್ಪರ್ಶಿಸಿದಾಗ ದೇಹ ಪುಳಕಗೊಳ್ಳುತ್ತದೆ. ಪ್ರಿಯರನ್ನು ಕಂಡಾಗ ಅಶ್ರುಜಲ (ಕಣ್ಣೀರು) ಉಕ್ಕಿಹರಿಯುತ್ತದೆ. ಪರಸ್ಪರ ಮಾತನಾಡಿದಾಗ ಧ್ವನಿ ಆರ್ದ್ರಗೊಳ್ಳುತ್ತದೆ. ಇಂತಹ ಭಾವಗಳು ಭಕ್ತನಲ್ಲಿರಬೇಕು. ಆದರೆ ಎನ್ನಲ್ಲಿ ಇಂತಹ ಚಿಹ್ನೆ ಇಲ್ಲವಾದುದರಿಂದ ನಾನು ಡಂಬಕನೇ ಸರಿ ಎಂದು ಬಸವಣ್ಣ ಭಾವಿಸುತ್ತಾರೆ. ಭಕ್ತನಿಗೆ ಪ್ರೀತಿ, ವಿಶ್ವಾಸ , ಮಾನವೀಯತೆಯ ಗುಣಗಳಿರಬೇಕು ಭಕ್ತಿಗೆ ಇವೇ ಬೇಕಾಗಿರುವಂತಹುದು ( ಭಗವಂತನಲ್ಲಿ ವ್ಯಾಪಾರ ಮಾಡಬಾರದು ಪ್ರೀತಿ ಹೊಂದಿರಬೇಕು/ ನಿಷ್ಕಾಮ ಭಕ್ತಿ ಎಂದೂ ಹೇಳಬಹುದು.)
ಶಿವಪಥವನ್ನು ಅರಿಯದವರು ಕೈಯಲ್ಲಿ ಲಿಂಗವನ್ನು ಹಿಡಿದು ಪುಷ್ಪಗಳಿಂದ ಅರ್ಚಿಸಿದ ಮಾತ್ರಕ್ಕೆ ಅದು ಸದ್ಭಕ್ತಿಯ ಲಕ್ಷಣವಲ್ಲ. ಶಿವಪಥವನ್ನು ಅರಿಯುವುದು ಮುಖ್ಯ. ಇದನ್ನೇ ಬಸವಣ್ಣನವರು ಅರ್ಥರೇಖೆ ಇದ್ದು ಅನುಭವಿಸಲು ಆಯುಷ್ಯರೇಖೆ ಇಲ್ಲದಿದ್ದರೆ ಫಲವೇನು (ಕೋಟಿಕೋಟಿ ಹಣವಿದ್ದು ಅದರ ಸದುಪಯೋಗಮಾಡಿಕೊಳ್ಳಲು ಆಯುಷ್ಯವೇ ಇಲ್ಲದಿದ್ದರೆ ಎಲ್ಲವೂ ವ್ಯರ್ಥ ಅಲ್ಲವೇ?), ಹೇಡಿಯ ಕೈಯಲ್ಲಿ ಚಂದ್ರಾಯುಧಇದ್ದು ಫಲವೇನು?(ಹೇಡಿಯಾದವನ ಕೈಯಲ್ಲಿ ಯಾವುದೇ ಶಸ್ತ್ರವಿದ್ದರೂ ಅದರ ಬಳಕೆ ಅವನಿಗೆ ಸಾಧ್ಯವಾಗದೆ ವ್ಯರ್ಥವಾಗುತ್ತದೆ)ಕುರುಡನಾದವನ ಕೈಯಲ್ಲಿ ರುವ ಕನ್ನಡಿ, ಕೋತಿಯಕೈಯಲ್ಲಿರುವ ಮಾಣಿಕ್ಯ ಎರಡೂ ವ್ಯರ್ಥ. ರತ್ನದ ಬೆಲೆ ಅರಿತವನಿಗೇ ರತ್ನದ ಮಹತ್ವ ಅಂತೆಯೇ ಶಿವಲಿಂಗವನ್ನು ಶಿವಪಥದಲ್ಲಿ ಇಲ್ಲದವನು ಹೇಗೆ ತಿಳಿಯಲು ಸಾಧ್ಯ ಎಂದಿದ್ದಾರೆ.
ಕಾಯುವದೈವವೇ ಕೊಲ್ಲಲು ಬಂದರೆ ಯಾರಬಳಿ ದೂರು ಹೇಳುವುದು. (ಕಾವರೇ ಕಣೆಗೊಂಡರ್ –ನಾಗಚಂದ್ರ) ಬೇಲಿಯೇ ಹೊಲ ಮೇಯ್ದರೆ ಇನ್ನಾರಿಗೆ ಕೇಳೋಣ ಎಂಬ ವಿಚಾರಗಳನ್ನೇ ಈ ವಚನದಲ್ಲಿ ವಿವರಿಸಿದ್ದಾರೆ. ಒಲೆಯು ಹತ್ತಿ ಉರಿದಾಗ ಬಿಸಿಯ ಝಳದಿಂದ ತಪ್ಪಿಸಿಕೊಳ್ಳಲು ದೂರ ನಿಲ್ಲಬಹುದು. ಆದರೆ ನಮ್ಮ ಕಾಲ ಅಡಿಯಲ್ಲಿರುವ ಭೂಮಿಯೇ ಹತ್ತಿ ಉರಿಯತೊಡಗಿದರೆ ನಿಲ್ಲುವುದೆಲ್ಲಿ?  ಕೆರೆಯ ನೀರನ್ನು ಹಿಡಿದಿಡಲಿ ಎಂದು ಕಟ್ಟಿದ ಏರಿ(ಮಣ್ಣಿನ ದಿಬ್ಬ) ಕೆರೆಯ ನೀರನ್ನೆಲ್ಲಾ ಕುಡಿದುಬಿಟ್ಟರೆ, ಹೊಲದ ರಕ್ಷಣೆಗೆಂದು ನಿರ್ಮಿಸಿದ ಬೇಲಿಯೇ ಹೊಲವನ್ನು ಮೇಯ್ದರೆ(  ನಂಬಿದವ್ಯಕ್ತಿಗಳು ಅತ್ಯಾಚಾರಿಗಳಾಗುತ್ತಿರುವ ಇಂದಿನ ಸಂದರ್ಭದಲ್ಲಿ ಈ ವಚನ ಸೂಕ್ತವಾಗುತ್ತದೆ) ಮನೆಯ ಹೆಣ್ಣು ತನ್ನ ಮನೆಯಲ್ಲೇ  ಕಳವು ಮಾಡಿದಾಗ, ತಾಯಿಯ ಹಾಲೇ ವಿಷವಾಗಿ ಮಗುವನ್ನು ಕೊಂದರೆ ಯಾರಿಗೆ ದೂರು ಹೇಳುವುದು.

ಉರಿಲಿಂಗ ಪೆದ್ದಿಯ ವಚನಗಳು.
ಶಿವ ಹಾಗೂ ಶಿವಲಿಂಗದಲ್ಲಿ ಯಾವುದೇ ಬೇಧವಿಲ್ಲಎಂಬುದನ್ನು ಉದಾಹರಣೆಗಳ ಮೂಲಕ ಇಲ್ಲಿ ಸಾರಿದ್ದಾನೆ.  ಸೂರ್ಯನಿಲ್ಲದೆ ಹಗಲು ಇರುವುದಿಲ್ಲ, ದೀಪವಿಲ್ಲದೆ ಬೆಳಕು, ಹೂವಿಲ್ಲದೆ ಪರಿಮಳ ಅಂತೆಯೇ ಅತಿಶ್ರೇಷ್ಠವಾದ ವಿಚಾರವು ಶಿವನಿಂದ ಮಾತ್ರವೇ ತೋರಿಸಲ್ಪಡುವುದು
ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿದೆ. ದೀಪ ಹಾಗೂ ಸೂರ್ಯನನ್ನು ಬಿಟ್ಟು ಬೆಳಕಿನ ಬಗ್ಗೆ ಯೋಚಿಸಲು ಸಾಧ್ಯವೇಇಲ್ಲ ಅಂತೆಯೇ ಹೂವಿಲ್ಲದೆ ಪರಿಮಳದ ಯೋಚನೆ ಮಾಡಲು ಸಾಧ್ಯವೇ ಎಲ್ಲವೂ ಶಿವನಿಂದ ಆಗಿರುವುದರಿಂದ ಎಲ್ಲೆಡೆ ಶಿವನೇ ತೋರುತ್ತಿದ್ದಾನೆ.
ಸ್ಪರ್ಶಮಣಿಯು ಮುಟ್ಟಿದ್ದನ್ನು ಚಿನ್ನವಾಗಿಸುವ ಶಿಲೆ.  ಇದರಿಂದ ಮಾಡಿದ ಮನೆಯಲ್ಲಿ ವಾಸಿಸುವವನು ಎಂದಾದರೂ ಭಿಕ್ಷೆಗೆ ಹೋಗುವನೇ? ಸದಾ ಶುಭ್ರಜಲ ಹರಿವ ತೊರೆಯಲ್ಲಿ ನಿಂತಿರುವ ವ್ಯಕ್ತಿ ಬಾಯಾರಿತು ಎಂದು ಕೆರೆಯನ್ನು ಹುಡುಕಿ ಹೋಗುವುದಿಲ್ಲ. ಅಂತೆಯೇ ಮಂಗಳಕರವಾದ ಲಿಂಗವನ್ನು ಧರಿಸಿದ ವ್ಯಕ್ತಿ ಇತರ ದೈವವನ್ನು ನೆನಪಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾನೆ.
ಗುರುವಾದವರು ಲಘುವಾಗಿ ವರ್ತಿಸಬಾರದು ಗುರು ಗುರುವೇ ಲಘು ಲಘುವೇ ಗುರು ಲಘುವಾಗಿ ವರ್ತಿಸಿದರೆ ಅದು ಅನಾಚಾರ. ಗುರು ಲಿಂಗ ಜಂಗಮವನ್ನು ಲಘುವಾಗಿ ಕಂಡವ್ಯಕ್ತಿ ತಾನೇ ಲಘುವಾಗುವನು ಎಂದು ಇಲ್ಲಿ ಹೇಳುತ್ತಾನೆ.
ಹಿರಿಯರು ತಮ್ಮ ಹಿರಿತನ ಬಿಟ್ಟು ಸಣ್ಣತನತೋರಿದಾಗ ತಮ್ಮ ಮರ್ಯಾದೆಯನ್ನು ಕಳೆದುಕೊಳ್ಳೂತ್ತಾರೆ. ಅವರು ಮರ್ಯಾದೆ ಕಳೆದುಕೊಂಡಾಗ ಅದು ಅಪಚಾರ. ಹಾಗಾಗಿ ತಮ್ಮ ತಮ್ಮ ನಡವಳಿಕೆ ತಮ್ಮ ತಮ್ಮ ಘನತೆಗೆ ತಕ್ಕಂತೆ ಇರಬೇಕು ಎಂಬುದು ಇವನ ಆಶಯ.

No comments:

Post a Comment