Tuesday, September 2, 2014

muddaNa kavi parichaya

ಮುದ್ದಣ ಹುಟ್ಟಿದ್ದು ಉಡುಪಿಗೆ ಸಮೀಪದ ನಂದಳಿಕೆ ಎಂಬ ಗ್ರಾಮದಲ್ಲಿ, 1870ರ ಜನವರಿ 24ರಲ್ಲಿ. ಅವನ ನಿಜವಾದ ಹೆಸರು ಲಕ್ಷ್ಮೀನಾರಣಪ್ಪ. ಈ ಕವಿ ಬದುಕಿದ್ದು ಮೂವತ್ತೊಂದು ವರ್ಷ ಮಾತ್ರ. ಇಂಗ್ಲಿಷ್ ಶಾಲಾ ವಿದ್ಯಾಭ್ಯಾಸ ಇರದ ಈ ಕವಿ ಶಾಲೆಯೊಂದರಲ್ಲಿ ವ್ಯಾಯಾಮ ಶಿಕ್ಷಕನಾಗಿ ದುಡಿದ. ಶ್ರಮಪಟ್ಟು ಹಳಗನ್ನಡ ಕಾವ್ಯಾಭ್ಯಾಸ ಮಾಡಿ ಅದರಲ್ಲಿ ಆಳವಾದ ಪಾಂಡಿತ್ಯ ಸಾಧಿಸಿಕೊಂಡ. ಮೊದಲು `ರತ್ನಾವಳೀ ಕಲ್ಯಾಣ~, `ಕುಮಾರ ವಿಜಯ~ ಎಂಬ ಎರಡು ಯಕ್ಷಗಾನಗಳನ್ನು ಬರೆದ. ಮುಂದೆ ಹಳಗನ್ನಡ ಭಾಷೆಯಲ್ಲಿ `ಅದ್ಭುತ ರಾಮಾಯಣ~, `ರಾಮಪಟ್ಟಾಭಿಷೇಕ~ ಮತ್ತು `ರಾಮಾಶ್ವಮೇಧ~ ಕೃತಿಗಳನ್ನು ರಚಿಸಿದ. ಈ ಮೂರೂ ಕೃತಿಗಳೂ ರಾಮಕಥೆಯನ್ನೇ ಆಧರಿಸಿದವು.

ಅವುಗಳಲ್ಲಿ `ರಾಮಪಟ್ಟಾಭಿಷೇಕ~ ಪದ್ಯ ರೂಪದಲ್ಲಿದ್ದರೆ ಉಳಿದೆರಡೂ ಗದ್ಯದಲ್ಲಿದೆ. ಇವುಗಳಲ್ಲಿ `ರಾಮಾಶ್ವಮೇಧ~ ಹೆಚ್ಚು ಕಾವ್ಯಸತ್ವದಿಂದ ಕೂಡಿದೆ. ಅವನು `ಗೋದಾವರಿ~ ಎಂಬ ಕಾದಂಬರಿಯೊಂದರ ಸ್ವಲ್ಪ ಭಾಗ ಬರೆದಿದ್ದ. ಅದು ಹಸ್ತಪ್ರತಿ ರೂಪದಲ್ಲೇ ಕಣ್ಮರೆಯಾಗಿ ಹೋಯಿತು. `ಜೋ ಜೋ~ ಎಂಬ ಶಬ್ದಾರ್ಥ ಸಂಬಂಧ ಸಂಶೋಧನ ಲೇಖನವೊಂದನ್ನು `ಚಕ್ರಧಾರಿ~ ಎಂಬ ಕಾವ್ಯನಾಮದಿಂದ `ಸುವಾಸಿನಿ~ ಪತ್ರಿಕೆಯಲ್ಲಿ ಪ್ರಕಟಿಸಿದ್ದ. ಆದರೆ ತನ್ನ ಕೃತಿಗಳನ್ನು ತನ್ನ ಸ್ವಂತ ರಚನೆಗಳೆಂದು ತಿಳಿಸದೆ ಹಿಂದಿನ ಯಾರೋ ಹಳಗನ್ನಡ ಕವಿ ಬರೆದದ್ದೆಂದು ಕಥೆ ಕಟ್ಟಿದ. ಹೆಚ್ಚು ವಿದ್ಯಾಭ್ಯಾಸವಿಲ್ಲದ, ವ್ಯಾಯಾಮ ಶಿಕ್ಷಕನಾದ ತಾನು ಬರೆದದ್ದೆಂದು ಹೇಳಿದರೆ ಅವುಗಳಿಗೆ ತಕ್ಕ ಪುರಸ್ಕಾರ ಸಿಗದೆ ಉದಾಸೀನಕ್ಕೆ ಪಕ್ಕಾಗಬಹುದು ಎಂಬ ಕಾರಣಕ್ಕೆ ಹೀಗೆ ಮಾಡಿದ. ಅವನ ಮೂರು ರಾಮ ಕಥೆಗಳೂ ಮೈಸೂರಿನ `ಕಾವ್ಯ ಮಂಜರಿ~ ಮತ್ತು `ಕಾವ್ಯ ಕಲಾನಿಧಿ~ ಮಾಸಪತ್ರಿಕೆಗಳಲ್ಲಿ ಭಾಗ ಭಾಗವಾಗಿ, ಪೂರ್ತಿ ಪ್ರಕಟವಾದುವು. `ರಾಮಾಶ್ವಮೇಧ~ ಪೂರ್ತಿ ಪ್ರಕಟ ಆದದ್ದನ್ನು ಅವನು ನೋಡಲೇ ಇಲ್ಲ. ಒಂದು ವರ್ಷದ ಚಿಕ್ಕ ಗಂಡು ಮಗು ಮತ್ತು ಪತ್ನಿಯನ್ನು ಬಿಟ್ಟು 1901ರಲ್ಲಿ ಕ್ಷಯ ರೋಗಕ್ಕೆ ಒಳಗಾಗಿ ತೀರಿಕೊಂಡ ಅವನ ಜೀವನವೊಂದು ದುರಂತ ಕಥೆಯಾಗಿ ಹೋಯಿತು. ಲಕ್ಷ್ಮೀನಾರಣಪ್ಪನೇ ಮುದ್ದಣನೆಂದೂ ರಾಮಕಥೆಗಳೆಲ್ಲ ಅವನದೇ ಎಂದು ಲೋಕಕ್ಕೆ ತಿಳಿದದ್ದು ಅವನ ಮರಣಾನಂತರವೇ.

1 comment: