Tuesday, September 2, 2014

ನಾಲಿಗೆ ಒಳ್ಳೆಯದಾದರೆ ನಾಡೆಲ್ಲಾ ಒಳ್ಳೆಯದು

ನಾಲಿಗೆ ಒಳ್ಳೆಯದಾದರೆ ನಾಡೆಲ್ಲಾ ಒಳ್ಳೆಯದು
ನಾಲಿಗೆ ಎಂಬುದು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳದವರಿಗೆ ಈ ಮಾತನ್ನು ಹಿರಿಯರು ಹೇಳಿದ್ದಾರೆ.  ಪ್ರಸ್ತುತ ಚುನಾವಣೆ ಸಂದರ್ಭದಲ್ಲಿ ಒಬ್ಬರಮೇಲೆ ಮತ್ತೊಬ್ಬರು ಎರಚುವ ಕೆಸರನ್ನು ನೋಡುತ್ತಾ , ಕೇಳುತ್ತಾ ಇರುವ ನಾವು ಒಮ್ಮೆ ಈ ಮಾತಿನ ಬಗ್ಗೆ ಯೋಚಿಸುವುದು ಒಳಿತು. ಮಾನ್ಯ ಶತಾವಧಾನಿ ರಾ.ಗಣೇಶ್ ಅವರ ನಾಲಿಗೆ ತೇವವಾದ ಸ್ಥಳದಲ್ಲಿರುವುದರಿಂದ ಸದಾ ಜಾರುತ್ತಿರುತ್ತದೆ. ಅದನ್ನು ಜಾರದಂತೆ ನೋಡಿಕೊಳ್ಳಿ ಎಂಬ ಮಾತು ಎಲ್ಲರಿಗೂ ಸಾರಿ ಸಾರಿ ಹೇಳಬೇಕೆನಿಸುತ್ತದೆ.

ಯದ್ಯದಾಚರತಿ ಶ್ರೇಷ್ಠಃ ....  ಎಂಬ ಸಂಸ್ಕೃತ ಸುಭಾಷಿತದಲ್ಲಿ ಶ್ರೇಷ್ಠರಾದ ಜನರು ಹೇಗೆ ವರ್ತಿಸುತ್ತಾರೋ ಅಂತೆಯೇ ಇತರ ಜನರೂ ವರ್ತಿಸುತ್ತಾರೆ ಎಂದು ಹೇಳಿದಂತೆ ನಮ್ಮ ನಾಲಿಗೆ ನಮ್ಮ ಹಿಡಿತದಲ್ಲಿ ಇದ್ದಷ್ಟೂ ಇಡೀ ಪ್ರಪಂಚ ನಮ್ಮನ್ನು ಗೌರವಿಸುತ್ತದೆ. ಎಲ್ಲ ಜೀವಿಗಳು ಒಳ್ಳೆಯದನ್ನೇ ¸ಒಳ್ಳೆಯ ಮಾತುಗಳನ್ನೇ ಕೇಳಲು ಇಷ್ಟಪಡುವಾಗ  ಅಹಿತವಾಗಿ ಏಕೆ ಮಾತನಾಡಬೇಕು. ಸಂಸ್ಕೃತ ಸುಭಾಷಿತವೊಂದು ವಚನೇಕಾ ದರಿದ್ರತಾ ? ಎಂದು ಕೇಳುತ್ತದೆ. ಮಾತನಾಡುವಲ್ಲಿಯೂ ದಾರಿದ್ರ್ಯವೇಕೆ? ಎಂದು ಪ್ರಶ್ನಿಸಿದೆ.

ನಮ್ಮ ನಮ್ಮ ಸಂಸ್ಕಾರಕ್ಕೆ ತಕ್ಕಹಾಗೆ ನಮ್ಮ ಮಾತು- ನಡೆ ನುಡಿ ಇರುತ್ತದೆ. ಪಂಚತಂತ್ರದ ಕಥೆಯೂ ಇದನ್ನೇ ಹೇಳುತ್ತದೆ. ಎರಡು ಗಿಳಿಗಳ ಕಥೆ : ಒಂದೇ ಗಿಳಿಯ ಎರಡು ಮರಿಗಳಲ್ಲಿ ಒಂದು ಬೇಟೆಗಾರರ ಬಳಿಯಲ್ಲಿಯೂ ಇನ್ನೊಂದು  ಸನ್ಯಾಸಿಗಳ ಆಶ್ರಮದಲ್ಲಿಯೂ ಬೆಳೆದು ತಮ್ಮ ತಮ್ಮ ಸಂಸ್ಕಾರಕ್ಕೆ ತಕ್ಕಹಾಗೆ ಮಾತನಾಡುವುದನ್ನು ನೋಡುತ್ತೇವೆ. ಬೇಟೆಗಾರರ ಬಳಿ ಬೆಳೆದ ಗಿಳಿ ಹೊಡಿ!, ಬಡಿ!, ಕೊಲ್ಲು! ಎಂದೆಲ್ಲಾ ಹೇಳಿದರೆ, ಸನ್ಯಾಸಿಗಳ ಬಳಿ ಬೆಳೆದ ಗಿಳಿಯು ಬನ್ನಿ,  ಕುಳಿತುಕೊಳ್ಳಿ, ನೀರು ಕುಡಿಯಿರಿ, ಫಲ ಸ್ವೀಕರಿಸಿ, ಎಂದೆಲ್ಲಾ ಉಪಚರಿಸುತ್ತದೆ.

ಮಹಾಭಾರತದಲ್ಲಿ ಇದಕ್ಕೆ ಆಧಾರವಾಗಿ ಮತ್ತೊಂದು ಕಥೆಯೊಂದು ಇದೆ. ಗುರು ದ್ರೋಣರು ತಮ್ಮ ಶಿಷ್ಯರನ್ನು ಪರೀಕ್ಷಿಸಲು ಮನಸ್ಸು ಮಾಡಿ ದುರ್ಯೋಧನನನ್ನು ಕರೆದು ಹಸ್ತಿನಾವತಿಯನ್ನು ಒಂದು ಸುತ್ತುಹಾಕಿ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಹುಡುಕಿ ಕರೆದು ತಾ ಎಂದು ಹೇಳಿದರು. ಆದರೆ ದುರ್ಯೋಧನನಿಗೆ ಎಲ್ಲರೂ ಕೆಟ್ಟವರಂತೆಯೇ ಕಾಣುತ್ತಾರೆ. ಅವನು ಹಿಂದಿರುಗಿ ಬಂದು ಗುರುಗಳೊಂದಿಗೆ ತನಗೆ ಇಡೀ ಹಸ್ತಿನಾವತಿಯಲ್ಲಿ ಯಾರೂ ಒಳ್ಳೆಯವರು ಕಾಣಲಿಲ್ಲ ಎಂದು ಹೇಳುತ್ತಾನೆ. ಅಂತೆಯೇ ಧರ್ಮರಾಜ ಯುಧಿಷ್ಠಿರರನ್ನು ಕರೆದು ಹಸ್ತಿನಾವತಿಯನ್ನು ಒಂದು ಸುತ್ತುಹಾಕಿ ಒಬ್ಬ ಕೆಟ್ಟ ವ್ಯಕ್ತಿಯನ್ನು ಹುಡುಕಿ ಕರೆದು ತಾ ಎಂದು ಹೇಳಿದರು. ಆದರೆ ಯುಧಿಷ್ಟಿರನಿಗೆ ಎಲ್ಲರೂ ಒಳ್ಳೆಯವರಂತೆಯೇ ಕಾಣುತ್ತಾರೆ. ಅವನು ಹಿಂದಿರುಗಿ ಬಂದು ಗುರುಗಳೊಂದಿಗೆ ತನಗೆ ಇಡೀ ಹಸ್ತಿನಾವತಿಯಲ್ಲಿ ಯಾರೂ ಕೆಟ್ಟವರು ಕಾಣಲಿಲ್ಲ ಎಂದು ಹೇಳುತ್ತಾನೆ. ತಾವು ಹೇಗೆ ನೋಡುತ್ತಾರೆ ಹಾಗೆಯೇ ಸಮಾಜ ಕಾಣುತ್ತದೆ. ಯದ್ಭಾವಂ ತದ್ಭವತಿ ಎಂಬಂತೆ ದೃಷ್ಟಿ ಯಂತೆ ನೋಟವಿರುತ್ತದೆ

ಮಹಾಪುರುಷರಾದವರು ಮಾತು ಮನಸ್ಸು ಕ್ರಿಯೆಗಳಲ್ಲಿ ಒಂದೇರೀತಿಯಲ್ಲಿ ಇರುತ್ತಾರೆ ಎಂದು ಸುಭಾಷಿತವೊಂದು ತಿಳಿಸುತ್ತದೆ. (ಚಿತ್ತೇವಾಚಿ ಕ್ರಿಯಾಯಾಂಚ ಸಾಧೂನಾಂ ಏಕ ರೂಪತಃ)

ಒಮ್ಮೆ ನಾಲಿಗೆಗೂ ಹಲ್ಲಿಗೂ ಜಗಳ ಬಂದಾಗ ನಾಲಿಗೆಯು ತಾನು ಹೆಚ್ಚು ಏಕೆಂದರೆ ನಾನು ಮಾತನಾಡಬಲ್ಲೆ, ಚಲಿಸಬಲ್ಲೆ ನಿಮಗೆ ಈ ಕೆಲಸ ಸಾಧ್ಯವಿಲ್ಲ ಎಂದಾಗ,  ಹಲ್ಲುಗಳು ಅದು ಹೇಗೆ ಮಾತನಾಡುವೆ, ಹೇಗೆ ಚಲಿಸುವೆ ನಾವು ನೋಡುತ್ತೇವೆ. ಎಂದು ನಾಲಿಗೆ ಸವಾಲು ಹಾಕಿ,  ನಾವು ಮೂವತ್ತೆರಡು ನೀನೋ ಒಬ್ಬ ಎಂದು ನಾಲಿಗೆಯನ್ನು ಚಲಿಸಲು ಬಿಡದ ಹಾಗೆ ಕಚ್ಚಲು ಸಿದ್ಧರಾಗುವುದಲ್ಲದೆ ಚಲಿಸದಂತೆ ಕಚ್ಚಿ ನೋಯಿಸುತ್ತವೆ, ಆಗ ನೋವನ್ನು ಅನುಭವಿಸಿದ ನಾಲಿಗೆಯು ಹಲ್ಲುಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಪೈಲ್ವಾನನೊಬ್ಬನನ್ನು ನಿಂದಿಸಿ ಮಾತನಾಡುತ್ತದೆ. ಆತ ಹೊಡೆದ ಹೊಡೆತಕ್ಕೆ ನಾಲ್ಕು ಹಲ್ಲುಗಳು ಉದುರುತ್ತವೆ. ಆ ಕೂಡಲೇ ಹಲ್ಲುಗಳು  ನಾಲಿಗೆಗೆ ಶರಣಾಗುತ್ತವೆ. ಹೀಗೆ ನಾಲಿಗೆಯಿಂದ ಏನೆಲ್ಲಾ ಸಾಧ್ಯ ಎಂಬುದನ್ನೇ ಮಾತು ಮುತ್ತು, ಮಾತು ಮೃತ್ಯು ಮಾತು ಬೆಳ್ಳಿ ಮೌನ ಬಂಗಾರ , ಊಟಬಲ್ಲವನಿಗೆ ರೋಗವಿಲ್ಲ , ಮಾತುಬಲ್ಲವನಿಗೆ ಜಗಳವಿಲ್ಲ. ಎಂಬ ಗಾದೆಗಳು ಕೂಡ ತಿಳಿಸುತ್ತವೆ. ಅವಶ್ಯವಿದ್ದಾಗ ಮಾತನಾಡುತ್ತಾ,  ಅವಶ್ಯಕತೆ ಇಲ್ಲದಾಗ ಮೌನವಹಿಸುವುದು ಉತ್ತಮರ ಲಕ್ಷಣವಾಗಿರುತ್ತದೆ. ಯಾರು ತಮ್ಮ ಮಾತಿನ ಬಗ್ಗೆ ಹಿಡಿತ ಹೊಂದಿರುತ್ತಾರೋ ಅವರು ಜಗತ್ತನ್ನು ಆಳಬಲ್ಲರು ಅಲ್ಲವೇ?



****

No comments:

Post a Comment