Saturday, July 26, 2014

kadaDida slilam padavibhaaga artha

ಕದಡಿದ ಸಲಿಲಂ ತಿಳಿವ ಅಂದದೆ.
ರಾವಣನಿಂ ಧ್ರುವಮಂಡಲದಂತೆ ಚಲಿಯಿಸದೆ ಚಿತ್ತನಿರೋಧಂಗೆಯ್ದು ದಿವ್ಯಮಂತ್ರದಿಂ ವಿದ್ಯೆಯಂ ಸಾಧಿಸುವುದುಂ

ರಾವಣನಿಂದು ಧ್ರುವಮಂಡಲದಂತೆ ನಿಶ್ಚಲನಾಗಿ ಮನಸ್ಸನ್ನು ನಿಗ್ರಹಮಾಡಿ ದಿವ್ಯಮಂತ್ರದಿಂದ ವಿದ್ಯೆಯನ್ನು ಸಾಧಿಸಿದ್ದಾನೆ.

ಪೊಸಕಾರ ಸಿಡಿಲ ಮಸಕಮನ್(ಆವೇಶವನ್ನು) ಅಸಸಕಳಿದು(ಮೀರಿ) ಕೃತಾಂತಜಿಹ್ವೆ(ಯಮನ ನಾಲಿಗೆ ) ಪೊಡಕರಿಸುವ ವೋಲ್ ಬೆಸಸು ಬೆಸಸೆಂದು ಕರಂ ಅರ್ವಿಸಿ ಸನ್ನಿದವಾಯ್ತು ವಿದ್ಯೆ ರಾವಣನ ಇದಿರೊಳ್

ಮುಂಗಾರಿನ(ಮೊದಲಮಳೆಯ) ಆವೇಶಗಳನ್ನು ಮೀರಿದಂತೆ ಮೃತ್ಯುವಿನ ನಾಲಿಗೆಯೋ ಎಂಬಂತೆ ಆರ್ಭಟಿಸುತ್ತ ಬಹುರೂಪಿಣಿ ವಿದ್ಯೆಯು ಕೈಗಳನ್ನು ವಿಸ್ತರಿಸಿ, ರಾವಣನ ಎದುರಲ್ಲಿ  ಪ್ರತ್ಯಕ್ಷವಾಯಿತು

ಅಂತು ಸನ್ನಿಹಿತೆಯಾಗಿ ಚಕ್ರಧರನಪ್ಪ ಲಕ್ಷ್ಮೀಧರನುಂ ಚರಮದೇಹಧಾರಿಯಪ್ಪರಾಮಸ್ವಾಮಿಯಂ ಉಳಿಯಲುಂ ಉಳಿದರನ್ ಉಳಿಯಲೀಯೆ ಎನೆ ರಾವಣನ್ ಉಳಿದವರಳಿವು ಎನಗೇವುದೆಂದು ವಿದ್ಯಾದೇವತೆಗೆ ಪೊಡೆವಟ್ಟು ಶಾಂತಿ ಜಿನಭವನಮಂ ಮೂರು ಸೂಳ್ ಬಲಗೊಂಡು ಬರ್ಪನ್ನೆಗಂ ಅಂಗದಾದಿಗಳ್ ಪೊರಮಟ್ಟು ಪೋಗಿ ತಮ್ಮ ಬೀಡಂ ಪುಗುವುದಂ

ಹೀಗೆ ಸನ್ನಿಹಿತವಾದ ವಿದ್ಯೆಯು ರಾವಣನನ್ನು ಕುರಿತು ಚಕ್ರಧರನಾದ ಲಕ್ಷ್ಮಣ(ಲಕ್ಷ್ಮೀಧರ) ಹಾಗೂ ಚರಮದೇಹಧಾರಿಯಾದ  ರಾಮನನ್ನು ಬಿಟ್ಟು ಉಳಿದವರನ್ನು ಬಿಡುವುದಿಲ್ಲ ಎಂದು ಹೇಳಿದಾಗ ರಾವಣನು ಉಳಿದವರನ್ನು ನಾಶಮಾಡಿದರೆ ಏನು ಪ್ರಯೋಜನ ಎಂದು ವಿದ್ಯಾದೇವತೆಗೆ ನಮಸ್ಕರಿಸಿ ಹೊರಬಂದು ಶಾಂತಿ ಜಿನ ಆಲಯವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಮಸ್ಕರಿಸಿ ಅಂತಃಪುರಕ್ಕೆ ಬರುತ್ತಾನೆ.

ಇತ್ತ ದಶಾನನಂ ನಿಜವಧೂಜನಮಂ ಕೊರಚಾಡಿ ಕಾಡಿದ ಉದ್ ವೃತ್ತ ವಿರೋಧಿ ಖೇಚರರಂ ಇಕ್ಕುವ ಬಲ್ ಮುಳಿಸಿಂದೆ ಬಂದು ಪೊಯ್ವೆತ್ತ ಇಭ ವೈರಿಯಂತೆ ಒದರಿ ಕೆಂಗರಿ ಮೂಡಿದ ಭೃಂಗಮಾಲೆ ನೀಳ್ದತ್ತು ಎನೆ ನೋಡಿದಂ ಮಯತನೂಜೆಯ ಬಾಡಿದ ವಕ್ತ್ರಪದ್ಮಮಂ

ಇತ್ತ ದಶಾನನನು ಮಯನ ಮಗಳಾದ ಮಂಡೋದರಿಯ ಬಾಡಿದ ತಾವರೆಯಂತಹ ಮುಖವನ್ನುಹಾಗೂ ಅಂತಃಪುರ ಸ್ತ್ರೀಯರ ಬಾಡಿದ ಮುಖಗಳನ್ನು ಕಂಡು ಏಟುತಿಂದ ಸಿಂಹದಂತೆ ಕೋಪಗೊಂಡು ರಾಮನನ್ನು ನಿಂದಿಸುತ್ತಾ ಕೆಂಪಾದ ಗರಿ ಮೂಡಿದ ದುಂಬಿಗಳಂತೆ ಕಾಣುವ ಕೆಂಪಾದ ಕಣ್ಣುಗಳಿಂದ ದುರುಗುಟ್ಟಿ ನೋಡುತ್ತಾನೆ.

ಅಂತಾಕೆ ವೆರಸು ಸಮಸ್ತಾಂತಃಪುರಮಂ ನೋಡಿ ನಿಮಗಿನಿತು ಭಂಗಮಂ ಮಾಡಿದಂಗದಾದಿಗಳಂ ಭ್ರೂಭಂಗಮಾತ್ರದೊಳೆ ಸೆರೆಗೈದು ತಂದು ಶಾಂತಿ
ತಂದು ನಿಮ್ಮ ಮುಂದೆ ಬಹುಪ್ರಕಾರದಿಂ ಪರಿಭವಿಸಿದಪ್ಪೆನೆಂದು ಸಂತೈಸಿ  ಶಾಂತಿ ಜಿನಭವನದೊಳ್ ಮಹಾಪೂಜೆಯ ಮಾಡಿಸಿ ನಿರ್ವತಿತ ನಿಯಮನಮೃತಾಹಾರಮನಾರೋಗಿಸಿ ತದನಂತರಂ ಬಹುರೂಪಿಣಿ ವಿದ್ಯಾಪ್ರಭಾವಮಂ ಪರೀಕ್ಷಿಸಿ ಪ್ರಮೋದಮುದಿತಹೃದಯನಾಗಿ

ಅಂತೂ ಸಮಸ್ತ ಅಂತಃ ಪುರದ ಸ್ತ್ರೀಯರನ್ನು ಕುರಿತು ರಾವಣನು ನಿಮಗೆ ನೋವನ್ನುಂಟುಮಾಡಿದ ಆ ಮನುಷ್ಯರನ್ನು ಹುಬ್ಬುಗಂಟಿನಲ್ಲಿಯೇ ಸೆರೆ ಹಿಡಿದು ತಂದು ನಿಮ್ಮ ಮುಂದೆ ಬಹಳ ವಿಧವಾಗಿ ಅವಮಾನಿಸುತ್ತೇನೆ ಎಂದು ಸಮಾಧಾನದ ಮಾತುಗಗಳನ್ನು ಹೇಳಿ ಶಾಂತಿ ಜಿನನ ಮಹಾಪೂಜೆಯನ್ನು ಮಾಡಿಸಿ ಆಹಾರವನ್ನು ಸೇವಿಸಿ ಬಹುರೂಪಿಣಿ ವಿದ್ಯಾ ಪ್ರಭಾವವನ್ನು ಪರೀಕ್ಷಿಸಿ ಸಂತಸದ ಮನಸ್ಸಿನಿಂದ

ಸಮ ಅಧಿಕರ್ ಆರ್ ಜಗತ್ ತ್ರಯದೊಳ್ ಇನ್ ಎನಗೆ ಎನ್ನೊಳ್ ಇದಿರ್ಚುಂ ವನ್ನರ್ ಆರ್ ಸಮರದೊಳ್ ಎಂದು ತನ್ನ ಭುಜದಂಡಮಂ ಈಕ್ಷಿಸಿ ಜಾನಕೀ ಮುಖಾಬ್ಜಮಂ ಅವಲೋಕಿಸಲ್ ಕರಮೆ ಕಾತರನಾಗಿ ವಿಯತ್ ಚರಾಧಿಪಂ ಪ್ರಮದವನಕ್ಕೆ ಬಂದು ಅಲರ್ ಅಂಬುಗಳ್ ಇಲ್ಲದ ಕಾಮನ ಎಂಬಿನಂ

ಮೂರು ಲೋಕಗಳಲ್ಲಿ ನನ್ನನ್ನು ಎದುರಿಸುವ ನನಗೆ ಸಮನಾದವರು, ಯುದ್ಧದಲ್ಲಿ ಎದುರು ನಿಲ್ಲುವವರು ಯಾರಿದ್ದಾರೆ ಎಂದು ತನ್ನ ನೀಳವಾದ ಬಾಹುಗಳನ್ನು ನೋಡಿ, ಸೀತೆಯನ್ನೊಮ್ಮೆ ನೋಡುವ ವಿಶೇಷ ಆತುರದಿಂದ ಪ್ರಮದವನಕ್ಕೆ ಹೂಬಾಣಗಳಿಲ್ಲದ ಮನ್ಮಥನಂತೆ ರಾಕ್ಷಸಾಧಿಪತಿಯಾದ ರಾವಣನು ಬಂದನು. 

ಅಂತೂ ಭೋಂಕನೇ ಬರ್ಪ ರಾವಣನ ಗಂಡಗಾಡಿಯಂ ಕೆಲದೊಳಿರ್ದ ಕಚದ ಕಾಂತೆಯರ್ ಸೀತಾ ದೇವಿಗೆ ತೋರ್ಪುದುಂ

ಹಾಗೆ ಭರದಿಂದ ಬರುತ್ತಿರುವ ರಾವಣನ ಪರಾಕ್ರಮವನ್ನು ವೀರ ಸೌಂದರ್ಯವನ್ನು ಪಕ್ಕದಲ್ಲಿದ್ದ ರಾಕ್ಷಸ ಸ್ತ್ರೀಯರು ಸೀತೆಗೆ ತೋರಿದರು.

ರಾವಣನ ರೂಪು ಸೀತಾ ದೇವಿಗೆ ತೃಣಕೆ ಅಲ್ಪಮ್ ಆಯ್ತು. ಪತಿ ಭಕ್ತಿಯೊಳು ಆರು ಈ ವನಿತೆಯ ತೆರದಿಂ ಸದ್ಭಾವಮಮ್ ಒಳಕೊಂಡ ಪುಣ್ಯವತಿಯರ್ ಸತಿಯರ್

ರಾವಣನ ರೂಪವು ಸೀತೆಗೆ ಹುಲ್ಲಿಗೆ ಸಮಾನವಾಯಿತು. ಪತಿಭಕ್ತಿಯಲ್ಲಿ ಈ ವನಿತೆಯ ರೀತಿಯಲ್ಲಿ ಸದ್ಭಾವನೆಯನ್ನು ಹೊಂದಿರುತ್ತಾರೋ ಅವರೇ ಪುಣ್ಯವತಿಯರು.

ಏನಂ ಕೇಳ್ದಪೆನೋ ರಘು ಸೂನುವ ಲಕ್ಷ್ಮಣನ ಪಲ್ಲವಾರ್ತೆಯನ್ ಇನ್ನೆಂದು ಆ ನಳಿನಾನನೆ ಬರ್ಪ ದಶಾನನಂ ಕಂಡು ತಾಳ್ದಿದಳ್ ತಲ್ಲಣಮಮ್

ರಾವಣನ ಆಗಮನವನ್ನು ಕಂಡು ಸೀತೆಯು, ರಾಮ ಲಕ್ಷ್ಮಣರ ಬಗ್ಗೆ ಇನ್ನು ಯಾವ ಕೆಟ್ಟ ವಿಚಾರವನ್ನು ಕೇಳಬೇಕಾಗುವುದೋ ಎಂದು ತಲ್ಲಣಗೊಂಡಳು.

ಅಂತು ತಲ್ಲಣಿಸುತಿರ್ದ ಮಾನಿನಿಯನ್ ಎಯ್ದು ವಂದು ದಶಾನನನ್ ಇಂತೆಂದಮ್. ಬಹುರೂಪಿಣಿ ವಿದ್ಯೆ ಸಾಧ್ಯಮ್ ಆದುದು ಇನ್ನು ಅಸಾಧ್ಯಮಪ್ಪ ಮರುವಕ್ಕಮ್ ಇಲ್ಲ ನಿನ್ನ ನಚ್ಚಿನ ರಾಮನ ದೆಸೆಯಂ ಬಿಟ್ಟು ಎನಗೆ ಒಡಂಬಟ್ಟು ಸಾಮ್ರಾಜ್ಯ ಸುಖಮನ್ ಅನುಭವಿಸು ಎನೆ ಸೀತೆ ವಿಹ್ವಲೀಭೂತ ಚಿತ್ತೆಯಾಗಿ

ಹಾಗೆ ತಲ್ಲಣಗೊಳ್ಳುತ್ತಿದ್ದ ಸೀತೆಯ ಬಳಿ ಬಂದು ದಶಾನನನು ಬಹುರೂಪಿಣಿ ವಿದ್ಯೆಯು ನನಗೆ ಸಿದ್ಧಿಯಾಗಿದೆ. ಇನ್ನು ನನಗೆ ಅಸಾಧ್ಯವಾದ ಪ್ರತಿಪಕ್ಷ ಯಾವುದೂ ಇಲ್ಲ. ನಿನ್ನ ನೆಚ್ಚಿನ ರಾಮನನ್ನು ಬಿಟ್ಟು ನನ್ನನ್ನು ಒಪ್ಪಿಕೊಂಡು ಸಾಮ್ರಾಜ್ಯ ಸುಖವನ್ನು ಅನುಭವಿಸು ಎಂದಾಗ ಸೀತೆಯು ದುಃಖಿತ ಮನಸ್ಸಿನವಳಾಗಿ

ಕರುಣಿಸು ವೊಡೆ ಎನಗೆ ದಶಕಂಧರ ಧುರದೊಳ್ ರಘು ತನೂಜನ ಆಯುಃ ಪ್ರಾಣಂ ಬರೆಗಂ ಬಾರದಿರೆನುತಂ ಧಾತ್ರಿಯೊಳ್ ಮೈಯ್ಯನ್ ಒಕ್ಕು ಮೂರ್ಛೆಗೆ ಸಂದಳ್

ಸೀತೆಯು ರಾವಣನನ್ನು ಕುರಿತು ಎಲೆ ರಾವಣ ನನಗೆ ನೀನು ಕರುಣಿಸುವುದಾದರೆ ರಾಮಚಂದ್ರರ ಪ್ರಾಣ ತೆಗೆಯುವ ಮಟ್ಟಕ್ಕೆ ಹೋಗಬೇಡ ಎಂದು ಹೇಳುತ್ತಾ ಮೂರ್ಛೆಗೊಂಡು ನೆಲಕ್ಕೆ ಕುಸಿದಳು.

ಜಾನಕಿ ಮೂರ್ಛಿತೆಯಾಗೆ ದಶಾನನಂ ಅನುಕಂಪೆ ಪುಟ್ಟಿ ಕರುಣಿಸಿ ತನ್ನಂ ತಾನೇ ಪಳಿದುಳಿದು ಕರ್ಮಾಧೀನ ಸಮುತ್ಪನ್ನ ದುರಘ ದುಷ್ಪರಿಣತಿಯಂ
ಜಾನಕಿ ಮೂರ್ಛಿತೆಯಾಗಲು ದಶಾನನನಲ್ಲಿ ಅನುಕಂಪ ಹುಟ್ಟಿ ಕರುಣೆಯಿಂದ, ಕರ್ಮವಶದಿಂದ ಕೆಟ್ಟ ಪಾಪವು ನನ್ನಿಂದ ಘಟಿಸಿತು ಎಂದು ತನ್ನನ್ನು ತಾನು ಹಳಿದುಕೊಳ್ಳುತ್ತಾನೆ.

ಕದಡಿದ ಸಲಿಲಂ ತಿಳಿವಂದದೆ ತನ್ನಿಂ ತಾನೇ ತಿಳಿದ ದಶಾನನಂಗೆ ಆದುದು ವೈರಾಗ್ಯಂ ಸೀತೆಯೊಳ್ ಉದಾತ್ತನೊಳ್ ಪುಟ್ಟದಲ್ತೆ ನೀಲಿರಾಗಂ


ಕದಡಿದ ನೀರು ತನ್ನಿಂದ ತಾನೇ ತಿಳಿಗೊಳ್ಳುವಂತೆ ತಿಳಿಗೊಂಡ ದಶಾನನನಿಗೆ ಸೀತೆಯಲ್ಲಿ ವೈರಾಗ್ಯ ಮೂಡಿತು ಎಂಬುದನ್ನು ಕವಿ ಉದಾತ್ತರಾದವರಲ್ಲಿ ವೈಶಾಲ್ಯ ಭಾವ ಹುಟ್ಟುವುದಲ್ಲವೇ ಎಂದಿದ್ದಾನೆ. 

No comments:

Post a Comment