Saturday, July 19, 2014

ಆಯ್ಕೆಯಿದೆ ನಮ್ಮ ಕೈಯಲ್ಲಿ. – ನೇಮಿಚಂದ್ರ.

ಗದ್ಯಪಾಠ ೩
ಆಯ್ಕೆಯಿದೆ ನಮ್ಮ ಕೈಯಲ್ಲಿ.  – ನೇಮಿಚಂದ್ರ.
ಸಾರಾಂಶ : ಅದೃಷ್ಟವನ್ನೇ ನಂಬಿ ಬದುಕಬಾರದು ದುರಾದೃಷ್ಟಕರವಾದ ಕೆಲವು ಘಟನೆಗಳನ್ನು ಬದಲಾಯಿಸುವುದು ನಮ್ಮಿಂದ ಸಾದ್ಯವಾಗದಿರಬಹುದು ಆದರೆ ನಮ್ಮ ಬದುಕನ್ನು ಪ್ರಯತ್ನದಿಂದ ರೂಪಿಸಿಕೊಳ್ಳಲು ಸಾಧ್ಯವಿದೆ, ಅವಕಾಶಗಳಿವೆ ಎಂಬುದನ್ನು ನಿರೂಪಿಸಲಾಗಿದೆ.ಅದೃಷ್ಟವನ್ನು ನಂಬಿ ತನ್ನ ಬದುಕನ್ನು ನರಕ ಮಾಡಿಕೊಂಡ ಸೀತಾಳ ಘಟನೆ, ಎಲ್ಲವನ್ನು ಎದುರಿಸಿ ದೃಢವಾಗಿ ನಿಂತು ಸಾಧನೆಗೈದ ಪ್ಲೇವಿಯಾ, ನಿಶಾಶರ್ಮರ ಉದಾಹರಣೆಯೊಂದಿಗೆ   ತಮ್ಮ ಪತಿ ಕಿಡ್ನಿಸ್ಟೋನ್ ತೊಂದರೆಯಿಂದ ಬಳಲಿದಾಗ, ಕಿಡ್ನಿ ಸ್ಟೋನ್ ಬರಲು ಕಾರಣವೇನು ? ಪರಿಹಾರವೇನು ಎಂಬ ಕುತೂಹಲದಿಂದ ಹಲವರನ್ನು ಭೇಟಿಯಾಗಿ  ಆಯ್ಕೆ ನಮ್ಮ ಕೈಯಲ್ಲಿ ಇರುತ್ತದೆ ಎಂದು ಕೇವಲ  ನೀರು ಕುಡಿಸಿಯೇ  ಸಮಸ್ಯೆಯನ್ನು ನಿವಾರಿಸಿದ ಬಗೆಯನ್ನು ಉದಾಹರಣೆಗಳ ಮೂಲಕ ತಿಳಿಸಿದ್ದಾರೆ

ಸಂದರ್ಭ ಸೂಚಿಸಿ ಸ್ವಾರಸ್ಯ ವಿವರಿಸಿ.
೧. ಅದೃಷ್ಟವನ್ನೇ ಅವಲಂಬಿಸಿ ಬದುಕಲುಸಾಧ್ಯವೇ?
ಶ್ರೀಮತಿ ನೇಮಿಚಂದ್ರ ಅವರು ರಚಿಸಿರುವ ಆಯ್ಕೆಯಿದೆ ನಮ್ಮ ಕೈಯಲ್ಲಿ ಎಂಬ ಲೇಖನದಿಂದ ಈ ಮಾತನ್ನು ಆರಿಸಿಕೊಳ್ಳಲಾಗಿದೆ.  ಲೇಖಕಿಯವರ ಬಳಿಯಲ್ಲಿ ಯಾರಾದರೂ ಏನು ಮಾಡೋದು ಎಲ್ಲ ಹಣೆಬರಹ , ಆಗೋದು ಆಗೇ ಆಗುತ್ತೆ ಎಂದಾಗ  ಕೆಲವೊಮ್ಮೆ ಆಗುವುದನ್ನು ತಡೆಯಲು ಆಗದಿರಬಹುದು ಆದ್ರೆ ಪ್ರಯತ್ನಿಸಬಹುದಲ್ಲಾ ಅದೃಷ್ಟವನ್ನೇ ಅವಲಂಬಿಸಿ ಬದುಕಲುಸಾಧ್ಯವೇ? ಎಂದುಹೇಳುತ್ತಾ  ಮಾನವ ಪ್ರಯತ್ನವೂ ಅತೀಮುಖ್ಯ ಎಂಬುದನ್ನು ಹೇಳುತ್ತಾರೆ.

. ಮತ್ತೆ ಅವರಿಗೆ ಮೂತ್ರಪಿಂಡದ ಕಲ್ಲು ಕಾಣಿಸಿರಲಿಲ್ಲ
ಶ್ರೀಮತಿ ನೇಮಿಚಂದ್ರ ಅವರು ರಚಿಸಿರುವ ಆಯ್ಕೆಯಿದೆ ನಮ್ಮ ಕೈಯಲ್ಲಿ ಎಂಬ ಲೇಖನದಿಂದ ಈ ಮಾತನ್ನು ಆರಿಸಿಕೊಳ್ಳಲಾಗಿದೆ
ತಮ್ಮ ಪತಿ ಕೀರ್ತಿಗೆ ಮೂತ್ರಪಿಂಡದಲ್ಲಿ ೮.ಮಿ.ಮೀ ಉದ್ದದ ಕಲ್ಲಿದೆ ಎಂದು ತಿಳಿದಾಗ ಕಿಡ್ನಿಸ್ಟೋನ್ ಏಕೆ ಉಂಟಾಗುತ್ತದೆ ಎಂದು ತಿಳಿಯಲು ಕಮಲಮ್ಮ ಮೇಡಂ ಬಳಿ ಹೋದರು ಅವರು ತಾವೂ ಕಿಡ್ನಿಸ್ಟೋನ್ ತೊಂದರೆಯಿಂದ ಬಳಲಿದ್ದು ಡಾಕ್ಟರರ ಸಲಹೆಮೇರೆಗೆ ಯಥೇಚ್ಛವಾಗಿ ನೀರು ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದರಿಂದ ೨೦ವರ್ಷಗಳಲ್ಲಿ ಅವರಿಗೆ ಈ ತೊಂದರೆ ಮತ್ತೆ ಕಾಣಿಸಿರಲಿಲ್ಲ.

೩. ನಾನು ನಾಲ್ಕುಬಾರಿ ಆಪರೇಷನ್ ಮಾಡಿಸಿಕೊಂಡಿದ್ದೇನೆ
ಶ್ರೀಮತಿ ನೇಮಿಚಂದ್ರ ಅವರು ರಚಿಸಿರುವ ಆಯ್ಕೆಯಿದೆ ನಮ್ಮ ಕೈಯಲ್ಲಿ ಎಂಬ ಲೇಖನದಿಂದ ಈ ಮಾತನ್ನು ಆರಿಸಿಕೊಳ್ಳಲಾಗಿದೆ
ತಮ್ಮ ಪತಿ ಕೀರ್ತಿಗೆ ಮೂತ್ರಪಿಂಡದಲ್ಲಿ ೮.ಮಿ.ಮೀ ಉದ್ದದ ಕಲ್ಲಿದೆ ಎಂದು ತಿಳಿದಾಗ ಕಿಡ್ನಿಸ್ಟೋನ್ ಏಕೆ ಉಂಟಾಗುತ್ತದೆ ಎಂದು ತಿಳಿಯಲು ಮುದ್ದೇಗೌಡರ ಬಳಿ ಹೋದಾಗ ಮುದ್ದೇಗೌಡರು ಈ ಮೊದಲು ಕಿಡ್ನಿಸ್ಟೋನ್ ತೊಂದರೆಯಿಂದ ಬಳಲಿದ್ದ ತಾವು ನಾಲ್ಕುಬಾರಿ ಆಪರೇಷನ್ ಮಾಡಿಸಿಕೊಂಡಿರುವುದಾಗಿ ಹೇಳುತ್ತಾ ಅಂಗಿ ಎತ್ತಿ ತೋರಿಸಿದ ಸಂದರ್ಭದಲ್ಲಿ ಈ ಮಾತು ಬಂದಿದೆ.  ಇದರೊಂದಿಗೆ ಡಾಕ್ಟರರ ಸಲಹೆ ಸೂಚನೆಗಳನ್ನು ಸರಿಯಾಗಿ ಪಾಲಿಸದೆ ನಿರ್ಲಕ್ಷ್ಯ ತೋರುವಂತ ಸ್ವಭಾವ ಮುದ್ದೇಗೌಡರದಾಗಿದೆ ಎಂದು ತೋರುತ್ತದೆ.

೪. ನೋಡು ನಿನ್ನ ಎದುರು ಎರಡು ಆಯ್ಕೆಗಳಿವೆ.
ಲೇಖಕಿ ನೇಮಿಚಂದ್ರರವರು ಮೂತ್ರಪಿಂಡದ ಕಲ್ಲಿನ ತೊಂದರೆಗೆ ಒಳಗಾದ ತನ್ನಪತಿಯನ್ನು ಕುರಿತು ಹೇಳಿದ ಮಾತು. ಮೂತ್ರಪಿಂಡದ ಕಲ್ಲಿನ ತೊಂದರೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮುದ್ದೇಗೌಡರು ಮತ್ತು ಕಮಲಮ್ಮನವರ ಅನುಭವಗಳನ್ನು ವಿವರಿಸಿ ಹೇಳುತ್ತಾ ನಿನ್ನ ಎದುರು ಎರಡು ಆಯ್ಕೆಗಳಿವೆ,   ಮುದ್ದೇಗೌಡರಂತೆ ವರ್ಷಕ್ಕೆ ಎರಡು ಆಪರೇಷನ್ ಮಾಡಿಸಿಕೊಳ್ಳುವುದು ಇಲ್ಲವೇ ಕಮಲಮ್ಮನವರಂತೆ ಇನ್ನು ಮೇಲೆ ಹೆಚ್ಚು ನೀರು ಕುಡಿಯುವುದು ಎಂದು ಹೇಳಿ ಆಕ್ಷಣದಿಂದಲೇ ಪತಿಗೆ ದ್ರವ ಆಹಾರ ಸೇವಿಸುವಂತೆ ಎಚ್ಚರವಹಿಸಿ ಶಸ್ತ್ರಚಿಕಿತ್ಸೆಯ ಅಗತ್ಯ ಬಾರದಂತೆ ನೋಡಿಕೊಂಡರು.

೫. ಎಷ್ಟುಬೇಕಾದರೂ ಓದಿಸಲುಸಿದ್ಧರಿದ್ದ ಅಪ್ಪಂದಿರು.
ಶ್ರೀಮತಿ ನೇಮಿಚಂದ್ರ ಅವರು ರಚಿಸಿರುವ ಆಯ್ಕೆಯಿದೆ ನಮ್ಮ ಕೈಯಲ್ಲಿ ಎಂಬ ಲೇಖನದಿಂದ ಈ ಮಾತನ್ನು ಆರಿಸಿಕೊಳ್ಳಲಾಗಿದೆ. ಅದೃಷ್ಟದ ಬಗ್ಗೆ ಮಾತು ಬಂದಾಗ ತಮ್ಮ ಹೈಸ್ಕೂಲ್ ಸಹಪಾಠಿ ಸೀತಾ ನೆನಪಗುತ್ತಾಳೆ. ಲೇಖಕಿ ಮತ್ತು ಸೀತಾಳ ಮನೆಯಲ್ಲಿ ಹೆಣ್ಣು-ಗಂಡು ಬೇಧವಿಲ್ಲದೆ ಎಷ್ಟು ಬೇಕಾದರೂ ಓದಿಸಲು ಸಿದ್ಧರಿದ್ದ ಅಪ್ಪಂದಿರು ಇದ್ದರೂ ಅದನ್ನು ಉಪಯೋಗ ಮಾಡಿಕೊಳ್ಳದ ಸೀತಾ ಹೈಸ್ಕೂಲನ್ನು ಪೂರೈಸಲಿಲ್ಲ, ತಾನು ಇಂಜಿನಿಯರ್ ಆದೆ ಅವಕಾಶಗಳಿದ್ದಾಗ ಅದನ್ನು ಬಳಸಿಕೊಂಡು ಬೆಳೆಯಬೇಕು ಎಂಬುದನ್ನು ವಿವರಿಸಿದ್ದಾರೆ.

೬. ಈ ಅದೃಷ್ಟ ನಿನಗೂ ಇತ್ತಲ್ಲೇ?
ಶ್ರೀಮತಿ ನೇಮಿಚಂದ್ರ ಅವರು ರಚಿಸಿರುವ ಆಯ್ಕೆಯಿದೆ ನಮ್ಮ ಕೈಯಲ್ಲಿ ಎಂಬ ಲೇಖನದಿಂದ ಈ ಮಾತನ್ನು ಆರಿಸಿಕೊಳ್ಳಲಾಗಿದೆ. ತಮ್ಮ ಹೈಸ್ಕೂಲ್ ಸಹಪಾಠಿ ಗೀತಾಳನ್ನು ಉದ್ದೇಶಿಸಿ ಹೇಳಿದಮಾತು.
ಲೇಖಕಿ ಚೆನ್ನಾಗಿ ಓದಿ ಇಂಜಿನಿಯರ್ ಆಗಿ ಸ್ವಂತಮನೆಯನ್ನು ಕೊಂಡಿದ್ದನ್ನು ಕಂಡು ಅವರ ಗೆಳತಿ ಸೀತಾ ನೀನು ಬಿಡೆ ತುಂಬಾ ಅದೃಷ್ಟವಂತೆ ಎಂದಾಗ ಈ ಮೇಲಿನ ಮಾತನ್ನು ಲೇಖಕಿ ಹೇಳುತ್ತಾರೆ.  ಎಲ್ಲಾ ಅವಕಾಶಗಳಿದ್ದೂ ಓದುವ ಆಸಕ್ತಿಯನ್ನು ತೋರದೆ ಹೈಸ್ಕೂಲನ್ನೂ ಮುಗಿಸದೆ ಸಾಮಾನ್ಯ ಗೃಹಿಣಿಯಾದವಳು ಸೀತೆಯು ವಿದ್ಯಾವಂತರ ಕುಟುಂಬದಲ್ಲಿ ಜನಿಸಿಯೂ ಅವಕಾಶವನ್ನು ಬಳಸಿಕೊಳ್ಳದವಳು ಎಂಬ ಭಾವ ಇಲ್ಲಿದೆ.

೭. ಮುಂಬಯಿಯ ಪ್ರಸಿದ್ಧ ನ್ಯಾಯವಾದಿಯಾದರು
ಶ್ರೀಮತಿ ನೇಮಿಚಂದ್ರ ಅವರು ರಚಿಸಿರುವ ಆಯ್ಕೆಯಿದೆ ನಮ್ಮ ಕೈಯಲ್ಲಿ ಎಂಬ ಲೇಖನದಿಂದ ಈ ಮಾತನ್ನು ಆರಿಸಿಕೊಳ್ಳಲಾಗಿದೆ
ಲೇಖಕಿಯು ಪ್ಲೇವಿಯಾ ಎಂಬ ಹೆಣ್ಣುಮಗಳೊಬ್ಬಳ ಕಥೆಯನ್ನು ಹೇಳುವಾಗ ಈ ಮಾತು ಬಂದಿದೆ. ಪ್ಲೇವಿಯಾ ಕೌಟುಂಬಿಕ ಕ್ರೌರ್ಯಕ್ಕೆ ಬಲಿಯಾದ ಹೆಣ್ಣು . ೧೦ನೇ ತರಗತಿಯವರೆಗೆ ಕಲಿತಿದ್ದ ಪ್ಲೇವಿಯಾ ಗಂಡನ ಹಿಂಸೆ ತಾಳಲಾರದೆ ಮನೆಯಿಂದ ಹೊರಬಂದದ್ದಲ್ಲದೆ ತಮ್ಮ ನಲವತ್ತರ ವಯಸ್ಸಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಮುಂಬಯಿಯ ಪ್ರಸಿದ್ಧ ನ್ಯಾಯವಾದಿಯಾದುದಲ್ಲದೇ ತಮ್ಮ ಮೂವರು ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿಸಿ ಮುಂದೆ ತಂದರು. ತಮ್ಮ ಅದೃಷ್ಟವನ್ನುಹಳಿಯುವ ವ್ಯಕ್ತಿಗಳಿಗೆ ಪ್ಲೇವಿಯಾರ ಬದುಕು ಆದರ್ಶವಾಗಿರಬೇಕು ಎಂದು ಈ ಕಥೆ ಹೇಳಿದ್ದಾರೆ.

ಒಂದು ವಾಕ್ಯದ ಪ್ರಶ್ನೆಗಳು
೧. ಲೇಖಕಿಗೆ ಯಾವಾಗ ರೇಗಿ ಹೋಗುತ್ತಿತ್ತು?
ಏನ್ ಮಾಡೋಕಾಗುತ್ತೆ ಎಲ್ಲಾ ಹಣೆಬರಹ ಆಗೋದು ಆಗೇ ಆಗುತ್ತೆ ಎಂದು ಯಾರಾದರೂ ಹೇಳಿದರೆ ಲೇಖಕಿಗೆ ರೇಗಿ ಹೋಗುತ್ತಿತ್ತು.

೨. ಲೇಖಕಿಯ ಪತಿ ಯಾವ ತೊಂದರೆಯಿಂದ ಬಳಲಿದರು?
ಮೂತ್ರಪಿಂಡದ ಕಲ್ಲಿನ ತೊಂದರೆಯಿಂದಾಗಿ ಬಳಲಿದರು.

೩. ಕಿಡ್ನಿಸ್ಟೋನ್ ಬಗ್ಗೆ ತಿಳಿಯಲು ಲೇಖಕಿ ಯಾರನ್ನು ಭೇಟಿಮಾಡಿದರು?
ಕಿಡ್ನಿಸ್ಟೋನ್ ಬಗ್ಗೆ ತಿಳಿಯಲು ಲೇಖಕಿಯು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂಲೆಮನೆ ಮುದ್ದೇಗೌಡರು ಮತ್ತು ಕಮಲಮ್ಮನವರನ್ನು ಭೇಟಿಮಾಡಿದರು.

೪. ಲೇಖಕಿಯ ಪತಿಯನ್ನು ಸೋನಗ್ರಫಿ ರೂಮಿಗೆ ಕರೆದೊಯ್ದುದು ಏಕೆ?
ಮೂತ್ರಪಿಂಡದಲ್ಲಿನ ಕಲ್ಲು ಇರುವ ಸ್ಥಳವನ್ನು ಬದಲಿಸಿದೆಯೇ ಎಂದು ತಿಳಿದುಕೊಳ್ಳಲು ಸೋನಗ್ರಫಿ ರೂಮಿಗೆ ಕರೆದೊಯ್ದರು.

೫. ಅದೃಷ್ಟದ ಪ್ರಶ್ನೆಬಂದಾಗ ಲೇಖಕಿಗೆ ಯಾರು ನೆನಪಾಗುತ್ತಾರೆ?
ಅದೃಷ್ಟದ ಪ್ರಶ್ನೆಬಂದಾಗ ಲೇಖಕಿಗೆ ತಮ್ಮ ಹೈಸ್ಕೂಲ್ ಸಹಪಾಠಿ ಸೀತಾ  ನೆನಪಾಗುತ್ತಾರೆ

೬. ದುರಾಸೆಯ ಹುಡುಗನನ್ನು ನಿರಾಕರಿಸಿದವರು ಯಾರು?
ದುರಾಸೆಯ ಹುಡುಗನನ್ನು ನಿರಾಕರಿಸಿದವರು ನಿಶಾ ಶರ್ಮಾ.

ಎರಡು ಅಂಕಗಳ ಪ್ರಶ್ನೆಗಳು
೧. ಯಾವ ಉತ್ತರಗಳಿಂದ ಲೇಖಕಿಗೆ ತೃಪ್ತಿಯಾಗಲಿಲ್ಲ?
ಕಿಡ್ನಿಸ್ಟೋನ್ ಕೆಲವರಿಗೆ ಆಗುತ್ತೆ, ಕೆಲವರಿಗೆ ಇಲ್ಲ ಅವರವರ ಅದೃಷ್ಟ ಎಂಬಂಥ ಉತ್ತರಗಳನ್ನು ಲೇಖಕಿಗೆ ತೃಪ್ತಿ ನೀಡಲಿಲ್ಲ.

೨. ಕಮಲ ಮೇಡಂ ವೈದ್ಯರ ಯಾವ ಸಲಹೆಯಂತೆ ಯಥೇಚ್ಛವಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರು ಮತ್ತು ವೈದ್ಯರು ಹೇಳಿದ್ದ ಕೆಲವು ಆಹಾರದ ಬದಲಾವಣೆಗಳನ್ನು ಜಾರಿಗೆ ತಂದರು. ಹೀಗಾಗಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಮತ್ತೆ ಅವರಿಗೆ ಮೂತ್ರಪಿಂಡದ ಕಲ್ಲು ಕಾಣಿಸಲಿಲ್ಲ.

೩. ಮಾದೇಗೌಡರು ಪಥ್ಯದ ವಿಚಾರವಾಗಿ ಹೊಂದಿದ್ದ ನಿಲುವು ಯಾವುದು?
ಮಾದೇಗೌಡರು ಪಥ್ಯದ ವಿಚಾರದಲ್ಲಿ ಉದಾಸೀನದಿಂದಿದ್ದರು. ಲೇಖಕಿ ಕೇಳಿದಾಗ ಅಯ್ಯೋ ಅದೆಲ್ಲಾ ಪಥ್ಯ ಯಾರು ಮಾಡೋಕಾಗುತ್ತೆ ಬಿಡಿ. ಬಾಡು ತಿನ್ಬೇಡಿ ಸದಾ ನೀರು ಕುಡೀರಿ ಅಂತಾರೆ, ಅದನ್ನೆಲ್ಲಾ ಯಾರು ಮಾಡ್ತಾರೆ ಎಂದು ತಲೆ ಕೊಡವಿದರು.

೪. ಸೀತಾಳ ಓದುವ ಆಸಕ್ತಿ ಹೇಗಿತ್ತು?
ಸೀತಾಳಿಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಎಸ್.ಎಸ್.ಎಲ್.ಸಿಯಲ್ಲಿ ಎಲ್ಲಾ ವಿಷಯಗಳಲ್ಲಿ ಫೇಲ್ ಆದವಳು. ಮತ್ತೆ ಪರೀಕ್ಷೆಕಟ್ಟುವ ಗೋಜಿಗೆ ಹೋಗದೆ ಮಾರ್ಕೆಟ್ , ಸಿನಿಮಾ, ಎಂದು ಗೆಳತಿಯರೊಂದಿಗೆ ಸುತ್ತಾಡುತ್ತಿದ್ದಳು.

೫. ಸೀತಾಳ ಬಯಕೆ, ನಂಬಿಕೆಗಳು ಹೇಗಿದ್ದವು?
ಸೀತಾ ಕಷ್ಟಪಡುವವಳಲ್ಲ ಎಲ್ಲವೂ ತಟ್ಟನೆ ಸರಿಹೋಗಿಬಿಡಬೇಕು ಎಂದು ಬಯಸುತ್ತಿದ್ದಳು. ಕೈತುಂಬಾ ಸಂಪಾದಿಸಿ ತಂದು ಹಾಕಿ ಹೆಂಡ್ತೀನಾ ಚೆನ್ನಾಗಿ ನೋಡಿಕೊಳ್ಳುವುದು ಗಂಡನ ಜವಾಬ್ದಾರಿ ಎಂಬ ನಂಬಿಕೆ ಅವಳಲ್ಲಿ ಬಲವಾಗಿ ಬೇರೂರಿತ್ತು.

ನಾಲ್ಕು ಅಂಕದ ಪ್ರಶ್ನೆಗಳು
೧.ರಜೆಗೆಂದು ಮೈಸೂರಿಗೆ ಹೋದಾಗ ಲೇಖಕಿಯ ಪತಿಗಾದ ತೊಂದರೆಯೇನು?
ಲೇಖಕಿಯವರು ನಾಲ್ಕುವರ್ಷಗಳ ಹಿಂದೆ ರಜೆಗೆಂದು ಕುಟುಂಬಸಮೇತರಾಗಿ ಮೈಸೂರಿನ ತಮ್ಮ ತವರುಮನೆಗೆ ಹೋಗಿದ್ದರು. ಒಂದು ರಾತ್ರಿ ಲೇಖಕಿಯವರ ಪತಿ ಕೀರ್ತಿ ಯವರಿಗೆ ಇದ್ದಕ್ಕಿದ್ದಹಾಗೆ ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತು. ಬೆನ್ನ ಹಿಂಬದಿಯಿಂದ ಶುರುವಾದ ನೋವು ಕಿಬ್ಬೊಟ್ಟೆಯವರೆಗೂ ಹಬ್ಬಿ ಕೀರ್ತಿಯವರು ವಿಲವಿಲನೆ ಒದ್ದಾಡಿದರು. ಅವರನ್ನು ಮಿಷನ್ ಆಸ್ಪತ್ರೆಗೆ ಸೇರಿಸಿದಾಗ ಸೋನೋಗ್ರಫಿ ಮಾಡಿ ಕಿಡ್ನಿಯಲ್ಲಿ ೮ ಮಿ.ಮಿ ಕಲ್ಲು ಇರುವುದಾಗಿ ತಿಳಿಸಿದರಲ್ಲದೆ, ಎರಡು ದಿನಗಳನಂತರ ಶಸ್ತ್ರಚಿಕಿತ್ಸೆಯ ಮಾಡಬೇಕೆಂದು ತಿಳಿಸಿದರು.

೨. ಕಮಲಾ ಮೇಡಂಗೆ ಮೂತ್ರಪಿಂಡದಲ್ಲಿ ಕಲ್ಲು ಮೂಡಿದ್ದು ಏಕೆ?
ಕಮಲಾ ಮೇಡಂ ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯವಿರಲಿಲ್ಲ. ಹೀಗಾಗಿ ಅವರು ಶೌಚಾಲಯ ಬಳಸಲು ಸಂಕೋಚಪಟ್ಟು ಬೆಳಿಗ್ಗೆ ಮನೆಯಿಂದ ಹೊರಟವರು ಸಂಜೆ ಮನೆಗೆ ಹಿಂದಿರುಗುವವರೆಗೂ ಜಲಬಾಧೆಯನ್ನು ತಡೆದುಕೊಳ್ಳದೆ ಬೇರೆ ದಾರಿ ಇರಲಿಲ್ಲ  ನೀರು ಕುಡಿದರೆ ಶೌಚಾಲಯಕ್ಕೆ ಹೋಗಬೇಕಾಗುತ್ತದೆ ಎಂದು ಇಡೀ ದಿನ ನೀರನ್ನು ಕುಡಿಯದೇ ಇರುತ್ತಿದ್ದರು. ಹಾಗಾಗಿ ಹೆರಿಗೆ ನೋವನ್ನೂ ಮೀರಿಸುವಂತೆ ನೋವು ಕಾಣಿಸಿಕೊಂಡಾಗ ವೈದ್ಯರನ್ನು ಕಂಡರು, ಆಗ ಅವರಿಗೆ ಮೂತ್ರಪಿಂಡದಲ್ಲಿ ಕಲ್ಲು ಇರುವುದಾಗಿ ತಿಳಿಯಿತು. ಶಸ್ತ್ರಚಿಕಿತ್ಸೆಯನಂತರ ವೈದ್ಯರ ಸಲಹೆಯಂತೆ ನೀರನ್ನು ಕುಡಿಯುತ್ತಾ ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿಂದ ಮುಕ್ತರಾದರು.

೩. ಲೇಖಕಿಯ ಪತಿಯ ಮೂತ್ರಪಿಂಡದ ಕಲ್ಲು ಕರಗಿಹೋಗಿದ್ದು ಹೇಗೆ?
ಲೇಖಕಿ ತಮ್ಮ ತವರುಮನೆಯಾದ ಮೈಸೂರಿಗೆ ಹೋಗಿದ್ದಾಗ ಅವರ ಪತಿ ಕೀರ್ತಿಗೆ ಕಿಬ್ಬೊಟ್ಟೆನೋವು ಕಾಣಿಸಿಕೊಂಡು ಮೂತ್ರಪಿಂಡದಲ್ಲಿ ಕಲ್ಲು ಇರುವುದಾಗಿ ತಿಳಿದಾಗ, ಲೇಖಕಿ ಯು ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮುದ್ದೇಗೌಡರು ಮತ್ತು ಕಮಲಮ್ಮನವರನ್ನು ಭೇಟಿಯಾಗಿ ವಿಚಾರಗಳನ್ನು ತಿಳಿದುಕೊಂಡು ಬಂದು ತಮ್ಮ ಪತಿಗೆ ದ್ರವಾಹಾರ ಕೊಡುತ್ತಾ ಎಳನೀರು, ಬಾರ್ಲಿನೀರು, ಕೊಡುತ್ತಾ ಎರಡು ದಿನ ನೀರಿನಲ್ಲೇ ಮುಳುಗಿಸಿಬಿಟ್ಟಿದ್ದರು . ಶಸ್ತ್ರಚಿಕಿತ್ಸೆಯ ದಿನ ಕಲ್ಲು ಎಲ್ಲಿದೆ ಎಂದು ನೋಡಲು ಸೋನಾಗ್ರಫಿ ಮಾಡಿದಾಗ ಅದು ಕರಗಿಹೋಗಿತ್ತು.

೪. ಸೀತಾ ಎಂಬ ಗೆಳತಿಯ ಗುಣಸ್ವಭಾವವನ್ನು ಲೇಖಕಿ ಹೇಗೆ ಚಿತ್ರಿಸಿದ್ದಾರೆ?
 ಲೇಖಕಿಗೆ ಅದೃಷ್ಟ- ಆಯ್ಕೆಗಳ ಪ್ರಶ್ನೆಬಂದಾಗ ನೆನಪಾಗುವುದು ಅವರ ಬಾಲ್ಯದ  ಸಹಪಾಠಿ ಸೀತಾ . ವಿದ್ಯಾವಂತರ ಕುಟುಂಬದಲ್ಲಿ ಜನಿಸಿದ್ದರೂ ಓದಿಸಲು ಸಿದ್ಧರಿದ್ದ ತಂದೆಯಿದ್ದರೂ ಓದದೆಯೇ ಎಸ್.ಎಸ್.ಎಲ್.ಸಿಯಲ್ಲಿ ಎಲ್ಲಾವಿಷಯಗಳಲ್ಲಿ ಅನುತ್ತೀರ್ಣಳಾಗಿ ಮತ್ತೆ ಪರೀಕ್ಷೆಯ ಗೋಜಿಗೆ ಹೋಗದೆ ಗೆಳತಿಯರೊಂದಿಗೆ ಮಾರ್ಕೆಟ್, ಸಿನೇಮಾ ಸುತ್ತಿ ಸಮಯ ಅಪವ್ಯಯಮಾಡಿಕೊಂಡ ಸೀತೆ ಮದುವೆಯಾದಮೇಲೂ ಗಂಡನನ್ನು ದೂರುತ್ತಾ ಎಲ್ಲವೂ ಕೂಡಲೇ ಆಗಬೇಕು ಎಂದು ಬಯಸುವಂತವಳು. ಚೆನ್ನಾಗಿ ದುಡಿದು ಹೆಂಡತಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಗಂಡನದ್ದು ಎಂದು ನಂಬಿದ್ದವಳು ಲೇಖಕಿಯ ಉನ್ನತಿಯನ್ನು ಕಂಡು ನೀನೇ ಅದೃಷ್ಟವಂತೆ ಕಣೇ ಎಂದು ಹಲುಬುವ ಸ್ವಭಾವದವಳು

೫. ಬದುಕಿನಲ್ಲಿ ಆಯ್ಕೆಗಳು ಮುಖ್ಯ ಎಂಬುದನ್ನು ಲೇಖಕಿ ಹೇಗೆ ನಿರೂಪಿಸಿದ್ದಾರೆ?
ಬದುಕಿನಲ್ಲಿ ಆಯ್ಕೆಗಳು ಮುಖ್ಯವೆಂಬುದನ್ನು ಮೊದಲಿಗೆ ತಮ್ಮ ಸ್ವ ಅನುಭವದಿಂದ , ಗೆಳತಿ ಸೀತಾಳ ಉದಾಹರಣೆಯ ಮೂಲಕ ವಿವರಿಸಿದ ಲೇಖಕಿ ಪ್ಲೇವಿಯಾ ಮತ್ತು ನಿಶಾಶರ್ಮಾ ರ ಬದುಕಿನ ಘಟನೆಗಳನ್ನು ವಿವರಿಸಿದ್ದಾರೆ. ಕೌಟುಂಬಿಕ ಕ್ರೌರ್ಯ ತಾಳಲಾರದೆ ಮನೆಯಿಂದ ಹೊರಬಂದು ತನ್ನ ಕಾಲಮೇಲೆ ತಾನು ನಿಂತು ಪ್ರಖ್ಯಾತ ನ್ಯಾಯವಾದಿ ಆದ ಪ್ಲೇವಿಯಾ, ತಮ್ಮ ಹಾಗೂ ತಮ್ಮ ಮಕ್ಕಳ ಭವಿಷ್ಯದ ಹಾದಿ ಸುಗಮಗೊಳಿಸಿಕೊಂಡವರು. ಅಂತೆಯೇ ವರದಕ್ಷಿಣೆಯ ದುರಾಸೆಗೆ ಬಲಿಯಾಗಿದ್ದ ವರನನ್ನು  ಹಸೆಮಣೆ ಏರುವ ಸಂದರ್ಭದಲ್ಲಿ ತಿರಸ್ಕರಿಸುವ ದಿಟ್ಟತನ ತೋರಿದ ನಿಶಾಶರ್ಮರ ಜೀವನದಲ್ಲಿ ಆಯ್ಕೆಗಳೇ ಮುಖ್ಯವಾದ ಪಾತ್ರವಹಿಸಿದ್ದು ಎಂದು ನಿರೂಪಿಸಿದ್ದಾರೆ.
~~~ಓಂ~~~


No comments:

Post a Comment