Monday, August 25, 2014

someshvara shataka



ಸೋಮೇಶ್ವರ ಶತಕ

ಕೆಲವನ್ನು ಶಾಸ್ತ್ರಗ್ರಂಥಗಳ ಅಧ್ಯಯನದ ಮೂಲಕ,  ಇನ್ನೂ ಕೆಲವನ್ನು ಇತರರನ್ನು ಅನುಕರಿಸುವುದರ ಮೂಲಕ , ಕೆಲವನ್ನು ಸ್ವಂತ ಬುದ್ಧಿಯಿಂದ , ಮತ್ತೆಕೆಲವನ್ನು ಸಜ್ಜನರ ಸಂಗದಿಂದ ಹೀಗೆ ಜ್ಞಾನ ಸಂಪಾಧಿಸಬೇಕು ಇಂತಹವ್ಯಕ್ತಿ ಸರ್ವಜ್ಞನಾಗುತ್ತಾನೆ. ಅನೇಕ ತೊರೆಗಳು ಸೇರಿ ಸಮುದ್ರವಾಗುವಂತೆ ಹಲವು ಮೂಲಗಳಿಂದ ಜ್ಞಾನವನ್ನು ಸಂಪಾಧಿಸುವವನು ಸರ್ವಜ್ಞನಂತೆ ಆಗುವನು. ಕೇಳಿಕಲಿ/  ಓದಿಕಲಿ/ ನೋಡಿಕಲಿ /ಮಾಡಿಕಲಿ/ 

ತನ್ನ ಉಪಯೋಗಕ್ಕೆ ಬಾರದ ಧನದಿಂದ ಏನುಪಯೋಗ? ಅಂತೆಯೇ ಮುಪ್ಪಿನಲ್ಲಿರುವ ತಂದೆ-ತಾಯಿಗಳನ್ನು ನೋಡಿಕೊಳ್ಳದ ಮಗ ಇದ್ದೂ ಸತ್ತಹಾಗೇ. ಬೆಳೆಯು ನೀರಿಲ್ಲದೆ ಒಣಗಿದ ಮೇಲೆ ಒಳ್ಳೆಯ ಮಳೆ ಬಂದರೆ ಏನು ಉಪಯೋಗ? ಅಂತೆಯೇ ಕಷ್ಟಕಾಲದಲ್ಲಿ ಬಂದು ನೋಡದ ಬಂಧುಮಿತ್ರರಿಂದ ಏನು ಪ್ರಯೋಜನ, ಸಮಯಕ್ಕೆ ಒದಗಿದ ಹುಲ್ಲುಕಡ್ಡಿಯಷ್ಟು ಸಹಾಯವೂ ಪರ್ವತದಷ್ಟು ಉಪಕಾರಿಯಲ್ಲವೇ? ಎಂದಿದ್ದಾನೆ. ಪ್ರತಿಯೊಂದು ವಸ್ತುವೂ ಅದರದ್ದೇ ಆದ ಉಪಯೋಗವನ್ನು ಹೊಂದಿರುತ್ತದೆ  ಆ ಉಪಯೋಗ ಆಗದಿದ್ದಾಗ ಅದು ವ್ಯರ್ಥ ಅಂತೇಯೇ ವ್ಯಕ್ತಿಗಳೂ ವ್ಯರ್ಥ.

ಎಳೆಚಿಗುರು ಎಂದು ಬೇವಿನ ಎಲೆ ತಿಂದರೆ ರುಚಿಯಾಗಿರುವುದೇ? ಮರಿಚೇಳು ಎಂದು ಪ್ರೀತಿಯಿಂದ ಹಿಡಿಯ ಹೋದರೆ ಕುಟುಕದೇ ಇರುವುದೇ? ಹಾವಿಗೆ ಹಾಲನ್ನು ಎರೆದು ಪೋಷಿಸಿದರೆ ಅದು ನಮಗೆ ವಿಶ್ವಾಸ ತೋರುತ್ತದೆಯೇ? ಹಕ್ಕಿಗಳನ್ನು ಸಾಕುವ ಆಕಾಂಕ್ಷೆಯಿಂದ ಯಾರಾದರೂ ಗೂಬೆಯನ್ನು ಸಾಕುವರೇ? ಶತ್ರುವನ್ನು ಬಾಲಕನೆಂದು ಅಲಕ್ಷ್ಯಮಾಡುವರೇ? ಶತ್ರುವಿನ ಬಗ್ಗೆ ಎಚ್ಚರದಿಂದಿರಿ ಎಂದು ಕವಿ ಹೇಳುತ್ತಾನೆ. ಚಿಕ್ಕವನು ಎಂದು ಶತ್ರುವನ್ನು ಅಲಕ್ಷ್ಯಮಾಡಿ ಸೋತ ಅನೇಕ ಉದಾಹರಣೆಗಳಿವೆ ಬೆಂಕಿ ಕಿಡಿ ಚಿಕ್ಕದಾಗಿದ್ದರೂ ಜಗತ್ತನ್ನೇ ಸುಡಬಲ್ಲದು.

ಬಂಡೆಯನ್ನು ಸೀಳಬೇಕಾದರೆ ಪುಟಾಣಿ ಉಳಿ - ಸುತ್ತಿಗೆಯಿಂದ ಸಾಧ್ಯವೇ ಹೊರತು ಬೃಹದಾಕಾರವಾದ ಆನೆ ತುಳಿಯುವುದರಿಂದ ಸಾಧ್ಯವಿಲ್ಲ. ಸಮಯಕ್ಕೆ ತಕ್ಕ ಉಪಾಯ ಮಾಡಬಲ್ಲವನು ಒಬ್ಬೊಂಟಿ ಯಾದರೂ ಕೋಟಿಜನರಿಗೆ ಸಮ. ಅತಿ ಭಾರದ ವಸ್ತುವನ್ನು ಮೇಲೆತ್ತಲು ದೊಡ್ಡ ಮರದಿಂದಲೂ ಸಾಧ್ಯವಾಗುವುದಿಲ್ಲ ಆದರೆ ಭಾರವನ್ನು ಎತ್ತಲು ಬಳಸುವ ಮೀಟುಗೋಲು (ಸನ್ನೆ) ಹಾರೆಕೋಲು ಸಾವಿರ ಮಂದಿಗೆ ಸಮ ಆದ್ದರಿಂದ ದೇಹಶಕ್ತಿಗಿಂತ ಯುಕ್ತಿಗೆ ಮಹತ್ವ ಎಂದು ಕವಿ ಹೇಳುತ್ತಾನೆ.  ಪ್ರತಿಯೊಂದು ಕೆಲಸಕ್ಕೂ ಬುದ್ಧಿಯನ್ನು ಉಪಯೋಗಿಸಬೇಕು. 

ಶತ್ರುಗಳನ್ನು ಕೊಲ್ಲ ಬಲ್ಲೆಯಾದರೆ ನೀನು ಸೈನಿಕನಾಗಬೇಕು. ಬುದ್ಧಿವಂತಿಕೆ ಚಮತ್ಕಾರಗಳನ್ನು ತಿಳಿದಿರುವವನಾದರೆ ಮಂತ್ರಿಯಾಗಬೇಕು, ಎಲ್ಲರೊಂದಿಗೆ ತಾಳ್ಮೆ ಸಹನೆಯಿಂದ ಇರಬಲ್ಲೆಯಾದರೆ ದೊರೆಯಾಗು ,  ಕಾಮಾದಿ ಅರಿಷಡ್ವರ್ಗಗಳನ್ನು ಹಿಡಿತದಲ್ಲಿಟ್ಟುಕೊಳ್ಳಬಲ್ಲೆಡೆಯೋಗಿಯಾಗು ತನ್ನ ಕೈಯಿಂದ ದಂಡ ತೆರಬಲ್ಲ ಯೋಗ್ಯತೆ ಇರುವುದಾದರೆ ಇತರರು ಮಾಡಿದ ಸಾಲಕ್ಕೆ ಹೊಣೆಗಾರನಾಗಬೇಕು ಎಂದು ಹೇಳುತ್ತಾನೆ. ಪ್ರತಿಯೊಂದು ಕಾರ್ಯಕ್ಕೂ ತಕ್ಕ ಯೋಗ್ಯತೆ ಹೊಂದಿರಬೇಕು ಇಲ್ಲದಿರೆ ಕಾರ್ಯಸಾಧ್ಯವಾಗುವುದಿಲ್ಲ.

ಹೊಟ್ಟೆಯಲ್ಲಿ ಕೆಸರನ್ನು ತುಂಬಿಕೊಂಡು ಮೇಲೆ ತೊಳೆಯಲು ಶುದ್ಧನಾಗುವನೇ? ಮಾಡಬಾರದ ಪಾಪಗಳನ್ನು ಮಾಡಿ ಪುಣ್ಯತೀರ್ಥಗಳಲ್ಲಿ ಮಿಂದರೆ/ಮುಳುಗಿ ಎದ್ದರೆ ಶುದ್ಧನಾಗುವನೇ? ಕಾಗೆಗಳೂ ಸ್ನಾನಮಾಡುವುದಿಲ್ಲವೇ? ಬೇವಿನ ಹಣ್ಣನ್ನು ಬೆಲ್ಲದ ಪಾಕದಲ್ಲಿ ಅದ್ದಿದರೆ ಅದರ ಕಹಿ ಹೋಗುವುದೇ? ಅಂತೆಯೇ ಮನಸ್ಸಿನ ಮಲಿನತೆಯನ್ನು ಕಳೆದುಕೊಳ್ಳದೆ ದೇಹಶುದ್ಧಿಮಾತ್ರ ಮಾಡಿದರೆ ಕೊಳೆ ಹೋಗುವುದಿಲ್ಲ. ಮನದ ಶುದ್ಧತೆಯೇ ನಿಜವಾದ ಮಡಿ ಎಂದು ಕವಿ ಹೇಳುತ್ತಾನೆ. ಅಂತರಂಗ-ಬಹಿರಂಗ ಶುದ್ಧಿ ಮುಖ್ಯವಾದುದು.

1 comment: