ಗೆದ್ದಲು ಹುಳುಗಳು ಮತ್ತು ಹಕ್ಕಿಗಳು.
ಕಾಡಿನ ಮರವೊಂದರಲ್ಲಿ ಹಕ್ಕಿಗಳು ವಾಸವಾಗಿದ್ದವು . ಅದೇ ಮರದಲ್ಲಿ ಒಂದು ಹಾವೂ ವಾಸವಾಗಿತ್ತು . ಅದು ಹಕ್ಕಿಯಮರಿಗಳನ್ನು ತಿನ್ನಲು ಆರಂಭಿಸಿತ್ತು. ಇದರಿಂದ ಹಕ್ಕಿಗಳು ಚಿಂತೆಗೀಡಾದವು. ಚಿಂತಿಸುತ್ತಾ ಮರದ ಕೆಳಗೆ ಇದ್ದ ಗೆದ್ದಲು ಹುಳುಗಳನ್ನು ತಿನ್ನಲೆಂದು ಬಂದವು. ಗೆದ್ದಲು ಹುಳುಗಳ ಮುಖಂಡ ಹಕ್ಕಿಗಳ ಚಿಂತೆ ಏನೆಂದು ಕೇಳಿದನು ಹಕ್ಕಿಗಳು ತಮ್ಮ ಚಿಂತೆಯನ್ನು ಹೇಳಿಕೊಳ್ಳಲು ಗೆದ್ದಲು ಹುಳುಗಳ ಮುಖಂಡ ತಾವೂ ವಿಪತ್ತಿನಿಂದ ಪಾರಾಗಲು ಯೋಚಿಸಿದನು. ಮೀನಿನ ಮಾಂಸವನ್ನು ಮುಂಗುಸಿಯ ಬಿಲದಿಂದ ಹಾವಿನ ಗೂಡಿನವರೆಗೆ ಹಾಕಿ ಎಂದನು . ಇದರ ಪರಿಣಾಮವನ್ನು ಯೋಚಿಸದ ಹಕ್ಕಿಗಳು ಗೆದ್ದಲು ಹುಳುಗಳ ಮುಖಂಡ ಹೇಳಿದಂತೆ ಮಾಡಿದವು. ಮೀನ ಮಾಂಸವನ್ನು ತಿನ್ನುತ್ತಾ ಬಂದ ಮುಂಗುಸಿ ಹಾವನ್ನು ತಿಂದು , ಹಕ್ಕಿಗಳ ಮರಿಗಳನ್ನೂ , ಹಕ್ಕಿಗಳನ್ನೂ ತಿಂದು ಹಾಕಿತು.
ತನ್ನ ಶತ್ರುವಿನ ಬಳಿ ಸಲಹೆ ಕೇಳುವುದು ಮೂರ್ಖತನ
ಸಿಗ್ನಲ್ ದೀಪ
ಒಂದು ದೊಡ್ಡರಸ್ತೆ. ಆ ರಸ್ತೆಯ ಸಿಗ್ನಲ್ ಬಳಿಯ ಮರವೊಂದರ ಮೇಲೆ ಕಾಗೆಯೊಂದು ವಾಸವಾಗಿತ್ತು. ಅದು ಪ್ರತಿದಿನ ವಾಹನಗಳು ಬರುವುದನ್ನು ನಿಲ್ಲುವುದನ್ನು ಮತ್ತು ಹೋಗುವುದನ್ನು ಗಮನಿಸುತ್ತಿತ್ತು. ಜೊತೆಗೆ ಸಿಗ್ನಲ್ ದೀಪದ ಬಣ್ಣ ಬದಲಾಗುವುದನ್ನೂ ಗಮನಿಸುತ್ತಿತ್ತು. ಒಮ್ಮೆ, ಎಲ್ಲಾ ಕಾಗೆಗಳನ್ನು ಕರೆದು ತಾನು ಇನ್ನು ಮುಂದೆ ಕಾಗೆಗಳ ರಾಜ ಎಂದಿತು. ತನ್ನಲ್ಲಿರುವ ಶಕ್ತಿಯನ್ನು ತೋರುವುದಾಗಿ ಹೇಳಿತು. ಇಲ್ಲಿ ಹೋಗುತ್ತಿರುವ ಎಲ್ಲಾ ವಾಹನಗಳನ್ನು ನಿಲ್ಲಿಸುವೆ ಎಂದಿತು. ಮಂತ್ರಗಳನ್ನು ಹೇಳುವಂತೆ ನಟಿಸುತ್ತಾ ಸಿಗ್ನಲ್ ದೀಪದ ಬಣ್ಣ ಬದಲಾಗುವುದನ್ನು ಗಮನಿಸುತ್ತಿತ್ತು. ಕೆಂಪು ದೀಪ ಉರಿಯಲು ಆರಂಭಿಸಿದ ಕೂಡಲೇ ಎಲ್ಲಾ ವಾಹನಗಳು ನಿಲ್ಲಲಿ ಎಂದಿತು. ಎಲ್ಲಾವಾಹನಗಳು ನಿಂತವು. ಹಳದಿ ದೀಪ ಉರಿಯಲು ಆರಂಭವಾದಾಗ ಎಲ್ಲ ವಾಹನಗಳು ಹೊರಡಲು ಸಿದ್ಧವಾಗಲಿ ಎಂದಿತು. ಎಲ್ಲಾ ವಾಹನಗಳೂ ಹೊರಡಲು ಸಿದ್ಧವಾದವು. ಹಸಿರು ದೀಪ ಉರಿಯಲು ಎಲ್ಲಾ ವಾಹನಗಳೂ ಹೊರಡಲಿ ಎಂದಿತು ಎಲ್ಲಾವಾಹನಗಳೂ ಹೊರಟವು ಇದನ್ನು ಕಂಡ ಕಾಗೆಗಳು ಅಚ್ಚರಿಗೊಂಡು ಸಿಗ್ನಲ್ ದೀಪದ ಕಾಗೆಯನ್ನು ರಾಜನನ್ನಾಗಿ ಮಾಡಿದವು.
ಬೆಕ್ಕುಮತ್ತು ನರಿ
ಒಂದು ಕಾಡಿನಲ್ಲಿ ಬೆಕ್ಕು ಮತ್ತು ನರಿ ವಾಸವಾಗಿದ್ದವು. ಒಮ್ಮೆ ಇವೆರಡೂ ಭೇಟಿಯಾಗಿ ಮಾತಿಗಿಳಿದವು. ನರಿಯು ತನ್ನ ಬಗ್ಗೆ ತಾನೇ ಹೊಗಳಿಕೊಳ್ಳಲು ಆರಂಭಿಸಿತು. ಬೇಟೆನಾಯಿಗಳಿಂದ ತಪ್ಪಿಸಿಕೊಳ್ಳಲು ತನ್ನ ಬಳಿ ಹಲವಾರು ಉಪಾಯಗಳು ಇರುವುದಾಗಿ ಜಂಭಕೊಚ್ಚಿಕೊಂಡಿತು. ಬೆಕ್ಕು ಮೌನವಾಗಿ ಆಲಿಸುತ್ತಿತ್ತು. ನರಿಯು “ ಬೇಟೆನಾಯಿಗಳು ಬಂದರೆ ನೀನು ಹೇಗೆ ತಪ್ಪಿಸಿಕೊಳ್ಳುವೆ” ಎಂದು ಬೆಕ್ಕಿಗೆ ಕೇಳಿತು. ಮರಹತ್ತಿ ತಪ್ಪಿಸಿಕೊಳ್ಳುವೆ ಎಂದಿತು ಬೆಕ್ಕು ನರಿಯಣ್ಣ ನಿನ್ನ ಹಿಂದೆನೋಡು ಬೇಟೆನಾಯಿಗಳು ಬರುತ್ತಿವೆ ಈಗನಿನ್ನ ಉಪಾಯಗಳನ್ನು ಬಳಸು ಎಂದಿತು. ನರಿ ಓಡಲು ಆರಂಭಿಸಿತು , ಬೇಟೆನಾಯಿಗಳು ನರಿಯನ್ನು ಹಿಡಿದು ಕೊಂದು ಹಾಕಿದವು
ನೀತಿ - ಅತಿಯಾದ ಜಂಬ ಒಳ್ಳೆಯದಲ್ಲಾ.
ಕುರಿಯ ಜಾಣತನ
ಒಂದು ಕಾಡಿನಲ್ಲಿ ಮೇಯುತ್ತಿದ್ದ ಕುರಿಯನ್ನು ತೋಳವೊಂದು ನೋಡಿತು. ತಿನ್ನಲೆಂದು ಓಡಿ ಬಂದಿತು. ಇದನ್ನು ಕಂಡು ಹೆದರಿದ ಕುರಿಯೂ ಓಡಿತು. ಓಡುತ್ತಾ ಓಡುತ್ತಾ ಎರಡೂ ಆಯಾಸಗೊಂಡವು. ಕುರಿಯು ಎತ್ತರದ ಬಂಡೆಯ ಮೇಲೆ ನಿಂತಿತು. ತೋಳವು ಚೇತರಿಸಿಕೊಳ್ಳಲು ಬಂಡೆಯ ಕೆಳಗೆ ಬಂದು ನಿಂತಿತು.ತೋಳದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವೆಂದು ತಿಳಿದಿದ್ದ ಕುರಿಗೆ ತೋಳದಿಂದ ತಪ್ಪಿಸಿಕೊಳ್ಳುವ ಉಪಾಯ ಹೊಳೆಯಿತು. ಬಂಡೆಯ ಮೇಲಿಂದಲೇ ತೋಳರಾಯನೇ ಇನ್ನು ನಾನು ನಿನ್ನಿಂದ ತಪ್ಪಿಸಿಕೊಳ್ಳಲಾರೆ ಆದುದರಿಂದ ನೀನು ಬಾಯಿತೆರೆದು ನಿಲ್ಲು ಇಲ್ಲಿಂದ ನಿನ್ನ ಬಾಯಿಗೆ ನೇರವಾಗಿ ಹಾರುತ್ತೇನೆ ಎಂದಿತು. ಮೂರ್ಖತೋಳವು ಬಾಯಿತೆರೆದು ನಿಂತಿತು. ಕುರಿಯು ತೋಳದ ತಲೆಯಮೇಲೆ ಬಿತ್ತು. ತಲೆಗೆ ಬಲವಾದ ಪೆಟ್ಟು ಬಿದ್ದುದರಿಂದ ತೋಳವು ಸತ್ತಿತು . ಕುರಿಯ ಉಪಾಯ ಫಲಿಸಿತು.
ನೀತಿ – ಇತರರ ಮಾತಿಗೆ ಕಿವಿಗೊಡುವ ಮುನ್ನ ಯೋಚಿಸು.
ನೀಲಿ ನರಿ
ಕಾಡಿನಿಂದ ಆಹಾರ ಹುಡುಕುತ್ತಾ ನರಿಯೊಂದು ನಾಡಿಗೆ ಬಂತು. ಅಗಸನೊಬ್ಬ ಇಟ್ಟಿದ್ದ ನೀಲಿಯ ಬಣ್ಣದ ನೀರಿಗೆ ಬಿದ್ದು ದೇಹವೆಲ್ಲ ನೀಲಿಯಾಯಿತು. ಕಾಡಿಗೆ ಹಿಂದಿರುಗಿದ ನರಿಯನ್ನು ಕಂಡು ಇತರ ಪ್ರಾಣಿಗಳು ಹೆದರಿದವು. ಈ ನರಿಯನ್ನು ರಾಜನನ್ನಾಗಿ ಮಾಡಿದವು . ಹುಲಿ,ಸಿಂಹದಂತಹ ಬಲಿಷ್ಠಪ್ರಾಣಿಗಳೂ ಇದರ ಸೇವೆಯಲ್ಲಿ ತೊಡಗಿದವು. ಇದು ನರಿಯೇ ಹೌದು ಎಂದು ತಿಳಿದಿದ್ದರೂ ಅದರ ಬಣ್ಣ ನೋಡಿ ಸುಮ್ಮನಿದ್ದವು. ಕೆಲದಿನಗಳ ನಂತರ ದೂರದಲ್ಲಿ ನರಿಗಳು ಊಳಿಡುವುದು ಕೇಳಿಸಿತು ನೀಲಿನರಿಯೂ ತಡೆಯದೆ ಊಳಿಟ್ಟಿತು. ನರಿಯ ನಿಜರೂಪ ಬದಲಾದೊಡನೆ ತಡಮಾಡದೆ ಇತರ ಪ್ರಾಣಿಗಳು ಇದನ್ನು ಕೊಂದುಹಾಕಿದವು.
ನೀತಿ – ಮೋಸ ಎಂದಾದರೊಮ್ಮೆ ಬಯಲಾಗುತ್ತದೆ.
ಕತ್ತೆಯ ಮೆದುಳು
ಒಂದು ಕಾಡು. ಆ ಕಾಡಿನಲ್ಲಿ ಸಿಂಹವೊಂದು ವಾಸವಾಗಿತ್ತು. ಅದರ ಶಿಷ್ಯನೆಂಬಂತೆ ನರಿಯೊಂದು ಸದಾ ಸಿಂಹದ ಜೊತೆಯಲ್ಲೇ ಇರುತ್ತಿತ್ತು. ಒಮ್ಮೆ ಸಿಂಹಕ್ಕೆ ಆರೋಗ್ಯ ಕೆಟ್ಟು ಬೇಟೆಯಾಡಲು ಆಗುತ್ತಿರಲಿಲ್ಲ . ನರಿಗೆ ಬೇಟೆಯಾಡಿ ಆಹಾರ ತರುವಂತೆ ಹೇಳಿತು . ನರಿ ಬೇಟೆಗೆ ಹೋದಾಗ ಕತ್ತೆಯೊಂದು ಕಂಡಿತು. ಅದರ ಬಳಿ ಹೋಗಿ ಮಿತ್ರ ಸಿಂಹರಾಜನು ನಿನ್ನನ್ನು ತನ್ನ ಮಂತ್ರಿಯನ್ನಾಗಿ ನೇಮಿಸಿಕೊಳ್ಳಲು ತೀರ್ಮಾನಿಸಿದ್ದಾನೆ. ನನ್ನ ಜೊತೆ ಬಾ ಎಂದು ಕತ್ತೆಗೆ ಹೇಳಿತು. ಮಂತ್ರಿಪಟ್ಟದ ಆಸೆಯಿಂದ ಕತ್ತೆ ನರಿಯ ಜೊತೆ ಹೊರಟಿತು. ಸಿಂಹವು ಕತ್ತೆಯನ್ನು ಕಂಡಕೂಡಲೇ ಹಾರಿ ನೆಗೆದು ಕೊಂದಿತು. ನೀರು ಕುಡಿದು ಬರುತ್ತೇನೆ ಅಲ್ಲಿಯವರೆಗೆ ಇದನ್ನು ನೋಡಿಕೋ ಎಂದುಹೇಳಿ ಸಿಂಹ ನದಿಗೆ ಹೋಯಿತು. ಹಸಿದಿದ್ದ ನರಿಯು ಕತ್ತೆಯ ಮೆದುಳನ್ನು ತಿಂದು ಹಾಕಿತು. ನೀರು ಕುಡಿದು ಬಂದ ಸಿಂಹ ಕತ್ತೆಯ ಮೆದುಳನ್ನು ತಿನ್ನಲು ತಲೆಯನ್ನು ಕಿತ್ತಿತು. ಮೆದುಳು ಇಲ್ಲದಿರುವುದನ್ನು ಕಂಡು ಕೋಪದಿಂದ ನರಿಯನ್ನು ನೋಡಿತು. ನರಿಯು ಸಿಂಹರಾಜ ಈ ಕತ್ತೆಗೆ ಮೆದುಳೇ ಇಲ್ಲ ಇದ್ದಿದ್ದರೆ ನನ್ನ ಜೊತೆಯಲ್ಲಿ ಬರುತ್ತಿರಲಿಲ್ಲ. ಎಂದು ಹೇಳಿತು ಕಷ್ಟದಿಂದ ಪಾರಾಯಿತು.
ನೀತಿ –ಆಮಿಷಗಳಿಗೆ ಬಲಿಯಾಗಬಾರದು.
No comments:
Post a Comment